ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಪಣ್ಣನ ತಲೆ ಬಿಚ್ಚಿದ್ದು

Last Updated 14 ಜನವರಿ 2015, 19:30 IST
ಅಕ್ಷರ ಗಾತ್ರ

ಹಳ್ಳಿಯಲ್ಲಿ ಹುಟ್ಟಿ ಬೆಳೆದ ಹುಡುಗರು ಸಣ್ಣ ಪುಟ್ಟ ಶಿಕಾರಿ ಕಲೆಗಳನ್ನು ಅನಾಯಾಸವಾಗಿ ಕಲಿತಿರುತ್ತಾರೆ.  ಮನರಂಜನೆಗೆ ಬೇರೆ ವಿಷಯಗಳೇ ಇಲ್ಲದಿರುವುದರಿಂದ ಅವರು ತಾನೆ ಏನು ಮಾಡಿಯಾರು? ಗೋಲಿಯಾಟ, ಲಗೋರಿ, ಜೂಟಾಟ, ಮರಕೋತಿಯಾಟ, ಸಿಕ್ಕಿದವರಿಗೆ ಹೊಡೆಯೋ ಆಟ, ಜೂಟಾಟ ಹಿಂಗೆ ತೋಚಿದ ಎಲ್ಲಾ ಆಟಗಳ ಆಡುತ್ತಾರೆ. ಈ ಎಲ್ಲಾ ಕ್ರೀಡೆಗಳು ಆಡಿ ಸಾಕಾದರೆ, ಕೊನೆಗೆ ಈ ಹಳ್ಳಿ ಹೈಕಳ ಪಾಲಿಗೆ ಉಳಿಯುವುದೇ ಶಿಕಾರಿಯಾಟ.

ಈ ಶಿಕಾರಿಯಾಟದಲ್ಲಿ ಮೂರು ವಿಧಗಳಿವೆ. ಮೊದಲನೆಯದು ಊರ ಶಿಕಾರಿ. ಅದು ಕಂಡಕಂಡವರ ತೋಟಗಳಿಗೆ, ಹಿತ್ತಲಿಗೆ ನುಗ್ಗುವ ಕಳ್ಳ ಮಾದರಿ. ಪರರು ಸಾಕಿದ ಹಣ್ಣಿನ ಗಿಡಗಳಿಗೆ ಮುತ್ತಿಗೆ ಹಾಕಿ ಹೀಚು, ಕಾಯಿ, ಹಣ್ಣು ಒಂದನ್ನೂ ಬಿಡದೆ ಮುಂಡಾಯಿಸುವುದು ಇದರ ಮುಖ್ಯ ಲಕ್ಷಣ. ಇಂಥ ಸಂದರ್ಭಗಳಲ್ಲಿ ಸಂಬಂಧಪಟ್ಟ ಮಾಲೀಕರಿಂದ ಹೊಡೆತ ತಿಂದ, ಅವರ ಕೈಗೆ ಸಿಕ್ಕದೆ ಪರಾರಿಯಾದ, ಮೈಮೇಲಿನ ಬಟ್ಟೆ ಹರಿದುಕೊಂಡು, ನೆಗೆದು ಬಿದ್ದು ಮುಖಮುಸುಡಿ ಕಿತ್ತುಕೊಂಡ ಹಲವಾರು ಪ್ರಕರಣಗಳಿವೆ.

ಒಂದು ಸಲವಂತೂ ಮಾವಿನಕಾಯಿ ಕದಿಯಲು ಹೋಗಿ ಸರ್ಕಾರಿ ಶಾಲೆಯ ಐದೂ ಹುಡುಗರೂ ರೆಡ್‌ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದೆವು. ತೋಟದ ಸಾಹುಕಾರ ಸಂಜೆ ತನಕ ಮರಕ್ಕೆ ಕಟ್ಹಾಕಿ ಹಡಬೆ ದನಗಳಿಗೆ ಬಿಗಿಯುವಂತೆ ಬಾರಿಕೋಲಿನಲ್ಲೇ ಬಾರಿಸಿದ್ದ. ಆ ಬಾರಿಕೋಲಿನ ಏಟಿಗೆ, ಅವನ ಆರ್ಭಟಕ್ಕೆ ನಮ್ಮೆಲ್ಲರ ಚಡ್ಡಿಗಳು ಕಡ್ಡಾಯವಾಗಿ ಒದ್ದೆಯಾಗಿದ್ದವು. ಆ ಪರಿಯ ಹೊಡೆತ ತಿಂದ ಮೇಲಾದರೂ ನಾವು ಸುಧಾರಿಸಿದೆವಾ! ಎಂದರೆ ‘ಊಹ್ಞೂ’ ಕೇಳಬೇಡಿ. ಮತ್ತೆ ನಾಯಿ ಬಾಲದ ಕಥೆಯೇ!.

ಎರಡನೆಯದು ಕಾಡಿನ ಶಿಕಾರಿ. ಇಲ್ಲಿ ಕಾರೆಹಣ್ಣು, ಕಬ್ಳೆಹಣ್ಣು, ಬೆಲ್ದಣ್ಣು, ಲಂಟಾನದ ಹಣ್ಣು, ಬೋರೆ ಹಣ್ಣು ಹುಡುಕಿ ತಿನ್ನುವ, ಪೊದೆ ನುಗ್ಗಿ ಮುಳ್ಳು ಚುಚ್ಚಿಸಿಕೊಂಡು ಚಡಪಡಿಸುವ ಅಲೆಮಾರಿ ಕಾಯಕ. ಇಲ್ಲಿ ಯಾರ ಕಾಟವೂ ಇಲ್ಲ, ಯಾರ ಹಂಗೂ ಇಲ್ಲ. ನಾವೇ ರಾಜರು. ಕೊನೆಗೆ ಕಾಡಲ್ಲಿ ಏನೂ ಸಿಗದಿದ್ದರೆ, ಹೊಲದ ರಾಗಿ ತೆನೆಗಳ ಸುಟ್ಟು ಅದಕ್ಕೆ ಬೆಲ್ಲ ನೆಂಚಿಕೊಂಡು ತಿನ್ನುವ, ಇಲ್ಲವೇ ಅವರೆಕಾಯಿ ತರಿದು ತಂದು ಬೇಯಿಸಿ ತಿನ್ನುವ ತುಡುಗು ದಂಧೆ ಮಾಡುತ್ತಿದ್ದೆವು.

ಇದರಲ್ಲಿ ತುಂಬಾ ಸಂತೋಷ ಕೊಡುತ್ತಿದ್ದುದು ಹುಣಸೆಹಣ್ಣಿನ ಕೊಚ್ಚುಂಡಿ. ನೆನೆದರೆ ಇವತ್ತಿಗೂ ಬಾಯಲ್ಲಿ ನೀರು ತುಪಕ್ಕನೆ ಉದುರುತ್ತದೆ. ಅಷ್ಟು ಟೇಸ್ಟಿನ ಐಟಂ ಅದು. ಮನೆಯಿಂದ ಕದ್ದು ತಂದ ಬೆಲ್ಲ, ಉಪ್ಪು, ಜೀರಿಗೆಯೆಲ್ಲಾ ಆ ಹುಣಸೆ ಹಣ್ಣಿಗೆ ಸೇರಿಸಿಕೊಂಡು, ಕಲ್ಲಿನಲ್ಲಿ ಜಜ್ಜಿಕೊಂಡರೆ ಆಹಾ! ಕೊಚ್ಚುಂಡಿ ರೆಡಿ. ಮಜವಾದ ಆ ಹುಳಿಮಿಠಾಯಿಯನ್ನು ಒಂದು ಕಡ್ಡಿ ತುದಿಗೆ ಸಿಕ್ಕಿಸಿಕೊಂಡು ಚೀಪುತ್ತಿದ್ದರೆ ಅದೆಂಥ ಸ್ವರ್ಗದ ಅನುಭವ.

ಮೂರನೆಯದು ಶೂರ ಶಿಕಾರಿಯಾಟ. ಈ ವಿಶೇಷ ಆಟಕ್ಕೆ ಚಾಟಿಬಿಲ್ಲು, ಬಿಲ್ಲು ಬಾಣ, ಕಣವೆ ಕಲ್ಲು, ತಂಗೂಸ್ ಗಾಳ, ಮೀನು ಹಿಡಿಯುವ ಗಾಣ, ಸಣ್ಣ ಬಲೆ ಮುಂತಾದ ಹತಾರಗಳು ಬೇಕಾಗುತ್ತಿದ್ದವು. ಇದರಲ್ಲೂ ಚಾಟಿಬಿಲ್ಲು ತಯಾರಿಸಿಕೊಳ್ಳುವುದು ತುಸು ಕಷ್ಟದ ಕೆಲಸವಾದರೂ ಬಿಡುತ್ತಿರಲಿಲ್ಲ. ವಿಜ್ಞಾನಿಗಳಂತೆ ಕೂತು ಶ್ರದ್ಧೆಯಿಂದ ರೆಡಿ ಮಾಡಿಕೊಳ್ಳುತ್ತಿದ್ದೆವು.

ಮೊದಲು ಶೂರ ಶಿಕಾರಿಯಲ್ಲಿ ಪರ್ಫೆಕ್ಟ್ ಆಗಬೇಕಿತ್ತು. ನಮ್ಮ ಗುರಿ ಕಲಿಕೆಗೆ ಮೂಲ ಸರಕಾಗಿದ್ದವು ಹಳ್ಳಿಯ ಕೋಳಿ ಪಿಳ್ಳೆಗಳು, ಕಾಗೆ, ಮೈನಾ, ಗುಬ್ಬಿಗಳು, ಪಾಪದ ಓತಿಕ್ಯಾತಗಳು ಹಾಗೂ ಹಳ್ಳಿಯ ನಾಯಿಕುನ್ನಿಗಳು. ಮನೆಯವರ ಕಾಟ, ಕಾವಲು, ಬೈಗುಳಗಳನ್ನು ಮೀರಿ ಇದನ್ನು ಬಲು ಉಪಾಯವಾಗಿ ಮಾಡಿಕೊಳ್ಳಬೇಕಿತ್ತು.

ಕೋವಿ ತೆಗೆದುಕೊಂಡು ರಾತ್ರಿ ಶಿಕಾರಿಗೆ ಹೋಗಿ ಬರುವ ದೊಡ್ಡವರ ಕಾರುಬಾರುಗಳನ್ನು ನೋಡಿಯೇ ನಾವಿದೆಲ್ಲಾ ಕಲಿತಿದ್ದೆವು. ನಮ್ಮಪ್ಪ ಶಿಕಾರಿಗೆ ಹೊರಡುವ ಮೊದಲು ಈಡನ್ನು ಕೋವಿಗೆ ಲೋಡ್ ಮಾಡಿಕೊಳ್ಳುತ್ತಿದ್ದರು. ಅವರು ಶಿಸ್ತಾಗಿ ಕೂತು ಚರೆ, ಮದ್ದು ಪುಡಿ, ನಾರು ಇತ್ಯಾದಿಗಳನ್ನು ತುಂಬಿಸಿಕೊಳ್ಳುವುದನ್ನು ನೋಡುತ್ತಿದ್ದೆವು. ಗನ್ ಲೋಡ್ ಮಾಡುವ ಮೊದಲು ಕೋವಿಯ ನಳಿಕೆಯನ್ನು ಕ್ಲೀನ್ ಮಾಡಿಕೊಳ್ಳುತ್ತಿದ್ದರು.

ಬಂದೂಕಿನ ಒಳಗೆ ಉಳಿದ ಹಳೆಯ ಬಾರೂದ್ ಪುಡಿಯನ್ನೂ, ಸಿಡಿದ ಕಿಟ್ಟದ ಕೊಳೆಯನ್ನೂ, ಕಬ್ಬಿಣದ ಕೋಲನ್ನು ಬಳಸಿ ಕುಟ್ಟಿ ಕುಟ್ಟಿ ತೆಗೆಯುತ್ತಿದ್ದರು. ಮೂಗಿನ ಒಳಗಿನ ಚಕ್ಕಳಗಳನ್ನು ಕ್ಲೀನ್ ಮಾಡಿಕೊಳ್ಳುವವರು ತಮ್ಮ ಬೆರಳುಗಳನ್ನು ಹೊಳ್ಳೆಗಳ ಒಳಗೆ ತೂರಿಸಿಕೊಳ್ಳುವಂತೆ ಅವರೂ ಬಂದೂಕಿನ ಮೂಗಿನಲ್ಲಿ ಹುಡುಕಾಡಿ, ತಡಕಾಡಿ ಒಂದಿಷ್ಟು ಅವಶೇಷಗಳನ್ನು ಹೊರಗೆ ತೆಗೆಯುತ್ತಿದ್ದರು. ಎಲ್ಲೆಲ್ಲೋ ಸಂದಿ ಮೂಲೆಯಲ್ಲಿ ಉಳಿದ ಕಿಟ್ಟ ಹೊಸ ಸಿಡಿಮದ್ದಿಗೆ ಅಡ್ಡಿಯಾಗಬಾರದೆಂದು ಈ ಶುಚಿತ್ವದ ಕೆಲಸ ನಡೀತ್ತಿತ್ತು.

ನಮಗೆ ಗನ್ ಹಿಡಿಯುವ ಸೌಭಾಗ್ಯ ಒಲಿಯದ ಕಾರಣ ಚಾಟಿಬಿಲ್ಲೇ ನಮ್ಮ ಸರ್ವಸ್ವವಾಗಿತ್ತು. ಹಕ್ಕಿಗಳನ್ನು ಹುಡುಕಿಕೊಂಡು ಹೋಗುತ್ತಿದ್ದ ನಮಗೆ ಅವುಗಳ ದರ್ಶನವೇ ಆಗುತ್ತಿರಲಿಲ್ಲ. ಆಗ ಹಕ್ಕಿಗಳ ಬೇಟೆ ಬದಲಿಗೆ ಅವುಗಳ ಗೂಡುಗಳಿಂದ ಮೊಟ್ಟೆ ಕದಿಯುವ ಕೆಲಸ ಶುರು ಮಾಡಿದೆವು. ಅದು ಯಾವ ಪಕ್ಷಿಯ ಮೊಟ್ಟೆ ಎನ್ನುವುದು ನಮಗೊಲ್ಲದ ವಿಷಯವೆನಿಸಿತ್ತು. ಪೊದೆಗಳ ಒಳಗೆ ನುಗ್ಗಿ ಗೂಡಿನಲ್ಲಿ ಸಿಗುವ ಮೊಟ್ಟೆಗಳನ್ನೆಲ್ಲಾ ಎತ್ತುತ್ತಿದ್ದೆವು. ಅವಕ್ಕೆಲ್ಲಾ ಹಸಿ ಮಣ್ಣು ಮತ್ತಿ, ನೆಲದಲ್ಲಿ ಹೂತು, ಅದರ ಮೇಲೆ ಬೆಂಕಿ ಹಾಕಿದರೆ ನಮ್ಮ ಮೊಟ್ಟೆಗಳು ಸುಟ್ಟು, ಬೆಂದು ತಿನ್ನಲು ರೆಡಿಯಾಗುತ್ತಿದ್ದವು.

ಇದರ ಜೊತೆಗೆ ಜೀರುಂಬೆ ಥರದ ಕೀಟಗಳ ಶಿಕಾರಿ ಮಾಡಿ ಅವುಗಳನ್ನು ಸಾಕಲು ಸಾಕಷ್ಟು ಪರದಾಡುತ್ತಿದ್ದೆವು. ಜೀರುಂಬೆಗಳನ್ನು ಬೆಂಕಿ ಪೊಟ್ಟಣದಲ್ಲಿ ಮುಚ್ಚಿಟ್ಟು, ಅವಕ್ಕೆ ತಿನ್ನಲು ಸೊಪ್ಪು ತುರುಕುತ್ತಿದ್ದೆವು. ಒಂದೊಂದು ಗಂಟೆಯ ನಂತರವೂ ಪೊಟ್ಟಣ ತೆರೆದು ಜೀರುಂಬೆ ಮೊಟ್ಟೆಗಿಟ್ಟೆ ಏನಾದರೂ ಇಟ್ಟಿದೆಯಾ ಎಂದು ಪರೀಕ್ಷಿಸುತ್ತಿದ್ದೆವು.

ಮೊಟ್ಟೆ ಇಡಲು ನಾವು ಹಿಡಿದ ಜೀರುಂಬೆ ಕೊನೇಪಕ್ಷ ಹೆಣ್ಣಾಗಿರಬೇಕು ಎಂಬ ಕನಿಷ್ಠ ತಿಳಿವಳಿಕೆಯೂ ನಮಗಿರಲಿಲ್ಲ. ಮೊಟ್ಟೆ ತಯಾರಿಸಿಕೊಳ್ಳಲು ಗಂಡು ಹೆಣ್ಣು ಎರಡೂ ಒಟ್ಟಾಗಿ ಬದುಕಬೇಕೆಂಬ ಸಣ್ಣ  ಕಾಮನ್‌ಸೆನ್ಸ್ ಕೂಡ ನಮಗೆ ಹೊಳೆಯುತ್ತಿರಲಿಲ್ಲ. ಏನಾದ್ರೂ ಆಗಲಿ, ಒಟ್ನಲ್ಲಿ ಆ ಜೀರುಂಬೆ ಮೊಟ್ಟೆ ಇಡಲೇಬೇಕೆಂಬುದು ನಮ್ಮ ಹಟವಾಗಿತ್ತು. ಪಾಪ! ನಮ್ಮ ಹತ್ತಿರ ಸಿಕ್ಕಾಕಿಕೊಂಡು ಒದ್ದಾಡುತ್ತಿದ್ದ ಅದು ಮೊಟ್ಟೆ ಇಡುವುದನ್ನೆ ಮರೆತು ಪಿಳಿಪಿಳಿ ಕಣ್ಣು ಬಿಡುತ್ತಾ ಕೈದಿಯಂತೆ ಕೂತಿರುತ್ತಿತ್ತು.

ಒಂದು ದಿನ ಬೆಳಿಗ್ಗೆ ಬೆಂಕಿ ಪೊಟ್ಟಣ ತೆರೆದು ನೋಡಿದರೆ ಆಶ್ಚರ್ಯ ಕಾದಿತ್ತು. ಜೀರುಂಬೆ ಕೊನೆಗೂ ಯಾವ ಸಂಸರ್ಗ ಇಲ್ಲದೆಯೂ ಐದಾರು ಮೊಟ್ಟೆ ಇಟ್ಟಿತ್ತು. ಬಲು ಸಂಭ್ರಮದಿಂದ ಎಲ್ಲಾ ಗೆಳೆಯರನ್ನು ಕರೆದು ತೋರಿಸಿದೆ. ಅವರು ತಜ್ಞರಂತೆ ಬಂದು, ಅವುಗಳನ್ನು ಒಂದೊಂದಾಗಿ ಪರೀಕ್ಷಿಸಿ ನೋಡಿದರು. ಅವು ಮೊಟ್ಟೆಗಳಂತೆ ಗಟ್ಟಿಯಾಗಿರದೆ ಬೂದಿ ಉಂಡೆಗಳಂತೆ ಇದ್ದವು. ಹಿಚುಕಿದಾಗ ಫುಸ್ ಫುಸ್ ಎಂದು ಒಂದೇ ಏಟಿಗೆ ಪುಡಿಪುಡಿಯಾಗಿ ಬಿಟ್ಟವು.

ಜೀರುಂಬೆ ಶ್ರದ್ಧೆಯಿಂದ ಇಟ್ಟ ಬಿಳಿಯ ಮಲದ ತುಣುಕುಗಳನ್ನೇ ನಾನು ಮೊಟ್ಟೆಗಳೆಂದು ಪರಿಭಾವಿಸಿದ್ದೆ. ನನ್ನ ಶತಮೂರ್ಖತನ ಕಂಡು ಅವರೆಲ್ಲಾ ಬಿದ್ದೂಬಿದ್ದೂ ನಕ್ಕರು. ಫಾಖಡ ಜೀರುಂಬೆ ಸಾಕಿದ ನನಗೇ ಆ ದಿನ ಭಾರಿ ಮೋಸ ಮಾಡಿಬಿಟ್ಟಿತ್ತು.
ಹೀಗೆ ಹಳ್ಳಿಯಲ್ಲಿ ಕಾಡಿನ ಪಕ್ಷಿಗಳಿಗೆ ಕಲ್ಲು ಬೀರುತ್ತಿದ್ದ ನನ್ನ ಬಾಲ್ಯದ ಕೆಟ್ಟ ಚಟ ನಗರಕ್ಕೆ ಬಂದ ಮೇಲೂ ನಿಲ್ಲಲಿಲ್ಲ. ಕಾಡಿನ ಹಕ್ಕಿಗಳಿಲ್ಲದ ಈ ಊರಿನಲ್ಲಿ ಬಿಟ್ಟಿ ಶಿಕಾರಿಗೆ ಸಿಕ್ಕ ಮಿಕಗಳೆಂದರೆ ಸಾಕಿದ ಕೋಳಿಗಳು.

ಈ ಕೋಳಿಗಳ ಅಟ್ಟಾಡಿಸಿಕೊಂಡು ಹೋಗಿ ಸದೆಬಡಿಯುವ ಕೆಲಸವನ್ನು ನನ್ನ ಚಿಗರಿ ದೋಸ್ತು ಪಾಪಣ್ಣನಿಗೂ ಸುಲಭವಾಗಿ ಕಲಿಸಿಬಿಟ್ಟೆ. ಆಗ ಮೂರನೇ ತರಗತಿಯಲ್ಲಿ ಓದುತ್ತಿದ್ದ ನಾವಿಬ್ಬರು ನಮ್ಮ ಮನೆ ಹಿಂದೆ ಮೇಯುತ್ತಿದ್ದ ಬೀದಿ ಕೋಳಿಗಳ ಬೆನ್ನು ಬಿದ್ದೆವು. ಅವುಗಳಿಗೆ ಗುರಿ ಇಟ್ಟು ಹೊಡೆಯುವ ಒಂದು ಸಣ್ಣ ಸ್ಪರ್ಧೆಯನ್ನೂ ಆಗಾಗ ನಮ್ಮೊಳಗೆ ಏರ್ಪಡಿಸಿಕೊಳುತ್ತಿದ್ದೆವು. ಆ ಸ್ಪರ್ಧೆ ಹೀಗೆ ದುರಂತದಲ್ಲಿ ಕೊನೆಯಾಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಅವತ್ತು ನಮ್ಮ ಶಿಕಾರಿಯ ದೆಸೆಯಿಂದ ಒಂದು ದೊಡ್ಡ ಅನಾಹುತವೇ ನಡೆದುಹೋಯಿತು.

ಅವತ್ತು ನಾನು ಪಾಪಣ್ಣ ಕೋಳಿಗಳ ಬೆನ್ನು ಹತ್ತಿದೆವು. ನಮ್ಮ ಮನೆಗಳ ಹಿತ್ತಲಲ್ಲಿ ಆಡುತ್ತಿದ್ದ ಕೋಳಿಗಳು ನಮ್ಮ ಕಲ್ಲಿನ ಗುರಿಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದವು. ಈ ದರಿದ್ರ ನಾಟಿ ಕೋಳಿಗಳನ್ನು ಹಿಡಿಯುವುದು, ಹೊಡೆಯುವುದು ಅಷ್ಟು ಸುಲಭದ ಕೆಲಸವಲ್ಲ. ಮನೆಯಿಂದ ಹೊರಕ್ಕೆ ಹೋದರೆ ಅವು ಕೈಗೇ ಸಿಗುವುದಿಲ್ಲ. ಫಾಸ್ಟ್ ರನ್ನಿಂಗ್‌ರೇಸ್‌ನಲ್ಲಿ ಅವು ಎತ್ತಿದ ಕೈ. ಈಗಿನ ಫಾರಂ ಕೋಳಿಗಳಂತೆ ಅವು ಮಂಕುದಿಣ್ಣೆಗಳಲ್ಲ. ಇನ್ನೂ, ನೆಂಟರು ಬಂದಿದ್ದಾರೆ ಮಧ್ಯಾಹ್ನದ ಸಾರಿಗೆ ಅವುಗಳನ್ನು ಹಿಡಿದು  ಕೊಯ್ಯೋಣವೆಂದರಂತೂ ಅವು ಬಿಲ್‌ಕುಲ್ ಸಿಗುವುದೇ ಇಲ್ಲ.

ಇಂಥ ಹರಾಮಿ ಕೋಳಿಗಳ ಪೈಕಿ ಒಂದು ಹುಂಜ ನಮ್ಮ ಗುರಿಗೆ ಸಿಗದೆ ಬಲು ಜಂಭ ಎಸೆಯುತ್ತಿತ್ತು. ಅದನ್ನು ಹೊಡೆಯಲು ನನ್ನ ಮುಂದೆ ಪಾಪಣ್ಣ ರೆಡಿಯಾಗಿ ನಿಂತಿದ್ದ. ಅವನ ಹತ್ತಿರ ಕಲ್ಲುಗಳು ಖಾಲಿಯಾಗಿದ್ದವು. ಕಲ್ಲನ್ನು ಹುಡುಕುತ್ತಾ ಅವನು ನೆಲದ ಕಡೆಗೆ ಬಗ್ಗಿದ್ದ. ಅವನ ಮುಂದಿದ್ದ ಭರ್ಜರಿ ಹುಂಜಕ್ಕೆ ಬಾರಿಸಲು ನಾನು ಕಲ್ಲು ಹಿಡಿದು ರೆಡಿಯಾಗಿದ್ದೆ. ಆ ಕ್ಷಣವೇ ಬಿರ್ರೆಂದು ಗುರಿಯಿಟ್ಟು ಕಲ್ಲನ್ನು ಬೀಸಿಯೇ ಬಿಟ್ಟೆ. ನೆಲಕ್ಕೆ ಬಗ್ಗಿದ್ದ ಪಾಪಣ್ಣ ಆ ಕ್ಷಣವೇ ಥಟ್ಟಂತ ಎದ್ದು ನಿಂತು ಬಿಡಬೇಕೇ?. 

ನನ್ನ ಕಲ್ಲಿನ ಗುರಿ ಕೋಳಿಗೆ ತಲುಪುವ ನಡುವೆ ಪಾಪಣ್ಣ ತಲೆ ಅಡ್ಡ ಬಂದು ಬಿಟ್ಟಿತ್ತು. ಗಿರ್ರೆಂದು ಗುರಿಯಿಡಿದು ಹೋದ ನನ್ನ ಶಿಕಾರಿಕಲ್ಲು ಅವನ ತಲೆಗೆ ಕಚ್ ಎಂದು ನಟ್ಟಿಕೊಂಡೇ ಬಿಟ್ಟಿತು.  ನೋಡು ನೋಡುತ್ತಿದ್ದಂತೆ ರಕ್ತ ಛಿಲ್ಲೆಂದು ಚಿಮ್ಮತೊಡಗಿತ್ತು. ತಲೆ ಹಿಡಿದುಕೊಂಡು ಅಯ್ಯಯ್ಯೋ ಅಮ್ಮಮ್ಮಾ... ಎಂದು ಚೀರಿಕೊಂಡ ಚಡ್ಡಿದೋಸ್ತಿ ಪಾಪಣ್ಣ ಧೊಪ್ಪೆಂದು ನೆಲಕ್ಕುರುಳಿ ಬಿಟ್ಟ. ಸುತ್ತ ಇದ್ದ ಕೋಳಿಗಳೆಲ್ಲಾ ಇವನ ಕೂಗಿದ ಏಟಿಗೆ ಹೆದರಿ ಚೆಲ್ಲಾಪಿಲ್ಲಿಯಾಗಿ ಹೋದವು.

ಮನೆಮುಂದೆ ಹಪ್ಪಳ ಒಣಗಿಸುತ್ತಿದ್ದ ನಮ್ಮಮ್ಮನೂ, ಮಂಡಕ್ಕಿ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಪಾಪಣ್ಣನ ತಾಯಿ ಲಕ್ಷ್ಮಮ್ಮನವರೂ ಪಾಪಣ್ಣನ ಕಿರುಚಾಟ ಕೇಳಿ ಹೆದರಿ ಓಡೋಡಿ ಬಂದರು. ನಾನು ವಿಲವಿಲ ಎಂದು ಒದ್ದಾಡುತ್ತಿದ್ದ ಪಾಪಣ್ಣನ ಎಬ್ಬಿಸಿ ನಿಲ್ಲಿಸಲು ಯತ್ನಿಸುತ್ತಿದ್ದೆ. ಸುರಿಯುತ್ತಿದ್ದ ರಕ್ತ ನೋಡಿ ನನಗೂ ವಿಪರೀತ ಗಾಬರಿಯಾಗಿತ್ತು. ಬಂದ ಅವರಿಬ್ಬರೂ ರಕ್ತ ನೋಡಿ ಒಟ್ಟಿಗೆ ಚೀರಿಕೊಂಡರು. ಏನಾಯಿತೆಂದು ಮೊದಲು ನನಗೇ ಕೇಳಿದರು.

ನಾನು ಉಸಿರು ಬಿಡುವ ಸ್ಥಿತಿಯಲ್ಲಿರಲಿಲ್ಲ. ಗಡಗಡ ನಡುಗುತ್ತಾ ನಿಂತಿದ್ದೆ. ಮುಂದೆ ಬೀಳುವ ಭಾರಿ ತಪರಾಕಿಗಳ ನೆನೆ ನೆನೆದೇ ನನ್ನ ಮೈ ತಣ್ಣಗಾಗಿ ಹೋಗಿತ್ತು. ಅವನ ತಲೆಯಲ್ಲಿ ಹೊಕ್ಕಿದ್ದ ಕಲ್ಲು ನೋಡಿದ ಅವರಿಗೆ ಇದು ನನ್ನದೇ ಹಲ್ಕಾ ಕೆಲಸ ಎಂದು ತಿಳಿಯಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಮುಂದೆ ಭರ್ಜರಿ ಬೇಟೆಯೇ ನಡೆಯಿತು. ನನಗೆ ಆ ದಿನ ಹೊಡೆಯದವರೇ ಪಾಪಿಗಳಾಗಿದ್ದರು.

ಆಸ್ಪತ್ರೆಗೆ ಹೋದ ಲಕ್ಷ್ಮಮ್ಮ ಪಾಪಣ್ಣನ ತಲೆಗೆ ಹೊಲಿಗೆ ಹಾಕಿಸಿಕೊಂಡು ಬಂದಿದ್ದರು. ಬಾಣಂತಿ ಹೆಂಗಸಿನಂತೆ ಬ್ಯಾಂಡೇಜ್ ಬಟ್ಟೆ ಕಟ್ಟಿಸಿಕೊಂಡಿದ್ದ ಪಾಪಣ್ಣ ನನ್ನ ಪಿಳಿಪಿಳಿ ನೋಡತೊಡಗಿದ. ಪಾಪಣ್ಣನ ಈ ಸ್ಥಿತಿ ಕಂಡು ಮತ್ತೆ ಲೋಡಾದ ನನ್ನ ಮನೆಯವರು ಎರಡನೇ ರೌಂಡು ಹೊಡೆಯಲು ರೆಡಿಯಾದರು. ನಮ್ಮ ಮನೆಯವರಿಗೆಲ್ಲಾ ಗದರಿಸಿದ ಲಕ್ಷ್ಮಮ್ಮ ‘ಮಕ್ಕಳು ತಿಳೀದೆ ಮಾಡ್ಕೊಂಡಿದ್ದಾವೆ ಬಿಡ್ರಿ.

ಅವನೇನ್ ಬೇಕಂತ ಹೊಡೆದಿದ್ದನಾ! ಎಲ್ರೂ ಸೇರಿ ಮಗೂಗೆ ಹಿಂಗಾ ಹೊಡೆಯೋದು? ಇನ್ನು ಇವನಿಗೆ ಒಂದ್ ಹೊಡ್ತಾ ಹೊಡೆದ್ರೂ ನಾನು ಸುಮ್ಮನಿರಲ್ಲಾ ನೋಡಿ ಬೂವಮ್ಮಾ’ ಎಂದು ಬರಸೆಳೆದು ನನ್ನ ಮಡಿಲಲ್ಲಿ ಬಚ್ಚಿಕೊಂಡರು. ಮಗನಿಗೆ ಅಷ್ಟು ಪೆಟ್ಟಾಗಿದ್ದರೂ ಲೆಕ್ಕಿಸದೆ, ಮಕ್ಕಳಾಟ ಎಂದು ನನ್ನ ತಪ್ಪನ್ನು ಮನ್ನಿಸಿದ ಲಕ್ಷ್ಮಮ್ಮ ನನಗಿಂದೂ ನನ್ನ ಅಮ್ಮನಷ್ಟೇ ನೆನಪಾಗುತ್ತಾರೆ.

ನನ್ನ ಬದುಕಿನಲ್ಲಿ ಮತ್ತೆಮತ್ತೆ ನೆನಪಾಗುವ ಮದರ್‌ತೆರೆಸಾ ಅಂದರೆ ಅವರೊಬ್ಬರೆ. ಚಿಕ್ಕಂದಿನಲ್ಲಿನ ನಮ್ಮ ಆಟಗಳು ಯಾಕೆ ಹೀಗೆ ಹಿಂಸಾ ರೂಪದಲ್ಲಿ ಇರುತ್ತಿದ್ದವೋ ಗೊತ್ತಿಲ್ಲ. ಧ್ವಂಸ ಮಾಡುವುದೇ ಮನರಂಜನೆ ಎಂದು ಭಾವಿಸಿದ್ದ ನಮಗೆಲ್ಲಾ ಪ್ರಕೃತಿ ಯಾವಾಗ ಪಾಠ ಕಲಿಸಿತೋ ನನಗೂ ತಿಳಿಯಲಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT