ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಪಂಚದ ವಿಶೇಷ ಅದ್ಭುತಗಳು

Last Updated 15 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಶಾಲೆಯಲ್ಲಿ ತರಗತಿ ನಡೆಯುತ್ತಿತ್ತು. ಶಿಕ್ಷಕಿ ಇತಿಹಾಸದ, ಭೂಗೋಲದ ವಿಷ­ಯ­ಗಳನ್ನು ತುಂಬ ಮನಮುಟ್ಟು­ವಂತೆ ವರ್ಣಿಸುತ್ತಿದ್ದರು. ಅವರ ತರಗತಿ­ಯೆಂದರೆ ಮಕ್ಕಳಿಗೆ ಬಲು ಪ್ರೀತಿ. ಆಕೆ ಪಾಠಮಾಡುವಾಗ ಮಕ್ಕಳಿಗೆ ಧ್ವನಿ ಮಾತ್ರ ಕೇಳುತ್ತಿರಲಿಲ್ಲ, ಕಣ್ಣ ಮುಂದೆ ಚಿತ್ರ ಕಾಣುತ್ತಿದ್ದವು. ಆಕೆ ಅಂದು ಪ್ರಪಂ­­ಚದ ಅದ್ಭುತಗಳ ಬಗ್ಗೆ ಹೇಳುತ್ತಿದ್ದರು. ಒಂದೊಂದು ಅದ್ಭುತದ ಬಗ್ಗೆ ವರ್ಣಿ­ಸುತ್ತ ಅವುಗಳ ವಿಶೇಷತೆ­ಗಳನ್ನು ಹೇಳಿದರು.

ಮರುದಿನ ಮಕ್ಕಳು ಅವುಗಳನ್ನು ನೆನಪಿ­ನಲ್ಲಿ­­ಟ್ಟು­ಕೊಂಡಿ­ದ್ದಾರೋ ಇಲ್ಲವೋ ಎಂದು ಪರೀಕ್ಷಿಸಲು ಎಲ್ಲರಿಗೂ ಏಳು ಅದ್ಭುತ­ಗಳ ಪಟ್ಟಿ ಮಾಡಲು ಹೇಳಿದರು. ಕೆಲವು ಮಕ್ಕಳು ಪಟಪಟನೇ ಬರೆದು­ಬಿಟ್ಟರು. ಆದರೆ ಒಬ್ಬ ಹುಡುಗಿಗೆ ಯಾವುದರ ನೆನಪೂ ಬರಲಿಲ್ಲ. ಆಕೆಗೆ ಸಹಾ­ಯ­ಮಾಡಲೆಂದು ಶಿಕ್ಷಕಿ ಒಂದೊಂದೂ ಅದ್ಭುತಗಳ ಗುಣ ವರ್ಣನೆ ಮಾಡಿ­ದರು, ಆದರೆ, ಆದರ ಹೆಸರನ್ನು ಮಾತ್ರ ಹೇಳಲಿಲ್ಲ. ಚೀನಾದ ಮಹಾನ್ ಗೋಡೆ­ಯನ್ನು ಹೆಸರಿಸದೆ ಶತಶತಮಾನಗಳಿಂದ ನಡೆದು ಬಂದ ಬದಲಾವಣೆಗೆ ಸಾಕ್ಷಿ­ಯಾಗಿ, ಎಂಥೆಂಥ ಕಷ್ಟಗಳು ಬಂದರೂ ತಡೆದುನಿಂತದ್ದು ಎಂದರು.

ನಂತರ ಪ್ಯಾರಿಸ್‌ನ ಐಫೆಲ್ ಗೋಪುರದ ಹೆಸರು ಹೇಳದೇ, ಅದು ಎಂದೆಂದೂ ತಲೆ ಎತ್ತಿ ನಿಂತು, ಸೋಲನ್ನೊಪ್ಪದ ಗೋಪುರ ಎಂದು ನುಡಿದರು. ತಾಜಮಹಲ್‌ದ ಬಗ್ಗೆ, ಒಳಗೆ ಅಪಾರ ನೋವು ತುಂಬಿದ್ದರೂ, ಹೊರಗೆ ಕಲಾವಂತಿಕೆಯ ಮುಕುಟ-­ವಾ­ಗಿದೆ ಎಂದೂ, ಪಿರ್‍ಯಾಮಿಡ್‌ಗಳ ಬಗ್ಗೆ, ಒಬ್ಬ ರಾಜನ ಸಮಾಧಿಯನ್ನು ಕಟ್ಟಲು ಅದೆಷ್ಟು ಜನ ಸಮಾಧಿಯಾದರೋ? ಆದರೆ ಇಂದೂ ಮಾನವ ಸಾಹಸದ ದ್ಯೋತಕವಾಗಿ ನಿಂತಿದೆ ಎಂದರು. ಬ್ಯಾಬಿಲೋನ್‌ನ ತೂಗುವ ಉದ್ಯಾನವನದ ಬಗ್ಗೆ ಹೇಳುತ್ತ, ಅತ್ಯಂತ ಸುಂದರವಾದ, ಮನಕ್ಕೆ ಮುದಕೊಡುವ ಸ್ಥಾನ ಅದು. ಅದು ತೂಗಿದಾಗ ಇನ್ನೂ ಚೆಂದ ಎಂದರು.

ಶಿಕ್ಷಕಿ ಒಂದು ಅದ್ಭುತದ ಬಗ್ಗೆ ಹೇಳಿ ವಿವರಣೆ ನೀಡಿದಾಗಲೊಮ್ಮೆ ಆ ಹುಡುಗಿ ತನ್ನ ಪುಸ್ತಕದಲ್ಲಿ ಒಂದು ಹೆಸರನ್ನು ಬರೆಯುತ್ತಿದ್ದಳು. ಏಳೂ ಅದ್ಭುತಗಳ ವಿವ­ರಣೆ ಮುಗಿದ ಮೇಲೆ ಕುತೂಹಲದಿಂದ ಶಿಕ್ಷಕಿ ಬಂದು ಹುಡುಗಿಯ ಪುಸ್ತಕ ನೋಡಿ­ದರು. ಆಕೆ ತಲೆತಗ್ಗಿಸಿ ನೆಲ ನೋಡುತ್ತ ನಿಂತಳು. ಶಿಕ್ಷಕಿಗೆ ಹುಡುಗಿ ಬರೆ­ದದ್ದು ಅರ್ಥವೇ ಅಗಲಿಲ್ಲ. ತಾನು ಹೇಳಿದ್ದಕ್ಕೂ, ಹುಡುಗಿ ಬರೆದದ್ದಕ್ಕೂ ಯಾವ ಸಂಬಂ­ಧವೂ ಇರಲಿಲ್ಲ. ಆದರೆ ಶಿಕ್ಷಕಿ ನಿಧಾನವಾಗಿ ಹುಡುಗಿ ಬರೆದದ್ದನ್ನೂ ಸೂಕ್ಷ್ಮ­ವಾಗಿ ಗಮನಿಸಿದಾಗ ಆಕೆಯ ಮುಖ ಅರಳಿತು, ನಗೆ ಮೂಡಿತು. ಆ ಹುಡು­ಗಿಯ ಕೈ ಹಿಡಿದುಕೊಂಡು ತರಗತಿಯ ಮುಂದೆ ಬಂದು ಆಕೆ ಬರೆದಿದ್ದ ಹೆಸರು­ಗಳನ್ನು ಓದಿದರು. ಒಂದು ಕ್ಷಣ ಶಾಂತತೆಯ ನಂತರ ಇಡೀ ತರಗತಿ ಮಕ್ಕಳ ಚಪ್ಪಾಳೆಗಳಿಂದ ತುಂಬಿ ಹೋಯಿತು.

ಆ ಹುಡುಗಿ ಬರೆದಿದ್ದ ಪ್ರಪಂಚದ ಅದ್ಭುತಗಳು ಹೀಗಿದ್ದವು  ಮಹಾತ್ಮ ಗಾಂಧಿ, ಮದರ್ ತೆರೆಸಾ, ನೆಲ್ಸನ್ ಮಂಡೆಲಾ, ಹೆಲೆನ್ ಕೆಲ್ಲರ್, ಅಲ್ಬರ್ಟ ಐನಸ್ಟೈನ್, ಮೇರಿ ಕ್ಯೂರಿ ಮತ್ತು ನಾನು. ಕಡೆಯ ಹೆಸರಾದ ನಾನು ಪದವನ್ನು ದಪ್ಪನಾಗಿ ಬರೆ­ದಿ­ದ್ದಳು. ಅದೆಷ್ಟು ಸತ್ಯವಲ್ಲವೇ? ನಾವು ಅದ್ಭುತಗಳು ಎಂದಾಗ ಕೇವಲ ಕಟ್ಟಡ­ಗಳು, ಸ್ಮಾರಕಗಳು ಎಂದು ಗಣಿಸುತ್ತೇವೆ.

ಆದರೆ, ನಿಜವಾದ ಅದ್ಭುತಗಳು ಈ ಮನುಷ್ಯರೇ ಅಲ್ಲವೇ? ತಮ್ಮ ಜೀವಮಾನವೆಲ್ಲ ಹೋರಾಡಿ, ಸ್ವಂತಕ್ಕೆ ಏನನ್ನು ಮಾಡಿ­ಕೊಳ್ಳದೇ ಪ್ರತಿಕ್ಷಣದ ಪ್ರಯತ್ನವನ್ನು ಮನುಕುಲದ ಉದ್ಧಾರಕ್ಕೆಂದೆ ನೀಡಿ ಮಾದರಿ­ಯಾ­ದವರೇ ನಿಜವಾದ ಅದ್ಭುತಗಳು. ಕಟ್ಟಡಗಳು, ಸ್ಮಾರಕಗಳು ಬದಲಾ­ಗು­ವುದಿಲ್ಲ. ಆದರೆ ಈ ಮಾನವ ಅದ್ಭುತಗಳು ಪ್ರಪಂಚವನ್ನೇ ಬದಲಾ­ಯಿ­­ಸುತ್ತವೆ.

ಅದರಂತೆ ನಾವು ಪ್ರತಿ­ಯೊಬ್ಬರೂ ಅದ್ಭುತವಲ್ಲವೇ? ಇಡೀ ಪ್ರಪಂಚ­ದಲ್ಲಿ ಹಿಂದೆಯೂ, ಇಂದೂ, ಮುಂದೆಯೂ ನಮ್ಮಂತೆಯೇ ಇರುವಂಥ ವ್ಯಕ್ತಿ ಅಸಂ­ಭವ. ಭಗವಂತ ನಮ್ಮನ್ನು ಹೀಗೆ ವಿಶೇಷವಾಗಿ ಸೃಷ್ಟಿಸಿರುವುದೇ ಅದ್ಭುತ­ವಾಗ­ಲೆಂದು. ಆದರೆ, ಬಹಳಷ್ಟು ಜನ ಅವರಿವರ ಅನುಕರಣೆ ಮಾಡಿ ಕಳೆದು­ಹೋಗು­ತ್ತಾರೆ. ನಮ್ಮ ವಿಶೇಷತೆಯನ್ನು ಬೆಳೆಸಿಕೊಂಡು ಪರಿಶ್ರಮಿಸಿದರೆ ನಾವೂ ಪ್ರಪಂ­ಚದ ಅದ್ಭುತವಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT