ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮಾಣಪತ್ರ ಕೆಲಸಕ್ಕೆ ಬಾರದಿದ್ದರೂ ಇಟ್ಟುಕೊಳ್ಳುವೆ!

Last Updated 1 ಮೇ 2016, 19:44 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರು ದೂರ ಶಿಕ್ಷಣದ ಮೂಲಕ ಪಡೆದ ಪದವಿಯ ದಾಖಲೆ ನೀಡುವಂತೆ ಗುಜರಾತ್‌ ವಿಶ್ವವಿದ್ಯಾಲಯಕ್ಕೆ ಸೂಚಿಸಲಾಗಿದೆ. ಅವರು ನನ್ನ ಡಿಪ್ಲೊಮಾ ದಾಖಲೆಗಳನ್ನೂ ಹುಡುಕಿ ತೆಗೆಯಬಲ್ಲರು ಎಂದು ಭಾವಿಸಿದ್ದೇನೆ. ನಾನು ಬರೋಡಾದ ಎಂ.ಎಸ್. ವಿಶ್ವವಿದ್ಯಾಲಯದಲ್ಲಿ ಎರಡು ವರ್ಷಗಳ (1987–89) ಕೋರ್ಸ್‌ ಪೂರೈಸಿದೆ. ಆದರೆ, ಅಂತಿಮ ಪರೀಕ್ಷೆ ಬರೆದರೂ, ಪ್ರಮಾಣಪತ್ರ ಪಡೆದುಕೊಳ್ಳಲಿಲ್ಲ.

ಸಮಯ ಹಾಳು ಮಾಡುವ ಕೋರ್ಸ್‌ ಅದಾಗಿತ್ತು. ಹಾಗಾಗಿ ಪ್ರಮಾಣಪತ್ರ ಪಡೆಯುವ ಗೋಜಿಗೆ ನಾನು ಹೋಗಲಿಲ್ಲ. ಹೆಚ್ಚೂಕಮ್ಮಿ ಅದು, ನಿಷ್ಪ್ರಯೋಜಕವಾಗಿತ್ತು. ಭಾರತದ ಅತಿದೊಡ್ಡ ಸಮಸ್ಯೆಯಾದ ‘ನಿರುದ್ಯೋಗ’ಕ್ಕೆ ಪರಿಹಾರ ಇರುವುದು ತಯಾರಿಕಾ ಕ್ಷೇತ್ರದಲ್ಲಿ ಎನ್ನಲಾಗುತ್ತಿದೆ. ಇದು ನಿಜವೇ? ನನಗಂತೂ ಇದು ನಿಜ ಅನಿಸುತ್ತಿಲ್ಲ. ಈ ಬಗ್ಗೆ ತುಸು ವಿವರಿಸುವೆ.

ಭಾರತದಲ್ಲಿನ ಶಿಕ್ಷಣದ ಬಗ್ಗೆ ಹಾರ್ವರ್ಡ್‌ನ ‘ಕೆನಡಿ ಆಡಳಿತ ಶಾಲೆ’ಯ ಲ್ಯಾಂಟ್ ಪ್ರಿಚೆಟ್ 2011ರಲ್ಲಿ ಈ ಮಾತು ಹೇಳಿದ್ದಾರೆ: ‘ಭಾರತದ ಮೇಲ್ವರ್ಗದವರು ನಿಜಕ್ಕೂ ಉತ್ತಮ ಶಿಕ್ಷಣ ಪಡೆಯುತ್ತಾರೆ. ವಿಶ್ವದಲ್ಲಿ15 ವರ್ಷ ವಯಸ್ಸಿನೊಳಗಿನ ಸುಶಿಕ್ಷಿತರನ್ನು ತಯಾರು ಮಾಡುವ ರಾಷ್ಟ್ರಗಳ ಪೈಕಿ ಮೊದಲ ಶೇಕಡ ಹತ್ತರಷ್ಟರಲ್ಲಿ ಭಾರತವೂ ಒಂದು.  ಒಂದು ಲೆಕ್ಕಾಚಾರದ ಪ್ರಕಾರ ಭಾರತದಲ್ಲಿ ಪ್ರತಿವರ್ಷ ಇಂಥ ಒಂದು ಲಕ್ಷ ವಿದ್ಯಾರ್ಥಿಗಳು ತಯಾರಾಗುತ್ತಾರೆ. ಆದರೆ ಇಷ್ಟು ಸಂಖ್ಯೆಯ ಸುಶಿಕ್ಷಿತರನ್ನು ತಯಾರು ಮಾಡುವ ದೇಶ ಕೌಶಲ ಇಲ್ಲದವರನ್ನೂ ಲಕ್ಷಗಳ ಪ್ರಮಾಣದಲ್ಲಿ ಪ್ರತಿವರ್ಷ ತಯಾರು ಮಾಡುತ್ತಿದೆ ಎಂಬುದನ್ನು ನಂಬಲು ಜನ ತಯಾರಿಲ್ಲ’ ಎಂಬುದು ಅವರ ಮಾತು.

ಈ ಮಾತುಗಳು ಕಟುವಾಗಿ ಕಾಣುತ್ತಿವೆಯೇ? ಇವು ಕಹಿಯಾದ ಮಾತುಗಳಲ್ಲ. ನನ್ನ ಅನುಭವ ಕೂಡ ಇವನ್ನು ಪುಷ್ಟೀಕರಿಸುತ್ತದೆ. ದೇಶದ ಪ್ರಾಥಮಿಕ ಶಿಕ್ಷಣಕ್ಕೂ ಪ್ರಿಚೆಟ್‌ ಮಾತುಗಳು ಅನ್ವಯವಾಗುತ್ತವೆ. ನಮ್ಮ ಶಾಲಾ ಮಕ್ಕಳ ಓದಿನ ಮತ್ತು ಗಣಿತದ ಕೌಶಲಗಳ ಗುಣಮಟ್ಟದ ಬಗ್ಗೆ ಸಾಕಷ್ಟು ಸಂಶೋಧನಾ ಪ್ರಬಂಧಗಳು ಪ್ರಕಟವಾಗಿವೆ. ಹಾಗಾಗಿ, ಆ ಬಗ್ಗೆ ಇಲ್ಲಿ ನಾನು ಹೆಚ್ಚು ಹೇಳುವುದಿಲ್ಲ.

ಪ್ರಿಚೆಟ್ ಅವರ ಮಾತುಗಳು ಉನ್ನತ ಶಿಕ್ಷಣ, ಅದರಲ್ಲೂ ಮುಖ್ಯವಾಗಿ ವಿಶೇಷ ಕೌಶಲ ಕಲಿಸುವ ಕ್ಷೇತ್ರಗಳಿಗೂ ಅನ್ವಯ ಆಗುತ್ತವೆ.  ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಿದ ಅಧ್ಯಯನ ವರದಿಯೊಂದರ ಪ್ರಕಾರ ದೇಶದ ಎಂಬಿಎ ಪದವೀಧರರ ಪೈಕಿ ಶೇಕಡ 7ರಷ್ಟು ಜನ ಮಾತ್ರ ಉದ್ಯೋಗ ಪಡೆಯುವ ಅರ್ಹತೆ ಹೊಂದಿದ್ದಾರೆ.

ಇಂಥದ್ದೇ ಅಂಕಿ–ಅಂಶಗಳು ಮಾಹಿತಿ ತಂತ್ರಜ್ಞಾನ (ಐ.ಟಿ) ಕ್ಷೇತ್ರಕ್ಕೆ ಸಂಬಂಧಿಸಿದಂತೆಯೂ ಇವೆ. ತಂತ್ರಾಂಶ ಮತ್ತು ಸೇವೆಗಳಿಗೆ ಸಂಬಂಧಿಸಿದ ಕಂಪೆನಿಗಳ ರಾಷ್ಟ್ರೀಯ ಒಕ್ಕೂಟದ (ನಾಸ್ಕಾಂ) ಅಧ್ಯಯನವೊಂದರ ಪ್ರಕಾರ ಶೇಕಡ 90ರಷ್ಟು ಪದವೀಧರರು ಮತ್ತು ಶೇಕಡ 75ರಷ್ಟು ಎಂಜಿನಿಯರ್‌ಗಳು ತರಬೇತಿ ಪಡೆಯಲು ಕೂಡ ಯೋಗ್ಯರಲ್ಲ.

ನಮ್ಮ ಶಿಕ್ಷಣ ಸಂಸ್ಥೆಗಳು ಉದ್ಯೋಗ ಪಡೆಯಲು ಅರ್ಹರಲ್ಲದವರನ್ನು ಸೃಷ್ಟಿಸುತ್ತಿವೆ. ‘ಭಾರತದಲ್ಲೇ ತಯಾರಿಸಿ’ ಕಾರ್ಯಕ್ರಮವು ಮಹತ್ತರವಾದ ಕಾರ್ಯತಂತ್ರ ಎನ್ನುವುದಾದರೆ, ದೇಶದ ಜನರು ಕೃಷಿಯಿಂದ ಕಾರ್ಖಾನೆಗಳತ್ತ ಮುಖಮಾಡಲು ಅವರಿಗೆ ತರಬೇತಿ ನೀಡಬೇಕಾಗುತ್ತದೆ. ಈ ಕಾರ್ಯವನ್ನು ಕಾಲೇಜು ಹಂತದಲ್ಲಿ ಪಾಲಿಟೆಕ್ನಿಕ್‌ಗಳು ಮಾಡಬೇಕು.

ನಾನು ಜವಳಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಡಿಪ್ಲೊಮಾ ಕೋರ್ಸ್‌ ಅಧ್ಯಯನ ಮಾಡಿದ್ದೆ. ಇದರಲ್ಲಿ ನೇಯ್ಗೆ ಮಾಡುವುದು, ನೂಲು ತೆಗೆಯುವುದು ಸೇರಿದಂತೆ ವಸ್ತ್ರದ ವಿವಿಧ ಆಯಾಮಗಳ ಬಗ್ಗೆ ಕಲಿಸಬೇಕಿತ್ತು. ವಿಷಯದ ಜ್ಞಾನ ಪಡೆಯಲು ಆಸಕ್ತಿ ಇಲ್ಲದ ವಿದ್ಯಾರ್ಥಿಗಳಿಂದ ಪಾಲಿಟೆಕ್ನಿಕ್‌ಗಳು ತುಂಬಿವೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು.

ಅಲ್ಲಿ ನಮ್ಮಲ್ಲಿನ ಬಹುತೇಕರು 16 ಅಥವಾ 17ರ ಹರೆಯದವರಾಗಿದ್ದೆವು. ಹತ್ತನೇ ತರಗತಿಯನ್ನು ಆಗಷ್ಟೇ ಪೂರ್ಣಗೊಳಿಸಿದ್ದೆವು. ಹೆಚ್ಚಿನ ಕಲಿಕೆಗೆ ಬೇಕಿರುವ ಶ್ರದ್ಧೆ, ಮಹತ್ವಾಕಾಂಕ್ಷೆ ನಮ್ಮಲ್ಲಿ ಇರಲಿಲ್ಲ. ಇನ್ನು ಕೆಲವರು ಪದವಿ ಕಾಲೇಜುಗಳ ಪ್ರವೇಶ ಸಿಗದ ಕಾರಣ ಅಲ್ಲಿಗೆ ಬಂದಿದ್ದರು. ಅಲ್ಲಿಗೆ ಬಂದವರ ಪೈಕಿ ದೈಹಿಕ ಶ್ರಮ ಬೇಡುವ ಕೆಲಸ ಮಾಡುವ ಇಚ್ಛೆಯಿದ್ದ ಒಬ್ಬರ ನೆನಪೂ ನನಗಿಲ್ಲ.

ಪಾಲಿಟೆಕ್ನಿಕ್‌ನಲ್ಲಿ ಎರಡು ವರ್ಷ ಓದಿದ ನನ್ನ ಅನುಭವಗಳು ಇವು: ನಾವು ಕಲಿಕೆಗೆ ಬಳಸಿಕೊಳ್ಳಬೇಕಿದ್ದ ಯಾವ ಯಂತ್ರವೂ ಸುಸ್ಥಿತಿಯಲ್ಲಿ ಇರಲಿಲ್ಲ. ಅಂದರೆ, ಆ ಯಂತ್ರಗಳ ಇರುವಿಕೆಯನ್ನು ನಾವು ಅನುಭವಿಸಬಹುದಿತ್ತು. ಅವುಗಳ ಜೊತೆ ಕೆಲಸ ಮಾಡಲು ಆಗುತ್ತಿರಲಿಲ್ಲ. ಒಬ್ಬ ಕೆಲಸಗಾರ ಮಾಡುವಂತೆ ನಮಗೆ ಆ ಯಂತ್ರಗಳ ಜೊತೆ ಒಡನಾಟ ಬೆಳೆಸಿಕೊಳ್ಳಲು ಆಗಲೇ ಇಲ್ಲ.

ಅಲ್ಲಿದ್ದ ಉಪಕರಣಗಳು ಹಳತಾಗಿದ್ದವು (ಅವುಗಳಲ್ಲಿ ಕೆಲವನ್ನು ನೆಹರೂ ಉದ್ಘಾಟಿಸಿದ್ದರು. ಇನ್ನು ಕೆಲವನ್ನು ಅವರಿಗಿಂತ ಹಳಬರು ಉದ್ಘಾಟಿಸಿದ್ದರು). ಕೆಲಸ ಮಾಡದ ಯಂತ್ರಗಳನ್ನು ಬಳಸಿ ನಮಗೆ ನೇಯ್ಗೆ ಬಗ್ಗೆ ಪಾಠ ಮಾಡಲಾಯಿತು. ಅಲ್ಲಿ ನಿಜ ಅರ್ಥದಲ್ಲಿ ಆಧುನಿಕ ಯಂತ್ರಗಳು ಇರಲೇ ಇಲ್ಲ. ಆ ಕೋರ್ಸ್‌ ಹತ್ತಿಯಿಂದ ನೂಲು ತೆಗೆಯುವ ಬಗ್ಗೆ ಕೇಂದ್ರಿತವಾಗಿತ್ತು. ಈ ಕೆಲಸವನ್ನು ಅಹಮದಾಬಾದ್‌ನ ಗಿರಣಿಗಳು ದಶಕಗಳ ಹಿಂದೆ ಮಾಡುತ್ತಿದ್ದವು. ಪಾಲಿಸ್ಟರ್‌ ಬಟ್ಟೆಗಳ ಬಗ್ಗೆ ಪ್ರಾಯೋಗಿಕ ತರಗತಿ ಇರಲಿಲ್ಲ. ಅಂದರೆ, ಅದನ್ನು ಮಾಡುವುದು ಹೇಗೆ ಎಂಬುದು ನಮಗೆ ಗೊತ್ತಾಗಲಿಲ್ಲ. ಹತ್ತಿ ನೂಲಿನ ಯಂತ್ರಗಳು ವಿದ್ಯುತ್ ಚಾಲಿತ ಆಗಿರಲಿಲ್ಲ.

ನಮಗೆ ಪಾಠ ಮಾಡುತ್ತಿದ್ದ ಶಿಕ್ಷಕರಿಗೆ ಯಂತ್ರಗಳನ್ನು ಬಳಸುವುದು ಗೊತ್ತಿರಲಿಲ್ಲ. ನೂಲಿನ ಗಿರಣಿಗಳಲ್ಲಿ ಕೆಲಸ ಮಾಡಿದ ಅನುಭವ ಇದ್ದ ಸಿಬ್ಬಂದಿ ನಮಗೆ ಆ ಕೆಲಸ ಮಾಡುವುದು ಹೇಗೆ ಎಂಬುದನ್ನು ಕಲಿಸಲಿಲ್ಲ. ಹಾಗಾಗಿ, ಯಾವುದೇ ವಿಷಯದ ಬಗ್ಗೆ ಪ್ರಾಯೋಗಿಕ ಪಾಠ ಇರಲಿಲ್ಲ.

ತರಗತಿಗಳು ಇಂಗ್ಲಿಷ್‌ನಲ್ಲಿ ಇರುತ್ತಿದ್ದವು. ಯಂತ್ರಗಳ ಜೊತೆ ಕೆಲಸ ಮಾಡುವುದು ಹೇಗೆ ಎಂಬುದನ್ನು ಕಲಿಸದೆಯೇ ನಮಗೆ ಪರೀಕ್ಷೆ ನಡೆಸಿದರು. ಕೆಲಸ ಮಾಡುವಂತೆ ನಾವು ಸೂಚಿಸುತ್ತಿರಬಹುದು, ಆದರೆ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡುವುದು ಹೇಗೆ ಎಂಬುದನ್ನು ಕಲಿಯಬೇಕಿಲ್ಲ ಎಂಬುದು ಅಂದಿನ ನಂಬಿಕೆ ಆಗಿದ್ದಂತಿತ್ತು. ಅಲ್ಲಿನ ಎಲ್ಲ ವಿದ್ಯಾರ್ಥಿಗಳು ಮಧ್ಯಮ ವರ್ಗದಿಂದ ಬಂದವರಾಗಿದ್ದರು. ಅವರು ಆಸಕ್ತಿಗಿಂತಲೂ, ಬೇರೆ ಆಯ್ಕೆ ಇಲ್ಲ ಎಂಬ ಕಾರಣಕ್ಕೆ ಪಾಲಿಟೆಕ್ನಿಕ್‌ಗೆ ಬಂದಂತಿತ್ತು.

ಮುಂದೆ ಪದವಿಗೆ ಸೇರುವ ಇಚ್ಛೆ ಎಲ್ಲ ವಿದ್ಯಾರ್ಥಿಗಳಿಗೂ ಇತ್ತು. ಕುಟುಂಬ ನಡೆಸುತ್ತಿದ್ದ ವಹಿವಾಟು ಇದ್ದವರನ್ನು ಹೊರತುಪಡಿಸಿದರೆ, ಬಹುತೇಕ ವಿದ್ಯಾರ್ಥಿಗಳು ನಂತರ ಪದವಿ ಕೋರ್ಸ್‌ ಸೇರಿದರು. ಮೇಲ್ವಿಚಾರಕನ ಕೆಲಸವನ್ನು ನಮ್ಮಲ್ಲಿ ಯಾರೂ ಮಾಡಲಿಲ್ಲ. ನಾನು ಕೋರ್ಸ್‌ ಮುಗಿದ ತಕ್ಷಣ, ನಮ್ಮ ಕುಟುಂಬ ನಡೆಸುತ್ತಿದ್ದ ಪಾಲಿಸ್ಟರ್‌ ಬಟ್ಟೆ ನೇಯ್ಗೆ ವ್ಯವಹಾರಕ್ಕೆ ಕೈಹಾಕಿದೆ. ಆದರೆ, ಅಲ್ಲಿನ ಎಲ್ಲ ಕೆಲಸಗಳನ್ನು ಹೊಸದಾಗಿ ಕಲಿಯಬೇಕಾಯಿತು.
ಕಾರ್ಖಾನೆಯ ಕಾರ್ಮಿಕರ ಜೊತೆ ನನ್ನ ಸಹೋದ್ಯೋಗಿಗಳಲ್ಲಿ ಒಬ್ಬರೂ ಸರಿಯಾದ ರೀತಿಯಲ್ಲಿ ಕೆಲಸ ಮಾಡಿದಂತೆ ಇಲ್ಲ.  ಏಕೆಂದರೆ ಅದರ ಬಗ್ಗೆ ನಮಗೆ ತರಬೇತಿಯನ್ನೇ ನೀಡಲಿಲ್ಲ.

ಎಂ.ಎಸ್. ವಿಶ್ವವಿದ್ಯಾಲಯದಿಂದ ನನಗೆ ಡಿಪ್ಲೊಮಾ ಪ್ರಮಾಣಪತ್ರ ಸಿಕ್ಕಿದರೆ, ನನ್ನ ಜೀವನದ ಎರಡು ವರ್ಷಗಳು ಹೇಗೆ
ಸಂಪೂರ್ಣವಾಗಿ ವ್ಯರ್ಥವಾದವು ಎಂಬುದರ ನೆನಪಿನಲ್ಲಿ ಅದನ್ನು ಇರಿಸಿಕೊಳ್ಳುವೆ. ಇಷ್ಟು ಬಿಟ್ಟರೆ ಆ ಪ್ರಮಾಣಪತ್ರದಿಂದ ಬೇರೆ ಯಾವ ಪ್ರಯೋಜನವೂ ಇಲ್ಲ.
(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT