ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸೋದ್ಯಮ ಬೆಳೆಸಲು ಎಷ್ಟೆಲ್ಲ ಮಾಡಬಹುದು!

Last Updated 26 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಇ­ದು ಒಂದು ರೀತಿಯಲ್ಲಿ ಸೋಜಿಗ, ಇನ್ನೊಂದು ರೀತಿಯಲ್ಲಿ ಸಹಜ. ನಮ್ಮ ನಾಡನ್ನು ಬಿಟ್ಟು ಬಹುದೂರ ಹೋದ ಕೂಡಲೇ ಅದು ನಮಗೆ ಕಾಡಲುತೊಡಗುತ್ತದೆ. ಇಲ್ಲಿ ಸಹಜ ಎನಿಸಿ ರೂಢಿಯಾಗಿದ್ದೆಲ್ಲ, ಹೊರಗೆ ಹೋಗಿ ದೂರ ನಿಂತು ನೋಡಿದಾಗ ಎಷ್ಟು ಅಸಹಜ, ಅಸಮರ್ಪಕ ಎಂದೆಲ್ಲ ಅನಿಸತೊಡಗುತ್ತದೆ. ಅದನ್ನು ಸರಿ ಮಾಡುವುದು ಹೇಗೆ ಎಂದು ಚಿಂತೆಯಾಗುತ್ತದೆ. ಮತ್ತೆ ವಾಪಸು ಬಂದ ಮೇಲೆ ನಮ್ಮದು ನಮಗೆ ರೂಢಿಯಾಗಿ ಬಿಡುತ್ತದೆ. ಇದನ್ನು ಬದಲಿಸುವುದು ಅಷ್ಟು ಸುಲಭವಲ್ಲ ಎಂದು ಮನದಟ್ಟಾಗುತ್ತದೆ. ಆದರೆ, ಹೊರಗೆ ಹೋಗಿ ನೋಡಿ ಬಂದುದು ಮತ್ತೆ ಮತ್ತೆ ಮನಸ್ಸಿನ ಮೂಲೆಯಲ್ಲಿ ಇಣುಕಿ ಕಾಡತೊಡಗುತ್ತದೆ.

ಆಸ್ಟ್ರೇಲಿಯಾಕ್ಕೆ  ಹೋಗಿ ಬಂದು ಒಂದು ತಿಂಗಳೇ ಆಯಿತು. ತೀರಾ ಪೂರ್ವದ ದೇಶವದು. ಅಮೆರಿಕಾದಿಂದ ಆಸ್ಟ್ರೇಲಿಯಾಕ್ಕೆ ಇರುವ ವಾಯು ಯಾನದ ಅಂತರ ಸುಮಾರು 16 ಸಾವಿರ ಕಿ.ಮೀ.  ಆದರೆ, ಅಮೆರಿಕಾ ನೋಡಿ ಬಂದವರಿಗೆ ಆಸ್ಟ್ರೇಲಿಯಾ ಥೇಟ್‌ ಹಾಗೆಯೇ ಇದೆ ಎಂದು ಅನಿಸುತ್ತದೆ. ಅಮೆರಿಕನ್ನರು ತಮ್ಮ ದೇಶದ ಕೈದಿಗಳನ್ನು ಇಡಲು ಆಸ್ಟ್ರೇಲಿಯಾ ದೇಶವನ್ನು ಬಳಸಿಕೊಂಡಿದ್ದರು.

ಸಾವಿರಾರು ಕಿಲೋ ಮೀಟರ್‌ ದೂರ, ಸಮುದ್ರದ ನಡುವೆ ಇದ್ದು ಕೈದಿಗಳು ಬುದ್ಧಿ ಕಲಿಯಲಿ ಎಂದು ಇರಬೇಕು! ಬ್ರಿಟಿಷರು ಭಾರತೀಯರಿಗೆ ಬುದ್ಧಿ ಕಲಿಸಲು ಅಂಡಮಾನ್‌, ನಿಕೋಬಾರ್‌ಗಳಲ್ಲಿ ಹೀಗೆಯೇ ಅಲ್ಲವೇ ಜೈಲುಗಳನ್ನು ಕಟ್ಟಿದ್ದು? ಸ್ವತಂತ್ರವಾಗಿ ಒಂದು ಖಂಡವೇ ಆಗಿರುವ ಆಸ್ಟ್ರೇಲಿಯಾ ಎಷ್ಟು ದೊಡ್ಡದಾಗಿದೆ ಎಂದರೆ ಆ ಒಂದೇ ದೇಶದಲ್ಲಿ ಮೂರು ಕಾಲಮಾನಗಳು ಇವೆ. ಅಷ್ಟು ದೊಡ್ಡ ದೇಶದ ಜನಸಂಖ್ಯೆ ನಮ್ಮ ಕರ್ನಾಟಕ ರಾಜ್ಯದಷ್ಟೂ ಇಲ್ಲ. ಜನಸಂಖ್ಯೆ ಹೆಚ್ಚಿಸುವುದರಲ್ಲಿ ಭಾರತೀಯರು ನಿಸ್ಸೀಮರು. ನಾವು ಪ್ರತಿವರ್ಷ ಒಂದು ‘ಆಸ್ಟ್ರೇಲಿಯಾ’ವನ್ನು ನಮ್ಮ ದೇಶಕ್ಕೆ ಸೇರಿಸುತ್ತಿದ್ದೇವೆ.

ಭಾರತಕ್ಕಿಂತ ಐದಾರು ಗಂಟೆ ಮುಂಚೆ ಸೂರ್ಯೋದಯ ಆಗುವ ಆಸ್ಟ್ರೇಲಿಯಾದಲ್ಲಿ ಆಕಾಶ  ಸದಾ ನಿರಭ್ರ, ಶುಭ್ರ. ಮಳೆ ಬಹಳ ಕಡಿಮೆ. ಅಲ್ಲಿ ಬೆಳೆಯೂ ಕಡಿಮೆ. ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್‌ ಮಹಾಸಾಗರಗಳಿಂದ ಸುತ್ತುವರಿದಿರುವ ಆಸ್ಟ್ರೇಲಿಯಾ ದೇಶದಲ್ಲಿ ಈಗ ಪ್ರವಾಸೋದ್ಯಮ ಒಂದು ಪ್ರಮುಖ ಉದ್ಯಮ, ವರಮಾನದ ಮೂಲ. ಆ ದೇಶಕ್ಕೆ ನಮ್ಮ ಹಾಗೆ  ದೊಡ್ಡ ಇತಿಹಾಸವಿಲ್ಲ. ಕನಿಷ್ಠ ನಾವು ಹೋದ ಕಡೆಗಳಲ್ಲಿಯಾದರೂ ಪುರಾತನವಾದುದು ಏನೂ ಇರಲಿಲ್ಲ. ಆದರೆ, ಆಧುನಿಕ ಜಗತ್ತನ್ನು ಆಧುನಿಕ ಜಗತ್ತಿಗೆ ಹೇಗೆ ಮಾರಬೇಕು ಎಂದು ಕಲಿಯಲು ಆಸ್ಟ್ರೇಲಿಯಾಕ್ಕೆ ಹೋಗಬೇಕು. ಸಿಂಗಪುರ, ಮಲೇಷ್ಯಾ, ಥಾಯ್ಲೆಂಡ್ ದೇಶಗಳೂ ಆಧುನಿಕ ಜಗತ್ತಿಗೆ ತಮ್ಮ ಆಧುನಿಕ ಜಗತ್ತನ್ನೇ ಮಾರುತ್ತಿವೆ. ನಮ್ಮ ಹಾಗೆ ದೊಡ್ಡ ಇತಿಹಾಸವುಳ್ಳ ಚೀನಾ ಮಾತ್ರ ಆಧುನಿಕ ಶಾಂಘೈ ನಗರದ ಜತೆಗೆ ತನ್ನ ಪುರಾತನ ಗೋಡೆಯನ್ನೂ ಪ್ರವಾಸಿಗರಿಗೆ ‘ಮಾರುತ್ತಿದೆ.’

ನಮ್ಮ ಕ್ರಿಯೆಗಳು ನಮ್ಮ ನಿಲುವುಗಳನ್ನು ಪ್ರತಿಪಾದಿಸುತ್ತವೆ. ನಮ್ಮ ದೇಶದ ಯಾವ ಪ್ರಧಾನಿಯೂ ಪ್ರವಾಸೋದ್ಯಮ ಖಾತೆಯನ್ನು ತಮ್ಮ ಬಳಿ ಇಟ್ಟುಕೊಂಡುದು ನಮಗೆ ಗೊತ್ತಿಲ್ಲ. ಬಿಡಿ, ನಮ್ಮ ರಾಜ್ಯದ ಯಾವ ಮುಖ್ಯಮಂತ್ರಿಯೂ ಪ್ರವಾಸೋದ್ಯಮ ಖಾತೆಯನ್ನು ತಮ್ಮ ಬಳಿ ಇಟ್ಟುಕೊಂಡುದೂ ಇತಿಹಾಸದಲ್ಲಿ ಇಲ್ಲ. ಇದೆಲ್ಲ ಏಕೆ ಮುಖ್ಯ ಎಂದರೆ ನಾಯಕರಾದವರು ಯಾವ ಖಾತೆ ತೆಗೆದುಕೊಳ್ಳುತ್ತಾರೆ ಎನ್ನುವ ಮೂಲಕ ಆ ಖಾತೆಗೆ ಮಹತ್ವ ಸಿಗುತ್ತದೆ. ಬಿಜೆಪಿ ಸರ್ಕಾರದಲ್ಲಿ ಪ್ರವಾಸೋದ್ಯಮ ಖಾತೆಗೆ ಸಿಕ್ಕ ಮಹತ್ವ ಏನು ಎಂದು ನಮಗೆ ಗೊತ್ತಿದೆ. ಜನಾರ್ದನ ರೆಡ್ಡಿ ಅವರ ಬಳಿ ಆ ಖಾತೆ ಇತ್ತು. ಈಗ ಆರ್‌.ವಿ.ದೇಶಪಾಂಡೆ ಅವರ ಬಳಿ ಆ ಖಾತೆ ಇದೆ. ಅವರಿಗೂ ಅದು ಹೆಚ್ಚುವರಿ ಖಾತೆ. ಅವರು ಮುಖ್ಯವಾಗಿ ಉನ್ನತ ಶಿಕ್ಷಣ ಸಚಿವರು! ಇದನ್ನೆಲ್ಲ ಏಕೆ ಪ್ರಸ್ತಾಪಿಸುತ್ತಿರುವೆ ಎಂದರೆ ಆಸ್ಟ್ರೇಲಿಯಾ ದೇಶದ ನ್ಯೂ ಸೌತ್‌ ವೇಲ್ಸ್ ರಾಜ್ಯದ ಮುಖ್ಯಮಂತ್ರಿ, ಅಲ್ಲಿ ಅವರನ್ನು ಪ್ರೀಮಿಯರ್‌ ಎಂದು ಕರೆಯುತ್ತಾರೆ, ಬ್ಯಾರಿ ಓ’ಫರೆಲ್ ಅವರು ಆ ರಾಜ್ಯದ ಪ್ರವಾಸೋದ್ಯಮ,  ಕಲೆ ಖಾತೆಯ ಸಚಿವ ಜಾರ್ಜ್‌ ಸೌರಿಸ್‌ ಜತೆಗೂಡಿ ಭಾರತದಿಂದ 18.30 ಕೋಟಿ ಆಸ್ಟ್ರೇಲಿಯನ್‌ ಡಾಲರ್‌ ವಹಿವಾಟಿನ ಪ್ರವಾಸೋದ್ಯಮ ಆಂದೋಲನಕ್ಕೆ ಈಚೆಗೆ ಚಾಲನೆ ನೀಡಿದರು. ಆ ದೇಶದ ಒಂದು ಸಣ್ಣ ರಾಜ್ಯ ಇಡೀ ಭಾರತ ದೇಶದಿಂದ ಎಷ್ಟು ವರಮಾನ ಗಳಿಸಲು ಸಾಧ್ಯ ಎಂದು ಯೋಚನೆ ಮಾಡುತ್ತದೆ ಮತ್ತು ಇಂಥ ಒಂದು ಯೋಚನೆ ಮಾಡಿದ ಆ ದೇಶದ ಮೊದಲ ರಾಜ್ಯ ಕೂಡ ನ್ಯೂ ಸೌತ್‌ ವೇಲ್ಸ್‌.

ಸಿಡ್ನಿ ನಗರವನ್ನೂ ಒಳಗೊಂಡಿರುವ ನ್ಯೂ ಸೌತ್‌ ವೇಲ್ಸ್‌ ರಾಜ್ಯ ಮತ್ತು ಪಕ್ಕದ ಕ್ವೀನ್ಸ್‌ಲ್ಯಾಂಡ್‌ ರಾಜ್ಯಗಳಲ್ಲಿ ಮಾತ್ರ ನಾವು ಮಾಧ್ಯಮದ ಗೆಳೆಯರು ಆ ರಾಜ್ಯಗಳ ಆಹ್ವಾನದ ಮೇರೆಗೆ ಪ್ರವಾಸ ಮಾಡಿದೆವು. ಬರೀ ಆ ಎರಡು ರಾಜ್ಯಗಳ ನಗರಗಳಲ್ಲಿ ಮಾತ್ರವಲ್ಲ ಒಳನಾಡಿನ ಹಳ್ಳಿಗಾಡಿ ನಲ್ಲಿಯೂ ಸುತ್ತಾಡಿದೆವು. ನಾವು ಸುತ್ತಾಡಿದ ಎಲ್ಲ ರಸ್ತೆಗಳು ಎಷ್ಟು ಅಂದವಾಗಿದ್ದುವು, ಎಷ್ಟು ಅಚ್ಚುಕಟ್ಟಾಗಿದ್ದುವು ಎಂದರೆ ಈಗಷ್ಟೇ  ಅವುಗಳಿಗೆ ಡಾಂಬರು ಹಾಕಿದಂತೆ ಕಾಣುತ್ತಿತ್ತು. ಡಾಂಬರಿನ ಮೇಲೆ ಎಲ್ಲ ಕಡೆ ಬಿಳಿಪಟ್ಟಿಗಳು ಕಣ್ಣು ಕುಕ್ಕುತ್ತಿದ್ದುವು. ರಾಷ್ಟ್ರೀಯ ಹೆದ್ದಾರಿ ಬಿಟ್ಟರೆ ಇಂಥ ರಸ್ತೆಗಳು ನಮ್ಮಲ್ಲಿ ಎಲ್ಲಿ ಇವೆ? ಯಾವ ಒಂದು ರಸ್ತೆಯಲ್ಲಿಯೂ ಒಂದಾದರೂ ರಸ್ತೆ ಹಂಪ್‌ ಇರಲಿಲ್ಲ. ರಸ್ತೆಯಲ್ಲಿ ಸಂಚರಿಸುವುದಕ್ಕೂ ಹವೆಯಲ್ಲಿ ತೇಲುವುದಕ್ಕೂ ವ್ಯತ್ಯಾಸವೇ ಇಲ್ಲ ಎನ್ನುವಂಥ ಅನುಭವ.

ನನಗೆ ನಮ್ಮ ನಾಡಿನ ವಿಶ್ವ ಪಾರಂಪರಿಕ ತಾಣ ಹಂಪಿಯ ಸುತ್ತುಮುತ್ತಲಿನ ರಸ್ತೆಗಳು ನೆನಪಾಗತೊಡಗಿದುವು. ಬಾದಾಮಿ, ಐಹೊಳೆ, ಪಟ್ಟದಕಲ್ಲಿನ ಪರಿಸರದ ರಸ್ತೆಗಳು ನೆನಪಾಗತೊಡಗಿದುವು. ನಮ್ಮಲ್ಲಿ ತೋರಿಸಲು ಎಷ್ಟೆಲ್ಲ ಇದೆ? ಎಂಥ ದೊಡ್ಡ ಇತಿಹಾಸದ, ಪರಂಪರೆಯ ವಾರಸುದಾರರು ನಾವು. ಆದರೆ, ಅದನ್ನು ಹೇಗೆ ಇಟ್ಟುಕೊಂಡಿದ್ದೇವಲ್ಲ? ಕೊರಗು ಕಾಡತೊಡಗಿತು. ಭಾರತದ ಒಂದೊಂದು ರಾಜ್ಯವೂ ನ್ಯೂ ಸೌತ್‌ ವೇಲ್ಸ್‌ ರಾಜ್ಯದ ಮುಖ್ಯಮಂತ್ರಿಯ ಹಾಗೆ, ಅಲ್ಲಿನ ಪ್ರವಾಸೋದ್ಯಮ ಸಚಿವರ ಹಾಗೆ ಯೋಚಿಸಬಹುದಲ್ಲ ಎಂದು ಅನಿಸತೊಡಗಿತು.

ಹಂಪಿಯ ಅಧಿದೈವ ವಿರೂಪಾಕ್ಷ ದೇವಸ್ಥಾನದ ಮುಂದಿನ ರಸ್ತೆ ಯನ್ನು ವಿಸ್ತಾರ ಮಾಡುವುದಕ್ಕೆ ನಮಗೆ ವರ್ಷಗಳೇ ಹಿಡಿದುವು. ಈಗಲೂ ಆ ದೇವಸ್ಥಾನದ ಎಡಬದಿಯಲ್ಲಿ ಹರಿಯುವ ತುಂಗೆಯ ಎರಡೂ ಕಡೆಯ ಕಟ್ಟೆಗಳು ಬಹಿರಂಗ ಶೌಚದ ತಾಣಗಳೇ ಆಗಿವೆ. ಅಲ್ಲಿ ಹೋಗಿ, ಮೂಗು ತೆರೆದುಕೊಂಡು ಹರಿಯುವ ನದಿಯನ್ನು ನೋಡುತ್ತ ನಿಲ್ಲುವುದು ಸಾಧ್ಯವಿಲ್ಲ. ನಮ್ಮ ಕಾರವಾರದಂಥ ಇನ್ನೊಂದು ಊರೇ ಇಲ್ಲ ಎಂದು ಕವಿ ರವೀಂದ್ರರು ಬಣ್ಣಿಸಿದ್ದರು. ಅಲ್ಲಿಯ ಬೀಚಿಗಿಂತ ಸುಂದರವಾದ ಬೀಚು ಮತ್ತೊಂದು ಇಲ್ಲ. ಆ ಬೀಚು ಈಗಲೂ ಬಹಿರಂಗ ಶೌಚಕ್ಕೆ ಹೇಳಿಮಾಡಿಸಿದ ಜಾಗ !. ನಮಗೆ ನಮ್ಮ ಬಗ್ಗೆ ಹೆಮ್ಮೆಯಿಲ್ಲ. ನಮ್ಮದರ ಬಗೆಗೂ ಹೆಮ್ಮೆಯಿಲ್ಲ.

ಸಿಡ್ನಿ ನಗರದಲ್ಲಿ ಬೆಂಗಳೂರಿನ ಹಾಗೆಯೇ ಸಂಚಾರ ಸಮಸ್ಯೆ. ವಾಹನಗಳ ದಟ್ಟಣೆ. ಆದರೆ, ಅಲ್ಲಿ ಇದ್ದ ನಾಲ್ಕು ದಿನಗಳಲ್ಲಿ ಒಂದು ದಿನವೂ ನನಗೆ ಒಂದು ವಾಹನವೂ ಹಾರ್ನ್‌ ಮಾಡಿದ್ದು ಕೇಳಿಸಲಿಲ್ಲ. ಎಲ್ಲರೂ ಮೌನವಾಗಿ ವಾಹನ ಓಡಿಸುತ್ತಾರೆ. ಸಂಚಾರ ಸಿಗ್ನಲ್‌ಗಳಲ್ಲಿ ತಮ್ಮ ಸರದಿಗಾಗಿ ಕಾಯುತ್ತ ನಿಲ್ಲುತ್ತಾರೆ. ಸಂಚಾರ ದಟ್ಟಣೆಯಾದರೂ ಯಾರೂ ಮುಂದೆ ಬಂದು ನುಗ್ಗಿ ನಿಲ್ಲುವುದಿಲ್ಲ.  ಗಂಟೆಗಳು ಕಳೆದರೂ ಒಂದು ವಾಹನದ ಹಿಂದೆಯೇ ಮತ್ತೊಂದು ವಾಹನ ತನ್ನ ಸರದಿಗಾಗಿ ಕಾಯುತ್ತ ನಿಲ್ಲುತ್ತದೆ.

ಅಷ್ಟೆಲ್ಲ ವಾಹನಗಳು ಇದ್ದರೂ ಇಡೀ ಆಸ್ಟ್ರೇಲಿಯಾ ದೇಶ ಶೂನ್ಯ ಮಾಲಿನ್ಯದ ದೇಶ. ಅಲ್ಲಿ ವಾಹನ ಪ್ರದೂಷಣೆ ಎನ್ನುವುದು ಇಲ್ಲವೇ ಇಲ್ಲ. ನನಗೆ ಸೋಜಿಗವಾಯಿತು, ನಮ್ಮ ವಾಹನದ ಚಾಲಕ ಮೈಕೆಲ್‌ ಲ್ಯಾಡ್‌ನಿಗೆ ಕೇಳಿದೆ,: ‘ಏನು ನೀನು ಹಾರ್ನ್‌ ಹಾಕುವುದೇ ಇಲ್ಲವಲ್ಲ? ಹೇಗೆ ವಾಹನ ಓಡಿಸುತ್ತೀ. ನಿನ್ನ ವಾಹನದಲ್ಲಿ ಹಾರ್ನ್‌ ಅಳವಡಿಸಿದ್ದಾರೋ ಇಲ್ಲವೋ’ ಎಂದು. ‘ಹಾರ್ನ್ ಇದೆ. ಅದನ್ನು ಬಳಸಬೇಕಾದ ಅಗತ್ಯವೇ ಇಲ್ಲ. ನಾವು ಉಂಟು ಮಾಡುವ ಶಬ್ದ ಮಾಲಿನ್ಯ ನಮಗೇ ತೊಂದರೆ ಅಲ್ಲವೇ’ ಎಂದ ಆತ. ನಮ್ಮ ನಾಡನ್ನು ಪ್ರೀತಿಸುವ ಬಗೆಗಳು ಎಷ್ಟೆಲ್ಲ ಇರುತ್ತವೆಯಲ್ಲ? ಮೂಲೆಗೊಬ್ಬರಂತೆ ಕಾಯುತ್ತ ನಿಂತ ಪೊಲೀಸರ ಮುಂದೆಯೇ ನಾವು ಕಿವಿಗಡಚಿಕ್ಕುವಂತೆ ಹಾರ್ನ್‌ ಹಾಕುತ್ತೇವೆ. ಪಾದಚಾರಿ ರಸ್ತೆಗಳ ಮೇಲೆ ನಮ್ಮ ಬೈಕುಗಳನ್ನು ಓಡಿಸಿಕೊಂಡು ಹೋಗುತ್ತೇವೆ. ಅಲ್ಲಿ ಒಂದು ಕಡೆಯೂ ನನಗೆ ಪೊಲೀಸರು ಕಾಣಲಿಲ್ಲ. ಅವರು ಎಲ್ಲಿ ಇರುತ್ತಿದ್ದರೋ ಏನೋ?

ಎಲ್ಲಿಯೂ ಕಾಣದ ಪೊಲೀಸರು ಅಲ್ಲಿನ ರಾತ್ರಿ ಜೀವನ ಸುರಕ್ಷಿತವಾಗಿರುವಂತೆಯೂ ನೋಡಿಕೊಂಡಿದ್ದಾರೆ. ಬೆಂಗಳೂರಿನಂಥ ಒಂದು ಕೋಟಿ ಜನಸಂಖ್ಯೆ ಮೀರಿರುವ ನಗರದಲ್ಲಿ ಒಂದು ಗಂಟೆವರೆಗೆ ರಾತ್ರಿ ಜೀವನ ಮುಂದುವರಿಸುವುದು ದೊಡ್ಡ ಸಂಗತಿಯಾಗುತ್ತದೆ. ಕೈಲಾಗದ ನಮ್ಮ ಪೊಲೀಸರು ರಾತ್ರಿ ಜೀವನ ವಿಸ್ತರಿಸಿದರೆ ಅಪರಾಧ ಹೆಚ್ಚುತ್ತವೆ ಎನ್ನುತ್ತಾರೆ. ಆದರೆ, ಹಾಡಹಗಲೇ ಇಲ್ಲಿ ದರೋಡೆ ಆಗುತ್ತವೆ, ಖೂನಿ ಆಗುತ್ತವೆ! ಪರದೇಶಗಳಲ್ಲಿ ರಾತ್ರಿ ಜೀವನವೂ ಒಂದು ಪ್ರವಾಸಿ ಆಕರ್ಷಣೆ. ಹೆಚ್ಚು ದುಡ್ಡು ಮಾಡುವ ಸಾಧನ. ನಮ್ಮಲ್ಲಿ ಹೋಟೆಲ್‌ಗಳಲ್ಲಿ ಹುಡುಗಿಯರು ಹಾಡು ಹೇಳುವುದಕ್ಕೂ ಪೊಲೀಸರ ಅನುಮತಿ ಬೇಕು. ಅವರಿಗೆ ಹಫ್ತಾ ಕೊಡಬೇಕು. ಕೊಡದಿದ್ದರೆ ಕೇಸು ಜಡಿಯುತ್ತಾರೆ. ದಾಳಿ ಮಾಡುತ್ತಾರೆ. ನಾವು ಯಾವುದನ್ನೂ ಸಹಜವಾಗಿ ಇರಲು ಬಿಡುವುದಿಲ್ಲ; ನಡೆಯಲು ಅವಕಾಶ ಕೊಡುವುದಿಲ್ಲ. ಆಧುನಿಕವಾಗಿ ಯೋಚಿಸುವುದೇ ನಮಗೆ ಸಾಧ್ಯವಿಲ್ಲವೇನೋ?

ನಮ್ಮ ಬಹುತೇಕ ಪ್ರವಾಸಿ ತಾಣಗಳು ಐತಿಹಾಸಿಕವಾದುವು, ಧಾರ್ಮಿಕವಾದುವು. ಎಲ್ಲವೂ ಸರ್ಕಾರದ ವಶದಲ್ಲಿ ಇವೆ. ಆಸ್ಟ್ರೇಲಿಯಾದಲ್ಲಿ ಬಹುತೇಕ ಪ್ರವಾಸಿ ಚಟುವಟಿಕೆ ಖಾಸಗಿಯವರ ಕೈಯಲ್ಲಿ ಇದೆ. ಗೋಲ್ಡ್‌ಕೋಸ್ಟ್‌ ನಗರದ ಎಪ್ಪತ್ತು ಮಹಡಿಗಳ ಮೇಲಿನ ‘ಸ್ಕೈಪಾಯಿಂಟ್ ನೋಟ’ ಖಾಸಗಿಯವರೇ ನಿರ್ವಹಿಸುತ್ತಾರೆ. ನಮ್ಮಲ್ಲಿ ಇಂಥ ಒಂದು ‘ಸಾಹಸ’ವೂ ಇದ್ದಂತೆ ಇಲ್ಲ. ಎಲ್ಲವನ್ನೂ ಸರ್ಕಾರವೇ ಮಾಡಬೇಕು. ನಮ್ಮ ನಾಯಕರಿಗೆ ಸದಾ ವೋಟು ತರುವ ರಾಜಕಾರಣದ್ದೇ ವ್ಯಸನ. ಸರ್ಕಾರದ ಕೈಯಲ್ಲಿ ಇರುವುದಕ್ಕೆ ಸ್ಪರ್ಧೆಯ ಭಯ ಇರುವುದಿಲ್ಲ. ನಮ್ಮ ಪ್ರವಾಸೋದ್ಯಮ ನಲುಗುತ್ತಿರುವುದಕ್ಕೆ, ಬೊಕ್ಕಸಕ್ಕೆ ಎಷ್ಟು ಲಾಭ ತರಬೇಕೋ ಅಷ್ಟು ತರದೇ ಇರುವುದಕ್ಕೆ ಇದೇ ಕಾರಣ ಆಗಿರಬೇಕು. ಹಂಪಿಯನ್ನು, ಐಹೊಳೆಯನ್ನು ಖಾಸಗಿಯವರಿಗೆ ಕೊಡಬೇಕು ಎಂದು ಹೇಳುವುದು ತಪ್ಪು. ಕನಿಷ್ಠ ನಿರ್ವಹಣೆಯನ್ನಾದರೂ ಅವರಿಗೆ ಕೊಡಬೇಕು. ಬರುವ ಲಾಭದಲ್ಲಿ ಪರಿಸರವನ್ನು ಅಭಿವೃದ್ಧಿ ಮಾಡಲಾದರೂ ಅವರಿಗೆ ಕೇಳಬಹುದು.

ಗೋಲ್ಡ್‌ ಕೋಸ್ಟ್‌ ನಗರ ಸಮುದ್ರ ದಂಡೆಯ ಮೇಲೆ ಕಿಲೋ ಮೀಟರ್‌ಗಟ್ಟಲೆ ವಾರಾಂತ್ಯ ಗೂಂಡಗಡಿಗಳು ತಲೆ ಎತ್ತುತ್ತವೆ. ಜನರು ಸುಮ್ಮನೆ ಅತ್ತಲಿಂದ ಇತ್ತ, ಇತ್ತಲಿಂದ ಅತ್ತ ಸಮುದ್ರದ ಅಲೆಗಳ ಮೊರೆತ ಕೇಳುತ್ತ ತಂಪಾದ ಗಾಳಿ ಆನಂದಿಸುತ್ತ ಸಂಚರಿಸುತ್ತಾರೆ. ಆಸಕ್ತಿಯಿದ್ದವರು ವ್ಯಾಪಾರವನ್ನೂ ಮಾಡುತ್ತಾರೆ. ಹಂಪಿಯ ರಸ್ತೆಗಳಲ್ಲಿ ಮುತ್ತು ರತ್ನಗಳನ್ನು ಮಾರುತ್ತಿದ್ದರಂತೆ. ಈಗ ತೆಂಗಿನ ಕಾಯಿ, ಹೂವು, ಹಣ್ಣು ಮಾತ್ರ ಮಾರುತ್ತಾರೆ. ಅಲ್ಲಿ ಇಡೀ ಕರ್ನಾಟಕದ ಗುಡಿ ಕೈಗಾರಿಕೆಗಳ ಉತ್ಪನ್ನಗಳನ್ನೆಲ್ಲ ಮಾರಬಹುದಲ್ಲ? ಬರೀ ಹಂಪಿ ಏಕೆ, ಇಂಥ ಎಷ್ಟೊಂದು ಊರುಗಳು ನಮ್ಮ ರಾಜ್ಯದಲ್ಲಿ ಇಲ್ಲ. ಹಾಗೆ ಮಾಡಿದರೆ ಈ ಕಡೆ ನಮ್ಮ ಪ್ರವಾಸೋದ್ಯಮವೂ ಬೆಳೆಯುತ್ತದೆ, ಅತ್ತ ನಮ್ಮ ಗುಡಿ ಕೈಗಾರಿಕೆಗಳೂ ಬದುಕುತ್ತವೆ. ಆದರೆ, ಇಂಥ ಯೋಚನೆಗಳೇ ನಮಗೆ ಬರುವುದಿಲ್ಲ. ಏಕೆಂದರೆ ನಮಗೆ ಆ ಕಡೆ ಗಮನವೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT