ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಮಾಣಿಕ ಸ್ನೇಹಹಸ್ತ

Last Updated 16 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಕಳೆದ ತಿಂಗಳು ಆರ್. ಎಂ. ಲಾಲಾ ಅವರು ಬರೆದ, ‘ಬಿಯಾಂಡ್ ದ ಲಾಸ್ಟ್‌ ಬ್ಲೂ ಮೌಂಟನ್’  ಪುಸ್ತಕ ಓದುವಾಗ ಒಂದು ಸುಂದರ ಘಟನೆ ಕಣ್ಣಿಗೆ ಬಿತ್ತು. ಅದು ಭಾರತದ ಅತ್ಯಂತ ದೊಡ್ಡ ಕಂಪನಿಯ ಯಜಮಾನರೊಬ್ಬರು ತಮ್ಮ ವಿರುದ್ದ ಬೆಂಕಿ ಕಾರುತ್ತಿದ್ದ ಕಾರ್ಮಿಕ ಸಂಘಟನೆಯ ನಾಯಕರ ಮನಸ್ಸನ್ನು ಹೇಗೆ ಗೆದ್ದರು ಎಂಬುದನ್ನು ತಿಳಿಸುತ್ತದೆ.

1938ರಲ್ಲಿ ಟಾಟಾ ಸ್ಟೀಲ್ ಕಂಪ­ನಿಯ ಅಧ್ಯಕ್ಷ  ಸರ್ ನೌರೋಜಿ ಎಸ್‌. ನಿಧನ­ರಾದರು. ಅದು ಅನಿರೀಕ್ಷಿತ­ವಾಗಿತ್ತು. ಹೀಗಾಗಿ ತಕ್ಷಣವೇ ಆ ಹುದ್ದೆಗೆ ಮತ್ತೊಬ್ಬ­ರನ್ನು ಆರಿಸಬೇಕಾಗಿ ಬಂದಾಗ ಆ ಸ್ಥಾನಕ್ಕೆ ಬಂದವರು ಮೂವತ್ಮೂರು ವರ್ಷದ ತರುಣ ಜೆ. ಆರ್.ಡಿ. ಟಾಟಾ ಅವರು. ಬಹುದೊಡ್ಡ ಹುದ್ದೆಯ ಜವಾಬ್ದಾರಿ­ಯನ್ನು ಕಲಿಯು­ತ್ತಿದ್ದ ಸಂದರ್ಭದಲ್ಲಿ ಎಲ್ಲರೂ ಅವರಿಗೆ ಹೇಳಿ ಹೆದರಿಸಿದ್ದು ಏನೆಂದರೆ, ಕಾರ್ಮಿಕ ಸಂಘಟನೆಯ ಮುಖಂಡರಾಗಿದ್ದ ಪ್ರೊಫೆ­ಸರ್ ಬಾರಿ ಅವರ ಕೋಪ­ ಎದುರಿಸುವುದು. ಬಾರಿಯವರ ಮಾತಿನ ಪ್ರಹಾರಕ್ಕೆ ಕಂಪನಿಯ ಅಧಿಕಾರಿ­ಗಳೆಲ್ಲ ಹೆದರುತ್ತಿದ್ದರು. ಆತ ಮಹಾ ಕೋಪಿಷ್ಠ.

ಅದುವರೆಗೂ ಜೆ.ಆರ್.ಡಿ. ಟಾಟಾ ಅವರಿಗೆ ಕಂಪನಿಯ ಜನರೊಂದಿಗೆ ಒಳ್ಳೆಯ ಬಾಂಧವ್ಯ ಬೆಳೆಸಿಕೊಳ್ಳುವುದು ಕಷ್ಟವೆನ್ನಿಸಿರಲಿಲ್ಲ. ಅದರಲ್ಲೂ ಕಾರ್ಮಿ­ಕರೊಂದಿಗೆ ಅವರದು ಪ್ರೀತಿಯ ಸಂಬಂಧ. ಆದರೆ, ಪ್ರೊಫೆಸರ್ ಬಾರಿ­ಯವರ ವಿಷಯವೇ ಬೇರೆ. ಅವ­ರದು ಅತ್ಯಂತ ಭಾವಾವೇಶದ ಸ್ವಭಾವ. ಮಾತು ಕೆರಳಿ ನಿಂತರೆ ಏನು ಹೇಳ­ಬಹುದು, ಹೇಗೆ ಮಾತನಾಡ­ಬಹುದು ಎಂಬುದನ್ನು ಹೇಳುವಂತಿ­ರಲಿಲ್ಲ. ಒಂದು ದಿನ ಸಂಜೆ ಸಭೆಯಲ್ಲಿ ಚರ್ಚೆ ನಡೆದಾಗ ಬಾರಿ ಸಿಡಿದೆದ್ದರು. ಹರಿಯಿತು ಮಾತಿನ ಮಹಾಪ್ರವಾಹ. ಆ ಪ್ರವಾಹದಲ್ಲಿ ಸಾಮಾನ್ಯವಾಗಿ ಬೇರೆಯ­ವರಿಗೆ ತೋರುವ ಗೌರವದ ಭಾಷೆ ಮರೆಯಾಗಿ ಕ್ರೂರವಾದ, ಅಪಮಾನ­ಕರವಾದ ಶಬ್ದಗಳು ಬರ­ತೊಡಗಿದವು. ಇಡೀ ಕಂಪನಿಯ, ಮಾಲಿಕರ ಗೌರವ  ಜಾಲಾಡಿಬಿಟ್ಟರು. ಅವರು ಮೇಜು ಕುಟ್ಟಿ ಮಾತನಾಡುವ ಅವತಾರವನ್ನು ಕಂಡ ಅಧಿಕಾರಿಗಳು ಬೆಪ್ಪಾಗಿ ಕುಳಿತರು. ಜೆ.ಆರ್.ಡಿ. ಟಾಟಾ, ಪ್ರೊಫೆಸರ್ ಬಾರಿಯವರು ಮಾತ­ನಾಡು­ವುದನ್ನು ಅತ್ಯಂತ ಲಕ್ಷ್ಯದಿಂದ ಆಲಿಸುತ್ತಿದ್ದರು. ಅವರ ಮುಖದ ಮೇಲೆ ಯಾವ ಭಾವನೆ­ಗಳೂ ತೋರುತ್ತಿರಲಿಲ್ಲ. ಅದರ ಬದಲಾಗಿ ಅಲ್ಲಿ ಅಚ್ಚರಿಯ ಭಾವ ನಿಂತಂತಿತ್ತು.

ಮರುದಿನ ಬೆಳಿಗ್ಗೆ ಇಬ್ಬರೂ ಭೆಟ್ಟಿ­ಯಾದಾಗ ಮುಗುಳ್ನಗುತ್ತ ಅತ್ಯಂತ ಪ್ರೀತಿ­ಯಿಂದ ಟಾಟಾರವರು ಬಾರಿ­ಯವರ ಕೈ ಕುಲುಕಿದರು. ‘ನಿನ್ನೆ ನಿಮ್ಮ ಭಾಷಣ ತುಂಬ ಚೆನ್ನಾಗಿತ್ತು. ಅದರಲ್ಲಿ ಬಹಳಷ್ಟು ಮಾತು ಸತ್ಯವಾಗಿತ್ತು. ನಿಮ್ಮ ಪ್ರಾಮಾಣಿಕತೆ ನನಗೆ ತುಂಬ ಹಿಡಿಸಿತು’ ಎಂದರು. ಬಾರಿಯವರಿಗೆ ಗಲಿಬಿಲಿ­ಯಾ­ಯಿತು. ತಮ್ಮಿಂದ ಹಾಗೆ ಹಿಗ್ಗಾಮುಗ್ಗಾ ಬೈಸಿಕೊಂಡಿದ್ದ ಟಾಟಾ ಹೀಗೆ ಹಸ­ನ್ಮುಖರಾಗಿ ಮಾತನಾಡಿಸ­ಬಹು­ದೆಂದು ಅವರು ಅಂದುಕೊಂಡಿರಲಿಲ್ಲ. ಅವರ ಮುಖ­ಭಾವವೇ ಬದಲಾಯಿತು. ‘ಥ್ಯಾಂಕ್್ಸ್’ ಎಂದರು ಬಾರಿ. ಆಗ ಟಾಟಾ, ‘ಪ್ರೊಫೆಸರ್ ಸಾಹೇಬ್, ನೀವು  ಹೇಳಿದ್ದು ಸರಿ. ಅದನ್ನು ನಾನು ಒಪ್ಪು­ತ್ತೇನೆ.

ಆದರೆ, ನಮ್ಮನ್ನೆಲ್ಲ ಹಾಗೆ ಬೈದದ್ದು ಸರಿಯೇ?’ ಎಂದು ಕೇಳಿದರು. ಅದಕ್ಕೆ ಬಾರಿ ತಲೆ ತಗ್ಗಿಸಿ, ‘ಏನು ಮಾಡಲಿ ಸರ್, ವೇದಿಕೆಯ ಮೇಲೆ ನಿಂತು ಮಾತು ಶುರು ಮಾಡಿದೊಡನೆ ನನ್ನನ್ನು ಆವೇಶ ಆವರಿಸಿಕೊಂಡು­ಬಿಡು­ತ್ತದೆ, ತೂಕ ತಪ್ಪುತ್ತದೆ, ಕ್ಷಮಿಸಿ’ ಎಂದು ಮತ್ತೆ ಕೈ ಕುಲುಕಿದರು. ಅವರಿಬ್ಬರ ಸ್ನೇಹ ಮುಂದೆ, ಬಾರಿಯ­ವರು 1947 ರಲ್ಲಿ ತೀರಿ ಹೋಗುವವರೆಗೂ ಸ್ಥಿರವಾಗಿತ್ತು. ಟಾಟಾ ಹೇಳುತ್ತಾರೆ, ‘ಇದು ಪವಾಡವೇನಲ್ಲ. ನಾನು ಪ್ರಾಮಾಣಿಕ­ನಾದಂತೆ ನಟನೆ ಮಾಡಿ ಸ್ನೇಹ ಸಂಪಾ­ದಿ­ಸಲಿಲ್ಲ, ನಿಜವಾಗಿಯೂ, ಪ್ರಾಮಾಣಿಕ­ವಾಗಿಯೂ ಬಾರಿಯವರ ಪ್ರಾಮಾ­ಣಿ­ಕತೆ ಮೆಚ್ಚಿ ಸ್ನೇಹ ಬಯಸಿದ್ದೆ’.  ನಿಜವಾದ ಸ್ನೇಹ ಬಹುಕಾಲ ಉಳಿ­ಯಬೇಕಾದರೆ ಮುಖವಾಡಗಳು ಅಪ್ರಯೋಜಕ. ಅವುಗಳನ್ನು ಕಳಚಿ ಅತ್ಯಂತ ಪ್ರಾಮಾಣಿಕತೆಯಿಂದ ಕೈ ಚಾಚಿದರೆ ಸ್ಥಿರವಾದ ಸ್ನೇಹ ನೆಲೆಯಾ­ಗುತ್ತದೆ. ಕಪಟದ ಸ್ನೇಹ ಅಲ್ಪಾಯುಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT