ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗಲ ಬೇಹುಗಾರನ ನಿಯಂತ್ರಣಕ್ಕೇನು ಮಾರ್ಗ?

Last Updated 27 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಇದೊಂದು ಮೊಬೈಲ್‌ಗೆ ಅಳವಡಿಸಬಹು­ದಾದ ಕಿರು ತಂತ್ರಾಂಶ, ತಾಂತ್ರಿಕ ಪರಿಭಾಷೆಯಲ್ಲಿ ಹೇಳುವುದಾದದರೆ ಇದೊಂದು ಮೊಬೈಲ್ ಆ್ಯಪ್ (app). ಆ್ಯಪ್ ಗೂಗಲ್ ಪ್ಲೇ ಸ್ಟೋರ್, ಐಟ್ಯೂನ್ಸ್ ಹೀಗೆ ಎಲ್ಲಾ ಬಗೆಯ ಕಿರುತಂತ್ರಾಂಶ ದೊರೆಯುವ ವರ್ಚುವಲ್ ಅಂಗಡಿಗಳಲ್ಲಿ ಇದು ಉಚಿತವಾಗಿ ಲಭ್ಯವಿದೆ. 

ನೀವು ಯಾವುದೇ ಸ್ಥಳಕ್ಕೆ ಹೋದರೂ ಅಲ್ಲಿ ಯಾವ ಅಂಗಡಿಗಳಲ್ಲಿ ಯಾವ ವಸ್ತುಗಳ ಡಿಸ್ಕೌಂಟ್ ಸೇಲ್ ಅಥವಾ ದರ ಕಡಿತ ಮಾರಾಟವಿದೆ ಎಂಬ ಮಾಹಿತಿಯನ್ನು ಇದು ನಿಮಗೆ ಒದಗಿಸುತ್ತದೆ. ಒಂದು ರೂಪಾಯಿ­ಯನ್ನೂ ನಿಮ್ಮಿಂದ ಕೇಳದ ಈ ತಂತ್ರಾಂಶ ನಿಮ್ಮ ಮೊಬೈಲ್ ಫೋನ್‌ನ ಜಿಪಿಎಸ್ ಸೌಲಭ್ಯವನ್ನು ಬಳಸಿ­­ಕೊಂಡು ನೀವೆಲ್ಲಿದ್ದೀರಿ ಎಂಬುದನ್ನು ತಿಳಿದು­ಕೊಳ್ಳು­ತ್ತದೆ. ನಿಮ್ಮ ಫೋನ್‌ನಲ್ಲಿರುವ ದೂರ­ವಾಣಿ ಸಂಖ್ಯೆಗಳು ಮತ್ತಿತರ ಸಂಪರ್ಕ­ಗಳನ್ನು ನೋಡು­­ವುದಕ್ಕೆ ನಿಮ್ಮ ಅನುಮತಿಯನ್ನು ಇನ್‌­ಸ್ಟಾಲ್ ಆಗುವಾಗಲೇ ಪಡೆದು­ಕೊಂಡಿರುತ್ತದೆ.

ಮೇಲ್ನೋಟಕ್ಕೆ ಈ ಕಿರು ತಂತ್ರಾಂಶ ಬಳಕೆದಾರ­ನಿಗೆ ಯಾವ ತೊಂದರೆಯನ್ನೂ ಉಂಟು ಮಾಡು­ವು­ದಿಲ್ಲ. ತಂತ್ರಾಂಶ ತಯಾರಕರ ದೃಷ್ಟಿಯಲ್ಲಂತೂ ಇದು ಬಳಕೆದಾರರಿಗೆ ಮಾಹಿತಿಯನ್ನು ಒದಗಿ­ಸುವ ಮೂಲಕ ಅನುಕೂಲ ಕಲ್ಪಿಸುತ್ತದೆ. ಉದಾ­ಹ­ರ­ಣೆಗೆ ನೀವು ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಇದ್ದೀರಿ ಎಂದು ಭಾವಿಸಿ. ನಿಮ್ಮ ಮೊಬೈಲ್ ಫೋನ್‌ಗೆ ಅಲ್ಲಿರುವ ಯಾವ ಯಾವ ಅಂಗ­ಡಿ­ಗಳಲ್ಲಿ ಡಿಸ್ಕೌಂಟ್ ಸೇಲ್ ಇದೆ ಎಂಬ ಮಾಹಿತಿ ಬಂದು ಬೀಳುತ್ತದೆ. ನೀವು ಯಾವ ಅಂಗ­ಡಿಯ ಸಮೀಪ ಇದ್ದೀರಿ ಎಂಬ ಮಾಹಿತಿ­ಯನ್ನೂ ಅದೇ ಒದಗಿಸುತ್ತದೆ. ಆ ಅಂಗಡಿ­ಯೊ­ಳಕ್ಕೆ ನುಗ್ಗಿ  ಬೇಕಿರುವ ವಸ್ತುವನ್ನು ಖರೀದಿ­ಸುವು­ದಷ್ಟೇ ನಿಮ್ಮ ಕೆಲಸ.

ನಿಮಗೆ ಇಷ್ಟೆಲ್ಲಾ ಉಪಕಾರ ಮಾಡುವ ಈ ತಂತ್ರಾಂಶವನ್ನು ರೂಪಿಸಿದವರಿಗೆ ಏನು ಲಾಭ? ಅವ­ರೇಕೆ ಈ ಮಾಹಿತಿಯನ್ನು ನಿಮ್ಮ ಮೊಬೈಲ್ ಫೋನಿಗೆ ಕಳುಹಿಸಿಕೊಡಬೇಕು? ಈ ಪ್ರಶ್ನೆಗಳಿಗೆ ಸಾಮಾನ್ಯ ಜ್ಞಾನ ಇರುವ ಯಾರೂ ಉತ್ತರಿ­ಸಿ­ಯಾರು. ಈ ಕಿರುತಂತ್ರಾಂಶವನ್ನು ರೂಪಿಸಿದ­ವರು ನಿಮಗೆ ಮಾಹಿತಿ ತಲುಪಿಸಿದ್ದಕ್ಕಾಗಿ ಅಂಗಡಿ­ಗಳ­ವರಿಂದ ಹಣ ಪಡೆಯುತ್ತಾರೆ. ನೀವು ಅಲ್ಲಿ ಖರೀದಿ ಮಾಡಿ ನೀವು ಮಾಹಿತಿ ಪಡೆದದ್ದು ಮೊಬೈಲ್ ಆ್ಯಪ್‌ನಿಂದ ಎಂದು ತಿಳಿಸಿದರೆ ಅದಕ್ಕೆ ವಿಶೇಷ ಡಿಸ್ಕೌಂಟ್ ಕೂಡಾ ಸಿಗುತ್ತದೆ. ಇದಕ್ಕಾಗಿ ಆ್ಯಪ್ ತಯಾರಕರಿಗೆ ವಿಶೇಷ ಮೊತ್ತವೂ ಲಭಿಸುತ್ತದೆ.

ಈ ವ್ಯವಹಾರದಲ್ಲಿ ಆ್ಯಪ್ ತಯಾರಕರಿಗೆ ಲಾಭ. ಅಂಗಡಿಯವರಿಗೂ ಲಾಭ. ಖರೀದಿ ಮಾಡಲು ಹೋದವರಿಗೂ ಲಾಭ ಎಂಬುದು ಮೇಲ್ನೋ­ಟಕ್ಕೆ ಕಾಣಿಸುವ ಸತ್ಯ. ಈ ಲಾಭಕ್ಕಾಗಿ ಖರೀದಿ­ಸುವವರು ಅರ್ಥಾತ್ ಆ್ಯಪ್‌ನ ಬಳಕೆ­ದಾ­ರರು ತಾವೆಲ್ಲಿದ್ದೇವೆ ಎಂಬುದನ್ನು ನಿರಂತರವಾಗಿ ಆ್ಯಪ್‌ನ ನಿರ್ವಾಹಕರಿಗೆ ತಮಗೆ ಅರಿ­ವಿಲ್ಲ­ದಂತೆಯೇ ತಿಳಿಸುತ್ತಿರುತ್ತಾರೆ. ಅಥವಾ ಈ ಆ್ಯಪ್ ಅಳ­ವ­ಡಿಸಿಕೊಂಡವರನ್ನು ಆ್ಯಪ್‌ನ ನಿರ್ವಾಹಕರು ನಿರಂತ­ರವಾಗಿ ಹಿಂಬಾಲಿಸಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುತ್ತಾರೆ. ಇದಿಷ್ಟಕ್ಕೂ ಬಳಕೆ­ಯಾಗುವುದು ಬಳಕೆದಾರನ ಫೋನ್, ಆತ ಮೊಬೈಲ್ ಸೇವಾದಾತನಿಗೆ ಇಂಟರ್‌ನೆಟ್ ಸೇವೆ­ಗಾಗಿ ನೀಡಿರುವ ದುಡ್ಡು. ಜೊತೆಗೆ ನಿರಂತರವಾಗಿ ಅನ್ಯ­ನೊಬ್ಬನನ್ನು ಬಗಲಲ್ಲಿ ಇಟ್ಟುಕೊಂಡು ತಿರು­ಗಾಡ­ಬೇಕಾದ ಅನಿವಾರ್ಯತೆ ಬಳಕೆದಾರನದ್ದು.

ಡಿಸ್ಕೌಂಟ್ ಸೇಲ್‌ನ ಮಾಹಿತಿ ನೀಡುವ ಆ್ಯಪ್‌ನ ತಯಾರಕರು ಈ ವಿಷಯಗಳನ್ನೆಲ್ಲಾ ಮೊದಲೇ ಹೇಳಿಕೊಂಡಿರುವುದರಿಂದ ಅದನ್ನು ಫೋನಿಗೆ ಅಳವಡಿಸಿಕೊಳ್ಳದೆಯೂ ಇರಬಹುದು. ಆದರೆ ಸಾಮಾನ್ಯ ಬಳಕೆಯ ಇ–ಮೇಲ್ ಸೌಲಭ್ಯ, ಸೋಷಿಯಲ್ ನೆಟ್ ವರ್ಕಿಂಗ್ ಸವ­ಲತ್ತು ಅಷ್ಟೇಕೆ ಆ್ಯಂಗ್ರಿ ಬರ್ಡ್‌ನಂಥ ಜನಪ್ರಿಯ ಆಟದ ಆ್ಯಪ್‌ಗಳೂ ಕೂಡಾ ನಿಮ್ಮ ಫೋನ್ ಬುಕ್ ಮತ್ತು ನಿಮ್ಮ ಜಿಪಿಎಸ್ ಸವಲತ್ತಿಗೆ ಅನು­ಮತಿ­ಯನ್ನು ಕೋರುತ್ತವೆ. ಈ ಮಾಹಿತಿಯನ್ನು ಅವು ಏನು ಮಾಡುತ್ತವೆ ಎಂಬುದರ ಬಗ್ಗೆ ಯಾವತ್ತಾದರೂ ನಾವು ಆಲೋಚಿಸಿದ್ದೇವೆಯೇ?

ಸೆಂಟ್ರಲ್ ಮಾನಿಟರಿಂಗ್ ಸಿಸ್ಟಂ ಅಥವಾ ಸಿಎಂಎಸ್ ಹಾಗೆಯೇ ‘ನೇತ್ರ’ದಂಥ ಸರ್ಕಾರಿ ಯೋಜನೆಗಳು ಈಗಾಗಲೇ ನೀವು ಯಾರಿಗೆ ಎಸ್‌ಎಂಎಸ್ ಕಳುಹಿಸುತ್ತೀರಿ, ಇಂಟರ್‌ನೆಟ್‌­ನಲ್ಲಿ ಏನನ್ನು ನೋಡುತ್ತೀರಿ, ಯಾರೊಂದಿಗೆ ಸಂಪ­ರ್ಕ­ದಲ್ಲಿದ್ದೀರಿ ಮುಂತಾದ ಮಾಹಿತಿಗಳನ್ನು ಈಗಾಗಲೇ ಸಂಗ್ರಹಿಸುತ್ತಿವೆ. ಈ ಮಾಹಿತಿಯನ್ನು ಸರ್ಕಾರ ಸಂಗ್ರಹಿಸುತ್ತಿರುವುದರಿಂದ ನಾಳೆ ಏನಾ­ದರೂ ದುರ್ಬಳಕೆಯಾದರೆ ಕನಿಷ್ಠ ನ್ಯಾಯಾಲ­ಯಕ್ಕೆ ಹೋಗಬಹುದು. ಅದರ ವಿರುದ್ಧ ಪ್ರತಿಭಟಿ­ಸಲು ನೂರೆಂಟು ಮಾರ್ಗಗಳಿವೆ. ಜೊತೆಗೆ ಈಗಾ­ಗಲೇ ಈ ಕುರಿತಂತೆ ಸಾಕಷ್ಟು ಚರ್ಚೆಗಳೂ ನಡೆದಿ­ರು­ವುದರಿಂದ ಸರ್ಕಾರೀ ಸಂಸ್ಥೆಗಳು ಇದನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಗಳು ಸಾಪೇಕ್ಷವಾಗಿ ಕಡಿಮೆ.

ಇ–ಮೇಲ್ ಸೇವೆ ಒದಗಿಸುವ, ಸೋಷಿಯಲ್ ನೆಟ್ ವರ್ಕಿಂಗ್ ಸೇವೆ ನೀಡುವ, ಆಟಗಳ ತಂತ್ರಾಂಶ ತಯಾರಿಸುವವರೂ ಸಂಗ್ರಹಿಸುವ ಖಾಸಗಿ ಮಾಹಿತಿಗೆ ಏನು ಭದ್ರತೆ? ಈ ಪ್ರಶ್ನೆ­ಯನ್ನು ಈಗಾಗಲೇ ಅನೇಕ ಬಾರಿ ಕೇಳಲಾಗಿದೆ. ಇದಕ್ಕೆ ಉತ್ತರವಾಗಿ ಎಲ್ಲಾ ಕಂಪೆನಿಗಳೂ ತಮ್ಮ ಪ್ರೈವಸಿ ಪಾಲಿಸಿಯನ್ನೂ ತಮ್ಮ ಅಬಾಧ್ಯತಾ ಷರತ್ತು­ಗಳನ್ನೂ ತೋರಿಸುತ್ತವೆ. ಇವುಗಳು ಕೊನೆಗೂ ಹೇಳುವುದನ್ನೇನು? ಈ ಪ್ರಶ್ನೆಗೆ ಸರಳ­ವಾಗಿ ಮತ್ತು ಸಂಕ್ಷಿಪ್ತವಾಗಿ ಉತ್ತರಿಸಬಹು­ದಾ­ದರೆ ‘ಈ ನಿರ್ದಿಷ್ಟ ಸೇವೆಯ ಬಳಕೆದಾರನಾದ ನಾನು ನನ್ನ ಎಲ್ಲಾ ಮಾಹಿತಿಗಳನ್ನೂ ಸ್ವಇಚ್ಛೆ­ಯಿಂದ ಉಚಿತವಾಗಿ ಸೇವಾದಾತರಿಗೆ ನೀಡಿ­ದ್ದೇನೆ’ ಎಂದು ನಾವು ಹೇಳುತ್ತಿದ್ದೇವೆಂದು ಆ ಕಂಪೆನಿಗಳು ಹೇಳುತ್ತಿವೆ.

ಇದು ಖಾಸಗಿ ಮಾಹಿತಿಯ ರಕ್ಷಣೆಗೆ ಸಂಬಂಧಿ­ಸಿದ ಕಾನೂನಿನ ಆಯಾಮ, ಇದರ ತಾಂತ್ರಿಕ ಆಯಾಮ ಮತ್ತೂ ಭೀಕರವಾಗಿದೆ. ಸ್ಮಾರ್ಟ್ ಫೋನ್ ಬಳಕೆದಾರರು ಸರಾಸರಿ 26 ಆ್ಯಪ್‌­ಗಳನ್ನು ಅಳವಡಿಸಿಕೊಂಡಿರುತ್ತಾರೆ. ಇವುಗಳೆ­ಲ್ಲವೂ ಒಂದಲ್ಲಾ ಒಂದು ರೀತಿಯಲ್ಲಿ ನಿಮ್ಮ ಖಾಸಗಿ ಮಾಹಿತಿಗೆ ಕನ್ನ ಹಾಕುವವರಿಗೆ ಅನು­ಕೂಲ­ಕರವಾಗುವಂಥ ಭದ್ರತಾ ಲೋಪಗಳನ್ನು ಹೊಂದಿವೆ­ಯಂತೆ. ಕಳೆದ ವರ್ಷದ ಕೊನೆಯಲ್ಲಿ ಎಚ್‌ಪಿ ಸಂಸ್ಥೆ ಬಿಡುಗಡೆ ಮಾಡಿದ ಸಮೀಕ್ಷಾ ಫಲಿ­ತಾಂಶಗಳು ಈ ವಿವರಗಳನ್ನು ಒದಗಿಸುತ್ತಿವೆ. ಈ ಸಮೀಕ್ಷೆ ಬಿಸಿನೆಸ್ ಆ್ಯಪ್‌ಗಳು ಎಂದು ಗುರು­ತಿಸ­ಲಾಗುವ ನಿರ್ದಿಷ್ಟ ಬಳಕೆದಾರ ವರ್ಗ­ದೊಳಗಷ್ಟೇ ಬಳಕೆಯಲ್ಲಿರುವ ಆ್ಯಪ್‌ಗಳನ್ನು ದೃಷ್ಟಿಯಲ್ಲಿಟ್ಟುಕೊಂಡಿತ್ತು. ಆದರೆ ಈ ಸ್ಥಿತಿ ಸಾಮಾನ್ಯ ಬಳಕೆದಾರ ಆ್ಯಪ್‌ಗಳ ಕ್ಷೇತ್ರದ್ದೂ ಹೌದು ಎಂದು ತಜ್ಞರು ಅಭಿಪ್ರಾಯ ಪಡು­ತ್ತಾರೆ. ಈ ಬಿಸಿನೆಸ್ ಆ್ಯಪ್‌ಗಳು ಭದ್ರತೆಯ ವಿಚಾ­ರ­­ದಲ್ಲಿ ಸಾಮಾನ್ಯ ಆ್ಯಪ್‌ಗಳಿಗಿಂತ ಹೆಚ್ಚು ಬಲ­ವಾಗಿ­ರಬೇಕಾಗುತ್ತದೆ. ಇಲ್ಲಿರುವ ಮಾಹಿತಿ ಅವು­ಗಳನ್ನು ಬಳಸುವ ಸಂಸ್ಥೆಗಳಿಗೆ ಭಾರೀ ಪ್ರಮಾಣದ ನಷ್ಟವನ್ನೇ ಉಂಟು ಮಾಡಬಹುದಾದಂಥವು. ಇವುಗಳೇ ದುರ್ಬಲವಾಗಿವೆ ಎಂದರೆ ಸಾಮಾನ್ಯ ಬಳಕೆಯ ಆ್ಯಪ್‌ಗಳ ಸ್ಥಿತಿ ಹೇಗಿರಬಹುದು?

ಈ ಸ್ಥಿತಿಗೆ ಏನು ಕಾರಣ ಎಂಬುದನ್ನೂ ಎಚ್‌ಪಿಯ ಸಮೀಕ್ಷೆ ತಿಳಿಸುತ್ತಿದೆ. ಭದ್ರತಾ ಲೋಪ­ಗಳ ಹಿಂದೆ ಇರುವುದು ಆ್ಯಪ್ ಅಭಿವೃದ್ಧಿ ಪಡಿ­ಸುವ ತಂತ್ರಜ್ಞರ ಸೋಮಾರಿತನವಂತೆ. ಏನೂ ಆಗುವುದಿಲ್ಲ, ಮುಂದೆ ನೋಡೋಣ ಎಂಬಂಥ ನಿಲುವುಗಳು. ಭಾರೀ ಪ್ರಮಾಣದಲ್ಲಿ ವಿಸ್ತಾರ­ಗೊಳ್ಳುತ್ತಾ ಹೋಗುತ್ತಿರುವ ಆ್ಯಪ್ ಮಾರು­­ಕಟ್ಟೆಗೆ ಉತ್ಪನ್ನಗಳನ್ನು ಪೂರೈಸುವ ಉತ್ಸಾಹ­ದಲ್ಲಿ ತಂತ್ರಜ್ಞರು ಭದ್ರತೆಯನ್ನು ಬದಗಿ­ರಿ­ಸಿದ್ದಾರಷ್ಟೆ. ಇದರ ಬಲಿಪಶು­ವಾಗ­ಬೇಕಿರು­ವುದು ಗ್ರಾಹಕರು. 

ಇಂಥದ್ದೊಂದು ಸ್ಥಿತಿಯಲ್ಲಿ ಮಾಹಿತಿಯನ್ನು ಹೇಗೆ ಭದ್ರವಾಗಿಟ್ಟುಕೊಳ್ಳುವುದು ಎಂಬ ಪ್ರಶ್ನೆ ಕೇಳಿ­ಕೊಂಡರೆ ದೊರೆಯುವ ಉತ್ತರ ಒಂದೇ ‘ಸ್ಮಾರ್ಟ್ ಫೋನ್ ಬಳಸಬೇಡಿ!’. ಇದು ಕಾರ್ಯ­ರೂಪಕ್ಕೆ ತರಲಾಗದ ಸಲಹೆ. ಸರ್ಕಾರ ನಮ್ಮ ರಕ್ಷಣೆಗೆ ಬರುತ್ತದೆ ಎಂಬ ನಿರೀಕ್ಷೆಯನ್ನೂ ಇಟ್ಟು­ಕೊಳ್ಳಲು ಸಾಧ್ಯವಿಲ್ಲ. ಈಗಿನ ಸರ್ಕಾರ ಏನನ್ನೂ ಮಾಡಿಲ್ಲ, ಮುಂದಿನ ಸರ್ಕಾರ ಮಾಡುತ್ತದೆಂದು ನಿರೀಕ್ಷಿಸೋಣವೆಂದರೆ ಅಧಿಕಾರಕ್ಕೇರಲು ಸಮ­ರ್ಥ­­­ವಾ­ಗಿರುವ ಯಾವ ರಾಜಕೀಯ ಪಕ್ಷದ ಪ್ರಣಾ­ಳಿಕೆಯೂ ಬಳಕೆದಾರನ ಖಾಸಗಿ ಮಾಹಿತಿ ಸಂರಕ್ಷಣೆಯ ಕುರಿತಂತೆ ಮಾತನಾಡಿಲ್ಲ. ಇದೇಕೆ ಹೀಗೆ ಎಂಬ ಪ್ರಶ್ನೆಗೆ ಎರಡು ಉತ್ತರಗಳಿವೆ. ಮೊದಲನೆಯದ್ದು ಮಾಹಿತಿ ತಂತ್ರಜ್ಞಾನದ ಸಾಧ್ಯತೆಗಳ ಕುರಿತಂತೆ ನಮ್ಮ ರಾಜಕಾರಣಿಗಳಿಗೆ ಇರುವ ಅರಿವು ಪ್ರಾಥಮಿಕ ಮಟ್ಟದ್ದು. ಹಾಗೆಯೇ ಅದರ ಸಾಮಾನ್ಯ ಬಳಕೆದಾರರೂ ಈ ಮಟ್ಟ­ವ­ನ್ನು ಮೀರಿ ಬೆಳೆದಿಲ್ಲ. ಈ ಸ್ಥಿತಿಯನ್ನು ಲಾಭ­ಕೋರ ಕಂಪೆನಿಗಳು ತಮ್ಮ ಲಾಭಕ್ಕಾಗಿ ಬಳ­ಸಿ­ಕೊಳ್ಳುತ್ತಿವೆ. ಎರಡನೆಯದ್ದು ಆಡಳಿತ ನಡೆ­ಸು­ವುದಕ್ಕೆ ಉತ್ಸಾಹಿಗಳಾಗಿರುವವರಿಗೆ ಇದೆಲ್ಲವೂ ಗೊ­ತ್ತಿದೆ. ಆದರೆ ಅವರು ತಮ್ಮ ಸದ್ಯದ ಲಾಭ­ಕ್ಕಾಗಿ ಜಾಣ ಕುರುಡು ಮತ್ತು ಕಿವುಡನ್ನು ನಟಿಸುತ್ತಿದ್ದಾರೆ.

ಈ ಎರಡೂ ಸಂದರ್ಭಗಳನ್ನು ನಿರ್ವಹಿಸು­ವು­ದಕ್ಕೆ ಇರುವ ಏಕೈಕ ಪರಿಹಾರ ಗ್ರಾಹಕರು ಜಾಗೃ­ತ­ರಾಗುವುದು. ಈಗಾಗಲೇ ಇರುವ ಗ್ರಾಹಕ ಹಕ್ಕು ಕಾನೂನುಗಳನ್ನು ಬಳಸಿಕೊಂಡು ಖಾಸಗಿ ಮಾಹಿತಿಯ ಸುರಕ್ಷತೆಯನ್ನು ಖಾತರಿ ಪಡಿಸಲು ಬೇಕಿರುವ ಕ್ರಮಗಳಿಗಾಗಿ ಸಂಘಟಿತ ಪ್ರಯತ್ನಗ­ಳಾ­ಗ­ಬೇಕು. ಎಂಬತ್ತರ ದಶಕದ ಮಧ್ಯಭಾಗದಲ್ಲಿ ಆರಂಭಗೊಂಡಿದ್ದ ಗ್ರಾಹಕ ಚಳವಳಿಗೆ ಹೊಸ ತಿರುವು ಕೊಡುವ ಕಾಲ ಬಂದಿದೆ ಎಂಬುದನ್ನು ಗ್ರಾಹಕರ ಹಕ್ಕುಗಳ ಸಂಘಟನೆಗಳು ಅರಿಯ­ಬೇಕಾ­ಗಿದೆ.

ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಈ ಬಗೆಯ ಹೋರಾಟಗಳು ಫಲ ಕೊಟ್ಟಿವೆ. ಭಾರತದಲ್ಲಿ ಇಂಥ ಹೋರಾಟಗಳು ಕೆಲವೇ ಕೆಲವು ಸರ್ಕಾರೇ­ತರ ಸಂಘಟನೆಗಳಿಗೆ ಸೀಮಿತವಾಗಿ ಉಳಿದಿದೆ. ತಂತ್ರಜ್ಞಾನ ಹರಡುತ್ತಿರುವ ವೇಗದಲ್ಲಿ ಈ ಚಳ­ವಳಿ ಬೆಳೆಯುತ್ತಿಲ್ಲ. ಹಳ್ಳಿಗಳಿಗೆ ಮಾಹಿತಿ ತಂತ್ರ­ಜ್ಞಾನ ಸಾಗುತ್ತಿರುವ ಹೊತ್ತಿನಲ್ಲಿ ಅದು ಸೃಷ್ಟಿಸ­ಬಹು­ದಾದ ಬಿಕ್ಕಟ್ಟುಗಳ ಕುರಿತ ಅರಿವನ್ನೂ ಹಳ್ಳಿ­ಗಳಿಗೆ ತಲುಪಿಸಬೇಕಾದ ಗುರುತರ ಹೊಣೆ ಈ ತಂತ್ರಜ್ಞಾನದ ಪರಿಣಿತ ಬಳಕೆದಾರರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT