ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲು ರಂಗಶಾಲೆಯ ಬಣ್ಣ ಬಣ್ಣದ ಪಾತ್ರಗಳು

Last Updated 12 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕರುನಾಡಿನ ಕಾಲು ಭಾಗ ನೆಲ, ಮೊದಲ ಮಳೆಯಿಂದ ತೇವಗೊಂಡಿದೆ. ಧಗೆಯಲ್ಲಿ ಬೇಯುತ್ತಿದ್ದವರಿಗೆ ಈ ಮಳೆ ತರುತ್ತಿರುವ ಆಹ್ಲಾದ ಮತ್ತು ವಿಸ್ಮಯ ನಿತ್ಯನೂತನ. ಪ್ರತಿ ವರ್ಷ ಇದು ಇಳೆಗೆ ಇಳಿದಾಗಲೆಲ್ಲಾ ಹೊಚ್ಚ ಹೊಸ ಅನುಭೂತಿ. ಅವ್ವ ವಸುಧೆ ವರ್ಷದ ಮೊದಲ ಜಳಕದಲ್ಲಿ ಮಿಂದು ಹಸಿರು ಸೀರೆ ರವಿಕೆ ಉಡಲು ರೆಡಿ. ಬಿಸಿಲನ್ನು ಬೈಯ್ಯುತ್ತಿದ್ದ ಬಾಯ್ಗಳು, ಜಡಿಮಳೆಗೆ ಶಾಪ ಹಾಕಲು ಅಣಿಯಾಗುತ್ತಿವೆ. ಆಗಲೇ ಹೊಂಗೆ,- ಮಾವುಗಳು ಪೈಪೋಟಿಯಿಂದ ಚಿಗುರಿ ಉಗಾದಿಯನ್ನು ಬೀಳ್ಕೊಟ್ಟಿವೆ. ಆದರೆ ಕೋಗಿಲೆಗಳು ಬಚ್ಚಿಟ್ಟುಕೊಂಡಂತೆ ಕಾಣಿಸುತ್ತಿದೆ. ಗುಬ್ಬಚ್ಚಿಗಳೂ ನಾಪತ್ತೆ. ಕವಿಯೂ- ಸಹೃದಯನೂ ಒಟ್ಟಿಗೇ ಕಣ್ಮರೆಯಾದಂತಿದೆ. ಕಾರಣ ಸರಳ. ಚುನಾವಣೆಯ ಕಾಗೆಗಳ ಕರ್ಕಶಕ್ಕೆ ಬೆಚ್ಚಿ ಎಲ್ಲರೂ ಪೇರಿ ಕಿತ್ತಿದ್ದಾರೆ.

  ‘ನಿಮ್ ಕೇರೀಲಿ ಏನ್ ನಡೀತಿದೆ? ಓಟು ಕೇಳೋರು ಬಂದಿದ್ರಾ? ಒಂದ್ ಓಟಿಗೆ ಏನ್ ರೇಟು ಕೊಡ್ತಿದಾರೆ? ನಿಮ್ಮನೇಲಿ ಎಷ್ಟು ಓಟಿವೆ?’ ಎಂದು ನಮ್ಮ ಮನೆಯ ಕಸ ತೆಗೆಯಲು ಬಿಬಿಎಂಪಿ ವತಿಯಿಂದ ಬರುವ ಮುನಿಯಮ್ಮನನ್ನು ಸಂಕೋಚದಿಂದ ಕೇಳಿದೆ.

ಅವಳು ಹೇಳಿದ ಮಾತು ನನ್ನ ಮನಮುಟ್ಟಿತು:
‘ನಮ್ಮ ಮನೇಯವ್ರು ಯಾರೂ, ಯಾರತ್ರಾನೂ ಒಂದ್ ಪೈಸೆ ತಗಳ್ಳಲ್ಲ. ತಗಂಡ್ರೆ ದೇಸ ಉಳಿತದಾ? ಇವತ್ತು ನಾವು ತಗಳ್ಳದ್ರಿಂದ ನಮ್ಮ ಬಂಗ ಅರೀತದಾ? ನಾಳೆ ನಾವು ಮತ್ತೆ ಬೀದೀ ಗುಡುಸ್ಲೇಬೇಕಲ್ವಾ? ಕಸ ಎತ್ಲೇಬೇಕಲ್ವಾ? ಹಂಗೆಲ್ಲಾ ದುಡ್ ತಗಂಡ್ ಓಟ್ ಆಕ್ಬಾರ್ದು ಸಮೀ’  

ಕಡುಬಡವರು ಅಂದರೆ ಸ್ವಾಭಿಮಾನಶೂನ್ಯರು; ಅವರನ್ನು ಕೊಂಡುಕೊಳ್ಳಬಹುದು ಎಂಬ ಒಂದು ತಪ್ಪುಗ್ರಹಿಕೆ ಇದೆ. ಆದರೆ ಮುನಿಯಮ್ಮನಂಥವರೂ ಇದ್ದಾರೆ. ಅವರ ಹೆಸರಿನಲ್ಲಿ ಅದಾರೋ ಮಧ್ಯವರ್ತಿ ಗೋರಿಕೊಳ್ಳುತ್ತಾನೆ. ಅನೇಕರಿಗೆ ಚುನಾವಣೆ ಎಂದರೆ ವೃತ್ತಿ. ಬಾಚಿಕೊಳ್ಳುವ, ಬದುಕಿಕೊಳ್ಳುವ ವೃತ್ತಿ. ಮುನಿಯಮ್ಮ ತನ್ನ ಇಡೀ ಜೀವಿತದಲ್ಲಿ ದುಡ್ಡು ತೆಗೊಂಡು ಯಾರಿಗೂ ಓಟು ಹಾಕಿಲ್ಲವಂತೆ. ಅವಳ ಬಗ್ಗೆ ಹೆಮ್ಮೆ ಅನಿಸಿತು.

  ಅವಳು ಚುನಾವಣಾ ಆಯೋಗಕ್ಕೆ ದೂರು ಕೊಟ್ಟರೂ ಕೊಡಲಿ ಎಂದು ಧೈರ್ಯವಹಿಸಿ ಕೇಳಿದೆ: ‘ನೀನು ಯಾರಿಗೆ ವೋಟು ಹಾಕ್ತಿ?’ ಶ್ರಮಿಕಳೂ, ಪ್ರಾಮಾಣಿಕಳೂ ಆದ ಅವಳ ಉತ್ತರದ ಬಗ್ಗೆ ನನಗೆ ಭಾರೀ ಕುತೂಹಲವಿತ್ತು. ಆದರೆ ಅವಳ ಉತ್ತರ ನನ್ನ ಕುತೂಹಲವನ್ನು ಠುಸ್ಸೆನಿಸಿತು:

‘ದೇವುಸ್ತಾನಕ್ಕೋದಂಗೆ ಬಯಬಕ್ತೀಯಿಂದ ವೋಯ್ತೀವಿ ಸಮಿ. ಅಲ್ಲೋದಾಗ ದೇವ್ರು ಏನ್ ಗ್ಯಾನಾ ಕೊಡ್ತಾನೆ ಅವರಿಗೆ ಆಕಿ ಬತ್ತೀವಿ ಸಮಿ. ಜಾಸ್ತಿ ತಲೆಕೆಡ್ಸಿಕಳ್ಳದಿಲ್ಲ’

ಪ್ರಜಾಪ್ರಭುತ್ವದ ಬಗ್ಗೆ ವಿಪರೀತ ತಲೆ ಕೆಡಿಸಿಕೊಳ್ಳುವವರು ಮುನಿಯಮ್ಮನಂಥವರ ಸರಳ ಆದರೆ ಜಾಣ ಮಾತಿನ ಬಗ್ಗೆ ಯೋಚಿಸಬೇಕಾಗಿದೆ. ಆದರೆ ಬಡವರೆಲ್ಲ ಮುನಿಯಮ್ಮಗಳೇ ಅಲ್ಲ. ಎಸ್ಸೆಲ್ವೀ  ಹೋಟೆಲ್ಲಿನ ಸಪ್ಲೈಯರ್ ಒಬ್ಬನಿದ್ದಾನೆ. ಕನ್ನಡ ಬಾರದ ಉತ್ತರ ಪ್ರದೇಶದ ಹುಡುಗ. ಹೆಸರು ಕಿಶನ್ ಝಾ. ಅವನ ಸಮಸ್ಯೆಯೇ ಬೇರೆ. ಬಿಜೆಪಿಯವರು ಒಂದು ಸಾವಿರ ಕೊಡ್ತೀವಿ ಅಂತ ಹೇಳಿ ರಿಸರ್ವ್ ಮಾಡಿಸಿ ಹೋದವರು ಪತ್ತೆಯೇ ಇಲ್ಲವಂತೆ. ಮುಂಗಡವನ್ನೂ ಕೊಟ್ಟಿಲ್ಲವಂತೆ. ಕಾಂಗ್ರೆಸ್‌ನವರಾದರೂ ಬಂದು ಹೆಚ್ಚಿನ ರೇಟು ಕೊಟ್ಟರೆ ಅವರಿಗಾದರೂ ಕೊಡಬಹುದು. ತನ್ನ ಓಟಿಗೆ ಎಷ್ಟು ರೇಟಿದೆ? ಅನ್ನುವುದೇ ಅವನ ಗೊಂದಲ.

ಕೊನೆಯ ಕ್ಷಣದವರೆಗೂ ಬರದಿದ್ದರೇನು ಗತಿ? ಎಂಬುದೇ ಅವನ ಆತಂಕ. ಇಂಥ ಜನಸಾಮಾನ್ಯರ ಮತಗಳೇ ನಿರ್ಣಾಯಕ ಪಾತ್ರ ವಹಿಸಬಹುದು. ಮುನಿಯಮ್ಮ ಹಣ ಪಡೆಯದೆ, ದೇವರನ್ನು ನಂಬಿ ಹಾಕುವ ಓಟು; ಕಿಶನ್ ಹಣ ಪಡೆದು ಹಾಕುವ ಓಟು! ಸಮಾನ ಅಂಶವೆಂದರೆ ಇಬ್ಬರೂ ಮತಗಟ್ಟೆಗೆ ಹೋಗಿ ಮತ ಚಲಾಯಿಸಿ ಬರುತ್ತಾರೆ. ಒಂದು ದೈವ ಪ್ರೇರಣೆಯ ಮತ. ಇನ್ನೊಂದು ಧನಪ್ರೇರಣೆಯ ಮತ. ಗೆದ್ದವನ ಠೇಂಕಾರದ ಹಿಂದೆ ಅದೆಷ್ಟು ತರಾವರಿ ಮತಗಳು ಇರುತ್ತವೆ ! ಹಣದ ಮತ, ಜಾತಿಯ ಮತ, ಹೆಂಡದ ಮತ, ಆಸ್ತಿಕ ಮತ, ನಾಸ್ತಿಕ ಮತ, ಆಮಿಷಗಳ ಮತ, ಆಕಸ್ಮಿಕ ಮತ, ನಿರ್ಲಕ್ಷ್ಯದ ಮತ, ನಕಲಿ ಮತ, ಗೊಂದಲದ ಮತ. ಎಲ್ಲಕ್ಕಿಂತ ಕುತೂಹಲಕರ, ಕಡೆಗಳಿಗೆಯಲ್ಲಿ ಮುನಿಯಮ್ಮನಿಗೆ ಗ್ಯಾನ ಕೊಡುವ ದೇವರ ಮತ. ಈಗ ಪ್ರಜಾಪ್ರಭುತ್ವವನ್ನು ಕಾಪಾಡುವ ಹೊಣೆ, ಕೊಂಚ ದೇವರ ಮೇಲೂ ಇದೆ.
*
ಸಮಾಜವಾದಿ ಹಿನ್ನೆಲೆಯ, ಅಷ್ಟೇನೂ ಕೆಟ್ಟವರಲ್ಲದ, ಈಗ ಪ್ರಮುಖ ಅಧಿಕಾರದಲ್ಲಿರುವ ವೃತ್ತಿ ರಾಜಕಾರಣಿಯೊಬ್ಬರು ಖಾಸಗಿ ಕೂಟ ಒಂದರಲ್ಲಿ ಮಾತನಾಡುತ್ತಿದ್ದರು:  ‘ನಮ್ಮಂಥವರಿಗೆ ವಿಪರೀತ ದಿಗಿಲು, ದಿಗ್ಭ್ರಮೆಯಾಗುತ್ತಿದೆ. ಚುನಾವಣೆಗಳು ವಿಪರೀತ ಹಣ ಬೇಡುತ್ತಿವೆ. ಎಲ್ಲಿಂದ ತರುವುದು? ಪ್ರತಿಯೊಬ್ಬರೂ ನಿರ್ಲಜ್ಜವಾಗಿ ಕೈ ನೋಡುತ್ತಾರೆ. ನಾವು ರಾಜಕಾರಣಿಗಳು ರುಚಿ ಹತ್ತಿಸಿದ್ದೇವೆ.

ಕೊಳೆಗೇರಿ ಜನರೇ ವಾಸಿ. ಬಡಾವಣೆಗಳಲ್ಲಿ ಬದುಕುವ ವಿದ್ಯಾವಂತ, ನಾಗರಿಕ ಸಮಾಜ ಹೇಗಾಗಿದೆ ಎಂದರೆ ಮನೆಯೊಳಗಿರುವ ಅತ್ತೆ, ಕೆಲಸಕ್ಕೆ ಹೋಗಿರುವ ಮಗ-, ಸೊಸೆಯ ಎರಡು ಓಟಿಗೆ ಎರಡು ಸಾವಿರ ಹೇಳುತ್ತಾಳೆ. ಚುನಾವಣೆಯಿಂದ ಚುನಾವಣೆಗೆ ಓಟಿನ ರೇಟನ್ನು ತಾವೇ ಹೆಚ್ಚಿಸಿಕೊಳ್ಳುತ್ತಾರೆ. ನಮ್ಮಂಥ ರಾಜಕಾರಣಿಗಳು ಹಣವನ್ನು ಎಲ್ಲಿಂದ ತರುವುದು? ವಿದ್ಯಾವಂತರೇ ಹೀಗೆ ಪೀಡಿಸಲು ಶುರು ಮಾಡಿದ್ದಾರೆ ’

ಅವರ ಅಸಹಾಯಕತೆಯನ್ನು ಅನುಕಂಪದಿಂದ ನೋಡಬೇಕಿಲ್ಲ. ಅದು ರಾಜಕಾರಣಿಗಳೇ ತಂದಿಟ್ಟುಕೊಂಡ ಪರಿಸ್ಥಿತಿ. ಮತದಾರ ಕೂಡ ಭ್ರಷ್ಟನಾಗಿದ್ದಾನೆ ಎಂಬುದು ನಾಚಿಕೆಗೇಡಿನ ಸಂಗತಿ. ನಮ್ಮ ಮುನಿಯಮ್ಮನಂಥವರಿಗಿರುವ ಸ್ವಾಭಿಮಾನ ಅನೇಕ ವಿದ್ಯಾವಂತರಿಗಿಲ್ಲ. ಅನೇಕರಿಗೆ ಮತಗಟ್ಟೆಗೆ ಹೋಗಲೂ ಸೋಮಾರಿತನ. ಮತದಾನದ ದಿನವನ್ನು ವೀಕೆಂಡ್ ಆಲಸ್ಯಕ್ಕೆ, ಪಿಕ್‌ನಿಕ್‌ಗೆ ಬಳಸುವವರೂ ಇದ್ದಾರೆ. ಯಾರಿಗೆ ಓಟು ಕೊಟ್ಟರೂ ದೇಶ ಸುಧಾರಿಸುವುದಿಲ್ಲ ಎನ್ನುವುದು ಸಿನಿಕತನ. ಕಡಿಮೆ ಅಯೋಗ್ಯರನ್ನು ಹುಡುಕಿ ಮತ ಚಲಾಯಿಸುವುದು ಜಾಣತನ. ತಮ್ಮ ಜೀವಿತವಿಡೀ ಪೂರ್ಣಯೋಗ್ಯರಿಗೆ ಮತ ಹಾಕುವ ಅವಕಾಶವೇ ಇಲ್ಲದಿರುವುದು ನಮ್ಮ ವ್ಯವಸ್ಥೆಯ ಊನ. ಈಗ ಅಭ್ಯರ್ಥಿಗಳಲ್ಲಿ ಎರಡೇ ಗುಂಪು : ಕೆಟ್ಟು ಗಬ್ಬೆದ್ದು ಹೋಗಿರುವವರು, ಇನ್ನೂ ಪೂರ್ತಿ ಕೆಡದೆ ಸಂಭಾವಿತರಂತಿದ್ದು, ಕೆಡಲು ಅಣಿಯಾಗಿರುವವರು. ಯಾರು ಹಿತವರು ನಿಮಗೆ? ನೀಚರೋ? ಪರಮನೀಚರೋ?

ಮತ ಯಾಚಿಸಲು ಬಂದ ಬಿಜೆಪಿ ಅಭ್ಯರ್ಥಿಯನ್ನು ಕೇಳಿದೆ. ನಿಮಗೇ ಓಟು ಕೊಡಬೇಕು ಎಂಬುದಕ್ಕೆ ಎರಡು ಒಳ್ಳೆಯ ಕಾರಣ ಕೊಡಿ ಎಂದು. ಅವರೂ ಎರಡೇ ಸಾಲಿನಲ್ಲಿ ಹೇಳಿದರು. ಬೆಂಗಳೂರಿನಲ್ಲಿ ಆಗಿರುವ ಎಲ್ಲಾ ಸಾಧನೆಗಳು ನಮ್ಮಿಂದ. ಆಗದೆ ಉಳಿದಿರುವ ಬಾಕಿ ಕೆಲಸಗಳಿಗೆ ಕಾಂಗ್ರೆಸ್ ಕಾರಣ. ಈ ಸಲ ನಾನು ಗೆದ್ದರೆ ಎಲ್ಲ ಮಾಡಿ ಮುಗಿಸುತ್ತೇನೆ. ಅನಂತರ ಕಾಂಗ್ರೆಸ್ ಅಭ್ಯರ್ಥಿ ಬಂದರು. ನನ್ನದು ಅದೇ ಪ್ರಶ್ನೆಗಳು. ಅವರದೂ ಅದೇ ಉತ್ತರ. ಇದುವರೆಗೆ ಆಗಿರುವ ಕೆಲಸಗಳಿಗೆ ಕಾಂಗ್ರೆಸ್ ಕಾರಣ. ಆಗದೆ ಉಳಿದಿರುವುದಕ್ಕೆ ಕಾರಣ ಬಿಜೆಪಿಯ ಅಡ್ಡಗಾಲು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ಸರಿಪಡಿಸುತ್ತದೆ. 

ಮೆಟ್ರೋ, ವಿಮಾನ ನಿಲ್ದಾಣ, ಫ್ಲೈ ಓವರ್‌ಗಳು ನಮ್ಮ ಸರ್ಕಾರದ ಸಾಧನೆಗಳು ಎಂದು ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ಗಳು ಹೇಳುತ್ತವೆ. ವರ್ಣಮಯ ಪುಸ್ತಿಕೆಗಳನ್ನೂ ಕೊಡುತ್ತಾರೆ. ಸದ್ಯಕ್ಕೆ ಸಾಧನೆಗಳನ್ನು ಹೇಳಿಕೊಳ್ಳದೆ ಓಟು ಕೇಳುತ್ತಿರುವ ಪಕ್ಷ ಎಎಪಿ ಮಾತ್ರ. ಅವರು ಏಸುವಿನಂತೆ. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ಒಡ್ಡುವ, ಹೊಡೆದವನ ಮನೆ ಬಾಗಿಲಿಗೇ ಹೋಗಿ ಕುಶಲ ವಿಚಾರಿಸುವ ದಯಾಳುಗಳು. ಜನ ಎಷ್ಟು ಧೂರ್ತರಾಗಿದ್ದಾರೆಂದರೆ ಕೇಜ್ರಿವಾಲರನ್ನು ಮನೆಗೆ ಕರೆಸಿಕೊಳ್ಳುವ ಸಲುವಾಗಿ ಆತನಿಗೆ ಕೆನ್ನೆಗೆ ಹೊಡೆಯುತ್ತಾ ಹೋಗಬಲ್ಲರು. ಅದಿರಲಿ, ಯಾವ ಸಾಧನೆಗಳು ಯಾರಿಗೆ ಸೇರಿದ್ದು ಎಂದು ನಿಖರವಾಗಿ ತಿಳಿಯುವ ಅವಕಾಶ ಶ್ರೀಸಾಮಾನ್ಯನಿಗಿಲ್ಲ. ಒಬ್ಬರು ಉದ್ಘಾಟನೆಯ ಚಿತ್ರ ತೋರಿಸುತ್ತಾರೆ. ಮತ್ತೊಬ್ಬರು ಹಣ ಬಿಡುಗಡೆ ಮಾಡಿದ್ದು ನಮ್ಮ ಸರ್ಕಾರ ಅನ್ನುತ್ತಾರೆ. ಇನ್ನೊಬ್ಬರು ಅಡಿಗಲ್ಲು ನಮ್ಮದು ಎನ್ನುತ್ತಾರೆ. ಮಗದೊಬ್ಬರು ನೀಲನಕ್ಷೆ ಬರೆಸಿದ್ದು ನಾವೇ ಎನ್ನುತ್ತಾರೆ.

ಮತದಾರ ಗೊಂದಲಕ್ಕೆ ಬೀಳುತ್ತಾನೆ. ಪಶ್ಚಿಮ ದೇಶಗಳಲ್ಲಿ ಜನರನ್ನು ಹೀಗೆ ಯಾಮಾರಿಸುವುದು ಕಷ್ಟ. ಕಳೆದ ಸಲದ ಅಧ್ಯಕ್ಷೀಯ ಚುನಾವಣೆ ನಡೆದಾಗ ನಾನು ಅಮೆರಿಕೆಯಲ್ಲಿದ್ದೆ. ವ್ಯಕ್ತಿನಿಂದೆಗಿಳಿಯದ, ಸಿದ್ಧಾಂತಗಳಿಗೆ ಮೀಸಲಾದ ವಾಗ್‌ಮಂಡನೆಯನ್ನು ಮಿಟ್ ರಾಮ್ನಿ ಮತ್ತು ಒಬಾಮ ಸಾರ್ವಜನಿಕರೆದುರು ಅದ್ಭುತವಾಗಿ ಮಂಡಿಸುತ್ತಿದ್ದರು. ಪ್ರಜೆಗಳಿಂದ ನೇರ ಪ್ರಶ್ನೆಗಳನ್ನು ಎದುರಿಸುತ್ತಿದ್ದರು.

ಒಬಾಮ ತನ್ನ ಮಾತುಗಳಲ್ಲಿ ಚಿಕಾಗೋ ನಗರದಲ್ಲಿ ಬಡಕುಟುಂಬಗಳು ವಾಸಿಸುತ್ತಿದ್ದ ಬಡಾವಣೆಗಳಲ್ಲಿನ ತನ್ನ ಬಾಲ್ಯ, ಹದಿಮೂರು ಸಾವಿರ ಡಾಲರ್‌ಗಳ ತನ್ನ ವಾರ್ಷಿಕ ವೇತನ, ಪಠ್ಯಪುಸ್ತಕ ಮತ್ತು ಕಂಪ್ಯೂಟರ್‌ಗಳಿಲ್ಲದ ಶಾಲೆಗಳು, ನಂತರ ಆತ ಲಾ ಓದಿದ್ದು ಹೀಗೆ ವೈಯಕ್ತಿಕ ಮತ್ತು ಸಾರ್ವಜನಿಕ ಎರಡನ್ನೂ ಆಪ್ತವಾಗಿ ಬೆರೆಸಿ, ನಡುವೆ ಅಧ್ಯಾತ್ಮ ಸೇರಿಸಿ, ಹಾಸ್ಯಪ್ರಜ್ಞೆ ಮರೆಯದೆ, ಎಲ್ಲೂ ಕಿರುಚಾಡದೆ, ಮಾತುಮಾತಿಗೆ ‘ಭಾಯಿಯೋಂ, ಬೆಹೆನೋಂ’ ಅನ್ನದೆ ಗಂಟೆಗಟ್ಟಲೆ ಸ್ವಾರಸ್ಯಕರವಾಗಿ ವಿವರಿಸುತ್ತಿದ್ದ ರೀತಿ ಪ್ರಬುದ್ಧವಾಗಿತ್ತು. ನಮ್ಮವರು ಬಾಯಿಬಿಟ್ಟರೆ ಎರಡೇ ಪಾಯಿಂಟಿನ ಪ್ರೋಗ್ರಾಮು. ಆತ್ಮಪ್ರಶಂಸೆ,  ಪರನಿಂದೆ.
*
ನಾವು ಪುಟ್ಟದೊಂದು ಅಭಿನಯ ತರಬೇತಿ ಶಾಲೆ ನಡೆಸುತ್ತಿದ್ದೇವೆ. ನನ್ನ ವಿದ್ಯಾರ್ಥಿಗಳಿಗೆ ಹೇಳಿದೆ : ನೀವು ಸದ್ಯಕ್ಕೆ ಈ ಪಠ್ಯಪುಸ್ತಕ, ಉಪನ್ಯಾಸ, ತರಬೇತಿ ಎಲ್ಲ ಪಕ್ಕಕ್ಕಿಡಿ. ಬಯಲಿಗೆ ಹೋಗಿ. ಎಲ್ಲರನ್ನೂ ತೀಕ್ಷ್ಣವಾಗಿ ಗಮನಿಸಿ. ಅಭ್ಯರ್ಥಿಗಳು, ಅವರು ಹಾಕುವ ಮುಖವಾಡ, ಹಸೀ ಸುಳ್ಳುಗಳು, ಹುಸಿ ಜೈಕಾರಗಳು, ಪಕ್ಷಾಂತರಿಗಳು, ಚೇಲಾಗಳು- ಎಲ್ಲರ ಮಾತು ವರ್ತನೆಗಳನ್ನು ಸೂಕ್ಷ್ಮವಾಗಿ ಅಭ್ಯಾಸ ಮಾಡಿ. ನೀವು ಒಳ್ಳೆಯ ನಟನಟಿಯರಾಗುವ ಸಾಧ್ಯತೆ ಇದೆ.

ಬರಹಗಾರ ಮತ್ತು ನಟ ಈ ಬಯಲು ರಂಗಶಾಲೆಯ ವಿಭಿನ್ನ ಪಾತ್ರಧಾರಿಗಳ ಮುಖವಾಡ ಮತ್ತು ಮಾತಿನಿಂದ ಗ್ರಹಿಸಬೇಕಾದ್ದು, ಗ್ರಹಿಸಿ ಅಭಿವ್ಯಕ್ತಿಸಬೇಕಾದ್ದು, ಅಭಿವ್ಯಕ್ತಿಸಿ ಸಮಾಜದೆದುರು ಮಂಡಿಸಬೇಕಾದ್ದು ಅಗತ್ಯವಿದೆ. ನೀವು ಎಲ್ಲರಂತೆ ಓಟು ಹಾಕಿ ಸುಮ್ಮನಾಗಬೇಡಿ. ಅಭಿನಯದ ಪರಮೋಚ್ಚ ಪಾಠವನ್ನು ಕಲಿಯಲು ಇದು ಸದವಕಾಶ. ನನ್ನ ಮಾತು ಬರಿಯ ಕುಚೋದ್ಯವಲ್ಲ ಎಂದುಕೊಂಡಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT