ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಡಿಗೆ ತಾಯಂದಿರ ‘ಗರ್ಭ’ ಆನಂದ್‌

Last Updated 16 ಜೂನ್ 2018, 9:22 IST
ಅಕ್ಷರ ಗಾತ್ರ

ಅಭಿವೃದ್ಧಿಯ ಮಂತ್ರ ರಾಜಕೀಯದ ಪರಿ­ಭಾಷೆಯಾಗಿರುವ ಕಾಲ ಇದು. ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಮುಖ್ಯಮಂತ್ರಿ­ಯಾ­ಗಿದ್ದಂತಹ ಗುಜರಾತ್ ರಾಜ್ಯದ ಅಭಿ­ವೃದ್ಧಿಯ ಮಾದರಿ ರಾಷ್ಟ್ರದ ಮುಂದೆ ದೊಡ್ಡ­ದಾಗಿ ಬಿಂಬಿತ­ವಾಗಿದೆ. ಗುಜರಾತ್‌ನ ಅಭಿವೃದ್ಧಿ  ಕಥಾನಕಗಳಿಗೆ ಭಿನ್ನವಾದ ವ್ಯಾಖ್ಯಾನಗಳು  ಈ ಹಿಂದಿನಿಂದಲೂ ಬಲವಾಗಿಯೇ ಇವೆ.

ಮಾಧ್ಯಮ ಮಹಿಳೆಯರ ಅನೌಪಚಾರಿಕ ಸಂಘಟನೆ ಎನ್‌ಡಬ್ಲ್ಯುಎಂಐ   (ನೆಟ್‌ವರ್ಕ್‌್ ಆಫ್ ವಿಮೆನ್ ಇನ್ ಮೀಡಿಯಾ, ಇಂಡಿಯಾ) ವಾರ್ಷಿಕ ಸಮಾವೇಶಕ್ಕಾಗಿ ಗುಜ­ರಾತ್‌ನ ಅಹಮದಾಬಾದ್‌ಗೆ  ಇತ್ತೀಚೆಗೆ ತೆರ­ಳಿದ್ದ ಸಂದರ್ಭದಲ್ಲೂ ಈ ಚಿತ್ರಣ  ಕಂಡು ಬಂತು.
ಹಿಂದಿನಿಂದಲೂ ಗುಜರಾತ್‌ನ ಆರ್ಥಿಕ ವೃದ್ಧಿ ದರ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚೇ ಇರುತ್ತಿ­ದ್ದದ್ದು ವಾಸ್ತವ. ಗುಜರಾತ್ ಎಂದಾಕ್ಷಣ ಅಮುಲ್ ಹಾಗೂ  ಕ್ಷೀರ ಕ್ರಾಂತಿ ಜನಕ ವರ್ಗೀಸ್ ಕುರಿಯನ್ ಅವರ ನೆನಪಾಗದೆ ಇರುವುದು ಅಸಾಧ್ಯ.

ಗುಜರಾತ್‌ನ ಆನಂದ್ ಪಟ್ಟಣ,  ಭಾರತದ ‘ಕ್ಷೀರ ರಾಜಧಾನಿ’ ಎಂದೇ ಹೆಸರಾ­ಗಿತ್ತು. ಈಗ ಅದೇ ಆನಂದ್, ‘ಬಾಡಿಗೆ ತಾಯಂದಿರ ಅಂತರರಾಷ್ಟ್ರೀಯ ರಾಜಧಾನಿ’ ಎನಿಸಿದೆ. ಆನಂದ್ ಎಂದರೆ ‘ಬೇಬಿ ಫಾರ್ಮ್’ ಎಂಬಂಥ ಅನ್ವರ್ಥಹೆಸರು ಪ್ರಾಪ್ತವಾಗಿದೆ. ಆನಂದ್‌ನಲ್ಲಿರುವ ಡಾ. ನಯನಾ ಪಟೇಲ್ ಅವರ ‘ಆಕಾಂಕ್ಷಾ ಇನ್ ಫರ್ಟಿಲಿಟಿ ಕ್ಲಿನಿಕ್’ ಅಮೆರಿಕ, ಬ್ರಿಟನ್ ಸೇರಿದಂತೆ ವಿವಿಧ ದೇಶಗಳ ಮಕ್ಕಳಿಲ್ಲದ ದಂಪತಿಗೆ ಯಾತ್ರಾ­ಸ್ಥಳವಾಗಿಬಿಟ್ಟಿದೆ.

ಗರ್ಭಕೋಶ ದೋಷವಿದ್ದ  ಲಂಡನ್ ಮೂಲದ ಗುಜರಾತಿ ಮಹಿಳೆಗೆ ಆಕೆಯ ತಾಯಿಯನ್ನೇ 2004ರಲ್ಲಿ ಬಾಡಿಗೆ ತಾಯಿಯಾಗಿಸಿ   ಯಶಸ್ವಿ­ಯಾ­ಗಿದ್ದರು ಡಾ.ನಯನಾ ಪಟೇಲ್. ಮಗಳ ಮಗುವನ್ನು ಎಂದರೆ ಮೊಮ್ಮಗುವನ್ನು ಅಜ್ಜಿ ಹೆತ್ತುಕೊಟ್ಟಿದ್ದು ಆಗ ದೊಡ್ಡ ಸುದ್ದಿಯಾಗಿತ್ತು. ನಂತರ ಓಪ್ರಾ ವಿನ್‌ಫ್ರೆ ಟಿವಿ ಷೋನಲ್ಲಿ ಡಾ.ನಯನಾ ಪಟೇಲ್  ಕುರಿತಾದ ಕಾರ್ಯಕ್ರಮ ಪ್ರಸಾರವಾದ ನಂತರವಂತೂ, ಗುಜರಾತ್‌ನಲ್ಲಿ ಬಾಡಿಗೆ ತಾಯ್ತನದ ಪ್ರವಾಸೋದ್ಯಮ ಮತ್ತಷ್ಟು ಗರಿಗೆದರಿಕೊಂಡಿದೆ ಪುರುಷ–ಮಹಿಳೆ ಸಂಯೋಗದಿಂದ ಸೃಷ್ಟಿ­ಕ್ರಿಯೆ ಎಂಬಂಥ ವ್ಯಾಖ್ಯಾನ ಬದಲಾಗಿರುವ ಕಾಲ ಇದು.

ವೈಜ್ಞಾನಿಕ ಪ್ರಗತಿ ಅನೇಕ ವಿಸ್ಮಯ­ಕಾರಿ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಐವಿಎಫ್‌ ವೈದ್ಯ­ಕೀಯ ತಂತ್ರಜ್ಞಾನ  ಬಳಸಿ ಬಾಡಿಗೆ ತಾಯಂದಿರ ಮೂಲಕ ಮಕ್ಕಳನ್ನು ಪಡೆಯುವುದು ಇಂದು ಮಾಮೂಲಾಗುತ್ತಿದೆ. ಗರ್ಭಕೋಶದ ಸಮಸ್ಯೆ, ವೀರ್ಯಾಣು ಸಮಸ್ಯೆ ಅಥವಾ ಮತ್ತಿತರ ವೈದ್ಯ­ಕೀಯ ಕಾರಣಗಳಿಂದ ಮಕ್ಕಳನ್ನು ಪಡೆಯ­ಲಾ­ಗದ ದಂಪತಿಗೆ ಬಾಡಿಗೆ ತಾಯ್ತನ ಎಂಬುದು ವರ­ದಾನ. ಆದರೆ ಯಾರದೋ ಅಂಡಾಣು, ವೀರ್ಯಾ­ಣುಗಳ ಮೂಲಕ  ಪ್ರಯೋಗಾಲಯ­ಗಳಲ್ಲಿ ಅಂಕುರಗೊಂಡ ಭ್ರೂಣಗಳನ್ನು ಬಾಡಿಗೆ ತಾಯಂದಿರ ಗರ್ಭಕೋಶಗಳಲ್ಲಿರಿಸಿ ಮಕ್ಕಳನ್ನು ಪಡೆಯುವ ವಿಧಾನದಲ್ಲಿ ಮಗುವಿನ ಜೈವಿಕ­ಇತಿಹಾಸ ಅರಿಯುವುದು ಸಾಧ್ಯವೇ ಇರುವುದಿಲ್ಲ.

ಈ ಬಗೆಯ ಅನೇಕಾನೇಕ ಅಲ್ಲೋಲ­ಕಲ್ಲೋಲ­ಗಳು ಮಾನವಜೀವಿಯ ಸೃಷ್ಟಿಲೋಕದಲ್ಲಾಗು­ತ್ತಿರುವುದು ಇಂದಿನ ವಿದ್ಯಮಾನ. ಟೆಸ್ಟ್ ಟ್ಯೂಬ್‌ನಲ್ಲಿ ಅಂಕುರವಾಗಿ  ಬಾಡಿಗೆ ತಾಯಿಯ ಒಡಲಲ್ಲಿ ಬೆಳೆದು ಜನಿಸಿದ ಮಕ್ಕಳು ಇಂದು ಸ್ವತಃ ತಾವೇ ತಂದೆತಾಯಿಯ­ರಾಗಿ­ರು­ವುದನ್ನು ಜಗತ್ತು ಕಂಡಿದೆ. ಹೀಗಾಗಿ ಬಾಡಿಗೆ ತಾಯ್ತನ  ಪರಿಕಲ್ಪನೆ ಹೊಸದೇನೂ ಅಲ್ಲ.  ಆದರೆ  ಬಾಡಿಗೆ ತಾಯ್ತನ  ದೊಡ್ಡ ವಾಣಿಜ್ಯ ವ್ಯವಹಾರ­ವಾಗಿ ಇಂದು ಬೆಳೆಯುತ್ತಿದೆ ಎಂಬುದು ಹೊಸ ವಿದ್ಯಮಾನ.

ಭಾರತದಲ್ಲಿ ಬಾಡಿಗೆ ತಾಯ್ತನ ಈಗ ₨ 30,000 ಕೋಟಿಗಳ ಬೃಹತ್ ವಹಿ­ವಾಟಾ­ಗಿದೆ ಎಂಬುದು ಒಂದು ಅಂದಾಜು.  ಇದ­ರಿಂದ ಬಾಡಿಗೆ ತಾಯ್ತನದ ಸುತ್ತ ಸೃಷ್ಟಿಯಾಗುವ ಆರ್ಥಿಕ, ವೈದ್ಯಕೀಯ, ಭಾವನಾತ್ಮಕ ಹಾಗೂ ಕಾನೂನಿನ ಪ್ರಶ್ನೆಗಳು  ಹಾಗೂ ಇವುಗಳ ನಡುವೆ ನುಸುಳುವ ಅವ್ಯವಹಾರಗಳ ಪ್ರಶ್ನೆಗಳು ಕ್ಲಿಷ್ಟಕರ­ವಾದವು. ಇವಕ್ಕೆ ಯಾವುದೇ ನಿರ್ದಿಷ್ಟವಾದ ಸರಳ ಉತ್ತರ ಸಿಗಲಾರದಂತಹ ಸೂಕ್ಷ್ಮ ಹಾಗೂ ಸಂಕೀರ್ಣ ಲೋಕ ಇದು. ಈ ಕುರಿತಂತೆ ಮಾಧ್ಯಮ ಮಹಿಳೆಯರ ಜೊತೆ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಗುಜರಾತ್‌ನ  ವೈದ್ಯೆ ಡಾ.ರಿದ್ದಿ ಶುಕ್ಲಾ ನೀಡಿದ ಮಾಹಿತಿಗಳಿವು:  ‘ಅಂಡಾಣು ಉತ್ಪಾ­ದಿಸುವ ಭಾರತೀಯ ಮಹಿಳೆಯ ಸಾಮರ್ಥ್ಯ ಅತಿ ಹೆಚ್ಚಿನದು. 

ವಾಣಿಜ್ಯ ಬಾಡಿಗೆ ತಾಯ್ತನಕ್ಕೆ (ಕಮರ್ಷಿಯಲ್ ಸರೊಗಸಿ) ಭಾರತ­ದಲ್ಲಿ ಅವಕಾಶ ಇರುವುದರಿಂದ ಬಡ ಮಹಿಳೆ­ಯ­ರಿಗೆ ಇದು ದೊಡ್ಡ ಉದ್ಯೋಗಾವಕಾಶವಾಗಿದೆ. ಹಾಗೆಯೇ ಹೆತ್ತ ಮಗುವನ್ನು ಮೊದಲೇ ಮಾಡಿ­ಕೊಂಡ ಕರಾರಿನಂತೆ ವಾರಸುದಾರರಿಗೆ ನಿರ್ಮೋ­ಹಿ­ಯಾಗಿ ಭಾರತೀಯ ಮಹಿಳೆ ಒಪ್ಪಿಸಿಬಿಡು­ತ್ತಾಳೆ. ಆದರೆ ತನ್ನ ಒಡಲಲ್ಲಿ ಬೆಳೆಯುವ ಮಗು­ವನ್ನು ವಾರಸುದಾರರಿಗೆ ಹಸ್ತಾಂತರಿಸುವ ವಿಚಾರ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅಷ್ಟೇನೂ ಸುಲಭವಾಗಿರುವುದಿಲ್ಲ.’

ಇದಕ್ಕೆ ಉದಾಹರಣೆ ಅಮೆರಿಕದ ಎಲಿಜಬೆತ್ ಕೇನ್ ಹಾಗೂ ಬೇಬಿ ಎಂ ಪ್ರಕರಣಗಳು. 1980­ರ ನವೆಂಬರ್‌ನಲ್ಲಿ 37 ವರ್ಷದ ಎಲಿಜಬೆತ್ ಕೇನ್ ಅಮೆರಿಕದ ಮೊದಲ ಕಾನೂನುಬದ್ಧ ಬಾಡಿಗೆ ತಾಯಿಯಾದರು. ಆಗ ಇನ್ನೂ ತಾಯಿ ಅಂಡಾಣು ಅಥವಾ ದಾನಿಯ ಅಂಡಾಣು ಬಳಸಿ   ಅಂಕುರಗೊಂಡ ಭ್ರೂಣ­ವನ್ನು ಬಾಡಿಗೆ ತಾಯಿಗೆ ವರ್ಗಾವಣೆ ಮಾಡುವ ಚಿಕಿತ್ಸಾ ಪದ್ಧತಿ (ಜೆಸ್ಟೇಷ­ನಲ್ ಸರೊಗಸಿ)  ಪ್ರಚಲಿತವಿರಲಿಲ್ಲ.  ಹೀಗಾಗಿ ಕೇನ್‌ಳದೇ ಅಂಡಾಣುಗಳನ್ನು, ಮಗು ಪಡೆಯ­ಬಯಸಿದ್ದ ದಂಪತಿಯ ಪುರುಷ ಸಂಗಾತಿ ದಾನ ಮಾಡಿದ್ದ ವೀರ್ಯದೊಂದಿಗೆ ಬಳಸಲಾಗಿತ್ತು. 

(ಪಾರಂಪರಿಕ ಸರೊಗಸಿ). ಐವಿಎಫ್ ವೈದ್ಯಕೀಯ ತಂತ್ರಜ್ಞಾನವಿನ್ನೂ ಜಾರಿಗೆ ಬಂದಿರದ  ದಿನಗ­ಳಲ್ಲಿ, ಪುರುಷನೊಂದಿಗೆ ನೇರ ಲೈಂಗಿಕ ಸಂಪರ್ಕ  ಹೊಂದುತ್ತಿದ್ದ ಬಾಡಿಗೆ ತಾಯಿ  ಮಗುವನ್ನು ಹೆತ್ತ ನಂತರ ದಂಪತಿಗೆ ಒಪ್ಪಿಸುತ್ತಿದ್ದಂತಹ ಆಚರಣೆ­ಗಳೂ ಇದ್ದವು.
ಎಲಿಜಬೆತ್ ಕೇನ್  ಪ್ರಕರಣದಲ್ಲಿ  ಐವಿಎಫ್ ಮೂಲಕ ಮಗುವನ್ನು ಸೃಷ್ಟಿಸಲಾಗಿತ್ತು. ಆಕೆ ಜೈವಿಕ­ವಾಗಿ ಮಗುವಿನ ತಾಯಿಯಾಗಿದ್ದರೂ ಅದು ಹುಟ್ಟಿದಾಕ್ಷಣ ಕರಾರು ಮಾಡಿಕೊಂಡಿದ್ದ ದಂಪತಿಗೆ ಒಪ್ಪಿಸಬೇಕೆಂಬುದು ಆಕೆಗೆ ಚೆನ್ನಾಗಿ ಗೊತ್ತಿತ್ತು.

ಬಂಜೆಯಾಗಿರುವ ಮಹಿಳೆಗೆ  ಸಹಾಯ­ ಮಾಡುವುದು ತನ್ನ ಉದ್ದೇಶ ಎಂದೂ ಕೇನ್ ಹೇಳಿದ್ದಳು. ಆದರೆ 8 ವರ್ಷಗಳ ನಂತರ ತನ್ನ ನಿಲುವು ಬದಲಿಸಿದಳು ಕೇನ್. ವೈದ್ಯರಿಂದ ಹಿಡಿದು ಬಾಡಿಗೆತಾಯಿಯಾಗಿ ತನ್ನನ್ನು ನೇಮಕ­ಮಾಡಿಕೊಂಡಿದ್ದ ದಂಪತಿ, ವಕೀಲರು ಹಾಗೂ ಮಾಧ್ಯಮ ತನ್ನನ್ನು  ಶೋಷಣೆಗೆ ಒಳಪಡಿಸಿತು ಎಂದು  ಹೇಳಿಕೆ ನೀಡಿದಳು. ‘ಬರ್ತ್ ಮದರ್: ಅಮೆ­ರಿಕಾಸ್ ಫಸ್ಟ್ ಲೀಗಲ್ ಸರೊಗೇಟ್’  ಪುಸ್ತ­ಕ­ದಲ್ಲಿ ತಮ್ಮ ಅನುಭವಗಳನ್ನೂ ದಾಖಲಿಸಿ­ದರು. ಬಂಜೆಯಾದ ದಂಪತಿಗೆ ದತ್ತು ಸ್ವೀಕಾರಕ್ಕೆ ಪರ್ಯಾಯವಾಗಿ ಅವರದೇ ಮಗು ಹೆತ್ತು­ಕೊಡು­­ವುದು ತನ್ನ ಮೂಲ ಉದ್ದೇಶವಾಗಿತ್ತು. ಆದರೆ ಶಿಶು ಸೃಷ್ಟಿಯ ವ್ಯವಹಾರ ಸರಳವಾಗಿ­ರದೆ ದೊಡ್ಡ ಉದ್ಯಮವಾಗಿದೆ ಎಂಬುದು ನಂತರ ಮನ­ವರಿಕೆಯಾದುದಾಗಿ ಆಕೆ ಹೇಳಿಕೊಂಡಳು.

ಇದೇ ರೀತಿ, 1986ರಲ್ಲಿ ಬೇಬಿ ಎಂ ಪ್ರಕರಣ, ಅನೇಕ ದೂರಗಾಮಿ ಕಾನೂನು ಪ್ರಶ್ನೆಗಳನ್ನು ಮುಂದೊ­ಡ್ಡಿತು. ಬೇಬಿ ಎಂಗೆ ಜನ್ಮ ನೀಡಿದ ನಂತರ  ಕರಾರಿನಂತೆ ಮಗುವನ್ನು  ಅಮೆರಿಕದ ವಿಲಿಯಂ ಬಿಲ್ ಸ್ಟರ್ನ್ ದಂಪತಿಗೆ ಒಪ್ಪಿಸಿದ 24 ಗಂಟೆಗಳೊಳಗೇ ಬಾಡಿಗೆ ತಾಯಿಯಾದ ಮೇರಿ ಬೆಥ್ ಮಗು ವಾಪಸ್ ತನಗೇ ಬೇಕೆಂದು ಹಟ ಹಿಡಿ-­ದದ್ದು ವಿವಾದವಾಯಿತು. ಮಗು ನೀಡದಿ­ದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ ಮಗುವನ್ನು ಹೊತ್ತೊಯ್ದ ಆಕೆ ನಂತರ ತನ್ನ ಕುಟುಂಬ­ದೊಂದಿಗೆ ಅಜ್ಞಾತಸ್ಥಳಕ್ಕೆ ತೆರಳಿ ಆತಂಕ ಸೃಷ್ಟಿಸಿದಳು. ಈ ಪ್ರಕರಣ ಕೋರ್ಟ್ ಮೆಟ್ಟಿಲೇ­ರಿತು.

ಹಣ ನೀಡದಿದ್ದಲ್ಲಿ ಮಗುವನ್ನು ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿ­ಸಿದ್ದ ಮೇರಿ ಬೆಥ್‌ಳ ಟೆಲಿಫೋನ್ ಸಂಭಾಷಣೆಯ ಧ್ವನಿಮುದ್ರಿಕೆ ತುಣುಕುಗಳ ಸಾಕ್ಷ್ಯವನ್ನು ಬಿಲ್ ಸ್ಟರ್ನ್ ಒದಗಿಸಿದರು. ಇದು ಬ್ಲ್ಯಾಕ್‌ಮೇಲ್ ಅಲ್ಲವೆ? ಎಂಬಂಥ ಪ್ರಶ್ನೆಯಲ್ಲದೆ ಬಾಡಿಗೆ ತಾಯ್ತ-­ನದ ಕುರಿತಂತೆಯೂ ಅನೇಕ ಪ್ರಶ್ನೆಗಳಿಗೆ ಎಡೆ­ಮಾಡಿತು. ಕಡೆಗೆ ಕೋರ್ಟ್ ಬಿಲ್ ಸ್ಟರ್ನ್  ಪರ ತೀರ್ಪು ನೀಡಿತು.   ಮಗುವನ್ನು ಭೇಟಿ ಮಾಡುವ ಅವ­ಕಾಶವನ್ನು ಬಾಡಿಗೆ ತಾಯಿಗೆ ನೀಡ­ಲಾ­ಯಿತು. ವಿಚಿತ್ರವೆಂದರೆ ಈ ಪ್ರಕರಣದಲ್ಲಿ ಸ್ಟರ್ನ್ ಪತ್ನಿ  ಬೆಟ್ಸಿಗೆ ಯಾವುದೇ ಪಾತ್ರವೂ ಇರಲಿಲ್ಲ .  18 ವರ್ಷಗಳಾದ ನಂತರ,   ತಾನು  ಸ್ಟರ್ನ್ಸ್ ದಂಪ­ತಿಗೆ ಮಾತ್ರ ಸೇರಿದವಳೆಂದು ಬೇಬಿ ಎಂ ಸ್ವತಃ ನಿರ್ಧರಿಸಿದಳು. ಆ ಪ್ರಕಾರ ಬೆಟ್ಸಿಯನ್ನು ತನ್ನ ಕಾನೂನುಬದ್ಧ ತಾಯಿಯಾಗಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಆಕೆ ಕೈಗೊಳ್ಳ­ಬೇಕಾಯಿತು.

ಬೇಬಿ ಎಂ ಪ್ರಕರಣ ಎತ್ತಿದಂತಹ ಕಸಿವಿಸಿ­ಗೊಳಿ­ಸುವ ಇಂತಹ ಪ್ರಶ್ನೆಗಳು ಪದೇಪದೇ ಕಾಡು­ವಂತಹವು. ಬಾಡಿಗೆ ತಾಯ್ತನ ಎಂಬುದು ‘ಶಿಶು ಮಾರಾಟ’ಕ್ಕೆ ಸಮನಾಗುತ್ತದೆಯೆ? ಅಥವಾ ಇದು ಮೇರಿ ಬೆಥ್ ವಕೀಲರು ವರ್ಣಿಸಿದಂತೆ ‘ಪ್ರಜನನ ವೇಶ್ಯಾವಾಟಿಕೆಯೆ?’
ಎಲಿಜಬೆತ್ ಕೇನ್ ಹಾಗೂ ಬೇಬಿ ಎಂ ಪ್ರಕ­ರಣ­ಗಳಿಂದಾಗಿ ಅಮೆರಿಕದಲ್ಲಿ ಕಾನೂನುಗಳು ಮತ್ತಷ್ಟು ಕಠಿಣವಾದವು. ಅಮೆರಿಕದಲ್ಲಿ ತೀರಾ ಶ್ರೀಮಂತರು ಮಾತ್ರ ದುಬಾರಿ ಹಣ ತೆತ್ತು ಬಾಡಿಗೆ ತಾಯಿಯನ್ನು ಹೊಂದುವುದು ಸಾಧ್ಯ.

ಈ ವೆಚ್ಚ ಭರಿಸಲಾಗದ ಮಧ್ಯಮ ವರ್ಗದ ಅಮೆ­ರಿಕನ್ನರು ಕಾನೂನುಗಳು ಅಷ್ಟೊಂದು ಬಿಗಿ ಇಲ್ಲದೆ ಅಗ್ಗವಾಗಿ ಬಾಡಿಗೆ ತಾಯಂದಿರ ಸೇವೆ ದೊರೆ­ಯುವ ರಾಷ್ಟ್ರಗಳತ್ತ ಗಮನ ಹರಿಸಿದರು. ಇದರ ‘ಫಲಾನುಭವಿ’ಗಳು– ಭಾರತ ಹಾಗೂ ಥಾಯ್ಲೆಂಡ್.  ಭಾರತದಲ್ಲಿ ಭ್ರೂಣ ವರ್ಗಾವಣೆ ಮೂಲಕ­ವಷ್ಟೇ ಬಾಡಿಗೆ ತಾಯ್ತನಕ್ಕೆ ಅವಕಾಶ­ವಿದೆ. ಎಂದರೆ  ತಾನು ಗರ್ಭ ಧರಿಸುವ ಮಗುವಿಗೆ ಸ್ವತಃ ತನ್ನದೇ ಅಂಡಾಣು ದಾನ ಮಾಡುವುದಕ್ಕೆ ಬಾಡಿಗೆ ತಾಯಿಗೆ ಅವಕಾಶವಿಲ್ಲ. ಒಡಲೊಳಗಿನ ಕಂದಮ್ಮನ ಜೊತೆ ಯಾವುದೇ ಜೈವಿಕ ಬಾಂಧವ್ಯ ಇರಬಾರದೆಂಬ ಮುನ್ನೆಚ್ಚರಿಕೆ ಇದು. 

ಮೇಲಿನ ಈ ಎಲ್ಲಾ ವಿವರಗಳನ್ನು  ಲೇಖಕಿ ಹಾಗೂ ಹಿರಿಯ ಪತ್ರಕರ್ತೆ ಗೀತಾ ಅರವಾ­ಮುದನ್ ತಮ್ಮ  ‘ಬೇಬಿ ಮೇಕರ್ಸ್ – ದಿ ಸ್ಟೋರಿ ಆಫ್ ಇಂಡಿಯನ್ ಸರೊಗಸಿ’  ಪುಸ್ತಕದಲ್ಲಿ ( ಪ್ರ: ಹಾರ್ಪರ್ ಕೊಲಿನ್ಸ್ ಪಬ್ಲಿಷರ್ಸ್ ಇಂಡಿಯಾ) ದಾಖಲಿಸಿದ್ದಾರೆ. ಇದರ ನಿರೂಪಣೆಗೆ ಅವರು ಬಳಸಿರುವುದು ಕಥಾನಕ  ಶೈಲಿ. ಡಾ.ನಯನಾ ಪಟೇಲ್ ಅವರ ಕ್ಲಿನಿಕ್ ನಲ್ಲಿ 2008ರಲ್ಲಿ ಜನ್ಮ ತಳೆದ ಬೇಬಿ ಮಾಂಜಿ ಪ್ರಕರ­ಣವೂ  ಕೋರ್ಟ್ ಮೆಟ್ಟಿಲೇರುವಂತಾಗಿದ್ದು ಭಾರ­­ತ­ದಲ್ಲೂ ಅನೇಕ ಪ್ರಶ್ನೆಗಳಿಗೆ ದಾರಿ­ಯಾ­ಯಿತು.

ಜಪಾನಿನ ಇಕುಹುಮಿ ಹಾಗೂ ಯುಕಿ ಯಮಾಡಾ ದಂಪತಿಯ ಮಗುವಿನ ಕಥೆ ಇದು. ಇಕುಹುಮಿ ವೀರ್ಯ ಹಾಗೂ ಅನಾಮಧೇಯ ದಾನಿಯ ಅಂಡಾಣುವಿನಿಂದ ಈ ಮಗು ಜನಿ­ಸಿತ್ತು. ಆದರೆ ಮಗು ಜನಿಸುವುದಕ್ಕೆ ಮುಂಚೆಯೇ ಯಮಾಡಾ ದಂಪತಿ ವಿಚ್ಛೇದನ ಪಡೆದರು. ಇದು ಸೃಷ್ಟಿಸಿದ  ಬಿಕ್ಕಟ್ಟು,  ಬಾಡಿಗೆ ತಾಯ್ತನದ ಕುರಿ­ತಾಗಿ ರಾಷ್ಟ್ರದಲ್ಲಿ ನಿರ್ದಿಷ್ಟ ಕಾನೂನು­ಗಳಿಲ್ಲ­ದಿ­ರುವುದರ ಕೊರತೆಯನ್ನು ಎತ್ತಿ ತೋರಿತು. ಬೇಬಿ ಮಾಂಜಿ ಜಪಾನಿ ಮಗುವೆ? ಭಾರತೀಯಳೆ? ಆಕೆಯ ತಾಯಿ ಯಾರು?  ವಿಚ್ಛೇದಿತ, ಏಕಾಂಗಿ ತಂದೆಯ ಜೊತೆ ಜಪಾನ್‌ಗೆ ಮಗುವನ್ನು ಕಳಿಸ­ಬಹುದೆ? ಎಂಬೆಲ್ಲಾ ಪ್ರಶ್ನೆಗಳು ಸೃಷ್ಟಿಯಾದವು. ಜಪಾನ್‌ನಲ್ಲಿನ ಕಾನೂನುಗಳೂ ಈ ವಿಚಾರದಲ್ಲಿ ಬಿಗಿಯಾಗಿದ್ದವು. ಬೇಬಿ ಮಾಂಜಿ  ಪ್ರಕರಣ ಕಡೆಗೆ ಸುಪ್ರೀಂಕೋರ್ಟ್ ಮೆಟ್ಟಿಲೇರಿ  ಅಜ್ಜಿಯ ಜೊತೆ ಜಪಾನ್‌ಗೆ ತೆರಳುವ ಅವಕಾಶವನ್ನು ಬೇಬಿ ಮಾಂಜಿಗೆ ಒದಗಿಸಲಾಯಿತು.

ಬಾಡಿಗೆ ತಾಯ್ತನ,  ಅನೇಕ ಹೊಸ ಉತ್ಪ­ನ್ನ­ಗಳ ಮಾರುಕಟ್ಟೆ ಬೆಳವಣಿಗೆಗೆ ಚಾಲನೆ ನೀಡಿರು­ವುದು ಹೊಸತು. ಬಾಡಿಗೆ ತಾಯಿಯ ಮೂಲಕ ಮಗು ಪಡೆಯುತ್ತಿರುವುದು ಅತ್ತೆಮಾವಂದಿರಿಗೆ ತಿಳಿಯಬಾರದೆಂದು ಸ್ವತಃ ತಾವೇ ಗರ್ಭಿಣಿಯರಾ­ಗಿ­ರುವುದಾಗಿ ಅನೇಕ ಮಹಿಳೆಯರು ನಟಿಸು­ತ್ತಾರೆ. ಇದಕ್ಕಾಗಿ ಗುಜರಾತ್‌ನಲ್ಲಿ ‘ಕೃತಕ ಹೊಟ್ಟೆ’­ ಗಳನ್ನು ತಯಾರಿಸುವಂತಹ ಉದ್ಯಮಕ್ಕೆ ದೊಡ್ಡದಾಗೇ  ಚಾಲನೆ ಸಿಕ್ಕಿದೆ.

ಬೆಂಗಳೂರು ಸೇರಿದಂತೆ ರಾಷ್ಟ್ರದ ಅನೇಕ ನಗರಗಳಲ್ಲಿ ನಾಯಿಕೊಡೆಗಳಂತೆ ಸಂತಾನೋ­ತ್ಪತ್ತಿ ನೆರವಿನ ಪ್ರಜನನ ತಂತ್ರಜ್ಞಾನ (ಎಆರ್ ಟಿ) ಕ್ಲಿನಿಕ್‌ಗಳು ತಲೆ ಎತ್ತುತ್ತಿವೆ. ರಾಷ್ಟ್ರದಾದ್ಯಂತ ಇಂತಹ ಸುಮಾರು 3,000 ಕ್ಲಿನಿಕ್‌ಗಳಿವೆ ಎಂಬುದು ಒಂದು ಅಂದಾಜು. ಆದರೆ ದೇಶದಾ­ದ್ಯಂತ ಎಆರ್ ಟಿ ಕ್ಲಿನಿಕ್‌ಗಳು  ನೀಡುತ್ತಿರುವ ಸೇವೆ ಮೇಲೆ ನಿಗಾ ಇಡಲು ಸದ್ಯಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ಭಾರತೀಯ ವೈದ್ಯಕೀಯ ಸಂಶೋ­ಧನಾ ಮಂಡಳಿ (ಐಸಿಎಂಆರ್) ಕೆಲವೊಂದು ಮಾರ್ಗ­ದರ್ಶಿ ಸೂತ್ರಗಳನ್ನು ಪ್ರಕಟಿಸಿದೆ ಅಷ್ಟೆ.  ಈಗ ಸಂತಾನೋತ್ಪತ್ತಿ ನೆರವಿನ ಪ್ರಜನನ ತಂತ್ರ­ಜ್ಞಾನ  (ಎಆರ್ ಟಿ ) ಮಸೂದೆ 2013 ಅನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸು­ವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಇತ್ತೀಚೆಗಷ್ಟೇ ಪ್ರಕಟಿಸಿದೆ.

₨ 4ಲಕ್ಷದವರೆಗೂ ಹಣ ಸಿಗುವುದರಿಂದ ಬಡ ಮಹಿಳೆಯರು ಸ್ವಇಚ್ಛೆಯಿಂದಲೇ ಬಾಡಿಗೆ ತಾಯಂದಿ­ರಾಗಲು ಮುಂದೆ ಬರುತ್ತಿದ್ದಾರೆ ಎಂಬುದು ನಿಜ.  ಬಾಡಿಗೆ ತಾಯ್ತನದ ಅವಧಿ ಮುಗಿಯುವವರೆಗೂ ಈ ಮಹಿಳೆಯರು ಹಾಸ್ಟೆಲ್‌ನಲ್ಲಿರುತ್ತಾರೆ. ಸೀಮಂತ ಸಮಾರಂಭ­ಗಳ ಆಚರಣೆಯೂ ಇಲ್ಲಿರುತ್ತದೆ. ಆಗಲೂ ಒಂದಷ್ಟು ಉಡುಗೊರೆಗಳು ಈ ಮಹಿಳೆಯರಿಗೆ ಲಭ್ಯ. ಹಾಸ್ಟೆಲ್‌ನಲ್ಲಿರುವ  ಅವಧಿಯಲ್ಲಿ  ಟೈಲರಿಂಗ್ ಇತ್ಯಾದಿ ಸಣ್ಣಪುಟ್ಟ ತರಬೇತಿಗೆ ಕೆಲವು ಕ್ಲಿನಿಕ್‌ಗಳಲ್ಲಿ ಅವಕಾಶವಿರುತ್ತದೆ.

ಆದರೆ, ಬಾಡಿಗೆ ಬಸಿರು ಹೊರುವ ಮಹಿಳೆ­ಯರು ಹೆರಿಗೆ ವೇಳೆ ಸಾವನ್ನಪ್ಪಿದರೆ ಯಾರು ಜವಾಬ್ದಾರರು? ಈಗಿನ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಸ್ವತಃ ತನ್ನದೇ 2 ಮಕ್ಕಳನ್ನು ಹೊಂದಿರುವ ಮಹಿಳೆಗೆ 3 ಮಕ್ಕಳನ್ನು ಬಾಡಿಗೆ ತಾಯ್ತನದ ಮೂಲಕ ಹೆರಲು ಅವಕಾಶವಿದೆ.  ಇಂತಹ ಮಹಿಳೆ­ಯರ ದೇಹಾರೋಗ್ಯದ ಮೇಲೆ ಆಗಬಹು­ದಾದ  ಪರಿಣಾಮಗಳೇನು? ಆಕೆಯ ಭಾವನಾ­ತ್ಮಕ, ಮಾನಸಿಕ ಸ್ಥಿತಿಯಲ್ಲಿ ಏರುಪೇರಾಗು­ವು­ದಿಲ್ಲವೆ? ಇವೆಲ್ಲವುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.

ಬದಲಾಗುತ್ತಿರುವ ವಿಶ್ವದಲ್ಲಿ ತನ್ನದೇ ಅಂಡಾಣು ಅಥವಾ ಗರ್ಭಕೋಶವಿಲ್ಲದಿದ್ದರೂ ಮಗುವನ್ನು ಪಡೆದು ತನ್ನದೆಂದು ಹೇಳಬಹು­ದಾದ  ಈ ಸಾಧ್ಯತೆಗಳು ಎಲ್ಲಿಗೆ ಹೋಗಿ ಮುಟ್ಟ­ಬಹುದು? ಇದೇ ಸಂದರ್ಭದಲ್ಲಿಯೇ ಗರ್ಭ­ಕೋಶ ಕಸಿ ಚಿಕಿತ್ಸೆಗೆ ಒಳಗಾಗಿದ್ದ  ಸ್ವೀಡಿಷ್ ಮಹಿಳೆ­ಯೊಬ್ಬರು ಮಗುವಿಗೆ ಜನ್ಮ ನೀಡಿದ ವಿಚಾರ ಪ್ರಕಟವಾಗಿದೆ. ಗರ್ಭಕೋಶವಿಲ್ಲದೆ ಜನಿಸಿದ್ದ ಈ ಮಹಿಳೆಗೆ  60 ವರ್ಷ ದಾಟಿದ ಆಕೆಯ ಸ್ನೇಹಿತೆ­ಯಿಂದ ದಾನ ಪಡೆದಿದ್ದ ಗರ್ಭಕೋಶವನ್ನು ಕಳೆದ ವರ್ಷವಷ್ಟೇ  ಕಸಿ ಮಾಡಲಾಗಿತ್ತು.  ಗರ್ಭಕೋಶ ಕಸಿ ಚಿಕಿತ್ಸೆ ಈ ಪ್ರಮಾಣದಲ್ಲಿ ಯಶ್ವಸಿ­ಯಾಗಿ­ರು­ವುದು ಇದೇ ಮೊದಲು. ಎಂದರೆ ಬಾಡಿಗೆ ತಾಯ್ತ­ನಕ್ಕೆ  ಮತ್ತೊಂದು ಪರ್ಯಾಯ ಸಾಧ್ಯತೆ­ಯಾಗಿ ಬರಲಿ­ರುವ ದಿನಗಳಲ್ಲಿ ಇದು ಬೆಳೆಯ­ಬಹುದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT