ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯಿ ಚಪಲ

Last Updated 30 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಸಂಜಯಸಿಂಹ ಮಗಧ ದೇಶದ ರಾಜನಾಗಿದ್ದ. ಆತ ಪರಾಕ್ರಮಿ ಹಾಗೂ ಬುದ್ಧಿಶಾಲಿ. ಅವನಿಗಿದ್ದ ಒಂದೇ ದೋಷವೆಂದರೆ ಬೇಟೆ. ಸಮಯ ದೊರೆ­ತೊಡನೆ ಆತ ಕಾಡಿಗೆ ನುಗ್ಗಿ ಮನದಣಿಯೆ ಬೇಟೆಯಾಡುತ್ತಿದ್ದ. ಹೀಗೊಂದು ದಿನ ಬೇಟೆಗೆ ಹೋದಾಗ ಅವನು ದಟ್ಟ ಕಪ್ಪು ಬಣ್ಣದ ಜಿಂಕೆಯನ್ನು ಕಂಡ. ಅಷ್ಟು ಕಪ್ಪಾದ ಜಿಂಕೆಯನ್ನು ಅವನೆಂದೂ ಕಂಡಿರಲಿಲ್ಲ. ಅದರಲ್ಲೂ ಅದರ ಮೈಮೇಲೆಲ್ಲ ಬೆಳ್ಳಿಯ ಬಣ್ಣದ ಚುಕ್ಕೆಗಳು. ಜಿಂಕೆಯ ಕಣ್ಣಿನಲ್ಲಿ ಮಿಂಚಿನ ಹೊಳಪು. ಅದರ ಓಟ ಗಾಳಿಗಿಂತ ವೇಗ. ಸಂಜಯಸಿಂಹ ಆದರ ಬೆನ್ನು ಹತ್ತಿದ. ಅದು ಕಣ್ಣಿಗೆ ಕಂಡ ಮರುಕ್ಷಣವೇ ಮಾಯವಾಗುತ್ತಿತ್ತು. ಸಾಮಾನ್ಯವಾಗಿ ಅವನ ಬಾಣದ ಗುರಿ ಎಂದೂ ತಪ್ಪಿದ್ದಲ್ಲ. ಆದರೆ, ಹತ್ತಾರು ಬಾಣ ಪ್ರಯೋಗಿ­ಸಿದರೂ ಅದಕ್ಕೆ ಗುರಿಯಿಡಲು ಸಾಧ್ಯವಾಗಲಿಲ್ಲ. ಅದನ್ನು ಹುಡುಕಿ­ಕೊಂಡು ಹೋಗು­ವುದೂ ಅಸಾಧ್ಯ­ವಾಗಿತ್ತು.

ರಾಜ ಕಾಡಿನಲ್ಲೇ ಇರುವ ಬೇಟೆಗಾರರನ್ನು ಈ ಪ್ರಾಣಿಯ ಬಗ್ಗೆ ಕೇಳಿ ನೋಡಿದ. ಅವರು ಹೇಳಿದರು, ‘ರಾಜ, ಈ ಕಪ್ಪು ಜಿಂಕೆ ಅಪ­ರೂಪ­ವಾದದ್ದು. ನಮ್ಮಂತಹ ಹುಟ್ಟು ಬೇಟೆ­ಗಾರರಿಗೇ ಅದನ್ನು ಬೇಟೆಯಾ­ಡಲು ಸಾಧ್ಯವಾಗಿಲ್ಲ. ಅದಕ್ಕೆ ಮನುಷ್ಯರ ವಾಸನೆ ಬಹಳ ದೂರಕ್ಕೇ ಬರುತ್ತದೆ. ಆದ್ದರಿಂದ ಮನುಷ್ಯರ ಸುಳಿವು ಕಂಡರೆ ಸಾಕು ದೂರ ಹೋಗಿಬಿಡುತ್ತದೆ ಹೀಗಾಗಿ ನಾವೂ ಅದನ್ನು ಬೇಟೆ­ಯಾಡುವ ಆಸೆ ಬಿಟ್ಟುಬಿಟ್ಟಿ­ದ್ದೇವೆ’. ರಾಜನಿಗೆ ಇದೊಂದು ಸವಾಲೇ ಆಯಿತು. ಹೇಗಾದರೂ ಅದನ್ನು ಪಡೆಯಬೇಕು ಇಲ್ಲವೇ ಬೇಟೆಯಾಡ­ಬೇಕೆಂಬ ಹಟ ಮೂಡಿತು. ತನ್ನ ಅರಮನೆಯಲ್ಲಿದ್ದ ಹಿರಿಯ ಸೇವಕನನ್ನು ಕರೆದು ತನ್ನ ಇಂಗಿತ ತಿಳಿಸಿದ. ಆ ಸೇವಕ ಸಂಜಯಸಿಂಹನನ್ನು ಎತ್ತಿ ಆಡಿಸಿದವ, ಪ್ರಪಂಚದ ರೀತಿಯನ್ನು ತಿಳಿದವನು. ಆತ ಹೇಳಿದ, ‘ಮಹಾರಾಜಾ ಚಿಂತೆ ಮಾಡ­ಬೇಡ, ಎರಡು ಮೂರು ವಾರಗಳಲ್ಲಿ ಆ ಜಿಂಕೆ ಅರಮನೆಗೇ ಬರುವಂತೆ ಮಾಡು­ತ್ತೇನೆ’. ರಾಜ ಈ ಮಾತನ್ನು ನಂಬದಿದ್ದರೂ ಒಂದ ಆಸೆ ಮೂಡಿತು.

ಮರುದಿನ ಹಿರಿಯ ಸೇವಕ ಅರಮನೆ­ಯಿಂದ ಒಂದು ದೊಡ್ಡ ಮಡಕೆಯಲ್ಲಿ ಜೇನುತುಪ್ಪ ತೆಗೆದುಕೊಂಡು ಕಾಡಿಗೆ ಹೋದ. ಅಲ್ಲಿಯೇ ಒಂದು ಗುಡಿಸಲು ಕಟ್ಟಿ­ಕೊಂಡು ಕುಳಿತು ಜಿಂಕೆ ಅಡ್ಡಾಡುವ ಸ್ಥಳಗಳನ್ನು ಗಮನಿಸಿದ. ಹುಲ್ಲು ಸೊಂಪಾಗಿ ಬೆಳೆದ ಸ್ಥಳದಲ್ಲಿ ಸಾಕಷ್ಟು ಜೇನುತುಪ್ಪ ಸುರುವಿ ಬಂದ. ಮಾರನೆಯ ದಿನ ಅಲ್ಲಿಗೆ ಬಂದ ಜಿಂಕೆ ಹುಲ್ಲಿಗೆ ಅಂಟಿದ್ದ ಜೇನನ್ನು ತಿಂದು ಅದರ ರುಚಿಗೆ ಮರುಳಾಯಿತು. ಮುಂದೆ ಒಂದೆರಡು ದಿನ ಹಾಗೆಯೇ ಜೇನು ಸವರಿದ ಸೇವಕ. ಈಗ ಜಿಂಕೆ ಅಲ್ಲಿಗೆ ತಪ್ಪದೆ ಬರತೊಡಗಿತು. ಸೇವಕ ನಂತರ ಆ ಸ್ಥಳದಿಂದ ಸ್ವಲ್ಪ ಮುಂದೆ ಮುಂದಕ್ಕೆ ಜೇನು ಸವರುತ್ತ ಬಂದ. ಜಿಂಕೆ ಅದನ್ನು ಹಿಂಬಾಲಿಸುತ್ತಲೇ ಬಂದಿತು. ಜಿಂಕೆಗೆ ಜೇನು ತಿನ್ನುವುದನ್ನು ಬಿಟ್ಟರೆ ಬೇರೆ ಯಾವುದೂ ರುಚಿಸುತ್ತಿರ­ಲಿಲ್ಲ. ಜೇನು ಸವರಿದ ಹುಲ್ಲನ್ನು ಹುಡುಕುತ್ತಾ ಹಾಗೆಯೇ ಮುಂದೆ ನಡೆಯಿತು. ಬುದ್ಧಿವಂತ ಸೇವಕ, ಹೆಚ್ಚೆಚ್ಚು ಜೇನನ್ನು ಸುರಿಯುತ್ತ ಅರಮನೆಯ ತೋಟ­ದೊಳಗೇ ಬಂದ. ಬಾಯಿ ರುಚಿಗೆ ಬಲಿಯಾಗಿದ್ದ ಜಿಂಕೆ ತೋಟದಲ್ಲಿಯೇ ಬಂದು ನಿಂತಿತು. ಮರುಕ್ಷಣವೇ ರಾಜನ ಸೇವಕರು ಕೆಳಗೆ ಹಾಸಿದ್ದ ಬಲೆಯನ್ನು ಎಳೆದು ಜಿಂಕೆಯನ್ನು ಸೆರೆಹಿಡಿದು ರಾಜನ ಬಳಿಗೆ ತಂದರು.

ರಾಜ ಆಶ್ಚರ್ಯದಿಂದ ಸೇವಕ­ನನ್ನು ಕೇಳಿದ, ‘ಒಂದು ಬಾಣವನ್ನೂ ಬಿಡದೆ, ಒಂದು ಚೂರೂ ಗಾಯ ಮಾಡದೇ ಜಿಂಕೆಯನ್ನು ಹೇಗೆ ಹಿಡಿದು ತಂದೆ?’ ಸೇವಕ ಹೇಳಿದ, ‘ಮಹಾರಾಜಾ, ಈ ಅದ್ಭುತ ಪ್ರಾಣಿಗೆ ಅಸಾಮಾನ್ಯ ಶಕ್ತಿ ಇದೆ. ಆದರೆ, ಬಾಯಿಚಪಲ ಅದರ ದೌರ್ಬಲ್ಯ. ಆ ದೌರ್ಬಲ್ಯವನ್ನೇ ನಾನು ಬಳಸಿಕೊಂಡೆ. ಅದಕ್ಕೆ ಜೇನಿನ ರುಚಿ ಹತ್ತಿಸಿ, ಅದನ್ನೇ ಬೆಳೆಸಿ ಇಲ್ಲಿಯವರೆಗೆ ಹಿಡಿದು ತಂದೆ. ಮನುಷ್ಯರ ವಾಸನೆ­ಯನ್ನು ಹಿಡಿದು ಓಡಿಹೋಗುವ ಪ್ರಾಣಿ ನಾಲಿಗೆಯ ಚಪಲಕ್ಕೆ ಬಲಿಯಾಗಿ ತನ್ನ ನೈಜ ಗುಣವನ್ನು ಮರೆತು ಬಂದು ಸಿಕ್ಕಿಹಾಕಿಕೊಂಡಿತು’. ಇದು ಕೇವಲ ಜಿಂಕೆಯ ಕಥೆಯಲ್ಲ, ಮನುಷ್ಯರ ಕಥೆಯೂ ಹೌದು. ಸಾಧನೆಯ ಎಲ್ಲ ಸಾಧ್ಯತೆಗಳಿದ್ದು ಯಾವುದೋ ಒಂದು ಚಪಲಕ್ಕೆ ಸಿಕ್ಕಿಬಿದ್ದು ಪ್ರಪಾತ ತಲುಪಿದರ ಅನೇಕ ಕಥೆಗಳನ್ನು ಕಂಡಿದ್ದೇವೆ. ನಾಲಿಗೆಯ ಚಪಲವೊಂದೇ ಜಿಂಕೆಯನ್ನು ಸಾವಿನ ಬಾಗಿಲಿಗೆ ತೆಗೆದುಕೊಂಡು ಹೋದದ್ದಾದರೆ ಐದು ಪಂಚೇಂದ್ರಿ­ಯಗಳ ಸೆಳೆತ ಏನೇನು ಅನಾಹುತ­ಗಳನ್ನು ಮಾಡಿಸಬಹುದಲ್ಲವೇ? ಅವುಗಳಿಂದ ಪಾರಾಗಿ ಸಾತ್ವಿಕ ಜೀವನ ನಡೆಸಲು ಸದಾಕಾಲದ ಎಚ್ಚರ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT