ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಕಾಶದಲ್ಲಿ ಗಣಿಗಾರಿಕೆಗೆ ನೀನೊ, ನ್ಯಾನೊ?

Last Updated 29 ನವೆಂಬರ್ 2017, 19:36 IST
ಅಕ್ಷರ ಗಾತ್ರ

ಎರಡು ವಾರಗಳ ಹಿಂದೆ ‘ಅಸ್ಗಾರ್ಡಿಯಾ’ ಹೆಸರಿನ ಹೊಸ ದೇಶವೊಂದು ಅಸ್ತಿತ್ವಕ್ಕೆ ಬಂತು. ಆದರೆ ಇಡೀ ಭೂಮಿಯ ನಕಾಶೆಯನ್ನು ಜಾಲಾಡಿದರೂ ಅದು ಸಿಕ್ಕಲಾರದು. ಏಕೆಂದರೆ ಭೂಮಿಯ ಆಚಿನ ಮೊದಲ ರಾಷ್ಟ್ರ ಅದು. ಒಂದು ಪುಟ್ಟ ಬಾಹ್ಯಾಕಾಶ ನೌಕೆಯ ರೂಪದಲ್ಲಿ ಅದನ್ನು ಎರಡು ವಾರಗಳ ಹಿಂದೆ ಕಕ್ಷೆಗೆ ಏರಿಸಲಾಯಿತು.

ಅಸ್ಗಾರ್ಡಿಯಾ ಎಂದರೆ ದೇವನಗರ. ನಮ್ಮ ಪುರಾಣಗಳಲ್ಲಿ ಇಂದ್ರನ ಅಮರಾವತಿ ಇದ್ದ ಹಾಗೆ ಜರ್ಮನಿಯ ನೋರ್ಸ್ ಪುರಾಣದ ಪ್ರಕಾರ ದೇವತೆಗಳು ವಾಸಿಸುವ ನಗರಕ್ಕೆ ‘ಅಸ್ಗಾರ್ಡಿಯಾ’ ಎಂಬ ಹೆಸರಿತ್ತು. ಆ ಕಾಲ್ಪನಿಕ ನಗರವೇ ಈಗ ಅರೆವಾಸ್ತವದ ಒಂದು ‘ದೇಶ’ ಎನ್ನಿಸಲಿದೆ. ಆದರೆ ಹಾಗೆ ಯಾವುದೇ ಪ್ರದೇಶವೊಂದು
ಸ್ವತಂತ್ರ ರಾಷ್ಟ್ರ ಎನ್ನಿಸಬೇಕಿದ್ದರೆ ಅದಕ್ಕೊಂದು ಸರ್ಕಾರ ಇರಬೇಕು; ಸಂವಿಧಾನ ಇರಬೇಕು; ಒಂದು ನಿಗದಿತ ಸ್ಥಳ, ಧ್ವಜ, ಲಾಂಛನ, ರಾಷ್ಟ್ರಗೀತೆ ಮತ್ತು ನಾಣ್ಯವೂ
ಇರಬೇಕು. ಸಂವಿಧಾನ ರೂಪಿತವಾಗಿದೆ, ‘ಸೋಲಾರ್’ ಹೆಸರಿನ ನಾಣ್ಯವನ್ನು (ಕರೆನ್ಸಿ) ಐರೋಪ್ಯ ಸಂಘಟನೆಯ ಬೌದ್ಧಿಕ ಆಸ್ತಿ ಕಚೇರಿಯಲ್ಲಿ ನೋಂದಣಿ ಮಾಡಲಾಗಿದೆ. ಬಿಟ್ ಕಾಯ್ನ್ ಮಾದರಿಯ ಅಗೋಚರ ನಾಣ್ಯ ಅದು. ಭಾರತದ ಏಳು ಸಾವಿರ ಜನರೂ ಸೇರಿದಂತೆ ವಿವಿಧ ದೇಶಗಳ ಸುಮಾರು ಒಂದೂವರೆ ಲಕ್ಷ ಜನರು ಅಸ್ಗಾರ್ಡಿಯಾ ದೇಶದ ನಾಗರಿಕರಾಗಲು ನೋಂದಣಿ ಮಾಡಿಸಿದ್ದಾರೆ. ಬರುವ ಜನವರಿ 1ರಂದು ಚುನಾವಣೆ ನಡೆಯಲಿದೆ. ಆ ನಂತರ ವಿಶ್ವಸಂಸ್ಥೆಯ ಮಾನ್ಯತೆ ಕೋರಬೇಕು.

ಈ ಬಾಹ್ಯದೇಶದ ‘ರಾಷ್ಟ್ರಪಿತ’ ಯಾರೆಂದರೆ, ಹಿಂದಿನ ಸೋವಿಯತ್ ಸಂಘದ ಅಝರ್‌ಬೈಜಾನ್‌ನಲ್ಲಿ ರಾಕೆಟ್ ತಂತ್ರಜ್ಞಾನಿ ಡಾ. ಐಗೊರ್ ಅಶುರ್ಬೇಲಿ. ರಷ್ಯದ ಅನೇಕ ವಿಜ್ಞಾನ ಸಂಬಂಧಿ ಉದ್ಯಮಗಳನ್ನು ನಡೆಸುತ್ತ ಉನ್ನತ ಪ್ರಶಸ್ತಿಗಳನ್ನೂ ಪಡೆದ ಈತ ವಿಶ್ವಸಂಸ್ಥೆಯ ಯುನೆಸ್ಕೊ ಘಟಕದಲ್ಲಿ ಬಾಹ್ಯಾಕಾಶ ವಿಜ್ಞಾನ ವಿಭಾಗದ ಅಧ್ಯಕ್ಷ ಕೂಡ ಹೌದು.

ಭೂಮಿಯ ಆಚೆ ಹೊಸ ದೇಶವನ್ನು ನಿರ್ಮಿಸುವ ಉದ್ದೇಶವನ್ನು ನಾವೆಲ್ಲ ಸುಲಭವಾಗಿ ಊಹಿಸಬಹುದು. ಈ ಭೂಮಿಯ ಬಹಳಷ್ಟು ದೇಶಗಳಲ್ಲಿ ತುರುಸಿನ ಸಮಸ್ಯೆಗಳಿವೆ. ಜನಾಂಗೀಯ ದ್ವೇಷ, ಬಡತನ, ಧಾರ್ಮಿಕ ತ್ವೇಷ, ಭಯೋವಾದ, ಲಿಂಗ ತಾರತಮ್ಯ, ಮಾಲಿನ್ಯ, ಶಸ್ತ್ರಾಸ್ತ್ರ ಪೈಪೋಟಿ ಇತ್ಯಾದಿ. ಇವೆಲ್ಲವುಗಳಿಂದ ದೂರವಾಗಿ, ಶಾಂತಿ, ಸಹಬಾಳ್ವೆ ಮತ್ತು ನೆಮ್ಮದಿಯ ದೇಶವೊಂದನ್ನು ಕಟ್ಟಿಕೊಳ್ಳುವ ಬಯಕೆ ನಮಗೆಲ್ಲ ಇದ್ದೇ ಇದೆ. ಆದರೆ ಭೂಮಿಯನ್ನು ಬಿಟ್ಟು ಓಡುವುದು ತಮ್ಮ ಉದ್ದೇಶ ಅಲ್ಲವೆಂದು ಅಸ್ಗಾರ್ಡಿಯಾ ವಕ್ತಾರರು ನಿಚ್ಚಳವಾಗಿ ಹೇಳುತ್ತಾರೆ. ಬದಲಿಗೆ, ಭೂಮಿಯನ್ನು ರಕ್ಷಿಸುವುದು ಹೊಸ ದೇಶದ ಮೊದಲ ಆದ್ಯತೆ ಆಗಿರುತ್ತದೆ. ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸದ ಹಾಗೆ ಹೊರಗಿನಿಂದಲೇ ಕಣ್ಗಾವಲು ಇಡುವುದು; ಕಕ್ಷೆಯಲ್ಲಿ ಸುತ್ತುತ್ತಿರುವ ತಿಪ್ಪೆರಾಶಿಯನ್ನು ಸಂಗ್ರಹಿಸಿ ಮರುಬಳಕೆಗೆ ಅನುಕೂಲ ಮಾಡುವುದು; ಜೊತೆಗೆ ಬಾಹ್ಯಾಕಾಶದ ಪ್ರಯೋಜನಗಳು ಭೂಮಿಯ ಎಲ್ಲ ದೇಶಗಳಿಗೂ ಸಮಾನವಾಗಿ ಸಿಗುವಂತೆ ಮಾಡುವುದು ಇದರ ಪ್ರಮುಖ ಉದ್ದೇಶವಾಗಿರುತ್ತದೆ. ಈಗಿನ ವ್ಯವಸ್ಥೆಯಲ್ಲಿ ಹೆಚ್ಚೆಂದರೆ 20 ರಾಷ್ಟ್ರಗಳು ಬಾಹ್ಯಾಕಾಶ ತಂತ್ರಜ್ಞಾನವನ್ನು ತಮ್ಮದಾಗಿಸಿಕೊಂಡಿವೆ. ಅದು ಎಲ್ಲರಿಗೂ ಲಭಿಸುವಂತಾಗಬೇಕು. ಅದುವರೆಗೆ ಈ ಹೊಸ ದೇಶದ ಹೆಚ್ಚಿನವರೆಲ್ಲ ಭೂಮಿಯ ಮೇಲೆಯೇ ಇರುತ್ತಾರೆ. ಇನ್ನು ಹತ್ತಿಪ್ಪತ್ತು ವರ್ಷಗಳ ನಂತರ ಉದ್ಯಮ, ಪ್ರವಾಸೋದ್ಯಮಗಳ ಅವಕಾಶ ಚೆನ್ನಾಗಿ ತೆರೆದುಕೊಂಡಾಗ ಅಸ್ಗಾರ್ಡಿಯಾ ಪೌರರಿಗೆ ವಿಶೇಷ ಆದ್ಯತೆ ಸಿಗಲಿದೆ.

ಅದೆಲ್ಲ ಸರಿ, ಉದ್ದೇಶಗಳೆಲ್ಲ ಉದಾತ್ತವಾಗಿಯೇ ಇವೆ. ಅದರಾಚೆ ಏನಾದರೂ ಬೇರೆ ಸಂಗತಿಗಳಿವೆಯೆ? ಇದನ್ನು ಪತ್ತೆಹಚ್ಚಬೇಕಿದ್ದರೆ ಭೂಮಿಯ ಮೇಲಿನ ಇನ್ನೊಂದು ಅತಿಪುಟ್ಟ ರಾಷ್ಟ್ರ ಲಕ್ಸೆಂಬರ್ಗ್‌ನ ಈಚಿನ ವಿದ್ಯಮಾನಗಳನ್ನು ಗಮನಿಸಬೇಕು. ಜರ್ಮನಿ, ಫ್ರಾನ್ಸ್ ಮತ್ತು ಆಸ್ಟ್ರಿಯಾ ದೇಶಗಳ ನಡುವೆ ಸೂಜಿಮೊನೆ ಗಾತ್ರದ ಈ ದೇಶ ಇತ್ತೀ
ಚೆಗೆ ಬಾಹ್ಯಾಕಾಶದಲ್ಲಿ ಕ್ಷುದ್ರಗ್ರಹಗಳ ಗಣಿಗಾರಿಕೆಯಲ್ಲಿ ಇನ್ನಿಲ್ಲದ ಆಸಕ್ತಿ ತೋರಿಸುತ್ತಿದೆ. ಬಾಹ್ಯಾಕಾಶದ ಗಣಿಗಾರಿಕೆಗೆ ಮುಂದೆ ಬರುವ ಯಾವುದೇ ವಿಶ್ವಾಸಾರ್ಹ ಕಂಪನಿಗೆ ಬೇಕಿದ್ದರೂ ತಾನೇ ಸಾಲ ಕೊಡುತ್ತೇನೆ ಎಂದು ಘೋಷಿಸಿದೆ. ಅಷ್ಟೇ ಅಲ್ಲ, ಅಂಥ ಕಂಪನಿಗಳು ಬೇರೆ ಗ್ರಹಗಳಿಂದ ಕಿತ್ತು ತರುವ ಸಂಪತ್ತಿನಲ್ಲಿ ತನಗೇನೂ ಪಾಲು ಬೇಡ (ಸಾಲಕ್ಕೆ ಬಡ್ಡಿ ಕೊಟ್ಟರೆ ಸಾಕು) ಎಂತಲೂ ಹೇಳಿದೆ. ಉತ್ಸಾಹಿ ಕಂಪನಿಗಳು ಲಕ್ಸೆಂಬರ್ಗ್ ಜೊತೆ ಕೈಜೋಡಿಸಲು ಒಂದೊಂದೇ ಹೆಜ್ಜೆ ಇಡುತ್ತಿವೆ.

ಕ್ಷುದ್ರಗ್ರಹಗಳಲ್ಲಿ ಅಪಾರ ಸಂಪತ್ತಿದೆ ಎಂದು ನಂಬಲಾಗುತ್ತಿದೆ. ಮಂಗಳ ಮತ್ತು ಗುರು ಗ್ರಹಗಳ ನಡುಣ ಕಕ್ಷೆಯಲ್ಲಿ ಹತ್ತಾರು ಸಾವಿರ ಸಂಖ್ಯೆಯಲ್ಲಿ ಸುತ್ತುತ್ತಿರುವ ಅಕರಾಳ ವಿಕರಾಳ ಬಂಡೆಗಳಲ್ಲಿ ಕೆಲವಂತೂ ಚಿನ್ನ, ಬೆಳ್ಳಿ, ಪ್ಲಾಟಿನಂ, ನಿಕ್ಕೆಲ್, ಕೊಬಾಲ್ಟ್ ಮುಂತಾದ ಅಪರೂಪದ ಮೂಲವಸ್ತುಗಳ ಖಜಾನೆಯೇ ಆಗಿರಬಹುದು. ವಜ್ರವೂ ಸಿಕ್ಕೀತೇನೊ. ಪ್ಲಾಟಿನಮ್, ಲೀಥಿಯಂ ಮುಂತಾದ ದ್ರವ್ಯಗಳು ವಜ್ರಕ್ಕಿಂತ ಬೆಲೆ ಬಾಳುತ್ತವೆ. ಕೆಲವು ಕ್ಷುದ್ರ ಗ್ರಹಗಳಲ್ಲಿ ಬರೀ ಹಿಮದ ರಾಶಿ ಇರಬಹುದು. ಹಿಮವೂ (ಅಂದರೆ ನೀರೂ) ಅಲ್ಲಿ ಚಿನ್ನಕ್ಕಿಂತ ಅಮೂಲ್ಯವಾದದ್ದು ತಾನೆ? ಹಿಮದ ಮಧ್ಯೆ ಠಿಕಾಣಿ ಹೂಡಿದರೆ ಅದೊಂದು ಬಾಹ್ಯಾಕಾಶದ ಪೆಟ್ರೋಲ್ ಬಂಕ್ ಥರಾ ನಿರಂತರ ಹಣ ನೀಡುವ ಸಂಪತ್ತೇ ಆದೀತು. ಆ ಬಂಕ್‌ನಲ್ಲಿ ನೀರು ಮತ್ತು ಅದರಿಂದ ಪಡೆಯುವ ಹೈಡ್ರೊಜನ್ ಶಕ್ತಿ ಎರಡನ್ನೂ ಇತರ ಬಾಹ್ಯಾಕಾಶ ಉದ್ಯಮಿಗಳಿಗೆ ಮಾರಬಹುದು. ಆಚಿನ ಗ್ರಹಗಳಲ್ಲಿ ವಸಾಹತು ಸ್ಥಾಪನೆ ಮಾಡಬೇಕೆಂಬ ಕನಸುಗಳಿಗೆ ಈಚಿನ ವರ್ಷಗಳಲ್ಲಿ ಅತಿ ಶೀಘ್ರವಾಗಿ ರೆಕ್ಕೆಪುಕ್ಕಗಳು ಮೂಡುತ್ತಿವೆ. ಅಮೆರಿಕ, ರಷ್ಯ, ಐರೋಪ್ಯ ಸಂಘ, ಚೀನಾ, ಜಪಾನ್, ಇಂಡಿಯಾ, ಈಗ ಆಸ್ಟ್ರೇಲಿಯಾ ಕೂಡ ಈ ಪೈಪೋಟಿಯಲ್ಲಿ ಸೇರ್ಪಡೆ ಆಗಿದೆ. ಅವುಗಳ ಜೊತೆ ‘ಸ್ಪೇಸ್ ಎಕ್ಸ್’ ಕಂಪನಿಯ ಸಂಸ್ಥಾಪಕ ಈಲಾನ್ ಮಸ್ಕ್, ಅಮೆಝಾನ್ ಕಂಪನಿಯ ಸಂಸ್ಥಾಪಕ ಜೆಫ್ರಿ ಬೆಝೋಸ್ ಸೇರಿದಂತೆ ಸುಮಾರು 12 ಖಾಸಗಿ ಕಂಪನಿಗಳಮಾಲಿಕರು ಇನ್ನೂ ಜೋರಾಗಿ ರೆಕ್ಕೆಪುಕ್ಕ ಕಟ್ಟಿಕೊಳ್ಳಲು ಸಜ್ಜಾಗುತ್ತಿದ್ದಾರೆ.

ನಾವೀಗ ವಿಜ್ಞಾನ- ತಂತ್ರಜ್ಞಾನ ರಂಗವನ್ನು ಬಿಟ್ಟು ತುಸು ಈಚೆ ಬರಬೇಕು. ಖಾಸಗಿ ಕಂಪನಿಗಳಿಗೆ ಬಾಹ್ಯಾಕಾಶ ಗಣಿಗಾರಿಕೆ ಮಾಡಲು ಹಣ ಬೇಕು. ಆದರೆ ಅಂಥ ಗಣಿ
ಗಾರಿಕೆ ತೀರ ಅನಿಶ್ಚಿತ, ಅನೂಹ್ಯ ಉದ್ಯಮವಾಗಿದ್ದು, ಮುಂದಿನ 10-15ವರ್ಷಗಳಲ್ಲಿ ಏನೂ ಲಾಭ ತರಲಿಕ್ಕಿಲ್ಲ. ಹಾಗಾಗಿ ಯಾರೂ ಬಂಡವಾಳ ಹಾಕಲು ಮುಂದೆ
ಬರುತ್ತಿಲ್ಲ. ಸರಕಾರಗಳೇ ಬಂಡವಾಳ ಹೂಡಬೇಕು. ಅವು ತಮ್ಮದೇ ರಾಷ್ಟ್ರೀಯ ಯೋಜನೆಗೆ (ಉದಾ: ನಾಸಾ, ಇಸ್ರೊ ಅಥವಾ ಇಎಸ್‌ಎಗೆ) ಹಣ ಹೂಡುತ್ತವೆ ವಿನಾ ಖಾಸಗಿಗೆ ಸಾಲ ಕೊಡುವುದಿಲ್ಲ. ಆದರೆ ಬಾಹ್ಯಾಕಾಶ ರಂಗದ ಗಂಧಗಾಳಿ ಇಲ್ಲದ ಲಕ್ಸೆಂಬರ್ಗ್ ರಾಷ್ಟ್ರ ಸಾಲ ಕೊಡಲು ಮುಂದಾಗಿದೆ. ನಮಗೆ ಗೊತ್ತಿದೆ, ಅದೊಂದು ಬೇನಾಮಿ ಸಂಪತ್ತನ್ನು ಬಚ್ಚಿಡಲು ನೆರವಾಗುವ ದೇಶ. ಜನಸಂಖ್ಯೆ ಆರು ಲಕ್ಷಕ್ಕಿಂತ ತುಸು ಕಮ್ಮಿ; ಅದರಲ್ಲೂ ಅರ್ಧಕ್ಕರ್ಧ ಬೇರೆ ರಾಷ್ಟ್ರಗಳದ್ದೇ ಜನರು. ವಿಸ್ತೀರ್ಣ ನಮ್ಮ ಗೋವಾಕ್ಕಿಂತ ಚಿಕ್ಕದು. ಪ್ರಜೆಗಳ ತಲಾ ಆದಾಯ ಅಮೆರಿಕದಕ್ಕಿಂತ ಇಮ್ಮಡಿ, ಅಂದರೆ ಒಂದು ಲಕ್ಷ ಡಾಲರ್.

ರಾಜಮನೆತನದ ಮುಷ್ಟಿಯಲ್ಲಿರುವ ಸರ್ಕಾರವೂ ಭಾರೀ ಶ್ರೀಮಂತ. ಅದು ಖಾಸಗಿ ಕಂಪನಿಗಳಿಗೆ ಸಾಲ ಕೊಟ್ಟು ಆಮೇಲೆ ತಾನೇ ಮಿಲಿಟರಿಯ ನೆರವಿನಿಂದ ಕ್ಷುದ್ರಗ್ರಹಗಳ ಸಂಪತ್ತನ್ನೆಲ್ಲ ಮುಟ್ಟುಗೋಲು ಹಾಕುತ್ತದೆಂಬ ಭಯವೂ ಇಲ್ಲ. ಏಕೆಂದರೆ ಅದರ ‘ಮಿಲಿಟರಿ’ ಎಂದರೆ ಸಾವಿರ ಜನರ ಪಡೆ ಅಷ್ಟೆ. ಹೈದರಾಬಾದಿಗೆ ಬಂದ ಇವಾಂಕಾಳ ಭದ್ರತಾ ಪಡೆಯೇ ಅದಕ್ಕಿಂತ ಎಷ್ಟೋ ಪಟ್ಟು ದೊಡ್ಡದಿತ್ತು. ಹಾಗಾಗಿ ಖಾಸಗಿ ಕಂಪನಿಗಳ ಸಂಪತ್ತನ್ನು ಲಕ್ಸೆಂಬರ್ಗ್ ಸ್ವಾಹಾ ಮಾಡಲಾರದು. ಈ ಎಲ್ಲ ಅನುಕೂಲಗಳ ಬಾವುಟ ಬೀಸುತ್ತ ಲಕ್ಸೆಂಬರ್ಗ್‌ನ ರಾಜಕುಮಾರ, ಯುವರಾಣಿ ಮತ್ತು ಅಲ್ಲಿನ ಉಪಪ್ರಧಾನಿ ಶ್ನೀಡರ್ ಬೇರೆ ಬೇರೆ ದೇಶಗಳ ಬಾಹ್ಯಾಕಾಶ ಕಂಪನಿಗಳನ್ನು ಆಕರ್ಷಿಸಲು ಓಡಾಡುತ್ತಿದ್ದಾರೆ. (ಅಪ್ರಸ್ತುತ ಎನಿಸಿದರೂ ‘ದಿ ಗಾರ್ಡಿಯನ್’ ಪತ್ರಿಕೆ ಈಚೆಗೆ ಈ ಮಾಹಿತಿಯನ್ನೂ ಬಹಿರಂಗ ಮಾಡಿತ್ತು: ಶ್ನೀಡರ್ ಸ್ವತಃ ಬೇರೊಂದು ಗಂಡಸನ್ನು ಮದುವೆಯಾಗಿದ್ದಾನೆ).

ತಂತ್ರಜ್ಞಾನ ಬೆಳೆಯುತ್ತಿದೆ, ಬಂಡವಾಳವೂ ಸಿಗಲಿಕ್ಕಿದೆ ಎಂದುಕೊಳ್ಳೋಣ. ಆಗ ಇನ್ನೊಂದು ದೊಡ್ಡ ಸಮಸ್ಯೆ ಎದುರಾಗಲಿದೆ. ಕ್ಷುದ್ರಗ್ರಹಗಳ ಸಂಪತ್ತನ್ನು ಖಾಸಗಿಯವರು ಎತ್ತಿ ತರಬಹುದೆ? ಅದು ಲೂಟಿ ಆದೀತಲ್ಲವೆ? ಈ ಸಮಸ್ಯೆ ಬರಬಾರದೆಂದೇ 1967ರಲ್ಲಿ ಎಲ್ಲ ರಾಷ್ಟ್ರಗಳೂ ಸೇರಿ ‘ಬಾಹ್ಯಾಕಾಶ ಒಪ್ಪಂದ’ಕ್ಕೆ ಸಹಿ ಹಾಕಿವೆ. ಈಗ 50ನೇ ವರ್ಷಕ್ಕೆ ಕಾಲಿಟ್ಟಿರುವ ಆ ಒಪ್ಪಂದದ ಪ್ರಕಾರ ‘ಚಂದ್ರನೂ ಸೇರಿದಂತೆ ಸೌರ ಮಂಡಲದ ಯಾವುದೇ ಕಾಯದ ಮೇಲೆ ಯಾವ ದೇಶವೂ ಸ್ವಾಮ್ಯ ಪಡೆಯಬಾರದು. ಬಾಹ್ಯಾಕಾಶ ಸಂಶೋಧನೆಯ ಲಾಭವೆಲ್ಲ ಎಲ್ಲ ದೇಶಗಳಿಗೂ ಸಮನಾಗಿ ಸಿಗಬೇಕು; ಯಾರೂ ಅದನ್ನು ಯುದ್ಧರಂಗವಾಗಿ ಬಳಸಬಾರದು’ ಎಂಬೆಲ್ಲ ಬಿಗಿ ನಿಯಮಗಳಿವೆ. ಆದರೆ ಅಲ್ಲಿ ಗಣಿಗಾರಿಕೆ ಮಾಡಬಹುದೆ? ಅದರ ಸಂಪತ್ತು ಯಾರಿಗೆ ಸೇರಬೇಕು? ಈ ಪ್ರಶ್ನೆ ಅಂದು ಯಾರಿಗೂ ಹೊಳೆದಿರಲೇ ಇಲ್ಲ! ಯಾಕೆಂದರೆ ಗಣಿಗಾರಿಕೆಯ ಸಾಧ್ಯತೆಯನ್ನು ಯಾರೂ ಯೋಚಿಸಿರಲಿಲ್ಲ. ಹಾಗಾಗಿ ಅಲ್ಲೊಂದು ವಿಶಿಷ್ಟವಾದ ಬಿಕ್ಕಟ್ಟು ತಲೆದೋರಿದೆ. ಅಮೆರಿಕದ ಕಂಪನಿಯೊಂದು ಲಕ್ಸೆಂಬರ್ಗ್‌ನ ಹಣದೊಂದಿಗೆ ಗಣಿಗಾರಿಕೆ ಮಾಡಿದರೆ ಅದಕ್ಕೆ ತೆರಿಗೆ ವಿಧಿಸಬೇಕಾದವರು ಯಾರು? ಇಂದಲ್ಲ ನಾಳೆ ಈ ಕ್ಲಿಷ್ಟ ಸಮಸ್ಯೆಯ ಮೇಲೆ ಭಾರೀ ಜಟಾಪಟಿ ಆಗಲಿದೆ.

ಬಾಹ್ಯಾಕಾಶದಲ್ಲಿ ತೇಲಲು ಹೊರಟ ಅಸ್ಗಾರ್ಡಿಯಾ ಎಂಬ ಕೃತಕ ದೇಶವನ್ನು ಈ ಕೋನದಲ್ಲಿ ನೋಡಬೇಕು. ಅದು ಈ ಪೃಥ್ವಿಯ ನಿಯಮಗಳಿಂದ ಹೊರತಾದ ಸ್ವತಂತ್ರ ರಾಷ್ಟ್ರವಾದರೆ ಇಲ್ಲಿನ ಒಡಂಬಡಿಕೆಗಳು, ಒಪ್ಪಂದಗಳು ಅದಕ್ಕೆ ಅನ್ವಯಿಸುತ್ತವೆಯೆ? ಅನ್ವಯಿಸುವುದಿಲ್ಲ ಎಂದಾದರೆ, ಇಂದು ಅದರ ಪೌರತ್ವ ಪಡೆದವರು (ಕಳೆದ ವರ್ಷ ಅಸ್ಗಾರ್ಡಿಯಾ ಕುರಿತು ಇದೇ ಅಂಕಣದಲ್ಲಿ ವಿವರಗಳು ಪ್ರಕಟವಾದ ನಂತರ ಅನೇಕ ಕನ್ನಡಿಗರು ಅದರ ಪೌರತ್ವ ಪಡೆದಿದ್ದಾರೆ) ಬಾಹ್ಯಾಕಾಶದಲ್ಲಿ ಗಣಿಗಾರಿಕೆ ಮಾಡಹೊರಟ ಕಂಪನಿಗಳ ಶೇರುದಾರರಾಗಿ ಲಾಭವನ್ನು ತಮ್ಮ ಲೆಕ್ಕಕ್ಕೆ ಜಮೆ ಮಾಡಿಸಿಕೊಳ್ಳಬಹುದೆ? ಇವೆಲ್ಲ ದೂರಭವಿಷ್ಯದ ಪ್ರಶ್ನೆಗಳೇನೊ ಹೌದು.

ಕ್ಷುದ್ರಗ್ರಹಗಳ ಗಣಿಗಾರಿಕೆಗೆ ತಂತ್ರಜ್ಞಾನ ಸಿದ್ಧವಾಗಿದ್ದರೆ ಸಾಲದು, ಅದಕ್ಕೆ ಬೇಕಾದ ಕಾನೂನುಗಳೂ ರೂಪಿತವಾಗಬೇಕು. ಆದರೆ ಆ ಯಾವ ಚಿಂತೆಯನ್ನೂ ಮಾಡದೇ ಅಸ್ಗಾರ್ಡಿಯಾ ದೇಶದ ಮೊದಲ ಇಟ್ಟಿಗೆ ಮೇಲಕ್ಕೇರಿದೆ. ನಿಜಕ್ಕೂ, ಅದು ಇಟ್ಟಿಗೆ ಗಾತ್ರದ್ದೇ ಆಗಿರುವ ನ್ಯಾನೊ ಸ್ಯಾಟಲೈಟ್. ಅದರಲ್ಲಿ ಅರ್ಧ ಟಿಬಿ ಸಾಮರ್ಥ್ಯದ ಸ್ಮರಣಕೋಶ ಮಾತ್ರವಿದ್ದು, ಅದರಲ್ಲಿ ಪೌರರ ಹೆಸರು, ಪರಿಚಯ ಪಟ್ಟಿ ಇದೆ. ಅವರೆಲ್ಲ ಸೇರಿ ಇನ್ನೆರಡು ತಿಂಗಳಲ್ಲಿ ಸರ್ಕಾರ ರಚಿಸಿದರೂ ಆ ದೇಶಕ್ಕೆ ವಿಶ್ವಸಂಸ್ಥೆ ಮಾನ್ಯತೆ ಕೊಟ್ಟೀತೆ ಎಂಬ ಪ್ರಶ್ನೆಗೆ ಉತ್ತರ ನಿಗೂಢವಾಗಿಯೇ ಇದೆ.

ಅಂತೂ ಒಡಲಲ್ಲಿ ದೊಡ್ಡ ಸಂಪತ್ತನ್ನು ಇಟ್ಟುಕೊಂಡು ಬಾಹ್ಯಾಕಾಶದಲ್ಲಿ ತಿರುಗುತ್ತಿರುವ ಕ್ಷುದ್ರ ಗ್ರಹಗಳಿಗೆ ಕನ್ನ ಹಾಕಲು ಪುಟ್ಟ ದೇಶವೊಂದು ಸನ್ನದ್ಧವಾಗಿದೆ. ಅದಕ್ಕಿಂತ ಚಿಕ್ಕದಾದ, ಈಗಿನ್ನೂ ಭ್ರೂಣ ಸ್ಥಿತಿಯಲ್ಲಿರುವ ಅರೆವಾಸ್ತವ ‘ರಾಷ್ಟ್ರ’ವೊಂದು ಅದೇ ಸಂಪತ್ತಿನ ಮೇಲೆ ಕಣ್ಣಿಟ್ಟಂತೆ ಕ್ಷಣಗಣನೆ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT