ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್ಟೇನೆಂದರೂ ಬಿಡದೀ ಬೀದಿಯೊಳಗಿನ ಭೀತಿ

Last Updated 15 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಇಂದು ಡಿಸೆಂಬರ್ 16. ಇಂದಿಗೆ ಸರಿ­ಯಾಗಿ ಎರಡು ವರ್ಷಗಳ ಹಿಂದೆ  ಚಲಿ­ಸುವ ಬಸ್‌ನಲ್ಲಿ 23 ವರ್ಷದ ವಿದ್ಯಾರ್ಥಿನಿ ಮೇಲೆ ಐವರು ಸಾಮೂಹಿಕ ಅತ್ಯಾಚಾರವೆಸ­ಗಿದ್ದರು. ನಂತರ ಆ ವಿದ್ಯಾರ್ಥಿನಿ ಬದುಕುಳಿಯ­ಲಿಲ್ಲ. ರಾಜಧಾನಿ ದೆಹಲಿಯಲ್ಲಿ ನಡೆದ ಈ ಪ್ರಕರಣ ರಾಷ್ಟ್ರದಾದ್ಯಂತ  ಉಕ್ಕಿಸಿದ ಆಕ್ರೋಶದ ಅಲೆ ಮರೆಯಲಾದೀತೆ?  ಇದಕ್ಕೆ ಸ್ಪಂದಿಸುವುದು  ಆಗಿನ ಯುಪಿಎ ಸರ್ಕಾರಕ್ಕೆ ಅನಿವಾರ್ಯ­ವಾಯಿತು. ಸರ್ಕಾರ ರಚಿಸಿದ ನ್ಯಾಯಮೂರ್ತಿ ಜೆ.ಎಸ್. ವರ್ಮಾ ಸಮಿತಿ, ಅತ್ಯಂತ ಕಡಿಮೆ ದಾಖಲೆ ಅವಧಿಯಲ್ಲಿ ಅತ್ಯಾಚಾರ ಕಾನೂನು ಬದಲಾವಣೆಗಳಿಗೆ ಶಿಫಾರಸು ಮಾಡಿ ವರದಿ ನೀಡಿತು. ವರ್ಮಾ ಸಮಿತಿಯ ಅನೇಕ ಶಿಫಾರಸು­ಗಳನ್ನು ಅಂಗೀಕರಿಸಿದ ಸರ್ಕಾರ ಕಾನೂನುಗಳಿಗೆ ತಿದ್ದುಪಡಿ ಮಾಡಿತು. ಕಾನೂನು ಬಿಗಿಯಾ­ಯಿತು.  ಆದರೆ? ಅದರಿಂದ ಮಹಿಳೆಯರಿನ್ನು ಸುರಕ್ಷಿತರು ಎಂಬಂಥ ಭಾವನೆ ಬರೀ ನೀರಿನ ಗುಳ್ಳೆಯಾಯಿತು.

ಮೊನ್ನೆ ಡಿಸೆಂಬರ್ 5ರಂದು ಅದೇ ದೆಹಲಿ­ಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ. ಈ ಬಾರಿ ಬಸ್‌ನಲ್ಲಲ್ಲ. ಖಾಸಗಿ ಟ್ಯಾಕ್ಸಿಯಲ್ಲಿ. ಈ ಬಾರಿಯೂ ಸರ್ಕಾರ ತಕ್ಷಣ ಕ್ರಮ ಕೈಗೊಂಡಿತು. ಆದರೆ ಯಾರ ಮೇಲೆ? ಮೊಬೈಲ್ ಆ್ಯಪ್ ಆಧಾರಿತ  ಉಬರ್‌ ಟ್ಯಾಕ್ಸಿ ಸೇವೆಗೇ ದೆಹಲಿ­ಯಲ್ಲಿ ನಿಷೇಧ ಹೇರಿತು. ಜೊತೆಗೆ, ಬೇರೆ ರಾಜ್ಯಗಳೂ ಈ ಕ್ರಮ ಅನುಸರಿಸಬೇಕೆಂದು ನಿರ್ದೇಶನ ನೀಡಿತು. ಆದರೆ ಮಹಿಳೆಯ ಸುರಕ್ಷತೆ ಇದರಿಂದ ಸಾಧ್ಯವೇ ಎಂಬ ಪ್ರಶ್ನೆಗೆ ಸರ್ಕಾರವೇ ಉತ್ತರಿಸಬೇಕು.

ಈ ಘಟನೆಯನ್ನೇ ಗಮನಿಸಿ. ಡಿಸೆಂಬರ್ 5­ರಂದು ಆಗಿನ್ನೂ ರಾತ್ರಿ 9.30 ಗಂಟೆ­ಯಾ­ಗಿತ್ತು. ಪ್ರತಿಷ್ಠಿತ ಕಂಪೆನಿಯಲ್ಲಿ ಎಕ್ಸಿಕ್ಯುಟಿವ್ ಆಗಿರುವ 26 ವರ್ಷದ ಆ ಯುವತಿ ಮನೆಗೆ ಹೋಗಲು ಹತ್ತಿದ್ದು ಸಾರ್ವಜನಿಕ ಬಸ್ ಅಲ್ಲ. ಸುರಕ್ಷಿತ  ಟ್ಯಾಕ್ಸಿ. ಹೋಗುತ್ತಿದ್ದದ್ದು ದೆಹಲಿ ಹೊರವಲ­ಯ­ಕ್ಕಲ್ಲ, ನಗರದೊಳಗೇ ಇದ್ದ ತನ್ನ ಮನೆಗೆ.  ದೆಹಲಿ ಚೆನ್ನಾಗಿ ಪರಿಚಯವಿರುವಂತಹ ದೆಹಲಿಯ ಯುವತಿ ಆಕೆ. ಪಯಣದ ಮಧ್ಯದಲ್ಲಿ ಸ್ವಲ್ಪ ಕಾಲ ಜೊಂಪು ಹತ್ತಿ ನಿದ್ದೆಗೆ ಜಾರಿದ್ದೇ ಆಕೆಯ ಅಪರಾಧವಾಯಿತೆ? ಏಕೆಂದರೆ  ಎಚ್ಚರವಾದಾಗ ಚಾಲಕ ಆಕೆಯ ಪಕ್ಕ ಇದ್ದ.  ಕೊಲೆ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ ಆತ ಆಕೆಯನ್ನು ಮನೆ ಬಳಿ ಬಿಟ್ಟುಹೋದ.

ಸುರಕ್ಷಿತವೆಂದು ಉಬರ್ ಕ್ಯಾಬ್ ಅನ್ನು  ಆಯ್ಕೆ ಮಾಡಿಕೊಂಡ ಆಕೆ ಹಾಗೂ ಆಕೆ­ಯಂತಹ ಸಾವಿರಾರು ಮಹಿಳೆಯರಿಗೆ ಮತ್ತೊಂದು ಸುರಕ್ಷಿತ ಎನಿಸಿದ ಸಾರಿಗೆಯೂ  ಕೈ­ಕೊಟ್ಟಂತಹ ಭಾವ. ಸಾರ್ವಜನಿಕ ಸ್ಥಳಗಳು, ಸೌಕರ್ಯಗಳನ್ನು ಬಳಸಲು ಮಹಿಳೆ ಹಿಂಜರಿಯಬೇಕಾದಂತಹ ಅಸುರಕ್ಷತತೆಯ ಈ ಭಾವನೆ ಅಳಿಯುವುದು ಎಂದಿಗೆ?

ಈ ಘಟನೆಗೆ ಸಂಬಂಧಿಸಿದಂತೆ  ಸಾರಿಗೆ ಇಲಾಖೆ  ಹಾಗೂ ಪೊಲೀಸ್ ಇಲಾಖೆಗಳು  ಪರ­ಸ್ಪರ ಟೀಕೆಗಳ ಕೆಸರೆರಚಾಟಕ್ಕಿಳಿದವು. ಈ ಪ್ರಕ್ರಿ­ಯೆಯಲ್ಲಿ ಸರ್ಕಾರದ ನಿಯಮಾವಳಿಗಳ ಅನು­ಷ್ಠಾನದಲ್ಲಿನ ನಿರ್ಲಕ್ಷ್ಯ  ಮತ್ತೊಮ್ಮೆ ಚರ್ಚೆಗೆ ಬಂತು. ಅಸುರಕ್ಷಿತ ನಗರಗಳ ಕುರಿತೂ ಚರ್ಚೆ ನಡೆದಿದೆ. ಆದರೆ ಈ ಎಲ್ಲಾ ಚರ್ಚೆಗಳಲ್ಲಿ ಅತ್ಯಾಚಾರ ಸಂತ್ರಸ್ತೆಗಾದ ವಿಶ್ವಾಸಘಾತಕತನ­ವನ್ನು ಮರೆಯುವುದು ಹೇಗೆ?

ದೆಹಲಿ ವಿದ್ಯಾರ್ಥಿನಿಯ ಮೇಲೆ ಡಿಸೆಂಬರ್ 16ರಂದು ನಡೆದ ಸಾಮೂಹಿಕ ಅತ್ಯಾಚಾರ ಹಾಗೂ  ಆಕೆಯ ಸಾವಿನ ಎರಡನೇ ವರ್ಷಾ­ಚರಣೆ ಸಂದರ್ಭದಲ್ಲೇ ಮತ್ತೊಂದು ಅತ್ಯಾ­ಚಾರದ ಕಥೆ ಚರ್ಚೆಯ ಕೇಂದ್ರಬಿಂದುವಾಗಿ­ರು­ವುದು ವಿಪರ್ಯಾಸ. ಕಾಕತಾಳೀಯ ಎಂದರೆ ಡಿಸೆಂಬರ್ 16ರ ಸಾಮೂಹಿಕ ಅತ್ಯಾಚಾರ ವಿರುದ್ಧದ ಪ್ರತಿಭಟನಾ ಪ್ರದರ್ಶನಗಳಲ್ಲಿ ಈ ಅತ್ಯಾಚಾರ ಸಂತ್ರಸ್ತೆಯೂ ಪಾಲ್ಗೊಂಡಿದ್ದರು.
ನಿಜ ಹೇಳಬೇಕೆಂದರೆ, ತಂತ್ರಜ್ಞಾನ ಆಧಾರಿತ ಉತ್ತರದಾಯಿತ್ವ ಇರುವ ರೇಡಿಯೊ ಟ್ಯಾಕ್ಸಿಗಳು ಸುರಕ್ಷಿತವಾದ ಸಾರಿಗೆ ವ್ಯವಸ್ಥೆ ಎನಿಸಿವೆ.  ಜಿಪಿಎಸ್ ವ್ಯವಸ್ಥೆಯಿಂದಾಗಿ ಗ್ರಾಹಕರಿಗೆ ಮಾತ್ರ­ವಲ್ಲ ಕಂಪೆನಿಗೂ ಚಾಲಕರ ಗೊತ್ತುಗುರಿ ತಿಳಿ­ಯುವ ವ್ಯವಸ್ಥೆ  ಇಲ್ಲಿದೆ. ಆದರೆ ಇಂತಹ ವ್ಯವ­ಸ್ಥೆಯೂ  ಹಳಿ ತಪ್ಪಲು ಕಾರಣವೇನು?

ಲೈಂಗಿಕ ಅಪರಾಧಗಳ ನಿರ್ವಹಣೆಯಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿನ ದೌರ್ಬಲ್ಯಗಳು ಇದಕ್ಕೆ ಎಷ್ಟರಮಟ್ಟಿಗೆ ಕಾರಣ?  ಈ ಚಾಲಕ ಶಿವ­ಕುಮಾರ್ ಯಾದವ್ ಈ ಹಿಂದೆ ಅತ್ಯಾಚಾರ ಆರೋಪದ ಮೇಲೆ ಬಂಧಿತನಾಗಿ ಏಳು ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದ ಎಂಬುದನ್ನು ಆತನನ್ನು ಚಾಲಕನಾಗಿ ನೇಮಿಸಿಕೊಂಡ ಕಂಪೆನಿಗೆ ಮೊದ­ಲಿಗೇ ತಿಳಿದಿದ್ದರೆ?  ಇನ್ನೊಂದು ಪ್ರಕರಣದಲ್ಲಿ ಈ ಚಾಲಕ ಜಾಮೀನು ಪಡೆದು ಹೊರಬಂದಿದ್ದ ಎಂಬುದು ತಿಳಿದಿದ್ದರೆ? ಇದೇ ಚಾಲಕನ ವರ್ತನೆ ಬಗ್ಗೆ  ಅನಿವಾಸಿ ಭಾರತೀಯ ಮಹಿಳೆ­ಯೊಬ್ಬರು ದಾಖಲಿಸಿದ್ದ ದೂರನ್ನು ಗಂಭೀರ­ವಾಗಿ ಪರಿಗಣಿಸಿ­ದ್ದಿದ್ದರೆ? ಈ ಅವಘಡ ತಡೆಯ­ಬಹುದಿತ್ತೆ ಎಂಬುದು ಪ್ರಶ್ನೆ. ಈ ಘಟನೆ ಪದರ ಪದರ­ಗಳಾಗಿ ನಿರ್ಲಕ್ಷ್ಯಗಳ  ಹೊಸ ಸತ್ಯಗಳನ್ನು ಅನಾವರಣಗೊಳಿಸುತ್ತಿದೆ.

21ನೇ ಶತಮಾನದ ಮಹಿಳೆ  ಹಲವು  ನೆಲೆ­ಗಳಲ್ಲಿ ತನ್ನ ಅಸ್ಮಿತೆಗಳನ್ನು ಅರಸುತ್ತಿದ್ದಾಳೆ. ಈವ­ರೆಗಿನ ಸ್ಥಾಪಿತ ಮೌಲ್ಯಗಳನ್ನು ಮುರಿದು ಕಟ್ಟುವ ಪ್ರಕ್ರಿಯೆಯಲ್ಲಿ ಅವಳು ಭಾಗಿಯಾಗಿದ್ದಾಳೆ. ದುಡಿಯುವ ಸ್ಥಳಗಳಲ್ಲಿ ಮಹಿಳಾ ಅಧಿಕಾರಿ­ಗಳು, ಕುಟುಂಬದ ಆಧಾರವಾಗಿ  ಕುಟುಂಬ­ವನ್ನು ಸಲಹುತ್ತಿರುವ ಹೆಣ್ಣುಮಕ್ಕಳು ಇಂದು ಸಮಾಜದಲ್ಲಿ ಕಾಣಸಿಗುತ್ತಾರೆ. ಆದರೆ ಸಾಮಾ­ಜಿಕವಾಗಿ, ಸಾಂಸ್ಕೃತಿಕವಾಗಿ  ಮಹಿಳೆ ಕುರಿತಾದ ದೃಷ್ಟಿಕೋನ ಮಾತ್ರ ಏನೇನೂ  ಬದಲಾಗಲಿಲ್ಲ. ಮಹಿಳೆ ಏನು ಮಾಡಬಹುದು,  ಏನು ಮಾಡ­ಬಾರದು ಎಂಬೆಲ್ಲಾ ವಿಚಾರಗಳು ಮತ್ತದೇ ಪುರಾತನ ಮೌಲ್ಯಗಳಡಿ ಗಿರಕಿ ಹೊಡೆಯುತ್ತವೆ.  ಆರ್ಥಿಕ ಪರಿವರ್ತನೆಗಳಾಗಿದ್ದರೂ ತಾವಿರುವ ನೆಲೆಗಳು ಬದಲಾಗಲಿಲ್ಲ ಎಂಬ ಸತ್ಯವನ್ನು ದಿನ­ನಿತ್ಯ ಇಂದಿನ ಮಹಿಳೆ ಮುಖಾಮುಖಿ­ಯಾಗು­ತ್ತಿದ್ದಾಳೆ.

ಮನೆ ಹೊಸಿಲು ದಾಟಿ ರಸ್ತೆಗೆ ಕಾಲಿಡುವ ಮಹಿಳೆ ಸಾರ್ವಜನಿಕ ಸ್ಥಳಗಳಲ್ಲಿ ಅನುಭವಿಸುವ ‘ಸಿಂಡ್ರೆಲ್ಲಾ’ ರೀತಿಯ ಚಡಪಡಿಕೆಯಿಂದ  ಮುಕ್ತಿಯೇ ಇಲ್ಲವೆ? ಕತ್ತಲಲ್ಲಿ ರಸ್ತೆಗಳಲ್ಲಿ ನಡೆ­ಯುವಾಗ,  ವಾಹನಗಳನ್ನು ಚಲಾಯಿಸುವಾಗ, ಬಸ್ ನಿಲ್ದಾಣಗಳಲ್ಲ್ಲಿ ಕಾಯುವಾಗ ಅಥವಾ ಸಾರ್ವಜನಿಕ ಸಾರಿಗೆಗಳಲ್ಲಿ ಪಯಣಿಸುವಾಗ  ಈ ಭೀತಿ ಅಥವಾ ಚಡಪಡಿಕೆ  ಬೆನ್ನಿಗಂಟಿರುತ್ತದೆ.  ಸದಾ ಎಚ್ಚರ ವಹಿಸಬೇಕು. ಆಕೆ ತಾನೇ ತಾನಾಗಿ ಇರುವಂತಿಲ್ಲ. ಬಿಝಿಯಾಗಿರುವಂತೆ ತೋರಿಸಿ­ಕೊಳ್ಳುವುದು ಅಗತ್ಯ. ತಾನೇನೂ ಸುಮ್ಮನೆ ರಸ್ತೆಯಲ್ಲಿಲ್ಲ. ರಸ್ತೆಯಲ್ಲಿ ಓಡಾಡುವುದ­ಕ್ಕೊಂದು  ಉದ್ದೇಶವಿದೆ ಎಂಬುದನ್ನು ಆಕೆ ಸಾಬೀತು­ಪಡಿಸುತ್ತಲೇ ಇರಬೇಕು. ಸೆಲ್ ಫೋನ್‌­ಗಳು ಬಂದ ಮೇಲೆ ಇಂತಹ ಚಡಪಡಿಕೆಗಳಿಗೆ ಒಂದಷ್ಟು ಪರಿಹಾರ ದೊರಕಿದೆ. ಸೆಲ್ ಫೋನ್ ನಲ್ಲಿ ಮಾತನಾಡುತ್ತಾ ಯಾರೊಡನೆಯೊ ಸಂವ­ಹನದಲ್ಲಿ ಇರುವುದರ ಸಂಕೇತವನ್ನು ಹರಿಯ­ಬಿಡುವುದರಿಂದ ಒಂದಷ್ಟು ಸುರಕ್ಷತೆಯ ಭಾವ­ವನ್ನು ಕಂಡುಕೊಳ್ಳುವುದು ಸಾಧ್ಯವಾಗುತ್ತಿದೆ.

ಮನೆ ಹಾಗೂ ಜಗತ್ತು  ಎಂಬ ಪರಿಕಲ್ಪನೆ­ಯಲ್ಲಿ ಸಾರ್ವಜನಿಕ ಜಗತ್ತಿನಲ್ಲಿ ತನ್ನ ಅಸ್ಮಿತೆ ಕಂಡು­ಕೊಳ್ಳಲು ಹೆಣ್ಣು ಪಡಬೇಕಾದ ಪಡಿ­ಪಾಟಲು  ಧ್ವನಿತವಾಗುತ್ತದೆ. ಹೊರ ಪ್ರಪಂಚ, ಅರಳೀಕಟ್ಟೆಯ ಜಗುಲಿ ಏನಿದ್ದರೂ ಪುರುಷರಿಗೇ ಸೇರಿದ್ದು.  ರಾತ್ರಿವೇಳೆ ಸಾರ್ವಜನಿಕ ಸಾರಿಗೆ­ಗಳಲ್ಲಿ ಪಯಣಿಸುವುದು, ಪಾರ್ಕ್‌ಗಳಲ್ಲಿ ಅಡ್ಡಾ­ಡುವುದು, ರಸ್ತೆ ಬದಿ ಅಂಗಡಿಗಳಲ್ಲಿ  ತಿನ್ನುವುದು ಎಲ್ಲವೂ ಪುರುಷರಿಗೆ ಸಹಜ.  ಸಾರ್ವಜನಿಕ ಸ್ಥಳ­ಗಳು ಅವರಿಗೆ ಸೇರಿದ್ದು. ಅದೇ ಭಾವನೆ ಮಹಿ­ಳೆಯೂ ಹೊಂದುವುದು ಸಾಧ್ಯವಿದೆಯೆ? ‘ರಾತ್ರಿಯ ವೇಳೆ  ನಿಮ್ಮ ಹೆಣ್ಣುಮಕ್ಕಳನ್ನು  ಏಕೆ ಹೊರ ಕಳಿಸುತ್ತೀರಿ’ ಎಂದು ನಮ್ಮ ಪೊಲೀಸ್ ಅಧಿಕಾರಿಗಳೇ ಪ್ರಶ್ನಿಸುತ್ತಾರೆ!  ಹಾಗೆ ಆಕೆ ಮಾಡಿ­ದಲ್ಲಿ ಸಮಾಜದ  ನಿಯಮವನ್ನು ಆಕೆ  ಉಲ್ಲಂಘಿ­ಸುತ್ತಿದ್ದಾಳೆ  ಎಂದು ಅರ್ಥ.  ಹಾಗಾದಾಗ ಅವಳ ಇತರ ಅನೇಕ ಹಕ್ಕುಗಳೂ  ಇಲ್ಲವಾಗು­ತ್ತವೆ. ಅವು ಆಕೆಯ ಘನತೆಯ ಹಕ್ಕು, ಸ್ವಾಯ­ತ್ತತೆಯ ಹಕ್ಕು, ತನ್ನ ದೇಹದ ಮೇಲಿನ ಹಕ್ಕು ಇತ್ಯಾದಿ.

ನಮ್ಮ ಸಂವಿಧಾನ ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ. ಆದರೆ ಅನೇಕ ಕಾನೂ­ನುಗಳು ಪುರುಷನನ್ನು  ಮುಖ್ಯವಾಗಿ ಕಂಡು  ಹೆಣ್ಣನ್ನು ಎರಡನೇ ದರ್ಜೆ ಅಥವಾ ಅವ­ಲಂಬಿತಳಾಗಿಯೇ ಕಾಣುತ್ತವೆ. ಕುಟುಂಬದ ಕಣ್ಣಿನ ಮೂಲಕವಾಗಿಯೇ ಮಹಿಳೆಯ ಹಕ್ಕು­ಗಳನ್ನು ವಿಶ್ಲೇಷಿಸುವುದು ಮಾಮೂಲು. ಹೆಣ್ಣಿಗೆ ಕುಟುಂಬವೇ ಪ್ರಧಾನ  ಹಾಗೂ ಸೂಕ್ತ ಸ್ಥಳ ಎಂಬ ಪರಿಕಲ್ಪನೆ ಇದೆ. ಕುಟುಂಬದೊಳಗಿನ ಸುರ­ಕ್ಷತೆ, ಭದ್ರತೆ ಸಾರ್ವಜನಿಕ ಸ್ಥಳದಲ್ಲಿ ಸಿಗುವುದು ಸಾಧ್ಯವಿಲ್ಲ.  ಹೀಗಾಗಿ  ಮಹಿಳೆಗೆ ಮನೆಯೇ ಸುರ­ಕ್ಷತೆಯ ಸ್ಥಳ ಎಂಬುದಾಗುತ್ತದೆ.  ಆದರೆ ಈ ವಿಚಾ­ರವೂ ಸತ್ಯವಲ್ಲ. ಮನೆಗಳಲ್ಲಿ ಅತ್ಯಾಚಾರ­ಗಳು  ನಡೆಯುವುದಿಲ್ಲವೆ?

ಹಾಗಾದರೆ ಈ ವಿಚಾರದ ನಿರ್ವಹಣೆ ಹೇಗೆ? ಮಹಿಳೆಗೆ ಸಾರ್ವಜನಿಕ ಸ್ಥಳ, ಜಾಗ ಅಥವಾ ವಲಯ ಎಂಬುದು  ಆಕೆಯ ಚಲನಶೀಲತೆಗೆ ಸಂಬಂಧಿಸಿದ್ದಾಗುತ್ತದೆ. ಇದು ಸಾರ್ವಜನಿಕ ಬದುಕಿಗೆ ಆಕೆಯನ್ನು ಮುಖಾಮುಖಿ­ಯಾಗಿಸುವ ನೆಲೆ. ಮಹಿಳೆಯ ಸಾಮರ್ಥ್ಯವನ್ನು ಕಟ್ಟುವ ಇಡೀ ಪ್ರಕ್ರಿಯೆ, ಆಕೆ ಪಡೆದುಕೊಳ್ಳು­ವಂತಹ  ಶಿಕ್ಷಣ, ಆರೋಗ್ಯ,  ಜೀವನೋಪಾಯ ಇತ್ಯಾದಿಗಳನ್ನು ಅವಲಂಬಿಸಿದೆ. ಅದಕ್ಕೆ ಆಕೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದು ಅನಿ­ವಾರ್ಯ. ಆದರೆ ಪಕ್ಕದ ಊರಿಗೆ ಹೋಗಿ ವಿದ್ಯಾ­ಭ್ಯಾಸ ಪಡೆಯಬೇಕು ಎಂದಾದಲ್ಲಿ ಅನೇಕ ಹಳ್ಳಿ­ಗಳ ಹೆಣ್ಣುಮಕ್ಕಳಿಗೆ ಶಿಕ್ಷಣ ಮೊಟಕಾಗುವುದು ಇಂದಿಗೂ ಕಹಿವಾಸ್ತವ. ಇಲ್ಲಿ ಮತ್ತೆ ಸಾರ್ವ­ಜನಿಕ ಸ್ಥಳಗಳಲ್ಲಿ ಆಕೆಯ ಸಂಚಾರ ಅಥವಾ ಸಾರಿಗೆ­ಗಳಲ್ಲಿ ಪಯಣಿಸುವಾಗ ಆಕೆಯ ಸುರ­ಕ್ಷತೆ ದೊಡ್ಡ ಪ್ರಶ್ನೆಯಾಗುತ್ತದೆ. ಪಕ್ಕದ ಊರಿಗೆ ಹೋಗಬೇಕಾದ ಹೆಣ್ಣುಮಗಳ ಚಲನಶೀಲತೆ­ಯನ್ನೂ ಮೊಟಕುಗೊಳಿಸುವಂತಹ  ಇಂತಹ  ಕ್ರಮ­ದಿಂದಾಗಿ ಆಕೆಯ  ಸಾಮರ್ಥ್ಯ ಹೆಚ್ಚಾಗುವು­ದಿಲ್ಲ. ಈ  ವಿಷ ವರ್ತುಲದಲ್ಲಿ ಲಿಂಗ ತಾರತಮ್ಯ ಹಾಗೆಯೇ ಮುಂದುವರಿಯುತ್ತದೆ. 

ಆಫ್ಘಾನಿಸ್ತಾನದ ತಾಲಿಬಾನ್ ಆಡಳಿತ­ದಲ್ಲಂತೂ ಸ್ವತಂತ್ರವಾಗಿ ಪುರುಷರ ಜೊತೆ­ಯಿಲ್ಲದೆ ಮನೆಯಿಂದಾಚೆಗೂ ಒಂಟಿಯಾಗಿ ಹೆಣ್ಣುಮಕ್ಕಳು ಕಾಲಿರಿಸುವಂತಿರಲಿಲ್ಲ. ಹೆಣ್ಣಾಗಿ ಹುಟ್ಟುವುದೇ ತಪ್ಪೆನಿಸುವ ಸ್ಥಿತಿ. ಹೀಗಾಗಿ ಅಮ್ಮ, ಅಜ್ಜಿ ಇರುವ ತನ್ನ ಕುಟುಂಬವನ್ನು ಸಲ­ಹಲು ಗಂಡು­ಹುಡುಗನ ವೇಷ ಹಾಕಿ­ಕೊಂಡು ದುಡಿಯಲು ಹೋಗುವ ಹೆಣ್ಣು­ಮಗಳೊಬ್ಬಳ ಕಥೆ ಕಳೆದವಾರ ಬೆಂಗಳೂರಿನಲ್ಲಿ ಮುಕ್ತಾಯ­ವಾದ ಅಂತರರಾಷ್ಟ್ರೀಯ ಚಿತ್ರೋ-­ತ್ಸವ­ದಲ್ಲಿ ಪ್ರದರ್ಶನವಾದ ಆಫ್ಘಾನಿಸ್ತಾನದ ‘ಒಸಾಮಾ’ ಸಿನಿಮಾದ್ದಾಗಿತ್ತು. 

ಹೊರಜಗತ್ತು ಗಂಡಿನದು ಎಂಬ ಸಂದೇಶವೇ ಅಮಾನವೀಯ. ಸುರಕ್ಷತೆಗಾಗಿ ಗಂಡಿನಂತೆ ಕಾಣಿಸಿಕೊಳ್ಳಬೇಕಾದ ಇಂತಹ ಪ್ರಯತ್ನ ಹೊಸದೇನಲ್ಲ.  ಕಚೇರಿ ಕೆಲಸ ಮುಗಿಸಿ ತಡರಾತ್ರಿ  ಕಾರು ಅಥವಾ ದ್ವಿಚಕ್ರ­ವಾಹನ ಚಲಾಯಿಸಿಕೊಂಡು  ಮನೆಗೆ ಹೋಗುವ ವೇಳೆ ವಾಹನ ಚಲಾಯಿಸುತ್ತಿ­ರು­ವಾಕೆ ಮಹಿಳೆ ಎಂಬುದು ಗೊತ್ತಾಗದಂತೆ  ತಲೆ­ಗೂದಲು ಮರೆ ಮಾಡಿ ಪ್ಯಾಂಟ್ ಹಾಗೂ ದೊಡ್ಡ ಕೋಟ್‌ಗಳನ್ನು ಧರಿಸಿ ಪುರುಷನಂತೆ ಕಾಣಿಸಿಕೊಳ್ಳುವ ಪ್ರಯತ್ನವನ್ನು ಮಾಡುವ ಮಹಿಳೆಯರು ನಗರಗಳಲ್ಲಿ ನಮ್ಮ ನಡುವೆ ಇದ್ದಾರೆ.

ಹಿಂಸಾತ್ಮಕ ಗಡಿರೇಖೆಗಳನ್ನೆಳೆಯುವ ಇಂತಹ ಸಾಮಾ­ಜಿಕ ಹಾಗೂ ಸಾಂಸ್ಕೃತಿಕ ತಡೆ­ಗಳಿಂದಾಗಿ ತಮ್ಮ ಪೂರ್ಣ ಸಾಮರ್ಥ್ಯಗಳನ್ನು ಬಳಸಿಕೊಳ್ಳು­ವಲ್ಲಿ ಮಹಿಳೆಯರು ವಿಫಲರಾಗು­ತ್ತಾರೆ. ಇದು ಅವರ ಪರಿಣಾಮಕಾರಿ  ಆರ್ಥಿಕ ಹಾಗೂ ರಾಜ­ಕೀಯ ಪಾಲ್ಗೊಳ್ಳುವಿಕೆಗೂ ತಡೆ­ಯೊಡ್ಡುತ್ತದೆ. ಸಾರ್ವಜನಿಕ ಸ್ಥಳಗಳು ಪುರುಷ­ರಿಗೇ ಸೇರಿದ್ದೆಂಬ ಪಿತೃ ಪ್ರಧಾನ ಸಂಸ್ಕೃತಿಯ ಗ್ರಹಿಕೆ ತೊಲಗಬೇಕು. ಸಮಾ­ಜದ ಎಲ್ಲಾ ಸಾಂಸ್ಥಿಕ ನೆಲೆಗಳಲ್ಲಿ ಅಂತ­ರ್ಗತ­ವಾಗಿ­ರುವ ಪಿತೃಪ್ರಧಾನ ಮನೋಧರ್ಮ­ಗಳ ಬದಲಾ­ವಣೆ­ಯಾಗದೆ ಈ ಪರಿಸ್ಥಿತಿ ಸುಧಾ­ರಿಸುವುದಿಲ್ಲ. 

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT