ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆತ್ತಲಾದರೆ ಕತ್ತಲೊಂದೇ ಸಿಕ್ಕುವುದು ಇಲ್ಲಿ…

Last Updated 29 ಜೂನ್ 2016, 19:30 IST
ಅಕ್ಷರ ಗಾತ್ರ

ಪೊಲೀಸರ ಗಮನ ತಮ್ಮ ಮೇಲೆ ಹೆಚ್ಚು ಹೊತ್ತು ನಿಲ್ಲದಂತೆ ಪರಿಸ್ಥಿತಿ ನಿಭಾಯಿಸಿ ಅವರನ್ನು ವಾಪಸು ಕಳಿಸಿದ ಮೇಲೆ ಮುಂದೆ ಏನು ಮಾಡಬೇಕೆಂಬ ಜಿಜ್ಞಾಸೆ ಪೀಜಿಯ ವಾಸಿಗಳಲ್ಲಿ ಶುರುವಾಯಿತು. ತನ್ನಿಂದ ಉಂಟಾದ ಸಂಕೀರ್ಣ ಪರಿಸ್ಥಿತಿಯ ಅರಿವಿಲ್ಲದೆ ಶಹೀನ ಮಲಗಿದ್ದಳು.

​ ಅವಳನ್ನು ಮಲಗಿಸುವುದು ಸುಲಭದ ಮಾತೇನಿರಲಿಲ್ಲ. ಕೆಲಸದ ಹೆಂಗಸು ನಾಗಸುಂದರಿ, ತಲೆ ಬೋಳಿಸಿಕೊಂಡು ಬೆತ್ತಲೆ ನಿಂತಿದ್ದ ಶಹೀನಳನ್ನು ನೋಡಿ ಗಡಗಡ ನಡುಗುತ್ತ ಪೊರಕೆ ಬಿಸಾಡಿ ಓಡಿ ಹೋದ ಮೇಲೆ ರೂಮಿನೊಳಕ್ಕೆ ಹೋಗಲು ಯಾರಿಗೂ ಧೈರ್ಯ ಆಗಿರಲಿಲ್ಲ.

ಆದರೆ ಸರಳಾ ಬಹುಷಃ ತಮಗೆ ತಿಳಿಯುವ ಮುನ್ನ ಒಳಗೆ ಹೋದರೂಂತ ಕಾಣಿಸುತ್ತೆ. ಅವಳನ್ನು ನೋಡಿದ ಮೇಲೆ ಸರಳಾಗೆ ತನ್ನ ತಾಯಿ ಕೊನೆಯ ದಿನಗಳಲ್ಲಿ ಹೀಗೆ ಮತಿವಿಕಲ್ಪಕ್ಕೆ ಒಳಗಾಗಿ ಜೀವಚ್ಛವವಾದ ಸಂಗತಿ ಬೇಡವೆಂದರೂ ನೆನಪಿಗೆ ಬಂತು.

ಇದ್ದಕ್ಕಿದ್ದಂತೆ ಅವರ ಕಣ್ಣಿನಲ್ಲಿ ನೀರು ತುಂಬಿತು. ಇತ್ತ ನಾಗಸುಂದರಿ ಹುಚ್ಚು ಹಿಡಿದವಳಂತೆ ಓಡಿ ಹೋಗುವಾಗ ರಸ್ತೆಯಲ್ಲಿ ಯಾರಿಗಾದರೂ ಇಲ್ಲಿ ನಡೆಯುತ್ತಿರುವುದನ್ನು ಹೇಳಿಬಿಟ್ಟಾಳು ಎನ್ನುವ ಆತಂಕ ಪೀಜಿ ಓನರ್ರನ್ನು ಕಾಡುತ್ತಿತ್ತು.

ಅವಳು ಬಾಯಿ ಬಡಕೊಂಡು ಹೋದರೆ ಪರಿಸ್ಥಿತಿ ಇರುವುದಕ್ಕಿಂತ ಇನ್ನೂ ಹೆಚ್ಚು ಕಾಂಪ್ಲಿಕೇಟ್ ಆಗಿ ತಮ್ಮ ಕೈ ಮೀರಿದ ಸಂಗತಿಗಳು ಘಟಿಸಿ ಬಿಟ್ಟರೆ ನೆರೆಯವರ ವಿರೋಧ ಕಟ್ಟಿಕೊಂಡು ಇದನ್ನು ನಡೆಸಲು ಸಾಧ್ಯವಿಲ್ಲ.

ಪೀಜಿ ಬಂದ್ ಮಾಡಬೇಕಾಗಿ ಬರುತ್ತೆ. ಹಾಗೇನಾದರೂ ಆದರೆ ಇಲ್ಲಿಂದ ಹುಟ್ಟುತ್ತಿರುವ ದುಡಿಮೆಯ ಬುಡಕ್ಕೆ ಕೊಡಲಿ ಬೀಳುತ್ತದೆ. ದಿನಾ ಸಂಜೆಯಾದರೆ ಕುಡಿದು ಕೂರುವ ಗಂಡನಿಂದ ಈ ವಿಷಯದಲ್ಲಿ ಯಾವ ಸಹಾಯವನ್ನೂ ನಿರೀಕ್ಷಿಸಲಾಗದು.

ಪೀಜಿ ನಿಂತು ಹೋದರೆ ಆಗಬಹುದಾಗಿದ್ದ ಅತಿ ಘೋರ ಪರಿಣಾಮವೆಂದರೆ ಅದೇ ಮನೆಗೆ ಓನರ್ ಅತ್ತೆ ಮಾವ ಬಂದು ಸೆಟಲ್ ಆಗಿಬಿಡುವುದು. ಓನರಮ್ಮನ ಮನೆಯ ಮೇಲಿನ ಮನೆಯೇ ಪೀಜಿಯಾಗಿತ್ತಲ್ಲ? ಅದು ವಿಶಾಲವಾಗಿದ್ದ ಮೂರು ರೂಮಿನ ಮನೆ. ಆ ಮನೆಯ ಮೇಲೆ ಓನರಮ್ಮನ ಅತ್ತೆ-ಮಾವ ಯಾವತ್ತಿನಿಂದಲೂ ಕಣ್ಣಿಟ್ಟಿದ್ದರು.

‘ಇನ್ನೇನು ವಯಸ್ಸಾದ್ರೆ ಅಲ್ಲಿಗೇ ಬಂದುಬಿಡ್ತೀವಿ’ ಅಂತ ಆಗಾಗ ಮಡಿಕೇರಿಯಿಂದ ಫೋನ್ ಮಾಡಿದಾಗಲೆಲ್ಲ ಹೇಳುತ್ತಿದ್ದರೆ ಅದು ಓನರಮ್ಮನಿಗೆ ಧಮ್ಕಿ ರೀತಿಯಲ್ಲೇ ಕೇಳಿಸುತ್ತಿತ್ತು. ಹೃದಯದ ಬಡಿತ ಏರುಪೇರಾಗುತ್ತಿತ್ತು. ಸಾಯಂಕಾಲ ಜಾಸ್ತಿ ವಿಸ್ಕಿ ಒಳಗೆ ಹೋಗುತ್ತಿತ್ತು. ಕೆಳಗಿನ ಮನೆಯಲ್ಲಿ ಗಂಡ ಹೆಂಡತಿ ನಡುವೆ ನಡೆಯುವ ಜಗಳ ಮೇಲೆ ಇದ್ದ ಪೀಜಿಗೆ ಅನಾಯಾಸ ಕೇಳಿಸುತ್ತಿತ್ತು. ಆದರೆ ಅದು ಕೊಡವ ಭಾಷೆಯಲ್ಲಿ ಇರುತ್ತಿದ್ದ ಕಾರಣ ಯಾರಿಗೂ ಅರ್ಥ ಆಗುತ್ತಿರಲಿಲ್ಲ.

ಧ್ವನಿಯ ಗ್ರಾಫು ನೋಡಿಕೊಂಡು ‘ಈಗ ಒಬ್ಬರು ಇನ್ನೊಬ್ಬರಿಗೆ ಹೊಡೀಬಹುದೇನೋ ಕಣೇ!’  ಅಂತ ಜಗಳ ತಾರಕಕ್ಕೆ ಏರಿದಾಗ ವಿಜಿ ಚಿತ್ರಾಗೆ ಹೇಳುತ್ತಿದ್ದಳು. ಹೊಡೆದರೆ ಓನರಮ್ಮನೇ ತನ್ನ ಗಂಡನಿಗೆ ಹೊಡೀಬಹುದು ಅಂತ ಒಂದು ಅಂದಾಜು. ಯಾಕೆಂದರೆ ಓನರ್ ಮಹಾಶಯ ಕುಡಿದೂ ಕುಡಿದೂ ಗಿಡ ಸುಟ್ಟಂತೆ ತೆಳ್ಳಗಾಗಿಬಿಟ್ಟಿದ್ದ.

ಓನರಮ್ಮ ವಯಸ್ಸಿಗೆ ತಕ್ಕಂತೆ ಪ್ರೌಢಿಮೆ ಹೊಂದಿ, ಸಿಟ್ಟು ಸೆಡವು ಎಲ್ಲವನ್ನೂ ಅಗಾಧವಾಗಿ ಬೆಳೆಸಿಕೊಂಡು ಆಗಾಗ ಜಗಳಕ್ಕೆ ನಿಂತಾಗ ಯಾರು ದೈಹಿಕವಾಗಿ ಬಲಶಾಲಿ ಎನ್ನುವುದನ್ನು ಸಾಬೀತು ಪಡಿಸುತ್ತಲೂ ಇದ್ದರು.

ಹಾಗಾಗಿ ಜಗಳ ಶುರುವಾದರೆ ವಾಚ್ಯ ಭಾಗಕ್ಕಿಂತ ಕಿರುಚಾಟ ಹೆಚ್ಚಾಗುವ ಹಂತ ಮತ್ತು ಅದರ ಜೊತೆ ಯಾವುದಾದರೂ ದೈಹಿಕ ಹಲ್ಲೆಯ ಸೂಚನೆ ಹೊತ್ತ ದನಿಯ ಏರಿಳಿತದ ಮೇಲೆ ಜಗಳ ಯಾವ ಹಂತದಲ್ಲಿದೆ ಅಂತ ಪೀಜಿ ವಾಸಿಗಳು ನಿರ್ಧರಿಸುತ್ತಿದ್ದರು.

ವೀಕೆಂಡಾದರೆ ‘ಈಗ್ ಹೊಡೀತಾರೆ! ನೋಡು ಬೇಕಾದ್ರೆ! ಅಂಕಲ್ ಏನಾದ್ರೂ ಮತ್ತೆ ಜೋರಾಗಿ ಮಾತಾಡಿದ್ರೆ ಬಿತ್ತು ಅಂತಲೇ ಲೆಕ್ಕ’ ಅಂತೆಲ್ಲ ಊಹಿಸುತ್ತಾ, ಟೈಂ ಪಾಸ್ ಮಾಡುತ್ತಾ ಊಟ ಮಾಡುತ್ತಿದ್ದರು. ವಾರದ ಉಳಿದ ದಿನ ಬೆಳಿಗ್ಗೆ ಎದ್ದರೆ ಬೆನ್ನು ನೇರ ಮಾಡಿಕೊಂಡು ಕೆಲಸಕ್ಕೆ ಓಡಬೇಕಲ್ಲಾ? ಆಗ ಕೆಳಗಿನ ಮನೆಯ ಜಗಳವೇನು, ಕೆಳಗಿನ ಮನೆಯಲ್ಲಿ ಕೊಲೆ ಆದರೂ ನೋಡಲು ಪುರುಸೊತ್ತಿರುತ್ತಿರಲಿಲ್ಲ.

ಶಹೀನ ಘಟನೆ ಕೂಡ ಭಾನುವಾರ ನಡೆದದ್ದು ಒಂಥರಾ ದೈವ ನಿಯಾಮಕ ಎನ್ನಬೇಕು. ಉಳಿದ ದಿನ ಆಗಿದ್ದರೆ ಅವಳು ಯಾವ ಅನಾಹುತ ಮಾಡಿಕೊಂಡಿದ್ದರೂ ಯಾರಿಗೂ ಗೊತ್ತಾಗುತ್ತಿರಲಿಲ್ಲ.

ಯಾಕೆಂದರೆ ಬೆಳಿಗ್ಗೆ ಪೀಜಿ ಬಿಟ್ಟ ಎಲ್ಲರೂ ಬರುವುದು ತಡ ಸಂಜೆಗೇ; ಮನೆಗೆ ಬಂದ ಮೇಲೆ ಅವರಿವರ ಕತೆ ಕೇಳುವುದರಲ್ಲೇ ಸಮಯ ಹೋಗುತ್ತಿತ್ತು.

ಶಹೀನಳನ್ನು ನೋಡಿದ ಸರಳಾ ತಕ್ಷಣ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಏನು ಬೇಕೋ ಅದನ್ನು ಮಾಡಿದರು. ಒಂದು ಸಾರಿ ಮಾತ್ರ ಅವರ ಕೈ ಮೀರಿ ಪೊಲೀಸರಿಗೆ ಫೋನ್ ಹೋಯಿತು ಅನ್ನುವುದನ್ನು ಬಿಟ್ಟರೆ, ಉಳಿದದ್ದೆಲ್ಲಾ ಅವರು ಪ್ಲಾನ್ ಮಾಡಿದಂತೆಯೇ ನಡೆಯಿತು.

  ಓನರ್ ಹತ್ತಿರ ಮಾತಾಡಿ ಸರಳಾ ಶಹೀನಳನ್ನು ತಾವು ನೋಡಿಕೊಳ್ಳುವುದಾಗಿಯೂ, ಆದರೆ ಅದಕ್ಕೆ ಮುಂಚೆ ಒಬ್ಬ ಡಾಕ್ಟರನ್ನು ಮನೆಗೆ ಕರೆಸಬೇಕು ಎಂದು ಹೇಳಿದರು.
ಓನರಮ್ಮನ ಹತ್ತಿರದ ಸಂಬಂಧಿಗಳ್ಯಾರೋ ಚಿನ್ಮಯ ಮಿಷನ್ ಆಸ್ಪತ್ರೆಯಲ್ಲಿ ಪರಿಚಯದ ಡಾಕ್ಟರ ಹತ್ತಿರ ಸಂಪರ್ಕದಲ್ಲಿದ್ದರು. ಅವರ ಮೂಲಕ ಡಾಕ್ಟರನ್ನು ಅರ್ಧ ಗಂಟೆಯಲ್ಲಿ ಕರೆಸುವ ವ್ಯವಸ್ಥೆ ಆಯಿತು. ಬರುವಾಗ ಸೆಡೆಟಿವ್ ಅಂದರೆ ನಿದ್ರೆ ಬರಿಸುವ ಇಂಜೆಕ್ಷನ್ ತನ್ನಿ ಅಂತ ಕೇಳಿಕೊಂಡಿದ್ದರಿಂದ ಡಾಕ್ಟರು ತಯಾರಾಗೇ ಬಂದಿದ್ದರು. ಶಹೀನ ಗಲಾಟೆ ಮಾಡಲಿಲ್ಲ, ಸುಸ್ತಾಗಿತ್ತೇನೋ ಎನ್ನುವಂತೆ  ಇಂಜೆಕ್ಷನ್ ಕೊಡಿಸಿಕೊಂಡು ನಿದ್ದೆ ಮಾಡಿದಳು.

ಡಾಕ್ಟರು ಸಂಜೆ ಮತ್ತೊಮ್ಮೆ ಬರುತ್ತೇನೆ ಅಂತ ಹೇಳಿ ಹೊರಟರು. ಅವರು ಬರುವ ಸ್ವಲ್ಪ ಹೊತ್ತಿಗೆ ಮುನ್ನ ಪೊಲೀಸರು ಬಂದು ಹೋದದ್ದೂ ಆಯಿತು. ಶಹೀನ ನಿದ್ರಾವತಾರದಲ್ಲಿ ಇದ್ದುದರಿಂದ ನಡೆದದ್ದರ ಸುಳಿವೂ ಸಿಗಲಿಲ್ಲ.

ಆವತ್ತು ರಾತ್ರಿ ಎಂಟು ಗಂಟೆಗೆ ಸರಳಾ, ಓನರಮ್ಮ ಶಹೀನಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಸೆಡೆಟಿವ್ ಬಲವಾದ್ದರಿಂದಲೋ ಏನೋ ಶಹೀನ ಮಂಪರಿನಲ್ಲೇ ಆಸ್ಪತ್ರೆಗೆ ಬಂದಳು.

ಅವಳದ್ದು ಮಾನಸಿಕ ಸಮಸ್ಯೆಯಿಂದ ಉದ್ಭವಿಸಿದ ನಡವಳಿಕೆ ಅಂತ ಡ್ಯೂಟಿ ಡಾಕ್ಟರು ಹೇಳಿದರು. ಸೈಕಿಯಾಟ್ರಿಸ್ಟ್ ಸದ್ಯಕ್ಕೆ ಇಲ್ಲ, ಬೆಳಿಗ್ಗೆ ಕರೆಸುತ್ತೇವೆ ಅಲ್ಲಿಯವರೆಗೂ ಬೇಕಾದರೆ ಇಲ್ಲಿಯೇ ಅಡ್ಮಿಟ್ ಮಾಡಿ ಅಂತ ಸಲಹೆ ಮಾಡಿದರು.

ಸರಳಾಗೆ ಅದೇ ಸರಿ ಅನ್ನಿಸಿತು. ಆದರೆ ಇವಳನ್ನು ಇಲ್ಲಿ ಬಿಟ್ಟರೆ ರಾತ್ರಿ ಅವಳ ಜೊತೆ ನಿಲ್ಲುವವರು ಯಾರು ಅಂತ ಪ್ರಶ್ನೆ ಉದ್ಭವವಾಯಿತು. ಆಸ್ಪತ್ರೆಯಿಂದ ಪೀಜಿಗೆ ಫೋನ್ ಮಾಡಿ, ರಿಸೀವ್ ಮಾಡಿದ ವಿಜಿಗೆ ಸರಳಾ ವಿಷಯ ಹೀಗಿದೆ ಎಂದು ವಿವರಿಸಿದರು. ವಿಜಿ ತಾನು ಬೇಕಾದರೆ ಅಲ್ಲಿಗೆ ಬಂದು ರಾತ್ರಿ ಆಸ್ಪತ್ರೆಯಲ್ಲಿ ಉಳಿಯುತ್ತೇನೆ ಎಂದಳು.

ಒಂದು ನಿಮಿಷ ಯೋಚಿಸಿ ಸರಳಾ ‘ಬೇಡ, ಅಕಸ್ಮಾತ್ ಅವಳಿಗೆ ಎಚ್ಚರ ಆಗಿಬಿಟ್ಟು ಮತ್ತೆ ವ್ಯಗ್ರಳಾದರೆ ನಿನಗೆ ಗೊತ್ತಾಗಲ್ಲ. ನಾನೇ ಇರ್ತೀನಿ. ಬೆಳಿಗ್ಗೆ ಬಂದು ಮಾತಾಡ್ತೀನಿ. ಆಫೀಸಿಗೆ ನೀನು, ಚಿತ್ರಾ ರಜಾ ಹಾಕಿ’  ಎಂದು ಹೇಳಿದರು.

ಚಿತ್ರಾ ಮತ್ತು ಸೂಸನ್‌ಗೆ ವಿಜಿ ವಿಷಯ ತಿಳಿಸಿದಳು. ನಾಳೆ ರಜೆ ಹಾಕಬೇಕಂತೆ, ಸರಳಕ್ಕ ಹೇಳಿದಾರೆ ಅಂತ ಚಿತ್ರಾಗೆ ವಿಶೇಷ ಅರಿಕೆ ಮಾಡಿಕೊಂಡಳು. ಸೂಸನ್‌ಗೆ ಯಾವ ಆಫೀಸಿನ ಹಂಗೂ ಇರಲಿಲ್ಲವಲ್ಲ?

‘ಆ ಶಹೀನ ಇಲ್ಲಿಗೆ ಬಂದಾಗಲೇ ಇವಳಿಗೆ ಏನೋ ಹೆಚ್ಚು-ಕಡಿಮೆ ಆಗಿದೆ ಅಂತ ಅನ್ನಿಸಿತ್ತು. ಅವಳ ಮನೆಯೋರಿಗೆ ವಿಷಯ ಗೊತ್ತಿಲ್ವಾ? ಒಬ್ಬಳನ್ನೇ ಓಡಾಡೋಕೆ ಹೆಂಗೆ ಬಿಟ್ಟಿದಾರೆ?’  ಅಂತ ಸೂಸನ್ ವಿಷಯ ಪ್ರಸ್ತಾಪ ಮಾಡಿಯೇ ಬಿಟ್ಟಳು.

ಬೆಳಿಗ್ಗೆಯಿಂದ ಒಂದರ ಹಿಂದೆ ಇನ್ನೊಂದು ಘಟನೆ ನಡೆಯುತ್ತಾ ಇದ್ದುದರಿಂದ ಈ ದಿಕ್ಕಿನಲ್ಲಿ ಯಾರೂ ಯೋಚಿಸಿರಲಿಲ್ಲ. ಆದರೆ, ಸೂಸನ್ ಹೇಳಿದ ರೀತಿಯಲ್ಲೇ ಶಹೀನಳ ಮನೆಯವರ ವಿಷಯ ಸ್ವಲ್ಪ ಸೋಜಿಗದ ಥರವೇ ಕಂಡಿತು.

‘ಹೌದಲ್ಲಾ? ಹೆಂಗ್ ಈ ಥರ ಬಿಟ್ಟಿದಾರೆ? ಕನಿಷ್ಠ ಎಲ್ಲಿದಾಳೆ, ಯಾರ ಜೊತೆ ಇದಾಳೆ ಅಂತ ನೋಡೋಕೂ ಅವರ ಮನೆಯವರು ಬರಲಿಲ್ಲವಲ್ಲ? ಅವಳಿಗೆ ಒಂದು ಫೋನೂ ಬರಲ್ಲಪ್ಪ’  ಅಂತ ಚಿತ್ರಾ ಕೂಡ ಸ್ವಲ್ಪ ಯೋಚನೆಗೆ ಒಳಗಾದಳು.

‘ಯಾವುದಕ್ಕೂ ಇರಲಿ, ಅವಳ ಮನೆಯವರ ಫೋನ್ ನಂಬರ್ ಹುಡುಕಿ ಇಟ್ಕೋಬೇಕು. ನಾಳೆ ಟ್ರೀಟ್‌ಮೆಂಟು ಅದು ಇದು ಅಂತ ಮಾತಾಡಿದ್ರೆ ಅವರು ಬರಬೇಕಾಗುತ್ತಲ್ವಾ?’ ಅಂತ ಸೂಸನ್ ಹೇಳುತ್ತಿರುವಾಗಲೇ ಚಿತ್ರಾ ಧಿಗ್ಗನೆ ಎದ್ದುನಿಂತಳು.

‘ಆಕ್ಚುವಲೀ, ನಾವು ಇಷ್ಟು ಹೊತ್ತಿಗಾಗಲೇ ಅವರಿಗೆ ವಿಷಯ ತಿಳಿಸಬೇಕಿತ್ತು ಕಣೆ. ಅವಳಿಗೆ ಯಾವ ಕಾಯಿಲೆ ಇದೆ ಅಂತ ಗೊತ್ತಾದರೆ ಡಾಕ್ಟರಿಗೆ ಹೇಳೋಕೆ ಸುಲಭ. ಅಲ್ಲದೆ ಅವಳ ಮನೆಯವರಿಗೆ ಗೊತ್ತಿಲ್ಲದೆ ನಾವು ಏನ್ ಮಾಡೋದೂ ತಪ್ಪೇ’  ಎಂದು ದೃಢ ಧ್ವನಿಯಲ್ಲಿ ಹೇಳಿ, ಶಹೀನ ರೂಮಿಗೆ ಹೋಗಿ ಬ್ಯಾಗ್ ತೆರೆದಳು.

ಫೋನ್ ಪುಸ್ತಕದಲ್ಲಿ ಕೋಲಾರದಲ್ಲಿ ಇರುವ ಶಹೀನಳ ಅಪ್ಪ-ಅಮ್ಮ, ಸಂಬಂಧಿಗಳು, ನೆರೆಹೊರೆಯವರ ನಂಬರುಗಳು ಸಿಕ್ಕವು. ಮನೆಯಿಂದ ಹೊರಟು, ಮೇನ್ ರೋಡಿಗೆ ಬಂದು ಎಸ್‌ಟಿಡಿ ಬೂತು ಹುಡುಕಿ, ಕೋಲಾರದ ನಂಬರೊಂದಕ್ಕೆ ಫೋನು ಮಾಡಿದರು. ಅದು ಶಹೀನಳ ಪಕ್ಕದ ಮನೆ.

‘ಹಲೋ’
‘ಅಬ್ಬೂ ಸುಲೇಮಾನ್ ಅವರಾ?’  ವಿಜಿ ಕೇಳಿದಳು.
‘ಕೋನ್ ಬೋಲ್ರಿಹಾ?’ (ಯಾರ್ ಮಾತಾಡೋದು?)
‘ನನಗೆ ಉರ್ದು ಬರಲ್ಲ’

‘ಹಾ, ಅವ್ರು ಪಕ್ಕಾ ಮನೇಲ್ ಇದಾರೆ. ಕರೀಬೇಕಾ?’
‘ಹೌದು ಕರೀರಿ. ಮಗಳ ಬಗ್ಗೆ. ಅರ್ಜೆಂಟು ವಿಷಯ’

ಅತ್ತಲಿಂದ ‘ಏ ಜಾಕೋ ಉನೋ ಸುಲೇಮಾನ್ ಚಚ್ಚಾ-ಕು ಬುಲಾಕ್ ಲಾವ್. ಉನ್ಕಿ ಛೋಕ್ರಿಕಾ ಫೋನ್ ಕರ್ತೆ ಬೋಲೋ’  (ಹೋಗಿ ಸುಲೇಮಾನ್ ಕಾಕಾನನ್ನು ಕರೆದುಬಾ. ಅವರ ಮಗಳ ಫೋನು ಅಂತ ಹೇಳು) ಅಂತ ನಿರ್ಭಾವುಕವಾಗಿ ಹೇಳಿ ಮನೆಯಿಂದ ಯಾರೋ ಪುಟ್ಟನನ್ನು ಕಳಿಸಿದ್ದು ಕೇಳಿಸಿತು.

ಫೋನ್ ಇಟ್ಟು ಮತ್ತೆ ಮೂರು ನಿಮಿಷ ಬಿಟ್ಟು ಮಾಡಿದಳು ವಿಜಿ. ‘ಹಲೋ ಸುಲೇಮಾನ್ ಅವರಾ?’
‘ನಾನೇ ಮಾತಾಡ್ತಾ ಇರೋದು ಹೇಳಿ. ನೀವ್ಯಾರು?’

ವಿಜಿ ಸುಲೇಮಾನ್ ಅವರಿಗೆ ನಡೆದ ವಿಷಯ ತಿಳಿಸಿದಳು. ಅವರು ಮೊದಲಿಗೆ ಗಾಬರಿಯಾದರೂ ಮಗಳು ಆಸ್ಪತ್ರೆಯಲ್ಲಿದ್ದಾಳೆ, ಸಹಾಯಕ್ಕೆ ಜನ ಇದ್ದಾರೆ ಅಂತ ಗೊತ್ತಾದ ಮೇಲೆ ಸ್ವಲ್ಪ ಸಮಾಧಾನ ಹೊಂದಿದರು. ಆದರೆ ಹೊರಟು ಬರಲು ಅವರಿಗೆ ಕಷ್ಟಗಳಿದ್ದವು. ಶಹೀನ ಮನೆಗೆ ದೊಡ್ಡ ಮಗಳು. ಅವಳ ಹಿಂದೆ ಮೂರು ಜನ ಹುಡುಗಿಯರು– ಮರಿಯಂ, ಫಾತಿಮಾ, ನಯೀಮಾ.

ಕೊನೆಯವ ಹುಡುಗ ಶಬ್ಬೀರ್–ಹತ್ತು ವರ್ಷ ಕೂಡ ತುಂಬಿರಲಿಲ್ಲ ಅವನಿಗೆ. ಸ್ಕೂಲಿಗೆ ಹೋಗುತ್ತಿದ್ದ. ಹುಡುಗಿಯರು ಚಿಕ್ಕಪುಟ್ಟ ಎಂಬ್ರಾಯಡರಿ, ತಮ್ಮ ಜಾತಿವಂತರ ಮನೆಯಲ್ಲಿ ಅಡುಗೆ ಕೆಲಸ ಇಂಥವನ್ನು ಮಾಡುತ್ತಿದ್ದರು. ಶಹೀನಳ ತಾಯಿ ಹಾಸಿಗೆ ಹಿಡಿದಿದ್ದರು.

‘ಅಮ್ಮಾ, ನಾನು ಬರಕ್ಕೆ ಕಷ್ಟನಮ್ಮಾ... ಶಹೀನಾಗೆ ಬೆಂಗಳೂರು ಬ್ಯಾಡ. ನೀನು ಅಷ್ಟು ದೂರ ಹೋಗೋದು ಬ್ಯಾಡ ಅಂತ ಎಷ್ಟು ಹೇಳಿದೆ. ಅವಳಿಗೆ ಮೊದಲಿನಿಂದಲೂ ಹಟ. ಅದಕ್ಕೆ ಕೆಲಸ ಸಿಕ್ಕ ತಕ್ಷಣ ಅಲ್ಲಿಗ್ ಬಂದುಬಿಟ್ಳು...’ ಅಂತ ಅಳಲು ಶುರು ಮಾಡಿದರು.

‘ಅದೆಲ್ಲಾ ಸರಿ ಅಂಕಲ್. ಅವಳಿಗೆ ಏನ್ ಸಮಸ್ಯೆ ಇರೋದು?’
‘ಅಯ್ಯೋ ನನಗೆ ಗೊತಿಲ್ಲಮ್ಮ. ಮಾಲೂಮ್ ನೈ ಕ್ಯಾ ಹೈ... ಎಲ್ಲಾ ಕಡೆ ಕರ್ಕೊಂಡು ಹೋಗಿದ್ದೆ. ನಮ್ ಮಸೀದಿ ಒಳ್ಗೆ ಪ್ರತೀ ಶುಕ್ರವಾರ ಧೂಪ ಹಾಕ್ಸಿ ಅವಳಿಗೆ ಮುಟ್ಟಿಸ್ಬೇಕು ಅಂತ ಹೇಳಿದ್ರು. ಅದನ್ನೂ ಮಾಡ್ತಿದ್ದೆ. ವೋ ಛೋಕ್ರಿ ಕೈಸೆ ದೀವಾನಿ ಹುಇ ಮಾಲೂಮ್ ನೈ’ (ಆ ಹುಡುಗಿ ಹೇಗೆ ಹುಚ್ಚಿಯಾದಳು ನನಗೆ ಗೊತ್ತಿಲ್ಲ)

ವಿಜಿಗೆ ಇವರ ಹತ್ತಿರ ಇನ್ನು ಹೆಚ್ಚು ಮಾತನಾಡಿ ಪ್ರಯೋಜನವಿಲ್ಲ ಅನ್ನಿಸಿತು. ಶಹೀನಾಗೆ ‘ಹುಚ್ಚು’ ಅಂತ ನಿರ್ಧಾರ ಮಾಡಿ ‘ಶೈತಾನ್’ ಬಿಡಿಸೋರ ಹತ್ರ ಕರ್ಕೊಂಡು ಹೋಗಿದಾರೆ.

ಇವರ ಕೈಲಿ ಇದಕ್ಕಿಂತ ಹೆಚ್ಚಿನದು ಸಾಧ್ಯವಿಲ್ಲ. ಇನ್ನು ಏನಿದ್ದರೂ ಇಲ್ಲಿ ಇರುವವರೇ ನಿಭಾಯಿಸಬೇಕು.
‘ನೀವು ಬರೋಕೆ ಆಗುತ್ತಾ ಅಂಕಲ್? ಆಸ್ಪತ್ರೆಲಿ ಎಲ್ಲಾ ಕೆಲಸಕ್ಕೂ ನಿಮ್ಮ ಪರ್ಮಿಷನ್ ಬೇಕಾಗುತ್ತೆ’

‘ಅಮ್ಮಾ, ಅದೇನು ಮಾಡಬೇಕೋ ನೀವೇ ಮಾಡಿ. ನನ್ನ ಕೈಲಿ ಎಷ್ಟ್ ದುಡ್ಡಾಗುತ್ತೋ ಕೊಡ್ತೀನಿ. ಇಲ್ಲಾಂದರೆ ನನ್ ಹೆಂಡ್ತಿ ಒಡವೆ ಮಾರಿ ಕೊಡ್ತೀನಮ್ಮಾ. ಆದರೆ ನಾನು ಅಲ್ಲಿಗೆ ಬಂದ್ರೆ ಏನೂ
ಉಪಯೋಗ ಇಲ್ಲಮ್ಮಾ. ಆಸ್ಪತ್ರೇಲಿ ಏನು ಹೇಳ್ತಾರೋ ನನಗೆ ಗೊತ್ತಾಗಲ್ಲ’

ಮೆಕಾನಿಕ್ ಸುಲೇಮಾನ್ ಕೋಲಾರದಿಂದ ಒಂದು ಪಕ್ಷ ಬೆಂಗಳೂರಿಗೆ ಬಂದರೂ ಅವರು ಉಳಿದುಕೊಳ್ಳಲು ಜಾಗ ಇರಲಿಲ್ಲ. ಮನೆಯಲ್ಲಿ ಹಾಸಿಗೆ ಹಿಡಿದ ಹೆಂಡತಿ, ವಯಸ್ಸಿಗೆ ಬಂದ ಹೆಣ್ಣುಮಕ್ಕಳು; ಇತ್ತ ಮಾನಸಿಕ ಸಮಸ್ಯೆಯಿಂದಾಗಿ ಆಸ್ಪತ್ರೆ ಸೇರಿರುವ ಮಗಳು.

ಊರಿನಲ್ಲಿ ಸುಮ್ಮನೆ ಗುಲ್ಲಾಗುತ್ತೆ, ಆಮೇಲೆ ಅವಳಿಗೆ ಮದುವೆ ಮಾಡುವುದು ಕಷ್ಟ...ಅಬ್ಬಾ! ಜೀವನ ಸಂಗ್ರಾಮ ಲೆಕ್ಕಾಚಾರವೇ!
‘ಸರಿ ಬಿಡಿ ಅಂಕಲ್. ನಮಗೇನು ತಿಳಿಯುತ್ತೋ ಅದನ್ನೇ ಮಾಡ್ತೀವಿ. ನಾಳೆ ನೀವು ನಮ್ಮನ್ನ ದೂರಬಾರದು ಅಷ್ಟೆ...’

‘ಅಯ್ಯೋ ಇಲ್ಲಮ್ಮಾ... ಖುದಾ ಮೆಹರ್ಬಾನ್! ನಿಮ್ ಥರಾ ಹೆಲ್ಪ್ ಮಾಡೋ ದೋಸ್ತ್ ನನ್ ಮಗಳಿಗೆ ಇರುವಾಗ ನಾನು ನಿಮ್ಮನ್ನ ಏನಾದರೂ ಅಂದರೆ ದೇವರು ಒಪ್ತಾನಾ? ದುಡ್ಡಿಗೆ ಯೋಚನೆ ಬೇಡಮ್ಮ. ಅವಳ ಅಕೌಂಟಲ್ಲೂ ಸ್ವಲ್ಪ ದುಡ್ಡಿದೆ. ಆಸ್ಪತ್ರೆ ಖರ್ಚು ಕೊಟ್ಟೇ ಕೊಡ್ತೀವಿ ನಿಮಗೆ ಮೋಸ ಮಾಡಲ್ಲ ನಾವು’

ದಿನನಿತ್ಯದ ಜೀವನ ಸಾಕ್ಷಾತ್ಕಾರಗೊಳ್ಳುವುದೇ ಕಷ್ಟವಾಗಿರುವಾಗ, ಒಬ್ಬ ತಂದೆಗೆ ತನ್ನ ಮಗಳು ಮಾನಸಿಕ ವ್ಯವಕಲನಕ್ಕೆ ಒಳಗಾಗಿದ್ದಾಳೆ ಅಂತ ಅರ್ಥವಾಗುವುದಾದರೂ ಹೇಗೆ? ಅವರ ಪ್ರಕಾರ ಅವಳು ಮನೆಗೆ ಬಂದು ಊಟದಲ್ಲಿ ಪಾಲು ಕೇಳಿ, ಹೊರೆಯಾಗದೇ ಹೋದರೆ ಇರುವ ಹೆಣ್ಣು ಮಕ್ಕಳ ಮದುವೆಯಾದರೂ ಆದೀತು. ಅತ್ತ ಹೆಂಡತಿ, ಇತ್ತ ದುಡಿಯುವ ಮಗಳು– ಇಬ್ಬರೂ ಆರೈಕೆ ಬೇಡುವವರೇ ಆದರೆ ಮಾಡುವವರು ಯಾರು?

ವಿಜಿ, ಚಿತ್ರಾ, ಸೂಸನ್ ಎಸ್‌ಟಿಡಿ ಬೂತಿನಿಂದ ವಾಪಸು ಹೋಗುವಾಗ ಯಾವುದೋ ಎಚ್ಚರವಿಲ್ಲದ ಸ್ಥಿತಿಯಲ್ಲಿ ನಡೆದುಹೋದರು. ತಮ್ಮ ಕಣ್ಣ ಮುಂದೆ ನಡೆದ ವಿಚಿತ್ರ ಘಟನೆಯೂ, ಅದರಿಂದ ಈಗ ಬಂದ ಇನ್ನೊಂದು ಜವಾಬ್ದಾರಿಯೂ ಒಂದು ರೀತಿ ತಮ್ಮ ಅಳತೆ ಮೀರಿದ ಸಾಮಾಜಿಕ ಜವಾಬ್ದಾರಿಯನ್ನು ಅವರಿಗೆ ಹೊರಿಸಿದ್ದವು. ದುಡ್ಡಿನ ಮನೆ ಹಾಳಾಗಲಿ, ತಾವು ಇರುವುದು ಪೀಜಿಯಲ್ಲಿ.

ನಾಳೆ ಬೇರೆ ಕಡೆ ಹೋಗಬೇಕೆಂದರೆ ಇವಳನ್ನು ಬಿಟ್ಟು ಹೋಗುವುದು ಹೇಗೆ? ತಾವು ಸಹಾಯ ಮಾಡಬೇಕೆಂದು ಹೊರಟಿರುವ ಕಲ್ಯಾಣ ಗುಣದಿಂದ ಅವಳಿಗೇನಾದರೂ ಅಪಾಯವಾದರೆ ತಮ್ಮ ಬೆಂಬಲಕ್ಕೆ ಯಾರು ನಿಲ್ಲುತ್ತಾರೆ?

ಬೆಳಿಗ್ಗೆ ಸರಳಾ ಮನೆಗೆ ಬಂದಾಗ ಸುಲೇಮಾನ್ ಅಪ್ಪನ ವಿಷಯ ತಿಳಿಯಿತು. ‘ತಲೆ ಕೆಡಿಸ್ಕೋಬೇಡಿ. ಈಗ ಸದ್ಯಕ್ಕೆ ನಮ್ಮ ಕೈಲಿ ಏನಾಗುತ್ತೋ ಅದು ಮಾಡೋಣ. ಆಮೇಲಿನದ್ದು ಅವಳ ಹಣೆ ಬರಹ. ತೀರಾ ಕೈ ಮೀರಿದರೆ ಒಂದು ಟ್ಯಾಕ್ಸಿ ಮಾಡಿಕೊಂಡು ಹೋಗಿ ಕೋಲಾರಕ್ಕೆ ಬಿಟ್ಟು ಬಂದರಾಯಿತು. ಕನಿಷ್ಠ ನಮ್ಮ ಕೈಲಿದ್ದಾಗ ಒಳ್ಳೆಯದು ಮಾಡಲು ಪ್ರಯತ್ನ ಪಟ್ವಿ ಅಂತಾದರೂ ಆಗುತ್ತೆ’  ಎಂದರು.

ಕುತ್ತಿಗೆಗೆ ಬಂದು ಸುತ್ತಿಕೊಳ್ಳುತ್ತೆ ಅಂದುಕೊಂಡ ಕರ್ಮ, ಪುಣ್ಯ ಸಂಪಾದನೆಯ ದಾರಿ ಅಂತಾದಾಗ ಎಂಥಾ ನಿರಾಳವಾಗುತ್ತೆ ಗೊತ್ತಾ? ‘ಪುಣ್ಯದಂಥಾ ಪ್ರಾಡಕ್ಟು ಇನ್ನೊಂದಿಲ್ಲ ಕಣೇ. ದುಡ್ಡು ಅಂಡ್ ಪುಣ್ಯ ಆರ್ ಸೇಮ್. ಜನ ಅದನ್ನ ಗಳಿಸಕ್ಕೆ ಏನ್ ಬೇಕಾದ್ರೂ ಮಾಡ್ತಾರೆ. ಅದಕ್ಕಾಗಿ ಕೊಲೆನೂ ಮಾಡಿಬಿಡಬಹ್ದು’  ಅಂದಳು ಸೂಸನ್. ‘ಮುಚ್ಚು ಬಾಯಿ’  ಚಿತ್ರಾ ಗದರಿದಳು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT