ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಸಿದ ವಿಶೇಷತೆ

Last Updated 7 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕಿಟ್ಟಣ್ಣ ಹುಟ್ಟಿದಾಗಿ­ನಿಂದಲೂ ಸೊಣಕಲೇ. ಅವನ ಅಪ್ಪ- ಅಮ್ಮ ಅವನಿಗೆ ಏನು ತಿನಿಸಿದರೂ ಅವನು ದಪ್ಪಗಾಗು­ತ್ತಿರಲಿಲ್ಲ. ಯಾವಾಗಲೂ ಎಂಟು ದಿನ ಉಪ­ವಾ­ಸ­ವಿದ್ದವರಂತೆ ಒಣಗಿ­ಕೊಂಡಿ­ರುತ್ತಿದ್ದ. ಅವನಿಗೆ ಯಾವುದರ­ಲ್ಲಿಯೂ ಆಸಕ್ತಿ ಇರಲಿಲ್ಲ. ತರಗತಿಯಲ್ಲಿ ಈತನನ್ನು ಯಾರೂ ಗಮನಿಸುತ್ತಿರಲಿಲ್ಲ. ಅಭ್ಯಾಸ­ದಲ್ಲಾಗಲೀ, ಆಟದಲ್ಲಾಗಲೀ, ಉಳಿದ ಚಟುವಟಿಕೆಗಳಲ್ಲಾಗಲೀ ಕಿಟ್ಟಣ್ಣ ಯಾವಾ­ಗಲೂ ಹಿಂದೆಯೇ.

ಇವನ ಮೇಲೆ ಆಸ್ಥೆ ತೋರುತ್ತಿದ್ದವರೆಂದರೆ ತರ­ಗತಿಯ ಬಲಿತ, ದಾಂಡಿಗ ಹುಡು­ಗರು ಮಾತ್ರ. ಇವನನ್ನು ಕಂಡರೆ ಸಾಕು ಗೋಳು ಹೊಯ್ದುಕೊಳ್ಳುತ್ತಿದ್ದರು. ಅವರನ್ನು ಕಂಡರೆ ಕಿಟ್ಟಣ್ಣನಿಗೆ ಭಯ. ಮನೆಯ­ಲ್ಲಿಯೂ ಅಮ್ಮ-– ಅಪ್ಪ ಅವನನ್ನು ಸದಾ ಆಲಸಿ ಎಂದೇ ಕರೆಯುತ್ತಿದ್ದರು. ಒಂದು ದಿನ ಇವನನ್ನು ಆಪ್ತ ಸಲಹೆಗಾರರ ಕಡೆಗೆ ಕರೆದು­ಕೊಂಡು ಹೋದರು. ಆತ ಏನೇನೋ ಪರೀಕ್ಷೆಗಳನ್ನು ಮಾಡಿ, ‘ಕಿಟ್ಟಣ್ಣ, ನೀನು ಕೀಳರಿಮೆ ಹೋಗಲಾಡಿಸಿ­ಕೊಳ್ಳಬೇಕು.

ನೀನು ನಿನ್ನಲ್ಲಿರುವ ಅಶಕ್ತತೆಗಳನ್ನೇ ನೋಡುತ್ತ ಕೊರಗುವುದರ ಬದಲು ನಿನ್ನಲ್ಲಿರುವ ವಿಶೇಷತೆಯನ್ನು ಗಮನಿಸಿ ಅದನ್ನೇ ಬೆಳೆಸು. ನೀನು ದೊಡ್ಡ ಸಾಧನೆ ಮಾಡುತ್ತೀ’ ಎಂದರು. ಕಿಟ್ಟಣ್ಣನಿಗೆ ತನ್ನ ವಿಶೇಷತೆ ಯಾವುದೆಂಬುದೇ ತಿಳಿಯದು. ಅಂದು ಸಾಯಂಕಾಲ ಶಾಲೆಯಿಂದ ಮನೆಗೆ ಬಂದ ಕಿಟ್ಟಣ್ಣ ತನ್ನ ಬೂಟು­ಗಳನ್ನು ಬಿಚ್ಚಿ ಹಜಾರಕ್ಕೆ ಬಂದ. ತಂದೆ ತಕ್ಷಣ ಮೂಗು ಮುಚ್ಚಿ­ಕೊಂಡರು. ತಾಯಿ, ‘ಅಯ್ಯೋ ಮಹಾರಾಯಾ ಕಾಲುಚೀಲ ಬದಲಾಯಿಸ­ಬಾರ­ದೇನೋ, ಅದೆಷ್ಟು ಕೊಳಕುನಾರುತ್ತಿದೆ. ಇದು ಒಂದರಲ್ಲಿ ಮಾತ್ರ ನೀನು ವಿಶೇಷ ನೋಡು’ ಎಂದರು.

ಕಿಟ್ಟಣ್ಣ ಕಣ್ಣುಗಳು ಹೊಳೆದವು. ತನ್ನಲ್ಲೂ ಒಂದು ವಿಶೇಷತೆ ಇದೆಯಲ್ಲ! ತನ್ನ ಕೋಣೆಗೆ ಬಂದು ಕಾಲು ಚಾಚಿ ಹಿಡಿದು ಕುಳಿತುಕೊಂಡ. ಅವನ ಪ್ರೀತಿಯ ಬೆಕ್ಕು ಬಳಿಗೆ ಬಂದು ಕಾಲನ್ನು ಮೂಸಿತು. ಮೂಸಿದ್ದೇ ತಡ ಮ್ಯಾಂವ್ ಎಂದು ಕೂಗಿ ಎಚ್ಚರ ತಪ್ಪಿ ಬಿದ್ದಿತು. ಅದಕ್ಕೆ ಮತ್ತೆ ಎಚ್ಚರವಾದಾಗ ನಿಧಾನವಾಗಿ ತನ್ನ ಕಾಲನ್ನು ಅದರ ಮೂಗಿನ ಹತ್ತಿರ ಒಯ್ದ. ಅದು ಮರಳಿ ಕೂಗಿ ಎಚ್ಚರ ತಪ್ಪಿತು. ಹಾ!ಹಾ! ಎಂದ ಕಿಟ್ಟಣ್ಣ. ಇದೇ ನನ್ನ ವಿಶೇಷತೆ. ಸಲಹೆಗಾರರು ಹೇಳಿದಂತೆ ಇದನ್ನೇ ಬೆಳೆಸಬೇಕು ಎಂದುಕೊಂಡ.

ಮುಂದೆ ಒಂದು ವಾರ ಕಾಲುಚೀಲ ಬದಲಿಸಲಿಲ್ಲ. ಅಮ್ಮ ಕೇಳುತ್ತಾರೆಂದು ತಾನು ಬಳಸದ ಚೆನ್ನಾಗಿದ್ದ ಕಾಲು­ಚೀಲಗಳನ್ನೇ ನೆಲಕ್ಕೆ ಉಜ್ಜಿ ಒಗೆಯಲು ಕೊಡು­ತ್ತಿದ್ದ. ತಾನು ಸ್ನಾನವನ್ನೂ ಮಾಡಲಿಲ್ಲ. ಕೇವಲ ತಲೆ ತೊಳೆದುಕೊಂಡು ಸ್ನಾನ ಮಾಡಿದಂತೆ ತೋರಿಕೆ ಮಾಡುತ್ತಿದ್ದ. ಹಾಕಿಕೊಂಡ ಕಾಲುಚೀಲಗಳನ್ನು ಇನ್ನಷ್ಟು ಕೊಳಕುಮಾಡಲು ಅವುಗಳಿಗೆ ಬೆಣ್ಣೆ ಹಾಕಿ ಉಜ್ಜಿದ, ಇನ್ನಷ್ಟು ಬೆವರು ಬರುವ ಹಾಗೆ ಓಡಾಡಿದ. ಏನೇನು ಸಾಧ್ಯವೋ ಅದೆಲ್ಲವನ್ನೂ ಮಾಡಿದ. ಒಂದು ದಿನ ತನ್ನ ಮೇಲೆಯೇ ಪರೀಕ್ಷೆ ಮಾಡಿಕೊಂಡ. ಕಾಲುಚೀಲವನ್ನು ದೂರಹಿಡಿದು ಗಡಿಯಾರ ನೋಡಿಕೊಂಡ. ನಂತರ ಕಾಲುಚೀಲವನ್ನು ಮೂಗಿನ ಹತ್ತಿರ ತಂದಾಗ ಎಚ್ಚರ ತಪ್ಪಿದ.

ಮರಳಿ ಎಚ್ಚರವಾದಾಗ ನಲವತ್ತೈದು ನಿಮಿಷ­ಗಳಾಗಿದ್ದವು. ಅಂದರೆ ಕಾಲುಚೀಲಗಳು ಯಾರನ್ನಾದರೂ ಅಷ್ಟು ಕಾಲ ಎಚ್ಚರ ತಪ್ಪಿಸುವಷ್ಟು ಪ್ರಬಲವಾಗಿದ್ದವು. ತಮಗೆ ತೊಂದರೆ ಕೊಡುವ ಬಲಿಷ್ಠ ಹುಡು­ಗರಿಗೆ ಬುದ್ಧಿ ಕಲಿಸಲು ಇನ್ನೂ ನಾಲ್ಕು ದಿನ ಕಾಯ್ದ. ಒಂದು ದಿನ ತರಗತಿಯ­ಲ್ಲಿದ್ದಾಗ ದಾಂಡಿಗರು ಬಂದು ಇವನನ್ನು ಕೆಣಕಿದರು, ತಿವಿದರು, ಬೆನ್ನಿಗೆ ಏಟು ಹಾಕಿದರು. ಕಿಟ್ಟಣ್ಣ ಒಂದು ಕ್ಷಣ ತಡೆದು ತನ್ನ ಬೂಟುಗಳನ್ನು ಕಳಚಿ ಬಿಸಾಕಿ ಕಾಲುಚೀಲವನ್ನು ಅವರ ಮುಖದ ಮುಂದೆ ಬೀಸಿದ.

ಆಗ ಎಚ್ಚರ ತಪ್ಪಿದ ಅವರು ಮುಂದೆಂದೂ ಇವನ ಉಸಾಬರಿಗೆ ಬರಲಿಲ್ಲ. ಅಂದು ಕಿಟ್ಟಣ್ಣ ಮನೆಗೆ ಬಂದಾಗ ಬಾಗಿಲು ತೆರೆದಿತ್ತು. ಅಮ್ಮ-­–ಅಪ್ಪ ಇಬ್ಬರೂ ಕೆಲಸಕ್ಕೆ ಹೋಗುವವರು, ಇಷ್ಟು ಬೇಗ ಬಂದಿದ್ದಾರಲ್ಲ ಎಂದು ಈತ ನಿಧಾನಕ್ಕೆ ಒಳಗೆ ಬಂದರೆ ತಂದೆಯ ಕೋಣೆಯಲ್ಲಿ ಕಪಾಟನ್ನು ಮುರಿಯಲು ಸಿದ್ಧನಾಗಿದ್ದ ಕಳ್ಳ ಕಂಡ. ಕಿಟ್ಟಣ್ಣನನ್ನು ಕಾಣುತ್ತಲೇ ಆ ಧಡಿಯ ನುಗ್ಗಿ ಬಂದ. ಕಿಟ್ಟಣ್ಣ ತನ್ನ ಬ್ರಹ್ಮಾಸ್ತ್ರ ಬಳಸಿಯೇ ಬಿಟ್ಟ. ಕಾಲುಚೀಲವನ್ನು ಕಳ್ಳನ ಮುಖಕ್ಕೆಸೆದ.

ನಂತರ ಪೋಲಿಸರು ಬಂದು ಎತ್ತಿ­ಕೊಂಡು ಹೋಗುವವರೆಗೂ ಅವನಿಗೆ ಎಚ್ಚರ ಬಂದಿರಲಿಲ್ಲ. ಮರುದಿನ ಎಲ್ಲ ಪತ್ರಿಕೆಗಳಲ್ಲಿ, ಟೀವಿ ಚಾನೆಲ್ಲುಗಳಲ್ಲಿ ಕಿಟ್ಟಣ್ಣನದೇ ಸುದ್ದಿ. ಕೇವಲ ಕಾಲುಚೀಲ­ದಿಂದ ಅಸಾಮಾನ್ಯ ಕಳ್ಳನನ್ನು ಸೆರೆಹಿಡಿದ ಧೀರ ಎಂದು ಎಲ್ಲರೂ ಕೊಂಡಾ­ಡಿದ್ದರು. ಕಿಟ್ಟಣ್ಣ ಸಾಧಕನಾಗಿದ್ದ. ವಿಶೇಷತೆ ಎಂದು­ಕೊಂಡಿದ್ದ ಕೊಳಕು ಕಾಲುಚೀಲದಿಂದಲೇ ಇಂಥ ವಿಶೇಷ ಸಾಧನೆಯಾಗುವಂತಿದ್ದರೆ ಒಂದು ಒಳ್ಳೆಯ ಚಿಂತನೆ, ಒಳ್ಳೆಯ ನಡತೆಯಿಂದ ಎಷ್ಟು ದೊಡ್ಡ ಪ್ರಯೋಜ­ನವಾಗಬಹುದಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT