ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕಿರುವುದು ಒಂದಿಷ್ಟು ಸೂಕ್ಷ್ಮತೆ ಅಷ್ಟೇ!...

Last Updated 25 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಇದಾಗಿ ಬಹಳ ದಿನಗಳೇನೂ ಆಗಿಲ್ಲ. ಕೇವಲ ಹನ್ನೊಂದು ತಿಂಗಳು ಕಳೆದಿವೆ. ‘ಚರಕ’ದ ಪ್ರಸನ್ನ ಮತ್ತೆ ಬೀದಿಗಿಳಿಯುವ, ಉಪವಾಸ ಕೂರುವ ಮಾತು ಆಡುತ್ತಿದ್ದಾರೆ. ಅವರು ಕಳೆದ ಡಿಸೆಂಬರ್‌ನಲ್ಲಿ ಇನ್ನೂರು ಕಿಲೋ ಮೀಟರ್‌ ಪಾದಯಾತ್ರೆ ಮಾಡಿದ್ದರು. ಜನವರಿ 30ರ ಗಾಂಧಿ ಪುಣ್ಯತಿಥಿ ದಿನ ಹೆಗ್ಗೋಡಿನಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಈಗ ನವೆಂಬರ್‌ ಒಂದರಿಂದ ಮತ್ತೆ ಸರದಿ ಉಪವಾಸ, ನಂತರ ಆಮರಣ ಉಪವಾಸ ಮಾಡುವುದಾಗಿ ಪ್ರಕಟಿಸಿದ್ದಾರೆ. ಪ್ರಸನ್ನ ಮತ್ತು ಅವರ ಗೆಳೆಯರು ಹೆಚ್ಚೇನನ್ನೂ ಕೇಳುತ್ತಿಲ್ಲ. ಎಂಟು ಬಗೆಯ ಪಾರಂಪರಿಕ ವಸ್ತ್ರಗಳನ್ನು ಕೈಮಗ್ಗದಿಂದಲೇ ಉತ್ಪಾದಿಸಬೇಕು ಎಂಬ 1985ರ ಕೇಂದ್ರ ಶಾಸನವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ! ಆಶ್ಚರ್ಯ ಅಲ್ಲವೇ? ಸರ್ಕಾರವೇ ಮಾಡಿದ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಖಾಸಗಿ ಜನರು ಒತ್ತಾಯಿಸುವುದು, ಉಪವಾಸ ಮಾಡುವುದು?
ಯಾವ ಸರ್ಕಾರವೂ ಅಷ್ಟು ಸೂಕ್ಷ್ಮಮತಿ ಆಗಿರುವುದಿಲ್ಲ. ಅದು ಕೆಲವರ ಉಪವಾಸಕ್ಕಾದರೂ ಹೆದರಬೇಕು. ಆದರೆ, ಹಾಗೆ ಕಾಣುವುದಿಲ್ಲ. ಬೆಂಗಳೂರಿನಲ್ಲಿ ಭೂಗಳ್ಳರ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ನೇತೃತ್ವದ ಸತ್ಯಾಗ್ರಹಕ್ಕೆ ಉತ್ತರಿಸಲು ಸರ್ಕಾರ ಮೂವತ್ತು ದಿನ ತೆಗೆದುಕೊಂಡಿತು.  ಸರ್ಕಾರಗಳು ಬದಲಾಗುತ್ತವೆ. ಆಡಳಿತಗಾರರು ಬದಲಾಗುತ್ತಾರೆ. ಆದರೆ, ಹಿತಾಸಕ್ತಿಗಳು ಬದಲಾಗುವುದಿಲ್ಲ. ಭೂಗಳ್ಳರ ವಿರುದ್ಧ ಕ್ರಮ ತೆಗೆದುಕೊಳ್ಳಲು ಈ ಸರ್ಕಾರಕ್ಕೆ ಏನು ಹೆದರಿಕೆ? ಹಿಂಜರಿಕೆ?

ಇದೆಲ್ಲ ವಿಪರ್ಯಾಸ ಇರಬಹುದು ಅಥವಾ ಡಂಭ ಇರಬಹುದು. ನಮ್ಮ ಬಹುತೇಕ ರಾಜಕಾರಣಿಗಳು ಖಾದಿ ವಸ್ತ್ರವನ್ನೇ ತೊಡುತ್ತಾರೆ. ಆದರೆ, ಅವರಲ್ಲಿ ಒಬ್ಬರಿಗಾದರೂ ಖಾದಿ ಗ್ರಾಮೋದ್ಯೋಗಗಳ ಕಥೆ ಈಗ ಏನಾಗಿದೆ ಎಂದು ಗೊತ್ತೇ? ಅವರದು ಬರೀ ವೇಷ. ಒಳಗೊಂದು, ಹೊರಗೊಂದು. ಖಾದಿ ಗ್ರಾಮೋದ್ಯೋಗಗಳ ಮಳಿಗೆಗಳ ಬದಲು ಈಗ ಹಾದಿಗೊಂದು ಬೀದಿಗೊಂದು ಖಾಸಗಿ ಖಾದಿ ಮಳಿಗೆಗಳು ಬಂದಿವೆ. ಅವು ಸರ್ಕಾರ ಕೊಡುವ ರಿಬೇಟಿನ ಲಾಭ ಪಡೆಯುತ್ತಿವೆ ಎಂಬ ದೂರೂ ಇದೆ. ಈ ಕುರಿತು ಸರ್ಕಾರಕ್ಕೆ ದೂರೂ ಬಂದಿದೆ. ಏನೂ ಫಲ ಸಿಕ್ಕಂತೆ ಕಾಣಲಿಲ್ಲ. ತನ್ನ ಆಸ್ಪತ್ರೆಗಳಿಗೆ, ಹಾಸ್ಟೆಲ್‌ಗಳಿಗೆ ಖಾದಿ ಬಟ್ಟೆ, ಸಾಬೂನು ಖರೀದಿಸಿದರೆ ಸಾಕು ಎಲ್ಲ ಗ್ರಾಮೋದ್ಯೋಗಗಳು ಬದುಕುತ್ತವೆ ಎಂದು ಸರ್ಕಾರಕ್ಕೆ ಖಾದಿ ಚಳವಳಿಗಾರರು ಎಷ್ಟು ಸಾರಿ ಹೇಳಲಿಲ್ಲ? ಹೂಂ, ಹೂಂ. ಸರ್ಕಾರ ಸರಿಯಾದ ದಿಕ್ಕಿನಲ್ಲಿ ಸ್ಪಂದಿಸುವುದಿಲ್ಲ, ಚಲಿಸುವುದೂ ಇಲ್ಲ. ಹಾಗೆ ಸ್ಪಂದಿಸಲು ಬಿಡದವರು, ಚಲಿಸಲು ಬಿಡದವರು ಅಧಿಕಾರಸ್ಥರ ಹತ್ತಿರದಲ್ಲಿಯೇ ಇರುತ್ತಾರೆ. ಕಷ್ಟಪಟ್ಟು ದುಡಿಯುವವರಿಗೆ ಆ ಸಾಮೀಪ್ಯ ಸಿಗುವುದಿಲ್ಲ.

ಈಗ ಕೈಮಗ್ಗದ್ದೂ ಅದೇ ಕಥೆ. ರಾಜ್ಯದ ಎಲ್ಲ ನಾಲ್ಕೂ ಕಂದಾಯ ವಿಭಾಗಗಳಲ್ಲಿನ ಶಾಲೆಗಳಿಗೆ ಕೈಮಗ್ಗದ ಬಟ್ಟೆಗಳನ್ನೇ ಸಮವಸ್ತ್ರವಾಗಿ ಕೊಟ್ಟರೆ ಇಡೀ ರಾಜ್ಯದ ಕೈಮಗ್ಗಗಳು ಬದುಕುತ್ತವೆ. ಆದರೆ, ಸರ್ಕಾರ ಎರಡು ವಿಭಾಗಗಳನ್ನು ವಿದ್ಯುತ್‌ ಮಗ್ಗಗಳಿಗೂ ಇನ್ನು ಎರಡನ್ನು ಕೈಮಗ್ಗಕ್ಕೂ ಕೊಡುವ ಚೌಕಾಸಿ ಮಾಡುತ್ತಿದೆ. ಶಿಕ್ಷಣ ಇಲಾಖೆಯು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ (ಕೆಎಚ್‌ಡಿಸಿ) ಮೂಲಕ ಸಮವಸ್ತ್ರಗಳಿಗೆ ಬೇಡಿಕೆ ಸಲ್ಲಿಸುತ್ತದೆ. ಈ ಬೇಡಿಕೆ ಎಷ್ಟು ಕೊನೆ ಗಳಿಗೆಯಲ್ಲಿ ಬರುತ್ತದೆ ಎಂದರೆ ಕೆಎಚ್‌ಡಿಸಿ ಅಷ್ಟು ಪ್ರಮಾಣದಲ್ಲಿ ಬಟ್ಟೆ ಪೂರೈಸಲು ಆಗುವುದಿಲ್ಲ. ಬಹುಶಃ ಶಿಕ್ಷಣ ಇಲಾಖೆ ಅದಕ್ಕೇ ಕಾಯುತ್ತಿರುವಂತೆ ವಿದ್ಯುತ್‌ ಮಗ್ಗದ ಬಟ್ಟೆಗೆ ಆ ಬೇಡಿಕೆಯನ್ನು ವರ್ಗಾಯಿಸುತ್ತದೆ. ಇದನ್ನೆಲ್ಲ  ಸರಳವಾಗಿ ಬಗೆಹರಿಸಬಹುದು. ಶಿಕ್ಷಣ ಇಲಾಖೆ ಪ್ರತಿವರ್ಷ ಸಮವಸ್ತ್ರಗಳನ್ನು ಪೂರೈಸುತ್ತದೆ. ವರ್ಷಕ್ಕೆ ಅಂದಾಜು ಎಷ್ಟು ಬಟ್ಟೆ ಬೇಕು ಎಂದು ಅದಕ್ಕೆ ಗೊತ್ತಿರುತ್ತದೆ. ತನ್ನ ಬಜೆಟ್‌ನಲ್ಲಿ ಅಷ್ಟು ಹಣವನ್ನು ಮೊದಲೇ ತೆಗೆದಿರಿಸಿ ವರ್ಷದ ಆರಂಭದಲ್ಲಿಯೇ ತನಗೆ ಬೇಕಾದ ಬೇಡಿಕೆಯನ್ನು ನಿಗಮಕ್ಕೆ ಕೊಡಬಹುದಲ್ಲ? ಇಷ್ಟು ಸರಳವಾಗಿ ಕೆಲಸ ಆದರೆ ಅದಕ್ಕೆ ಸರ್ಕಾರ ಎಂದು ಏಕೆ ಕರೆಯಬೇಕು? ಅಲ್ಲಿ ಇರುವವರೆಲ್ಲ ವಕ್ರರು ಎಂದು ಒಮ್ಮೊಮ್ಮೆ ಅನಿಸುತ್ತದೆ. ಅವರಿಗೆ ನೇರವಾಗಿ ಏನನ್ನೂ ಮಾಡಲು ಬರುವುದೇ ಇಲ್ಲವೇನೋ? ಸರ್ಕಾರಗಳು ನಡೆಯುವ ರೀತಿ ನೋಡಿದರೆ ಸುಲಭವಾಗಿ ಆಗುವುದೆಲ್ಲ ಎಷ್ಟು ಕಷ್ಟವಲ್ಲವೇ ಎಂದು ಅನಿಸುತ್ತದೆ. ಕಷ್ಟ ಎಂದು ಅನಿಸುವ ಹಾಗೆ ಯಾರು ಮಾಡುತ್ತಾರೆ? ಏಕೆ ಮಾಡುತ್ತಾರೆ. ಎಲ್ಲದರಲ್ಲಿಯೂ ಗಿಂಬಳ ಸಿಗಬೇಕು ಎಂದು ಎಲ್ಲರೂ ಬಯಸುತ್ತಾರೆಯೇ?

ಇಂಥದಕ್ಕೆಲ್ಲ ಒಂದಿಷ್ಟು ಸೂಕ್ಷ್ಮತೆ ಎಂಬುದು ಇರಬೇಕು. ಸರ್ಕಾರ ಎಂಬುದು ಒಂದು ಯಂತ್ರ. ಅದಕ್ಕೆ ಸೂಕ್ಷ್ಮತೆ ಇರುವುದು ಕಷ್ಟ. ಆದರೆ, ಆಡಳಿತ ಮಾಡುವವರಿಗಾದರೂ ಒಂದಿಷ್ಟು ಸೂಕ್ಷ್ಮತೆ ಎಂಬುದು ಇರಬೇಕು. ಇವೆಲ್ಲ ಭಾರಿ ಸಂಗತಿಗಳೂ ಅಲ್ಲ. ಯಾವನೋ ಒಬ್ಬ ಅಧಿಕಾರಿಯನ್ನು ಕರೆದು, ‘ನೋಡಯ್ಯ, ನೀನು ಏನು ಮಾಡುತ್ತೀಯೋ ಗೊತ್ತಿಲ್ಲ, ಈ ಕೆಲಸ ಮಾಡಿ ನನಗೆ ವರದಿ ಕೊಡು’ ಎಂದು ಮಂತ್ರಿಯಾದವರು ಹೇಳಿದರೆ ಆ ಅಧಿಕಾರಿ ಆ ಕೆಲಸವನ್ನು ತಲೆ ಮೇಲೆ ಹೊತ್ತುಕೊಂಡು ಮಾಡುತ್ತಾನೆ. ಸರ್ಕಾರಕ್ಕೆ ಮನಸ್ಸು ಎಂಬುದೂ ಇರುವುದಿಲ್ಲ. ಅದು ಯಂತ್ರ. ಮನಸ್ಸು ಆಡಳಿತಗಾರರಲ್ಲಿಯೇ ಇರಬೇಕು.

ನಾನು ಕೇಂದ್ರ ಸರ್ಕಾರದ ಕೈಮಗ್ಗ ನೀತಿಯನ್ನು ತೆಗೆದು ನೋಡುತ್ತಿದ್ದೆ. ಅಲ್ಲಿ ಬರೀ ಸಾಲ ಮನ್ನಾ, ಬಡ್ಡಿ ಮನ್ನಾ ಮತ್ತು ಸಾಲ ನೀಡಿಕೆಯಂಥ ಅಂಶಗಳೇ ಇವೆ. ರೈತರು, ನೇಕಾರರು ಸಾಲ ಮಾಡಿಕೊಂಡಿದ್ದಾರೆ ನಿಜ. ಆದರೆ, ಬರೀ ಸಾಲ ಮತ್ತು ಬಡ್ಡಿ ಮನ್ನಾ ಮಾಡುವುದರಿಂದ ಅವರು ಬದುಕುತ್ತಾರೆಯೇ? ರೈತರ ಉತ್ಪನ್ನಗಳಿಗೆ ಹೇಗೆ ಲಾಭದಾಯಕ ಬೆಲೆ ಬೇಕೋ ಹಾಗೆಯೇ ನೇಕಾರರ ಉತ್ಪನ್ನಗಳಿಗೂ ಸೂಕ್ತ ಬೆಲೆ ಸಿಗಬೇಕು. ಅವರಿಬ್ಬರಿಗೂ ಉತ್ತಮ ಮಾರುಕಟ್ಟೆ ಸಿಕ್ಕರೆ ಸಾಲದ ಸುಳಿಯಲ್ಲಿ ಅವರು ಸಿಲುಕುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸುಮ್ಮಸುಮ್ಮನೇ ಸಾಲ ಮಾಡಬೇಕು ಎಂದು ಯಾರು ಬಯಸುತ್ತಾರೆ? ಬಡ್ಡಿ ಮತ್ತು ಸಾಲ ಮನ್ನಾ ಮಾಡುವುದು ವೋಟು ತರುವ ಜನಪ್ರಿಯ ದಾರಿ ಆಗಿರಬಹುದು. ಆದರೆ, ಒಂದು ದೂರಗಾಮಿ ನೀತಿಯನ್ನು ರೂಪಿಸುವಾಗಲಾದರೂ ಒಂದು ಕ್ಷೇತ್ರದ ಮೂಲಭೂತ ಸಮಸ್ಯೆಗಳ ಕಡೆಗೆ ಗಮನ ಕೊಡದೇ ಇದ್ದರೆ ಆ ಸಮಸ್ಯೆ ಕೊನೆಯವರೆಗೂ ಹಾಗೆಯೇ ಉಳಿಯುತ್ತದೆ. ಈಗ ಆಗಿರುವುದೂ ಅದೇ.

‘ಫ್ಯಾಬ್‌ ಇಂಡಿಯಾ’, ‘ದೇಸಿ’ ಯಂಥ ಮಳಿಗೆಗಳಲ್ಲಿ ಈಗಲೂ ಖಾದಿ, ಕೈಮಗ್ಗದ ವಸ್ತ್ರಗಳಿಗೆ ಉತ್ತಮ ಬೇಡಿಕೆ ಇದೆ. ಅದೇ ಕೆಎಚ್‌ಡಿಸಿ ಅಂಗಡಿಯಲ್ಲಿ ನೊಣ ಹೊಡೆಯುವವರೂ ಇರುವುದಿಲ್ಲ. ಚಿಕ್ಕಪೇಟೆಯ ರೇಷ್ಮೆ ಅಂಗಡಿಗಳಲ್ಲಿ ಕುಳಿತುಕೊಳ್ಳಲೂ ಜಾಗ ಸಿಗುವುದಿಲ್ಲ. ಸರ್ಕಾರದ ರೇಷ್ಮೆ  ಸೀರೆ ಮಳಿಗೆಗಳಲ್ಲಿ ಆ ಸಂಭ್ರಮವೇ ಇರುವುದಿಲ್ಲ. ನಾವೆಲ್ಲ ಎಷ್ಟೇ ಆಧುನಿಕ ಆಗಿರಬಹುದು, ಆದರೆ ‘ದೇಸಿ’ ಎಂಬುದು ನಮ್ಮ ಮನಸ್ಸಿನ ಮೃದು ಜಾಗದಲ್ಲಿ ಕುಳಿತುಕೊಂಡು ಬಿಟ್ಟಿದೆ. ಖಾದಿ, ಕೈಮಗ್ಗದ ಪ್ರದರ್ಶನಕ್ಕೆ ಸಾವಿರಾರು ಮಂದಿ ಈಗಲೂ ಹೋಗುತ್ತಾರೆ. ಏನನ್ನಾದರೂ ಖರೀದಿ ಮಾಡುತ್ತಾರೆ. ಗಾಂಧಿ ಸತ್ತು ಎಷ್ಟೋ ವರ್ಷಗಳೇ ಆಗಿರಬಹುದು, ನಾವು ಅವರನ್ನು ಮರೆತಿಲ್ಲ. ಗುಡಿ ಕೈಗಾರಿಕೆಗಳ ಪುನಶ್ಚೇತನದ ಎಲ್ಲ ಪ್ರಯತ್ನಗಳ ಹಿಂದೆ ಗಾಂಧಿಯ ಮನಸ್ಸೇ ಇದೆ. ಈಗಲೂ ಪ್ರಸನ್ನ ಅವರ ಜತೆಗೆ ತರುಣ ಪೀಳಿಗೆ ನಿಂತುಕೊಂಡಿದೆ. ಕೈಮಗ್ಗ ಕ್ಷೇತ್ರವನ್ನು ಉಳಿಸಲು ತಾವು ಏನು ಮಾಡಬೇಕು ಎಂದು ಅದು ಕೇಳುತ್ತಿದೆ. ಇ–ವಹಿವಾಟಿನ ಮೂಲಕ ಕೈಮಗ್ಗದ ಕೆಲವು ವಸ್ತ್ರಗಳನ್ನಾದರೂ ಮಾರಾಟ ಮಾಡಲು ಈ ಯುವ ಪೀಳಿಗೆ ಯೋಚನೆ ಮಾಡುತ್ತಿದೆ. ಕೇರಳದಲ್ಲಿ ವರ್ಷಗಳ ಹಿಂದೆಯೇ ಐವರು ಎಂಜಿನಿಯರಿಂಗ್‌  ಪದವೀಧರರು ಕೈಮಗ್ಗ ಕ್ಷೇತ್ರಕ್ಕೆ ಪ್ರವೇಶಿಸಿದರು. ಕೈಮಗ್ಗದಲ್ಲಿ ತಯಾರಾದ ಉತ್ಪನ್ನಗಳನ್ನು ಖರೀದಿಸಿ ಮಾರಲು ಮುಂದಾದರು. ಅವರಿಗೆ ಆ ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಸೋಮಸುಂದರಂ ಎಂಬುವರು ನೆರವಾದರು. ತಮಿಳುನಾಡಿನಲ್ಲಿಯೂ ಇಂಥ ಪ್ರಯತ್ನಗಳು ನಡೆದಿವೆ. ಅವೆಲ್ಲ ಯಶಸ್ಸಿನ ಕಥೆಗಳು. ಕರ್ನಾಟಕದಲ್ಲಿ ಪ್ರಸನ್ನ ಕಟ್ಟಿದ ‘ಚರಕ’ ಕೂಡ ಅಂಥದೇ ಒಂದು ಯಶಸ್ಸಿನ ಕಥೆ.

ಇಲ್ಲೆಲ್ಲ ಮೂಲ ವಸ್ತುವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಅದಕ್ಕೆ ಒಂದಿಷ್ಟು ಆಧುನಿಕತೆಯ ಸ್ಪರ್ಶ ಕಲ್ಪಿಸಲಾಗಿದೆ. ವಿನ್ಯಾಸದಲ್ಲಿ ಒಂದಿಷ್ಟು ಹೊಸತನ ಬಂದಿದೆ. ಅದನ್ನು ಮಾರುವ ಅಂಗಡಿಗಳು ಬದಲಾಗಿವೆ. ಮಾರುವವರೂ ಬದಲಾಗಿದ್ದಾರೆ. ಸರ್ಕಾರ ಈಗ ಮಾಡಬೇಕಾದುದೂ ಅಷ್ಟೇ. ಇದೆಲ್ಲ ದುಡ್ಡು ಕಾಸಿನ ಸಂಗತಿಯಲ್ಲ. ಯಾವುದು ‘ಪಾರಂಪರಿಕ’ ಎಂದು ಸರ್ಕಾರವೇ ಗುರುತಿಸಿದೆಯೋ ಆ ಕ್ಷೇತ್ರವನ್ನು ಕೈಮಗ್ಗ ವಲಯಕ್ಕೇ ಬಿಟ್ಟು ಬಿಡಬೇಕು. ರಾಜ್ಯದ ಎಲ್ಲ ಮಕ್ಕಳಿಗೆ ಕೈ ಮಗ್ಗದ ಬಟ್ಟೆಯನ್ನೇ ಖರೀದಿ ಮಾಡಬೇಕು, ಅದು ರಾಜ್ಯದ ನೇಕಾರರಿಂದಲೇ ಖರೀದಿ ಆಗಬೇಕು ಎಂದು ಕಟ್ಟು ನಿಟ್ಟು ಮಾಡಬೇಕು. ಅದಕ್ಕೆ ಅಗತ್ಯವಾದ ಹಣವನ್ನು ವರ್ಷದ ಆರಂಭದಲ್ಲಿಯೇ ಬಿಡುಗಡೆ ಮಾಡಬೇಕು. ಉಳಿದ ಕಡೆ ಬೇಕಾದರೆ ವಿದ್ಯುತ್‌ ಮಗ್ಗದ ಬಟ್ಟೆಯನ್ನು ಖರೀದಿ ಮಾಡಬಹುದು.

ಇದೆಲ್ಲ ಸೋಜಿಗ ಎಂದು ಅನಿಸಬಹುದು: ಪ್ರಸನ್ನ ಮತ್ತು ಗೆಳೆಯರು 1985ರ ಕೈಮಗ್ಗ ಮೀಸಲು ಕಾಯ್ದೆ ಜಾರಿಗೆ ಒತ್ತಾಯಿಸುತ್ತಿದ್ದಾರೆ. ಬ್ರಿಟಿಷರೂ ಇಂಥದೇ ಕಾಯ್ದೆಯನ್ನು ಇನ್ನೂ 80 ವರ್ಷಗಳ ಹಿಂದೆ ರೂಪಿಸಿದ್ದರು. ಅವರಿಗೂ ಕೈಮಗ್ಗ ಉದ್ಧಾರ ಆಗುವುದು ಬೇಕಿರಲಿಲ್ಲ. ಕೈಮಗ್ಗಗಳ ಮಗ್ಗುಲು ಮುರಿಯಬೇಕು ಎಂದೇ ಅವರು ವಿದ್ಯುತ್‌ ಮಗ್ಗಗಳಿಗೆ ಉತ್ತೇಜನ ಕೊಟ್ಟಿದ್ದರು. ಆದರೆ, ಕೈಮಗ್ಗ ನೇಕಾರರ ಚಳವಳಿಗೆ ಮಣಿದು 1905ರಲ್ಲಿ ಕೈಮಗ್ಗ ಕ್ಷೇತ್ರಕ್ಕೇ 23 ವಸ್ತ್ರಗಳನ್ನು ನಿಗದಿ ಮಾಡಿ ಆದೇಶ ಹೊರಡಿಸಿದರು. ಅದನ್ನು ಕಟ್ಟು ನಿಟ್ಟಾಗಿ ಜಾರಿಗೂ ತಂದರು. ಈಗಿನ ಸರ್ಕಾರ ಅದಕ್ಕಿಂತ ಕಡೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT