ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಗುಳ ಭಾಷಾಕೋಶ!

ಅಕ್ಷರ ಗಾತ್ರ

ಎಬಿಸಿಡಿ, ಆರ್‌ಎಸ್‌ವಿಪಿ, ಎಚ್‌ಎಂ, ಪಿಎಕೆ, ಡಿಇಪಿಎಂ, ಕೆ.ಜಿ, ಜೆ.ಆರ್...
ಮೆಸೇಜ್ ನೋಡಿ ಸಂಪಾದಕರು ಬೆಚ್ಚಿ­ಬಿದ್ದರು. ಉತ್ತರ ಪ್ರದೇಶದಲ್ಲಿ ಚುನಾವಣಾ­ಯಾ­ತ್ರೆಗೆ ತೆರಳಿರುವ ಪೆಕರ, ಅಲ್ಲಿನ ವಿದ್ಯ­ಮಾನ­ಗ­ಳನ್ನೂ, ಘಟಾನುಘಟಿಗಳ ಕ್ಷೇತ್ರದಲ್ಲಿ ನಡೆಯು­ತ್ತಿ­ರುವ ಜಿದ್ದಾಜಿದ್ದಿಯ ವರದಿಗಳನ್ನೂ ಸುದೀ­ರ್ಘ­ವಾಗಿ ಕಳುಹಿಸುತ್ತಾನೆ ಎಂದು ಕಾಯುತ್ತಾ ಕುಳಿತಿದ್ದವರಿಗೆ ಈ ರೀತಿಯ ಮೆಸೇಜ್ ನೋಡಿ ಅಚ್ಚರಿಯೂ ಆಯಿತು. ಟೆಲಿಗ್ರಾಂ, ಟೆಲಿಗ್ರಾಫ್ ಮೂಲಕ ಮೆಸೇಜ್ ಕಳುಹಿಸುವ ಈ ರೀತಿಯ ಪದ್ಧತಿಗೆ ಇಲಾಖೆಯೇ ತಿಲಾಂಜಲಿ ನೀಡಿದೆ.

ಈಗ ಮೊಬೈಲ್‌ನಲ್ಲಿ ಯುವಜನಾಂಗ ಈ ರೀತಿಯ ಕೋಡ್‌ವರ್ಡ್‌ಗಳ ಮೂಲಕ ಸಂಕೇತಗಳನ್ನು ಕಳು­ಹಿಸುತ್ತಾ ಡಾವಿಂಚಿಗಳಾಗುತ್ತಿದ್ದಾರೆ. ನಮ್ಮ ಪೆಕರನೂ ಈ ರೀತಿ ಕೋಡ್‌ವರ್ಡ್ ವರದಿ ಕಳು­ಹಿಸಿ­ದರೆ, ಇಲ್ಲಿ ಅದನ್ನು ಬಿಡಿಸಿ ಬರೆಯುವ­ವ­ರಾರು? ಹೋಗಲಿ, ಈ ಲಿಪಿ ರಹಸ್ಯವನ್ನು ಒಡೆದು, ಶಬ್ದಭಂಡಾರವನ್ನು ಜೋಡಿಸಿಡು­ವವರಾರು?
ತಕ್ಷಣ ಸಂಪಾದಕರು ಫೋನ್ ಎತ್ತಿಕೊಂಡರು.
‘ಅಲ್ರಿ, ಪೆಕರ ಅವರೇ, ಏನ್ ಸುದ್ದಿ ಬರೆದಿ­ದ್ದೀರಿ? ಬಹಳ ಅವಸರವೇನಾದರೂ ಇತ್ತೇ? ಬರೀ ಕೋಡ್‌ನಲ್ಲಿ ವರದಿ ಬರೆದು ಕಳುಹಿಸಿದ್ದೀ­ರಲ್ಲಾ? ಅದನ್ನ ಏನಂತ ಅರ್ಥಮಾಡಿ­ಕೊಳ್ಳೋದು?’
‘ತಪ್ಪು ತಿಳಿದುಕೊಳ್ಳಬೇಡಿ ಸಾರ್, ಅದು ಚುನಾ­ವಣಾ ವರದಿ’ ಪೆಕರ ಕೂಲಾಗಿ ಉತ್ತರಿಸಿದ.
‘ಚುನಾವಣಾ ಸಮೀಕ್ಷೆಗಳೇ?! ತಮಾಷೆ ಮಾಡ್ತಾ ಇದೀರಾ? ಇಂಗ್ಲಿಷ್ ಅಕ್ಷರಗಳನ್ನು ಎ ಯಿಂದ ಜಡ್ ವರೆಗೆ ಜೋಡಿಸಿಟ್ಟರೆ ಚುನಾ­ವಣಾ ವರದಿ ಆಗುತ್ತೇನ್ರಿ?’ ಸಂಪಾದಕರು ಮತ್ತೆ ಕುತೂಹಲ ವ್ಯಕ್ತಪಡಿಸಿದರು.

‘ಹೌದು ಸಾರ್, ಈ ಸಲದ ಲೋಕಸಭಾ ಚುನಾವಣೆ ಹಲ­ವಾರು ದೃಷ್ಟಿಯಿಂದ ಭಾರ­ತೀಯ ಸಂಸ್ಕೃತಿಗೆ, ಭಾರತೀಯ ಭಾಷೆಗೆ ಅಪಾರ ಕೊಡು­ಗೆ­ಯನ್ನೇ ಕೊಟ್ಟಿದೆ. ಹೊಸ ಭಾಷೆ­ಯೊಂದು ನಮ್ಮ ಸಾಮಾಜಿಕ ಕ್ಷೇತ್ರವನ್ನು ಪ್ರವೇ­ಶಿ­­ಸಿದೆ ಎನ್ನು­ವುದು ಗೋಚರಿಸುತ್ತಿದೆ ಸಾರ್, ನಾನು ಅದನ್ನೇ ಹೈಲೈಟ್ ಮಾಡಿದ್ದೀನಿ ಸಾರ್, ಎಕ್ಸ್‌­ಕ್ಲೂಸಿವ್ ನ್ಯೂಸ್ ಸಾರ್’ ಎಂದು ಪೆಕರ ಹೆಮ್ಮೆಯಿಂದ ಒಂದೇ ಉಸಿರಿಗೆ ಹೇಳಿದ.
‘ಅದೇನ್ ಸರಿಯಾಗಿ ಹೇಳ್ರಿ, ಒಳ್ಳೇ ರಾಗರಾಜಭಟ್ಟರ ಡೈಲಾಗ್ ತರಹ ಹೇಳಬೇಡಿ’ ಎಂದು ಸಂಪಾದಕರು ಗದರಿದರು.
‘ಸಮಾಜದಲ್ಲಿ ಇವತ್ತು ಶ್ರೇಷ್ಠ ಮನಸ್ಸುಗಳ ಜೊತೆಗಿನ ಒಡನಾಟ ಕಡಿಮೆ ಆಗಿದೆ. ಭ್ರಷ್ಟರು, ನೀಚರ ಜೊತೆಗಿನ ಒಡ­ನಾಟವೇ ಜಾಸ್ತಿ ಆಗಿದೆ ಎಂದು ಇತ್ತೀಚೆಗೆ ಕ್ಯಾತ ವಿಮರ್ಶ­ಕ­ರಾದ ಡಾ.ಹರಹಳ್ಳಿ ಬಾಲಕೃಷ್ಣ ಅವರು ಅಪ್ಪಣೆ ಕೊಡಿಸಿ­ಲ್ಲವೇ? ಇವತ್ತು ಚುನಾವಣೆ ಯಲ್ಲಿ ಭ್ರಷ್ಟರು, ನೀಚರ ಜೊತೆ­ಗಿನ ಒಡನಾಟ ಜಾಸ್ತಿಯಾಗಿ ಈ ರೀತಿ ಪದಗಳರಾಶಿಯೇ ಕನ್ನಡ ಪದಕೋಶವನ್ನು ಸೇರಿಕೊಂಡು ಬಿಟ್ಟಿದೆ.’ ಎಂದು ಪೆಕರ ಹೇಳಲಾರಂಭಿಸಿದ.

‘ಸಾಕು, ಸಾಕು, ನಿಲ್ಲಿಸ್ರಿ ನಿಮ್ಮ ಉಪನ್ಯಾಸ. ಅದೇನ್ ಪದಕೋಶ ಸೇರ್ಪಡೆ ವಿಷಯ ಸರಿಯಾಗಿ ಹೇಳಿ’ ಎಂದು ಸಂಪಾದಕರು ಬೇಸರದಿಂದ ಗದರಿಸಿದರು.
‘ಶಿವಮೊಗ್ಗದಲ್ಲಿ ಸಿನಿಮಾ ಕಲಾವಿದರುಗಳನ್ನೆಲ್ಲಾ ‘ಜೋಕರ್’ಗಳು ಎಂದು ಕರೆಯಲಿಲ್ಲವೇ? ಜೋಕರ್ ಪದ ಸಿನಿಮಾ ಕಲಾವಿದರಿಗೆ ಮತ್ತೊಂದು ಹೆಸರಾಗಿ ಭಾಷಾಕೋಶ ಸೇರಿತಲ್ಲಾ?’
‘ಅದರಲ್ಲಿ ಏನ್ ತಪ್ಪಿದೆ ಬಿಡ್ರಿ, ರಾಜ್‌ಕಪೂರ್ ಅವರೇ ‘ಮೇರಾ ನಾಮ್ ಜೋಕರ್’ ಎಂದು ಹೇಳಿಕೊಂಡರಲ್ಲ’ ಎಂದು ಸಂಪಾದಕರು ಪೆಕರನ ಮಾತನ್ನು ತಳ್ಳಿಹಾಕಿದರು.

‘ಮಾಡುಕ್ಕೆ ಕೇಮಿಲ್ಲ, ಕೇರಕ್ಕೆ ಮೊರ ಇಲ್ಲ ಎನ್ನುವಂತೆ ನಮ್ಮ ನಮೋ ಸಾಹೇಬರೇ, ಎಬಿಸಿಡಿ, ಆರ್‌ಎಸ್‌ವಿಪಿ, ತ್ರೀ ಎಕೆ ಎಂಬ ಪದಪುಂಜಗಳನ್ನು ಪದಕೋಶಕ್ಕೆ ಸೇರಿಸಿ ಕೃತಕೃತ್ಯರಾಗಿದ್ದಾರೆ. ಇದು ಈ ಸಲದ ಚುನಾವಣಾ ಕೊಡುಗೆ’
‘ಹಾಗಂದರೇನು? ಸ್ವಲ್ಪ ವಿವರಿಸಿ’
‘ಎ ಅಂದರೆ ಆದರ್ಶ ಹಗರಣ, ಬಿ ಎಂದರೆ ಬೊಫೋರ್ಸ್, ಸಿ ಎಂದರೆ ಕೋಲ್‌ಗೇಟ್, ಆರ್‌ಎಸ್‌ವಿಪಿ ಎಂದರೆ ರಾಹುಲ್, ಸೋನಿಯಾ, ವಾಧ್ರಾ, ಪ್ರಿಯಾಂಕ! ಇದನ್ನೆಲ್ಲಾ ನಮೋ­ನಮೋ ಸಾಹೇಬರು ಪ್ರೈಮರಿ ಶಾಲೆಯ ಕ್ಲಾಸ್‌­ರೂಂ­ನಲ್ಲಿ ಮೇಷ್ಟ್ರು ತರ ಪಾಠ ಮಾಡ್ತಾ ಹೇಳ್ತಾ ಇದಾರಂತೆ! ಇದನ್ನು ಪ್ರಿಯಾಂಕ ಸಿಸ್ಟರ್ ಖಂಡಿಸ್ತಾ ಇದಾರಂತೆ! ನೋಡಿದ್ರಾ ಹೇಗಿದೆ ಪದ ವೈಭವ?!’ ಪೆಕರ ಖುಷಿಯಿಂದ ವಿವರಿಸಿದ.
‘ಪ್ರಿಯಾಂಕ ಸಿಸ್ಟರ್ ಸುಮ್ನೆ ಕುಳಿತಿಲ್ಲ ಬಿಡ್ರಿ, ಮಹಿಳೆಗೆ ಅಗೌ­ರವ ತೋರಿಸುವ ಮುಖಂಡರನ್ನು ಮನೆಯಿಂದ ಹೊರದಬ್ಬಿ ಎಂದು ಅವರೂ ನಮೋ ಫ್ಯಾಮಿಲಿ ಮ್ಯಾಟರ್ ಹೊರತೆಗೆದು ಚಚ್ಚಿಹಾಕಿದ್ದಾರಲ್ಲಾ? ದೇಶ ಆಳೋದಿಕ್ಕೆ ೫೬ ಇಂಚಿನ ಚೆಸ್ಟ್ ಇದ್ದರೆ ಸಾಲದು, ದೊಡ್ಡ ಹೃದಯ ಬೇಕು ಎಂದೂ ಚುಚ್ಚಿದ್ದಾರಲ್ಲಾ’ ಎಂದು ಸಂಪಾದಕರು ಹೇಳಿದರು.
ಎಗ್ಗಿಲ್ಲದೆ ನಡೆಯುತ್ತಿದೆ ದ್ವೇಷಭಾಷಣ
ನಾಯಕರಿಗಿದು ಯಾವ ಭೂಷಣ?
ಕಟ್ಟೆ ಒಡೆದಿದೆ ಮಾತಿನ ಭರಾಟೆ
ಮತದಾರ ತೆಗೆದುಕೊಳ್ವನೇ ತರಾಟೆ?

‘ಬಯ್ತಾ ಹೇಳ್ದೋರ್ ಬದ್ಕೂಕ್ಹೇಳುದ್ರು; ನಗ್ತಾ ಹೇಳ್ದೋರ್ ಕೆಡೂಕ್ಹೇಳಿದ್ರು ಅನ್ನೋ ತರಹ ಎಲ್ಲ ಪಾರ್ಟಿಯ­ವರೂ, ನಾಮುಂದು, ತಾಮುಂದು ಅಂತಾ ದ್ವೇಷ ಭಾಷಣ ಶುರು ಮಾಡೇ ಬಿಟ್ಟಿದ್ದಾರೆ ಸಾರ್, ನಮೋಗೆ ವಿರೋಧ­ವಾಗಿ­ರು­ವವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಬಿಹಾರದಲ್ಲಿ ಗಿರಿರಾಜ್‌ಸಿಂಗ್ ಗುಡುಗಿದ್ದಾರೆ. ಹಿಂದೂ ಬಡಾವಣೆ­ಯಲ್ಲಿ­ರುವ ಆಸ್ತಿ ಖರೀದಿಸಲು ಮುಸ್ಲಿಮರಿಗೆ ಅವಕಾಶ ನೀಡ­ಬಾ­ರದು ಎಂದು ತೊಗಾಡಿಯಾ ಕೂಗಾಡಿದ್ದಾರೆ. ನಾನೇನ್ ಕಮ್ಮಿ ಅಂತಾ  ಆಮ್ ಆದ್ಮಿ ಪಕ್ಷದವರೂ ಮುನ್ನುಗ್ಗಿ ಮತ­ಹಾಕು­ವಾಗ ಮುಸ್ಲೀಮರೆಲ್ಲಾ ಕೋಮುವಾದಿಗಳಾಗಿ ಅಂತಾ ಕರೆ ಕೊಟ್ಟುಬಿಟ್ಟಿದ್ದಾರೆ.ಬೇನಿಪ್ರಸಾದ್ ವರ್ಮಾ ಅವರು ಸುಮ್ನೆ ಇದ್ರೆ ಆಗುತ್ತಾ? ಅವರೂ ನಮೋ ಒಬ್ಬ ‘ಕೊಲೆಗಡುಕ’ ಎಂದೇ ಬಿಟ್ಟಿದ್ದಾರೆ. ಪೆಕರ ಬೈಯ್ಗುಳ ಪುರಾಣ ಹೇಳುತ್ತಲೇ ಹೋದ.

‘ಅದೇನ್ ಬಿಡ್ರಿ, ನಮ್ಮ ಅಯ್ಯ ಅವರೇ ನಮೋ ಒಬ್ಬ ‘ನರ­ಹಂತಕ’ ಎಂದು ಹೇಳಿ ಚುನಾವಣಾ ಆಯೋಗದಿಂದ ನೋಟಿಸ್ ಪಡೆಯಲಿಲ್ಲವೇ? ಇದನ್ನೆಲ್ಲಾ ಸ್ಲಿಪ್ ಆಫ್ ದಿ ಟಂಗ್ ಅಂತಲೋ ಮಾಧ್ಯಮಗಳು ತಿರುಚಿ ಬರೆದಿದ್ದಾವೆ ಅಂತಲೋ ಹೇಳಿ ಸಂಭಾಳಿಸಬಹುದು. ಟಂಗ್ ಸ್ವಲ್ಪ ಟ್ವಿಸ್ಟ್ ಆದರೆ ಮಾತು ಹೀಗೆ ರಂಗ್ ಆಗುತ್ತೆ’ ಎಂದು ಸಂಪಾದಕರು ಮತ್ತಷ್ಟು ವಿವರ ಸೇರಿಸಿದರು.
‘ಅಯ್ಯೋ ಬಿಡಿ ಸಾರ್, ನಮ್ಮ ಬೈರಪ್ಪಾಜೀ ಅವರೂ ಅನಂತ­ಮೂರ್ತಿ ಸಮಯಸಾಧಕ ಅಂತಾ ಹೇಳಿ, ಕಾಂಗ್ರೆಸ್‌­ನ­ವ­ರದು ಕುಟುಂಬ ಪಕ್ಷ ಎಂದು ಹೇಳಲಿಲ್ಲವೇ? ನಮ್ಮ ಬಾಬಾ ರಾಮದೇವರಿಗೂ ಯೋಗಚಪಲವಿದ್ದಂತೆ ಬಾಯಿ ಚಪಲವೂ ಇದ್ದಂತಿದೆ. ಅಡ್ಡೇಟಿನ ಜೊತೆ ಗುಡ್ಡೇಟು ಅನ್ನುವಂತೆ ರಾಹುಲ್ ಹನಿಮೂನ್ ವಿಷಯ ಪ್ರಸ್ತಾಪಿಸಿ ಎಲ್ಲ ಕಡೆ ಪ್ರತಿ­ಭಟ­ನೆಗೆ ಕಾರಣರಾಗಿದ್ದಾರೆ.

ಸ್ವಾಮೀಜಿಗಳಿಗೇಕೆ ಸ್ವಾಮಿ ಮಧು­ಚಂದ್ರದ ಮಾತು?! ಮಾಯಾವತಿ ಅಮ್ಮನವರೇನು ಸುಮ್ಮನೆ ಕೂತ್ಕೋಂಡ್ರ? ನನ್ನದೂ ಒಂದು ಕಾಣಿಕೆ ಇರಲಿ ಅಂತಾ ಉಲ್ಟಾ ಚೋರ್ ಕೊತ್ವಾಲ್ ಕೊ ಡಾಟೆ ಎಂದು ಹೇಳುವ ಮೂಲಕ, ಮನೆ ಕಾವಲುಗಾರನಿಗೆ ಕಳ್ಳನೇ ಬೈದಂತೆ ಬೈಯ್ದಿದ್ದಾರೆ. ಇವೆಲ್ಲಾ ಏನ್ ಹೇಳುತ್ತೆ ಸಾರ್? ಮಾತು ಮನೆ ಕೆಡಿಸ್ತು ಅನ್ನೋದು ಇವರ್್ಯಾರಿಗೂ ಗೊತ್ತೇ ಇಲ್ವ? ಒಟ್ಟಿ­ನಲ್ಲಿ ಎಲ್ಲಾ ಸೇರಿ, ಬೈಗುಳ ಭಾಷಾಶಾಸ್ತ್ರವೊಂದರ ರಚನೆಗೆ ಪ್ರೇರೇಪಣೆ ಕೊಟ್ಟಿದ್ದಾರೆ ಅನ್ನೋದು ನನ್ನ ಅಭಿಪ್ರಾಯ ಸಾರ್’ ಎಂದು ಪೆಕರ ತನ್ನ ಸಂಶೋಧನೆಯನ್ನು ಗಳುಪಿದ.

‘ಪರವಾಗಿಲ್ಲಾ ಪೆಕರ ಅವರೇ, ನೀವು ಈ ವಿಷಯದಲ್ಲಿ ಪಿಎಚ್‌ಡಿ ಯನ್ನೇ ಮಾಡಬಹುದು. ಅಷ್ಟೊಂದು ವಿಷಯ ಸಂಗ್ರಹ ಮಾಡಿದ್ದೀರಾ. ಅಕಸ್ಮಾತ್ ಪಿಎಚ್‌ಡಿ ಪ್ರವೇಶ ಪರೀಕ್ಷೆ­ಯಲ್ಲಿ ಅರ್ಹತೆ ಪಡೆಯಲು ಕಡಿಮೆ ಅಂಕಗಳು ಬಂತೂ ಅಂತಾ ಅನ್ನಿ, ನಿಯಮಕ್ಕೇ ತಿದ್ದುಪಡಿ ತಂದು ನಿಮಗೆ ಎಲಿಜಿಬಿಲಿಟಿ ಬರೋ ಹಾಗೆ ಮಾಡೋಣ’ ಎಂದು ಸಂಪಾದಕರು ಅಭಯ ನೀಡಿದರು.
ಆಡಳಿತದಲ್ಲಿ ಪಿಎಂ ಬರಿ ಮುಖವಾಡ
ನಡೆವುದೆಲ್ಲಾ ತಾಯಿಮಗನ ಕೈವಾಡ
ಸಿಂಗ್ ವೈಖರಿ ಬರೆದಿಟ್ಟರು ಬಾರು
ದಶಕದಾಳ್ವಿಕೆಗೆ ಎರಚಿದರು ಕೆಸರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT