ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನದ ನಂತರ ಮಠಧ್ಯಾನ

ಅಕ್ಷರ ಗಾತ್ರ

ಪೆಕರನ ವೇಷ ನೋಡಿ ಎಲ್ಲರಿಗೂ ಆಶ್ಚರ್ಯ! ಸಂಪೂರ್ಣ ಕಾವಿಧಾರಿ­ಯಾಗಿ ಬರುತ್ತಿದ್ದ ಪೆಕರನಿಗೆ ಬುದ್ಧಿ ಭ್ರಮಣೆ­ಯಾ­ಗಿ­ರ­ಬಹುದೇ ಎಂಬ ಸಂಶಯವೂ ಕೆಲವರಿಗೆ! ಇಷ್ಟು ದಿನ ಚೆನ್ನಾಗಿಯೇ ಇದ್ದ. ಮತದಾನ ಮುಗಿದ ನಂತರ ಈ ರೀತಿ ಪರಿವರ್ತನೆಯಾಗಿ ಬಿಟ್ಟ. ಅಯ್ಯೋ ಪಾಪ! ಎಂದು ಸ್ನೇಹಿತರೆಲ್ಲಾ ಕನಿಕರಪಟ್ಟರು.

ಬೆಂಗಳೂರು ನಗರದಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿರುವುದರಿಂದ ಪೆಕರ ಖಿನ್ನತೆಗೆ ಒಳಗಾಗಿದ್ದಾನೋ ಏನೋ ಎಂದು ಕೆಲವರು ಲೊಚಗುಟ್ಟಿದರು.

‘ಇರಲಾರದು, ಕಳೆದ ಸಲಕ್ಕಿಂತ ಈ ಸಲ ಹತ್ತು ಪರ್ಸೆಂಟ್ ಹೆಚ್ಚಾಗಿಯೇ ಆಗಿದೆ. ಎಲ್ಲ­ಕ್ಕಿಂತ ಹೆಚ್ಚಾಗಿ ಬೆಂಗಳೂರಿನ ಜನ ಆಲಸಿಗಳೂ, ಸೋಮಾರಿಗಳೂ ಆಗಿದ್ದಾರೆ ಎನ್ನುವುದು ಎಲ್ಲ­ರಿಗೂ ಗೊತ್ತಿರುವ ವಿಚಾರವೇ, ತಲೆಕೆಡಿಸಿ­ಕೊಳ್ಳುವ ವಿಷಯವೇ ಅಲ್ಲ ಬಿಡಿ, ಏಳುದಿನ ಒಟ್ಟಿಗೆ ರಜೆ ಬಂದರೆ ಬಿಡ್ತಾರೆಯೇ? ಯಾವನು ಗೆದ್ರೂ ಮಾಡೋದು ಅಷ್ಟರಲ್ಲೇ ಇದೆ ನಡಿ ಅಂತ ಹೆಂಡತಿ ಮಕ್ಕಳನ್ನು ಕರಕೊಂಡು ಟೂರ್ ಹೊರಟು ಬಿಟ್ಟಿರ್ತಾರೆ’ ಎಂದು ಒಬ್ಬರು ಸಮಜಾಯಿಷಿ ಕೊಡಲಾರಂಭಿಸಿದರು.

‘ಯಾರು ಬಂದ್ರೆ ಏನು? ಮತದಾನ ಕಮ್ಮಿ­ಯಾದ್ರೆ ಪೆಕರ ಏಕೆ ಡಲ್ಲಾಗಬೇಕು? ಕಾರಣ ಅದಲ್ಲ. ಪಾಪ, ಪೆಕರ ಬೆಳಿಗ್ಗೆ ಏಳು ಗಂಟೆಗೇ ಮತಗಟ್ಟೆಗೆ ಹೋಗಿದ್ದಾನೆ. ತಾನೇ ಮೊದಲ ವೋಟಿಗ ಆಗಬೇಕು ಎಂಬುದು ಅವನ ಆಸೆ. ಆದರೆ ಮತಯಂತ್ರವೇ ಕೆಲಸ ಮಾಡಲು ತಕ­ರಾರು ಮಾಡಿದ್ರೆ ಅವನೇನು ಮಾಡ್ತಾನೆ? ಪಾಪ! ಒಂದು ಗಂಟೆ ಕಾದರೂ ಮತಯಂತ್ರ ರಿಪೇರಿ ಆಗಲಿಲ್ಲವಂತೆ, ವಾಪಸು ಬಂದನಂತೆ, ಅದಕ್ಕೇ ಇರಬೇಕು ಬೇಜಾರ್ ಮಾಡಿಕೊಂಡಿದ್ದಾನೆ’ ಎಂದು ಮತ್ತೊಬ್ಬ ವಿವರಿಸಿದ.

‘ಕಾಫಿ, ತಿಂಡಿ ಮಾಡಿಕೊಂಡು ಪೆಕರ ಮತ್ತೆ ಮತಗಟ್ಟೆಗೆ ಹೋದನಂತೆ. ಬೇಜಾನ್ ಕ್ಯೂ ಇತ್ತಂತೆ. ಕ್ಯೂ ಮೂವ್ ಆಗ್ತಾನೇ ಇಲ್ಲವಲ್ಲ ಏಕೆ ಅಂತ ಬಿಸಿಲಿನಲ್ಲಿ ಮಂಡೆ ಬಿಸಿ ಮಾಡಿಕೊಂಡು, ಏಕೆ ಅಂತ ಕೇಳಿದ್ರೆ, ಒಳಗೆ ಹಾಲಿ ಇರೋ, ಮಾಜಿ ಆಗೋ ಎಂ.ಪಿ.ಯೊಬ್ಬರು ಮತಗಟ್ಟೆ ಅಧಿಕಾರಿ­ಗಳನ್ನು ದಬಾಯಿಸ್ತಾ ಇದ್ದರಂತೆ. ಈ ಮತ­ಯಂತ್ರ ಪಶ್ಚಿಮಕ್ಕೆ ಇಟ್ಟೀದ್ದೀರಲ್ರಿ, ಪಶ್ಚಿಮ ದಿಕ್ಕಿನಿಂದ ಕೆಟ್ಟ ಕಿರಣಗಳು ಬಂದು ನೆಗಟಿವ್ ಪರಿಣಾಮ ಬೀರುತ್ತೆ ಅಂತ ಗೊತ್ತಿಲ್ಲವಾ? ಕಾಂಗ್ರೆಸ್‌ಗೆ ವೋಟ್ ಹಾಕಬೇಕು ಅಂತ ಮನಸ್ಸಿ­ನಲ್ಲಿ ಅಂದುಕೊಂಡು ಬಂದವನು, ಈ ಮತ­ಯಂತ್ರ ಕಂಡಕೂಡಲೇ ಕಮಲದ ಬಟನ್ ಕಡೆ ಕೈ ಹಾಕ್ತಾನೆ. ಕಮಲಕ್ಕೆ ಹಾಕಬೇಕು ಅಂತ ಬಂದ­ವನು ಆಟೋಮೆಟಿಕ್ ಆಗಿ ಕಾಂಗ್ರೆಸ್ ಬಟನ್ ಒತ್ತಿಬಿಡ್ತಾನೆ. ಮೊದ್ಲು ಈ ಟೇಬಲ್ ತಿರುಗಿಸ್ರಿ’ ಎಂದು ಪುಢಾರಿ ಮಹಾಶಯರು ಅಬ್ಬರಿಸುತ್ತಿ­ದ್ದು­ದನ್ನು ಹೊರಗೆ ಕ್ಯೂನಲ್ಲಿ ನಿಂತಿದ್ದ ಪೆಕರ ಕೇಳಿಸಿಕೊಂಡು ಸುಸ್ತಾದನಂತೆ. ರಾಜಕಾರಣಿಯ ಅಬ್ಬರಕ್ಕೆ ಹೆದರಿ ಅಧಿಕಾರಿಗಳು ಟೇಬಲನ್ನು ‘ವಾಸ್ತು ಪ್ರಕಾರ’ ತಿರುಗಿಸಿ ಪುಢಾರಿಗಳಿಗೆ ಹೆಲ್ಪ್ ಮಾಡಿದ್ದು ಕಂಡು ಪೆಕರನಿಗೆ ಮತಯಂತ್ರದ ಮೇಲೇ ವಾಂತಿ ಮಾಡಿಕೊಳ್ಳೋ ಹಾಗಾಗಿ, ಎಂಥಾ ಮೌಢ್ಯ! ಎಂಥಾ ಮೂಢನಂಬಿಕೆಗಳಲ್ಲಿ ನಾವು ಬದುಕ್ತಾ ಇದ್ದೀವಿ ಎಂದು ಜುಗುಪ್ಸೆಯಾ­ಯಿತಂತೆ. ಅದಕ್ಕೆ ಮತದಾನದ ನಂತರ ಹೀಗೆ ಸನ್ಯಾಸಿಯಾಗಿದ್ದಾನೆ’ ಎಂದು ಕೆಲವರು ವಿಶ್ಲೇಷಣೆ ಮಾಡಿದರು.

ಮುಗಿದೇ ಹೋಯ್ತು ಮತದಾರನ ಪವರ್
ಇನ್ನು ಪುಢಾರಿ ಆಗ್ತಾನೆ ಜೋರ್
ಯಾರಿಗೆ ಬೇಕಾಗಿದೆ ದೇಶದ ಪ್ರಗತಿ
ನನ್ನ ಕುಟುಂಬಕ್ಕೇ ಸಿಗಲಿ ಸದ್ಗತಿ

‘ಅದಿರಲಾರದು, ಮೂಢನಂಬಿಕೆಯನ್ನು ವಿರೋಧಿಸೋ ಮನೋಭಾವ ಇರುವವನು ಸನ್ಯಾಸಿ ಏಕೆ ಆಗ್ತಾನೆ? ಮೊನ್ನೆ ನೋಡಲಿಲ್ವ? ಬಾಬಾ ರಾಮದೇವ್ ಜೊತೆ ಮತ್ತೊಬ್ಬ ಸಾಧು, ಹಣ ತಂದು ಕ್ಷೇತ್ರದಲ್ಲಿ ಹಂಚುವ ವಿಷಯ ಟಿ.ವಿ. ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗಿಯೇ ಬಿಟ್ಟಿತಲ್ಲ! ಕಾವಿ ಹಾಕಿಕೊಂಡವರೆಲ್ಲಾ ದೇವ­ಮಾನವ­ರಲ್ಲ, ವಸೂಲುಮನ್ನರು ಎಂಬುದು ನೆನಪಿನಲ್ಲಿರಲಿ’ ಎಂದು ಸ್ನೇಹಿತರು ಚರ್ಚೆಗೆ ಕಾವು ನೀಡಿದರು.

ಅಷ್ಟರಲ್ಲಿ ಪೆಕರ, ಅವರ ಬಳಿಗೆ ಬಂದೇ ಬಿಟ್ಟ. ‘ಕಾವಿ ಹಾಕ್ಕೊಂಡು ರಾಮೇಶ್ವರಕ್ಕೆ ಹೋಗ್ತಾ ಇದೀರೋ? ವಾರಾಣಸಿಗೆ ಹೋಗ್ತಾ ಇದೀರೋ?’ ಎಂದು ಸ್ನೇಹಿತರು ಚುಡಾಯಿ­ಸಿದರು.

‘ಆ ತರಹ ಏನೂ ಇಲ್ಲ. ವಿಚಾರ ಸಂಕಿರಣ­ವೊಂದಕ್ಕೆ ಹೋಗಿದ್ದೆ. ‘ಸ್ವಾಮೀಜಿಗಳು ಹಾಗೂ ಮಠಗಳು ಜನಕ್ಕೆ ದಾರಿ ತೋರುವ ದೀಪಗಳು, ಅವರ ಮನೆಯೇ ಮಠಗಳು’ ಎಂದು ಅಲ್ಲಿ ವಿದ್ವಾಂಸ­ರೊಬ್ಬರು ಅಪ್ಪಣೆ ಕೊಡಿಸಿದ್ದಾರೆ. ಅದಕ್ಕೆ ನಾನು ಮಠ ಕಟ್ಟೋಣ ಎಂದುಕೊಂಡಿ­ದ್ದೇನೆ. ಯಾವ ಸರ್ಕಾರ ಬಂದರೂ ಮಠಕ್ಕೆ ದಂಡಿಯಾಗಿ ಹಣ ಕೊಡ್ತದಲ್ಲಾ’ ಎಂದು ಪೆಕರ ಐಡಿಯಾ ಹೇಳಿದ.

‘ವಿಚಾರ ಸಂಕಿರಣದಲ್ಲಿ ಹೇಳಿದ್ದೆಲ್ಲಾ ನಿಜ ಅಂದ್ಕೋ­ಬೇಡಪ್ಪಾ, ಮಠಗಳೆಲ್ಲಾ ಈಗ ರಾಜ­ಕೀಯ ಪುಢಾರಿಗಳನ್ನು ಪೋಷಿಸುವ ಕೇಂದ್ರ­ಗಳಾಗಿ­ಬಿಟ್ಟಿವೆ ಎಂಬುದು ನಿನಗೆ ಗೊತ್ತಿಲ್ಲವಾ? ಮಠಗಳು ವಿದ್ಯೆ ನೀಡುವ ಕೇಂದ್ರಗಳಾಗಿಲ್ಲ. ಹಣ ದೋಚುವ ಕೇಂದ್ರಗಳಾಗಿವೆ. ಎಲ್ಲ ಮಠಗಳ ಮೇಲೂ ರೈಡ್ ಮಾಡಿದರೆ, ಇಡೀ ಕರ್ನಾಟಕ ಅಭಿವೃದ್ಧಿ ಮಾಡೋವಷ್ಟು ಸಂಪತ್ತು ಸಿಗುತ್ತೆ, ಸುಮ್ನೆ ಮಠಮಠ ಅನ್ನಬೇಡ’ ಎಂದು ಸ್ನೇಹಿತರು ಹಿತವಾದ ಹೇಳಿದರು.

‘ಸ್ವಾಮೀಜಿಗಳಿಗೆ ಅನುರೂಪದ ಕನ್ಯೆ ನೋಡಿ ಮದುವೆ ಮಾಡಬೇಕು’ ಎಂದು ಕ್ಯಾತ ಸಾಹಿತಿ ಚಂಬಾಜೀ ಅವರು ಕರೆ ಕೊಟ್ಟಿದ್ದಾರಲ್ಲಾ, ಅದರ ಪರಿಣಾಮಾನೂ ಇರಬಹುದು?!’ ಎಂದು ಮತ್ತೊಬ್ಬ ಸ್ನೇಹಿತ ಒಗ್ಗರಣೆ ಹಾಕಿದ.

ಅಷ್ಟರಲ್ಲಿ ಪೆಕರನಿಗೆ ಸಂಪಾದಕರಿಂದ ಮೊಬೈಲ್ ಕರೆ ಬಂತು. ದಡಬಡಾಯಿಸಿ ಪೆಕರ ಫೋನ್‌ ಎತ್ತಿಕೊಂಡ. ‘ಏನ್ರೀ ಪೆಕರ ಅವರೇ, ಮತದಾನ ಮುಗೀತು ಅಂತ ನಿರಾಳವಾಗಿ ಕಾಲ ಕಳೀತಿದ್ದೀರಾ ಹೇಗೆ? ಪ್ರಚಾರದಿಂದ ದಣಿದ ಅಭ್ಯರ್ಥಿಗಳು ಏನೇನ್ ಮಾಡ್ತಾ ಇದ್ದಾರೆ ಅಂತ ಸ್ವಲ್ಪ ನೋಡ್‌ಬಾರ್ದಾ?’ ಎಂದು ಸಂಪಾದಕರು ಆಣತಿಯಿತ್ತರು.

ರಾಜಕಾರಣಿಗಳಿಗೆ ಬೇಕಂತೆ ರೆಸ್ಟ್
ಅದೇ ಪರ್ಮನೆಂಟಾದರೆ ಬೆಸ್ಟ್
ಬದಲಾಗಬೇಕು ಮತದಾರನ ಟೇಸ್ಟ್
ಆಗ ನೋಡಿ ತೊಲಗುತ್ತೆ ಸ್ವಲ್ಪ ವೇಸ್ಟ್

‘ಯಸ್ ಸಾರ್’, ಎಂದು ಎದೆಯುಬ್ಬಿಸಿದ ಪೆಕರ, ಕಾವಿ ಡ್ರೆಸ್ ಕಿತ್ತೊಗೆದು ಕಾರ್ಯ­ನಿರತನಾದ.

ನೇರವಾಗಿ ಮಾರಸ್ವಾಮಿಗಳ ಮನೆಗೆ ಬಂದ. ಮಾರಸ್ವಾಮಿಗಳು ಅಂಗಮರ್ದನ ಮಾಡಿಸಿಕೊಳ್ಳುತ್ತಾ ಇದ್ದರು.
‘ಸಾರ್, ತಾವು ಅಂಗಮರ್ದನ ಮಾಡಿಕೊಳ್ಳುವ ಉದ್ದೇಶ?’

‘ಚುನಾವಣೆ ಪ್ರಚಾರದ ಪ್ರಯುಕ್ತ ನಿರಂತರ ಪ್ರವಾಸ ಮಾಡಿ ಮೈಕೈಯೆಲ್ಲಾ ನೋವಾಗಿದೆ. ಅದಕ್ಕೆ ಮನೆಯಲ್ಲೇ ಅಂಗಮರ್ದನ ಮಾಡಿಸಿ­ಕೊಳ್ಳುತ್ತಾ ಇದ್ದೀನಿ. ಫಾರಿನ್‌ನಲ್ಲಿ ಇನ್ನೂ ಚೆನ್ನಾಗಿ ಮಾಡ್ತಾರಂತೆ ಅಲ್ಲಿಗೂ ಹೋಗೋಣ ಅಂತ ಇದ್ದೀನಿ’.
‘ಚಿಕ್ಕಬಳ್ಳಾಪುರದಲ್ಲಿ ಜಾಸ್ತಿ ಗುದ್ದಾಡಿದಂತೆ ಕಾಣಲಿಲ್ಲವಲ್ಲ ಸಾರ್’.

‘ರಾಮನಗರ ಬಿಟ್ಟು ಚಿಕ್ಕಬಳ್ಳಾಪುರಕ್ಕೆ ಹೋಗಿದ್ದರಿಂದ ರಾಮನಗರದ ಮತದಾರರು ಗುದ್ದೋದು ಗ್ಯಾರಂಟಿ. ಅದಕ್ಕೆ ಅಣ್ಣಾ ಅವರು ಈಗ್ಲೇ ರೆಡಿಯಾಗ್ತಾ ಅವ್ರೆ’ ಎಂದು ಅಭಿಮಾನಿಯೊಬ್ಬ ಕೂಗಿಕೊಂಡ.

‘ಸಾರ್, ಪಿ.ಎಂ. ಆಗೋ ಹುಮ್ಮಸ್ಸಿನಲ್ಲಿರುವ ದೊಡ್ಡಗೌಡರು ರಾಜಕೀಯ ಬೆಳವಣಿಗೆ ಬಗ್ಗೆ ಗಂಭೀರವಾಗಿ ಲೆಕ್ಕ ಹಾಕ್ತಾ ಇದಾರೆ. ನಾಳೆ ಕೇರಳಕ್ಕೆ ಹೋಗಿ ಪೂಜೆ ಮಾಡಿದ್ರೂ ಆಶ್ಚರ್ಯ­ವಿಲ್ಲ. ನೀವು ನೋಡಿದ್ರೆ ಸುಸ್ತಾಗಿ ಬಿಟ್ಟಿದ್ದೀ­ರಲ್ಲಾ?’ ಎಂದು ಪೆಕರ ಮಾರಸ್ವಾಮಿಗಳನ್ನು ಕೆಣಕಿದ.

ಮಾರಸ್ವಾಮಿಗಳಿಗೆ ರೇಗಿತು. ‘ಸ್ವಲ್ಪ ರೆಸ್ಟ್ ಮಾಡೋದಕ್ಕೂ ಬಿಡೋದಿಲ್ಲವಲ್ರಿ, ಎಲ್ಲ ಕಡೆ ಕುಟುಂಬದ ಕತೆನೇ ಕೇಳ್ತೀರಾ? ಈಗ ಹೊರಗೆ ಹೋಗ್ತೀರಾ?’ ಎಂದು ಕನ್ನಡದಲ್ಲೇ ಬೈದರು.

‘ನಮ್ಮ ರಪ್ಪ ಅವರೇ ಕರೆಕ್ಟ್. ಜನಸಾಮಾನ್ಯ­ರಿಂದ ದೂರ ಉಳಿಯಲು ನಿರ್ಧರಿಸಿ ಮೌನವ್ರತ ಮಾಡ್ತಾ ಇದ್ದಾರೆ. ನಾನೂ ಇನ್ಮುಂದೆ ಮೌನಿ. ಯಾರನ್ನೂ ಒಳಗೆ ಬಿಡಬೇಡಿ’ ಎಂದು ದ್ವಾರಪಾಲಕರಿಗೆ ಆಜ್ಞೆ ಮಾಡಿದರು.
ಪೆಕರ ಸೈಲೆಂಟಾಗಿ ಹೊರನಡೆದ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT