ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ದು ಇಲ್ಲದ ಕಾಯಿಲೆ ಜೊತೆ ಗುದ್ದಾಟ

Last Updated 6 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಇತ್ತೀಚೆಗಷ್ಟೇ ವಿಶ್ವ ಜಲ ದಿನವನ್ನು ಎಲ್ಲೆಡೆ ಆಚರಿಸಲಾಯಿತು. ಜನರಿಗೆ ನೀರಿನ ಬಗ್ಗೆ ತಿಳಿವಳಿಕೆ ನೀಡುವ ಉದ್ದೇಶ ಇದರ ಹಿಂದೆ ಇದೆ. ಈ ಕಾರ್ಯಕ್ರಮ ಜಾರಿಯಾಗಿ 21 ವರ್ಷಗಳಾಗಿವೆ. ಪ್ರತಿ ವರ್ಷ ಮಾರ್ಚ್‌ 22 ರಂದು, ನಗರ–ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾನರ್, ಭಿತ್ತಿಪತ್ರ ಹಿಡಿದ ಮಕ್ಕಳ ಮೆರವಣಿಗೆ ಸಾಮಾನ್ಯ ದೃಶ್ಯ. ಉತ್ತರ ಕರ್ನಾಟಕದ ಕೆಲ ಹಳ್ಳಿಗಳು ಅದರಲ್ಲೂ ಫ್ಲೋರೊಸಿಸ್‌ ಬಾಧೆ ಹೆಚ್ಚಾಗಿರುವ ಗದಗ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಹಳ್ಳಿಗಳ ಪರಿಸ್ಥಿತಿಯನ್ನು ನೋಡಿದರೆ, ಈಗ ನೀರಿನ ಬಗ್ಗೆ ಯಾರಿಗೆ ಅರಿವು ಮೂಡಿಸಬೇಕು ಎಂಬ ಪ್ರಶ್ನೆ ಮೂಡುತ್ತದೆ.

ಏಕೆಂದರೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಜನರಿಗೆ ಶುದ್ಧ ಸಿಹಿ ನೀರು ಒದಗಿಸಬೇಕು ಎಂಬ ಪ್ರಾಮಾಣಿಕ ಕಳಕಳಿ–ಅರಿವು ಇದ್ದಿದ್ದರೆ ಇಂದು ಸಾವಿರಾರು ಸಂಖ್ಯೆಯ ಜನರು ಬದುಕಿದ್ದೂ ಸತ್ತಂತೆ ಬಾಳಬೇಕಾದ ಸ್ಥಿತಿ ಇರುತ್ತಿರಲಿಲ್ಲ. ತಮ್ಮದಲ್ಲದ ತಪ್ಪಿಗೆ ಈ ಜನರು ಎದ್ದು ಓಡಾಡಲೂ ಆಗದೇ ಇನ್ನೊಬ್ಬರ ಸಹಾಯದೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಆದರೆ ಈ ಬಗ್ಗೆ ಯೋಚಿಸಬೇಕಾದ ಸರ್ಕಾರ ಮಾತ್ರ ಕನಿಕರವಿಲ್ಲದಂತೆ ವರ್ತಿಸುತ್ತಿದೆ.

ಶುದ್ಧ ಕುಡಿವ ನೀರು ಪೂರೈಕೆ ಸರ್ಕಾರದ ಕರ್ತವ್ಯ. ಸರ್ಕಾರ ತನ್ನ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣದಿಂದ ಹಲವಾರು ತಾಲ್ಲೂಕುಗಳ ನೂರಾರು ಹಳ್ಳಿಗಳ ಜನರು ಫ್ಲೋರೊಸಿಸ್‌ನಿಂದ ಬಳಲುವಂತಾಗಿದೆ. ಈ ಕಾಯಿಲೆಗೆ ಚಿಕಿತ್ಸೆ ಇಲ್ಲ; ಆದರೆ ಬಾರದಂತೆ ತಡೆಯುವುದು ಬಲು ಸುಲಭ. ಫ್ಲೋರೊಸಿಸ್‌ ಸಮಸ್ಯೆ ತಡೆಯಲು ಆಗಬೇಕಿರುವುದು ಶುದ್ಧ ಕುಡಿಯುವ ನೀರು ಪೂರೈಕೆ ಮಾತ್ರ. ಇದು ಈ ಭಾಗದ ಜನರಿಗೆ ಮರೀಚಿಕೆಯಾಗಿದೆ.

ಗ್ರಾಮ ಪಂಚಾಯ್ತಿ ಮಟ್ಟದಿಂದ ಹಿಡಿದು ಸಂಸತ್‌ ಸದಸ್ಯರವರೆಗಿನ ವಿವಿಧ ಹಂತದಲ್ಲಿ ಜನಪ್ರತಿನಿಧಿಗಳನ್ನು ಗ್ರಾಮಸ್ಥರು ಆಯ್ಕೆ ಮಾಡಿ ಕಳುಹಿಸುತ್ತಾರೆ. ಆದರೆ ಅದೇ ಗ್ರಾಮಸ್ಥರ, ‘ಕುಡಿಯುವ ನೀರು ಒದಗಿಸಿ’ ಎಂಬ ಕನಿಷ್ಠ ಹಾಗೂ ಮೂಲಭೂತ ಬೇಡಿಕೆಯನ್ನು ಈಡೇರಿಸಲು ಇದುವರೆಗೂ ಈ ಜನಪ್ರತಿನಿಧಿಗಳಿಗೆ ಸಾಧ್ಯವಾಗಿಲ್ಲ ಎಂದರೆ ಈ ಜನರು ಯಾರನ್ನು ಕೇಳಬೇಕು? ಎಲ್ಲಿಗೆ ಹೋಗಬೇಕು? ಈಗ ಲೋಕಸಭೆಗೆ ಚುನಾವಣೆ ನಡೆಯುತ್ತಿದೆ. ಫ್ಲೋರೈಡ್‌ ಸಮಸ್ಯೆ ಇರುವ ಹಳ್ಳಿಗಳಲ್ಲೂ ಧುರೀಣರು ಮತ ಬೇಟೆಯಲ್ಲಿ ತಲ್ಲೀನರಾಗಿದ್ದಾರೆ. ಆದರೆ ಅಪ್ಪಿತಪ್ಪಿಯೂ ಯಾರೂ ಈ ವಿಷಯವನ್ನು ಪ್ರಸ್ತಾಪಿಸುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ಬಾಧಿತ ಜನರೂ ಸಮಸ್ಯೆ ನಿವಾರಣೆಗೆ ಈ ಸಂದರ್ಭದಲ್ಲೂ ಪಟ್ಟು ಹಿಡಿಯದಿರುವುದು ಅಚ್ಚರಿಯ ಸಂಗತಿ.

ಲಕ್ಷ ಕೋಟಿ ಬಜೆಟ್‌ ಮಂಡಿಸಿದ್ದೇ ಸಾಧನೆ ಎಂಬಂತೆ ಸಂಭ್ರಮಪಡುವ ರಾಜಕಾರಣಿಗಳಿಗೆ ರಾಜ್ಯದ ಹತ್ತಾರು ತಾಲ್ಲೂಕುಗಳಲ್ಲಿ ಕಾಣಿಸಿ­ಕೊಂಡಿರುವ ಈ ಸಮಸ್ಯೆಯ ನಿರ್ಮೂಲನೆಗಾಗಿ ಅಗತ್ಯ ಅನುದಾನ ಒದಗಿಸಲು ಏಕೆ ಸಾಧ್ಯವಾಗಿಲ್ಲ? ಇಂತಹ ಪ್ರಮುಖ ಸಮಸ್ಯೆ ನಿವಾರಣೆಗೆ ಹಣ ಕೊಡಲಾಗದಿದ್ದರೆ ಇನ್ನು ಲಕ್ಷ ಕೋಟಿ ಬಜೆಟ್‌ ಮಂಡಿಸಿ ಪ್ರಯೋಜನವಾದರೂ ಏನು? ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ರಾಜಕಾರಣಿಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕು.

ದಂತ ಕ್ಷಯವನ್ನು ತಡೆಯಲು ಮನುಷ್ಯನಿಗೆ ಇದೇ ಫ್ಲೋರೈಡ್‌ ಖನಿಜದ ಅಗತ್ಯ ಇದೆ. ಅಂದರೆ ದಶಲಕ್ಷ ಭಾಗದಲ್ಲಿ ಒಂದು ಭಾಗ ಮಾತ್ರ (parts per million) ದೇಹಕ್ಕೆ ಬೇಕು. ಅದು ಸುಲಭವಾಗಿ ಸಿಗುವುದು ನೀರಿನಲ್ಲೇ. ಆದರೆ 1.5ಕ್ಕಿಂತ ಹೆಚ್ಚು ಪಿಪಿಪಿ (parts per million) ದೇಹ ಹೊಕ್ಕಿದರೆ ಸಮಸ್ಯೆ ತಪ್ಪಿದ್ದಲ್ಲ. ಆದರೆ ಹಲವೆಡೆ ಕೊಳವೆ ಬಾವಿಯ ಜಲ ಮೂಲಗಳಲ್ಲಿ ಇದರ ಪ್ರಮಾಣ ಮೂರು ಪಿಪಿಪಿಯಷ್ಟು ಇದೆ. ಮೊದಲು ಫ್ಲೋರೊಸಿಸ್‌ ಕಾಣಿಸಿಕೊಳ್ಳುವುದು ಹಲ್ಲುಗಳಲ್ಲಿ. ನಂತರ ಇದು ಮೂಳೆಗೆ ವ್ಯಾಪಿಸಿ, ಮನುಷ್ಯನ ಜೀವ ಹಿಂಡುತ್ತದೆ. ವಯಸ್ಕರು ನಡು ಬಾಗಿ ಮುದುಕರಂತೆ ಕಾಣುತ್ತಾರೆ.

ಚಿಕ್ಕ ಮಕ್ಕಳಲ್ಲಿ ಕೈ –ಕಾಲುಗಳು ಅಂಕುಡೊಂಕಾಗಿ, ಬೆಳವಣಿಗೆ ಕುಂಠಿತವಾಗುತ್ತದೆ. ದನಗಳ ಹಲ್ಲು ಉದುರಿ ಹೋಗಿ, ಮೇವು ತಿನ್ನಲಾಗದೆ ಸಾಯುತ್ತವೆ. ಇದಕ್ಕೆ ಮುಖ್ಯ ಕಾರಣ ಜನ–ಜಾನುವಾರು ಸೇವಿಸುವ ನೀರಿನಲ್ಲಿರುವ ಅಧಿಕ ಪ್ರಮಾಣದ ಫ್ಲೋರೈಡ್‌ ಖನಿಜ.
ಈ ಭಾಗದಲ್ಲಿ ಜನರು ಬಳಕೆಗೆ ಕೊಳವೆಬಾವಿಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಮೇಲಾಗಿ ಇಲ್ಲಿ ಮಳೆಯೂ ಕಡಿಮೆ. ಇಲ್ಲಿಯ ಕಪ್ಪು ಮಣ್ಣಿನ ಭೂಮಿಗೆ ರಾಸಾಯನಿಕ ಅಂಶ­ಗಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವೂ ಕಡಿಮೆ. ಹೀಗಾಗಿಯೇ ಸಲೀಸಾಗಿ ರಾಸಾಯನಿಕ ಅಂಶಗಳು ಭೂಮಿಯೊಳಗೆ ಇಳಿದು ಜಲ ಮೂಲವನ್ನು ಸೇರುತ್ತಿವೆ.

ಫ್ಲೋರೊಸಿಸ್‌ ಸಮಸ್ಯೆ ಸರ್ಕಾರದ ಗಮನಕ್ಕೆ ಬಂದು ದಶಕಗಳು ಕಳೆದಿವೆ.  ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದರೆ, ಇದರ ನಿವಾರಣೆ ಯಾವಾಗಲೋ ಆಗುತ್ತಿತ್ತು. ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿವ ನೀರು ಪೂರೈಕೆಗೆ ಕೇಂದ್ರ ಸರ್ಕಾರ ನಾನಾ ಕಾರ್ಯಕ್ರಮಗಳನ್ನು ರೂಪಿಸಿ, ಅನುದಾನ ಒದಗಿಸುತ್ತಿದೆ. ಆ ಅನುದಾನ ಪಡೆದಾದರೂ ಜನರ ಆರೋಗ್ಯ ಕಾಪಾಡಲು ಸರ್ಕಾರ ಮುಂದಾಗ­ಬಹುದಿತ್ತು. ಆ ಇಚ್ಛಾಶಕ್ತಿ ಸರ್ಕಾರಕ್ಕಿಲ್ಲ.

ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಕೆಲವು ಹಳ್ಳಿಗಳಿಗೆ ಏಳು ವರ್ಷಗಳಿಂದ ನದಿ ಮೂಲದ ಶುದ್ಧ ನೀರು ಒದಗಿಸಲು ಸರ್ಕಾರ ಕ್ರಮ ತೆಗೆದುಕೊಂಡಿದೆ. ಇನ್ನು ಕೆಲವೆಡೆ ನೀರನ್ನು ಶುದ್ಧೀಕರಿಸಿ ಒದಗಿಸುವ ಘಟಕಗಳನ್ನು ತೆರೆದಿದೆ. ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ ಎನಿಸಿದರೂ ಈಗಲೂ ಕೆಲ  ಮಕ್ಕಳ ಕಾಲುಗಳು ಸೊಟ್ಟಗಾಗಿವೆ. ಅಂದರೆ ಫ್ಲೋರೊಸಿಸ್‌ ಸಮಸ್ಯೆ ಇನ್ನೂ ಇದೆ. ಫ್ಲೋರೈಡ್‌ ಬಾಧಿತ ಎಲ್ಲ ಹಳ್ಳಿಗಳ ಜನರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಮಗ್ರ ಯೋಜನೆ ರೂಪಿಸಿ, ಆದ್ಯತೆ ಮೇರೆಗೆ ಅದನ್ನು ಅನುಷ್ಠಾನಗೊಳಿಸುವ ಕೆಲಸ ಇನ್ನೂ ಆಗಿಲ್ಲ.

ಸಮಸ್ಯೆಯ ಅರಿವಿರುವ ಈ ಭಾಗದ ಚುನಾಯಿತ ಪ್ರತಿನಿಧಿಗಳು ಅಧಿಕಾರದಲ್ಲಿದ್ದರೂ ಈ ಬಗ್ಗೆ ಯೋಚಿಸುತ್ತಿಲ್ಲ. ಅಧಿಕಾರ ಇದ್ದಾಗ ಕೆಲಸ ಮಾಡದೆ, ನಂತರ ಅಸಮಾನತೆ, ಅಸಮತೋಲನ ಎಂದು ಬರೀ ಬೊಬ್ಬೆ ಹಾಕಿದರೆ ಸಮಸ್ಯೆ ಬಗೆಹರಿಯುವುದಿಲ್ಲ ಎಂಬುದನ್ನು ಈ ನಾಯಕರು ಅರಿತುಕೊಳ್ಳಬೇಕು. ಸರ್ಕಾರದಿಂದ ಕೆಲಸ ಮಾಡಿಸುವ ಚಾಕಚಕ್ಯತೆಯನ್ನು ಈ ಭಾಗದ ಚುನಾಯಿತ ಪ್ರತಿನಿಧಿಗಳು ತೋರಬೇಕು.

ಸರ್ಕಾರೇತರ ಸಂಘಟನೆಗಳೂ ಕೆಲವೆಡೆ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿವೆ. ಇದಕ್ಕೆ ಸರ್ಕಾರ ಇನ್ನಷ್ಟು ಉತ್ತೇಜನ ನೀಡಬೇಕು. ಅಲ್ಲದೇ ವಿವಿಧ ಕಂಪೆನಿ–ಕಾರ್ಖಾನೆಗಳ ನೆರವು ಪಡೆದು ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿ, ಅವುಗಳನ್ನು ಸಮರ್ಪಕವಾಗಿ ನಿರ್ವಹಿಸುವಂತಾಗಬೇಕು. ಜತೆಗೆ ನದಿಯಿಂದ ಪೂರೈಕೆ ಮಾಡುವ ನೀರನ್ನೂ ಸಂಪೂರ್ಣವಾಗಿ ಶುದ್ಧೀಕರಿಸಿ, ಒದಗಿಸಬೇಕು. ಮಳೆಗಾಲದಲ್ಲಿ ನೀರು ವ್ಯರ್ಥವಾಗದಂತೆ ಭೂಮಿಯಲ್ಲಿ ಇಂಗಿಸಿ, ಅಂತರ್ಜಲ ವೃದ್ಧಿಗೆ ಪರಿಣಾಮಕಾರಿ ಕಾರ್ಯ­ಕ್ರಮ ರೂಪಿಸಬೇಕು. ಇದರಿಂದ ಸಮಸ್ಯೆಯನ್ನು ಮೂಲದಲ್ಲೇ ಪರಿಹರಿಸಬಹುದು.

ನಗರ ಪ್ರದೇಶದವರಿಗಾಗಿ, ನೂರಾರು ಕಿ.ಮೀ ದೂರದ ನದಿಯಿಂದ ನೀರು ತರಲು ಸಾವಿರಾರು ಕೋಟಿ ರೂಪಾಯಿ ವಿನಿಯೋಗಿಸುವ ಸರ್ಕಾರ, ಗ್ರಾಮೀಣ ಪ್ರದೇಶದ ಜನರಿಗೂ ಶುದ್ಧ ನೀರು ಕೊಡುವ ಜವಾಬ್ದಾರಿ ತನ್ನ ಮೇಲಿದೆ ಎಂಬುದನ್ನು ಮರೆಯಬಾರದು. ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಿದರೆ ಸರ್ಕಾರ ಆರೋಗ್ಯ ಕ್ಷೇತ್ರದ ಮೇಲೆ ವಿನಿಯೋಗಿಸುವ ಹಣದಲ್ಲಿ ಶೇ 30 ರಿಂದ 40 ರಷ್ಟು ಉಳಿಸಬಹುದು.

ಈ ಭಾಗದಲ್ಲಿ ಕೆಲಸ ಮಾಡಿದ ಅಧಿಕಾರಿಗಳು ಇಷ್ಟನ್ನಾದರೂ ಸರ್ಕಾರಕ್ಕೆ ಮನದಟ್ಟು ಮಾಡಿಕೊಡಬೇಕಿತ್ತು. ಆ ಅಧಿಕಾರಿಗಳಾದರೂ ತುಸು ಬದ್ಧತೆಯನ್ನು ತೋರಬೇಕಿತ್ತು. ಇಂತಹ ಕೆಲಸಗಳಾಗದ ಕಾರಣದಿಂದಲೇ  ಉತ್ತರ ಕರ್ನಾಟಕ ಭಾಗ ಹಿಂದುಳಿದಿದೆ. ಇದಕ್ಕೆ  ಫ್ಲೋರೈಡ್‌ ಬಾಧಿತ ಹಳ್ಳಿಗಳೇ ನಿದರ್ಶನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT