ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಲಾಗದ ಮಲೆನಾಡಿನ ಚಿತ್ರಗಳು

Last Updated 12 ಜುಲೈ 2014, 19:30 IST
ಅಕ್ಷರ ಗಾತ್ರ

ಶೃಂಗೇರಿ ಬಿಟ್ಟಾಗಲೇ ಸಂಜೆಯಾಗಿತ್ತು. ಸಮಯ ಎಷ್ಟು ಎಂದು ಖಚಿತವಾಗಿ ತಿಳಿಯಲಾಗದಂತೆ ಮೋಡ ಗುಬುರು ಹಾಕಿಕೊಂಡಿತ್ತು. ಮುಳುಗಲೋ ಬೇಡವೋ ಎಂಬಂತೆ ಸೂರ್ಯನೂ; ಸುರಿಯಲೋ ಬೇಡವೋ ಎಂಬಂತೆ ಮಳೆಯೂ ಮೈಗಳ್ಳರಾಟ ಆಡುತ್ತಿದ್ದವು. ಡೊಂಕಾದ ರಸ್ತೆಯ ಆಜುಬಾಜಿಗೆ ಹರಿದ್ವರ್ಣದ ಕಾಡು. ಅದು ನೋಡಲಷ್ಟೇ ಹಸಿರು, -ಒಳಗೆ ಕೆಂಪು ಕಲೆಗಳಿರಲು ಸಾಧ್ಯ. ಸಸ್ಯ ಮತ್ತು ಪ್ರಾಣಿಪ್ರಭೇದಗಳಿಗೆ ಮಾತ್ರವಲ್ಲ; ಮನುಷ್ಯರ ವಾಸಕ್ಕೂ ಸೂಕ್ಷ್ಮಾತಿಸೂಕ್ಷ್ಮವಾಗಿರುವ ಮಲೆನಾಡು.

ಈ ಮಲೆನಾಡಿನ ಆಳದ ಸಂಘರ್ಷಗಳನ್ನು ಅರಿತ, ಅದೆಲ್ಲವೂ ಸ್ವಸ್ಥಗೊಳ್ಳಬೇಕೆಂದು ಬಯಸುವ ಆರೋಗ್ಯವಂತ ಕ್ರಿಯಾಶೀಲ ಮನಸ್ಸುಳ್ಳ ಹತ್ತಾರು ತರುಣರು ಜತೆಗಿದ್ದರು. ಅದರಲ್ಲಿ ಅಧ್ಯಾಪಕರು, ವಕೀಲರು, ಮಾಧ್ಯಮದವರು, ರೈತರು, ಸಂಘಟಕರು ಮುಂತಾದ ಜನರಿದ್ದರು. ನಾವು ಕೊಪ್ಪದ ಕಡೆ ಹೊರಟಿದ್ದೆವು. ಮಲೆನಾಡಿನ ಗಾಂಧಿ ಎಂದೇ ಹೆಸರಾದ ವೃದ್ಧಜೀವ ಡಾ. ಹೆಚ್.ಜಿ. ಗೋವಿಂದಗೌಡರನ್ನು ಕಾಣುವುದಿತ್ತು. ಅವರು ರಾಜಕೀಯ ಜೀವನಕ್ಕೆ ವಿದಾಯ ಹೇಳಿದ ಮೇಲೆ ಭೇಟಿ ಸಾಧ್ಯವಾಗಿರಲಿಲ್ಲ. ಒಂದು ಆದರ್ಶವನ್ನು ಬಲವಾಗಿ ನೆಚ್ಚಿ ಬದುಕಿದ, ಬದುಕುತ್ತಿರುವ ಇಂಥವರನ್ನು ಕಾಣುವುದು ನನಗೆ ದೇವಾಲಯಗಳನ್ನು ಸುತ್ತುವುದಕ್ಕಿಂತ ಮುಖ್ಯ ಅನ್ನಿಸಿತ್ತು. ಹಾಗೆ ನೋಡಿದರೆ ಮಂಗಳೂರು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತಿ ಹೆಜ್ಜೆಗೊಂದು ದೇವಾಲಯವಿದೆ. ಆದರೆ ಗೋವಿಂದಗೌಡರಂಥವರು ಮಾತ್ರ ಮಲೆನಾಡಿಗೆಲ್ಲಾ ಒಬ್ಬರೇ ಎನ್ನುವಂತಿದ್ದಾರೆ.

ಹಸಿರು ತೋಟದ ಮನೆಯ ಹೊರಾವರಣದಲ್ಲಿ ಅವರು ನಮ್ಮ ನಿರೀಕ್ಷೆಯಲ್ಲಿ ಕುಳಿತಿದ್ದರು. ಇನ್ನು ನನ್ನ ಕೆಲಸ ಮುಗಿಯಿತು ಎಂಬಂತೆ ಸೂರ್ಯ ನಮ್ಮನ್ನು ಅವರಿಗೆ ತಟಾಯಿಸಿ ಅಸ್ತಮಿಸಿದ. ನಾನು ಸಂದರ್ಶನ, ಸಂವಾದ, ಪ್ರಶ್ನೋತ್ತರ ಮುಂತಾದ ಯಾವುದೇ ಬೌದ್ಧಿಕ ಭಾರವನ್ನು ಹೊತ್ತಿರಲಿಲ್ಲ. ಹರಟೆಯೂ ಅಲ್ಲದ, ಚರ್ಚೆಯೂ ಅಲ್ಲದ ಪಿಸುಮಾತಿನ ಕುಶಲೋಪರಿ ಮೌನದ ಹೆಪ್ಪಿನ ನಡುವೆ ಮೊಳಕೆ ಒಡೆಯುತ್ತಿತ್ತು. ಶಾಂತಮ್ಮ ಮತ್ತು ಗೋವಿಂದಗೌಡರನ್ನು ದಿಟ್ಟಿಸಿ ನೋಡಿದೆ. ವಯೋಸಹಜ ಬಾಧೆಗಳಿದ್ದರೂ ಆ ವೃದ್ಧಾಪ್ಯಕ್ಕೂ ಒಂದು ಚೆಲುವಿದೆ ಅನ್ನಿಸಿತು. ಅವರ ನಿಧಾನ ನಡಿಗೆ, ವಿಪರೀತ ವಿಷಾದಗಳಾಗಲೀ ಅಸಂಖ್ಯಾತ ಅತೃಪ್ತಿಗಳಾಗಲೀ ಇಲ್ಲದ ನಿರುಮ್ಮಳ ಬದುಕಿನ ಚಿತ್ರವನ್ನು, ಯಾತಕ್ಕಾದರೂ ಬೇಕಾದೀತು ಅಂತ ಕಣ್ಣಲ್ಲಿ ಗಂಟುಕಟ್ಟಿ ಇರಿಸಿಕೊಂಡು ನಮಸ್ಕರಿಸಿ ಹೊರಟೆ. 

ಮಲೆನಾಡು ಭಯೋತ್ಪಾದನೆ ಮತ್ತು ಮತಾಂಧತೆಗಳಿಂದ ಬಸವಳಿದಿದೆ. ಆದರೆ ಇಲ್ಲಿನ ವೈಚಾರಿಕ ಪ್ರಜ್ಞಾಪ್ರವಾಹ ಮುಕ್ಕಾಗಿಲ್ಲ. ಲೋಹಿಯಾ ಪ್ರೇರಿತವಾದ ರಾಜಕಾರಣ, ಅದರಿಂದ ಟಿಸಿಲೊಡೆದ ವಿವಿಧ ಚಳುವಳಿಗಳು, ಸಾಹಿತ್ಯದಲ್ಲಿ ಅಭಿವ್ಯಕ್ತಗೊಂಡ ಇಸಂಗಳು ದಾಖಲಾಗುತ್ತಾ ಬಂದಿವೆ. ಎಲ್ಲ ಜಗತ್ತಿನವರನ್ನೂ ಒಟ್ಟು ಮಾಡಿ ನೆನೆಯುವುದಾದರೆ ಗೋಪಾಲಗೌಡ, ಕಡಿದಾಳ್ ಮಂಜಪ್ಪ, ಕುವೆಂಪು, ತೇಜಸ್ವಿ, ಗೋವಿಂದಗೌಡ, ಅನಂತಮೂರ್ತಿ, ಕಾರಂತ, ಸುಬ್ಬಣ್ಣ, ಲಂಕೇಶ್, ಇವರುಗಳೆಲ್ಲ ತಮ್ಮ ಬಳಿ ಇದ್ದ ಟೂಲ್‌ಗಳನ್ನು ಬಳಸಿ ಈ ಸಾಮಾಜಿಕ ಯಂತ್ರವನ್ನು ರಿಪೇರಿ ಮಾಡಲು ಯತ್ನಿಸಿದ್ದಾರೆ. ಆದರೆ ಈ ನಿಲುಗಡೆರಹಿತ ದುರಸ್ತಿಕಾರ್ಯ ಇಷ್ಟೇ ಜನರಿಂದ ಆದದ್ದಲ್ಲ.

ಅಸಂಖ್ಯರಾದ ಸಣ್ಣಪುಟ್ಟ ಮೆಕ್ಯಾನಿಕ್‌ಗಳೂ ಇದ್ದಾರೆ. ಅಂದು ನನ್ನ ಜತೆ ಇದ್ದ ಅನೇಕ ತರುಣರು ಹಾಗೇ ಕಾಣಿಸಿದರು. ಬೆಂಗಳೂರು ಸೇರಿ ಬದುಕಿಗೆ ನೆಲೆ ಕಂಡುಕೊಂಡಿದ್ದರೂ ಅವರೆಲ್ಲಾ ತಮ್ಮ ಪ್ರೀತಿಯ ಮಲೆನಾಡಿನ ಸ್ವಾಸ್ಥ್ಯಕ್ಕಾಗಿ ಹಂಬಲಿಸುತ್ತಿದ್ದರು. ಅಲ್ಲೇ ಇದ್ದು ಬದಲಾವಣೆಗೆ ತುಡಿಯುತ್ತಿದ್ದವರು ಕೆಲವರು. ಋಣಪ್ರಜ್ಞೆಯಿಂದ ಮರಳಿ ಮಣ್ಣಿಗೆ ಹೋಗಿ, ಅಲ್ಲಿ ಹೊಸತೊಂದನ್ನು ಕನಸುವ ತರುಣ, ನಮ್ಮ ಸಮಾಜಕ್ಕೆ ಬಹಳ ಮುಖ್ಯನೆನಿಸುತ್ತಾನೆ.

ಕೆಲಕಾಲ ಬಲದಲ್ಲಿದ್ದು ಸಾವಕಾಶ ಎಡಕ್ಕೆ ಬಂದವರು; ಎಡದಲ್ಲೊಂದು ಕಾಲು ಬಲದಲ್ಲೊಂದು ಕಾಲು ಇಟ್ಟು ಸಾಗುತ್ತಿದ್ದವರು, ನಡುವಿನ ಸಮನ್ವಯದ ಹಾದಿ ಹುಡುಕುತ್ತಿದ್ದವರು.- ಇವರನ್ನು ಕಂಡಾಗ ಈ ಮಲೆನಾಡಿನ ಪರಿಸ್ಥಿತಿಯೇ ಅಂಥದು ಅನ್ನಿಸಿತು. ಎಡಕ್ಕೂ- ಬಲಕ್ಕೂ ಜಗ್ಗುವ ವೈರುಧ್ಯ ಶಕ್ತಿಗಳ ನಡುವೆ ನುಜ್ಜುಗುಜ್ಜಾಗದೆ ಉಳಿಯುವುದೇ ಇಂದಿನ ಮಲೆನಾಡಿನ ಯುವಕನ ದೊಡ್ಡ ಸಾಹಸ. ಕಾರಣ ಇಲ್ಲಿ ಯಾರಾದರೂ ಪ್ರಗತಿಯ ಮಾತಾಡಿದರೆ ಅವನಿಗೆ ನಕ್ಸಲ್ ಎಂದು ನಾಮಕರಣ ಮಾಡುತ್ತಾರೆ. ಅಯ್ಯೋ ರಾಮಾ ಎಂದು ನಿಟ್ಟುಸಿರುಬಿಟ್ಟು ಕುಳಿತರೂ ಅವನನ್ನು ಮೂಲಭೂತವಾದಿ ಎಂದುಬಿಡುತ್ತಾರೆ. ಈಗ ಮನುಷ್ಯರು, ಸರಳಮನುಷ್ಯರಾಗಿ ಉಳಿಯುವಂತೆಯೇ ಇಲ್ಲ.

ಕಡಿದಾಳ್ ಮಂಜಪ್ಪನವರ ಗರಡಿಯಲ್ಲಿ ತಾಲೀಮು ಪಡೆದು ಗೋವಿಂದಗೌಡರು ಮೊದಲ ಬಾರಿಗೆ ೧೯೮೩ರಲ್ಲಿ ಶಾಸಕರಾದಾಗ ನಾನು ಎಂ.ಎ. ವಿದ್ಯಾರ್ಥಿ. ನಾವೆಲ್ಲ ಮಲೆನಾಡಿನ ಸಾಹಿತ್ಯ-ರಾಜಕಾರಣವನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದ ದಿನಗಳು. ಮಲೆನಾಡಿನ ಹುಡುಗಿ ಬಯಲು ಸೀಮೆ ಹುಡುಗ ಎಂಬಂಥ ರಮ್ಯಕಥೆಗಳನ್ನು ಬರೆಯುತ್ತಿದ್ದ ನನಗೆ ಆ ಬೆರಗು ಸಹಜವಾಗಿತ್ತು. ವಾಸ್ತವದ ಮಲೆನಾಡು ಬೇರೆಯೇ ಆಗಿತ್ತು. ಭ್ರಷ್ಟತೆ ಕಾಡನ್ನೂ ನಾಡನ್ನೂ ವ್ಯಾಪಿಸಿತ್ತು.

ಭ್ರಷ್ಟನಾಗದೆಯೂ ರಾಜಕೀಯದಲ್ಲಿ ಬಾಳಿ ತೋರಿಸಲು ಸಾಧ್ಯ ಎಂಬ ಕಡಿದಾಳ್‌ರ ಮಾತನ್ನು ಗೋವಿಂದಗೌಡರು ನಿಜಗೊಳಿಸಿದರು. ಅವರು ನಿರ್ವಹಿಸಿದ ಪ್ರಾಥಮಿಕ ಶಿಕ್ಷಣ, ವಯಸ್ಕರ ಶಿಕ್ಷಣ, ಪ್ರೌಢ ಶಿಕ್ಷಣ ಈ ಎಲ್ಲ ಕಡೆ ಇದ್ದ ಕಸವನ್ನು ನಿಷ್ಠೆಯಿಂದ ಗುಡಿಸಿದರು. ಅದರಲ್ಲೂ ಭ್ರಷ್ಟ ಅಧಿಕಾರಿಗಳನ್ನು ದೂರ ಇರಿಸಿದ್ದು, ದಕ್ಷ ಅಧಿಕಾರಿಗಳನ್ನು ಪ್ರೋತ್ಸಾಹಿಸಿದ್ದು, ಶಿಕ್ಷಣ ಸಂಸ್ಥೆಗಳ ಅಕ್ರಮ ಹಸ್ತಾಂತರಗಳನ್ನು ನಿಲ್ಲಿಸಿದ್ದು, ಪಠ್ಯಪುಸ್ತಕಗಳ ದರ ನಿಗದಿ ಮಾಡಿದ್ದು, ಎಲ್ಲಕ್ಕಿಂತ ಮುಖ್ಯವಾಗಿ ಲಂಚ ಶಿಫಾರಸ್ಸುಗಳಿ ಲ್ಲದೆ ಲಕ್ಷಾಂತರ ಶಿಕ್ಷಕರನ್ನು ಪಾರದರ್ಶಕವಾಗಿ ನೇಮಕ ಮಾಡಿದ್ದು. ಜನಸಾಮಾನ್ಯರಿಂದ ಮಾತ್ರವಲ್ಲ; ಭಿನ್ನವ್ಯಕ್ತಿತ್ವ ಉಳ್ಳ ದೇವೇಗೌಡ, ಎಸ್‌.ಎಂ. ಕೃಷ್ಣ, ರಾಮಕೃಷ್ಣ ಹೆಗಡೆ, ಜೆ.ಹೆಚ್. ಪಟೇಲ್ ಎಲ್ಲರಿಂದ ಮೆಚ್ಚುಗೆ ಗಳಿಸಿದವರು.

ಅದೆಲ್ಲ ಹೇಗಾಯಿತು ಎಂದರೆ, ದೇವರು ಮಾಡಿಸಿದ ಅನ್ನುತ್ತಾರೆ. ಒಳ್ಳೆಯತನ, ಪ್ರಾಮಾಣಿಕತೆ, ದಕ್ಷತೆ ಇವೆಲ್ಲ ದೇವರ ಸಮಾನಾರ್ಥಕ ಪದಗಳಿರಬಹುದು. ಒಳ್ಳೆಯ –-ಕೆಟ್ಟ ಕೆಲಸಗಳನ್ನು ಮನುಷ್ಯನೇ ಮಾಡಿ ಅದನ್ನು ಇಲ್ಲದ ದೇವರ ಅಕೌಂಟಿಗೆ ಜಮಾ ಮಾಡುತ್ತಾನೆ ಅನ್ನಿಸುತ್ತದೆ. ಒಂದು ವರ್ಷ ಮೊದಲೇ ತಾನಿನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆಂದು ಘೋಷಿಸಿ ಗೌರವಯುತವಾಗಿ ನಿವೃತ್ತರಾದ ಗೋವಿಂದಗೌಡರು, ಅಧಿಕಾರಕ್ಕಾಗಿ ಇನ್ನೂ ಹಪಹಪಿಸುವ ಅನೇಕ ಹಿರಿಯ ರಾಜಕಾರಣಿಗಳಿಗೆ ಜೀವಂತ ನೀತಿಪಾಠದಂತಿದ್ದಾರೆ.

ಈ ಪರಂಪರೆಯ ವರ್ತಮಾನದ ಕೊಂಡಿಯಂತಿರುವ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಹಣ ಚೆಲ್ಲದೆ ಗೆದ್ದು ಬಂದ, ಸಂಭಾವಿತರಾದ, ಪ್ರಬುದ್ಧ ಓದಿನ ಸಂಗಾತಿಯಾದ ವಿವೇಚನಾಪರರಾದ ವ್ಯಕ್ತಿ. ಅವರೂ ಕಸ ತೆಗೆಯಲು ಶ್ರಮ ಪಡುತ್ತಿದ್ದಾರೆ. ನಮ್ಮ ವ್ಯವಸ್ಥೆ ಎಷ್ಟು ಜಡ್ಡುಗಟ್ಟಿಹೋಗಿದೆ ಎಂದರೆ ಯಾರು, ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಕುತೂಹಲವಾಗಲೀ ಸತ್ಯ ಶೋಧನೆಯ ತವಕವಾಗಲೀ ಉಳಿದಿಲ್ಲ. ಕುದುರೆ ಕತ್ತೆಗಳೆಲ್ಲ ಒಂದೇ ಸಮವಸ್ತ್ರ ಧರಿಸಿ ಓಡಾಡುತ್ತಿವೆ. ಮೆಚ್ಚಬೇಕಾದ್ದು-ಮೆಚ್ಚಬಾರದ್ದು ಎಂಬ ಸ್ಪಷ್ಟ ಗೆರೆ ಎಳೆದುಕೊಳ್ಳಲು ನಮಗೆ ಪುರುಸೊತ್ತಿಲ್ಲ. ಕಿಮ್ಮನೆಯಂಥವರು ಕಾಲದ ಅಗ್ನಿದಿವ್ಯದಲ್ಲಿ ಹಾದು ಗೆದ್ದು ಬರಬೇಕೆಂಬುದು ನಮ್ಮಂಥವರ ಆಸೆ. ಅವರಿನ್ನೂ ಅಧಿಕಾರದಲ್ಲಿರುವುದರಿಂದ ಈಗ ಇಷ್ಟು ಸಾಕು.

‘ಹಲವು ವರ್ಷಗಳಿಂದ ಉಳುಮೆ ಮಾಡುತ್ತಿರುವ ಕಾನು ಜಮೀನನ್ನು ಅರಣ್ಯಭೂಮಿ ಪಟ್ಟಿಯಿಂದ ಕೈ ಬಿಡದಿದ್ದರೆ ನಾವು ವಿಷ ಕುಡಿದು ಸಾಯಬೇಕಾಗುತ್ತದೆ. ನಮ್ಮ ಊರು, ಮನೆ ಎಲ್ಲವೂ ಕಾನು ಜಮೀನಲ್ಲೇ ಇದೆ. ಕಂದಾಯ ಇಲಾಖೆ ಹೊರಡಿಸಿರುವ ಆದೇಶವನ್ನು ಜಾರಿ ಮಾಡಿದರೆ ನಮ್ಮ ಊರೇ ಇರುವುದಿಲ್ಲ’.

ಹೀಗೆ ಹೇಳಿದವರು ಮಲೆನಾಡಿನ ಅನಾಮಿಕ ರೈತರಲ್ಲ. ಮೊನ್ನೆಯಷ್ಟೇ ವಿಧಾನಸಭೆಯಲ್ಲಿ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಕಂದಾಯ ಸಚಿವರಿಗೆ ಸಿಟ್ಟಿನಿಂದ ಹೇಳಿದ್ದಾರೆ. ತಿಮ್ಮಪ್ಪನವರು ರೈತರ ಕೃಷಿ ಭೂಮಿಯನ್ನು ಸಂರಕ್ಷಿಸಲು ನಿರಂತರ ಹೋರಾಟ ಮಾಡುತ್ತಾ ಬಂದವರು. ಅರಣ್ಯಭೂಮಿ- ಕೃಷಿ ಭೂಮಿಗಳ ತಕರಾರು ಈಗಿನ ಮಲೆನಾಡಿನ ಭೀಕರ ಸಮಸ್ಯೆ. ಆಗಿರುವ ಸರ್ವೆ ಬ್ರಿಟಿಷರ ಕಾಲದ್ದು. ಅರಣ್ಯ ಎಂಬುದರ ವ್ಯಾಖ್ಯಾನವೇ ಸ್ಪಷ್ಟವಾಗಿಲ್ಲ. ನಾಲ್ಕು ಹುಲಿಗಳನ್ನು ಸಾಕಲು ಸಾವಿರಾರು ಎಕರೆಯನ್ನು ಅಭಯಾರಣ್ಯ ಎಂದು ಘೋಷಿಸಿದರೆ ಸಾವಿರಾರು ಜನ ರೈತರು ಎಲ್ಲಿಗೆ ಹೋಗಬೇಕು? ಕಾಡಿನ ಬಗ್ಗೆ ಪ್ರೀತಿ ಇಲ್ಲದ ಭ್ರಷ್ಟ ಅರಣ್ಯ ಅಧಿಕಾರಿಗಳಿಂದ, ರೈತರು ಅಪಾರ ಕಿರುಕುಳ ಅನುಭವಿಸುತ್ತಿದ್ದಾರೆ.

ಒಂದು ಕಡೆ ಕೃಷಿಕಾರ್ಮಿಕರ ಕೊರತೆ, ಇನ್ನೊಂದು ಕಡೆ ಅರಣ್ಯ ಇಲಾಖೆಯ ಕಿರುಕುಳ, ಮಾರಲು ಹೋದರೆ ಕೊಳ್ಳುವವರಿಲ್ಲದ ಭೂಮಿ, ಮಾರಿದರೂ ಮುಂದೇನು ಮಾಡಬೇಕೆಂದು ಗೊತ್ತಿಲ್ಲದ ಪರಿಸ್ಥಿತಿ-. ಇದು ಮಲೆನಾಡಿನ ಸಣ್ಣ ರೈತರ ದೊಡ್ಡ ಸಮಸ್ಯೆ. ವಿದೇಶಿ ಹಣ ಮತ್ತು ಮಾನ್ಯತೆಗಾಗಿ ಹುಲಿ ಸಾಕುವ ವಿಜ್ಞಾನಿಗಳು ರೈತವಿರೋಧಿಗಳೆಂದೇ ಅವರ ನಿಲುವು. ಹೊರಗಿನಿಂದ ಬಂದು ಅಪಾರ ಭೂಮಿ ಕೊಳ್ಳುವ ಉದ್ಯಮಿಗಳ ಬಗ್ಗೆಯೂ ಅವರಿಗೆ ಕೋಪ. ಕಾಡಿನ ಜತೆಗೆ ಹೊಂದಿ ಬದುಕುವ ಕಲೆ ನಮಗೆ ಗೊತ್ತಿದೆ.

ನಮ್ಮನ್ನೂ ಕಾಡನ್ನೂ ನಮ್ಮ ಪಾಡಿಗೆ ಬಿಟ್ಟುಬಿಡಿ ಎನ್ನುತ್ತಾರೆ ಅವರು. ಅರಣ್ಯ ಇಲಾಖೆಯ ವ್ಯಾಖ್ಯಾನವೇ ಬೇರೆ. ರಕ್ಷಿಸಿಕೊಳ್ಳದಿದ್ದರೆ ಒಂದೇ ಒಂದು ಮರವನ್ನೂ ಇವರು ಉಳಿಸುವುದಿಲ್ಲ. ಅಕ್ರಮ-ಸಕ್ರಮ ಯೋಜನೆಯಲ್ಲಿ ನೂರಾರು ಎಕರೆ ಕಾಡು ಕಣ್ಮರೆಯಾಯಿತು. ಕೆಲವು ರೈತರು ಕೃಷಿಯ ಹೆಸರಲ್ಲಿ ಕಾಡನ್ನು ನಿರ್ನಾಮ ಮಾಡುತ್ತಿದ್ದಾರೆ. ಅಭಯಾರಣ್ಯವೆಂದು ಘೋಷಿಸಿರುವುದರಿಂದ ಸ್ವಲ್ಪ ಮಟ್ಟಿಗಾದರೂ ಕಾಡು ಉಳಿದಿದೆ.

ಎರಡೂ ವಾದಗಳ ನಡುವೆ ಸತ್ಯ ಅಡಗಿ ಕುಳಿತಿದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಬೇಕು. ಆಹಾರಕ್ಕೆ ಕೃಷಿಯೊಂದೇ ಮಾರ್ಗ. ಆದರೆ ಕೃಷಿಗಾಗಿ ಕಾಡು ನಾಶವಾದರೆ ಮುಂದಿನ ದಿನಗಳಲ್ಲಿ ನೀರಿಲ್ಲದೆ ಕೃಷಿಯೂ ಅಸಾಧ್ಯ. ಕಾಡೂ ಉಳಿಯಬೇಕು. ಕೃಷಿಯೂ ಉಳಿಯಬೇಕು. ಕಾನೂನನ್ನು ದುರುಪಯೋಗ ಮಾಡಿಕೊಳ್ಳುವವರಲ್ಲಿ ಅಧಿಕಾರಿಗಳೂ ಇದ್ದಾರೆ; ರೈತರೂ ಇದ್ದಾರೆ. ಸರಳೀಕರಣ ಅಪಾಯ. ವಿಚಿತ್ರವೇನೆಂದರೆ ಈ ಸುಡುವ ಸಮಸ್ಯೆಗಳು ಚುನಾವಣೆಯಲ್ಲಿ ವಸ್ತುವಾಗಿ ಚರ್ಚೆಯಾಗುವುದಿಲ್ಲ. ಈ ಸಲದ ಚುನಾವಣೆಯಲ್ಲಿ ಮಂಡ್ಯದಲ್ಲಿ ಒಬ್ಬರೂ ಕಾವೇರಿಯ ವಿಷಯ ಚರ್ಚಿಸಲೇ ಇಲ್ಲ. ಮತದಾರರಿಗೂ, ಉಮೇದುದಾರರಿಗೂ ಜಾಣಕುರುಡು. ಗಂಭೀರ ಸಮಸ್ಯೆಗಳನ್ನು ಚರ್ಚಿಸದಿದ್ದರೆ ಅದೆಂಥ ಚುನಾವಣೆ? ಅದೆಂಥ ಮತದಾನ? ಕರ್ನಾಟಕದ ಹನ್ನೊಂದು ಜಿಲ್ಲೆಗಳಲ್ಲಿ ಭಾಗಶಃ ಅಥವಾ ಪೂರ್ಣವಾಗಿ ಪಶ್ಚಿಮ ಘಟ್ಟಗಳು ಹಾದು ಹೋಗುತ್ತವೆ. ಈ ಎಲ್ಲ ಜಿಲ್ಲೆಗಳಿಗೂ ಸಮಾನವಾದ ಏಕರೂಪವಾದ ಸಮಸ್ಯೆಗಳಿವೆ. ಆದರೆ ಚುನಾವಣೆಗಳು ಬಂದಾಗ ಜಾತಿ, -ಹಣ ಮಾತ್ರ ಮುನ್ನೆಲೆಗೆ ಬರುತ್ತವೆ.

ಈ ವಿರೋಧಾಭಾಸಗಳ ನಡುವೆಯೂ ಸಮಾಧಾನಕರ ಸಂಗತಿಗಳಿವೆ. ಎಲ್ಲೆಲ್ಲೋ ಹರಡಿರುವ ಮಲೆನಾಡ ಪ್ರಜ್ಞಾವಂತ ಯುವಕರು ಸಂಘಟಿತರಾಗುತ್ತಿದ್ದಾರೆ. ಶಿಕ್ಷಣ ಸ್ನೇಹಿ ಎಂಬ ಸಂಸ್ಥೆ ಹತ್ತು ವರ್ಷ ಪೂರೈಸಿದೆ. ಚಿಂತಕರ ಸಭೆಯಲ್ಲಿ ಮುಖ್ಯಮಂತ್ರಿಗಳು, ನಕ್ಸಲರು ಶರಣಾದರೆ ಅವರು ಮುಖ್ಯವಾಹಿನಿಗೆ ಬರಲು ನೆರವಾಗುತ್ತೇವೆ ಎಂದಿದ್ದಾರೆ. ಇದೆಲ್ಲಕ್ಕಿಂತ ಸಂತೋಷದ ಸಂಗತಿ ಎಂದರೆ ಅಡಿಕೆ ಬೆಳೆಗೆ ಚಿನ್ನದ ಬೆಲೆ ಬಂದಿದೆ. ಅಡಿಕೆ ಬೆಳೆಗಾರರು ಶ್ರೀಮಂತರಾಗಲಿದ್ದಾರೆ. ತೋಟದ ಮನೆಗಳ ಮುಂದೆ ಈ ವರ್ಷ ಬಗೆಬಗೆಯ ಹೊಸ ಬ್ರಾಂಡ್ ಕಾರುಗಳು ನಿಲ್ಲಲಿವೆ. ಮಲೆನಾಡ ಯುವಕರು ತಮಗೆ ಯಾರೂ ಹೆಣ್ಣು ಕೊಡುವುದಿಲ್ಲ ಎಂದು ಕೊರಗುವುದು ತಪ್ಪೀತು. ಈ ವರ್ಷದ ಮಟ್ಟಿಗೆ ಹಣ, ಕಾರು, ವಧು ಇತ್ಯಾದಿಗಳು ಮಲೆನಾಡನ್ನು ಒಟ್ಟೊಟ್ಟಿಗೇ ವರಿಸುವ ಅಪಾಯಗಳಿವೆ. ಈಗ ತೇಜಸ್ವಿ ಬದುಕಿದ್ದರೆ ಎಂಥೆಂಥ ಕಥೆಗಳು ಹುಟ್ಟುತ್ತಿದ್ದವೋ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT