ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ್ಕ್ಯುರಿ 3ಜಿ ಮೈಫೈ ರೂಟರ್ ಒಂದು ಕಳಪೆ ಉತ್ಪನ್ನ

Last Updated 27 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಗಣಕಗಳನ್ನು ಅಂತರಜಾಲಕ್ಕೆ ಸಂಪರ್ಕಿಸಲು ಮೋಡೆಮ್ ಮತ್ತು ಗಣಕಜಾಲಕ್ಕೆ ಸಂಪರ್ಕಿಸಲು ರೂಟರ್‌ಗಳ ಬಳಕೆ ಆಗುತ್ತದೆ. ಮೋಡೆಮ್ (Modem) ಎಂಬುದು modulation ಮತ್ತು demodulation ಎಂಬುದನ್ನು ಸೂಚಿಸುತ್ತದೆ. ಇದು ದೂರವಾಣಿ ತಂತಿಗಳ ಮೂಲಕ ಅಂತರಜಾಲ ಸಂಪರ್ಕ ನೀಡುತ್ತಿದ್ದ ಕಾಲದಲ್ಲಿ ಬಳಕೆಗೆ ಬಂತು. ದೂರವಾಣಿ ತಂತಿಗಳಲ್ಲಿ ಅಂತರಜಾಲದ ಸಂಪರ್ಕವನ್ನು ಬದಲಾವಣೆ ಮಾಡಿ ಕಳುಹಿಸಲಾಗುತ್ತಿತ್ತು. ಮೋಡೆಮ್ ಅದನ್ನು ಪುನಃ ಬದಲಾಯಿಸಿ ಗಣಕಕ್ಕೆ ಕಳುಹಿಸುತ್ತಿತ್ತು.

ಈಗ ಗಣಕವನ್ನು ಅಂತರಜಾಲಕ್ಕೆ ಸಂಪರ್ಕಿಸುವ 3ಜಿ ಸಿಮ್ ಕಾರ್ಡ್ ಬಳಸುವ ಸಾಧನಗಳಿಗೂ ಕೇಬಲ್ ಮೂಲಕ ಸಂಪರ್ಕಿಸುವ ಸಾಧನಗಳಿಗೂ ಈ ಹೆಸರು ಬಳಕೆಯಾಗುತ್ತಿದೆ. ಸ್ಥಳೀಯ ಗಣಕಜಾಲಕ್ಕೆ ಹಲವು ಗಣಕಗಳನ್ನು ಜೋಡಿಸುವ ಸಾಧನಕ್ಕೆ ರೂಟರ್ (router) ಎನ್ನುತ್ತಾರೆ. ನಿಮ್ಮ ಮನೆಗೆ ‌ಇತರ್‌ನೆಟ್ (ethernet) ಕೇಬಲ್ ಮೂಲಕ ಅಂತರಜಾಲ ಸಂಪರ್ಕ ದೊರೆಯುತ್ತಿದೆಯಾದಲ್ಲಿ ನಿಮಗೆ ರೂಟರ್ ಬೇಕು. ಇಂತಹ ರೂಟರ್‌ಗಳಲ್ಲಿ ವೈಫೈ ಸೌಲಭ್ಯ ಈಗ ಸರ್ವೇಸಾಮಾನ್ಯವಾಗಿದೆ.

ಬಿಎಸ್‌ಎನ್‌ಎಲ್‌ನವರು ಮನೆಗೆ ನೀಡುವ ಅಂತರಜಾಲ ಸಂಪರ್ಕವನ್ನು ಮನೆಯಲ್ಲಿರುವ ಎಲ್ಲ ಸಾಧನಗಳಿಗೆ (ಗಣಕ, ಲ್ಯಾಪ್‌ಟಾಪ್, ಮೊಬೈಲ್, ಟ್ಯಾಬ್ಲೆಟ್ ಇತ್ಯಾದಿ) ಹಂಚಲು ಇಂತಹ ರೂಟರ್ ಅಗತ್ಯ. ನೀವು ಅಂತರಜಾಲ ಸಂಪರ್ಕವನ್ನು 3ಜಿ ಸಿಮ್ ಮೂಲಕ ಪಡೆಯುತ್ತಿರುವವರಾದರೆ ಅದನ್ನು ಎಲ್ಲರಿಗೂ ವೈಫೈ ಮೂಲಕ ಹಂಚುವ 3ಜಿ ಮೋಡೆಮ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಗಣಕಗಳ ಅಂಗಾಂಗಗಳನ್ನು ತಯಾರಿಸುವುದರಲ್ಲಿ, ಅದರಲ್ಲೂ ಮದರ್‌ಬೋರ್ಡ್ ತಯಾರಿಕೆಯಲ್ಲಿ ಹಲವು ವರ್ಷಗಳಿಂದ ಪ್ರಸಿದ್ಧವಾಗಿರುವ ಕೋಬಿಯನ್ ಕಂಪೆನಿ ಮರ್ಕ್ಯುರಿ ಹೆಸರಿನಲ್ಲಿ ಹಲವು ಸಾಧನಗಳನ್ನು ತಯಾರಿಸುತ್ತಿದೆ. ಅದು ಇತ್ತೀಚೆಗೆ 3ಜಿ ಮೈಫೈ ಮೋಡೆಮ್ ರೂಟರ್ (Mercury 3G MIFI ROUTER) ತಯಾರಿಸಿದೆ. ಅಂದರೆ ಇದು 3ಜಿ ವೈಫೈ ಮೋಡೆಮ್ ಹಾಗೂ ರೂಟರ್ ಆಗಿಯೂ ಕೆಲಸ ಮಾಡುತ್ತದೆ. ಇದು ನಮ್ಮ ಈ ವಾರದ ಗ್ಯಾಜೆಟ್.    

ಗುಣವೈಶಿಷ್ಟ್ಯಗಳು
ಕ್ವಾಲ್ಕಂ ಚಿಪ್‌ಸೆಟ್, 3ಜಿ ಸಿಮ್ ಕಾರ್ಡ್ ಸೌಲಭ್ಯ, 14.4 Mbps ತನಕ ವೇಗ (3ಜಿ), ವೈಫೈ ವೇಗ 150 Mbps ತನಕ, 3000mAh ಶಕ್ತಿಯ ಬ್ಯಾಟರಿ, RJ45, ಸಾಮಾನ್ಯ ಯುಎಸ್‌ಬಿ ಮತ್ತು ಮೈಕ್ರೊಯುಎಸ್‌ಬಿ ಕಿಂಡಿಗಳು, ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ, 95 x 50 x 20 ಮಿ.ಮೀ. ಗಾತ್ರ, ಇತ್ಯಾದಿ. ಮಾರುಕಟ್ಟೆ ಬೆಲೆ ಸುಮಾರು ₹3,000. 

ಇದನ್ನು ಕಿಸೆಯಲ್ಲಿ ಇಟ್ಟುಕೊಳ್ಳಬಹುದಾದ, ಪ್ರಯಾಣ ಕಾಲದಲ್ಲಿ ಬಳಸಬಹುದಾದ 3ಜಿ ಮೋಡೆಮ್ ಆಗಿ ಬಳಸಬಹುದು. 3ಜಿ ಸಿಮ್ ಕಾರ್ಡ್ ಹಾಕಿದರೆ ಇದು ವೈಫೈ ಮೋಡೆಮ್ ಆಗಿ ಕೆಲಸ ಮಾಡುತ್ತದೆ. ಹತ್ತು ಸಾಧನಗಳಿಗೆ ಏಕಕಾಲಕ್ಕೆ ಅಂತರಜಾಲ ಸಂಪರ್ಕ ನೀಡಬಲ್ಲುದು. ಇದರಲ್ಲಿರುವ ಇತರ್‌ನೆಟ್ ಕಿಂಡಿಗೆ ಅಂತರಜಾಲ ಸಂಪರ್ಕ ಕೇಬಲ್ ಜೋಡಿಸಿದರೆ ಆಗ ಇದು ವೈಫೈ ರೂಟರ್ ಆಗಿ ಕೆಲಸ ಮಾಡುತ್ತದೆ. ಈ ವಿಧಾನದಲ್ಲೂ ಹತ್ತು ಸಾಧನಗಳ ತನಕ ಅಂತರಜಾಲ ಸಂಪರ್ಕ ನೀಡಬಹುದು.

ಈ ಸಾಧನದ ಇನ್ನೊಂದು ಬಹುಮುಖ್ಯ ಸೌಲಭ್ಯವೆಂದರೆ ಇದನ್ನು ತುರ್ತು ಸಂದರ್ಭಗಳಲ್ಲಿ ಪವರ್‌ಬ್ಯಾಂಕ್ ಆಗಿಯೂ ಬಳಸಬಹುದು. ಇದರಲ್ಲಿರುವ ಯುಎಸ್‌ಬಿ ಕಿಂಡಿ ಮೂಲಕ ನಿಮ್ಮ ಮೊಬೈಲ್ ಫೋನ್‌ಗೆ ಇದನ್ನು ಚಾರ್ಜರ್‌ ಆಗಿಯೂ ಬಳಸಬಹುದು. ಒಟ್ಟಿನಲ್ಲಿ ಹೇಳುವುದಾದರೆ ಹಲವು ಸೌಲಭ್ಯಗಳನ್ನು ಒಂದರಲ್ಲೇ ನೀಡುವ ಒಂದು ವಿಶೇಷ ಸಾಧನ ಎನ್ನಬಹುದು.

ರಚನೆ ಮತ್ತು ವಿನ್ಯಾಸ ಅಷ್ಟಕ್ಕಷ್ಟೆ. ಕಳಪೆ ಗುಣಮಟ್ಟದ ಪ್ಲಾಸ್ಟಿಕ್‌ನಿಂದ ತಯಾರಿಸಿದ್ದಾರೆ. ಹಿಂದುಗಡೆಯ ಕವಚ ತೆಗೆಯಬಹುದು. ಆಗ ಬ್ಯಾಟರಿ ಕಂಡುಬರುತ್ತದೆ. ಬ್ಯಾಟರಿ ತೆಗೆದರೆ ಸಿಮ್ ಕಾರ್ಡ್‌ ಮತ್ತು ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಜಾಗ ಕಂಡುಬರುತ್ತದೆ. ಇವುಗಳನ್ನು ಹಿಡಿದಿಟ್ಟುಕೊಳ್ಳುವ ಕ್ಲಿಪ್‌ಗಳ ಗುಣಮಟ್ಟವೂ ಅಷ್ಟಕ್ಕಷ್ಟೆ. ಯಾವಾಗ ಮುರಿದುಹೋಗುತ್ತದೆಯೋ ಎಂಬ ಭಯ ಮೂಡಿಸುವಂತಿದೆ. 

3ಜಿ ಮೂಲಕ ಅಥವಾ ಇತರ್‌ನೆಟ್ ಮೂಲಕ ಅಂತರಜಾಲ ಸಂಪರ್ಕ ಪಡೆದು ಅದನ್ನು ಹತ್ತು ಸಾಧನಗಳ ತನಕ ಹಂಚುವ ಸವಲತ್ತು ಇರುವುದರಿಂದ ಅಂತರಜಾಲ ಸಂಪರ್ಕ ಯಾವುದರಿಂದ ಆಗುತ್ತಿದೆ ಎಂದು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇದೆ ಅಥವಾ ಸ್ವಯಂಚಾಲಿತವಾಗಿ ಯಾವ ಸಂಪರ್ಕ ಕೆಲಸ ಮಾಡುತ್ತಿದೆಯೋ ಅದನ್ನು ಆಯ್ಕೆ ಮಾಡಿಕೊಳ್ಳುವ ಸೌಲಭ್ಯ ಇದೆ. ಈ ವಿಧಾನಕ್ಕೆ ಅವರು smart mode ಎಂದು ಹೆಸರಿಟ್ಟಿದ್ದಾರೆ. ಆದರೆ ನನಗೆ ಈ ವಿಧಾನ ಕೆಲಸ ಮಾಡಲಿಲ್ಲ. ಇತರ್‌ನೆಟ್‌ ಸಂಪರ್ಕ ಮಾಡಿದಾಗ ಇತರ್‌ನೆಟ್ ಎಂದು, 3ಜಿ ಸಿಮ್ ಹಾಕಿದಾಗ 3ಜಿ ಎಂದು ಆಯ್ಕೆ ಮಾಡಿಕೊಳ್ಳಬೇಕಾಯಿತು.

ಇತರ್‌ನೆಟ್ ಕೇಬಲ್ ಮೂಲಕ ಬಳಸಿದಾಗ ಕೆಲಸ ಮಾಡಿತು. ಆದರೆ ಅದಕ್ಕಾಗಿ ತುಂಬ ಸರ್ಕಸ್ ಮಾಡಬೇಕಾಯಿತು. ಸ್ಮಾರ್ಟ್‌ಮೋಡ್ ಎಂದು ಆಯ್ಕೆ ಮಾಡಿಕೊಂಡಾಗ ಅದು ಕೆಲಸ ಮಾಡಲಿಲ್ಲ. ಇತರ್‌ನೆಟ್ ಎಂದು ಆಯ್ಕೆ ಮಾಡಿಕೊಂಡಾಗ ಮಾತ್ರ ಕೆಲಸ ಮಾಡಿತು. ಇಲ್ಲೂ ಒಂದು ತೊಡಕಿದೆ. ಇತರ್‌ನೆಟ್ ಮೂಲಕ ಸ್ಥಳೀಯ ಅಂತರಜಾಲ ಸಂಪರ್ಕ ಸೇವೆ ನೀಡುವವರ ಸರ್ವರ್‌ಗೆ ಸಂಪರ್ಕ ಮಾಡುವಾಗ ಅವರು ನಿಮಗೆ ನೀಡಿದ ಬಳಕೆದಾರ ಪದ ಮತ್ತು ಪ್ರವೇಶಪದ (username and password) ನೀಡಬೇಕು.

ಡಿಲಿಂಕ್, ನೆಟ್‌ಗೇರ್, ಇತ್ಯಾದಿ ರೂಟರ್‌ಗಳಲ್ಲಿ ಇಂತಹ ಬಳಕೆದಾರ ಪದ ಮತ್ತು ಪ್ರವೇಶಪದಗಳನ್ನು ಒಮ್ಮೆ ನೀಡಿ ಅದನ್ನು ಉಳಿಸಿಟ್ಟುಕೊಳ್ಳುವ ಸವಲತ್ತು ಇರುತ್ತದೆ. ಅವುಗಳನ್ನು ಮತ್ತೆ ಮತ್ತೆ ನೀಡುವ ತೊಂದರೆ ಇರುವುದಿಲ್ಲ. ಆದರೆ ಈ ಮರ್ಕ್ಯುರಿ ರೂಟರ್‌ನಲ್ಲಿ ಅಂತಹ ಸವಲತ್ತಿಲ್ಲ. ಪ್ರತಿ ಸಲ ಸಂಪರ್ಕ ಮಾಡಿದಾಗಲೂ ಬ್ರೌಸರ್ ತೆರೆದು ಇವುಗಳನ್ನು ನೀಡಬೇಕು ಮತ್ತು ಆ ಕಿಟಕಿಯನ್ನು ಮುಚ್ಚಬಾರದು.

ಲ್ಯಾಪ್‌ಟಾಪ್ ಅಥವಾ ಮೊಬೈಲ್ ಯಾವುದೂ ಇರಬಹುದು, ಮೊದಲು ಸಂಪರ್ಕಗೊಳ್ಳುವ ಸಾಧನದಲ್ಲಿ ಇದನ್ನು ಒಂದು ಸಲ ಮಾಡಬೇಕು. ನಂತರ ಸಂಪರ್ಕಗೊಳ್ಳುವ ಇತರೆ ಸಾಧನಗಳಲ್ಲಿ ಇದನ್ನು ಮತ್ತೆ ಮತ್ತೆ ನೀಡುವ ಅಗತ್ಯವಿಲ್ಲ. ಇತರ್‌ನೆಟ್ ವಿಧಾನದಲ್ಲಿ ಇದು ಸರಿಯಾಗಿಯೇ ಕೆಲಸ ಮಾಡಿತು. ಇದರಲ್ಲಿ 3ಜಿ ಸಿಮ್ ಹಾಕಿದಾಗ ಅದು ನನಗೆ ಕೆಲಸ ಮಾಡಲಿಲ್ಲ. ಹಲವು ರೀತಿಯಲ್ಲಿ ಪ್ರಯತ್ನಿಸಿ ನೋಡಿದೆ. ಅದರಲ್ಲಿ 3ಜಿ ಸಂಪರ್ಕ ನೀಡುವವರು ಯಾರು ಎಂದು ಆಯ್ಕೆ ಮಾಡಿಕೊಳ್ಳುವ ಸವಲತ್ತೂ ಇದೆ.

ಅದರಲ್ಲಿ ನನ್ನ ಸಿಮ್ ನೀಡಿದ ಬಿಎಸ್‌ಎನ್‌ಎಲ್ ಎಂದು ಆಯ್ಕೆ ಮಾಡಿಕೊಂಡರೂ ಅದು ಕೆಲಸ ಮಾಡಲಿಲ್ಲ. ಇದು ಪವರ್‌ಬ್ಯಾಂಕ್ ಆಗಿಯೂ ಕೆಲಸ ಮಾಡುತ್ತದೆ ಎಂದೆನಲ್ಲ. ಹಾಗೆ ಕೆಲಸ ಮಾಡಲು ಇದನ್ನು ಆನ್ ಮಾಡುವ ಅಗತ್ಯವಿಲ್ಲ. ಸುಮ್ಮನೆ ನಿಮ್ಮ ಮೊಬೈಲ್ ಫೋನನ್ನು ಯುಎಸ್‌ಬಿ ಮೂಲಕ ಜೋಡಿಸಿದರೆ ಚಾರ್ಜಿಂಗ್ ಪ್ರಾರಂಭವಾಗುತ್ತದೆ. ಆನ್ ಮಾಡಿದಾಗ ಮಾತ್ರ ಇದರ ಮೂಲಕ ಚಾರ್ಜ್ ಮಾಡಿಕೊಳ್ಳುವಂತೆ ಮಾಡಿದ್ದರೆ ಅದು ಹೆಚ್ಚು ಸೂಕ್ತವಾಗುತ್ತಿತ್ತು.  ಒಟ್ಟಿನಲ್ಲಿ ಹೇಳುವುದಾದರೆ ಕಡಿಮೆ ಬೆಲೆಗೆ ಹಲವು ಸವಲತ್ತುಗಳನ್ನು ನೀಡಲು ಹೋಗಿ ಎಲ್ಲವನ್ನೂ ಅರೆಬರೆಯಾಗಿ ಮಾಡುವ ಒಂದು ಸಾಧಾರಣ ಉತ್ಪನ್ನ ಎನ್ನಬಹುದು.   

ವಾರದ ಆಪ್
ಕಾಮನ್‌ಫ್ಲೋರ್ ಗ್ರೂಪ್ಸ್  
ವಸತಿಸಮುಚ್ಚಯಗಳಲ್ಲಿ ವಾಸಿಸುವ ಎಲ್ಲ ಜನರನ್ನು ಅಂತರಜಾಲದಲ್ಲಿ ಒಂದೇ ಕಡೆ ಸೇರಿಸುವ ಹಲವು ಸವಲತ್ತುಗಳಿವೆ. ಈಗ ಅಂತಹ ಸವಲತ್ತು ನಿಮ್ಮ ಆಂಡ್ರಾಯಿಡ್ ಫೋನಿಗೆ ಬಂದಿದೆ. ಕಾಮನ್‌ಫ್ಲೋರ್ ಗ್ರೂಪ್ಸ್ (CommonFloor Groups) ಹೆಸರಿನ ಈ ಕಿರುತಂತ್ರಾಂಶವನ್ನು (ಆಪ್) ನಿಮ್ಮ ಫೋನಿನಲ್ಲಿ ಹಾಕಿಕೊಳ್ಳಿ. ಅದರಲ್ಲಿ ನೀವು ವಾಸಿಸುವ ವಸತಿಸಮುಚ್ಚಯ ಈಗಾಗಲೇ ಇದೆಯೇ ಎಂದು ಹುಡುಕಿ. ಇದ್ದರೆ ಅದಕ್ಕೆ ಸೇರಿಕೊಳ್ಳಿ. ನಂತರ ನಿಮ್ಮ ಸಹವಾಸಿಗಳ ಜೊತೆ ವಿಚಾರ ವಿನಿಮಯ, ದೂರು ನೀಡುವಿಕೆ, ಕಾರ್ಯಕ್ರಮ ಘೋಷಣೆ ಎಲ್ಲ ಮಾಡಬಹುದು.

ನಿಮ್ಮ ವಸತಿಸಮುಚ್ಚಯ ಅದರಲ್ಲಿ ಇಲ್ಲವಾದಲ್ಲಿ ಅದನ್ನು ಸೇರಿಸಲು ಕೋರಿಕೆ ಸಲ್ಲಿಸಿ ಅದನ್ನು ನಿರ್ವಾಹಕರು ಸೇರಿಸುವ ತನಕ ಕಾಯಬೇಕು. ಈಗಾಗಲೇ ಇರುವ ಪಂಗಡಕ್ಕೆ ಸೇರಬೇಕಾದರೂ ಅದರ ನಿರ್ವಾಹಕರಿಗೆ ನಿಮ್ಮ ವಸತಿ ಸಂಖ್ಯೆ ಮತ್ತು ಇತರೆ ವಿವರ ನೀಡಿ, ನೀವು ನಿಜವಾಗಿಯೂ ಅಧಿಕೃತ ನಿವಾಸಿ ಎಂದು ಖಾತ್ರಿ ಯಾಗಿ ಅವರು ನಿಮ್ಮ ಸದಸ್ಯತ್ವವನ್ನು ಅಂಗೀಕರಿಸಿದ ನಂತರ ಮಾತ್ರ ನೀವು ಇದನ್ನು ಬಳಸಬಹುದು.

ಗ್ಯಾಜೆಟ್ ಸುದ್ದಿ
ಐಫೋನ್‌ನಲ್ಲಿ ಸಿರಿ ಹೆಸರಿನ ಧ್ವನಿ ಪರಿಚಾರಕ ಇರುವುದು ಗೊತ್ತು ತಾನೆ? ಅದಕ್ಕೆ ಧ್ವನಿಯ ಮೂಲಕ ಆಜ್ಞೆ ನೀಡಿದರೆ ಅದು ತನಗೆ ತಿಳಿದಂತೆ ಉತ್ತರಿಸುತ್ತದೆ ಅಥವಾ ಕೆಲಸ ಮಾಡುತ್ತದೆ. ತನ್ನ ಕೋಣೆಯಲ್ಲಿ ಜೊತೆಗೆ ವಾಸಿಸುತ್ತಿದ್ದವನನ್ನು ಕೊಂದ ಆರೋಪ ಒಬ್ಬಾತನ ಮೇಲೆ ಇದೆ. ಆತ ಸಿರಿಗೆ ‘ನನ್ನ ರೂಮ್‌ಮೇಟ್ ಅನ್ನು ಅಡಗಿಸುವುದು ಹೇಗೆ?’ ಎಂದು ಪ್ರಶ್ನೆ ಕೇಳಿದ ದಾಖಲೆ ತನಿಖಾಧಿಕಾರಿಗಳಿಗೆ ದೊರೆಯಿತು.  ಆತ ತನ್ನ ರೂನ್‌ಮೇಟ್ ಅನ್ನು ಕೊಂದಿರುವುದಕ್ಕೆ ಇದು ದಾಖಲೆ ಎಂದು ಅವರು ಈಗ ವಾದಿಸುತ್ತಿದ್ದಾರೆ. ನ್ಯಾಯಾಲಯ ಈ ವಾದವನ್ನು ಇನ್ನೂ ಒಪ್ಪಿಲ್ಲ. ಅಂದ ಹಾಗೆ ಸಿರಿ (ಐಫೋನ್), ಗೂಗ್ಲ್ ನೌ ಅಥವಾ ಕೊರ್ಟಾನಾ (ಮೈಕ್ರೋಸಾಫ್ಟ್ ಫೋನ್) ಗಳಿಗೆ  ‘How to get away with murder?’ ಎಂದು ಕೇಳಿ ನೋಡಿ. ಏನು ಉತ್ತರ ಬರುತ್ತದೆ?

ಗ್ಯಾಜೆಟ್ ತರ್ಲೆ
ಎಲ್ಲರೂ ಹುಟ್ಟಿನಿಂದ ಬುದ್ಧಿವಂತರೇ ಆಗಿರುತ್ತಾರೆ. ಅವರ ಫೇಸ್‌ಬುಕ್ ಚಟುವಟಿಕೆಗಳು ಅವರನ್ನು ಮೂರ್ಖರನ್ನಾಗಿ ಬಿಂಬಿಸುತ್ತದೆ.

ಗ್ಯಾಜೆಟ್ ಸಲಹೆ
ಪ್ರಶ್ನೆ: ನನ್ನ ಫೋನಿನಲ್ಲಿ ಆಂಡ್ರಾಯಿಡ್ 4.1.2 ಇದೆ. ಅದನ್ನು ಆಂಡ್ರಾಯಿಡ್ ಕಿಟ್‌ಕ್ಯಾಟ್‌ಗೆ ನವೀಕರಿಸಿಕೊಂಡರೆ ಇರುವ ಮಾಹಿತಿಯೆಲ್ಲ ಅಳಿಸಿಹೋಗುತ್ತದೆಯೇ? ಬ್ಯಾಕ್‌ಅಪ್ ಮಾಡಿಕೊಂಡು ನಂತರ ನವೀಕರಿಸಿಕೊಳ್ಳಬೇಕೇ?
ಉ: ನಿಮ್ಮ ಮೊಬೈಲ್ ಕಂಪೆನಿಯವರೇ ನೀಡಿದ ಸವಲತ್ತಿನ ಮೂಲಕ ನವೀಕರಿಸಿಕೊಂಡರೆ ಸಾಮಾನ್ಯವಾಗಿ ಮಾಹಿತಿ ಅಳಿಸಿಹೋಗುವುದಿಲ್ಲ. ಆದರೂ ನೀವು ಒಂದು ಸಲ ಎಲ್ಲ ಬ್ಯಾಕ್‌ಅಪ್ ಮಾಡಿಕೊಂಡೇ ನವೀಕರಿಸಿಕೊಳ್ಳುವುದು ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT