ಕೇಂದ್ರದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಕಾರ್ಮಿಕ ಕಾನೂನುಗಳ ಪರಿಷ್ಕರಣಕ್ಕೆ ಸಿದ್ಧವಾಗುತ್ತಿದೆ. ಇದರಲ್ಲಿ 1948ರಷ್ಟು ಹಳೆಯದಾದ ಫ್ಯಾಕ್ಟರಿಗಳ ಕಾಯಿದೆಯೂ ಸೇರಿದೆ. 2014ರ ಫ್ಯಾಕ್ಟರಿಗಳ (ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿ ಕಳೆದ ವಾರ ಮಂಡಿಸಲಾಗಿದೆ. ಈ ಕಾಯಿದೆಯ ಹಲವು ಅಂಶಗಳ ಬಗ್ಗೆ ಕಾರ್ಮಿಕ ಸಂಘಗಳು ವಿರೋಧದ ದನಿಗಳನ್ನು ಎತ್ತಿವೆ. ಅದೇನೇ ಇರಲಿ ಈ ತಿದ್ದುಪಡಿಯ ಮತ್ತೊಂದು ಮುಖ್ಯ ಅಂಶದ ಬಗ್ಗೆ ಕಾಂಗ್ರೆಸ್ ಪಕ್ಷದ ಕೆಲವರು ವಿರೋಧಿಸುತ್ತಿದ್ದಾರೆ ಎಂಬುದು ವಿಪರ್ಯಾಸ.
ಫ್ಯಾಕ್ಟರಿಗಳ ಕಾಯಿದೆಯ 66ನೇ ಸೆಕ್ಷನ್ ವಿಚಾರ ಇದು. ಕಾರ್ಖಾನೆಗಳಲ್ಲಿ ರಾತ್ರಿ ಪಾಳಿಗಳಲ್ಲಿ ಮಹಿಳೆಯರು ಕಾರ್ಯ ನಿರ್ವಹಿಸುವುದಕ್ಕೆ ಈ ಸೆಕ್ಷನ್ ಪ್ರಕಾರ ನಿಷೇಧವಿದೆ. ಈಗ ಉದ್ದೇಶಿಸಲಾಗಿರುವ ತಿದ್ದುಪಡಿಯಿಂದ ಮಹಿಳೆಯರಿಗೆ ರಾತ್ರಿ ಪಾಳಿಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಸಿಗುತ್ತದೆ. ಇದಕ್ಕಾಗಿ ಔದ್ಯೋಗಿಕ ಸುರಕ್ಷತೆ, ಮನೆಯಿಂದ ಹೋಗಿ ಬರಲು ಭದ್ರತೆ ಇರುವ ಸಾರಿಗೆ ವ್ಯವಸ್ಥೆ ಹಾಗೂ ಲೈಂಗಿಕ ಕಿರುಕುಳ ಮುಕ್ತ ವಾತಾವರಣವನ್ನು ಉದ್ಯೋಗದಾತರು ಕಲ್ಪಿಸಬೇಕು ಎಂಬಂತಹ ನಿಬಂಧನೆಗಳು ಉದ್ದೇಶಿತ ತಿದ್ದುಪಡಿಯಲ್ಲಿವೆ. ಅಲ್ಲದೆ ಸುರಕ್ಷಿತ ವಾತಾವರಣದಲ್ಲಿ ಭಾರಿ ಯಂತ್ರೋಪಕರಣಗಳೊಂದಿಗೆ ಕೆಲಸ ಮಾಡುವುದು ಹಾಗೂ ಅವುಗಳ ರಿಪೇರಿ ಕೆಲಸಗಳಿಗೂ ಮಹಿಳೆಯರಿಗೆ ಅವಕಾಶ ನೀಡುವ ವಿಚಾರ ಈ ತಿದ್ದುಪಡಿ ಮಸೂದೆಯಲ್ಲಿ ಸೇರಿದೆ.
ಆದರೆ ರಾತ್ರಿ ವೇಳೆ ಕಾರ್ಖಾನೆಗಳಲ್ಲಿ ಮಹಿಳೆಯರು ಕೆಲಸ ಮಾಡುವಷ್ಟು ಮಟ್ಟಿಗಿನ ಸುರಕ್ಷಿತ ವಾತಾವರಣ ಈಗಲೂ ಭಾರತದಲ್ಲಿ ಇಲ್ಲ ಎಂಬುದು ಕಾಂಗ್ರೆಸ್ ವಕ್ತಾರೆ ಶೋಭಾ ಓಝಾ ಅವರ ನಿಲುವು. ಮಹಿಳೆ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು, ಲೈಂಗಿಕ ಕಿರುಕುಳ ಪ್ರಕರಣಗಳಿಂದಾಗಿ ಕಾರ್ಖಾನೆಗಳಲ್ಲಿ ಮಹಿಳೆಯರಿಗೆ ರಾತ್ರಿ ಪಾಳಿ ನೀಡುವುದು ಸೂಕ್ತವಲ್ಲ ಎಂದು ಅವರು ಈ ತಿದ್ದುಪಡಿಗೆ ವಿರೋಧ ಸೂಚಿಸಿದ್ದಾರೆ.
ಇರಬಹುದು. ಭಾರತದಲ್ಲಿ ಮಹಿಳೆಯರ ಸುರಕ್ಷತೆಯ ವಿಚಾರ ಈಗ ಅಲ್ಲಗಳೆಯಲಾಗದಂತಹ ಸಮಸ್ಯೆಯಾಗಿ ಸಾರ್ವಜನಿಕ ವಾಗ್ವಾದಗಳ ಮುಖ್ಯ ವಿಚಾರವಾಗಿದೆ. ಹಾಗೆಂದು ರಾತ್ರಿ ವೇಳೆಯ ಕಾರ್ಮಿಕ ವಲಯದಿಂದ ಮಹಿಳೆಯರನ್ನು ಹೊರಗಿಡುವುದು ಎಷ್ಟರಮಟ್ಟಿಗೆ ಸರಿ?
ಲೈಂಗಿಕ ಕಿರುಕುಳಗಳಿಂದ ಮಹಿಳೆಯರನ್ನು ರಕ್ಷಿಸಲು ಅವರನ್ನು ಮನೆಯಲ್ಲೇ ಇರಿಸಬೇಕು ಎಂಬಂತಹ ಪಿತೃಪ್ರಾಧಾನ್ಯ ಧೋರಣೆಯ ಪ್ರದರ್ಶನವಾಗುವುದಿಲ್ಲವೆ ಇದು?
ಹಗಲಾಗಿರಲಿ, ರಾತ್ರಿಯಾಗಿರಲಿ ಮಹಿಳೆಯರು ಸೇರಿದಂತೆ ನಾಗರಿಕರಿಗೆ ಸುರಕ್ಷತೆಯ ವಾತಾವರಣ ಕಲ್ಪಿಸುವುದು ಸರ್ಕಾರದ ಕರ್ತವ್ಯವಲ್ಲವೆ? ಹಾಗೆಯೇ ತನ್ನ ಉದ್ಯೋಗಿಗಳಿಗೆ ಭದ್ರತೆ ಕಲ್ಪಿಸುವ ಹೊಣೆ ಉದ್ಯೋಗದಾತರದ್ದೂ ಆಗಿರುತ್ತದೆ.
ಹೀಗಿದ್ದೂ, ಚರ್ಚೆಯ ದಿಕ್ಕು ತಪ್ಪಿಸುವ ಇಂತಹ ಮಾತುಗಳನ್ನಾಡಿರುವುದು ರಾಜಕೀಯ ಕ್ಷೇತ್ರಕ್ಕೆ ಇಂದಿರಾ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಂಥ ಪ್ರಭಾವಿ ನಾಯಕಿಯರನ್ನು ನೀಡಿದ ಪಕ್ಷದ ಮಹಿಳಾ ಘಟಕದ ಮುಖ್ಯಸ್ಥೆ ಎಂಬುದು ವಿಶೇಷ.
ಆದರೆ ಈ ವಿಚಾರದ ಬಗ್ಗೆ ಕಾಂಗ್ರೆಸ್ ಇನ್ನೂ ಅಧಿಕೃತ ನಿಲುವು ಕೈಗೊಂಡಿಲ್ಲ ಎಂದು ಮತ್ತೊಬ್ಬರು ಕಾಂಗ್ರೆಸ್ ವಕ್ತಾರ ಸಂಜಯ್ ಝಾ ಸಮಜಾಯಿಷಿ ನೀಡಿದ್ದಾರೆ. ಉದ್ಯೋಗ ವಲಯದಲ್ಲಿ ಮಹಿಳೆಯರಿಗೆ ಅವಕಾಶಗಳನ್ನು ಹೆಚ್ಚು ಮಾಡುವುದಲ್ಲದೆ ಭದ್ರತಾ ಏರ್ಪಾಡುಗಳನ್ನು ಸುಧಾರಿಸುವ ಬಗ್ಗೆ ಕಾಂಗ್ರೆಸ್ ಪಕ್ಷ ವ್ಯಾವಹಾರಿಕವಾದ ಸೂಕ್ತ ನಿಲುವು ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ನ ಈ ನಿಲುವು ದ್ವಂದ್ವಾತ್ಮಕವಾಗಿದೆ. ಏಕೆಂದರೆ ಇಂತಹದೊಂದು ತಿದ್ದುಪಡಿಗಾಗಿ ಸ್ವತಃ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪ್ರಯತ್ನಗಳನ್ನು ಮಾಡಿತ್ತು. ಇತಿಹಾಸದತ್ತ ಹಿನ್ನೋಟ ಹಾಯಿಸಬೇಕಷ್ಟೆ.
1948ರ ಫ್ಯಾಕ್ಟರಿಗಳ ಕಾಯಿದೆಯ 66ನೇ ಸೆಕ್ಷನ್ಗೆ ತಿದ್ದುಪಡಿ ತಂದು ಕಾರ್ಖಾನೆಗಳಲ್ಲಿ ರಾತ್ರಿ ಪಾಳಿ ನಿರ್ವಹಿಸಲು ಮಹಿಳೆಗೆ ಅವಕಾಶ ಕಲ್ಪಿಸುವುದಕ್ಕಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 2005ರಲ್ಲೇ ಸಂಸತ್ನಲ್ಲಿ ಮಸೂದೆ ಮಂಡಿಸಿತ್ತು. ಆ ನಂತರ, 2006ರಲ್ಲಿ ‘ಮಹಿಳೆಗೆ ರಾತ್ರಿ ಪಾಳಿ: ಬೆಳವಣಿಗೆ ಹಾಗೂ ಅವಕಾಶಗಳು’ ಎಂಬ ವಿಷಯ ಕುರಿತು ರಾಷ್ಟ್ರೀಯ ಮಹಿಳಾ ಆಯೋಗ ಅಧ್ಯಯನವೊಂದನ್ನು ಪ್ರಾಯೋಜಿಸಿತ್ತು. ಈ ಅಧ್ಯಯನ ಕಾರ್ಯದಲ್ಲಿ ಪಾಲ್ಗೊಂಡ ‘ಅಸೋಚಾಮ್’ ಸಮೀಕ್ಷಾ ವರದಿಯನ್ನೂ ಬಿಡುಗಡೆ ಮಾಡಿದೆ.
ಮಹಿಳೆಯರ ಮೇಲೆ ರಾತ್ರಿ ಪಾಳಿ ಬೀರಬಹುದಾದ ಪರಿಣಾಮಗಳು ಹಾಗೂ ವಿವಿಧ ವಲಯಗಳಲ್ಲಿ ಬೆಳವಣಿಗೆಗೆ ಅವರಿಗಿರುವ ಅವಕಾಶಗಳನ್ನು ಈ ಸಮೀಕ್ಷೆ ಅಧ್ಯಯನಕ್ಕೊಳಪಡಿಸಿತ್ತು. ರಾತ್ರಿ ಪಾಳಿಗಳಲ್ಲಿ ಮಹಿಳೆಯರ ದುಡಿಮೆ ಯಶಸ್ವಿಯಾಗಲು ಹಾಗೂ ಸಾಮಾಜಿಕವಾಗಿಯೂ ಅನುಮೋದನೆ ಗಳಿಸಿಕೊಳ್ಳಲು ಅವರಿಗೆ ಸೂಕ್ತ ಭದ್ರತೆ, ಹಣಕಾಸು ಪರಿಹಾರ ಹಾಗೂ ಮತ್ತೊಂದಿಷ್ಟು ಹೆಚ್ಚುವರಿ ಸೌಲಭ್ಯಗಳಿರುವ ಅನುಕೂಲಕರ ವಾತಾವರಣ ಅವಶ್ಯ ಎಂಬ ಅಭಿಪ್ರಾಯವನ್ನು ‘ಅಸೋಚಾಮ್’ ವ್ಯಕ್ತಪಡಿಸಿತ್ತು.
ಭಾರತದಲ್ಲಿ ಕಾರ್ಮಿಕ ಕಾನೂನುಗಳು ಭಾರತ ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಇದರಿಂದಾಗಿ ಭಾರತದ ಸಂಸತ್ ಹಾಗೂ ರಾಜ್ಯಗಳ ಶಾಸನಸಭೆಗಳಿಗೂ ಕಾನೂನು ಮಾಡುವ ಅವಕಾಶ ಇದೆ. ಹೀಗಾಗಿಯೇ ಕಾರ್ಮಿಕ ಕಾನೂನುಗಳಿಗೆ ಸಂಬಂಧಿಸಿದಂತೆ 1948ರ ಫ್ಯಾಕ್ಟರಿಗಳ ಕಾಯಿದೆಯಲ್ಲದೆ ವಿವಿಧ ರಾಜ್ಯಗಳಲ್ಲಿ ಅಂಗಡಿ ಮತ್ತು ವಾಣಿಜ್ಯ ಮುಂಗಟ್ಟುಗಳ ಕಾಯಿದೆಗಳು ಇವೆ.
1948ರ ಫ್ಯಾಕ್ಟರಿಗಳ ಕಾಯಿದೆ ಸೆಕ್ಷನ್ 66ರ ಅನ್ವಯ, ಬೆಳಿಗ್ಗೆ 6ರಿಂದ ಸಂಜೆ 7ರವರೆಗಿನ ಅವಧಿ ಹೊರತುಪಡಿಸಿ ರಾತ್ರಿ ವೇಳೆ ಯಾವುದೇ ಕಾರ್ಖಾನೆಯಲ್ಲಿ ಮಹಿಳೆಯರು ಕೆಲಸ ಮಾಡುವುದು ಅಗತ್ಯವಿಲ್ಲ ಅಥವಾ ಅವಕಾಶವಿಲ್ಲ. ಆದರೆ, ಈ ನಿರ್ಬಂಧಗಳಿಂದ ವಿನಾಯಿತಿ ಒದಗಿಸಲು ರಾಜ್ಯ ಸರ್ಕಾರ ನಿಯಮಗಳನ್ನು ಮಾಡಬಹುದು. ರಾತ್ರಿ ಪಾಳಿಯನ್ನು ಮಹಿಳೆಯರಿಗೆ ನಿಷೇಧಿಸುವ 1948ರ ಫ್ಯಾಕ್ಟರಿಗಳ ಕಾಯಿದೆ ಹಾಗೂ ರಾಜ್ಯ ಅಂಗಡಿಗಳು ಹಾಗೂ ವಾಣಿಜ್ಯ ಮುಂಗಟ್ಟು ಕಾಯಿದೆಗಳಿಂದ ಆಸ್ಪತ್ರೆ ಹಾಗೂ ಕೃಷಿ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರಿಗೆ ವಿನಾಯಿತಿ ಇದೆ. ಹಾಗೆಯೇ ಐಟಿ, ಬಿಟಿ ವಲಯ ಇತ್ಯಾದಿ ಸೇವಾ ವಲಯಗಳು ಹಾಗೂ ಮಾಧ್ಯಮಗಳಿಗೆ ವಿನಾಯಿತಿ ಇದೆ.
ಮಹಿಳೆಯರಿಗೆ ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುವ ಅವಕಾಶ ನೀಡಬೇಕು ಎಂದು ಅನೇಕ ನ್ಯಾಯಾಲಯಗಳು ಈ ಹಿಂದಿನಿಂದಲೂ ಅನೇಕ ತೀರ್ಪುಗಳನ್ನು ನೀಡಿವೆ. ಸಾಂತಾಕ್ರೂಜ್ ಎಲೆಕ್ಟ್ರಾನಿಕ್ ಎಕ್ಸ್ ಪೋರ್ಟ್ ಪ್ರೊಸೆಸಿಂಗ್ ಜೋನ್ನಲ್ಲಿ (ಎಸ್ಇಇಪಿಝಡ್) ರಾತ್ರಿ ಪಾಳಿಯಲ್ಲಿ ಮಹಿಳೆಯರ ನಿಯೋಜನೆಗೆ ಅವಕಾಶ ಕಲ್ಪಿಸುವಂತಹ ಮಧ್ಯಂತರ ಆದೇಶವನ್ನು 1999ರ ಜೂನ್ 10ರಂದು ಮುಂಬೈ ಹೈಕೋರ್ಟ್ ನೀಡಿತ್ತು.
1948ರ ಫ್ಯಾಕ್ಟರಿಗಳ ಕಾಯಿದೆಯ ಸೆಕ್ಷನ್ 66 (1) (ಬಿ) ಅಸಾಂವಿಧಾನಿಕ ಎಂದು ಆಂಧ್ರಪ್ರದೇಶದ ಹೈಕೋರ್ಟ್ ತೀರ್ಪು ನೀಡಿದೆ. ಇದು ಸಾಂವಿಧಾನಿಕವಾಗಿ ಮಹಿಳೆಯರಿಗೆ ನೀಡಲಾದ ಸಮಾನತೆಯ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಮದ್ರಾಸ್ ಹೈಕೋರ್ಟ್ ಸಹ ಹೇಳಿದೆ. ಲಿಂಗದ ಆಧಾರದ ಮೇಲೆ ಮಹಿಳೆಯರ ವಿರುದ್ಧ ನಡೆಸುವ ತಾರತಮ್ಯವಿದು; ಇಂತಹ ಪ್ರವೃತ್ತಿ, ಯಾವುದೇ ವೃತ್ತಿ, ಉದ್ಯೋಗ, ವ್ಯಾಪಾರ ಅಥವಾ ಉದ್ಯಮ ಕೈಗೊಳ್ಳಲು ಇರುವ ಮೂಲಭೂತ ಹಕ್ಕುಗಳಿಗೆ ಭಂಗ ತರುತ್ತದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಮಹಿಳಾ ನೌಕರರಿಗೆ ರಾತ್ರಿ ಪಾಳಿ ನಿಷೇಧ ತೆರವುಗೊಳಿಸುವುದರ ವಿರುದ್ಧ ಸಮಾಜದಲ್ಲಿ ಇರುವ ಅನೇಕ ವಾದಗಳನ್ನೂ ಮದ್ರಾಸ್ ಹೈಕೋರ್ಟ್ ಈ ತೀರ್ಪು ನೀಡುವ ಸಂದರ್ಭದಲ್ಲಿ ಗಮನದಲ್ಲಿರಿಸಿ ಕೊಂಡಿತ್ತು. ಹೀಗಾಗಿಯೇ ಮಹಿಳೆಯ ಸುರಕ್ಷತೆ, ಭದ್ರತೆಗಳಲ್ಲದೆ ಘನತೆ, ಗೌರವ ಕಾಪಾಡಿಕೊಳ್ಳಲು ಅಗತ್ಯವಾದ ಅನೇಕ ನಿಬಂಧನೆಗಳನ್ನೂ ತೀರ್ಪಿನಲ್ಲಿ ಅದು ವಿಧಿಸಿತ್ತು.
ನ್ಯಾಯಾಲಯಗಳ ಇಂತಹ ತೀರ್ಪುಗಳು ಹಾಗೂ ವಿವಿಧ ಸಂಘಟನೆಗಳ ಸಲಹೆಗಳನ್ನು ಆಧರಿಸಿ ಯುಪಿಎ ಸರ್ಕಾರ ಫ್ಯಾಕ್ಟರಿಗಳ ಕಾಯಿದೆ ತಿದ್ದುಪಡಿಗೆ ಮುಂದಾದದ್ದು ಬದಲಾದ ಕಾಲಕ್ಕೆ ಸಹಜ ನಡೆಯೇ ಆಗಿತ್ತು. ಆದರೆ ಮಸೂದೆಗೆ ಸಾಕಷ್ಟು ಬೆಂಬಲ ಗಳಿಸಿಕೊಳ್ಳಲು ಕಾಂಗ್ರೆಸ್ ವಿಫಲವಾದ್ದರಿಂದ ಅದು ಹಾಗೆಯೇ ರದ್ದಾಗಿಹೋಗಿತ್ತು.
ಈಗ ಎನ್ಡಿಎ ಸರ್ಕಾರ ಮತ್ತೆ ಮುಂದಿಟ್ಟಿರುವ ತಿದ್ದುಪಡಿಯನ್ನು ವಿರೋಧಿಸುವ ಪ್ರಯತ್ನಗಳಲ್ಲಿ ‘ರಾಜಕೀಯ’ವೇ ಎದ್ದು ಕಾಣಿಸುತ್ತಿದೆ.
ಸುರಕ್ಷಿತವಾದ, ನ್ಯಾಯಯುತವಾದ ದುಡಿಯುವ ಸ್ಥಳಗಳನ್ನು ಮಹಿಳೆಯರಿಗೆ ಸೃಷ್ಟಿಸಲು ನೆರವಾಗುವಂತಹ ರಕ್ಷಣಾತ್ಮಕ ಕ್ರಮಗಳಿಗೆ ತಿದ್ದುಪಡಿಯಲ್ಲಿ ಒತ್ತಾಯಿಸುವುದನ್ನು ಬಿಟ್ಟು ರಾತ್ರಿ ಪಾಳಿಯೇ ಅಸುರಕ್ಷತೆಯದ್ದು ಎಂದು ಆತಂಕ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ತನ್ನನ್ನು ತಾನು ಕೆಟ್ಟದಾಗಿ ಬಿಂಬಿಸಿಕೊಳ್ಳುತ್ತಿದೆ. ಮಹಿಳೆಯರಿಗೂ ಅನ್ಯಾಯ ಮಾಡುತ್ತಿದೆ.
‘ಅಸೋಚಾಮ್’ ನಡೆಸಿದ್ದ ಸಮೀಕ್ಷೆಯ ಪ್ರಕಾರ, ಶೇಕಡ 83ರಷ್ಟು ಮಹಿಳೆಯರು ರಾತ್ರಿ ಪಾಳಿ ಉದ್ಯೋಗದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಸೇವಾ ವಲಯದಲ್ಲಿರುವವರಿಗಿಂತ ತಯಾರಿಕಾ ರಂಗದಲ್ಲಿ ರಾತ್ರಿ ಪಾಳಿ ಮಾಡುವ ಮಹಿಳೆಯರು ಹೆಚ್ಚಿನ ಅಭದ್ರತೆ ಅನುಭವಿಸುತ್ತಿದ್ದರೆಂಬುದು ಈ ಸಮೀಕ್ಷೆಯಲ್ಲಿ ವ್ಯಕ್ತವಾಗಿತ್ತು. ಸೇವಾ ವಲಯದಲ್ಲಿರುವವರಿಗೆ ಹೋಲಿಸಿದರೆ ಅವರಿಗೆ ಸರಿಯಾದ ಸಾರಿಗೆ ವ್ಯವಸ್ಥೆಯೂ ಇಲ್ಲ ಎಂಬುದನ್ನು ಈ ವರದಿ ತೋರಿಸಿತ್ತು.
ತೊಗಲಿನ ಉದ್ಯಮದಲ್ಲಿ ಶೇ 45 ಹಾಗೂ ಜವಳಿ ಉದ್ಯಮದಲ್ಲಿ ಶೇ 34ರಷ್ಟು ನೌಕರರು ಕೆಲಸದಲ್ಲಿ ಅಭದ್ರತೆ ಭಾವವನ್ನು ಅನುಭವಿಸುವುದಾಗಿ ಹೇಳಿಕೊಂಡಿದ್ದರು. ಆದರೆ ಬಿಪಿಓ ನೌಕರರಲ್ಲಿ ಈ ಭಾವನೆ ಶೇ 8 ಹಾಗೂ ಆಸ್ಪತ್ರೆ ನರ್ಸ್ಗಳಲ್ಲಿ ಇದು ಶೇ 14ರಷ್ಟಿದೆ ಎಂಬುದೂ ಸಮೀಕ್ಷೆಯಲ್ಲಿ ವ್ಯಕ್ತವಾಗಿತ್ತು.
ಆದರೆ ಅಸೋಚಾಮ್ನ ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ 95ರಷ್ಟು ಉದ್ಯೋಗ-ದಾತರು ತಾವು ಸುರಕ್ಷಿತ ಉದ್ಯೋಗ ತಾಣಗಳನ್ನು ಕಲ್ಪಿಸಿರುವುದಾಗಿಯೇ ಹೇಳಿಕೊಂಡಿದ್ದರು.
ಒಟ್ಟಾರೆ, ರಾತ್ರಿ ಪಾಳಿಯಲ್ಲಿ ಅಸುರಕ್ಷತೆಯ ಭಾವನೆಯೇನೂ ಕಂಡು ಬರುವುದಿಲ್ಲ ಎಂಬುದು ಬಹುತೇಕ ಮಹಿಳೆಯರ ಅಭಿಪ್ರಾಯವಾಗಿತ್ತು. ಆದರೆ ಹಗಲಿನಲ್ಲಿ ಮನೆಗೆಲಸದ ಒತ್ತಡದಿಂದಾಗಿ ನಿದ್ದೆಗೆ ಸಂಬಂಧಿಸಿದ ಸಮಸ್ಯೆಗಳು ಮಾತ್ರ ತಮ್ಮನ್ನು ಕಾಡುತ್ತಿರುವುದಾಗಿ ಈ ಮಹಿಳೆಯರು ಹೇಳಿಕೊಂಡಿದ್ದರು.
ಫ್ಯಾಕ್ಟರಿ ಕಾಯಿದೆ ತಿದ್ದುಪಡಿ ಪ್ರಕ್ರಿಯೆ ಕೇಂದ್ರದಲ್ಲಿ ಜಾರಿಯಲ್ಲಿದ್ದಾಗಲೇ 2007ರಲ್ಲಿ ರಾಜ್ಯದಲ್ಲಿದ್ದ ಜೆಡಿಎಸ್–ಬಿಜೆಪಿ ಸಮ್ಮಿಶ್ರ ಸರ್ಕಾರದ ಕಾರ್ಮಿಕ ಸಚಿವ ಇಕ್ಬಾಲ್ ಅನ್ಸಾರಿ ಅವರು ಮಹಿಳೆಗೆ ರಾತ್ರಿ ಪಾಳಿ ನಿಷೇಧಿಸಿ 1961ರ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಮುಂಗಟ್ಟುಗಳ ಕಾಯಿದೆ ತಿದ್ದುಪಡಿಗೆ ಯತ್ನಿಸಿ ವಿವಾದವಾದ ನಂತರ ಹಿಂದೆ ಸರಿದಿದ್ದರು.
ಮಹಿಳೆಗೆ ರಾತ್ರಿ ಪಾಳಿ ವಿಚಾರ ಹೀಗೆ ರಾಜಕೀಯಗೊಳ್ಳುವ ಪರಿಯೇ ವಿಚಿತ್ರ. ರಾತ್ರಿ ವೇಳೆ ಮಹಿಳೆಯರಿಗೆ ಅಸುರಕ್ಷಿತ ಎಂಬ ಭೀತಿ ಅಸ್ತಿತ್ವದಲ್ಲಿದೆ. ಆದರೆ ವಾಸ್ತವವಾಗಿ, ದಿನದ ಬಹುಭಾಗ ಎಲ್ಲಾ ಸಂದರ್ಭಗಳಲ್ಲಿ ಅವರು ಕೆಟ್ಟ ಕುತೂಹಲದ ಕಣ್ಣುಗಳು ಹಾಗೂ ಲೈಂಗಿಕ ಕಿರುಕುಳಗಳಿಗೆ ತುತ್ತಾಗುತ್ತಲೇ ಇರುತ್ತಾರೆ ಎಂಬುದನ್ನು ಬಹುತೇಕ ಸಮೀಕ್ಷೆಗಳು ಸಾದರಪಡಿಸಿವೆ.
ವಾಸ್ತವವಾಗಿ ಮಹಿಳೆಯರ ವಿರುದ್ಧದ ಅಪರಾಧಗಳನ್ನು ಕಾನೂನು ಸುವ್ಯವಸ್ಥೆ ಸಮಸ್ಯೆಯಾಗಿ ಸರ್ಕಾರ ಪರಿಗಣಿಸಬೇಕು ಎಂಬುದು ಇಲ್ಲಿ ಮುಖ್ಯ. ಆದರೆ ಸುರಕ್ಷತೆ ನೆಪದಲ್ಲಿ ಮಹಿಳೆಯ ಚಲನಶೀಲತೆಯನ್ನೇ ನಿರ್ಬಂಧಿಸುವ ಪಿತೃಪ್ರಧಾನ ಧೋರಣೆಗಳು ಈಗಿನ ಬದಲಾಗುತ್ತಿರುವ ಕಾಲದಲ್ಲಿ ಅಪ್ರಸ್ತುತ. ಏಕೆಂದರೆ ಆಧುನಿಕ ಆರ್ಥಿಕತೆಯಲ್ಲಿ ಮಹಿಳೆಯ ಪಾಲ್ಗೊಳ್ಳುವಿಕೆ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಬದಲಾದ ಕಾಲಮಾನ ಮಹಿಳೆಗೆ ತಂದೊಡ್ಡುತ್ತಿರುವ ಹೊಸ ಹೊಸ ಸವಾಲುಗಳು, ಆಕೆಯ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರಗಳಿಗೆ ಕಾರಣವಾದ ಪಿತೃಪ್ರಧಾನ ಮೌಲ್ಯಗಳ ವಿರುದ್ಧ ಸೆಣಸುವಂತಹ ಯೋಜನೆಗಳು, ಕಾರ್ಯತಂತ್ರಗಳನ್ನು ನಮ್ಮ ರಾಜಕೀಯ ನೇತಾರರು ರೂಪಿಸಬೇಕು. ಅದು ಬಿಟ್ಟು ಸವಕಲಾದ ಅದೇ ಹಳೆಯ ಮೌಲ್ಯಗಳನ್ನು ರಾಜಕೀಯ ವಾಗ್ವಾದಗಳಲ್ಲಿ ಪ್ರತಿಪಾದಿಸುವಂತಹದ್ದು ಕೆಟ್ಟ ಬೆಳವಣಿಗೆ.
ಲಿಂಗ ಸಂವೇದನಾಶೀಲತೆಯ ತರಬೇತಿ ನೀಡುವ ವಿಚಾರ ನಮ್ಮ ನೇತಾರರಿಗೇ ಮೊದಲು ಆಗಬೇಕಾಗಿದೆ. ಇಲ್ಲದಿದ್ದಲ್ಲಿ ‘ಕನ್ನಡಿಗರೇನು ಬಳೆ ತೊಟ್ಟು ಕುಳಿತಿಲ್ಲ’ ಎಂದು ಇತ್ತೀಚೆಗಷ್ಟೇ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ‘ಗರ್ಜಿಸಿ’ ಬಿತ್ತರಿಸಿದಂತಹ ಸಂದೇಶಗಳು ಪುನರಾವರ್ತನೆಯಾಗುತ್ತಿರುತ್ತವೆ. ಹೆಣ್ತನವನ್ನು ದುರ್ಬಲತೆಗೆ ಸಮೀಕರಿಸುವ ಇಂತಹ ನುಡಿಗಟ್ಟುಗಳಾಚೆಗೆ ನಮ್ಮ ನೇತಾರರು ಆಲೋಚನೆ ಮಾಡಲಿ.
ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.