ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮ ಎಂಬುದು ಕತ್ತರಿಸುವ ಕರಗಸ!

Last Updated 26 ಜುಲೈ 2014, 19:30 IST
ಅಕ್ಷರ ಗಾತ್ರ

ಇದು ಅಧಿಕಾರದಲ್ಲಿ ಇರುವ ಎಲ್ಲರ ಸಮಸ್ಯೆ. ಅವರಿಗೆ ಪ್ರಶ್ನೆಗಳು ಬೇಡ. ಅವರು ವಿರೋಧ ಪಕ್ಷದಲ್ಲಿ ಇರುವ ವರೆಗೆ ಮಾಧ್ಯಮಗಳು ಜತೆಯಲ್ಲಿಯೇ ಇರಬೇಕು ಎಂದು ಬಯಸುತ್ತಾರೆ. ತಾವು ಅಧಿಕಾರಕ್ಕೆ ಏರಲು ಅದನ್ನು ಏಣಿಯಂತೆ ಬಳಸಿಕೊಳ್ಳುತ್ತಾರೆ. ವಿಧಾನಮಂಡಲದಲ್ಲಿ ವಿರೋಧ ಪಕ್ಷಗಳ ಪಕ್ಕದಲ್ಲಿಯೇ ಮಾಧ್ಯಮಗಳಿಗೂ ಆಸನದ ವ್ಯವಸ್ಥೆ ಇದೆ.

ವಿರೋಧ ಪಕ್ಷದ ಮುಖಂಡರು ಸಭಾಧ್ಯಕ್ಷರ ಮುಖ ನೋಡಿ ಮಾತನಾಡುವುದಕ್ಕಿಂತ ಮಾಧ್ಯಮಗಳ ಮುಖ ನೋಡಿ ಮಾತನಾಡುವುದೇ ಹೆಚ್ಚು! ಒಂದು ಸಾರಿ ಈ ಕಡೆ ಇದ್ದವರು ಆ ಕಡೆ ಅಧಿಕಾರಕ್ಕೆ ಹೋದ ಕೂಡಲೇ ಮಾಧ್ಯಮಗಳು ಕಾಣದಂತೆ ಆಗುತ್ತವೆ. ವಿರೋಧ ಪಕ್ಷದಲ್ಲಿ ಇದ್ದಾಗ ಹೆಗಲ ಮೇಲೆ ಕೈ ಹಾಕಿ ಮಾತನಾಡಿಸಬೇಕು ಎನಿಸುತ್ತಿದ್ದ ಮಾಧ್ಯಮದವರೇ ಈಗ ಬೇಡ ಅನಿಸುತ್ತದೆ. ಮಾಧ್ಯಮಕ್ಕೆ ಇದು ರೂಢಿಯಾಗಿದೆ.

ಅದು ರಾಜಕಾರಣಿಗಳ ಇಂಥ ವೇಷ ಬದಲಾವಣೆಯನ್ನು ಅನೇಕ ವರ್ಷಗಳಿಂದ ನೋಡಿಕೊಂಡು ಬಂದಿದೆ. ತನ್ನ ಹೆಗಲ ಮೇಲೆ ಕೈ ಹಾಕಿ ಮಾತನಾಡಿಸುವ ರಾಜಕಾರಣಿಗಳ ಬಗ್ಗೆ ಅದು ತಲೆಕೆಡಿಸಿಕೊಳ್ಳುವುದಿಲ್ಲ. ಅದು, ವಿಧಾನಸೌಧದ ಹೊರಗೆ ಇರುವ ಜನರ ಕಡೆಗೆ ದೃಷ್ಟಿ ಹಾಯಿಸಿರುತ್ತದೆ. ಅವರ ಸಾಕ್ಷಿಪ್ರಜ್ಞೆಯಂತೆ ಕೆಲಸ ಮಾಡುತ್ತ ಇರುತ್ತದೆ. ಪ್ರಶ್ನೆ ಕೇಳುವುದು ಅದರ ಕೆಲಸ. ಅದು ಆಡಳಿತ ಪಕ್ಷಕ್ಕೂ ಪ್ರಶ್ನೆ ಕೇಳುತ್ತದೆ. ವಿರೋಧ ಪಕ್ಷಕ್ಕೂ ಕೇಳುತ್ತದೆ.

ಆಡಳಿತ ಪಕ್ಷಕ್ಕೆ ಹೆಚ್ಚು ಪ್ರಶ್ನೆ ಕೇಳುತ್ತದೆ. ಏಕೆಂದರೆ ಅದು ಆಡಳಿತಕ್ಕೆ ಬಂದಿರುವುದೇ ಜನರ ಕೆಲಸ ಮಾಡಲು. ಅದು ಹೊಣೆಗಾರ ಪಕ್ಷ; ಎಲ್ಲದಕ್ಕೂ ಉತ್ತರ ಕೊಡಬೇಕಾದ ಪಕ್ಷ. ಜನರ ಕೆಲಸ ಮಾಡುವುದರಲ್ಲಿ ಆದ ಲೋಪವನ್ನು ಮಾಧ್ಯಮವೇ ಕೇಳಬೇಕು. ಮತ್ತೆ ಮತ್ತೆ ಹೀಗೆ ಪ್ರಶ್ನೆ ಕೇಳಿದಾಗ ಅಧಿಕಾರದಲ್ಲಿ ಇದ್ದವರಿಗೆ ‘ಮಾಧ್ಯಮಗಳಿಗೆ ಬೇರೆ ಕೆಲಸ ಇಲ್ಲವೇ? ಬೇರೆ ಸುದ್ದಿ ಇಲ್ಲವೇ’ ಎಂದು ಅನಿಸುತ್ತದೆ. ಮಾಧ್ಯಮಗಳಿಗೆ ಬೇರೆ ಸುದ್ದಿಗಳೂ ಇರುತ್ತವೆ.

ಬರೀ ಒಂದೇ ಸುದ್ದಿಯನ್ನು ನೆಚ್ಚಿಕೊಂಡು ಪತ್ರಿಕೆ ಮಾಡಲು, ಟೀವಿ ಚಾನೆಲ್‌ ನಡೆಸಲು ಆಗುತ್ತದೆಯೇ? ಮುಖ್ಯವಾದ ಒಂದು ಸುದ್ದಿ ಎಂದು ಇರುತ್ತದೆ. ಅದು ಹೆಚ್ಚು ಚರ್ಚೆಯಲ್ಲಿ ಇರುವ ಸುದ್ದಿ. ಅದು ಹೆಚ್ಚು ಜನರು ಓದುವ, ನೋಡುವ ಸುದ್ದಿಯಾಗಿರುತ್ತದೆ. ಅದು ಸರ್ಕಾರದ ವೈಫಲ್ಯ ಕುರಿತುದು ಆಗಿದ್ದರೆ ಆಡಳಿತ ಮಾಡುವವರಿಗೆ ಕಿರಿ ಕಿರಿ ಆಗುತ್ತದೆ. ಅವರಿಗೆ ತಾವು ಎಷ್ಟೆಲ್ಲ ಘನವಾದ ಕೆಲಸ ಮಾಡುತ್ತಿದ್ದೇವೆ, ಆದರೆ ಅದು ಮಾಧ್ಯಮದಲ್ಲಿ ಸರಿಯಾಗಿ ಬಿತ್ತರಗೊಳ್ಳುತ್ತಿಲ್ಲ ಎಂದು ಅನಿಸುತ್ತ ಇರುತ್ತದೆ.

ಮಾಧ್ಯಮ ಸದಾ ನಕಾರಾತ್ಮಕವಾಗಿರುತ್ತದೆ ಎಂದು ಅವರಿಗೆ ಗಾಢವಾಗಿ ಅನಿಸತೊಡಗುತ್ತದೆ. ನಿಜ, ಮಾಧ್ಯಮ ಬಹುತೇಕ ಸಾರಿ ನಕಾರಾತ್ಮಕವಾಗಿಯೇ ಇರುತ್ತದೆ. ಸರ್ಕಾರದ ನಕಾರಾತ್ಮಕ ಕೆಲಸಗಳನ್ನು, ವೈಫಲ್ಯಗಳನ್ನು ಜನರ ಮುಂದೆ ಬಿಂಬಿಸುವುದೂ ಆಡಳಿತ ಮಾಡುವವರಿಗೆ ‘ನಕಾರಾತ್ಮಕ’ ಎಂದು ಅನಿಸಬಹುದು. ಆದರೆ, ಏನು ಮಾಡುವುದು?

ಮಾಧ್ಯಮ ಎಂಬುದು ಒಂದು ಇಲ್ಲದೇ ಇದ್ದರೆ ಏನಾಗಬಹುದಿತ್ತು ಎಂದು ಗಾಬರಿಯಾಗುತ್ತದೆ. ಸರ್ಕಾರ ಆಡಿದ್ದೇ ಆಟವಾಗುತ್ತಿತ್ತು. ಹಲವು ವರ್ಷಗಳ ಹಿಂದೆ ಜುಲೈ 25, ಅಂಥದೇ ಒಂದು ವಿದ್ಯಮಾನಕ್ಕೆ ಸಾಕ್ಷಿಯಾಗಿತ್ತು. ರಾಜಕಾರಣಿಗಳಿಗೆ ಜನರ ಬಗೆಗೆ ಆಳವಾದ ಕಾಳಜಿಯೇ ಇರುವುದಿಲ್ಲವೇನೋ? ಅವರು ಎಲ್ಲವನ್ನೂ ರಾಜಕೀಯ ದೃಷ್ಟಿಯಿಂದಲೇ ನೋಡುತ್ತಾರೋ ಏನೋ? ಒಂದು ಘೋರ ಅತ್ಯಾಚಾರ ಪ್ರಕರಣ ನಡೆದ ಕೂಡಲೇ ಸರ್ಕಾರ ಆಕ್ರಮಣಕಾರಿಯಾಗಿ ಕೆಲಸ ಮಾಡುವ ಬದಲು ರಕ್ಷಣಾತ್ಮಕವಾಗಿ ಕೆಲಸ ಮಾಡಲು ತೊಡಗುತ್ತದೆ. ರೈತರ ಮೇಲೆ ಗೋಲಿಬಾರ್‌ ಆದಾಗಲೂ ಹೀಗೆಯೇ ಆಗುತ್ತದೆ.

ಸರ್ಕಾರವೇ ಆಕ್ರಮಣಕಾರಿಯಾಗಿ, ಸಕ್ರಿಯವಾಗಿ ಕೆಲಸ ಮಾಡಿಬಿಟ್ಟರೆ ವಿರೋಧ ಪಕ್ಷಗಳಿಗೆ ದೂರಲು ಏನೂ ಇರುವುದಿಲ್ಲ. ಮಾಧ್ಯಮಗಳಿಗೂ ಬಹುಶಃ ಕೇಳಲು ಪ್ರಶ್ನೆಗಳು ಇರುವುದಿಲ್ಲ. ಎಲ್ಲರೂ ಬಯಸುವುದು ಆರೋಪಿಗಳ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು. ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ, ಆದರೆ ಒತ್ತಡ ನಿಭಾಯಿಸಲು ಕ್ರಮ ತೆಗೆದುಕೊಳ್ಳುತ್ತದೆ ಎಂದು ಭಾಸವಾಗುತ್ತದೆ.

ಬೆಂಗಳೂರಿನ ಅತ್ಯಾಚಾರ ಪ್ರಕರಣದಲ್ಲಿ ಕರ್ತವ್ಯಲೋಪ ಮಾಡಿದ ಪೊಲೀಸ್‌ ಇನ್ಸ್‌ಪೆಕ್ಟರ್‌ ಅವರನ್ನು ಬಂಧನ ಮಾಡಲೇಬೇಕಿದ್ದರೆ ಮೊದಲೇ ಮಾಡಬೇಕಿತ್ತಲ್ಲ? ಆತ ತಲೆಮರೆಸಿಕೊಂಡ ಎಂದೆಲ್ಲ ಅನಿಸಿದ ಮೇಲೆ ಏಕೆ ಬಂಧಿಸಲಾಯಿತು? ಶಾಲೆಯ ಅಧ್ಯಕ್ಷರನ್ನು ಬಂಧಿಸಲೇಬೇಕು ಎಂದು ಗೊತ್ತಿದ್ದರೆ ಅವರು ದಮನ್‌ ದೀವ್‌ಗೆ ‘ಪರಾರಿ ಆಗುವ’ವರೆಗೆ ಏಕೆ ಕಾಯಬೇಕಿತ್ತು? ಅವರಿಬ್ಬರೂ ಬಂಧನಕ್ಕೆ ಒಳಗಾಗುವಂಥ ತಪ್ಪು ಮಾಡಿದ್ದರೆ ಅವರನ್ನು ತಕ್ಷಣ ಏಕೆ ಬಿಡುಗಡೆ ಮಾಡಬೇಕಿತ್ತು? ಒಂದೆರಡು ದಿನ ಕೊಳೆಸಬಹುದಿತ್ತಲ್ಲ? ಸರ್ಕಾರ ರಾಜಕೀಯ ಮಾಡುತ್ತದೆ ಎಂದು ಅನಿಸುವುದು ಹೀಗೆಲ್ಲ ಆದಾಗ.

ಸರ್ಕಾರ ಸಕ್ರಿಯವಾಗಿ ಕೆಲಸ ಮಾಡುವ ಬದಲು ಕಣ್ಣೊರೆಸುವ ಕೆಲಸ ಮಾಡುತ್ತದೆ ಎಂದು ಅನೇಕ ಸಾರಿ ಅನಿಸುತ್ತದೆ. ಬೆಂಗಳೂರು ಪೊಲೀಸ್‌ ಕಮಿಷನರ್‌ ವರ್ಗ ಕೂಡ ಅಂಥದೇ ಒಂದು ಕ್ರಮವಾಗಿರಬಹುದು. ಗೃಹ ಸಚಿವರ ರಾಜೀನಾಮೆ ಕೇಳಿದರೆ ಪೊಲೀಸ್‌ ಕಮಿಷನರ್‌ ವರ್ಗದ ಮೂಲಕ ಒತ್ತಡದಿಂದ ಪಾರಾಗಲು ಸರ್ಕಾರ ಪ್ರಯತ್ನ ಮಾಡುತ್ತದೆ. ಯಾರಿಗೋ ಬೀಳಬೇಕಾದ ಏಟು ಇನ್ನಾರಿಗೋ ಬೀಳುತ್ತದೆ. ಸರ್ಕಾರ ಹೊಣೆ ಹೊರಲು ಹಿಂಜರಿಯುತ್ತಿದೆ ಎಂದು ಅನಿಸತೊಡಗುತ್ತದೆ ಅಥವಾ ಪ್ರಾಮಾಣಿಕವಾಗಿ ಸಮಸ್ಯೆಯನ್ನು ನಿಭಾಯಿಸುತ್ತಿಲ್ಲ ಎಂದು ಅನಿಸುತ್ತದೆ.

ವಿರೋಧ ಪಕ್ಷವೂ ರಾಜಕೀಯ ಮಾಡುತ್ತದೆ. ಈ ಪ್ರಕರಣದ ಆರೋಪಿಗಳನ್ನು ನೋಡಿದರೆ ಸರ್ಕಾರ ‘ಉತ್ತರ ಕೊಟ್ಟ’ ನಂತರವೂ ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳು ಅಷ್ಟೇಕೆ ರಾದ್ಧಾಂತ, ಪ್ರತಿಭಟನೆ ಮಾಡುತ್ತವೆ ಎಂದು ಗೊತ್ತಾಗುತ್ತದೆ. ಜೆ.ಡಿ (ಎಸ್‌) ಮೌನಕ್ಕೂ ಇದೇ ಕಾರಣ ಇರಬಹುದು. ಹೀಗೆ ಎಲ್ಲ ರಾಜಕೀಯ ಪಕ್ಷಗಳು ಬರೀ ರಾಜಕೀಯ ಮಾಡುತ್ತಿವೆ ಎಂದು ಅನಿಸಿದಾಗ ಮಾಧ್ಯಮ ಮತ್ತೆ ಮತ್ತೆ ಪ್ರಶ್ನೆ ಕೇಳುತ್ತದೆ.

ನಮ್ಮ ರಾಜಕೀಯ ನಾಯಕರ ಸಮಸ್ಯೆ ಏನು ಎಂದರೆ ಅವರು ಕ್ರಿಯಾಶೀಲರಾಗಿರುವ ಬದಲು ಪ್ರತಿಕ್ರಿಯಾಶೂರರು ಆಗಿರುವುದು. ಎದುರಿಗೆ ಬಂದ ಒಂದು ವಿದ್ಯಮಾನಕ್ಕೆ ಅವರು ಪ್ರತಿಕ್ರಿಯಿಸುತ್ತ ಹೋಗುತ್ತಾರೆ. ಕ್ರಿಯೆ ಮಾಡುವುದು ಕಷ್ಟ. ಪ್ರತಿಕ್ರಿಯೆ ಕೊಡುವುದು ಸುಲಭ. ಅವರು ಹೀಗೆ ಕೇವಲ ಪ್ರತಿಕ್ರಿಯಾಶೂರರು ಆಗಿರುವುದಕ್ಕೆ ನಾವು ಮಾಧ್ಯಮದವರೂ ಕಾರಣರಾಗಿರಬಹುದು. ನಮಗೂ ಸಿದ್ಧತೆ ಸಾಲದು.

ಯಾರು ಎದುರಿಗೆ ಕಂಡರೂ ಅವರ ಮುಂದೆ ಮೈಕನ್ನೋ, ಪೆನ್ನನ್ನೋ ಹಿಡಿದು ಏನಾದರೂ ಕೇಳುವ ನಾವು ಕೇವಲ ಪ್ರತಿಕ್ರಿಯೆಗೆ ಮಾತ್ರ ಅರ್ಹರು ಎಂದು ರಾಜಕಾರಣಿಗಳಿಗೆ ತೋರುತ್ತಿರಬಹುದು. ಒಂದು ದಿನ ಒಬ್ಬ ರಾಜಕಾರಣಿ ಹತ್ತು ಕಡೆ ಹೋದರೆ ಹತ್ತು ಕಡೆಯೂ ಅವರಿಗೆ ಒಂದೇ ಪ್ರಶ್ನೆ ಎದುರಾಗುವುದರಿಂದ ಆತನಿಗೆ ಕಿರಿಕಿರಿ ಆಗುತ್ತ ಇರಬಹುದು. ‘ನಿಮಗೆ  ಬೇರೆ ಕೆಲಸ ಇಲ್ಲವೇ’ ಎಂದು ಆತ ಅದಕ್ಕೇ ಕೇಳುತ್ತ ಇರಬಹುದು.

ಆದರೆ, ಸಮಸ್ಯೆ ಇಷ್ಟು ಸುಲಭ ಇರುವಂತೆ ಕಾಣುವುದಿಲ್ಲ. ಆಡಳಿತದಲ್ಲಿ ಇರುವ ಎಲ್ಲರಿಗೂ ಮಾಧ್ಯಮ ಕಿರಿಕಿರಿ, ಕರೆಕರೆ ಎಂದು ಅನಿಸತೊಡಗುತ್ತದೆ. ಇದು ಬರೀ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮಸ್ಯೆಯೇ? ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್‌ ಸಿಂಗ್‌ ಯಾದವ್‌ ಅವರಿಗೂ ಹಾಗೆಯೇ ಅನಿಸಿತು. ‘ನೀವು ಗೂಗಲ್‌ ಮಾಡಿ ನೋಡಿ ಬೆಂಗಳೂರಿನಲ್ಲಿ ಎಷ್ಟು ಅತ್ಯಾಚಾರಗಳು ಆಗಿವೆ ಎಂದು ನಿಮಗೆ ಗೊತ್ತಾಗುತ್ತದೆ, ಅದನ್ನೇಕೆ ಬರೆಯುವುದಿಲ್ಲ’ ಎಂದು ಅವರು ಮಾಧ್ಯಮದವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಆದರೆ, ಬೆಂಗಳೂರಿನಲ್ಲಿ ಅತ್ಯಾಚಾರ ಆಗುವುದು ಬದಾಯೂಂ ಅತ್ಯಾಚಾರಕ್ಕೆ ಉತ್ತರವೇ, ಪರಿಹಾರವೇ ಅಥವಾ ಸಮರ್ಥನೆಯೇ? ಅವರಿಗೆ ಹೇಗೆ ತಿಳಿಸಿಕೊಡುವುದು? ಅತ್ಯಾಚಾರ ಎಲ್ಲಿ ನಡೆದರೂ ಅದು ಅಸಹಾಯಕ ಹೆಣ್ಣು ಮಗಳ ಮೇಲೆಯೇ ನಡೆದಿರುತ್ತದೆ, ಅದು ಖಂಡನಾರ್ಹ ಎಂದೂ ಅವರಿಗೆ ಅನಿಸುವುದಿಲ್ಲ. ಅಂದರೆ,  ಇದು ಮುಖ್ಯವಾಗಿ ಒಂದು ಮಾನವೀಯ ಸಮಸ್ಯೆ ಎಂದು ತೋರುವುದಿಲ್ಲ. ಆಡಳಿತದಲ್ಲಿ ಇರುವವರು ಮರೆಗಳನ್ನು ಹುಡುಕುವುದು ಹೀಗೆ. ಅವರಿಗೆ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಇನ್ನೊಂದು ಕಡೆ ನಡೆದ ಅದೇ ಅಪರಾಧ ನೆಪವಾಗುತ್ತದೆ. ಅಥವಾ ಇದು ಅಧಿಕಾರದ ಉದ್ಧಟತನವೇ? ಅಥವಾ ಉಲಕೋಚಿತನವೇ?

ಅಧಿಕಾರಕ್ಕೆ ಬಂದವರು ಎಲ್ಲವನ್ನೂ ಸಂಭಾಳಿಸಲು ಕಲಿಯುತ್ತಾರೆ. ಅವರು ಮಾಧ್ಯಮವನ್ನೂ ಸಂಭಾಳಿಸಬಹುದು ಎಂದು ಅಂದುಕೊಳ್ಳುತ್ತಾರೆ. ಮಾಧ್ಯಮವನ್ನು ಮತ್ತು ಮಾಧ್ಯಮದವರನ್ನು ಹಂಗಿನಲ್ಲಿ ಸಿಲುಕಿಸಲೂ ಪ್ರಯತ್ನ ಮಾಡುತ್ತಾರೆ. ಅಧಿಕಾರದಲ್ಲಿ ಇದ್ದವರಿಗೆ ಮಾಧ್ಯಮ ತನ್ನ ಹಂಗಿನಲ್ಲಿ ಇದೆ ಎಂಬ ವಿಚಿತ್ರ ಅಹಂಕಾರ ಇರುತ್ತದೆ. ಸರ್ಕಾರದ ಹಂಗಿನಲ್ಲಿ ಸಿಲುಕಲು ಪತಂಗದಂತೆ ಹಾತೊರೆಯುವ ಹಲಕೆಲ ಮಾಧ್ಯಮದವರ ಗುಣವೂ ಆಡಳಿತದಲ್ಲಿ ಇದ್ದವರ ಅಹಂಕಾರಕ್ಕೆ ಪುಟ ಕೊಡುತ್ತಿರಬಹುದು.

ಆದರೆ, ತತ್ವವಾಗಿ ಇದು ಅಪವಾದವೇ ಹೊರತು ನಿಯಮವಲ್ಲ. ‘ವಾಷಿಂಗ್ಟನ್‌ ಪೋಸ್ಟ್‌’ ಪತ್ರಿಕೆಯ ಮಾಜಿ ಪ್ರಧಾನ ಸಂಪಾದಕ ಬೆನ್‌ ಬ್ರಾಡ್ಲಿ ಒಂದು ಮಾತು ಹೇಳಿದ್ದರು: ‘ಮಾಧ್ಯಮ ಮತ್ತು ಸರ್ಕಾರದ ನಡುವಿನ ಸಂಬಂಧ ಸದಾ ಸಂಘರ್ಷದ್ದು ಆಗಿರದೇ ಇರಬಹುದು. ಆದರೆ, ಅದು ಖಂಡಿತ ಇರುಸು ಮುರುಸಿನದ್ದೇ ಆಗಿರುತ್ತದೆ. ಯಾವ ವರದಿಗಾರ್ತಿಯೂ ಸರ್ಕಾರದ ಜತೆಗಿನ ಸಂಬಂಧ ಮಧುರವಾಗಿರುತ್ತದೆ, ಹಾರ್ದಿಕವಾಗಿರುತ್ತದೆ ಎಂದು ಹೇಳಲಾರಳು.

ಒಂದು ವೇಳೆ ಆಕೆ ಹಾಗೆ ಹೇಳಿದರೆ ಆಕೆ ಸುಳ್ಳು ಹೇಳುತ್ತಿದ್ದಾಳೆ ಎಂದೇ ಅರ್ಥ; ಅಥವಾ ಸರ್ಕಾರ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ ಎಂದು ನಾವು ಭಾವಿಸಬಹುದು! ಸರ್ಕಾರ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಬೇಕಿಲ್ಲ. ಅದು ನಮ್ಮ ದಾರಿಗೆ ಅಡ್ಡಬರದೇ ಇದ್ದರೆ ಸಾಕು.’ ಸರ್ಕಾರ ನಮ್ಮ ದಾರಿಗೆ ಅಡ್ಡ ಬರಬಾರದು ಎಂದರೆ ನಮಗೆ ಪ್ರಶ್ನೆ ಕೇಳಲು ಅವಕಾಶ ಇರಬೇಕು. ನಾವು ಸರ್ಕಾರಕ್ಕೆ ನಿತ್ಯ ಅನನುಕೂಲಕಾರಿಯಾದ ಪ್ರಶ್ನೆಯನ್ನೇ ಕೇಳುವವರು.

ಅವರು ಇಂಥ ಪ್ರಶ್ನೆಗಳನ್ನು ತಾಳ್ಮೆಯಿಂದ ಎದುರಿಸಲು ಕಲಿಯಬೇಕು. ಜಾಣ್ಮೆಯಿಂದ ಉತ್ತರ ಕೊಡಲು ರೂಢಿ ಮಾಡಿಕೊಳ್ಳಬೇಕು. ಅನಿರೀಕ್ಷಿತವಾಗಿ ಬರುವ ಪ್ರಶ್ನೆಗಳನ್ನು ಎದುರಿಸಲು ಅವರು ಇನ್ನೂ ಹೆಚ್ಚು ‘ಮನೆಗೆಲಸ’ ಮಾಡಬೇಕು. ಅದಕ್ಕಿಂತ ಶ್ರೇಷ್ಠವಾದ ಕೆಲಸ ಎಂದರೆ ನಮಗೆ ಪ್ರಶ್ನೆ ಕೇಳಲು ಅವಕಾಶವೇ ಇರದಂತೆ ಅವರು ಕೆಲಸ ಮಾಡಬೇಕು! ಅದನ್ನು ಬಿಟ್ಟು ಆಡಳಿತದಲ್ಲಿ ಇದ್ದವರು ಮಾಧ್ಯಮಗಳು ತಮ್ಮ ಪುಂಗಿ ಊದಬೇಕು ಎಂದು ಬಯಸುವುದು ಅವರ ಸ್ವಭಾವಕ್ಕೆ ಸಹಜವಾಗಿಯೇ ಇರಬಹುದು. ಆದರೆ, ಒಂದು ಸಾರಿ ಆಡಳಿತದ ಪುಂಗಿ ಊದಲು ಮಾಧ್ಯಮ ಶುರು ಮಾಡಿದರೆ ಅದು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ.

ಅದರ ಸುತ್ತ ಅನುಮಾನಗಳು ಹುತ್ತಕಟ್ಟುತ್ತವೆ.  ಸರ್ಕಾರಕ್ಕೂ ಅದರಿಂದ ಒಳ್ಳೆಯದು ಆಗುವುದಿಲ್ಲ; ಜನರಿಗೆ ಮೊದಲೇ ಒಳ್ಳೆಯದು ಆಗುವುದಿಲ್ಲ. ಅಂದರೆ, ಹೋಗುವಾಗಲೂ, ಬರುವಾಗಲೂ ಕತ್ತರಿಸುವ ಕರಗಸದಂತೆಯೇ ಮಾಧ್ಯಮ ಕೆಲಸ ಮಾಡಬೇಕು. ಸರ್ಕಾರ ಮತ್ತು ಮಾಧ್ಯಮದ ನಡುವಿನ ‘ಮಧುಚಂದ್ರ’ ಎಂಬುದು ಯಾವಾಗಲೂ ಬಹಳ ಕಡಿಮೆ ಅವಧಿಯದು. ಅದು ಎಲ್ಲ ‘ಮಧುಚಂದ್ರ’ಗಳಿಗೂ ಅನ್ವಯಿಸುವ ಮಾತು! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT