ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯವಾಗುತ್ತಿರುವ ಓದಿನ ಬೆರಗು

Last Updated 22 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಗೆಳೆಯರೊಬ್ಬರಿಗೆ ಗೌರವಪ್ರತಿ ಕೊಡುವಾಗ ‘ದಿಂಬಿಗಾದರೂ ಆದೀತು’ ಎಂದು ಸಹಿ ಮಾಡಿ ಕೊಟ್ಟೆ. ಕೊಂಚ ದಪ್ಪ ಪುಸ್ತಕ ಬೇರೆ. ಅವರು ಓದುವುದಿಲ್ಲ ಎಂದು ನನಗೆ ಗೊತ್ತಿತ್ತು. ಆದರೆ ಮನೆಯಲ್ಲಿ ಅಲಂಕಾರದ ವಸ್ತುವಿನಂತೆ ಪೇರಿಸಿಡುತ್ತಾರೆ. ಚೆಂಬು, ಲೋಟ, ತಟ್ಟೆ, ಬೊಂಬೆ ಕೊಡುವುದಕ್ಕಿಂತ ಇದು ಬೆಟರ್ರು ಎಂಬುದು ನನ್ನ ನಂಬಿಕೆ. ಓದದವರಿಗೆ ಯಾಕೆ ಕೊಡಬೇಕು ? ತನ್ನ ಪುಸ್ತಕವನ್ನು ಯಾರಾದರೂ, ಎಂದಾದರೂ ಓದುತ್ತಾರೆ ಎಂಬ ಭ್ರಮೆ ಲೇಖಕರುಗಳಿಗೆ ಇದ್ದರೆ ಚೆನ್ನ. ಆದ್ದರಿಂದಲೇ ಅವನು ಗೌರವಪೂರ್ವಕವಾಗಿ ಪುಸ್ತಕ ಹಂಚುತ್ತಾನೆ.

ಪಡೆದವನು ಅಷ್ಟೇ ‘ಗೌರವಪೂರ್ವಕವಾಗಿ’ ಅದನ್ನು ಹಳೆ ಪೇಪರ್‌ಗೆ ಹಾಕಿ ಹಗುರಾಗುತ್ತಾನೆ. ಪುಸ್ತಕ ಯಾರ ಕೈಯಿಂದ ಇನ್ನಾರದೋ ಕೈಗೆ ಚಲಿಸಿ ಮಂತ್ರ ಮಾಡುತ್ತದೆ. ನೋಡಿದ ಮುಖಪುಟ, ಬೆನ್ನುಪುಟದ ಒಂದು ಸಾಲು, ಒಳಪುಟದ ಹೊಗಳಿಕೆ, ಒಂದೇ ಒಂದು ಅರ್ಥಪೂರ್ಣ ಸಾಲು ಸೆಳೆದು ಓದಲು ಆಮಿಷ ಒಡ್ಡುತ್ತದೆ. ಮೊನ್ನೆ ನುಡಿಸಿರಿಯ ಪುಸ್ತಕ ಅಂಗಡಿಯಲ್ಲಿ ಓದುಗರ ಬೆರಳು ಮತ್ತು ಕಣ್ಣು ಏನನ್ನು ತಿರುವಿ ಹಾಕುತ್ತವೆ ಎಂದು ಗಮನಿಸುತ್ತಾ ಕೂತಿದ್ದೆ. ಓದುಗರು ಕಡಿಮೆಯಾಗುತ್ತಿದ್ದಾರೆ ಎನ್ನುತ್ತದೆ ಒಂದು ಅಂಕಿ ಅಂಶ.

ಬೆಂಗಳೂರಲ್ಲು, ರಾಜ್ಯದಲ್ಲೂ ಬೆರಳೆಣಿಕೆಯ ಪುಸ್ತಕ ಮಳಿಗೆಗಳಿವೆ. ನಾಡಿನಾದ್ಯಂತ ಇದ್ದ ನಮ್ಮ ಹತ್ತು ಪುಸ್ತಕ ಪ್ರದರ್ಶನಗಳನ್ನು ಮುಚ್ಚಿ ಎರಡಕ್ಕೆ ಸೀಮಿತಗೊಳಿಸಿಕೊಂಡಿದ್ದೇವೆ ಎನ್ನುತ್ತಾರೆ ನವಕರ್ನಾಟಕದ ಉಡುಪರು. ಇರುವ ಜನಕೋಟಿಗೆ ಕನ್ನಡ ಪುಸ್ತಕಗಳ ಖರೀದಿ ಏನೇನೂ ಸಾಲದು ಅನ್ನುತ್ತಾರೆ ಸಪ್ನದ ದೊಡ್ಡೇಗೌಡರು. ಅಂಕಿತದ ಪ್ರಕಾಶ್ ಕಂಬತ್ತಳ್ಳಿ ಹೇಳುವಂತೆ ಕನ್ನಡ ಪುಸ್ತಕ ಕೊಳ್ಳಲು ತರುಣರೇ ಬರುತ್ತಿಲ್ಲ. ಕಾವೆಂಪು ಇಂಗ್ಲಿಷ್‌ನಲ್ಲಿ ಸಿಗುತ್ತಾ ಎನ್ನುತ್ತಾರೆ.

ಕುವೆಂಪು ಅನ್ನೋದಕ್ಕೂ ಬರೋದಿಲ್ಲ. ಉಪನಯನದ ಪುಸ್ತಕ ಕೇಳೋದಿಕ್ಕೆ ಥ್ರೆಡ್ಡಿಂಗ್ ಸೆರೆಮನಿ-ಇಂಗ್ಲಿಷ್‌ನಲ್ಲಿದ್ರೆ ಕೊಡಿ ಅನ್ನುತ್ತಾರೆ. ಅವರಿಗೆ ಕನ್ನಡ ಬರೋದಿಲ್ಲ. ಧರ್ಮ, ಸಂಪ್ರದಾಯಗಳೂ ಕನ್ನಡ ಕಾಪಾಡಲು ಸೋತಿವೆ. ಲಲಿತ ಸಹಸ್ರ ನಾಮದ ಪುಸ್ತಕಗಳೂ ಇಂಗ್ಲಿಷ್‌ನಲ್ಲಿದ್ದರೆ ಮಾತ್ರ ಖರ್ಚಾಗುತ್ತವಂತೆ. ಇನ್ನು ಮುಂದೆ ದೇಶವನ್ನು ಮತ್ತು ಕನ್ನಡವನ್ನು ದಲಿತರು ಮಾತ್ರ ಕಾಪಾಡಿಕೊಳ್ಳಬೇಕಾಗುತ್ತದೇನೋ. ನಾನು ಅಂಗಡಿಯಲ್ಲಿ ಗಮನಿಸಿದ್ದು : ಓದುಗರು ೪೦+ ವಯಸ್ಸಿನವರೇ. ಈಗಿನ ಓದುಗರೆಲ್ಲ ನಡುವಯಸ್ಸಿನವರು. ಆದ್ದರಿಂದ ಈಗಿನ ಕನ್ನಡವನ್ನು ನಡುಗನ್ನಡ ಎನ್ನಬಹುದು.

ವರ್ಷಕ್ಕೆ ಅಂದಾಜು ಏಳು ಸಾವಿರ ಕನ್ನಡ ಪುಸ್ತಕಗಳು ಅಚ್ಚಾಗುತ್ತಿವೆ. ಆರು ಕೋಟಿ ಕನ್ನಡಿಗರಿಗೆ ಇಷ್ಟೇನಾ ಎಂದು ಮುಖ ಇಳಿಬಿಡಬೇಕಿಲ್ಲ. ಇವುಗಳಲ್ಲಿ ಪುಣ್ಯವಶಾತ್ ಅರ್ಧದಷ್ಟು ಮಾತ್ರ ಮಾರುಕಟ್ಟೆಗೆ ಬರುತ್ತವೆ. ಅವುಗಳಲ್ಲಿ ಕಾಲು ಭಾಗದಷ್ಟು ಮಾತ್ರ, ಪುಟ ತಿರುಗಿಸಲು ಯೋಗ್ಯ. ಅವುಗಳಲ್ಲೂ ಶೇಕಡಾ ಹತ್ತು ಭಾಗ ಹೆಕ್ಕಿದರೆ ಮಾತ್ರ ಓದಬಲ್ಲವು ಮತ್ತು ಸಂಗ್ರಹಿಸಿಡಬಲ್ಲವು ಸಿಕ್ಕಾವು. ಕೆಟ್ಟ ಪುಸ್ತಕಗಳು ಕೆಟ್ಟ ಓದುಗನನ್ನು ರೂಪಿಸುತ್ತವೆ. ಕಡಿಮೆ ಸಂಖ್ಯೆಯ ಆದರೆ ಉತ್ತಮ ದರ್ಜೆಯ ಪುಸ್ತಕಗಳು ನಮಗೆ ಬೇಕು.

ಅಚ್ಚಾದ ಪುಸ್ತಕಗಳನ್ನೆಲ್ಲ ಓದಲೇಬೇಕು ಎನ್ನುವುದು, ಸೆನ್ಸಾರಾದ ಮತ್ತು ಸಾಮಾಜಿಕ ಪರಿಣಾಮ ಬೀರುವ ಚಿತ್ರವೆಂದು ಅವಾರ್ಡು ಹೊಡೆದ ಎಲ್ಲಾ ಸಿನಿಮಾಗಳನ್ನೂ ನೋಡಲೇಬೇಕು ಎಂದಷ್ಟೇ ಅವೈಜ್ಞಾನಿಕ ಅಪೇಕ್ಷೆ. ಅನೇಕರು ಸಗಟು ಖರೀದಿಗಾಗಿ, ಬೇರೆ ಬೇರೆ ಸ್ಕೀಂಗಳಿಗಾಗಿ ಬರೆಯುತ್ತಾರೆ. ಹಲವಾರು ಸಂಪಾದಿತ ಕೃತಿಗಳು ಸಂಪಾದನೆಗಾಗಿಯೇ ಇವೆ. ಮುಖಪುಟ, ಸಂಪಾದಕರ ಹೆಸರು ಬದಲಿಸಿದರೆ ಅದು ಹೊಸ ಪುಸ್ತಕವಾಗುತ್ತದೆ. ಇವನ್ನು ಓದದಿದ್ದರೆ ಓದುಗನಿಗೂ ಕನ್ನಡಾಂಬೆಗೂ ಸುತರಾಂ ನಷ್ಟವಿಲ್ಲ.

ಪ್ರತಿ ನಗರಗಳಲ್ಲಿ ಜನಸಂಖ್ಯೆ, ಬಡಾವಣೆಗಳು ಬೆಳೆದು ರಸ್ತೆ, ನೀರು, ವಿದ್ಯುತ್, ಪಾರ್ಕು, ತರಕಾರಿ- ದಿನಸಿ ಮಳಿಗೆ, ಆಸ್ಪತ್ರೆ, ಕಬ್ಬಿಣ ಮತ್ತು ಬಣ್ಣದ ಅಂಗಡಿ, ಬಾರು, ಪಾರ್ಲರ್ರು, ಪೊಲೀಸ್ ಠಾಣೆಗಳು ಬಂದಂತೆ ಪುಸ್ತಕದ ಮಳಿಗೆಗಳು ಏಕೆ ಹುಟ್ಟಿಕೊಳ್ಳುವುದಿಲ್ಲ ? ಜನಸಂಖ್ಯೆಯ ಏರಿಕೆಯ ಅನುಪಾತಕ್ಕೆ ಅನುಗುಣವಾಗಿ ಓದುಗರು ಏಕೆ ಹೆಚ್ಚುತ್ತಿಲ್ಲ? ಕಾರಣ ಸರಳ- ಓದುವವರಿಲ್ಲ. ಓದೆಂಬ ಬೆರಗು ಮಾಯವಾಗಿದೆ. ಧಾರವಾಡದ ಮನೋಹರ ಗ್ರಂಥಮಾಲಾ, ಕನ್ನಡ ಓದುಗರ ಒಲವುಗಳು ಎಂಬ ಚರ್ಚೆಯನ್ನು ಜನವರಿಯಲ್ಲಿ ನಡೆಯುವ ಸಾಹಿತ್ಯ ಸಂಭ್ರಮದಲ್ಲಿ ಇರಿಸಿಕೊಂಡಿದ್ದಾರೆ.

ಓದುಗರೇ ಇಲ್ಲವಾದ ಮೇಲೆ ಒಲವಿನ ಮಾತೆಲ್ಲಿ? ಓದುತ್ತಾರೋ, ಬಿಡುತ್ತಾರೋ ಜನರು ಕೊಂಚ ಉದಾರಿಗಳಾಗಿ ಪುಸ್ತಕ ಕೊಳ್ಳುವುದು ಸಾಹಿತ್ಯ ಸಮ್ಮೇಳನಗಳಲ್ಲಿ ಮಾತ್ರ. ಇಂಥ ಸಮ್ಮೇಳನಗಳಲ್ಲಿ ಮೂರೇ ದಿನದಲ್ಲಿ ಹತ್ತು ಲಕ್ಷ ರೂಗಳವರೆಗೆ ಸಪ್ನ ಮಳಿಗೆ ವ್ಯಾಪಾರ ಮಾಡಿದರೆ, ನವಕರ್ನಾಟಕ ಎಂಟು ಲಕ್ಷ ಎಟುಕಿಸುತ್ತದೆ. ಅಂಕಿತ ಪ್ರಕಾಶನವೂ ಮೂರು ಲಕ್ಷ ಮುಟ್ಟುತ್ತದೆ. ಸಾಹಿತ್ಯ ಸಮ್ಮೇಳನಗಳಲ್ಲಿ ಅಶಿಸ್ತು, ಗೊಂದಲ ಏನಾದರೂ ಇದ್ದುಕೊಳ್ಳಲಿ ; ಪುಸ್ತಕಗಳು ಸಮ್ಮೇಳನಗಳಲ್ಲಿ ಮಾತ್ರ ಗಣನೀಯವಾಗಿ ಖರ್ಚಾಗುತ್ತವೆ.

ಎಲ್ಲ ಪ್ರಕಾಶಕರೂ ಒಗ್ಗೂಡಿ ಆಗಾಗ ಮೇಳ ಮಾಡಿದರೆ ಪುಸ್ತಕಗಳು ಖರ್ಚಾಗುತ್ತವೆ. ಒಂದು ಉದ್ಯಮವನ್ನಾಗಿ ನೋಡಿದಾಗ ಕನ್ನಡ ಓದುವ ಸಂತತಿ ಸಾವಕಾಶವಾಗಿ ಕಣ್ಮರೆಯಾಗುತ್ತಿದೆ ಎಂಬುದು ನಿಚ್ಚಳ. ನಮ್ಮ ಅಕ್ಕಂದಿರು ಎಂದು ವಾಣಿ, ತ್ರಿವೇಣಿ, ಎಂ.ಕೆ ಇಂದಿರಾ, ಸಾಯಿಸುತೆಯರನ್ನು ಕೆಳಗಿಟ್ಟು ಟಿ.ವಿಯ ರಿಮೋಟ್ ಕಂಟ್ರೋಲ್ ಕೈಗೆತ್ತಿಕೊಂಡರೋ ಅಂದಿನಿಂದ ಓದು, ಸಾವಕಾಶವಾಗಿ ಅಡುಗೆ ಮನೆಯಿಂದ, ಬೀದಿಯಿಂದ, ಶಾಲೆಯಿಂದ ಕಣ್ಮರೆಯಾಗತೊಡಗಿತು.

ಶ್ರೀಮಂತ ಇಂಗ್ಲಿಷ್ ಶಾಲೆಗಳ ಮಾಲೀಕರು, ಪೋಷಕರು, ಘನ ಸರ್ಕಾರ, ಕುರುಡು ನ್ಯಾಯದೇವತೆ ಎಲ್ಲರೂ ಜತೆಯಾಗಿ ಕನ್ನಡ ಓದನ್ನು ಕೊಂದರು. ಓದಿಗೆ ಏಕಾಗ್ರತೆ ಮತ್ತು ಸಾವಧಾನ ಬೇಕು. ಮನೆಗೆಲಸ ಮಾಡುತ್ತ ನೋಡಲು ಟಿವಿ ಧಾರಾವಾಹಿಗಳು ಸಾಕು. ನಿರಾಕಾರ ಸಾಕು. ಸಾಕಾರ ಬೇಕು. ಬ್ರೇಕ್‌ನ ನಡುವೆ ಆರೇ ನಿಮಿಷದಲ್ಲಿ ಎಲ್ಲ ತಣಿಯಬೇಕು. ತಲೆ ಕೆಡಿಸಿಕೊಳ್ಳಲು ರೆಡಿ ಇಲ್ಲ. ಬದಲಾಗಿ ಕೆಡಿಸುವವರ ಕೈಗೆ ತಲೆ ಒಪ್ಪಿಸಿ ಅಡುಗೆಗೆ ಒಗ್ಗರಣೆ ಹಾಕುತ್ತಿರಬೇಕು. ಓದು ಶ್ರಮದಾಯಕ ಮತ್ತು ನಿಧಾನ. ನೋಡು ಆಯಾಸರಹಿತ ಮತ್ತು ವೇಗ. ಈಗ ಅವುಗಳ ಜತೆಗೆ ಮೊಬೈಲೂ ಸೇರಿಕೊಂಡಿತು.

ಅಲ್ಲಿ ಫೇಸ್‌ಬುಕ್ಕು, ಬ್ಲಾಗು, ಟ್ವಿಟರ್, ವಾಟ್ಸಪ್‌ಗಳು ಜನ್ಮತಳೆದ ಮೇಲೆ ಪುಸ್ತಕಗಳು ಮೂಲೆ ಸೇರಿದವು. ಈ ಸಾಮಾಜಿಕ ಜಾಲ ತಾಣಗಳಲ್ಲಿ ಕೂಡಾ ಓದು-ಬರಹಗಳಿವೆ. ಆದರೆ ಅವು ಆಳ, ವಿಸ್ತಾರವಿಲ್ಲದ ಸಚಿತ್ರ ಸಂಕ್ಷಿಪ್ತ ರೋಮಾಂಚನಕಾರಿಗಳು. ಎರವಲು ಪಡೆದ ಜೋಕುಗಳು, ಉಪದೇಶಾಮೃತಗಳು. ಅವುಗಳ ಗುರಿ ಓದಿದ ಕೂಡಲೇ ಕೆರಳಿಸಬೇಕು ಇಲ್ಲವೇ ತುಟಿಯ ಮೇಲೊಂದು ನಗು ಅರಳಿಸಬೇಕು. ಅಲ್ಲಿ ಗಂಭೀರ ಸಾಹಿತ್ಯದ ಓದಿಗೆ ಅವಕಾಶವಿಲ್ಲ.

ಬ್ಲಾಗ್‌ಗಳಲ್ಲಿ ಕೆಲವೇ ಕೆಲವು ಉಪಯುಕ್ತ ಬರಹಗಳನ್ನು ಹೊರತುಪಡಿಸಿದರೆ ಈ ತಾಣಗಳಿಂದ ಉತ್ತಮ ಲೇಖಕನೂ- ಉತ್ತಮ ಓದುಗನೂ ಸೃಷ್ಟಿಯಾದಂತಿಲ್ಲ. ನಮ್ಮ ಮನೆಯಲ್ಲಿ ನಾಯಿಯನ್ನು ಸಾಕಬೇಕೇ ಬೇಡವೇ ಎಂದು ಎರಡು ಲಕ್ಷ ಜನ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯನ್ನು ಮಾಡುತ್ತಾ ಕೂರುತ್ತಾರೆ. ವಿಸ್ತರಿಸಲು ಸೋಮಾರಿತನ. ಸನ್ನೆಗಳನ್ನು ಬಳಸಿ ಮಹಾಕಾವ್ಯ ಸೃಷ್ಟಿಸುವ ‘ಸಂಕೇತಿಗಳು’ ಇಲ್ಲುಂಟು. ಯಾಕಾಗಬಾರದು ?

ಏಕಾಂತದ ಸಂತೋಷ ನೀಗಿಸಿಕೊಂಡು ನಾವು ಸಾರ್ವಜನಿಕವಾಗತೊಡಗಿದೆವಲ್ಲ? ಚುಂಬನವೂ ಈಗ ‘ಕಿಸ್ ಲವ್’ ಆಗಿ ಬೀದಿಗಿಳಿಯಿತಲ್ಲ ? ನಮ್ಮ ಖಾಸಗಿತನ ಕಳೆದು ಹೋಗಿ ಅದರೊಂದಿಗೆ ಓದು ಕೊಡುವ ಆನಂದವೂ ಕಳೆದುಹೋಯಿತು ಎನ್ನುತ್ತಾರೆ ಮಾಲತಿ ಪಟ್ಟಣಶೆಟ್ಟಿ. ಮಕ್ಕಳಿಗೆ ಶಾಲೆಯಲ್ಲಿ ಈಗ ತುರ್ತಾಗಿ ಪುಸ್ತಕ ಓದುವುದನ್ನು ಕಲಿಸಬೇಕು ಎನ್ನುತ್ತಾರೆ ಆಕೆ. ಬಂಜಗೆರೆ ಜಯಪ್ರಕಾಶ್, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪುಸ್ತಕ ಪ್ರೀತಿಯನ್ನು ಹೆಚ್ಚಿಸುವ ಸಲುವಾಗಿ ಪುಸ್ತಕ ಪ್ರಾಧಿಕಾರದಿಂದ ‘ನನ್ನ ಮೆಚ್ಚಿನ ಕೃತಿ’ ಶೀರ್ಷಿಕೆಯಡಿಯಲ್ಲಿ ಅಭಿಪ್ರಾಯ ಮಂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಮುಖ್ಯಮಂತ್ರಿ ಚಂದ್ರು ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಪ್ರಕಟಿಸಿದ ಅನೇಕ ಕೃತಿಗಳು ಕಾದಿರಿಸಬೇಕಾದವುಗಳು. ಸಾಹಿತ್ಯ ಪರಿಷತ್ತು ಒಂದೂವರೆ ತಿಂಗಳಿನಲ್ಲಿ ‘ಶ್ರೀ ರಾಮಾಯಣ ದರ್ಶನಂ’ ಕೃತಿಯ ನಾಲ್ಕು ನೂರು ಪ್ರತಿಗಳನ್ನು ಮಾರಾಟ ಮಾಡಿದೆ. ಸಗಟಾಗಿ ಮಾರಿದ್ದರೆ ಸಾವಿರ ಪ್ರತಿಗಳೂ ಖರ್ಚಾಗುತ್ತಿದ್ದವು. ಆದರೆ ಎಲ್ಲರಿಗೂ ಸಿಗಲಿ ಎಂದು ಬಿಡಿ ಪ್ರತಿಗಳನ್ನು ಮಾರಲು ತೀರ್ಮಾನಿಸಿದೆವು ಎನ್ನುತ್ತಾರೆ ಪುಂಡಲೀಕ ಹಾಲಂಬಿ. ಕನ್ನಡದ ಓದುಗನಿನ್ನೂ ಜೀವಂತ ಇದ್ದಾನೆ.

ಆದರೆ ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಕನ್ನಡಕ್ಕೆ ಓದುಗರೇ ಇಲ್ಲವಾಗಬಹುದು. ಮಾತೃಭಾಷೆಯನ್ನು ರಾಜ್ಯಭಾಷೆಯನ್ನಾಗಿ ಪರಿಗಣಿಸಿ ಒಂದರಿಂದ ಐದರವರೆಗೆ ಕಡ್ಡಾಯವಾಗಿ ಕಲಿಸಿದರೆ ಮಾತ್ರ ಉಳಿಗಾಲ- ಎಂಬುದು ಹಾಲಂಬಿಯವರ ಆತಂಕ. ತಮಗಿರುವ ಕಾಲ ಮತ್ತು ಬಜೆಟ್ ಮಿತಿಗಳಲ್ಲಿ ಅಕಾಡೆಮಿ, ಪುಸ್ತಕ ಪ್ರಾಧಿಕಾರ, ಸಾಹಿತ್ಯ ಪರಿಷತ್ತು, ಅಭಿವೃದ್ಧಿ ಪ್ರಾಧಿಕಾರಗಳು ತಮ್ಮ ಶಕ್ತ್ಯಾನುಸಾರ ಓದುವ ಹವ್ಯಾಸವನ್ನು ಹೆಚ್ಚಿಸುವ ಕೆಲಸ ಮಾಡುತ್ತ ಬಂದಿವೆ.

ಆದರೆ ಗ್ರಂಥಾಲಯ ಇಲಾಖೆ ಪುಸ್ತಕ ಖರೀದಿಸಿ ನಾಲ್ಕು ವರ್ಷಗಳಾಯಿತು. ಓದುಗನ ಹಣಕ್ಕಿಂತ ಜಾಹೀರಾತಿನಿಂದ ಅನೇಕ ಪತ್ರಿಕೆಗಳು ಬದುಕಿ ಉಳಿದಿವೆ. ಜಾಹೀರಾತುಗಳ ಸ್ವರೂಪ, ಪದಸಂಯೋಜನೆ, ಅದು ಪತ್ರಿಕೆಯ ಪ್ರಧಾನ ಪುಟದಲ್ಲೆ ಅವತರಿಸುವ ಅಚ್ಚರಿ, ಸಾಹಿತ್ಯದ ಇನ್ನೊಂದು ರೂಪ ಎಂಬಂತೆ ರಾರಾಜಿಸುತ್ತಿದೆ. ಮುಂದಿನ ಸಮ್ಮೇಳನಗಳಲ್ಲಿ ‘ಜಾಹೀರಾತನ್ನು ಓದುವ ಬಗೆ’ ಎಂದೇಕೆ ಗೋಷ್ಠಿ ನಡೆಸಬಾರದು?

ಮಕ್ಕಳಿರಲಿ, ಉಪನ್ಯಾಸಕರಲ್ಲಿ ಬಹುತೇಕ ಮಂದಿ ಓದಿಗೆ ತಿಲಾಂಜಲಿ ನೀಡಿದ್ದಾರೆ. ಲಕ್ಷಾಂತರ ರೂಪಾಯಿ ಸಂಬಳ ಪಡೆವ ಕೆಲವು ಮೇಷ್ಟ್ರುಗಳು ತರುಣರಲ್ಲಿ ವಾಚನಾಭಿರುಚಿಯನ್ನು ಹೆಚ್ಚಿಸುವ ಕಾಯಕ ಮಾಡದೆ ಚಿಟ್‌ಫಂಡ್, ಬಾಡಿನ ಚೀಟಿ, ರಿಯಲ್ ಎಸ್ಟೇಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಳೆಗನ್ನಡವಿರಲಿ, ‘ಕರ್ವಾಲೋ’ ಅಂಥ ಕೃತಿಗಳು ಪಠ್ಯವಾದಾಗಲೂ ಅದಕ್ಕೆ ಪೂರಕವಾದ ಪರಿಸರ, ವಿಕಾಸವಾದ, ವಿಜ್ಞಾನವನ್ನು ಓದಿಕೊಳ್ಳುವುದಿಲ್ಲ. ಈಗ ಓದನ್ನು ಅಧ್ಯಾಪಕರಿಗೇ ಕಲಿಸಬೇಕಾಗಿದೆ.

ಮೊನ್ನೆ ಊರಿಗೆ ಹೋಗಿದ್ದೆ. ನಾನು ಓದಿದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಮಕ್ಕಳಿಗೆ ವಿಶೇಷ ತರಗತಿ ತೆಗೆದುಕೊಂಡೆ. ಈ ಸಲ ಭೂಗೋಳದ ಪಾಠ. ಮಕ್ಕಳು ಎಷ್ಟು ಚೆನ್ನಾಗಿ ಕನ್ನಡವನ್ನು ಓದಿದರು, ಬರೆದರು, ಮಾತನಾಡಿದರು! ತುಂಬಾ ಸಂತೋಷವಾಯಿತು.

ಆದರೆ ವರ್ಷದಿಂದ ವರ್ಷಕ್ಕೆ ಸಂಖ್ಯೆ ಇಳಿಮುಖವಾಗುತ್ತಿದೆ. ರಂಗಮಂದಿರ, ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ಸಂಸ್ಕೃತಿ ಭವನ, ಆಕರ್ಷಕ ಶಾಲಾಕಟ್ಟಡ ಒದಗಿಸಿಕೊಟ್ಟರೂ ಹೆತ್ತವರು ಮಕ್ಕಳನ್ನು ಈ ಸುಸಜ್ಜಿತ ಸರ್ಕಾರಿ ಕನ್ನಡ ಶಾಲೆಗೆ ಕಳುಹಿಸುತ್ತಿಲ್ಲ. ಕೂಲಿಕಾರರೂ ದೂರದ ಕಾನ್ವೆಂಟ್‌ಗೆ ಕಳುಹಿಸುತ್ತಿದ್ದಾರೆ.

ಶಾಲೆಯಲ್ಲಿ ಇಂಗ್ಲಿಷ್ ಕಲಿಯುವ ಮಕ್ಕಳಿಗೆ ಮನೆಯಲ್ಲಾದರೂ ವಿಶೇಷವಾಗಿ ಕನ್ನಡ ಕಲಿಸುವ ಆಸಕ್ತಿ, ಅವಕಾಶವೇ ಇಲ್ಲ. ಈಗ ಕನ್ನಡ ಶಾಲೆಗಳು ಬರಿದಾಗುತ್ತಾ, ಮುಚ್ಚುತ್ತಾ ಹೋದರೆ ಮುಂದೆ ನಮ್ಮ ಸಿರಿಗನ್ನಡದ ಗತಿ ಏನು ? ಕನ್ನಡ ಶಾಲೆಗಳಲ್ಲಿ ಕಲಿತು ಬಂದ ನಮ್ಮಂಥವರು ಈ ಕಠೋರ ವಾಸ್ತವವನ್ನು ಒಪ್ಪಿಕೊಂಡು ಸುಮ್ಮನಿರಬೇಕೊ? ಬದಲಾವಣೆಯ ದಾರಿಗಳು ಯಾವುವು ? ಪರಿಸ್ಥಿತಿ ಹೀಗೇ ಮುಂದುವರಿದರೆ ಕನ್ನಡ ಓದುಗ ಶಾಶ್ವತವಾಗಿ ಕಣ್ಮರೆಯಾಗುತ್ತಾನೆ. ಎಲ್ಲ ಸೇರಿ ಹೊಸ ತಲೆಮಾರಿನ ಓದುಗರನ್ನು ಸೃಷ್ಟಿಸುವುದು ಈಗಿನ ತುರ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT