ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದೇನು ಎಂಬ ಪ್ರಶ್ನೆಗೆ ಉತ್ತರ ಕೊಡಲು ಇಂದೇ ಸಿದ್ಧವಾಗಬೇಕು!

Last Updated 19 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮುಂದೆ ಏನು? ಜನತಾದಳ (ಎಸ್‌) ವರಿಷ್ಠ ದೇವೇಗೌಡರ ಮುಂದೆ ಈ ಪ್ರಶ್ನೆ ಇದೆಯೋ ಇಲ್ಲವೋ ಗೊತ್ತಿಲ್ಲ. ಕುಮಾರಸ್ವಾಮಿ, ರೇವಣ್ಣ ಅವರಿಗೆ ಈ ಪ್ರಶ್ನೆ ಕಾಡುತ್ತಿದೆಯೋ ಇಲ್ಲವೋ ಅದೂ ಗೊತ್ತಿಲ್ಲ. ಆದರೆ, ದೇವೇಗೌಡರ ಕುಟುಂಬಕ್ಕೆ ಸೇರದ ಎರಡನೇ ಹಂತದ ನಾಯಕರು ಮತ್ತು ಕಾರ್ಯಕರ್ತರನ್ನು ಈ ಪ್ರಶ್ನೆ ತೀವ್ರವಾಗಿ ಕಾಡುತ್ತಿದೆ.

ಒಂದು ಕಡೆ ಪಕ್ಷದ ಹಿಡಿತ ಮೂರನೇ ಹಂತದ ನಾಯಕತ್ವದ ಕೈಗೆ ಹೋಗಬಹುದು ಎಂಬ ಆತಂಕ.  ಇನ್ನೊಂದು ಕಡೆ ಪಕ್ಷದಿಂದ ವಲಸೆ ಹೋಗುತ್ತಿರುವ ನಾಯಕರ ಸಂಖ್ಯೆ ಹೆಚ್ಚುತ್ತಿರುವ ಕಳವಳ. ಮಗದೊಂದು ಕಡೆ ತಮ್ಮ ಪಕ್ಷ ಏಕೆ ರಾಜಕೀಯ ಮಾಡುತ್ತಿದೆ ಎಂಬುದೇ ತಿಳಿಯದ ಗೊಂದಲ... ಪಕ್ಷದ ಕಾರ್ಯಾಧ್ಯಕ್ಷ ಹುದ್ದೆಯಿಂದ ಹೊರಗೆ ಹಾಕಿಸಿಕೊಂಡ ಪಿ.ಜಿ.ಆರ್‌. ಸಿಂಧ್ಯ ಎರಡೂ ಕಾಲು ಹೊರಗೆ ಇಟ್ಟಂತೆ ಕಾಣುತ್ತದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿಧಾನಸಭೆಯ ಮಾಜಿ ಅಧ್ಯಕ್ಷ ಕೃಷ್ಣ, ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಅವರಂಥ ಅನೇಕ ನಾಯಕರು ಪಕ್ಷವನ್ನು ತೊರೆದರು. ಈ ಸಾರಿ ಇಬ್ಬರು ಅಭ್ಯರ್ಥಿಗಳು ಚುನಾವಣೆ ಕಣದಿಂದಲೇ ಹಿಂದೆ ಸರಿದರು. ನನಗೆ ನೆನಪು ಇರುವ ಹಾಗೆ ಈಚಿನ ವರ್ಷಗಳಲ್ಲಿ ಇಂಥ ಘಟನೆ ನಡೆದಿರಲಿಲ್ಲ.

ಒಂದು ರಾಜಕೀಯ ಪಕ್ಷದ ಜೀವನದಲ್ಲಿ ಏಳುಬೀಳು ಇದ್ದೇ ಇರುತ್ತವೆ. ಸೋಲು ಗೆಲುವುಗಳೂ ಇರುತ್ತವೆ. ದೇವೇಗೌಡರಷ್ಟು ರಾಜಕೀಯ ಏಳುಬೀಳು ಕಂಡ ನಾಯಕರು ಕರ್ನಾಟಕದಲ್ಲಿ ಕಡಿಮೆ. ಅದು ಜನರ ತೀರ್ಮಾನಕ್ಕೆ ಬಿಟ್ಟ ಸಂಗತಿ. ಆದರೆ, ಪಕ್ಷದ ಒಳಗಿನ ಏಳು ಬೀಳುಗಳಿಗೆ ಯಾರು ಕಾರಣ? ದೇವೇಗೌಡರು ಈಗಲೂ ಪಕ್ಷದ ಅಗ್ರಮಾನ್ಯ ನಾಯಕರು. ಅವರನ್ನು ಬಿಟ್ಟರೆ ಕುಮಾರಸ್ವಾಮಿ ಮತ್ತು ರೇವಣ್ಣ ಅವರದೇ ಮಾತು ನಡೆಯುತ್ತದೆ. ಎಲ್ಲ ಜಾತಿಗಳ, ಸಮಾಜಗಳ ನಾಯಕರು ಪಕ್ಷದಲ್ಲಿ ಇದ್ದಾರೆ. ಆದರೆ, ಅವರ ಮಾತು ನಡೆಯುತ್ತದೆಯೇ? ಇಲ್ಲ, ಅವರಿಗೆಲ್ಲ ತಾವು ಅಲಂಕಾರಕ್ಕೆ ಮಾತ್ರ ಇದ್ದೇವೆ ಎಂಬ ಭಾವನೆ ಇದೆ. ಎಲ್ಲ ತೀರ್ಮಾನಗಳನ್ನು ದೇವೇಗೌಡರು ತೆಗೆದುಕೊಳ್ಳುತ್ತಾರೆ. ಹೆಚ್ಚೆಂದರೆ ಇಬ್ಬರೂ ಮಕ್ಕಳು ಜತೆಗೆ ಇರುತ್ತಾರೆ ಎಂಬ ಭಾವನೆಯೂ ‘ಆಲಂಕಾರಿಕ’ ನಾಯಕರ ಮನಸ್ಸಿನಲ್ಲಿ ಇದೆ.

ದೇವೇಗೌಡರು ಹಿರಿಯರು, ಕುಮಾರ ಸ್ವಾಮಿ ಮತ್ತು ರೇವಣ್ಣ ವಾರಿಗೆಯವರು ಎಂದು ಎರಡನೇ ಹಂತದ ನಾಯಕರು ಹೇಗೋ ಸಹಿಸಿಕೊಂಡು ಸುಮ್ಮನಿದ್ದರು. ಅಥವಾ ಬೇರೆ ಎಲ್ಲಿ ಹೋಗಬೇಕು ಎಂದು ತಿಳಿಯದೆಯೂ ಸುಮ್ಮನೆ ಇದ್ದಿರಬಹುದು! ಆದರೆ, ಈ ಚುನಾವಣೆಯಲ್ಲಿ ಮೂರನೇ ತಲೆಮಾರಿನ ಕುಡಿಗಳು ಬಹಿರಂಗವಾಗಿಯೇ ಪ್ರಚಾರ ಕೈಗೊಂಡುದು ಮತ್ತು ಕುಮಾರಸ್ವಾಮಿಯವರು ಒಂದು ವೇಳೆ ಚಿಕ್ಕಬಳ್ಳಾಪುರದಲ್ಲಿ ಗೆದ್ದರೆ  ಅವರು ಖಾಲಿ ಮಾಡುವ ರಾಮನಗರ ಕ್ಷೇತ್ರದಲ್ಲಿ ಅದೇ ಕುಟುಂಬದ ಮೂರನೇ ತಲೆಮಾರಿನ ಕುಡಿ ನಿಖಿಲ್‌ಗೌಡ ಕಣಕ್ಕೆ ಇಳಿಯಬಹುದು ಎಂಬ ಇಂಗಿತ ಎರಡನೇ ತಲೆಮಾರಿನ ನಾಯಕರ ಉಸಿರು ಕಟ್ಟಿಸಿದೆ.

ಎಲ್ಲ ಪ್ರಾದೇಶಿಕ ಪಕ್ಷಗಳ ಕಷ್ಟ ಇದು: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಆಡಳಿತಕ್ಕೆ ಬಂದರೆ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್‌ ಅವರಿಗೆ ಎಷ್ಟೇ ನಿಕಟರಾಗಿರಲಿ ಅಜಂಖಾನ್‌ ಮುಖ್ಯಮಂತ್ರಿ ಆಗುವುದಿಲ್ಲ. ಅಮರಸಿಂಗ್‌ ಪಕ್ಷವನ್ನೇ ಬಿಟ್ಟು ಹೋಗುತ್ತಾರೆ. ಮಗ ಅಖಿಲೇಶ್‌ ಸಿಂಗ್‌ ಮುಖ್ಯಮಂತ್ರಿ ಗದ್ದುಗೆಯಲ್ಲಿ ಕುಳಿತುಕೊಳ್ಳುತ್ತಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆಯ ಮುಖಂಡ ಬಾಳ ಠಾಕ್ರೆಯವರು ತಮ್ಮ ಮಗ ಉದ್ಧವ ಠಾಕ್ರೆಯವರನ್ನೇ ತಮ್ಮ ಉತ್ತರಾಧಿಕಾರಿ ಎಂದು ಘೋಷಿಸುತ್ತಾರೆ. ತಮ್ಮ ತಮ್ಮನ ಮಗ  ರಾಜ್‌ ಠಾಕ್ರೆಯವರನ್ನು ದೂರ ಇಡುತ್ತಾರೆ. ತಮಿಳುನಾಡಿನಲ್ಲಿ ಡಿ.ಎಂ.ಕೆ ವರಿಷ್ಠ ಕರುಣಾನಿಧಿ ಅವರಿಗೆ  ಮಗ ಅಳಗಿರಿಗಿಂತ ಇನ್ನೊಬ್ಬ ಮಗ ಸ್ಟಾಲಿನ್‌ ಹೆಚ್ಚು ಪ್ರಿಯ ಅನಿಸುತ್ತಾನೆ. ಉತ್ತರ ತುದಿಯ ಕಾಶ್ಮೀರದವರೆಗೆ ಇಂಥ ಉದಾಹರಣೆಗಳು ಲೆಕ್ಕವಿಲ್ಲದಷ್ಟು ಸಿಗುತ್ತವೆ. ಕಾಂಗ್ರೆಸ್‌ನಿಂದ ಅಂಟಿದ ರೋಗ ಇದು. ತಂದೆಯಾದ ಮೇಲೆ ಮಗ ಮತ್ತು ಮಗನಾದ ಮೇಲೆ ಮೊಮ್ಮಕ್ಕಳು ಅಧಿಕಾರದ ಏಣಿಯನ್ನು ಏರುವುದು ಸಹಜ ಎಂದು ಒಪ್ಪಿಕೊಳ್ಳುವ ಮನಃಸ್ಥಿತಿ ಇರುವವರು ಮಾತ್ರ ಇಂಥ  ಪಕ್ಷಗಳಲ್ಲಿ ಇರಬೇಕು.

ಒಂದು ಕಾಲ ಇತ್ತು: ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷಗಳು ಬೇಡ  ಎನ್ನುವವರು ಜನತಾದಳದ ಜತೆಗೆ  ಗುರುತಿಸಿಕೊಂಡಿದ್ದರು. ಕೇವಲ ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ಜನತಾದಳದಲ್ಲಿ ಎಂಥೆಂಥ ನಾಯಕರು ಇದ್ದರು! ಅವರು ಅದ್ಭುತ ಆಡಳಿತಗಾರರೂ ಆಗಿದ್ದರು. ಸಾವು ಮತ್ತು ಸಾವಿನಂಥ ಒಡಕು ಈ ಪಕ್ಷವನ್ನು ಚೂರು ಚೂರು ಮಾಡಿ ಬಿಟ್ಟಿತು. ಈಗ ಕುಟುಂಬ ವಾತ್ಸಲ್ಯ ಈ ಪಕ್ಷವನ್ನು ಚೂರು ಚೂರು ಮಾಡುತ್ತಿದೆಯೇ? ಇಲ್ಲ ಎಂದು ಹೇಳುವುದು ಕಷ್ಟ.

ಈ ಚುನಾವಣೆಯಲ್ಲಿ ಪಕ್ಷದ ನಾಯಕರಿಗೆ ಇನ್ನೂ ಒಂದು ಚಿಂತೆ ಮತ್ತು ಶಂಕೆ ಕಾಡಿದಂತೆ ಕಾಣುತ್ತದೆ. ತಮ್ಮ ಪಕ್ಷ ನಿಜವಾಗಿಯೂ ತಾನು ಕಣಕ್ಕೆ ಇಳಿದ ಎಲ್ಲ ಕ್ಷೇತ್ರಗಳಲ್ಲಿ ಹೋರಾಟ ಮಾಡಿತೇ, ಹೋರಾಟ ಮಾಡಬೇಕು ಎಂದು ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತೇ ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ. ದೇವೇಗೌಡರಿಗೆ ನಿಜವಾಗಿಯೂ ಕರ್ನಾಟಕದಲ್ಲಿ ಇಪ್ಪತ್ತೈದು ಸೀಟುಗಳಲ್ಲಿ ಗೆಲ್ಲಬೇಕು ಎಂದು ಇದ್ದರೆ ಮೈಸೂರಿನಲ್ಲಿ ಚಂದ್ರಶೇಖರಯ್ಯ ಅವರಿಗೆ ಏಕೆ ಟಿಕೆಟ್‌ ಕೊಟ್ಟರು? ಉಡುಪಿ–ಚಿಕ್ಕಮಗಳೂರಿನಲ್ಲಿ ಧನಂಜಯಕುಮಾರ್‌ ಅವರನ್ನು ಏಕೆ ಕಣಕ್ಕೆ ಇಳಿಸಿದರು? ಮುಸಲ್ಮಾನರು ಜಾಸ್ತಿಯಿದ್ದ ಬೆಂಗಳೂರು ಕೇಂದ್ರದ ಬದಲಿಗೆ ಒಕ್ಕಲಿಗರು ಹೆಚ್ಚು ಸಂಖ್ಯೆಯಲ್ಲಿ ಇರುವ ಬೆಂಗಳೂರು ಉತ್ತರದಲ್ಲಿ ಅಜೀಂ ಅವರಿಗೆ ಏಕೆ ಟಿಕೆಟ್‌ ಕೊಟ್ಟರು? ಚಿಕ್ಕಬಳ್ಳಾಪುರದಲ್ಲಿ ಕುಮಾರಸ್ವಾಮಿ ನಿಂತುದು ಗೆಲ್ಲುವುದಕ್ಕೋ ಅಥವಾ ಯಾರಿಗಾದರೂ ಸಹಾಯ ಮಾಡುವುದಕ್ಕೋ? ಅಥವಾ ಯಾರನ್ನಾದರೂ ಬಗ್ಗು ಬಡಿಯುವುದಕ್ಕೋ? ಕೋಲಾರದಲ್ಲಿ ಟಿಕೆಟ್ ಗಿಟ್ಟಿಸಿಕೊಂಡ ಕೇಶವ ಯಾರು?... ಈ ಪ್ರಶ್ನೆಗಳು ಮುಗಿಯುವಂತೆ ಕಾಣುವುದೇ ಇಲ್ಲ. ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಇದನ್ನೇ ‘ಮ್ಯಾಚ್‌ ಫಿಕ್ಸಿಂಗ್‌’  ಎಂದು ಕರೆದಂತೆ ಕಾಣುತ್ತದೆ. ಕ್ರಿಕೆಟ್ಟಿನಲ್ಲಿ ‘ಮ್ಯಾಚ್‌ ಫಿಕ್ಸಿಂಗ್‌’ ಆಗುವುದು ಏಕೆ ಎಂದು ನಮಗೆ ಗೊತ್ತಿದೆ. ರಾಜಕೀಯ ಪಕ್ಷಗಳೂ ಅದೇ ಕಾರಣಕ್ಕೆ ‘ಮ್ಯಾಚ್‌ ಫಿಕ್ಸಿಂಗ್‌’ ಮಾಡುತ್ತವೆ ಎಂದು ಹೇಳುವುದು ಕಷ್ಟ. ಅದು ಕಾರಣ ಅಲ್ಲವಾದರೆ ಬೇರೆ ಏನು ಕಾರಣ ಇರಲು ಸಾಧ್ಯ?

ಯಾವಾಗಲೂ ನಾಯಕರು ಅಪ್ರಾಮಾಣಿಕರು. ಅನುಯಾಯಿಗಳು ಅಮಾಯಕರು. ಅಮಾಯಕ ಅನುಯಾಯಿಗಳು ಇಲ್ಲದೇ ಇದ್ದರೆ ಒಂದು ರಾಜಕೀಯ ಪಕ್ಷವನ್ನು ಕಟ್ಟಲು ಸಾಧ್ಯವಿಲ್ಲ. ಅನುಯಾಯಿಗಳು ತನ್ನ ಪಕ್ಷದ ನಾಯಕನಿಗೆ ಜೀವ ಕೊಡಲೂ ಸಿದ್ಧರಿರುತ್ತಾರೆ. ಆ ನಾಯಕನ ಬಗೆಗೆ, ಆತ ಪ್ರತಿನಿಧಿಸುವ ಪಕ್ಷದ ಬಗೆಗೆ ಅನುಯಾಯಿಗೆ ಏನೋ ಅಭಿಮಾನ. ಎಲ್ಲ ಅನುಯಾಯಿಗಳು ದುಡ್ಡಿನ ಬೆನ್ನು ಹತ್ತಿದವರು ಅಲ್ಲ. ದೇವೇಗೌಡರು ಬಂದರೆ, ಸಿದ್ದರಾಮಯ್ಯ ಬಂದರೆ, ಅಂಬರೀಷ್‌ ಬಂದರೆ ಸುಮ್ಮನೇ ಜೈಕಾರ ಹಾಕಿ ಮನೆಗೆ ಹೋಗಿ ಊಟ ಮಾಡಿ ಮಲಗುವ ಅನುಯಾಯಿಗಳು ಎಷ್ಟು ಮಂದಿ ಇಲ್ಲ? ಆದರೆ, ನಾಯಕರಾದವರು ಮೇಲೆ ಮೇಲೆ ಹೋದಂತೆ ಇಂಥ ಅನುಯಾಯಿಗಳನ್ನು ಮರೆಯುತ್ತ ಹೋಗುತ್ತಾರೆ. ಚುನಾವಣೆ ಬಂದಾಗ ಮಾತ್ರ ನೆನಪಿಸಿಕೊಳ್ಳುತ್ತಾರೆ.

ಚುನಾವಣೆ ಬಂದಾಗಲೂ ನ್ಯಾಯವಾಗಿ, ಪ್ರಾಮಾಣಿಕವಾಗಿ ನಡೆದುಕೊಳ್ಳದೇ  ಇದ್ದರೆ ಅವರಿಗೆ ಆಘಾತವಾಗುತ್ತದೆ. ಈ ಸಾರಿಯ ಚುನಾವಣೆಯಲ್ಲಿ ಜನತಾದಳ (ಎಸ್) ಕಾರ್ಯಕರ್ತರಿಗೆ ಇಂಥ ಆಘಾತ ಆಗಿದೆ. ದೇವೇಗೌಡರು ಇದನ್ನು ಒಪ್ಪುತ್ತಾರೆಯೋ ಇಲ್ಲವೋ ತಿಳಿಯದು. ಅವರ ಪಕ್ಷಕ್ಕೆ ಈ ಸಾರಿಯ ಚುನಾವಣೆಯಲ್ಲಿ ಎಷ್ಟು ಸೀಟುಗಳು ಬರುತ್ತವೆ ಎಂದು ನಮಗಿಂತ ಅವರಿಗೇ ಚೆನ್ನಾಗಿ ಗೊತ್ತಿದೆ. ನಿಜವಾಗಿಯೂ ಅವರಿಗೆ ಅಷ್ಟೇ ಸೀಟುಗಳು ಬರುವುದು ಬೇಕಿತ್ತೇ? ಅವರಿಗೆ ನಿಜವಾಗಿಯೂ ಕರ್ನಾಟಕದಲ್ಲಿ ಒಂದು ಬಲಿಷ್ಠ ಪ್ರಾದೇಶಿಕ ಪಕ್ಷವನ್ನು ಕಟ್ಟಬೇಕು ಎಂದು ಆಸೆ ಇದೆಯೇ? ತಮ್ಮ ಪಕ್ಷ ಗೆಲ್ಲಬಹುದಾದ ಒಂದು ಎರಡು ಸೀಟು ಇಟ್ಟುಕೊಂಡು ಅವರು ಕೇಂದ್ರದಲ್ಲಿ ಯಾರು ಪ್ರಧಾನಿ ಆಗಬೇಕು ಎಂದು ಹೇಗೆ ನಿರ್ಧರಿಸುತ್ತಾರೆ?

ಕುಮಾರಸ್ವಾಮಿ ಸ್ವತಂತ್ರವಾಗಿ ಯೋಚನೆ ಮಾಡಬಲ್ಲ ಒಬ್ಬ ನಾಯಕ. ಕರ್ನಾಟಕ ಕಂಡ ಒಳ್ಳೆಯ ಮುಖ್ಯಮಂತ್ರಿ ಗಳಲ್ಲಿ ಅವರೂ ಒಬ್ಬರು. ತಮ್ಮ ಪಕ್ಷದ ಪಾತ್ರ ಏನು ಎಂದು ಅವರಾದರೂ ಯೋಚನೆ ಮಾಡಬೇಕಲ್ಲ? ಕರ್ನಾಟಕದಲ್ಲಿ ಈಗ ಅವರ ಪಕ್ಷಕ್ಕೆ ವಿರೋಧ ಪಕ್ಷದ ಸ್ಥಾನವೂ ಇಲ್ಲ. ಮೂರನೇ ಸ್ಥಾನದಲ್ಲಿಯೇ ಇರುವುದಾದರೆ ರಾಜಕೀಯ ಏಕೆ ಮಾಡಬೇಕು? ಎಲ್ಲರೂ ರಾಜಕೀಯಕ್ಕೆ ಬರುವುದು ಅಧಿಕಾರಕ್ಕಾಗಿ. ಆ ಅಧಿಕಾರದಿಂದ ಸಮಾಜಕ್ಕೆ ಒಳಿತು ಮಾಡುವುದಕ್ಕಾಗಿ. ಕಾಯಂ ಆಗಿ ವಿರೋಧ ಪಕ್ಷದಲ್ಲಿಯೇ ಇದ್ದರೆ ತಮ್ಮ ಪಕ್ಷದ ಸಿದ್ಧಾಂತಗಳನ್ನು ಜಾರಿಗೆ ತರುವುದು ಯಾವಾಗ? ಕುಮಾರಸ್ವಾಮಿಯವರು ವಿಧಾನಸಭೆಯನ್ನೂ ಕಂಡಿದ್ದಾರೆ. ಲೋಕಸಭೆಯನ್ನೂ ಕಂಡಿದ್ದಾರೆ. ಆಡಳಿತದಲ್ಲಿಯೂ ಇಲ್ಲದ, ಅಧಿಕೃತ ವಿರೋಧ ಪಕ್ಷದಲ್ಲಿಯೂ ಇಲ್ಲದ ಪಕ್ಷಗಳ, ಸ್ಥಾನಮಾನಗಳ ಹಣೆಬರಹ ಏನು ಎಂದು ಅವರಿಗೆ ಗೊತ್ತಿರುತ್ತದೆ. ಇನ್ನು ಎಷ್ಟು ಕಾಲ ಎಂದು ಅವರು ಇದೇ ಬಗೆಯ ರಾಜಕಾರಣ ಮಾಡುತ್ತ ಇರುತ್ತಾರೆ? ಕುಮಾರಸ್ವಾಮಿಯವರ ಇನ್ನೊಂದು ಸಮಸ್ಯೆ ಎಂದರೆ ಅವರಿಗೆ ರಾಜ್ಯದ ರಾಜಕಾರಣ ಮಾಡಬೇಕಿದೆಯೇ? ರಾಷ್ಟ್ರದ ರಾಜಕಾರಣ ಮಾಡಬೇಕಿದೆಯೇ? ತಮ್ಮ ಕ್ಷೇತ್ರದ ಮತದಾರರಿಗೆ ಅವರು ಏನು ಸಂದೇಶ ಕೊಡಲು ಬಯಸುತ್ತಿದ್ದಾರೆ ಎಂಬುದು ಅವರಿಗೇ ಸ್ಪಷ್ಟ ಇರುವಂತೆ ಕಾಣುವುದಿಲ್ಲ.

ಸರದಿಯಂತೆ ಒಂದು ಸಾರಿ ವಿಧಾನಸಭೆಗೆ ಮತ್ತೆ ಒಂದು ಸಾರಿ ಲೋಕಸಭೆಗೆ ಸ್ಪರ್ಧಿಸಿದರೆ ಜನರು ಏನು ಅಂದುಕೊಳ್ಳಬೇಕು?
ಎಲ್ಲರೂ ರಾಜಕೀಯ ಮಾಡುವುದು ಅಧಿಕಾರಕ್ಕಾಗಿ. ಹಣಕ್ಕಾಗಿ. ಸೌಲಭ್ಯಗಳಿಗಾಗಿ, ಸ್ಥಾನಮಾನಗಳಿಗಾಗಿ. ಆದರೆ, ಎಲ್ಲ ಅಧಿಕಾರ, ಎಲ್ಲ ಹಣ, ಎಲ್ಲ ಸೌಲಭ್ಯ, ಎಲ್ಲ ಸ್ಥಾನಮಾನ ತಮ್ಮ ಕುಟುಂಬದಲ್ಲಿಯೇ ಇರಬೇಕು ಎಂದು ಬಯಸುವ ಒಂದು ರಾಜಕೀಯ ಬಹುಕಾಲ ಯಶಸ್ವಿ ರಾಜಕಾರಣ ಮಾಡುವುದು ಕಷ್ಟ. ಈ ಸಾರಿಯ ಚುನಾವಣೆಯಲ್ಲಿ ಜನತಾದಳ (ಎಸ್‌)ಕ್ಕೆ ಈ ಮಾತು ಅರ್ಥ ಆಗಿರಬಹುದು. 
ರಾಜಕಾರಣದಲ್ಲಿ ಒಂದಿಷ್ಟು ತ್ಯಾಗಕ್ಕೂ ಸ್ಥಾನ ಇರಬೇಕು. ತನಗೆ ಒದಗಿಬಂದ ಅಧಿಕಾರವನ್ನು ನಾಯಕನಾದವನು ಇತರರಿಗೆ ಬಿಟ್ಟುಕೊಡಬೇಕು. ಬಿಟ್ಟುಕೊಡುವ ಮನಸ್ಸಾದರೂ ನಾಯಕರಿಗೆ ಇದೆ ಎಂದು ಪಕ್ಷದಲ್ಲಿ ಇದ್ದವರಿಗೆ ಅನಿಸಬೇಕು. ಎಲ್ಲ ಅಧಿಕಾರ, ಎಲ್ಲ ತೀರ್ಮಾನ ಒಂದು ಮನೆಯಲ್ಲಿ ಕೇಂದ್ರೀಕೃತವಾಗಿದೆ ಎಂದು ಅನಿಸತೊಡಗಿದರೆ ಆ ಪಕ್ಷಕ್ಕೆ ಆಯುಷ್ಯ ಕಡಿಮೆ ಆಗುತ್ತಿದೆ ಎಂದು ಅರ್ಥ. ಈ ಚುನಾವಣೆ ಮುಗಿದ ಮೇಲೆ ದೇವೇಗೌಡ, ಕುಮಾರಸ್ವಾಮಿ ಮತ್ತು ರೇವಣ್ಣ ಕಾರ್ಯಕರ್ತರ ಒಂದು ಸಭೆ ಕರೆದು ಅವರಿಗೆ ಮುಕ್ತವಾಗಿ ಮಾತನಾಡಲು ಅವಕಾಶ ಕೊಡಬೇಕು. ಅವರು ಅಲ್ಲಿ ಏನೆಲ್ಲ ಹೇಳುತ್ತಾರೆ ಎಂದು ಯಾರಾದರೂ ಊಹಿಸಬಲ್ಲರು. ಕೊನೆಯಲ್ಲಿ ಅವರೂ ಒಂದು ಪ್ರಶ್ನೆ ಕೇಳುತ್ತಾರೆ: ‘ಮುಂದೆ ಏನು’ ಎಂದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT