ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಯರ್ ಮುತ್ತಣ್ಣ ತೆರೆಗೆ ಬಂತಣ್ಣ

Last Updated 7 ಜುಲೈ 2012, 19:30 IST
ಅಕ್ಷರ ಗಾತ್ರ

`ಮಮತೆಯ ಬಂಧನ~ ಬಿಡುಗಡೆಯಾದ ಮೇಲೆ ನನಗೆ ಅಭಿನಯಿಸಲು ಅವಕಾಶಗಳು ಸಿಕ್ಕವು. ಶಂಕರ್‌ಸಿಂಗ್, ವಿಠಲಾಚಾರ್ಯ ಆಗಿನ ಹೆಸರಾಂತ ನಿರ್ಮಾಪಕರು. ಆಂಧ್ರದಲ್ಲಿ ಜಾನಪದ ಸಿನಿಮಾಗಳನ್ನು ಯಶಸ್ವಿ ಮಾಡಿದವರು ವಿಠಲಾಚಾರ್ಯ. ಶಂಕರ್ ಸಿಂಗ್ ಕನ್ನಡದಲ್ಲಿ ಆ ಕಾಲಕ್ಕೇ ಅದ್ಭುತವಾದ ಸಿನಿಮಾಗಳನ್ನು ಮಾಡಿದ್ದರು. ಅವರ `ಜಗನ್ಮೋಹಿನಿ~ ಚಿತ್ರ ದಾವಣಗೆರೆಯಲ್ಲಿ 36 ವಾರ ಓಡಿತ್ತು.

ಶಂಕರ್ ಸಿಂಗ್ ಹೇಳಿದ ಒಂದು ಅನುಭವವನ್ನು ನಾನು ಹಂಚಿಕೊಳ್ಳಲೇಬೇಕು: ಮಹಾಬಲರಾಯರು ಆಗ ಜನಪ್ರಿಯ ಹಾಸ್ಯನಟ. `ಜಗನ್ಮೋಹಿನಿ~ ಚಿತ್ರಕ್ಕೆ ಅವರು ಓಡಿಬರುವ ಶಾಟ್‌ಚಿತ್ರೀಕರಿಸಿಕೊಳ್ಳಬೇಕಿತ್ತು. ನೆಗೆಟಿವ್ ಮುಗಿದುಹೋಗುತ್ತಿದ್ದ ಕಾರಣ ಸಮಯ ಹಾಳು ಮಾಡುವಂತಿರಲಿಲ್ಲ.

ರೀಟೇಕ್ ಇರಲಿ, ಹೆಚ್ಚು ಕಾಲವನ್ನೂ ತೆಗೆದುಕೊಳ್ಳುವ ಹಾಗಿರಲಿಲ್ಲ. ಆದಷ್ಟು ಬೇಗ ಓಡಿಬರಬೇಕೆಂದು ಮಹಾಬಲರಾಯರಿಗೆ ಶಂಕರ್ ಸಿಂಗ್ ತಾಕೀತು ಮಾಡಿದ್ದರು. ಅವರು ಓಡಿಬರತೊಡಗಿದರು. ಅವರ ಪಂಚೆ ಮುಳ್ಳಿಗೆ ಸಿಕ್ಕಿಹಾಕಿಕೊಂಡಿತು. ಶಂಕರ್ ಸಿಂಗ್ ಅದನ್ನು ಕಿತ್ತುಕೊಂಡು ಬಾ ಎಂದು ಕೂಗುತ್ತಲೇ ಇದ್ದರು.
 
ವಿಧಿಯಿಲ್ಲದೆ ಮಹಾಬಲರಾಯರು ತಮ್ಮ ಪಂಚೆಯನ್ನು ಕಿತ್ತುಕೊಂಡು ಎದ್ದೆನೋ ಬಿದ್ದೆನೋ ಎಂಬಂತೆ ಓಡಿಬಂದರು. ಚಿತ್ರದಲ್ಲೂ ಆ ದೃಶ್ಯ ಹಾಗೆಯೇ ಮೂಡಿಬಂತು. ಅವರ ಪಂಚೆ ಸಿಕ್ಕಿಹಾಕಿಕೊಂಡಿದ್ದನ್ನು ಕಂಡ ಜನ ಹಿಂದೆ ದೆವ್ವ ಬರುತ್ತಾ ಇರುವ ದೃಶ್ಯ ಅದಾದ್ದರಿಂದ ತುಂಬಾ ಸಹಜವಾಗಿದೆ ಎಂದು ಮೆಚ್ಚಿಕೊಂಡರು.

`ಎಂಥ ನಿರ್ದೇಶಕ. ಸಿಂಬಾಲಿಕ್ ಆಗಿದೆ. ವಾಟ್ ಎ ಡೈರೆಕ್ಟೋರಿಯಲ್ ಟಚ್~ ಎಂದು ಉದ್ಗರಿಸಿದರು. ಇದನ್ನು ಕಂಡು ಶಂಕರ್ ಸಿಂಗ್‌ಗೆ ಮೊದಲು ನಗು ಬಂದಿತಂತೆ.
ನನಗೆ ಖುದ್ದು ಶಂಕರ್ ಸಿಂಗ್ ಈ ಘಟನೆಯನ್ನು ಹೇಳಿಕೊಂಡಿದ್ದರು.

ಶಂಕರ್ ಸಿಂಗ್ ಅವರ ಮಗ ರಾಜೇಂದ್ರ ಸಿಂಗ್ ನಾನು ಮರೆಯಲಾಗದ ಇನ್ನೊಬ್ಬ ಸಜ್ಜನ. ಅವನು ನಿರ್ದೇಶಿಸಿದ `ಪಾತಾಳಮೋಹಿನಿ~, `ಲಕ್ಷಾಧೀಶ್ವರ~, `ಧನಪಿಶಾಚಿ~ ಚಿತ್ರಗಳಲ್ಲಿ ನನಗೆ ಅವಕಾಶ ಕೊಟ್ಟ. `ಧನಪಿಶಾಚಿ~ಯ್ಲ್ಲಲಂತೂ ತುಂಬಾ ದೊಡ್ಡ ಪಾತ್ರವಿತ್ತು.

ವಂದನಾ ಎಂಬ ಆ ಕಾಲಕ್ಕೆ ಹೆಸರಾದ ನಾಯಕಿಯ ಜೊತೆ ಹಾಸ್ಯ ಪಾತ್ರಧಾರಿಯಾದ ನನಗೆ ಒಂದು ಹಾಡಿತ್ತು. ಅದು ನನ್ನ ಪಾಲಿಗೆ ಆಗ ಹೆಮ್ಮೆಯ ವಿಷಯ. ಆ ಹಾಡಲ್ಲಿ ವಂದನಾ ಹೇಳುತ್ತಾಳೆ: `ನಿನಗೇನಿದೆ ಪರ್ಸನಾಲಿಟಿ. ಕುಳ್ಳ~.

ಅದಕ್ಕೆ ನಾನು ಒಂದು ಹಾಡು ಹೇಳುತ್ತೇನೆ: `ಕುಳ್ಳ ನಾನಾಗಿದ್ದರೆ ಏನಾಯ್ತೆ/ ಒಳ್ಳೆ ಮನಸು ನನಗೈತೆ/ ನಾ ಕಳ್ಳನಲ್ಲ ಸುಳ್ಳನಲ್ಲ/ ಗುಳ್ಳೆ ನರಿಯ ಬುದ್ಧಿಯಿಲ್ಲ/ ಒಳ್ಳೆ ವಂಶ ನಮ್ಮದೆಲ್ಲ...~. ನನ್ನ ಮಾವ ಹುಣಸೂರು ಕೃಷ್ಣಮೂರ್ತಿ ನನಗಾಗಿಯೇ ಬರೆದ ಹಾಡದು. ಬಹುಶಃ ನನ್ನ ತಲೆಯಲ್ಲಿ ಕುಳ್ಳ ಎಂಬ ಧ್ವನಿ ಮೊದಲು ಮೂಡಿದ್ದೇ ಆಗ. ಮುಂದೆ ನಾನು `ಕರ್ನಾಟಕ ಕುಳ್ಳ~ ಎನಿಸಿಕೊಳ್ಳಲು ಅದೇ ಮೊದಲ ಮೆಟ್ಟಿಲಾಗಿತ್ತೋ ಏನೋ.

ರಾಜೇಂದ್ರ ಸಿಂಗ್ ಬಾಬು ನನಗೆ ಬಹಳ ಹತ್ತಿರದ ಹುಡುಗ. ಕನ್ನಡ ಚಿತ್ರರಂಗದಲ್ಲಿ ಅವನು ತನ್ನದೇ ಆದ ಸ್ಥಾನ ಪಡೆದ. ನಾನು, ವಿಷ್ಣುವರ್ಧನ್ 1985-86ರಲ್ಲಿ ಜಗಳವಾಡಿದಾಗ, ಅವನು ವಿಮಾನ ನಿಲ್ದಾಣದಲ್ಲಿ ಸಿಕ್ಕಿದ. ಒಂದು ಕಡೆ ನಾನು ಬಂದಿಳಿದೆ. ಇನ್ನೊಂದು ಕಡೆ ವಿಷ್ಣು, ಬಾಬು ಇಳಿದರು.

ನನ್ನ ಜೊತೆ ಅಲ್ಲಿಯೇ ಬಾಬು ಚರ್ಚೆಯಲ್ಲಿ ತೊಡಗಿದ. `ನೀವಿಬ್ಬರೂ ಜಗಳ ಆಡಬಾರದು. ಮತ್ತೆ ಸೇರಿ ಸಿನಿಮಾ ಮಾಡಿ. ಇಂಡಸ್ಟ್ರಿಗೆ ಒಳ್ಳೆಯದಾಗುತ್ತೆ. ನೀವಿಬ್ಬರೂ ಟಾಪ್ ಆಗಿ ಸೇರಿದ್ದೀರಿ. ಯಾಕ್ರೋ ಹೀಗೆ ಮಾಡುತ್ತೀರಿ?~ ಎಂದು ಪಾರ್ಲಿಮೆಂಟ್‌ನಲ್ಲಿ ಮಾತನಾಡುವಂತೆ ಮಾತನಾಡಿದ್ದ.

ಅವನು ಇಂಡಸ್ಟ್ರಿ ಬಗ್ಗೆ ಯೋಚನೆ ಮಾಡಿದ್ದ. ಸ್ವಾರ್ಥವೇ ಹೆಚ್ಚಾಗಿದ್ದ ಉದ್ಯಮದಲ್ಲಿ ರಾಜೇಂದ್ರ ಸಿಂಗ್ ಬಾಬು ಅಂದು ಆಡಿದ ಮಾತುಗಳು ಇನ್ನೂ ನನ್ನ ಕಿವಿಯಲ್ಲಿವೆ. ಆ ಬಾಬು ನಿರ್ದೇಶನದಲ್ಲಿ ನಾನು ಒಂದು ಸಿನಿಮಾ ನಿರ್ಮಿಸಲು ಆಗಲಿಲ್ಲವಲ್ಲ ಎಂಬ ನೋವು ನನಗಿದೆ.

ನಾನು `ರವಿ ಅಣ್ಣ~ ಎಂದೇ ಕರೆಯುವ ಕೆ.ಎಸ್.ಎಲ್.ಸ್ವಾಮಿ ನನ್ನ ಬೆಳವಣಿಗೆಗೆ ಸಹಾಯಕನಾದ ಗಾಡ್ ಫಾದರ್. `ತೂಗುದೀಪ~ ಎಂಬ ಸಿನಿಮಾ ಶುರುಮಾಡಿದ್ದ ಅವರಿಗೆ ನನ್ನ ಕಂಡರೆ ಬಲು ಪ್ರೀತಿ. `ಲಗ್ನಪತ್ರಿಕೆ~ ಸಿನಿಮಾದಲ್ಲಿ ನನಗೆ ಅವಕಾಶ ಕೊಟ್ಟರು. ಸಿದ್ದಲಿಂಗಯ್ಯ ಆ ಚಿತ್ರದ ಸಹಾಯಕ ನಿರ್ದೇಶಕ.
 
ಅವರನ್ನು ಸಿದ್ದಲಿಂಗಣ್ಣ ಎಂದೇ ನಾನು ಕರೆಯುತ್ತಿದ್ದೆ. `ನಾನು ಇನ್ನೊಂದು ಸಿನಿಮಾ ಮಾಡಿದರೆ ನೀನೇ ಅದರ ನಿರ್ದೇಶಕ~ ಎಂದು ಅವನಿಗೆ ಲಗ್ನಪತ್ರಿಕೆ ಚಿತ್ರೀಕರಣದ ಸಂದರ್ಭದಲ್ಲಿಯೇ ಒಂದು ರೂಪಾಯಿ ಅಡ್ವಾನ್ಸ್ ಕೊಟ್ಟಿದ್ದೆ. ಮುಂದೆ ಅದೇ ಸಿದ್ದಲಿಂಗಯ್ಯ ಕನ್ನಡ ಚಿತ್ರರಂಗದ ಮಹತ್ವದ ನಿರ್ದೇಶಕರಾದರು.

ರವಿ ಅಣ್ಣ ನನಗೆ ರಾಜ್‌ಕುಮಾರ್ ಜೊತೆ ನಟಿಸುವ ಅವಕಾಶಗಳನ್ನು ಕಲ್ಪಿಸಿದರು. ರಾಜಣ್ಣ ಅಭಿನಯಿಸಿದ ನೂರನೇ ಚಿತ್ರ `ಭಾಗ್ಯದ ಬಾಗಿಲು~. ಅದರಲ್ಲಿ ನಾನೂ ನಟಿಸಿದ್ದೇನೆಂಬುದು ಹೆಮ್ಮೆಯ ವಿಷಯ. `ಮಂಕುದಿಣ್ಣೆ~, `ಅರಿಶಿನ ಕುಂಕುಮ~, `ಕೃಷ್ಣ ರುಕ್ಮಿಣಿ~ ಎಲ್ಲಾ ಚಿತ್ರಗಳಲ್ಲೂ ನಾನು ರಾಜಣ್ಣನವರ ಜೊತೆ ನಟಿಸಿದ್ದೆ.

ನಾನು, ರಾಜಣ್ಣ ಒಳ್ಳೆಯ ಸ್ನೇಹಿತರಾಗಿದ್ದೆವು. ಊಟ ಮಾಡುವಾಗ, ವಾಕ್ ಮಾಡುವಾಗ ನನ್ನನ್ನು ಕರೆದು, ಅನೇಕ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಅವರ ಒಡನಾಟದ ಕ್ಷಣಗಳು ಈಗಲೂ ಕಣ್ಣಿಗೆ ಕಟ್ಟಿದಂತಿವೆ.
 
ಅವರು ನನಗೆ ಚೆನ್ನಾಗಿ ಪರಿಚಿತರಾಗಿದ್ದೇ `ರಾಜಣ್ಣ ನನಗೊಂದು ಕಾಲ್‌ಷೀಟ್ ಕೊಡಿ~ ಎಂದು ದುಂಬಾಲುಬೀಳತೊಡಗಿದೆ. `ನನ್ನನ್ನ ಎತ್ತಿಕೊಳ್ಳೋಕೆ ಆಗುತ್ತಾ ನಿಮಗೆ?~ ಅಂತ ಅವರು ತಮಾಷೆ ಮಾಡುತ್ತಿದ್ದರು. `ನೀವು ಕಾಲ್‌ಷೀಟ್ ಕೊಡಿ. ಇಡೀ ವಾಹಿನಿ ಸ್ಟುಡಿಯೋದಲ್ಲಿ ಹೊತ್ತುಕೊಂಡು ತಿರುಗುತ್ತೇನೆ~ ಎಂದು ನಾನು ನನ್ನ ಬಯಕೆ ಹೇಳಿಕೊಳ್ಳುತ್ತಿದ್ದೆ.

ರಾಜ್‌ಕುಮಾರ್ ಸಹೋದರ ವರದಪ್ಪನವರು ಸಿದ್ದಲಿಂಗಣ್ಣನಿಗೆ ಹತ್ತಿರವಾಗಿದ್ದರು. `ಹೇಗಾದರೂ ಮಾಡಿ ವರದಪ್ಪನವರನ್ನು ಒಪ್ಪಿಸಿ ರಾಜಣ್ಣನ ಕಾಲ್‌ಷೀಟ್ ಗಿಟ್ಟಿಸು. ನೀನೇ ನಿರ್ದೇಶಕ. ಸಿನಿಮಾ ಮಾಡೋಣ~ ಅಂತ ಸಿದ್ದಲಿಂಗಣ್ಣನಿಗೆ ನಾನು ಆಗಾಗ ಜಾಕ್ ಹಾಕುತ್ತಲೇ ಇದ್ದೆ.

ಅದೇ ಕಾಲದಲ್ಲಿ ನಮ್ಮ ಮಾವನ ಸ್ನೇಹಿತ ಹಿರೇಮಠ್ ಎಂಬುವರು ಬಂದರು. ನಾಟಕಗಳಲ್ಲಿ ಅಭಿನಯಿಸಲು ನನಗೆ ಬುಲಾವು ಕೊಟ್ಟರು. ಮಾವನಿಗೆ ಅವರು ತುಂಬಾ ಬೇಕಾದವರಾದ್ದರಿಂದ ತಳ್ಳಿಹಾಕುವಂತಿರಲಿಲ್ಲ. `ಹೋಗು, ನಾಟಕದಲ್ಲಿ ಪಾರ್ಟ್ ಮಾಡು~ ಎಂದು ಮಾವ ತಾಕೀತು ಮಾಡಿದರು.

ಆ ಕಾಲದಲ್ಲಿ ಒಂದು ನಾಟಕದಲ್ಲಿ ಅಭಿನಯಿಸಿದರೆ ನನಗೆ ಮೂರು ಸಾವಿರ ರೂಪಾಯಿ ಸಂಭಾವನೆ ಕೊಡುತ್ತಿದ್ದರು. ಹುಬ್ಬಳ್ಳಿಯಲ್ಲಿ ನಾಟಕ ಆಡಲು ಹೋದೆವು. ಎದುರಾಳಿ ನಾಟಕದ ಕಂಪೆನಿಯವರು ನರಸಿಂಹ ರಾಜು ಅವರನ್ನು ಕರೆದುಕೊಂಡು ಬಂದಿದ್ದರು.

ಅದಕ್ಕೇ ನನ್ನನ್ನು ಇವರು ಕರೆದುಕೊಂಡು ಹೋದದ್ದು ಅಂತ ಅಲ್ಲಿ ಗೊತ್ತಾಯಿತು. ನಾನು, ನರಸಿಂಹರಾಜಣ್ಣ ಬೇರೆ ಬೇರೆ ಕಂಪೆನಿಗಳಲ್ಲಿದ್ದರೂ ಒಂದೇ ಹೋಟೆಲ್‌ನ ಪಕ್ಕ ಪಕ್ಕದ ರೂಮ್‌ನಲ್ಲಿ ಇಳಿದುಕೊಂಡಿದ್ದೆವು. ಇಬ್ಬರೂ ರಾತ್ರಿ ಹೊತ್ತು ಹರಟೆ ಹೊಡೆಯುತ್ತಿದ್ದೆವು.

ನಮ್ಮಿಬ್ಬರ ನಡುವೆ ಯಾವತ್ತೂ ಮನಸ್ತಾಪ ಬರಲಿಲ್ಲ. ಅವರೂ ನನ್ನ ಬೆನ್ನುತಟ್ಟಿದರು. ಪ್ರೊಫೆಸರ್ ಹುಚ್ಚುರಾಯ ಸಿನಿಮಾ ನಿರ್ಮಿಸಿದಾಗ ಅವರು ಚಿತ್ರೀಕರಿಸಿದ ಮುಹೂರ್ತದ ಶಾಟ್‌ನಲ್ಲಿ ನಾನು ವೈಶಾಲಿ ನಟಿಸಿದ್ದೆವು.

ಹಾಗೆ ನಾನು ರಾಯಚೂರಲ್ಲಿ ನಾಟಕ ಆಡುತ್ತಿದ್ದ ಸಂದರ್ಭದಲ್ಲಿ ನನ್ನ ಮೊದಲ ಮಗ ಸಂತೋಷ್ ಹುಟ್ಟಿದ. ಅದು ಏಪ್ರಿಲ್ ತಿಂಗಳು. ಎರಡು ದಿನಗಳಾದ ಮೇಲೆ ಮದ್ರಾಸ್‌ಗೆ ಹೋದೆ. ರಾಜ್‌ಕುಮಾರ್ ಕಾಲ್‌ಷೀಟ್ ಸಿಕ್ಕಿದೆ ಎಂಬ ಸಿಹಿ ಸುದ್ದಿ ಕಿವಿಮೇಲೆ ಬಿತ್ತು. ನನಗೆ ಡಬ್ಬಲ್ ಸಂತೋಷ.

ತಕ್ಷಣ ಮಣಿರತ್ನಂ ತಂದೆ ರತ್ನಂ ಅಯ್ಯರ್ ಬಳಿಗೆ ಹೋದೆ. ಅವರು ಚಿತ್ರಕ್ಕೆ ಫೈನಾನ್ಸ್ ಮಾಡಿದರು. ನ್ಯೂಟೌನ್ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡಲು ತೀರ್ಮಾನಿಸಿದೆವು. ಭಾರತಿ ಚಿತ್ರದ ನಾಯಕಿ.
 
ಆ ಕಾಲದಲ್ಲಿ ರಾಜ್‌ಕುಮಾರ್-ಲೀಲಾವತಿ ಚರಿಷ್ಮಾ ಇದ್ದಂಥ ಜೋಡಿ. ನಂತರದ ಹೆಮ್ಮೆಯ ಜೋಡಿ ಎಂದರೆ ರಾಜ್‌ಕುಮಾರ್-ಭಾರತಿ. `ಎಮ್ಮೆ ತಮ್ಮಣ್ಣ~, `ಬೀದಿ ಬಸವಣ್ಣ~, `ಚೂರಿ ಚಿಕ್ಕಣ್ಣ~ ಎಲ್ಲವೂ ಹಿಟ್ ಆಗಿದ್ದ ಕಾಲವದು. ಹಾಗಾಗಿ ನನ್ನ ಚಿತ್ರದ ಶೀರ್ಷಿಕೆಯಲ್ಲಿ `ಅಣ್ಣ~ ಎಂಬುದು ಇರಲೇಬೇಕೆಂದು ತೀರ್ಮಾನಿಸಿದ್ದೆ.

`ಮಣ್ಣಿನ ಮಗ~, `ಅಣ್ಣತಂಗಿ~ಯಲ್ಲಿ ರಾಜಣ್ಣ ಹಳ್ಳಿಯವನ ಪಾತ್ರ ಮಾಡಿದ್ದರು. ಅವರು ಹಳ್ಳಿಯವನ ಕಾಮಿಡಿ ಪಾತ್ರ ಮಾಡಿದರೆ ಸಿನಿಮಾ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ ಎನಿಸಿತು. ಅದಕ್ಕೇ ನನ್ನ ಚಿತ್ರದ ನಾಯಕನೂ ಹಳ್ಳಿಯವನೇ ಎಂಬುದೂ ನಿಕ್ಕಿಯಾಯಿತು.

ಐದು ರೈಟರ್‌ಗಳು ಕೂತು ಕತೆಗಳನ್ನು ಬರೆದರು. ಒಂದು ಕತೆಯಲ್ಲಿ ನಾಯಕನ ಕಾಲು ಮುರಿದುಹೋಗುತ್ತದೆ. ಆ ಸಿನಿಮಾ ಮಾಡಿದರೆ ಚಿತ್ರ ತೋಪಾಗುತ್ತದೆ ಎಂದು ಹೇಳಿದ ಚಿ.ಉದಯಶಂಕರ್ ಅವರನ್ನು ನಾನು ಸ್ಮರಿಸಲೇಬೇಕು.
 
ಅವರು ಆ ಕತೆ ತಿರಸ್ಕರಿಸಿದ ಮೇಲೆ ಬಾಸುಮಣಿ ಎಂಬ ರೈಟರನ್ನು ಕರೆದುಕೊಂಡು ಬಂದೆವು. ಹಳ್ಳಿಯವನು ಮೇಯರ್ ಆಗುತ್ತಾನೆಂಬ ಸಣ್ಣ ಸಾಲು ಕ್ಯಾಲೆಂಡರ್ ಒಂದರಲ್ಲಿ ಇತ್ತು. ಆ ಲೈನ್ ಇಟ್ಟುಕೊಂಡೇ ನಾವು ಕತೆ ಬೆಳೆಸಿದೆವು. `ಮೇಯರ್ ಮುತ್ತಣ್ಣ~ ತಯಾರಾಯಿತು. ಸಿದ್ದಲಿಂಗಣ್ಣ ನಿರ್ದೇಶಕನಾದ.

ಚಿತ್ರದ ಬಿಡುಗಡೆಯ ದಿನ ಗೊತ್ತು ಮಾಡಿದ್ದೆ. ರತ್ನಂ ಅಯ್ಯರ್ ಸಿನಿಮಾ ಲೆಂಗ್ತ್ ಸಾಲದು ಎಂದು ಕೊನೆಕೊನೆಯಲ್ಲಿ ಒಂದಿಷ್ಟು ಹಣ ಕೊಡಲಿಲ್ಲ. `ಕೃಷ್ಣದೇವರಾಯ~ ಸಿನಿಮಾ ಚಿತ್ರೀಕರಣಕ್ಕೆ 45 ದಿನ ರಾಜಣ್ಣ ಜೈಪುರಕ್ಕೆ ಹೊರಡಬೇಕಿತ್ತು. ಹಾಗಾಗಿ ನಾನು ಅನಿವಾರ್ಯವಾಗಿ ಮುದ್ದುಕೃಷ್ಣ ಎಂಬುವರಿಗೆ ಸಿನಿಮಾ ಹಕ್ಕುಗಳನ್ನು ಮಾರಿಬಿಟ್ಟೆ; ಕೇವಲ 40-50 ಸಾವಿರ ರೂಪಾಯಿ ಲಾಭಕ್ಕೆ.

ಒಂದು ಲಕ್ಷ ರೂಪಾಯಿಯಲ್ಲಿ ತೆಗೆದ ಚಿತ್ರ `ಮೇಯರ್ ಮುತ್ತಣ್ಣ~. ರಾಜಣ್ಣ ಪಡೆದದ್ದು ಕೇವಲ ಒಂಬತ್ತು ಹತ್ತು ಸಾವಿರ ರೂ. ಸಂಭಾವನೆ. ನಾಯಕನ ಕಾಲ್‌ಷೀಟ್‌ನ ಐದು ಪಟ್ಟು ಲಾಭ ಆಗ ಬರುತ್ತಿತ್ತು. ಈಗ ಅದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಕಾಲ ಬದಲಾಗಿದೆ.

ಮುಂದಿನ ವಾರ: ಮತ್ತೊಂದು ಸಿನಿಮಾ ಮತ್ತೊಂದು ಹೆಜ್ಜೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT