ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಅವರ ಅಚ್ಚರಿದಾಯಕ ದೌರ್ಬಲ್ಯ

Last Updated 1 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಮನಮೋಹನ್ ಸಿಂಗ್ ಅವರಂತೆ ಈಗಿನ ಪ್ರಧಾನಿಗೂ ಸಚಿವರ ಮೇಲೆ ಹಿಡಿತವಿಲ್ಲ.

ಸೆಪ್ಟೆಂಬರ್ ತಿಂಗಳಲ್ಲಿ ಹಲವು ಸುದ್ದಿ ತಲೆ ಬರಹಗಳಿಗೆ ಕಾರಣವಾದದ್ದು ಭಾರತ ಸರ್ಕಾರದ ಒಬ್ಬರೇ ಒಬ್ಬ ಸಚಿವರ ಹೇಳಿಕೆಗಳು. ವಿಚಿತ್ರವೆಂದರೆ, ಈ ಸಚಿವರು ಕೇಂದ್ರ ಸಂಪುಟದ ಪ್ರಮುಖರಲ್ಲೊಬ್ಬರೇನೂ ಅಲ್ಲ, ಅಥವಾ ಬಿಜೆಪಿಯ ಎತ್ತರದ ಮುಖಂಡರೂ ಅಲ್ಲ. ಹಾಗೆ ನೋಡಿದರೆ ಅವರು ಮೊದಲ ಬಾರಿ ಸಂಸದರಾದವರು; ಹಣಕಾಸು, ರಕ್ಷಣೆ, ವಿದೇಶಾಂಗ ವ್ಯವಹಾರ ಅಥವಾ ಗೃಹ ಸಚಿವಾಲಯದಂತಹ ಮಹತ್ವದ ಖಾತೆಯ ಹೊಣೆ ಹೊತ್ತವರೂ ಅಲ್ಲ. ಅವರು ಕಡಿಮೆ ಮಹತ್ವದ ಸಂಸ್ಕೃತಿ ಸಚಿವಾಲಯದ ಹೊಣೆ ಹೊತ್ತವರು.

ಸೆಪ್ಟೆಂಬರ್ ತಿಂಗಳ ಸುದ್ದಿಗಳ ಕೇಂದ್ರ ಮತ್ತು ಸಂಪಾದಕೀಯ ಪುಟಗಳಲ್ಲೂ ಕೇಂದ್ರವಾಗಿದ್ದ ಸಚಿವರ ಹೆಸರು ಮಹೇಶ್ ಶರ್ಮಾ. ಹಲವು ಗಂಭೀರ ಅಂಕಣಗಳು (ಮತ್ತು ಕೆಲವು ಗಂಭೀರವಲ್ಲದ ಅಂಕಣಗಳು ಕೂಡ) ಇವರ ಗಮನ ಹಿಡಿದೆಳೆಯುವ ಹೇಳಿಕೆಗಳ ಬಗ್ಗೆ ವಿಶ್ಲೇಷಣೆ ನಡೆಸಿದವು. ಶರ್ಮಾ ಅವರ ಹೇಳಿಕೆಗಳು ಸುದ್ದಿ ವಾಹಿನಿಗಳ ಮುಖ್ಯ ಸಮಯದ (ಪ್ರೈಮ್ ಟೈಮ್) ನೂರಾರು ತಾಸುಗಳನ್ನು ಆಕ್ರಮಿಸಿಕೊಂಡಿದ್ದವು.

ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಬರಬಾರದು ಎಂದು ನಂಬಿರುವುದಕ್ಕಾಗಿ, ಹೆಂಡತಿಯ ಸ್ಥಾನ ಅಡುಗೆ ಮನೆಯೊಳಗೆ ಮಾತ್ರ ಎಂದು ಒತ್ತಾಯಿಸುತ್ತಿರುವುದಕ್ಕಾಗಿ, ಮಾಲಿನ್ಯಕಾರಕ ಪಶ್ಚಿಮದ ಪ್ರಭಾವದಿಂದ ಭಾರತೀಯ ಸಂಸ್ಕೃತಿಯನ್ನು ರಕ್ಷಿಸಬೇಕು ಎಂದು ಆಗ್ರಹಿಸುತ್ತಿರುವುದಕ್ಕಾಗಿ, ಶಾಲೆಗಳಲ್ಲಿ ರಾಮಾಯಣ ಮತ್ತು ಭಗವದ್ಗೀತೆಯನ್ನು ಕಲಿಸಬೇಕು (ಬೈಬಲ್ ಅಥವಾ ಕುರ್‍ಆನ್ ಅಲ್ಲ) ಎಂಬ ಬೇಡಿಕೆಗಾಗಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸಚಿವರನ್ನು ‘ಪ್ರತಿಗಾಮಿ ಅನ್ಯದ್ವೇಷಿ’ ಎಂದು ಬಿಂಬಿಸಲಾಯಿತು. ಟೀಕೆಯಿಂದ ವಿಮರ್ಶೆಯತ್ತ ಸಾಗಿದ ವಿಶ್ಲೇಷಕರು, ಶರ್ಮಾ ಅವರ ಮಾತು ಸರ್ಕಾರದ ಕಾರ್ಯಸೂಚಿಯ ಮೇಲೆ ಆರ್‍ಎಸ್‍ಎಸ್ ಪ್ರಭಾವ ಹೆಚ್ಚುತ್ತಿದೆ ಎಂಬುದನ್ನು ಸೂಚಿಸಿದೆ ಎಂದು ವಿವರಿಸಿದರು.

ಈ ವಿಶ್ಲೇಷಣೆಯನ್ನು ನಾನು ಅಲ್ಲಗಳೆಯುವುದಿಲ್ಲ. ಸಚಿವರ ಹೇಳಿಕೆಗಳು ಪ್ರತಿಗಾಮಿ ಮತ್ತು ಪಿತೃಪ್ರಧಾನವಾದ ನಿಲುವನ್ನು ಪ್ರತಿಫಲಿಸುತ್ತವೆ. ನನ್ನ ಅಭಿಪ್ರಾಯದಲ್ಲಿ, ಇಂತಹ ಹೇಳಿಕೆಗಳನ್ನು ನೀಡಲಾಗಿದೆ ಎಂಬುದು ಮಹತ್ವದ್ದಲ್ಲ, ಬದಲಿಗೆ ಕಿರಿಯ ಸಚಿವರೊಬ್ಬರು ಇಂತಹ ಹೇಳಿಕೆಗಳನ್ನು ಆಗಾಗ ನೀಡುತ್ತಿರುವುದು ಮತ್ತು ಪ್ರಧಾನಿ ಅದನ್ನು ತಡೆಯುವ ಪ್ರಯತ್ನವನ್ನೇ ಮಾಡದಿರುವುದು ಮುಖ್ಯವಾಗಿದೆ. ಆರ್‍ಎಸ್‍ಎಸ್ ಓಬಿರಾಯನ ಕಾಲದ ನಿಲುವುಗಳನ್ನು ಹೊಂದಿರುವುದು ಹೊಸ ವಿಷಯವೇನಲ್ಲ ಮತ್ತು ಅದು ಸುದ್ದಿ ಕೂಡ ಆಗಬಾರದು. ಹೊಸ ವಿಷಯ ಮತ್ತು ಹಾಗಾಗಿ ಸುದ್ದಿ ಏನೆಂದರೆ, ಅತ್ಯಂತ ಶಕ್ತ ಎಂದು ಭಾವಿಸಲಾಗಿದ್ದ ಪ್ರಧಾನಿ ವಾಸ್ತವದಲ್ಲಿ ಅತ್ಯಂತ ದುರ್ಬಲರಾಗಿದ್ದಾರೆ.

ಕಳೆದ ಮೇ ತಿಂಗಳಲ್ಲಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದಾಗ ಅವರು ಸ್ವಂತ ನಿಲುವುಗಳನ್ನು ಹೊಂದಿರುವ ವ್ಯಕ್ತಿ ಎಂದು ಭಾವಿಸಲಾಗಿತ್ತು ಮತ್ತು ತಮ್ಮ ಉತ್ತರಾಧಿಕಾರಿಗಿಂತ ಸಂಪೂರ್ಣವಾಗಿ ಭಿನ್ನ ಎಂದು  ಕಾಣಿಸಿಕೊಂಡಿದ್ದರು. ಮನಮೋಹನ್ ಸಿಂಗ್ ಅವರು ಮಾತು ಮತ್ತು ವರ್ತನೆಯಲ್ಲಿ ಸಂಕೋಚ ಹೊಂದಿದ್ದರು. ಅವರಿಗೆ ಯಾವುದೇ ರಾಜಕೀಯ ನೆಲೆ ಇರಲಿಲ್ಲ. ನಿರ್ಧಾರ ಕೈಗೊಳ್ಳುವುದಕ್ಕಾಗಿ ಹೆಚ್ಚಿನ ವಿಚಾರಗಳನ್ನು ಅವರು ಪಕ್ಷದ ಅಧ್ಯಕ್ಷರಿಗೆ ದಾಟಿಸುತ್ತಿದ್ದರು (ಕೆಲವರು ಹೇಳುವಂತೆ ಎಲ್ಲ ವಿಚಾರಗಳನ್ನು). ಆದರೆ, ನರೇಂದ್ರ ಮೋದಿ ಮಾತು ಮತ್ತು ವರ್ತನೆಯಲ್ಲಿ ದೃಢವಾಗಿದ್ದರು. ಗುಜರಾತಿನಲ್ಲಿ ಅವರು ಮೂರು ಚುನಾವಣೆಗಳನ್ನು ಗೆದ್ದಿದ್ದಾರೆ. ಅಲ್ಲಿ ಪಕ್ಷ ಮತ್ತು ಸರ್ಕಾರಕ್ಕೆ ಸಂಬಂಧಿಸಿ ಅವರದ್ದೇ ಏಕೈಕ ಧ್ವನಿಯಾಗಿತ್ತು. ಅವರು ಆರ್‍ಎಸ್‍ಎಸ್ ಅನ್ನು ಕೂಡ ಅಲ್ಲಿ ಮೂಲೆಗುಂಪು ಮಾಡಿದ್ದರು. ಆದರೆ ಇತರ ಬಿಜೆಪಿ ಆಡಳಿತದ ರಾಜ್ಯಗಳಲ್ಲಿನ ಮುಖ್ಯಮಂತ್ರಿಗಳು ಆರ್‍ಎಸ್‍ಎಸ್‌ಗೆ  ಸಂಪೂರ್ಣ ಶರಣಾಗತಿ ತೋರುತ್ತಾರೆ.

2013-14ರ ಚುನಾವಣಾ ಪ್ರಚಾರಗಳು ಈ ನಿಲುವುಗಳನ್ನು ಇನ್ನಷ್ಟು ದೃಢಪಡಿಸುವಂತೆ ಕಂಡವು. ಪಕ್ಷದೊಳಗೆ ತಮಗೆ ಇದ್ದ ವಿರೋಧವನ್ನು ಅವರು ಸಂಪೂರ್ಣವಾಗಿ ಹತ್ತಿಕ್ಕಿದ ರೀತಿ, ನಂತರ ಇತರ ಪಕ್ಷಗಳಿಂದ ಇದ್ದ ವಿರೋಧವನ್ನು ದಮನಿಸಿದ ವಿಧಾನ ಎಲ್ಲವೂ ಅವರ ವ್ಯಕ್ತಿತ್ವದ ಶಕ್ತಿಯ ಪುರಾವೆಗಳು ಎಂಬಂತೆ ನೋಡಲಾಯಿತು. ಭಾರತದ ರಾಜಕಾರಣದಲ್ಲಿ 1971ರಲ್ಲಿ ಇಂದಿರಾ ಗಾಂಧಿ ಅವರ ನಂತರ ಚುನಾವಣೆ ಸಂದರ್ಭದಲ್ಲಿ ಅತ್ಯಂತ ಪ್ರಭಾವಿಯಾಗಿ ವ್ಯಾಪಿಸಿಕೊಂಡ ಇನ್ನೊಬ್ಬ ರಾಜಕಾರಣಿ ಮೋದಿ ಮಾತ್ರ ಎಂಬುದನ್ನು ಅವರ ಟೀಕಾಕಾರರು ಮತ್ತು ಅಭಿಮಾನಿಗಳೆಲ್ಲರೂ ಒಪ್ಪಿಕೊಳ್ಳುತ್ತಾರೆ.

ಮೋದಿ ಮತ್ತು ಅವರ ಪಕ್ಷ ಚುನಾವಣೆಯಲ್ಲಿ ಗೆದ್ದಾಗ, ಅವರ ಸರ್ಕಾರದ ಶೈಲಿ ಹಿಂದಿನ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರಕ್ಕಿಂತ ಬಹಳ ಹೆಚ್ಚು ಗುರಿ ಕೇಂದ್ರಿತವಾಗಿರುತ್ತದೆ ಎಂದೂ ಟೀಕಾಕಾರರು ಮತ್ತು ಅಭಿಮಾನಿಗಳು ಅಂದುಕೊಂಡರು. ಅದರ ಪರಿಣಾಮಗಳ ಬಗ್ಗೆ ಅವರಲ್ಲಿ ಒಮ್ಮತ ಇರಲಿಲ್ಲ. ಗುಜರಾತಿನ ಈ ‘ಸಿಂಹ’ ಆಡಳಿತದ ಮೇಲೆ ತಮ್ಮ ಶೈಲಿಯ ಮೊಹರನ್ನು ಅಧಿಕಾರಯುತವಾಗಿ ಒತ್ತುತ್ತಾರೆ, ಜಡ ಹಿಡಿದ ಅಧಿಕಾರಶಾಹಿಯನ್ನು ನಡುಗಿಸುತ್ತಾರೆ ಎಂದು ಅಭಿಮಾನಿಗಳು ಭಾವಿಸಿದ್ದರು. ಮಾಧ್ಯಮ ಮತ್ತು ರಾಜಕೀಯ ವಿರೋಧವನ್ನು ದಮನಿಸುವ ವಿಷಯದಲ್ಲಿ ಇಂದಿರಾ ಅವರನ್ನು ಅನುಸರಿಸಿ ಮೋದಿ ಅವರು ನಿರಂಕುಶಾಧಿಕಾರಿ ಆಗಬಹುದು ಎಂಬ ಆತಂಕವನ್ನು ಟೀಕಾಕಾರರು ವ್ಯಕ್ತಪಡಿಸಿದ್ದರು.

ಮೋದಿ ಪ್ರಧಾನಿಯಾದ ಮೊದಲ ವಾರಗಳು ಮತ್ತು ತಿಂಗಳುಗಳಲ್ಲಿ ಸಚಿವರು ತಮ್ಮ ಮುಖಂಡನ ಬಗ್ಗೆ ಭಯಭೀತರಾಗಿದ್ದಾರೆ ಎಂಬ ಸುದ್ದಿಗಳು ದೆಹಲಿಯಲ್ಲಿ ಅನುರಣನಗೊಳ್ಳುತ್ತಿದ್ದವು. ತಮ್ಮ ಮಗನ ಪದವಿ ಪ್ರದಾನ ಕಾರ್ಯಕ್ರಮಕ್ಕೆ ಹೋಗಲು ಒಬ್ಬ ಸಚಿವರಿಗೆ ಅನುಮತಿ ನಿರಾಕರಿಸಲಾಯಿತು, ರಜಾದಿನಗಳಲ್ಲಿ ಯಾವ ರೀತಿ ಬಟ್ಟೆ ಧರಿಸಬೇಕು ಎಂದು ಇನ್ನೊಬ್ಬ ಸಚಿವರಿಗೆ ಹೇಳಲಾಯಿತು ಎಂಬ ಸುದ್ದಿಗಳು ದೆಹಲಿಯಲ್ಲಿ ಹರಿದಾಡುತ್ತಿದ್ದವು. ವದಂತಿಗಳು ಮತ್ತು ಅದ್ಭುತ ಊಹೆಗಳ ನಾಡು ದೆಹಲಿ; ಹಾಗಾಗಿಯೇ ಈ ಕತೆಗಳು (ಮತ್ತು ಇಂತಹ ಇತರ ಕತೆಗಳು) ಈ ಸಮೃದ್ಧ ಕಲ್ಪನೆಯ ಫಲವಾಗಿರಬಹುದು. ಇವುಗಳ ಹರಿದಾಟ (ಮತ್ತು ಅವುಗಳಿಗೆ ತಕ್ಷಣದ ಸ್ವೀಕೃತಿ) ಪ್ರಧಾನಿ ತಮ್ಮ ಸಹೋದ್ಯೋಗಿಗಳಿಂದ ಅಚಲವಾದ ವಿಧೇಯತೆಯನ್ನು ಹೊಂದಿದ್ದಾರೆ ಎಂಬುದನ್ನು ಸೂಚಿಸುತ್ತಿದ್ದವು.

ಹಲವು ದಶಕಗಳ ಸಾರ್ವಜನಿಕ ಸೇವೆಯ ಅನುಭವ ಹೊಂದಿದ್ದು ಹಿಂದಿನ ಯುಪಿಎ, ಕಾಂಗ್ರೆಸ್ ಮತ್ತು ತೃತೀಯ ರಂಗದ ಸರ್ಕಾರಗಳಲ್ಲಿ ಕೆಲಸ ಮಾಡಿದ್ದ ಹಿರಿಯ ಅಧಿಕಾರಿಯೊಬ್ಬರನ್ನು 2014ರ ಮೇ ತಿಂಗಳಲ್ಲಿ ನಾನು ಭೇಟಿಯಾಗಿದ್ದೆ. ಸಚಿವರು ತಮಗೆ ಇಷ್ಟಬಂದ ಹಾಗೆ ವರ್ತಿಸುವ ಮೂಲಕ ಮನಮೋಹನ್ ಸಿಂಗ್ ಅವರ ಆಡಳಿತ ಅಧಿಕಾರ ಕೇಂದ್ರ ರಹಿತವಾಗಿತ್ತು; ಆದರೆ ನರೇಂದ್ರ ಮೋದಿ  ನೇತೃತ್ವದ ಸರ್ಕಾರ ಸಚಿವರಿಗೆ ನಿರ್ಧಾರಗಳನ್ನು ಕೈಗೊಳ್ಳುವ ಅಥವಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ವಿವೇಚನಾಧಿಕಾರ ಮತ್ತು ಸ್ವಾಯತ್ತೆ ಇಲ್ಲದ ಕೇಂದ್ರೀಕೃತ ವ್ಯವಸ್ಥೆ ಆಗುವ ಆತಂಕ ಇದೆ ಎಂದು ಆ ಅಧಿಕಾರಿ ನನಗೆ ಹೇಳಿದರು.

16 ತಿಂಗಳ ಅಂತರದ ಬಳಿಕ ಅದೇ ಅಧಿಕಾರಿಯನ್ನು ಭೇಟಿಯಾದಾಗ, ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದ ಹಾಗೆಯೇ ಮೋದಿ ನೇತೃತ್ವದ ಸರ್ಕಾರವೂ ಗುರಿ ರಹಿತವಾಗಿದೆ ಎಂದು ಅವರು ಹೇಳಿದರು. ಈಗಲೂ ಸಚಿವರು ತಮಗೆ ಬೇಕಾದ್ದನ್ನು ಹೇಳುತ್ತಿದ್ದಾರೆ ಮತ್ತು ಅಧಿಕಾರಿಗಳು ಏನನ್ನೂ ಮಾಡುತ್ತಿಲ್ಲ.

ಯುಪಿಎ ಅವಧಿಯಲ್ಲಿ ಇಂಗ್ಲಿಷ್ ಮಾತನಾಡುವ, ವಿದೇಶದಲ್ಲಿ ಅಥವಾ ಸೇಂಟ್ ಸ್ಟೀಫನ್‌ನಲ್ಲಿ ಕಲಿತ ಸಚಿವರು ವಿವಾದಾತ್ಮಕ ಹೇಳಿಕೆಗಳನ್ನು ಹೆಚ್ಚು ಹೆಚ್ಚಾಗಿ ನೀಡುತ್ತಿದ್ದರು. ಈಗಿನ ಆಡಳಿತದಲ್ಲಿ ಆರ್‍ಎಸ್‍ಎಸ್‌ಗೆ  ನಿಕಟವಾಗಿರುವ ರಾಜನಾಥ ಸಿಂಗ್ ಮತ್ತು ಮಹೇಶ್ ಶರ್ಮಾ ಅಂಥವರು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಹಿಂದಿನ ಮತ್ತು ಈಗಿನ ಸರ್ಕಾರದಲ್ಲಿ ಒಂದು ಸಮಾನ ಅಂಶ ಇದೆ- ಪ್ರಧಾನಿ ತಮ್ಮನ್ನು ಕರೆದು ಪ್ರಶ್ನಿಸುವುದಿಲ್ಲ ಎಂಬುದನ್ನು ಪ್ರಧಾನಿಗೆ ಮುಜುಗರವಾಗುವಂತಹ ಹೇಳಿಕೆಗಳನ್ನು ನೀಡುವ ಸಚಿವರು ಅರಿತುಕೊಂಡಿದ್ದಾರೆ. 

ಅಧಿಕಾರದಲ್ಲಿ ಒಂದೂವರೆ ವರ್ಷ ಪೂರೈಸಿದ ಈ ಹೊತ್ತಿನಲ್ಲಿ ಮೋದಿ ಅವರು ಕೂಡ ಇತರ ವಿಷಯಗಳಲ್ಲಿಯೂ ತಮ್ಮ ಉತ್ತರಾಧಿಕಾರಿಯನ್ನೇ ಹೋಲುತ್ತಿದ್ದಾರೆ ಎಂಬುದನ್ನು ಗಮನಿಸಬಹುದು. ಅಧಿಕಾರದ ಆರಂಭದ ದಿನಗಳಲ್ಲಿ ಮನಮೋಹನ್ ಸಿಂಗ್ ಅವರೂ ಹಲವು ದಿಟ್ಟ ನಿರ್ಧಾರಗಳನ್ನು ಕೈಗೊಂಡರು- ಆಡಳಿತವನ್ನು ಆಧುನಿಕಗೊಳಿಸಲು ಆಡಳಿತಾತ್ಮಕ ಸುಧಾರಣಾ ಆಯೋಗ ಮತ್ತು ಶಿಕ್ಷಣವನ್ನು ಆಧುನಿಕಗೊಳಿಸಲು ಜ್ಞಾನ ಆಯೋಗದಂತಹ ಕೆಲವು ಘೋಷಣೆಗಳು. ತಮ್ಮದೇ ಸರ್ಕಾರದ ಸಚಿವರು ಈ ಕ್ರಮಗಳನ್ನು ಪ್ರಶ್ನಿಸಿದಾಗ ಮನಮೋಹನ್ ಹಿಂದೆ ಸರಿದರು ಮತ್ತು ಅವರ ಕ್ರಮಗಳು ವ್ಯರ್ಥವಾದವು. ಮೋದಿ ಅವರು ಕೂಡ ಭಾರಿ ಸಂಭ್ರಮದಲ್ಲಿ ‘ಸ್ವಚ್ಛ ಭಾರತ ಅಭಿಯಾನ’ ಮತ್ತು ‘ಬೇಟಿ ಬಚಾವೊ, ಬೇಟಿ ಪಡಾವೊ’ ಆಂದೋಲನಗಳನ್ನು ಘೋಷಿಸಿದರು. ಆದರೆ ಈ ಆಂದೋಲನಗಳ ಅನುಷ್ಠಾನ ಯಾವ ರೀತಿಯಲ್ಲಿದೆ ಎಂಬುದನ್ನು ನೋಡುವ ಗೋಜಿಗೆ ಯಾರೂ ಹೋಗಲಿಲ್ಲ. ಈ ಕ್ಷೇತ್ರದಲ್ಲಿ ಎಷ್ಟು ಕೆಲಸ ಆಗಬೇಕಿದೆ ಎಂಬುದರತ್ತ ತೀವ್ರವಾಗಿರುವ ಡೆಂಗಿ ಸಾಂಕ್ರಾಮಿಕ ಬೊಟ್ಟು ತೋರುತ್ತಿದೆ.

ಮೋದಿ ಮತ್ತು ಮನಮೋಹನ್ ಸಿಂಗ್ ಅವರ ನಡುವೆ ಹೋಲಿಕೆ ಇರುವ ಇನ್ನೊಂದು ವಿಷಯ ಇವರಿಬ್ಬರ ವಿದೇಶ ಪ್ರವಾಸ ಮೋಹ. ಪ್ರಧಾನಿಯಾದ ನಂತರ ಮೋದಿ ಅವರು 39 ದೇಶಗಳಿಗೆ ಭೇಟಿ ನೀಡಿದ್ದಾರೆ. ನಮ್ಮ ಪ್ರಧಾನಿ, ಜಗತ್ತಿನ ಇತರ ನಾಯಕರೊಂದಿಗೆ ಸಂಪರ್ಕದಲ್ಲಿರುವುದು ಅಗತ್ಯ ನಿಜ. ಆದರೆ ಸಿಂಗ್ ಮತ್ತು ಮೋದಿ ಇಬ್ಬರೂ ಪ್ರವಾಸದ ಕಾರಣಕ್ಕಾಗಿಯೇ ಪ್ರವಾಸವನ್ನು ಆನಂದಿಸುತ್ತಾರೆ. ಇಬ್ಬರೂ ದೇಶದಲ್ಲಿ ಆಡಳಿತವನ್ನು ಸುಧಾರಿಸುವುದಕ್ಕಾಗಿ ಕೆಲಸ ಮಾಡುವ ಬದಲಿಗೆ ವಿದೇಶ ಪ್ರವಾಸಕ್ಕೆ ಆದ್ಯತೆ ನೀಡುತ್ತಾರೆ.

ಸಿಂಗ್ ಅವರಿಗೆ ಹೇಗೋ ಮೋದಿ ಅವರಿಗೂ ತಾಯ್ನಾಡಿನಲ್ಲಿ ನಿರಾಕರಿಸಲಾಗಿರುವ ಕೃತಜ್ಞತೆ ದೊರೆಯುತ್ತಿದೆ ಮತ್ತು ಅವರ ಅಹಂ ಅನ್ನು ಎತ್ತಿ ಹಿಡಿಯುವ ಕೆಲಸವಾಗುತ್ತಿದೆ. ಜಾರ್ಜ್ ಡಬ್ಲ್ಯು. ಬುಷ್ ಅವರು ‘ಗೆಳೆಯ’ ಎಂದು ಕರೆದಿರುವುದನ್ನು ಮತ್ತು ಬರಾಕ್ ಒಬಾಮ ಅವರು ‘ಸಂತನಂತಹ ಮುತ್ಸದ್ದಿ’ ಎಂದು ಕರೆದಿರುವುದನ್ನು ಮನಮೋಹನ್ ಸಿಂಗ್ ಅವರು ಬಹುವಾಗಿ ಆನಂದಿಸಿದ್ದಾರೆ. ಭ್ರಮಾಧೀನ ಅನಿವಾಸಿ ಭಾರತೀಯರ ಜಯಕಾರದ ಮೊರೆತ, ಭಾರತ ಮೂಲದ ಜನರು ತಮ್ಮನ್ನು ಪ್ರೀತಿಸಿದಷ್ಟು ಬೇರಾವ ನಾಯಕನನ್ನೂ ಪ್ರೀತಿಸಿಲ್ಲ ಎಂದು ಮೋದಿ ಅವರು ಭಾವಿಸುವಂತೆ ಮಾಡಿದೆ (ಮ್ಯಾಡಿಸನ್ ಸ್ಕ್ವೇರ್‌ನಲ್ಲಿ ಅವರು ಇದನ್ನು ಹೇಳಿದ್ದಾರೆ).

ಒಂದು ವಿಚಾರದಲ್ಲಿ ಮೋದಿ ಅವರು ಭಿನ್ನವಾಗಿದ್ದಾರೆ. ಮೋದಿ ಅವರಿಗಿಂತ ಹಿಂದೆ ಇದ್ದವರು ಮಾತುಗಾರರಲ್ಲ, ಆದರೆ ಮೋದಿ ಅವರು ಅದ್ಭುತ ವಾಗ್ಮಿ. ಸಿಂಗ್ ಅವರು ತಮ್ಮ ವಿದ್ವತ್ತಿನಿಂದ ಖಾಸಗಿಯಾಗಿ ವಿದೇಶಿ ನಾಯಕರ ಮೆಚ್ಚುಗೆ ಗಳಿಸುತ್ತಿದ್ದರು. ಮಾತುಗಾರರಲ್ಲ ಎಂಬ ಕಾರಣಕ್ಕಾಗಿಯೇ ಸಿಂಗ್ ಅವರು ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ ದೊಡ್ಡ ಪಾತ್ರ ವಹಿಸಲಿಲ್ಲ. ಹಾಗೆಯೇ ತಮ್ಮ ಪಕ್ಷದ ತಾರಾ ವಾಗ್ಮಿಯಾಗಿರುವ ಮೋದಿ ಅವರು ಮಹಾರಾಷ್ಟ್ರ, ಹರಿಯಾಣ, ಜಮ್ಮು ಮತ್ತು ಕಾಶ್ಮೀರಗಳಲ್ಲಿ ನಡೆದ ಚುನಾವಣಾ ಪ್ರಚಾರದ ಮುನ್ನೆಲೆಯಲ್ಲಿದ್ದರು ಮತ್ತು ಈಗ ಬಿಹಾರದ ಚುನಾವಣಾ ಪ್ರಚಾರಕ್ಕೂ ಅವರದ್ದೇ ನೇತೃತ್ವ.

ವಿದೇಶಗಳಲ್ಲಿ ಕಳೆದ ಸಮಯವನ್ನು ಕೂಡಿಸಿ ದೇಶದ ಬೇರೆಬೇರೆ ರಾಜ್ಯಗಳಲ್ಲಿ ಪ್ರಚಾರಕ್ಕೆ ವ್ಯಯ ಮಾಡಿದ ಸಮಯದೊಂದಿಗೆ ಹೋಲಿಸಿದಾಗ ಮನಮೋಹನ್ ಅವರಿಗಿಂತಲೂ ಮೋದಿ ಅವರೇ ಹೆಚ್ಚು ಗೈರು ಪ್ರಧಾನಿ. ದೆಹಲಿಯಲ್ಲಿರುವುದೇ ಅಪರೂಪವಾದರೆ ತಮ್ಮ ಸಚಿವರು ಏನು ಹೇಳುತ್ತಿದ್ದಾರೆ ಮತ್ತು ಏನು ಮಾಡುತ್ತಿದ್ದಾರೆ ಎಂಬುದರ ಮೇಲೆ ನಿಗಾ ಇಡುವುದು ಮೋದಿ ಅವರಿಗೆ ಹೇಗೆ ಸಾಧ್ಯ? ಅವರ ಸರ್ಕಾರ ದಿಕ್ಕು ರಹಿತವಾಗಿದೆ ಎಂಬುದು ಎದ್ದು ಕಾಣಿಸುತ್ತಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಮನಮೋಹನ್ ಅವರದ್ದು ಅತಿ ಕಡಿಮೆ ಮಾತು ಮತ್ತು ಇನ್ನೂ ಕಡಿಮೆ ಕೆಲಸ; ಮೋದಿ ಅವರದ್ದು ಭಾರಿ ಭಾರಿ ಮಾತು ಮತ್ತು ಅಷ್ಟೇ ಪ್ರಮಾಣದಲ್ಲಿ ಕಡಿಮೆ ಕೆಲಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT