ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಜಾಕೆಟ್‌ನಲ್ಲಿ ನೆಹರೂ!

Last Updated 28 ಮೇ 2016, 19:30 IST
ಅಕ್ಷರ ಗಾತ್ರ

ಸಾರ್ವಜನಿಕ ಭಾಷಣ, ನಾಯಕತ್ವ, ವಿದೇಶಾಂಗ ನೀತಿ, ಮಹತ್ವದ ವಿಷಯಗಳಲ್ಲಿ ಸಂಪೂರ್ಣ ಹಿಡಿತ ಸಾಧಿಸುವುದು ಮತ್ತು ಆಕರ್ಷಕ ದಿರಿಸು ಧರಿಸುವ ವಿಷಯದಲ್ಲಿ ಮೋದಿ ಹಾಗೂ ನೆಹರೂ ಅವರಲ್ಲಿ ಸಾಕಷ್ಟು ಸಾಮ್ಯತೆಗಳು ಕಂಡು ಬರುತ್ತಿವೆ

ನಾನು ಈ ವಾರದ ಅಂಕಣ ಬರೆಯಲು ಆರಂಭಿಸಿದಾಗ, ನರೇಂದ್ರ ಮೋದಿ ಅವರಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ವ್ಯಕ್ತಿತ್ವದ ಪ್ರಭಾವ ಕಂಡು ಬರುತ್ತಿರುವುದರ ಬಗ್ಗೆ ನವ ಮಾಧ್ಯಮಗಳಾದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಿರುವುದು ನನ್ನ ಗಮನಕ್ಕೆ ಬಂದಿತು.

ನೆಹರೂ ವಿಚಾರಧಾರೆಯಂತೆಯೇ, ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರಿ ಸ್ವಾಮ್ಯ ಮತ್ತು ಅಲಿಪ್ತ ಚಳವಳಿಯಲ್ಲಿ ದೃಢ ನಂಬಿಕೆ ಹೊಂದಿದವರಾಗಿದ್ದಾರೆ. ಆಡಳಿತ ವೈಖರಿ ಮತ್ತು ವೈಯಕ್ತಿಕ ನಡೆ ನುಡಿಯಲ್ಲಿಯೂ ಮೋದಿ ಅವರಲ್ಲಿ ನೆಹರೂ ಪ್ರಭಾವದ ಛಾಯೆ ಕಂಡು ಬರುತ್ತಿದೆ ಎನ್ನುವುದಕ್ಕೆ ಹಲವಾರು ನಿದರ್ಶನಗಳಿವೆ.

ಮೋದಿ ನೇತೃತ್ವದ ಬಿಜೆಪಿ ಪಕ್ಷವು ನೆಹರೂ ವಿಚಾರಧಾರೆ ಮತ್ತು ಪರಂಪರೆಯನ್ನು ಸಂಪೂರ್ಣವಾಗಿ ನಾಶ ಮಾಡುವ ಒಂದಂಶದ ಕಾರ್ಯಕ್ರಮ ಹಮ್ಮಿಕೊಂಡಿದೆ. ಶಾಲಾ ಪಠ್ಯಪುಸ್ತಕಗಳಿಂದ ನೆಹರೂ ಹೆಸರು ಅಳಿಸಿ ಹಾಕಲಾಗುತ್ತಿದೆ.

ನೆಹರೂ ಅವರ ಹೆಸರಿನಲ್ಲಿ ಕಟ್ಟಿದ ಸಂಸ್ಥೆಗಳನ್ನು ಕೇಸರೀಕರಣ ಮಾಡಲಾಗುತ್ತಿದೆ. ದೇಶ ಸದ್ಯಕ್ಕೆ ಎದುರಿಸುತ್ತಿರುವ ಸಮಸ್ಯೆಗಳಿಗೆಲ್ಲ ನೆಹರೂ ಅವರೇ ಕಾರಣ ಎನ್ನುವ ವಿಚಾರಧಾರೆಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌್‌) ಪ್ರಚುರಪಡಿಸಲು ಹೆಣಗುತ್ತಿದೆ.

ವಸ್ತುಸ್ಥಿತಿ ಹೀಗಿರುವಾಗ ನೆಹರೂ ಅವರ ಚಿಂತನೆಗಳಿಂದ ಮೋದಿ ಪ್ರಭಾವಿತರಾಗಿದ್ದಾರೆ ಎಂದರೆ ಹೇಗೆ ಎನ್ನುವ ಅನುಮಾನ ಅನೇಕರನ್ನು ಕಾಡುತ್ತಿರಬಹುದು.

ಮಹಾತ್ಮ ಗಾಂಧಿ ಹತ್ಯೆಯಿಂದ ಹಿಡಿದು, ಕಾಶ್ಮೀರ, ಟಿಬೆಟ್‌ ಗಡಿ ಸಮಸ್ಯೆವರೆಗೆ, ಬಡತನದಿಂದ ಹಿಡಿದು ವಂಶಾಡಳಿತ ರಾಜಕಾರಣದವರೆಗೆ ನೆಹರೂ ಅವರೇ ಕಾರಣ ಎಂದು ಸಂಘ ಪರಿವಾರವು ಉದ್ದಕ್ಕೂ ಆರೋಪಿಸುತ್ತಲೇ ಬಂದಿದೆ. ನೆಹರೂ ಮತ್ತು ಅವರ ವಿಚಾರಧಾರೆ ವಿರುದ್ಧ ಸಂಘ ಪರಿವಾರ ಯುದ್ಧವನ್ನೇ ಸಾರಿದೆ.

ಫೇಸ್‌ಬುಕ್‌ನಲ್ಲಿ ನೆಹರೂ ಅವರನ್ನು ಹೊಗಳಿದ್ದಕ್ಕೆ ಐಎಎಸ್‌ ಅಧಿಕಾರಿಯೊಬ್ಬರನ್ನು ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯ ಸರ್ಕಾರವೊಂದು ವರ್ಗಾವಣೆ ಮಾಡಿದೆ. ನೆಹರೂ ಅವರ 52ನೇ ಪುಣ್ಯತಿಥಿ ಸಂದರ್ಭದಲ್ಲಿ ಈ ಅಂಕಣ ಬರೆಯುತ್ತಿರುವಾಗ ಇದನ್ನೆಲ್ಲ ಮತ್ತೆ ನೆನಪು ಮಾಡಿಕೊಳ್ಳಬೇಕಾಯಿತು.

ನೆಹರೂ ವಾದವು ನಾಲ್ಕು ಆಧಾರಸ್ತಂಭಗಳನ್ನು ಒಳಗೊಂಡಿದೆ.  ಅವು ಧರ್ಮನಿರಪೇಕ್ಷತೆ, ಸಾಮಾಜಿಕ ಉದಾರೀಕರಣ, ಮಿಶ್ರ ಆರ್ಥಿಕತೆಯ ಸಮಾಜವಾದ ಮತ್ತು ಅಲಿಪ್ತ ಚಳವಳಿ. ಇವುಗಳ ಪೈಕಿ ಮೋದಿ ಸರ್ಕಾರಕ್ಕೆ ಯಾವುದು ಪ್ರತಿಕೂಲವಾಗಿದೆ ಮತ್ತು ಈ ನಾಲ್ಕರಲ್ಲಿ ಯಾವುದು ಈಗಲೂ ಉಳಿದುಕೊಂಡಿದೆ ಎನ್ನುವ ಪ್ರಶ್ನೆಯೂ ಇಲ್ಲಿ ಉದ್ಭವಿಸುತ್ತದೆ.

ನೆಹರೂ ವಿಚಾರಧಾರೆಯ ನಾಲ್ಕು ಆಧಾರಸ್ತಂಭಗಳಲ್ಲಿ ಎರಡು ಈಗಾಗಲೇ ನೆಲಕಚ್ಚಿವೆ ಅಥವಾ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ ಪ್ರಧಾನಿಗಳೇ ಅವುಗಳನ್ನು ದುರ್ಬಲಗೊಳಿಸಿದ್ದಾರೆ. ಪಿ.ವಿ.ನರಸಿಂಹರಾವ್‌ ಅವರು ನೆಹರೂ ಅವರ ಸಮಾಜವಾದದ ವ್ಯಾಖ್ಯಾನವನ್ನೇ ಬದಲಿಸುವಲ್ಲಿ ಸಫಲರಾಗಿದ್ದಾರೆ. ಅದನ್ನು ನಾವೆಲ್ಲ ‘ಮೃದು ಹಿಂದುತ್ವ’ ಎನ್ನಬಹುದು.

ನೆಹರೂ ಮೊಮ್ಮಗ ರಾಜೀವ್‌ ಗಾಂಧಿ ಅವರು 1989ರಲ್ಲಿ ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ ಸ್ಥಳದ ಬೀಗ ತೆರವುಗೊಳಿಸಿ ರಾಮರಾಜ್ಯ ನಿರ್ಮಾಣದ ಭರವಸೆ ನೀಡುವ ಮೂಲಕ ತಮ್ಮ ಚುನಾವಣಾ ಪ್ರಚಾರ ಆರಂಭಿಸಿದ್ದರು. ರಾಜೀವ್‌ ಹಾಕಿದ್ದ ಇಂತಹ ತಳಹದಿಯನ್ನು ಬಳಸಿಕೊಂಡ ರಾವ್‌, ಮೃದು ಹಿಂದುತ್ವ ನೀತಿಯನ್ನು ಬಲಪಡಿಸಿದ್ದರು.

ನೆಹರೂ ಅವರ ಸಮಾಜವಾದದ ಅವನತಿಗೆ ರಾವ್‌ ಶ್ರೀಕಾರ ಹಾಕಿದ್ದರು. ಅವರ ನಂತರ ಬಂದ ಮನಮೋಹನ್‌ ಸಿಂಗ್‌  ಹಣಕಾಸು ಸಚಿವರಾಗಿ, ಪ್ರಧಾನಿಯಾಗಿ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರ ಮೂಗಿನಡಿಯೇ ಸಮಾಜವಾದವನ್ನು ಸಂಪೂರ್ಣವಾಗಿ ನಾಶ ಮಾಡಿದರು.
ದೇಶದ ವಿದೇಶಾಂಗ ನೀತಿಯೂ ನರಸಿಂಹ ರಾವ್‌ ಅವರ ಕಾಲದಲ್ಲಿ ಮಹತ್ವದ ತಿರುವು ಪಡೆಯಿತು.

ಆರಂಭದಲ್ಲಿ ಅವರು ತಪ್ಪುಗಳನ್ನು ಎಸಗಿದರು. ಅಂದಿನ ಸೋವಿಯತ್ ಒಕ್ಕೂಟದ ಸಿಕ್ಕುಗಳನ್ನು ಅರ್ಥೈಸಿಕೊಳ್ಳಲು ವಿಫಲರಾದರು. ಆನಂತರ ತ್ವರಿತವಾಗಿ ಇಸ್ರೇಲ್‌ ಜತೆಗೆ ರಾಜತಾಂತ್ರಿಕ ಬಾಂಧವ್ಯ ಸುಧಾರಿಸಿಕೊಂಡರು. ಇದು ಕಾಂಗ್ರೆಸ್‌ ಪಕ್ಷದಲ್ಲಿನ ನೆಹರೂವಾದಿಗಳಾದ ಮಣಿಶಂಕರ್‌ ಅಯ್ಯರ್‌ ಅಂತಹವರಲ್ಲಿ ತೀವ್ರ ಆಕ್ರೋಶ ಮೂಡಿಸಿತ್ತು.

ಆನಂತರ ಅಟಲ್‌ ಬಿಹಾರಿ ವಾಜಪೇಯಿ ಅವರು ತಮ್ಮ ಆರು ವರ್ಷಗಳ ಅಧಿಕಾರಾವಧಿಯಲ್ಲಿ ನೆಹರೂ ಅವರ ಬಗ್ಗೆ ಕೆಟ್ಟದಾಗಿ ಮಾತನಾಡದಿದ್ದರೂ, ಸರ್ಕಾರಿ ಸ್ವಾಮ್ಯದ 11 ಪ್ರಮುಖ ಉದ್ದಿಮೆಗಳನ್ನು ಮತ್ತು ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಐಟಿಡಿಸಿ) ವಶದಲ್ಲಿದ್ದ 30 ಹೋಟೆಲ್‌ಗಳನ್ನು ಖಾಸಗೀಕರಣ ಮಾಡಿದರು.

ನೆಹರೂ ಅವರು ಸಮಾಜವಾದವನ್ನು ರಾಷ್ಟ್ರೀಯ ಆರ್ಥಿಕ ಸಿದ್ಧಾಂತವನ್ನಾಗಿ ಅಭಿವೃದ್ಧಿಪಡಿಸಿದ್ದರು. ಅವರ ನಂತರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ಕ್ರಮೇಣ ಈ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತ ಬಂದವು.

ತುರ್ತು ಪರಿಸ್ಥಿತಿ ನಂತರ ನಡೆದ ಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರನ್ನು ಸೋಲಿಸಿ ಅಧಿಕಾರಕ್ಕೆ ಬಂದ, ಬಿಜೆಪಿಯ ಮೂಲ ರೂಪವಾದ ಜನಸಂಘವನ್ನೂ ಒಳಗೊಂಡಿದ್ದ ಜನತಾ ಪಕ್ಷವು ತನ್ನ ಅಧಿಕಾರಾವಧಿಯಲ್ಲಿ ಆಸ್ತಿ ಹಕ್ಕು ಕೈಬಿಟ್ಟು,

ಸಂವಿಧಾನದ ಪೀಠಿಕೆಯಲ್ಲಿ ಜಾತ್ಯತೀತವಾದ ಮತ್ತು ಸಮಾಜವಾದವನ್ನು ಉಳಿಸಿಕೊಳ್ಳಲು ಒಪ್ಪಿಕೊಂಡಿತು. ಕೋಕ್‌ ಮತ್ತು ಐಬಿಎಂ ಸಂಸ್ಥೆಗಳನ್ನು ದೇಶದಿಂದ ಹೊರ ಹಾಕಿತು. ಸರ್ಕಾರಿ ಸ್ವಾಮ್ಯದ ಉದ್ದಿಮೆಯಡಿ ‘77’ ಹೆಸರಿನ ಸರ್ಕಾರಿ ಬ್ರ್ಯಾಂಡ್‌ನ ತಂಪು ಪಾನೀಯ ತಯಾರಿಕೆಗೆ ಕೈಹಾಕಿತು.

ಮಾರುಕಟ್ಟೆ ಆಧಾರಿತ ಆರ್ಥಿಕತೆ ಪರ ಒಲವು ಹೊಂದಿದ್ದರೂ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು, ತಾವೊಬ್ಬ ನೆಹರೂವಾದಿಗಿಂತ ಗಾಂಧಿವಾದಿ ಎಂದು ಜಗತ್ತಿಗೆ ಮನವರಿಕೆ ಮಾಡಿಕೊಡಲು ಹೆಣಗಿದರು.

ಈಗ ಮತ್ತೆ ವಾಸ್ತವಕ್ಕೆ ಬರೋಣ. ಕೇಂದ್ರ ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ ‘ವಾಲ್‌ ಸ್ಟ್ರೀಟ್‌ ಜರ್ನಲ್‌’ಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಸಂದರ್ಶನದ ಮೇಲೆ ಕಣ್ಣಾಡಿಸಿದರೆ, ಮೋದಿ ಅವರ ಚಿಂತನೆ ಯಾವ ದಿಕ್ಕಿನಲ್ಲಿ ಸಾಗಿದೆ ಎನ್ನುವುದರ ಬಗ್ಗೆ ನಿರ್ಣಯಕ್ಕೆ ಬರಬಹುದಾಗಿದೆ.

ಪ್ರಧಾನಿಯೊಬ್ಬರು ನಾಲ್ಕು ದಶಕಗಳ ನಂತರ ಸಮ್ಮಿಶ್ರ ಆರ್ಥಿಕತೆ ಮತ್ತು ಸರ್ಕಾರಿ ವಲಯಕ್ಕೆ ಮಹತ್ವ ನೀಡಿರುವುದು ಈ  ಸಂದರ್ಶನದಿಂದ ವೇದ್ಯವಾಗಲಿದೆ. ಹೇಳಿದ್ದನ್ನು ಮಾಡಿ ತೋರಿಸುವವರು ಎನ್ನುವುದು ಮೋದಿ ಅವರ ಕಾರ್ಯವೈಖರಿ ಗಮನಿಸಿದವರಿಗೆಲ್ಲ ಮನವರಿಕೆಯಾಗುತ್ತದೆ.

ವಾಜಪೇಯಿ ಅವರು ಸರ್ಕಾರಿ ಸ್ವಾಮ್ಯದ ಉದ್ದಿಮೆಗಳನ್ನು ಅರುಣ್‌ ಶೌರಿ ಅವರ ಮೇಲ್ವಿಚಾರಣೆಯಲ್ಲಿ ಖಾಸಗಿಯವರಿಗೆ ಮಾರಾಟ ಮಾಡಿದರೂ, ನರೇಂದ್ರ ಮೋದಿ ನೇತೃತ್ವದಲ್ಲಿನ ಗುಜರಾತ್‌ ರಾಜ್ಯ ಸರ್ಕಾರ ಮಾತ್ರ ತನ್ನ ಯಾವುದೇ ಉದ್ದಿಮೆಗಳನ್ನು ಖಾಸಗಿಯವರಿಗೆ ಹಸ್ತಾಂತರಿಸಿರಲಿಲ್ಲ.

ತೈಲ ಮತ್ತು ನೈಸರ್ಗಿಕ ಅನಿಲ ಉದ್ದಿಮೆ ಮೇಲಿನ ಸರ್ಕಾರದ ನಿಯಂತ್ರಣ ಬಿಟ್ಟುಕೊಡಲು ಮೋದಿ ಆಗ ಇಚ್ಛಿಸಿರಲಿಲ್ಲ. ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾವನ್ನು ಖಾಸಗಿಯವರಿಗೆ ಮಾರಲು ವಾಜಪೇಯಿ ಇಚ್ಛಿಸಿದ್ದರೂ ಅದು ಕಾರ್ಯರೂಪಕ್ಕೆ ಬರಲಿಲ್ಲ.

ನೆಹರೂ ಅವರಿಂದ ‘ಆಧುನಿಕ ಭಾರತದ ದೇವಾಲಯಗಳು’ ಎಂದು ಗುರುತಿಸಿಕೊಂಡಿದ್ದ ಸರ್ಕಾರಿ ಸ್ವಾಮ್ಯದ ಬೃಹತ್‌ ಉದ್ದಿಮೆಗಳು ಕಾಲಕ್ರಮೇಣ ನಷ್ಟಕ್ಕೆ ಗುರಿಯಾಗಿದ್ದವು. ಮೂರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಈ ನಷ್ಟಪೀಡಿತ ಉದ್ದಿಮೆಗಳಲ್ಲಿ ಸರ್ಕಾರ ಹಣ ತೊಡಗಿಸಲು ಮುಂದಾಗಿದೆ.

ಐಸಿಐಸಿಐ ಆರಂಭದಲ್ಲಿ ಖಾಸಗಿ ಸಂಸ್ಥೆಯಾಗಿತ್ತು. ಆನಂತರ ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಯ ನೆರವಿನಿಂದ ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್‌ ಆಗಿ ಬೆಳೆದಿದೆ. ಸರ್ಕಾರಿ ಸ್ವಾಮ್ಯದ ಯುನಿಟ್‌ ಟ್ರಸ್ಟ್‌ ಆಫ್‌ ಇಂಡಿಯಾ, ಖಾಸಗಿ ವಲಯದಲ್ಲಿ ಯುಟಿಐ ಬ್ಯಾಂಕ್‌ ಮತ್ತು ಯುಟಿಐ ಅಸೆಟ್‌ ಮ್ಯಾನೇಜ್‌ಮೆಂಟ್‌ ಕಂಪೆನಿಗಳು ಅಸ್ತಿತ್ವಕ್ಕೆ ಬರಲು ನೆರವಾಗಿದೆ.

ಇವೆಲ್ಲ ಮೋದಿ ಅವರ ಪೂರ್ವಾಧಿಕಾರಿಗಳ ಅಧಿಕಾರಾವಧಿಯಲ್ಲಿ ನಡೆದಿವೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಇಂತಹ ಯಾವುದೇ ಕ್ರಮಗಳಿಗೆ ಅನುಮತಿ ನೀಡಿಲ್ಲ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿನ ತನ್ನ  ಬಂಡವಾಳದ ಪಾಲನ್ನು ಕಡಿಮೆ ಮಾಡಲೂ ಮುಂದಾಗಿಲ್ಲ.

ಭಾರತವು ಅಲಿಪ್ತ ಚಳವಳಿಗೆ ಬದ್ಧವಾಗಿರುವುದನ್ನೂ ಮೋದಿ ತಮ್ಮ ಸಂದರ್ಶನದಲ್ಲಿ ಪುನರುಚ್ಚರಿಸಿದ್ದಾರೆ. ರಾಜಕೀಯ ಉದ್ದೇಶ ಸಾಧನೆಗೆ ಮೋದಿ ಹೀಗೆ ಹೇಳಿದ್ದಾರೆ ಎಂದೂ ಕೆಲವರು ವಾದಿಸಬಹುದು.  

ಸರ್ಕಾರದ ಕಾರ್ಯಸಾಧನೆಗಳ ಬಗ್ಗೆ ಟೀಕೆ ಟಿಪ್ಪಣಿ ಮಾಡುವ ನಾನು, ಎನ್‌ಡಿಎ ಸರ್ಕಾರವು ಹಾಲಿ ವಿದೇಶಾಂಗ ನೀತಿ ಮುಂದುವರೆಸುವುದನ್ನು ಸ್ವಾಗತಿಸುವೆ. ಪ್ಯಾಲೆಸ್ಟೀನ್‌ ಮತ್ತು ಇಸ್ರೇಲ್‌ ವಿವಾದದಲ್ಲಿ ಮೋದಿ ಸರ್ಕಾರ ತಳೆದ ನಿಲುವು, ಮನಮೋಹನ್‌ ಸಿಂಗ್‌ ಸರ್ಕಾರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಲಿಪ್ತ ನೀತಿಯತ್ತ ವಾಲಿರುವುದನ್ನು ಸೂಚಿಸುತ್ತದೆ.

ಮೋದಿ ಅವರು, ಇಸ್ರೇಲ್‌ ಅಷ್ಟೇ ಅಲ್ಲದೆ ಪ್ರಮುಖ ಮುಸ್ಲಿಂ ದೇಶಗಳಿಗೆ ಭೇಟಿ ನೀಡಿರುವುದು ಕೂಡ ಸಕಾರಾತ್ಮಕ ಬೆಳವಣಿಗೆಯಾಗಿದೆ. ಕಾಂಗ್ರೆಸ್‌ನ ಮಣಿಶಂಕರ್‌ ಅಯ್ಯರ್‌ ಅವರಿಗೂ ಬಹುಶಃ ಇದು ಮೆಚ್ಚುಗೆಯಾಗಿರಬಹುದು.

ರಸ್ತೆ, ಸಂಸ್ಥೆ ಮತ್ತು ಯೋಜನೆಗಳ ಹೆಸರು ಬದಲಾಯಿಸುವ ಎನ್‌ಡಿಎ ಸರ್ಕಾರದ ಧೋರಣೆ ಬಗ್ಗೆ ಬಲ ಮತ್ತು ಎಡಪಂಥೀಯ ಚಿಂತಕರು ಸಾಕಷ್ಟು ಚರ್ಚೆ ನಡೆಸಿದ್ದಾರೆ. ದೆಹಲಿಯ ಲುಟೆನ್ಸ್‌ ಮಾರ್ಗಗಳ ಹೆಸರು ಬದಲಾವಣೆ ಸಾಕಷ್ಟು ಸುದ್ದಿ ಮಾಡುತ್ತಿದೆ. 

ಮೊಘಲರು ಮತ್ತು ಬ್ರಿಟಿಷರು ದೆಹಲಿ ಆಳಿರುವುದಕ್ಕೆ ಕುರುಹುಗಳಾಗಿರುವ ರಸ್ತೆಗಳ ಹೆಸರುಗಳನ್ನು  ಬದಲಾಯಿಸಲಾಗುತ್ತಿದೆ. ಔರಂಗಜೇಬ್‌ ರಸ್ತೆಗೆ ಅಬ್ದುಲ್‌ ಕಲಾಂ ಹೆಸರನ್ನು ಹೊಸದಾಗಿ ನಾಮಕರಣ ಮಾಡಿರುವುದರಿಂದ ನೆಹರೂ ಅವರನ್ನು ಅವಮಾನಿಸಿದಂತೇನೂ ಆಗಿಲ್ಲ.

ಸಾರ್ವಜನಿಕ ಭಾಷಣ, ನಾಯಕತ್ವ, ವಿದೇಶಾಂಗ ನೀತಿ, ಮಹತ್ವದ ವಿಷಯಗಳಲ್ಲಿ ಸಂಪೂರ್ಣ ಹಿಡಿತ  ಸಾಧಿಸುವುದು ಮತ್ತು ಆಕರ್ಷಕ ದಿರಿಸು ಧರಿಸುವ ವಿಷಯದಲ್ಲಿ ಮೋದಿ ಹಾಗೂ ನೆಹರೂ ಅವರಲ್ಲಿ ಸಾಕಷ್ಟು ಸಾಮ್ಯತೆಗಳು ಕಂಡು ಬರುತ್ತಿವೆ.

ನೆಹರೂ ಅವರ ಬಗ್ಗೆ ಮೋದಿ ಅವರಲ್ಲಿ ವೈಯಕ್ತಿಕ ದ್ವೇಷಾಸೂಯೆ ಏನೂ ಇಲ್ಲ ಎಂದು ಮೋದಿ ಅವರ ಬೆಂಬಲಿಗರು ಹೇಳಿಕೊಳ್ಳುತ್ತಾರೆ. ಮೋದಿ ಅವರ ಜಾಗತಿಕ ಅಭಿಪ್ರಾಯವು ನೆಹರೂ ಅವರ ವಿಚಾರಧಾರೆಯನ್ನೇ ಹೋಲುತ್ತದೆ ಎಂದೂ  ಹೇಳಲಾಗುತ್ತದೆ. ಹಾಗಿದ್ದರೆ ಆರ್ಥಿಕ ಮತ್ತು ವಿದೇಶಾಂಗ ನೀತಿಯಲ್ಲಿಯೂ ನೆಹರೂ ಚಿಂತನೆಗಳ ಪ್ರಭಾವ ಕಾಣುವುದನ್ನು ನಾವು ನಿರೀಕ್ಷಿಸಬಹುದಾಗಿದೆ.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ.
ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT