ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಘವೇಂದ್ರ ನಿರ್ಗಮನ ಎಮ್ಮೆನ್ ರೆಡ್ಡಿ ಆಗಮನ

Last Updated 26 ಜುಲೈ 2014, 19:30 IST
ಅಕ್ಷರ ಗಾತ್ರ

ಇನ್‌ಫೆಂಟ್ರಿ ರಸ್ತೆಯ ಒಂದನೆ ನಂಬರಿನ ಕಛೇರಿಯಿಂದ ಸೋತ ಸೈನಿಕನಂತೆ ನಿರ್ಗಮಿಸುತ್ತಿರುವ ರಾಘವೇಂದ್ರ ಔರಾದ್‌ಕರ್ ಅವರ ಬೂಟಿನ ಸಪ್ಪಳ ಕ್ಷೀಣವಾಗುತ್ತಿರುವಂತೆ, ಎಮ್ಮೆನ್ ರೆಡ್ಡಿಯವರ ಬೂಟಿನ ಖಡಕ್ ಸಪ್ಪಳ ಜೋರಾಗಿ ಕೇಳತೊಡಗಿ ಬೆಂಗಳೂರಿಗರಿಗೆ ಹೊಸ ನಿರೀಕ್ಷೆಗಳು ಮೊಳಕೆ ಒಡೆಯುತ್ತಿವೆ. ಕೋಟಿ ಮುಟ್ಟುತ್ತಿರುವ ಮನುಷ್ಯರ ಕೈಕಾಲುಗಳಿಗೆ ಸಿಕ್ಕಿಬಿದ್ದಿರುವ, ಅರ್ಧ ಕೋಟಿ ವಾಹನಗಳ ಈ ರಕ್ಕಸನಗರದಲ್ಲಿ, ಜನರ ನಿರೀಕ್ಷೆಗಳನ್ನು ತಣಿಸುವುದು ಸುಲಭವೇನಲ್ಲ. ಪೊಲೀಸರೇನೂ ಪವಾಡ ಪುರುಷರಲ್ಲ. ಆದರೆ ಹೊಣೆಯರಿತು ಕೆಲಸ ಮಾಡಿದರೆ ಈ ನಗರವನ್ನು ಸಹನೀಯಗೊಳಿಸಬಹುದು.

ರೆಡ್ಡಿಯವರು ಸವಾಲುಗಳನ್ನು ನಿಜ ಅಂತಃಕರಣದಿಂದ ಕೈಗೆತ್ತಿಕೊಂಡು ಸಹೋದ್ಯೋಗಿ ಗಳನ್ನು ನಂಬಿಕೆಯ ತೆಕ್ಕೆಗೆ ತೆಗೆದುಕೊಂಡು ಕೆಲಸ ಮಾಡಿದರೆ ಪವಾಡಗಳಲ್ಲದಿದ್ದರೂ ಕೆಲ ಪರಿವರ್ತನೆಗಳು ಸಾಧ್ಯ. ಬೆಂಗಳೂರು ಮತ್ತು ಅದರ ಆಸುಪಾಸಿನಲ್ಲೇ ಬಹುತೇಕ ತಮ್ಮ ವೃತ್ತಿಜೀವನ ಕಳೆದಿರುವ ರೆಡ್ಡಿಯವರು ಈ ಊರನ್ನು ಚೆನ್ನಾಗಿ ಅರಿತವರು. ಇಲಾಖೆಯಲ್ಲಿ ದಕ್ಷ ಅಧಿಕಾರಿ ಎಂಬ ಹೆಸರುಳ್ಳವರು. ಈಗಾಗಲೇ ದೌರ್ಜನ್ಯ ಕ್ಕೊಳಗಾದವರನ್ನು ಖುದ್ದಾಗಿ ಭೇಟಿ ಮಾಡುತ್ತಿದ್ದಾರೆ.

ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ ಪೋಕ್ಸೊ ಬಗ್ಗೆ ಮಾಹಿತಿ ನೀಡಲು ನಾಳೆ ತಮ್ಮ ಕಛೇರಿಯಲ್ಲೇ ಕಾರ್ಯಾಗಾರ ಏರ್ಪಡಿಸಿದ್ದಾರೆ. ಇದೆಲ್ಲವೂ ಶುಭಾರಂಭ. ಆದರೆ ಇದು ಆರಂಭ ಶೂರತ್ವ ಆಗಬಾರದು.

ನಾಲ್ಕು ಬಗೆಯ ಖಾಕಿಗಳಿವೆ. ಮೊದಲನೆಯವರು ಪ್ರಾಮಾಣಿಕರು ಮತ್ತು ದಕ್ಷರು. ಎರಡನೆಯವರು ಪ್ರಾಮಾಣಿಕರು ಆದರೆ ಅದಕ್ಷರು. ಮೂರನೆಯವರು ಮಹಾನ್ ಅಪ್ರಾಮಾಣಿಕರು ಆದರೆ ದಕ್ಷರು. ನಾಲ್ಕನೆಯವರು ಮಹಾನ್ ಅಪ್ರಾಮಾಣಿಕರು ಮತ್ತು ಮಹಾನ್ ಅದಕ್ಷರು!

ಕಮೀಶನರ್ ಕಛೇರಿ ಈ ನಾಲ್ಕು ಬಗೆಯ ಅಧಿಕಾರಿಗಳನ್ನೂ ಕಂಡಿದೆ. ಮೊದಲ ಗುಂಪಿನವರು ಸಿಗುವುದು ಬೆಂಗಳೂರಿಗರ ಅದೃಷ್ಟ. ಎರಡು ಮತ್ತು ಮೂರನೆ ವರ್ಗದವರನ್ನೇ ಬಹಳ ಮಟ್ಟಿಗೆ ಕಂಡಿರುವ ಜನತೆಗೆ ಅಪ್ರಾಮಾಣಿಕರನ್ನೂ ಮತ್ತು ಅದಕ್ಷರನ್ನೂ ತಾಳಿಕೊಂಡು ಅಭ್ಯಾಸವಾಗಿದೆ. ಪ್ರಾಮಾಣಿಕತೆ, ದಕ್ಷತೆ ಎರಡರಲ್ಲಿ ಒಂದನ್ನಷ್ಟೇ ಆಯ್ಕೆ ಮಾಡಿಕೊಳ್ಳಬೇಕಾದ ಪ್ರಜಾಸತ್ತೆಯ ವ್ಯಂಗ್ಯ ಇದು. ಬೆಂಗಳೂರು ನರಕವಾಗುವುದು ನಾಲ್ಕನೇ ಗುಂಪಿನ ಸೈತಾನರು ಬಂದಾಗ.

ಕಿರೀಟ ಕಳಚಿ ಹೊರವಂಟ ರಾಘವೇಂದ್ರ ಔರಾದ್‌ಕರ್, ಎರಡನೇ ಗುಂಪಿನ ಅಧಿಕಾರಿ ಎಂಬುದು ಇಲಾಖೆಯೊಳಗಿನ ವಿಶ್ಲೇಷಣೆ. ಅವರು ಪ್ರಾಮಾಣಿಕರು ಆದರೆ ಅದಕ್ಷರು. ಒಂದು ವರ್ಷದ ಹಿಂದೆ ಜ್ಯೋತಿಪ್ರಕಾಶ್ ಮಿರ್ಜಿ ಅವರಿಂದ ಅಧಿಕಾರ ಸ್ವೀಕರಿಸುತ್ತಾ ಔರಾದ್‌ಕರ್, ಅಮೋಘ ಶಪಥ ಮಾಡಿದ್ದರು. ಹೊಸ ತಾಂತ್ರಿಕ ಕೌಶಲ್ಯಗಳಿಂದ ಅಪರಾಧಗಳ ಪತ್ತೆ ವಿಧಾನಗಳನ್ನು ಉನ್ನತೀಕರಿಸುತ್ತೇನೆ; ಕಾನೂನು, ವ್ಯವಸ್ಥೆ ಉತ್ತಮ ಗೊಳಿಸುತ್ತೇನೆ -ಇದು ಅವರ ಶಪಥದ ಸಾರಾಂಶ.

ವ್ಯವಸ್ಥೆ ಒಂದಿಂಚೂ ಬದಲಾಗಲಿಲ್ಲ. ಎನ್‌ಸಿಆರ್‌ಬಿ ವರದಿಯಲ್ಲಿ ಬೆಂಗಳೂರು ಅಪರಾಧಗಳ ಶ್ರೇಣಿಯಲ್ಲಿ ಜಾಗ ಪಡೆಯಿತು. ದಕ್ಷಿಣ ಭಾರತದ ನಾಲ್ಕು ಪ್ರಮುಖ ನಗರಗಳಲ್ಲಿ ಬೆಂಗಳೂರು ಅಪರಾಧಗಳ ನಗರವೆಂದು ಪ್ರಥಮ ಸ್ಥಾನ ಮತ್ತು ರಾಷ್ಟ್ರಮಟ್ಟದಲ್ಲಿ ಮೂರನೆಯ ಸ್ಥಾನ ಪಡೆಯಿತು. ಎರಡು ವರ್ಷದ ಕೂಸಿನಿಂದ ಅರವತ್ತರ ವೃದ್ಧೆಯರು ಅತ್ಯಾಚಾರಕ್ಕೆ ಒಳಗಾದರು. ಕಾಮಾಂಧರು ಕ್ರೈಸ್ತ ಸನ್ಯಾಸಿನಿಯನ್ನೂ ಬಿಡಲಿಲ್ಲ.

ಜ್ಯೋತಿಉದಯ್ ಎಂಬ ಮಹಿಳೆಯ ಮೇಲೆ ಎಟಿಎಮ್‌ನಲ್ಲಿ ದಾಳಿ ಮಾಡಿದ್ದವನನ್ನು ಛಾಯಾಚಿತ್ರ ದೊರೆತರೂ ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಅಪರಾಧಗಳು ಅನಿಯಂತ್ರಿತವಾದವು. ಕಳೆದ ವರ್ಷ ಮಹಿಳೆಯರ ವಿರುದ್ಧ ಬೆಂಗಳೂರಿನಲ್ಲಿ ನಡೆದ ಪ್ರಕರಣಗಳು ೨೬೦೮. ಆ ಪಟ್ಟಿಯನ್ನು ಇಲ್ಲಿ ವಿವರಿಸಿ ಬಾಯಿಚಪ್ಪರಿಸಲು ಅವೇನು ಸಿಹಿಘಟನೆಗಳಲ್ಲ.

ಮೇಲಿನದು ಅದಕ್ಷತೆಗೆ ಸಂಬಂಧಿಸಿದ್ದು. ಆದರೆ ಔರಾದ್‌ಕರ್ ಬಗೆಗಿನ ಆರೋಪಗಳು ಇಷ್ಟೇ ಅಲ್ಲ. ಅದರಲ್ಲಿ ಮುಖ್ಯವಾದದ್ದು ತನ್ನ ಕಿರಿಯ ಅಧಿಕಾರಿಗಳನ್ನು ವಿಶ್ವಾಸಾರ್ಹವಾಗಿ ನಡೆಸಿಕೊಳ್ಳಲಿಲ್ಲ ಎಂಬುದು. ಪ್ರಾಣ ಲೆಕ್ಕಿಸದೆ ಅಧಿಕಾರಿಯೊಬ್ಬ ಅಪರಾಧಿಗಳನ್ನು ಹಿಡಿದು ತಂದಾಗ ಅಂಥವನು ಮೆಚ್ಚುಗೆಗಾಗಿ ನಿರೀಕ್ಷಿಸುತ್ತಾನೆ.

ಇಲಾಖೆಯಿಂದ ರಕ್ಷಣೆಯನ್ನು ಬಯಸುತ್ತಾನೆ. ದಕ್ಷ ಅಧಿಕಾರಿಗಳನ್ನು ಔರಾದ್‌ಕರ್ ಎಂದೂ ಸಮರ್ಥಿಸಲಿಲ್ಲ, -ಸಂರಕ್ಷಿಸಲಿಲ್ಲ ಎಂಬುದು ಅನೇಕರ ಮುನಿಸು. ಕಳ್ಳ ಮಾಲುಗಳ ಜೊತೆಗೆ ಫೋಟೊ ತೆಗೆಸಿಕೊಂಡರೇ ಹೊರತು ಆ ಮಾಲುಗಳ ಪತ್ತೆಗೆ ಶ್ರಮಿಸಿದ್ದವರನ್ನು ಗುರುತಿಸಲಿಲ್ಲ. ಹಿರಿಯ ಅಧಿಕಾರಿಯೊಬ್ಬರ ಕೃಪಾಶೀರ್ವಾದದಿಂದ ಅನೇಕರನ್ನು ಹಿಂದಿಕ್ಕಿ ಅಧಿಕಾರ ಗಿಟ್ಟಿಸಿದರು ಎಂಬುದು ಇನ್ನೊಂದು ಆರೋಪ. ಜಾತಿವಾದಿಗಳಾಗಿದ್ದರು ಎಂಬುದು ಮತ್ತೊಂದು ಗುರುತರ ಆರೋಪ.

ಈ ಆರೋಪಗಳಲ್ಲಿ ಹುರುಳಿಲ್ಲದಿರಬಹುದು ಅಥವಾ ಅರ್ಧಸತ್ಯಗಳಿರಬಹುದು. ಆದರೆ ಅವರ ಅವಧಿಯಲ್ಲಿ ಅಪರಾಧಗಳ ಸಂಖ್ಯೆ ತಾರಕಕ್ಕೇರಿದ್ದು, ಅವುಗಳನ್ನು ತಲಸ್ಪರ್ಶಿಯಾಗಿ ಶೋಧಿಸಲಾಗದೆ ಇದ್ದುದು ನಿಜ. ತನ್ನ ಕೈ ಕೆಳಗಿನ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಿದ್ದರೆ, ಅವರು ಹೀಗೆ ಅಕಾಲದಲ್ಲಿ ಅವಮಾನಕರವಾಗಿ ಹೋಗಬೇಕಿರಲಿಲ್ಲ. ಎಂ.ಟೆಕ್. ಓದಿದ್ದ, ರ್‍ಯಾಂಕ್ ವಿದ್ಯಾರ್ಥಿಯಾಗಿದ್ದ, ಪ್ರಾಮಾಣಿಕರೂ ಆಗಿದ್ದ ರಾಘವೇಂದ್ರ ಔರಾದ್‌ಕರ್ ಆಡಳಿತದಲ್ಲಿ ವಿಫಲರಾದರು. ಕಮೀಷನರ್ ಒಬ್ಬರಿಗೆ ಇರಬೇಕಾದ ಗತ್ತುಗೈರತ್ತುಗಳು, ಜನಸಾಮಾನ್ಯರಲ್ಲಿ ನಂಬಿಕೆ ಹುಟ್ಟಿಸುವ ವ್ಯಕ್ತಿತ್ವ ಅವರಿಗಿರಲಿಲ್ಲ. ಈತ ನಮ್ಮನ್ನು ರಕ್ಷಿಸಬಲ್ಲ ಎಂಬ ಭರವಸೆ ಹುಟ್ಟಿಸುವುದೇ ಉನ್ನತ ಪೊಲೀಸ್ ಅಧಿಕಾರಿಯ ವ್ಯಕ್ತಿತ್ವದಿಂದ ಪ್ರಕಟವಾಗಬೇಕಾದ ಪ್ರಮುಖವಾದ ಗುಣ. ಆದರೆ ಔರಾದ್‌ಕರ್ ಅವರೇ ದಾಳಿಗೊಳಗಾದ ಸ್ವಯಂ ಬಲಿಪಶು ವಿನಂತೆ ಕಾಣಿಸುತ್ತಿದ್ದರು.

ಅವರಿಗೆ ಸಾಂಸ್ಕೃತಿಕ ಲೋಕದ ಬಗ್ಗೆ  ತಿರಸ್ಕಾರವಿತ್ತೆ ?  ನಾನು ಕೇಳಿದ ಹಲವು ಘಟನೆಗಳನ್ನು ವಿಶ್ಲೇಷಿಸಿದರೆ ಹೌದು ಎನಿಸುತ್ತದೆ. ಸಾಹಿತ್ಯ, ರಂಗಭೂಮಿ, ಕಿರುತೆರೆ ಮತ್ತು ಚಲನಚಿತ್ರ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಮಿತ್ರರೊಬ್ಬರು ಅವರನ್ನು ಕಾಣಲು ಕಛೇರಿಗೆ ಹೋಗಿದ್ದರು. ಗುರುತಿನ ಚೀಟಿ ಕಳುಹಿಸಿದರೂ ಸಂದರ್ಶನ ಸಿಗಲಿಲ್ಲ. ಇಡೀ ದಿನ ಕಾಯ್ದರು. ಅನಂತರ ಹೊರಗೆ ಬಂದ ಕಮೀಷನರ್ ಸಾಹೇಬರು ಇವರನ್ನೆಲ್ಲಾ ಯಾರು ಒಳಗೆ ಬಿಟ್ಟಿದ್ದು? ಇದೇನು ರವೀಂದ್ರ ಕಲಾಕ್ಷೇತ್ರವೆ? ಇವರನ್ನು ಹೊರಗೆ ಕಳುಹಿಸಿ ಎಂದು ಕೂಗಾಡಿದರು. ಕಲಾವಿದಮಿತ್ರರು ತಬ್ಬಿಬ್ಬಾಗಿ ಹೊರನಡೆದರು. ಸಾಂಸ್ಕೃತಿಕ ಉದ್ದೇಶಗಳಿಗಾಗಿ ಹೋದವರದೇ ಈ ಗತಿಯಾದರೆ, ದೂರು ಕೊಡಲು ಹೋದವರ ಪಾಡೇನು?

ಎಲ್ಲರ ಮೇಲೆ ಹೌಹಾರುತ್ತಿದ್ದುದರಿಂದ (ಹರಿಹಾಯುವುದು) ನಾವೆಲ್ಲ ಔರಾದ್‌ಕರ್ ಅವರನ್ನು ಹೌಹಾರ್‌ಕರ್ ಎಂದು ತಮಾಷೆಗೆ ಕರೆಯತೊಡಗಿದೆವು. ರಾಜಕಾರಣಿಗಳೆದುರು ವಿಧೇಯತೆ ನಟಿಸುವ ಪೊಲೀಸ್ ಅಧಿಕಾರಿಗಳು ಜನಸಾಮಾನ್ಯರ ಮೇಲೆ ಹರಿಹಾಯುವುದು ನನಗೆ ಈಗಲೂ ಒಗಟಿನಂತೆ ಕಾಣಿಸುತ್ತದೆ. ಹಲವು ಮಿತಿಗಳ ನಡುವೆಯೂ ಒಳ್ಳೆಯ ಕೆಲಸ ಮಾಡಿದ ಮರಿಸ್ವಾಮಿ, ರೇವಣ್ಣ ಸಿದ್ಧಯ್ಯ, ಸಾಂಗ್ಲಿಯಾನ, ಬಿದರಿ ಮುಂತಾದ ದಕ್ಷ ಅಧಿಕಾರಿಗಳೂ ಇದ್ದಾರೆ. ಮೈಸೂರಿನಲ್ಲಿ ಕೆಂಪಯ್ಯನವರು ಬಹುಕಾಲ ಉಳಿಯುವಂಥ ಹಲವು ಕೆಲಸ ಮಾಡಿದ್ದಾರೆ. ಠಾಣೆಗಳ ಆಧುನಿಕ ಆವಿಷ್ಕಾರ, ಇಲಾಖೆಯ ನೌಕರರ ಕ್ಷೇಮಾಭಿವೃದ್ಧಿ, ಅಪರಾಧ ಪತ್ತೆಗೆ ಹೊಸ ವಿಧಾನ ಹೀಗೆ ಅನೇಕ ಸಾಹಸಗಳನ್ನು ಮೆರೆದಿದ್ದಾರೆ.

ನಮ್ಮ ಠಾಣೆಗಳು ಹೇಗಿವೆ? ಅತ್ಯಾಚಾರಿಯನ್ನು ಕೇಳಿ ಬಾಯಿ ಬಿಡಿಸಬೇಕಾದ ಪ್ರಶ್ನೆಗಳನ್ನು ಅತ್ಯಾಚಾರಕ್ಕೊಳಗಾದ ಬಲಿಪಶುವಿಗೇ ಕೇಳಲಾಗುತ್ತದೆ. ಮಹಿಳಾ ಪೇದೆಗಳೂ ಇದೇ ಭಂಡತನ ತೋರಿಸುತ್ತಾರೆ. ಪೊಲೀಸ್ ಠಾಣೆಗೆ ಶಿಫಾರಸ್ಸು ಮತ್ತು ಹಣವಿಲ್ಲದೆ ಹೋಗಿ ಅಲ್ಲಿ ಸದ್ವರ್ತನೆಯಿಂದ ಸ್ವೀಕರಿಸಲ್ಪಟ್ಟ, ಗೌರವಾನ್ವಿತ ನಡವಳಿಕೆಯನ್ನು ಕಂಡುಬಂದ ವ್ಯಕ್ತಿಗಳು ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪ. ಬೆಂಗಳೂರಿನಲ್ಲಿ ಏಳು ವಲಯಗಳಿವೆ. ಟ್ರಾಫಿಕ್ಕು ಮತ್ತು ಸರ್ವ ಮಹಿಳಾ ಠಾಣೆಗಳೂ ಸೇರಿ ಅಂದಾಜು ನೂರೈವತ್ತು ಠಾಣೆಗಳಿವೆ. ಎಲ್ಲ ಠಾಣೆಗಳಲ್ಲೂ ಅದೇ ದಯನೀಯ ಚಿತ್ರ. ಕಿವಿ ಮುಚ್ಚಿಕೊಳ್ಳಬೇಕಾದ ಶಬ್ದಕೋಶಗಳು. ಅಪರೂಪದ ಕೆಲವು ಸಜ್ಜನರನ್ನು ಬಿಟ್ಟರೆ ಪೊಲೀಸರದು ಏಕಪ್ರಕಾರವಾದ ಸುಲಿಗೆ.

ಇದು ಬದಲಾಗಲು ಸಾಧ್ಯವಿಲ್ಲವೆ? ಠಾಣೆಗೆ ಬರುವ ಮನುಷ್ಯರನ್ನು ಮನುಷ್ಯರಂತೆ ನಡೆಸಿಕೊಳ್ಳಲು ಸಾಧ್ಯವಿಲ್ಲವೆ? ಉತ್ಸಾಹ ಮತ್ತು ಆದರ್ಶಗಳನ್ನು ನೆಚ್ಚಿ ಖಾಕಿ ತೊಟ್ಟವರೂ ಏಕೆ ಕ್ರಮೇಣ ಜಡ್ಡುಗಟ್ಟುತ್ತಾರೆ? ಏಕೆ ಭ್ರಷ್ಟರಾಗುತ್ತಾರೆ? ಮತ್ತು ಭ್ರಷ್ಟತೆಯನ್ನು ಅನಿವಾರ್ಯವೆಂದು ಏಕೆ ಸಮರ್ಥಿಸಿ ಮಾತನಾಡುತ್ತಾರೆ? ಪೊಲೀಸರಿಂದ ಶೋಷಣೆಗೊಳಗಾಗುವ ಸಾರ್ವಜನಿಕರದು ಒಂದು ಕತೆಯಾದರೆ ಇಲಾಖೆಯೊಳಗಿನ ಕ್ರೂರ ವ್ಯವಸ್ಥೆಯಿಂದ ಶೋಷಿತರಾಗುವ ಒಳ್ಳೆಯ ನೌಕರರು ಮತ್ತು ಅಧಿಕಾರಿಗಳದು ಮತ್ತೊಂದು ವ್ಯಥೆ. ಎರಡೂ ಕೈನಿಂದ ಮುಕ್ಕುವವರನ್ನು ಆಯಕಟ್ಟಿನ ಜಾಗದಲ್ಲಿ ಅಬಾಧಿತರಾಗಿ ಪ್ರತಿಷ್ಠಾಪಿಸಿ, ನಿಷ್ಠಾವಂತರನ್ನು ನಿರ್ಜನ ಜಾಗದಲ್ಲಿ ಎಸೆದು ನಿಷ್ಕ್ರಿಯರನ್ನಾಗಿ ಮಾಡುವ ಈ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ, ದಕ್ಷತೆ ಎಂಬ ಮಾತುಗಳು ತಮಾಷೆಯಂತೆ ಕೇಳಿಸಬಹುದು. ಒಬ್ಬರಿಗೊಬ್ಬರು ಗೌರವರಹಿತ ಸೆಲ್ಯೂಟ್ ಹೊಡೆದು ಕೊಂಡು ಪ್ರೋಟೋಕಾಲ್‌ಗಳಿಂದ ಜರ್ಝರಿತವಾಗಿರುವ ಪೊಲೀಸ್ ಇಲಾಖೆಗೆ ಭರ್ಜರಿ ಕಾಯಕಲ್ಪವಾಗಬೇಕಿದೆ.

Poverty is the parent of revolution and crime ಎನ್ನುತ್ತಾನೆ ಅರಿಸ್ಟಾಟಲ್. ಆದರೆ ಈಗ ಬಡವನಲ್ಲದವನೂ ನಿಷ್ಕಾರಣವಾಗಿ ಅಪರಾಧ ಎಸಗುತ್ತಿದ್ದಾನೆ. ಇನ್ನೂ ಕೆಲವು ಬಡವರಿಗೆ ತತ್‌ಕ್ಷಣ ಶ್ರೀಮಂತರಾಗುವ ಆಸೆ ಮಾತ್ರ ಇದ್ದು ಕ್ರಾಂತಿಗೀಂತಿಯಲ್ಲಿ ಆಸಕ್ತಿ ಇಲ್ಲವಾಗಿದೆ. ಸೌಲಭ್ಯ ಸಿಗುತ್ತದೆ ಎಂದರೆ ಮಾತ್ರ ಎಲ್ಲರೂ ಬಡವರಾಗಲು ಸಿದ್ಧವಾಗಿದ್ದೇವೆ. ಲಂಚ ಪಡೆಯುವ ಕೈಗಳಂತೆಯೇ ಕೊಡಲೂ ಕೈಗಳು ಕಾತರಿಸುತ್ತವೆ.

ಕಾನೂನುಭಂಗಕ್ಕೆ ಜೀವ ತವಕಿಸುತ್ತದೆ. ಕಾರಣ ಕಾನೂನಿಗಿಂತ ತಾನು ಎರಡಿಂಚು ದೊಡ್ಡವನೆಂಬ ಭ್ರಮೆ. ಪೊಲೀಸರ ಮೇಲೆ ದೂರು ಹೊರಿಸುವಾಗ ಇದನ್ನೆಲ್ಲ ನಾವು ನೆನಪಿಟ್ಟುಕೊಳ್ಳಬೇಕು. ನಾವು ಅವರೇ, ಅವರು ನಾವೇ ಆಗಿದ್ದೇವೆ. ಚಿಕ್ಕದೊಂದು ತಪ್ಪು ಮಾಡಿದವನೂ ಸಹ ತೆಪ್ಪನೆ ದಂಡ ಕಟ್ಟದೆ ಶಾಸಕ, ಮಂತ್ರಿಗಳ ಮೊರೆ ಹೋಗುತ್ತಾನೆ. ಆ ಶಾಸಕನಾದರೂ ಎಂಥವನು? ಸಮಯ ಮೀರಿದ ಮೇಲೂ ಮದ್ಯ ಸರಬರಾಜು ಮಾಡಬೇಕೆಂದು ಬಾರ್‌ನವರನ್ನು ಪೀಡಿಸುವವನು ಅಥವಾ ಶಾಸನ ಸಭೆಯಲ್ಲಿ ಅಶ್ಲೀಲ ಚಿತ್ರ ನೋಡುತ್ತಾ ಕುಳಿತವನು.

ಶಾಲೆಗಳನ್ನು ನಡೆಸುವುದೀಗ ಬಹುಕೋಟಿ ಉದ್ಯಮ. ತರಗತಿ ಕೋಣೆ, ಆಟದ ಮೈದಾನ, ಕ್ಯಾಂಟೀನ್, ಕಾರಿಡಾರ್, ಶೌಚಾಲಯಗಳ ಮುಂಭಾಗ, ಮಕ್ಕಳು ಬಸ್ ಹತ್ತುವ ಜಾಗ, ಎಲ್ಲೆಡೆ ಇರಿಸುವ ಒಂದು ಕ್ಯಾಮೆರಾ, ಹತ್ತು ಜನ ಗಾರ್ಡ್‌ಗಳ ಕೆಲಸ ಮಾಡಬಲ್ಲುದು. ಪೋಷಕರಿಂದ ಲಕ್ಷಾಂತರ ಹಣ ಪೀಕುವ ಮಾಲೀಕರಿಗೆ ಇಷ್ಟು ಸಮಯಪ್ರಜ್ಞೆ, ಕರ್ತವ್ಯದ ಎಚ್ಚರ ಇರಬೇಡವೆ? ಶಾಲೆಯ ಬಸ್ ಏರಿದ ಮಗುವು ಮನೆ ತಲಪುವವರೆಗೆ ಶಾಲೆಯದೇ ಜವಾಬ್ದಾರಿ. ಏಕೆಂದರೆ ಆ ಬಸ್ಸಿಗೂ ಪೋಷಕರೇ ಹಣ ತೆತ್ತಿರುತ್ತಾರೆ. ಇಷ್ಟೇ ಮುಖ್ಯವಾದ ಹೊಣೆಗಾರಿಕೆ ಹೆತ್ತವರದು. ಅವರು ಮಕ್ಕಳನ್ನು ಕೆಲವು ಮಾಮ, ಅಂಕಲ್, ಕಸಿನ್‌ಗಳಿಂದ ಕಾಪಾಡಿಕೊಳ್ಳಬೇಕು. ಅನೇಕ ತಾಯಂದಿರಿಗೆ ಬಿಡುವೇ ಇಲ್ಲ. ಮಕ್ಕಳ ಮನೋವಿಜ್ಞಾನದ ಪರಿಚಯವಿಲ್ಲ.

ಪ್ರತಿ ಬಡಾವಣೆಯಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಚರ್ಚೆ, ಗೋಷ್ಠಿ, ಮುಕ್ತಸಂವಾದ ನಡೆಸಬೇಕು. ಶಾಲೆಯ ಮಾಲೀಕರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ಮನೋವೈದ್ಯರು, ಹೆತ್ತವರು ಮತ್ತು ಸಮವಸ್ತ್ರ ಧರಿಸದ ಪೊಲೀಸರು, ಸಂಘಸಂಸ್ಥೆಗಳವರು ಇಲ್ಲಿ ಭಾಗವಹಿಸಬೇಕು. ಇಂಥ     ವಿಚಾರ ವಿನಿಮಯ ತುಂಬಾ ತುರ್ತಿನದಾಗಿದೆ. ಅತ್ಯಾಚಾರಿಗಳನ್ನು ಗುಂಡಿಕ್ಕಿ ಕೊಲ್ಲಿ, ನೇಣು ಹಾಕಿ, ಮರ್ಮಾಂಗ ಕತ್ತರಿಸಿ ಮುಂತಾದ ಭಾವೋದ್ರೇಕದ ಹೇಳಿಕೆಗಳು ನಿರುಪಯುಕ್ತ. ನಮ್ಮ ಪ್ರಸ್ತುತ ವ್ಯವಸ್ಥೆಯಲ್ಲಿ ಅವು ಗಿಟ್ಟುವುದಿಲ್ಲ. ಅದರ ಬದಲಾಗಿ ವಿಶೇಷ ನ್ಯಾಯಾಲಯ, ತ್ವರಿತ ವಿಚಾರಣೆ ಮತ್ತು ತೀರ್ಪು ಸೂಕ್ತ ವಾದದ್ದು. ಈಗಿರುವ ನ್ಯಾಯಲಯಗಳಿಗೇ ನ್ಯಾಯಾಧೀಶರ ಕೊರತೆ. ಇನ್ನು ಹೊಸ ನ್ಯಾಯಾಲಯಗಳ ಮಾತೆಲ್ಲಿ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT