ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಲ್ ಕ್ಲಾಸ್ ಟೀಚರ್‌ಗಳು

Last Updated 27 ಮೇ 2015, 19:30 IST
ಅಕ್ಷರ ಗಾತ್ರ

ಗೆಳೆಯ ಜಾರ್ಜ್ ಸಲ್ಡಾನ ಯಾರೊಂದಿಗೂ ಹೆಚ್ಚು ಮಾತಾಡುವುದಿಲ್ಲ. ಸಂಕೋಚ ಸ್ವಭಾವದ ಸರಳ ವ್ಯಕ್ತಿ. ಶಿವಮೊಗ್ಗದ ನೂರಾರು ಜನಪರ ಹೋರಾಟಗಳಲ್ಲಿ ನೆರಳಿನ ಹಾಗೆ ದುಡಿಯುವ ಜಾರ್ಜ್ ಸದಾ ನೇಪಥ್ಯದಲ್ಲೇ ಇರಲಿಚ್ಛಿಸುತ್ತಾರೆ. ತಾವು ನಂಬಿರುವ ಪತ್ರಿಕೆಯ ಸಣ್ಣ ಕೆಲಸವನ್ನೇ ಶ್ರದ್ಧೆಯಿಂದ ಮಾಡುತ್ತಾರೆ. ಅನ್ಯರಿಗೆ ಬಂದ ಕಷ್ಟಗಳು ತಮಗೇ ಬಂದಂತೆ ಚಡಪಡಿಸುತ್ತಾರೆ. ಜೀವನದಲ್ಲಿ ಹಾಸುಹೊದ್ದುಕೊಳ್ಳುವಷ್ಟು ಸ್ವಂತದ ಬೇಗುದಿಗಳು ಅವರಿಗಿದ್ದರೂ, ಅದನ್ನೆಂದೂ ತೋರಗೊಡುವುದಿಲ್ಲ. ಶ್ರಮಪಟ್ಟು ದುಡಿಯುವ ಬಡಜನರ ಬವಣೆಗಳಿಗೆ ಸ್ಪಂದಿಸಲು ಹೆಣಗಾಡುತ್ತಿರುತ್ತಾರೆ. ಎಂದೂ ತಮ್ಮ ಬದುಕಿನ ಬಗ್ಗೆ ಯೋಚಿಸುವುದಿಲ್ಲ. ಮನದಲ್ಲಿ ದುಃಖದ ಸಮುದ್ರವೇ ಇದ್ದರೂ ಗೊಣಗಾಡುವುದಿಲ್ಲ. 

ಜಾರ್ಜ್ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ವಸ್ತುಗಳು ಎರಡು ಮಾತ್ರ. ಒಂದು ಪುಸ್ತಕಗಳು. ಮತ್ತೊಂದು ಪ್ರೇಯಸಿಯಂತೆ ಅಂಟಿಕೊಂಡಿ ರುವ ಲಟಾರಿ ಸೈಕಲ್ಲು. ದಮನಿತರ ಸಂಕಷ್ಟ ಗಳನ್ನು ಪರಿಹರಿಸಲು ಹೆಣಗಾಡುವ ಜಾರ್ಜ್ ನನಗೆ ಆಧುನಿಕ ಕ್ರಿಸ್ತನಂತೆ ಕಾಣುತ್ತಾರೆ.

ಜಾರ್ಜ್‌ಗೆ ಮದುವೆ ಯಾಕೋ ಇಷ್ಟವಾಗ ಲಿಲ್ಲ. ಕಾರಣ ಕೇಳಿದರೆ ಇವತ್ತಿಗೂ ಅವರು ಬಾಯಿ ಬಿಡುವುದಿಲ್ಲ. ಈ ಶುದ್ಧ ಮನಸ್ಸಿನ ಜಾರ್ಜ್‌ಗೆ, ಎಲಿಜಬತ್ ಎಂಬ ತಂಗಿಯಿದ್ದಾರೆ. ಎಲ್ಲರೂ ಪ್ರೀತಿಯಿಂದ ಅವರನ್ನು ಬೇಬಿ ಎಂದು ಕರೆಯುತ್ತಾರೆ. ಈ ಬೇಬಿ ಒಂದು ಶಾಲೆಯಲ್ಲಿ ಶಿಕ್ಷಕಿ. ಅಣ್ಣನ ಕಂಡರೆ ಬೇಬಿಗೆ ತುಂಬಾ ಗೌರವ. ಮನೆಯಲ್ಲಿ ಕಾಯಿಲೆಯಿಂದ ಬಳಲುವ ತಮ್ಮನೊ ಬ್ಬನಿದ್ದಾನೆ. ಅವನ ಆರೋಗ್ಯ  ಏರುಪೇರಾಗು ತ್ತಲೇ ಇರುತ್ತದೆ. ಅವನನ್ನು ಮಗುವಿನಂತೆ ನೋಡಿಕೊಳ್ಳಬೇಕು. ಅಮ್ಮ ಸಾಯುವಾಗ ‘ಬೇಬಿ ನಿನ್ನ ಮಡಿಲಿಗೆ ನನ್ನಿಬ್ಬರು ಮಕ್ಕಳನ್ನು ಹಾಕಿಹೋಗುತ್ತಿದ್ದೇನೆ. ಅನ್ನಕ್ಕಾಗಿ ಅವರಿಬ್ಬರು ಕಂಡವರ ಮನೆಗೆ ಹೋಗಬಾರದು. ನಿನ್ನ ಗಂಡ, ನಿನ್ನ ಮಗನೂ ಇಲ್ಲೇ ಇದ್ದು ಅವರನ್ನು ಕೊನೇ ತನಕ ಚೆನ್ನಾಗಿ ಸಾಕುತ್ತೀರಿ ಅಂತ ಮಾತು ಕೊಡು’ ಎಂದು ಆಣೆ ಪಡೆದೇ ಪ್ರಾಣ ಬಿಟ್ಟಿದ್ದಾರೆ. ಆ ಮಾತನ್ನು ಬೇಬಿ ಇನ್ನೂ ಮರೆತಿಲ್ಲ.  

ಈಗ ಆ ಇಡೀ ಕುಟುಂಬಕ್ಕೆ ತಂಗಿ, ಅಕ್ಕ, ತಾಯಿ, ಹೆಂಡತಿ ಎಲ್ಲಾ ಬೇಬಿಯೇ. ಅಣ್ಣ, ತಮ್ಮನ ಆರೈಕೆ ಮಾಡುತ್ತಲೇ ಜೀವ ಸವೆಸು ತ್ತಿರುವ ಬೇಬಿ ಎಂದೂ ನಗೆ ಕಳೆದುಕೊಳ್ಳದ ಹೆಣ್ಣು . ನೋವಿನಿಂದ ಗಿಜಿಗುಡುವ ತಮ್ಮನನ್ನೂ, ಸಮಾಜ ಸೇವೆಗೆ ಜೀವ ಮುಡುಪಾ ಗಿಟ್ಟ ಅಣ್ಣನನ್ನು ಹೆತ್ತ ಕುಡಿಗಳಂತೆ ಸಲಹುತ್ತಿದ್ದಾರೆ.

ನಮ್ಮ ಜಾರ್ಜ್ ಸಂಜೆಯಾದರೆ ಸೈಕಲ್ ತೆಗೆದುಕೊಂಡು ಊರ ಹೊರಗೆ ಚಲಿಸುತ್ತಾರೆ. ಅಲ್ಲಿ ಟೆಂಟು, ಗುಡಿಸಲು ಹಾಕಿಕೊಂಡಿರುವ ಅಲೆಮಾರಿ ಜನರಿದ್ದಾರೆ. ಧಾರಾವಿಯ ಸ್ಲಂನಂತೆ ಕಾಣುವ ಅಲ್ಲಿನ ಪುಟ್ಟ ಹಟ್ಟಿಗಳು ಕೆಸರಲ್ಲಿ ಹೂತು ಹೋಗಿವೆ. ಜಾರ್ಜ್ ಅಲ್ಲಿರುವ ಒಂದು ಕಟ್ಟೆಯ ಮೇಲೆ ದಿನಾ ಹೋಗಿ ಕೂರುತ್ತಾರೆ. ಅಲ್ಲಾಡುವ ಚಿಳ್ಳೆಪಿಳ್ಳೆಗಳೆಲ್ಲಾ ಜಾರ್ಜ್ ಬಂದದ್ದು ಕಂಡು ತಮ್ಮ ಟೆಂಟ್‌ಗಳಿಗೆ ಓಡುತ್ತವೆ.  ಸ್ಲೇಟು, ಪುಸ್ತಕ, ಬಳಪ ಅವುಚಿಕೊಂಡು ಜಾರ್ಜ್‌ರ ಸುತ್ತ ಶಿಸ್ತಾಗಿ ಕೂರುತ್ತವೆ. ಆ ಕಟ್ಟೆ ಹದಿನೈದು ವರ್ಷಗಳಿಂದ ಅಲ್ಲಿನ ಮಕ್ಕಳಿಗೆ ಪಾಠಶಾಲೆ ಎನಿಸಿದೆ. ಬೆಲ್ಲು, ಬಿಲ್ಲು, ಬಿಲ್ಡಿಂಗು ಇಲ್ಲದೆ ಇಲ್ಲಿ ಪಾಠಗಳು ನಡೆಯುತ್ತವೆ. ಕತ್ತಲಾಗುವುದರೊಳಗೆ ಜಾರ್ಜ್ ತಮ್ಮ ಪಾಠಗಳನ್ನು ಸರಸರ ಮುಗಿಸಬೇಕು. ಸೂರ್ಯನೇ ಇಲ್ಲಿನ ಜನರ ಕೊನೆ ಬೆಳಕು.

ಸಂಜೆ ಎನ್ನುವುದು ಹಟ್ಟಿಯ ಪಾಲಿಗೆ ಗಡಿ ಬಿಡಿ ಸಮಯ. ಹೆಣ್ಣು ಮಕ್ಕಳು ಸಾರಿಗೆ ಖಾರ ಕಡೆಯುತ್ತಾ, ಮತ್ತೊಂದು ಕಡೆ ಅನ್ನ ಬೇಯಿ ಸುತ್ತಾ ಬಿಝಿಯಾಗಿರುತ್ತಾರೆ. ದುಡಿದು ಬಂದ ಗಂಡಸರು ಮೀಟಿಂಗ್‌ನಲ್ಲಿ ಮಗ್ನರಾಗಿರುತ್ತಾರೆ. ಅಲ್ಲೆಲ್ಲೋ ಜಗಳ, ಇಲ್ಲೆಲ್ಲೋ ಕೂಗಾಟ, ಪರಸ್ಪರ ಮಾರಾಮಾರಿ ಶುರುವಾಗಿರುತ್ತದೆ. ಇಂಥ ಕಡೆ ಜಾರ್ಜ್ ಶಾಂತಚಿತ್ತರಾಗಿ ಕೂತು ನಿನ್ನೆ ಹೇಳಿ ಕೊಟ್ಟ ಪಾಠ ಒಪ್ಪಿಸಿಕೊಳ್ಳುತ್ತಾ, ಸ್ಲೇಟು ಹಿಡಿದು ಅಆ ತಿದ್ದಿಸುತ್ತಾ ಬೇಗ ಕಲಿಸುವಲ್ಲಿ ತಲ್ಲೀನರಾಗಿ ರುತ್ತಾರೆ.  ಕತ್ತಲೋ, ಸಂಜೆ ಮಳೆಯೋ, ಶುರುವಾಗುವುದರೊಳಗೆ ಅಲ್ಲಿನ ಅಡುಗೆಗಳು, ಪಾಠಗಳು ಎಲ್ಲವೂ ಮುಗಿಯಬೇಕು. ಪಾಠ ಮುಗಿದ ಮೇಲೆ  ಜಾರ್ಜ್ ಅಲ್ಲಿನ ಜನರ ಕಷ್ಟಗಳನ್ನು ಆಲಿಸುತ್ತಾರೆ.

ಇಲ್ಲಿನ ವಿದ್ಯಾರ್ಥಿಗಳು ಜಾರ್ಜ್‌ರ ಶಿಷ್ಯರಲ್ಲ, ಒಡಲ ಮಕ್ಕಳಿದ್ದಂತೆ. ಅವರ ಓದು, ಬಟ್ಟೆ, ಪುಸ್ತಕ, ಪೆನ್ನು, ಬಳಪಕ್ಕಾಗಿ ತಮ್ಮ ತುಂಡು ದುಡಿಮೆಯನ್ನೇ ಅವರು ಸದ್ದಿಲ್ಲದೆ ಸವೆಸುತ್ತಿ ದ್ದಾರೆ. ಈ ಮಕ್ಕಳು ಓದುವ ಶಾಲೆಗೆ ಹೋಗಿ ಅವುಗಳ ಪ್ರಗತಿಯನ್ನು  ವಿಚಾರಿಸುತ್ತಾರೆ. ದಿನವಿಡೀ ಅಲೆಮಾರಿಗಳಾಗಿ ಅನ್ನ ಹುಡುಕುತ್ತಾ ನಲುಗುವ ಆ ಮಕ್ಕಳ ತಂದೆ ತಾಯಿಗಳು ಜಾರ್ಜ್ ಎಂಬ ಅವಧೂತ ಇರುವುದರಿಂದ ಕೊಂಚ ನಿರಾಳರಾಗಿದ್ದಾರೆ.  ಜಾರ್ಜ್ ಇಲ್ಲದೆ ಹೋಗಿದ್ದರೆ, ಆ ಮಕ್ಕಳ್ಯಾರು ಶಾಲೆ ಮುಖ ಕಾಣುತ್ತಿರಲಿಲ್ಲ.

ಈ ಮನುಷ್ಯ ದೇವರು, ಧರ್ಮ, ಜಾತಿ, ಕುಲ ಇದ್ಯಾವುದನ್ನೂ ನಂಬುವುದಿಲ್ಲ. ಪ್ರಶಂಸೆ ಇಷ್ಟಪಡುವುದಿಲ್ಲ. ನೆಂಟರು, ಬಂಧು ಬಳಗದವರ ಸಭೆ ಸಮಾರಂಭಗಳ ಕಡೆ ಸುಳಿಯುವುದಿಲ್ಲ. ತನ್ನವರನ್ನೆಲ್ಲಾ ಮರೆತು, ಆ ಬಡ ಮಕ್ಕಳ ಭವಿಷ್ಯವನ್ನು ಚಿಂತಿಸುವ ಜಾರ್ಜ್ ನನಗೆ ವಿಶೇಷ ಅನ್ನಿಸುತ್ತಾರೆ. ಮೊನ್ನೆ ಅವರ ಸಂಬಂಧಿಕರೊಬ್ಬರು ತಾವು ಮದುವೆಯಾದ ಇಪ್ಪತ್ತೈದು ವರ್ಷಗಳ ಸಮಾರಂಭ ಇಟ್ಟುಕೊಂಡಿದ್ದರು. ಜಾರ್ಜ್‌ರನ್ನು ಬನ್ನಿ ಎಂದು ಕರೆಯುತ್ತಿದ್ದರು. ಆಗ ಜಾರ್ಜ್ ಹೇಳಿದ್ದು ನನಗಿನ್ನೂ ನೆನಪಿದೆ. ‘ನನ್ನ ಇಪ್ಪತ್ತೈದು ಮಕ್ಕಳಿದ್ದಾರೆ. ಅವರಿಗೆ ಆತಿಥ್ಯ ಮಾಡ್ತೀರಿ ಅನ್ನೋದಾದ್ರೆ ಮಾತ್ರ ಬರ್ತೀನಿ’ ಎಂದು ಬಿಟ್ಟರು.   ಬಂದವರೂ ಅಷ್ಟೆ. ಲೇಬರ್ ಯೂನಿಯನ್ ಕಟ್ಟಿ ಬೆಳೆಸಿದವರು. ಬಡವರ ನೋವು ಬಲ್ಲವರು. ಹೀಗಾಗಿ ಅವರೂ ಸಂತೋಷದಿಂದ ಒಪ್ಪಿದರು. ಯಾರೋ ಹೆತ್ತ ಮಕ್ಕಳನ್ನು ತಾವೇ ಹೀಗೆ ಲಾಲಿಸಿ ಪಾಲಿಸಿ, ಓದಿಸಿ, ನಲಿಯುತ್ತಿರುವ ಜಾರ್ಜ್ ಒಬ್ಬ ಗ್ರೇಟ್ ಕ್ಲಾಸ್ ಟೀಚರ್. ಸಂಬಳಕ್ಕಾಗಿ ವೃತ್ತಿ ಮಾಡುತ್ತಿರುವ ನಾವು ಹೆಸರಿಗಷ್ಟೇ ಮೇಷ್ಟ್ರುಗಳು.

ನಮ್ಮ ಜಾರ್ಜ್ ರೀತಿಯೇ ಇರುವ ಮತ್ತೊಬ್ಬ ವಿಶೇಷ ಕ್ಲಾಸ್ ಟೀಚರ್ ಬಗ್ಗೆ ನಾನಿಲ್ಲಿ ಹೇಳಬೇಕು. ಅವರ ಹೆಸರನ್ನು ನಾನು ಬಳಸುವಂತಿಲ್ಲ. ನನ್ನ ಹೆಸರು ಎಲ್ಲೂ ಬರಬಾರದೆಂದು ಮೊದಲೇ ತಾಕೀತು ಮಾಡಿದ್ದಾರೆ. ಗೆಳೆಯರಾದ ಸಿರಾಜ್ ಅಹಮದ್ ಇವರ ಬಗ್ಗೆ ಒಮ್ಮೆ ಮಾಹಿತಿ ಕೊಟ್ಟರು. ನಾನವರನ್ನು ಹುಡುಕಿಕೊಂಡು ಹೋದೆ. ಅವರೋ ಸಂಕೋಚದ ಮುದ್ದೆ. ತಮ್ಮ ಸ್ವಂತ ವಿಷಯ ಹೇಳಿಕೊಳ್ಳಲು ಸುತಾರಾಂ ಒಪ್ಪಲಿಲ್ಲ. ನಾನು, ನನ್ನ ಶಿಷ್ಯ ರವಿ, ಹಟ ಹಿಡಿದು ಕೂತು ಬಿಟ್ಟೆವು. ಮಕ್ಕಳ ಓದಿಗಾಗಿ ಬದುಕನ್ನು ಸವೆಸುತ್ತಿರುವ ತಮ್ಮಂಥವರ ಬಗ್ಗೆ ತಿಳಿದು ಕೊಳ್ಳುವ ಹಂಬಲವಿದೆ ಎಂದು ತಿಳಿಸಿದೆವು. ಆಗ ಒಂದಿಷ್ಟು ಮನ ಹಗುರಾಗಿ ಮಾತಾಡಿದರು.

‘ನಾನು ಕ್ಲರ್ಕ್ ಆಗಿ 36 ವರ್ಷ ಕೆಲ್ಸ ಮಾಡಿ ರಿಟೈರ್ಡ್ ಆಗಿದ್ದೀನಿ. ಈಗ ನನಗೆ 76ವರ್ಷ. ನಂಗೆ ಎರಡು ಗಂಡು ಮಕ್ಕಳು. ಎರಡನೇ ಮಗ ಒಂದು ದಿನ ಮನೆಯಲ್ಲಿದ್ದಾಗಲೇ, ನಮ್ಮ ಕಣ್ಣ ಎದುರೇ ಅಚಾನಕ್ಕಾಗಿ ಕುಸಿದು ಬಿದ್ದ. ಅವನಿಗೆ ಈ ಮೊದ್ಲು ಯಾವ ಕಾಯಿಲೆಗಳೂ ಇರಲಿಲ್ಲ. ಇಪ್ಪತ್ತೇಳು ವರ್ಷದ ಅವನು ಗಟ್ಟಿ ಮುಟ್ಟಾಗಿದ್ದ. ಡಾಕ್ಟ್ರು ನೋಡಿ ಹೃದಯಾಘಾತ ಆಗಿದೆ ಅಂದ್ರು. ಬೆಳೆದು ನಿಂತ ಮಗ ಬಾಳೆ ಕಂಬದಂತೆ ಬಿದ್ದವನು ಮತ್ತೆ ಮೇಲೆ ಏಳಲಿಲ್ಲ. ಈ ಘಟನೆ ನಮಗೆಲ್ಲಾ ಆಘಾತ ತಂದಿತು. ಅವನ ಮಣ್ಣು ಮಾಡಿ, ಆ ದುಃಖವ ಇನ್ನೂ ಸುಧಾರಿಸಿಕೊಳ್ಳುವುದರಲ್ಲಿದ್ದೆವು. ಅಷ್ಟ ರಲ್ಲೇ ನಮ್ಮ ಮೇಲೆ ಮತ್ತೊಂದು ಸಿಡಿಲು ಬಡೀತು ನೋಡಿ ಆಗ ಮಾತ್ರ ಸುಧಾರಿಸಿಕೊಳ್ಳೋಕೆ ಆಗಲಿಲ್ಲ.

ನನ್ನ ಮತ್ತೊಬ್ಬ ಮಗ ಬಿ.ಇ. ಮೆಕಾನಿಕ್ಸ್‌ನಲ್ಲಿ ಗೋಲ್ಡ್ ಮೆಡಲ್ ತಗೊಂಡಿದ್ದ. ಓದು ಮುಗಿಸಿದ ಮೇಲೆ ನಮ್ಮ ಜೊತೆಗೇ ಬಂದಿದ್ದ. ಅವನಿಗೆ ಹುಡುಗಿ ಹುಡುಕೋಕೆ ಶುರು ಮಾಡಿದ್ವಿ.  ಮಗ ಪ್ರಶಾಂತ ಗೆಳೆಯರ ಜೊತೆ ಶಟಲ್‌ಕಾಕ್ ಆಡೋದಕ್ಕೆ ದಿನಾ ಬೆಳಿಗ್ಗೆ ಹೋಗ್ತಾ ಇದ್ದ. ಆಟ ಆಡ್ತಾ ಇದ್ದೋನು, ಜಾರಿ ಕೆಳಕ್ಕೆ ಬಿದ್ದನಂತೆ. ಅಷ್ಟೇ ನೋಡಿ ಅವನೂ ಮತ್ತೆ ಕಣ್ಣು ಬಿಡಲಿಲ್ಲ. ಅವನಿಗಾಗಿದ್ದು, ಹಾರ್ಟ್ ಆಟ್ಯಾಕ್ ಅಂತ ಗೊತ್ತಾದಾಗ ‌ನಮ್ಮ ಜೀವವೇ ಹೋದಂ ಗಾಯ್ತು. ಎಲ್ಲಾ ಸಿನಿಮಾದಲ್ಲಿ ನಡೆದಂಗೆ ನಡೆದು ಹೋಯ್ತು. ಕೇಳೊ ನಿಮ್ಮಂಥವರಿಗೆ ಇದೆಲ್ಲಾ ಆಶ್ಚರ್ಯ ಅನ್ನಿಸಬಹುದು. ಸುಳ್ಳು ಅಂತನ್ನಿಸ ಬಹುದು. ಒಟ್ನಲ್ಲಿ ದೇವ್ರು ನನ್ನೆರಡು ಮಕ್ಕಳ ಹೃದ ಯಾನು ಒಂದೇ ಏಟಿಗೆ ಬಡಿದು ನಿಲ್ಲಿಸಿಬಿಟ್ಟ.

ನಮ್ಮ ಗ್ರಹಚಾರ ಹಿಂಗಾಗಿ ಬಿಡ್ತಲ್ಲ ಅಂತ ಹಣೆಹಣೆ ಚಚ್ಕೊಂಡ್ವಿ. ಹೆತ್ತ ಎರಡೂ ಕರುಳ ಕೊಬೆಗಳು ಕೈ ತಪ್ಪಿ ಹೋದ ಮೇಲೆ ಮನೆಯಲ್ಲಿ ಉಳಿದವರು ನಾನು ನನ್ನ ಹೆಂಡ್ತಿ ಇಬ್ರೇನೆ ನೋಡಿ ಸಾರ್. ನಾವಿಬ್ರು ಸೇರಿ ನಮ್ಮ ಜೀವನಾನ ಎಲ್ಲಿಂದ ಶುರು ಮಾಡಿದ್ದೆವೋ, ಅಲ್ಲಿಗೆ ಮತ್ತೆ ಜೀವನದ ಚಕ್ರ ವಾಪಸ್ಸು ಬಂದು ನಿಂತ್ ಬಿಡ್ತು. ಪುತ್ರ ಶೋಕಂ ನಿರಂತರಂ ಅಂತಾರಲ್ಲ ಆ ಮಾತು ನಿಜ ಸಾರ್. ಆ ನೋವು ಅನುಭವಿಸಿದವರಿಗೇ ಆ ಅರ್ಥ ತಿಳಿವಾಗೋದು. ಬೆಳೆದ ಮಕ್ಕಳ ಮಣ್ಣಿ ಗಾಕೋವಂಥ ಕಷ್ಟದ ಸಂದರ್ಭ ಯಾವ ಅಪ್ಪ ಅಮ್ಮನಿಗೂ ಬರಬಾರದು ಸಾರ್. ನೋಡಿ ಪ್ರಕೃತಿ ವಿಚಿತ್ರಾನ! ಸಾಯಬೇಕಾದ ನಾವು ಉಳ್ಕಂಡ್ವಿ.  ಬಾಳಿ ಬದುಕಬೇಕಾದ ಆ ಜೀವಗಳು ನೆಲ ಸೇರಿ ಬಿಟ್ವು. ಯಾವ ಜನುಮದಲ್ಲಿ ಯಾರಿಗೆ ಅನ್ಯಾಯ ಮಾಡಿದ್ವೋ, ಆ ದೇವ್ರು ಸರಿಯಾಗಿ ಸೇಡು ತೀರಿಸ್ಕೊಂಡ್ ಬಿಟ್ಟ.

ಆಗಿದ್ದಾಗೋಯ್ತು ಬಿಡೂಂತ ಕಣ್ಣೀರಾಕ್ತ, ಪರಸ್ಪರ ಸಮಾಧಾನ ಹೇಳ್ಕೋತ ಕಾಲ ನೂಕ್ತ ಇದ್ವಿ. ಮನೇಲಿ ನಾನು ಸುಮ್ಮನಿರಬಾರದು. ಮಕ್ಕಳ ಸಾವು ನೆನಪಾಗಿ ಕಾಟ ಕೊಡುತ್ತೇಂತ ಅದನ್ನೆಲ್ಲಾ ಮರೆಯೋಕೆ ನಮ್ಮ ಸುತ್ತಮುತ್ತ ಓದುವ ಮಕ್ಕಳನ್ನು ಮನೆಗೆ ಕರೆಸಿಕೊಂಡು ಉಚಿತವಾಗಿ ಟ್ಯೂಶನ್ ಹೇಳ್ಕೊಡೋಕೆ ಶುರು ಮಾಡ್ದೆ. ಬಡಮಕ್ಕಳಿಗೆ ಫೀಜು, ಬಟ್ಟೆ, ಪುಸ್ತಕ, ಕೈಚೀಲ ಸಿಗೋಥರ ವ್ಯವಸ್ಥೆ ಮಾಡ್ದೆ. ಬೇರೆ ಮಕ್ಕಳನ್ನು ಪ್ರೀತಿಸುತ್ತಾ, ನಮ್ಮ ಮಕ್ಕಳ ಸಾವನ್ನು ಹಿಂಗಾದ್ರೂ ಮರೀಬಹು ದೂಂತ ಏನೇನೋ ಮಾಡ್ತಾ ಇದ್ದೆ. ನನ್ನ ಗ್ರಹಚಾರ ನೆಟ್ಟಗಿರಲಿಲ್ಲ. 

ನನ್ನ ಹೆಂಡ್ತಿಗೆ ಪಾರ್ಕಿನ್‌ಸನ್ ಅನ್ನೊ ವಿಚಿತ್ರ ಕಾಯಿಲೆ ಗಂಟ್ಹಾಕಿಕೊಳ್ತು. ನನ್ನಾಕೆ  ಕಾಲು ಕಳ್ಕೊಂಡು ನೆಲ ಹಿಡಿದು ಮಗುವಿನಂತಾದಳು. ಅವಳನ್ನು ಏನಾದ್ರು ಮಾಡಿ ಉಳಿಸಿಕೊಳ್ಳಬೇ ಕೂಂತ ಮೂರು ತಿಂಗಳು ಒದ್ದಾಡಿದೆ. ಎಲ್ಲಾ ಥರದ ಔಷಧಿ ಮಾಡಿಸಿದೆ. ಮೂರು ತಿಂಗಳ ನಂತರ ನನ್ನ ಬಿಟ್ಟು ಹೊರಟು ಹೋದಳು. ಹಿಂಗೆ ಒಬ್ಬೊಬ್ಬರಾಗಿ ನನ್ನ ಬಿಟ್ಟು ಹೊರಟೋದ್ರು.

ಆಕೆ ಫೋಟಾನ ದಿನಾ ಪೂಜೆ ಮಾಡ್ತೀನಿ. ಜೀವನದಲ್ಲಿ ಬರೋದೆಲ್ಲಾ ಒಪ್ಕೊಬೇಕು ಅನ್ನೋ ಕಹಿ ಸತ್ಯನ ಅರ್ಥಮಾಡ್ಕೊಂಡಿದ್ದೀನಿ. ಇನ್ಮುಂದೆ ಜೀವ ಇರೋ ತಂಕ ನಾಲ್ಕು ಮಕ್ಕಳಿಗೆ ಕೈಲಾದ ಉಪಕಾರ ಮಾಡಬೇಕು. ಆಗಿ ಹೋಗಿದ್ದೆಲ್ಲಾ ನೆನೆಸಿಕೊಂಡು ಕೊರಗೋದಕ್ಕಿಂತ, ಮುಂದಿನ ಜೀವನ ಎದುರಿಸೋ ಛಲ ಬೆಳಸಿಕೊಳ್ಳಬೇಕು ಅಂತ ಬದುಕ್ತಾ ಇದ್ದೀನಿ ಸಾರ್. 

ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ಓದುವ ಬಡ ಮಕ್ಕಳ ಗುರ್ತಿಸಿ ಸ್ಕಾಲರ್‌ಶಿಪ್ ಕೊಡ್ತಾ ಇದ್ದೀನಿ. ನಮ್ಮ ಬಡಾವಣೆ ಜನರಿಗೆ ಉಚಿತ ಲೈಬ್ರರಿ ಮಾಡಿದ್ದೀನಿ. ಎಕ್ಸಾಮಿಗೆ ತಯಾರಾಗೋ ಮಕ್ಕಳು ಇಲ್ಲಿ ಬಂದು ಉಚಿತವಾಗಿ ಓದಬಹುದು. ಅವರಿ ಗಾಗಿ ನೋಟ್ಸ್, ಜನರಲ್ ನಾಲೆಡ್ಜ್ ಪಾಯಿಂಟ್ಸ್ ಎಲ್ಲಾ ತಯಾರಿ ಮಾಡಿ ಕೊಡ್ತೀನಿ. ಮನೆ ಮನೆಗೂ ನಾನೇ ಪುಸ್ತಕ ಹೊತ್ಕೊಂ ಡೋಗಿ ಮಕ್ಕಳಿಗೆ, ದೊಡ್ಡೋರಿಗೆ, ಕೊಟ್ಟು ಬರ್ತೀನಿ. ಓದಕ್ಕಾಗೊಲ್ಲ ಅನ್ನೋರಿಗೆ ಆ ಪುಸ್ತದಲ್ಲಿರೋ ಒಳ್ಳೆ ಅಂಶಗಳನ್ನು ನಾನೇ ಹೆಕ್ಕಿ ಕಥೆ ಥರ ಹೇಳ್ತೀನಿ. ಈಗ ಜನ ನಮ್ಮತ್ರ ಟೈಮಿಲ್ಲ ಸ್ವಾಮಿ ಅಂತಾರೆ. ಆದ್ರೂ ನಾನು ಬಿಡಲ್ಲ. ಇತ್ತೀಚಿಗೆ ಕನ್ನಡ ಪುಸ್ತಕ ಓದೋರೆ ಕಮ್ಮಿಯಾಗಿರೋದು ಬ್ಯಾಸರದ ಸಂಗತಿ ಸಾರ್.

ನಾವೆಲ್ಲಾ ಓದೋ ಕಾಲದಲ್ಲಿ ಪಠ್ಯ ಪುಸ್ತಕಗಳೇ ಸರಿಯಾಗಿ ಸಿಕ್ತಿರಲಿಲ್ಲ. ಎಷ್ಟೋ ಸಲ ಇನ್ನೊಬ್ಬರ ಹತ್ರ ಪುಸ್ತಕ ಇಸ್ಕೊಂಡು ಬರೆದಿಟ್ಟುಕೊಂಡು ಓದಿದ್ದೀನಿ. ಆದ್ರೆ ಈಗಿನ ಮಕ್ಕಳು ಇಷ್ಟು ಸುಲಭದಲ್ಲಿ ಪುಸ್ತಕ ಸಿಕ್ರೂ ಓದಲ್ಲ ಅಂತಾವಲ್ಲ ನೋಡಿ.

ಬೆಳಿಗ್ಗೆ ಎದ್ದು ಬೀದಿಯ ಎಲ್ಲಾ ಮಕ್ಕಳ ಕೈಹಿಡಿದು ಶಾಲೆಗೆ ಹೋಗಿ ಬಿಟ್ಟು ಬರ್ತೀನಿ. ನಾನು ಅಜ್ಜ ಆಗಿದ್ರೆ, ಮೊಮ್ಮಕ್ಕಳು ಇರ್ತಾ ಇರಲಿಲ್ವ. ಅವೇ ಇವೂಂತ ಮನಸ್ಸಿಲ್ಲಿ ಅಂದ್ಕೋತಿನಿ. ಪ್ರೀತಿಸೋಕೆ ರಕ್ತ ಸಂಬಂಧಿಗಳೇ ಆಗಿರಬೇಕು ಅಂತ ನಿಯಮ ಏನು ಇಲ್ವಲ್ಲ ಸಾರ್.

ಇರೋ ತನಕ ದೇವ್ರು ಕೊಟ್ಟ ಪ್ರೀತಿನ ಹಂಚಿ ಹೋಗ್ತೀನಿ. ಯಾರಿಗೂ ತೊಂದ್ರೆ ಕೊಡ್ದೆ ಬದುಕ್ತೀನಿ. ನನ್ನ ಕಣ್ಣೀರನ್ನ ಯಾರಿಗೂ ತೋರಿಸಬಾರ್ದು ಅಂದ್ಕೊಂಡಿದ್ದೀನಿ. ನನ್ನ ಕೈಲಾಗಿದ್ದು ಮಾಡ್ತೀನಿ. ನನ್ನ ಸಂಬಂಧಿಕರ ಒಟ್ಟು ಹದಿಮೂರು ಮಕ್ಕಳಿಗೆ ಮ್ಯೂಚುಯಲ್ ಫಂಡ್ ಮಾಡ್ಸಿದ್ದೀನಿ. ಅವರು ಯೌವ್ವನಕ್ಕೆ ಬಂದಾಗ ಅವರ ಓದಿನ ಖರ್ಚಿಗೆ ತೊಂದ್ರೆ ಆಗ್ದೆ ಇರಲಿ ಎಂದು. ಈ ಮೇಲಿರೋ ಫೋಟೊಗಳ ಸಾಲಿಗೆ ನಾನು ಸೇರೋತನಕ, ಪುಟ್ಟ ಮಕ್ಕಳ ಓದಿನಲ್ಲಿ ಒಂದಾಗಿ ಉಸಿರಾಡ್ತೀನಿ’ ಎಂದು ಹೇಳಿ ಮೌನ ವಾದರು. ಅವರ ಕಣ್ಣುಗಳು ಸಣ್ಣಗೆ ತೇವವಾಗು ತ್ತಿದ್ದವು.  ನಾನು ಅಳೋದಿಲ್ಲ ಎಂದು ಅವರು ಹೇಳಿದರೂ ಮನಸ್ಸು ಭಾರವಾಗಿ ಕಣ್ಣೀರು ತರಿಸಿಯೇ ಬಿಟ್ಟವು. 

ಹೀಗೆ, ತಮ್ಮ ಬದುಕನ್ನು ಗಾಣದೆತ್ತಿನಂತೆ ಅನ್ಯರ ಸುಖಕ್ಕಾಗಿ ತೇಯುವ ಅನೇಕರನ್ನು ನಾನು ನೋಡಿದ್ದೇನೆ. ಅವರಲ್ಲಿ, ಬಾದಾಮಿಯ ಉಪ ನ್ಯಾಸಕಿ ಕಸ್ತೂರಿ ಬಾಯರಿ ಮೂವತ್ತು ವರ್ಷ ಮಕ್ಕಳಿಗೆ ಉಚಿತ ಪಾಠ ಹೇಳಿದ್ದಾರೆ. ಅನೇಕ ಮಕ್ಕಳ ಸಾಕಿ ಸಲಹಲು ಮುಂದಾಗಿ ಕಷ್ಟಗಳನ್ನೂ ಮೈಮೇಲೆ ಎಳೆದುಕೊಂಡಿದ್ದಾರೆ. ಬೈದು, ಬುದ್ಧಿ ಹೇಳಿ, ತಿದ್ದಿ ತೀಡಿ ಅನೇಕರ ಬದುಕಿಗೆ ದಾರಿ ದೀಪವಾಗಿದ್ದಾರೆ. ಇಡೀ ಬದುಕನ್ನೇ ಓದುವ ಮಕ್ಕಳಿಗಾಗಿ ಮೀಸಲಾಗಿಟ್ಟು ಈಗ ಹೈರಾಣಾಗಿ ಕೂತಿದ್ದಾರೆ. ಹೀಗೆ ಬೇರೆಯವರ ಸುಖಕ್ಕಾಗಿ ಹಾತೊರೆಯುವ ಒಳ್ಳೆ ಮನಸ್ಸಿನ ಜನರೇ ಈಗ ಕಮ್ಮಿ.  ಜಾರ್ಜ್, ಕಸ್ತೂರಿ ಬಾಯರಿ ಹಾಗೂ ನೊಂದ ಆ ಹಿರಿಜೀವಗಳು ಸದಾ ನನ್ನ ಮನಸ್ಸಿ ನಲ್ಲಿರುತ್ತಾರೆ. ಮಕ್ಕಳ ಪಾಲಿಗೆ ಇಂಥವರೇ ರಿಯಲ್ ಕ್ಲಾಸ್ ಟೀಚರ್‌ಗಳು. ಮಕ್ಕಳ ಓದಿನ ಬದುಕಿಗೆ ಬೆಳಕಾಗುತ್ತಿರುವ ಈ ಹಣತೆಗಳ ಸಾಲು ಇನ್ನೂ ಹೆಚ್ಚಾಗಲಿ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT