ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲುಮಿಯಾ 640 ಎಕ್ಸ್ಎಲ್‌ ಒಳ್ಳೇ ಕ್ಯಾಮೆರಾ ಬೇಕೆಂದವರಿಗೆ

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ನೋಕಿಯಾ ಫೋನ್‌ಗಳಲ್ಲಿ ಬಳಸುತ್ತಿದ್ದ ಕ್ಯಾಮೆರಾಗಳು ನೀಡುವ ಬೆಲೆಗೆ ನಿಜಕ್ಕೂ ಚೆನ್ನಾಗಿದ್ದವು. ಉತ್ತಮ ಕ್ಯಾಮೆರಾ ತಯಾರಿಸುವ ತನ್ನ ಈ ಅನುಭವವನ್ನು ನೋಕಿಯಾ ಕಂಪೆನಿ ಲುಮಿಯಾ ಶ್ರೇಣಿಯ ವಿಂಡೋಸ್ ಫೋನ್‌ಗಳಿಗೂ ವಿಸ್ತರಿಸಿದೆ. ಆದರೆ ಇಲ್ಲಿ ಒಂದು ಸಣ್ಣ ತೊಡಕು. ಅದೇನೆಂದರೆ ನಿಜಕ್ಕೂ ಉತ್ತಮ ಕ್ಯಾಮೆರಾ ಇರುವ ಲುಮಿಯಾ ಫೋನ್ ಬೇಕಿದ್ದರೆ ನೀವು ₹35 ಸಾವಿರಕ್ಕಿಂತ ಹೆಚ್ಚು ಹಣ ನೀಡಬೇಕು (ಲುಮಿಯಾ 930, 1020, 1520, ಇತ್ಯಾದಿ). ಈಗ ಮೈಕ್ರೋಸಾಫ್ಟ್ ಮಧ್ಯಮ ಬೆಲೆಗೇ ಉತ್ತಮ ಕ್ಯಾಮೆರಾ ಫೋನ್ ನೀಡಿದೆ. ಅದುವೇ ಮೈಕ್ರೋಸಾಫ್ಟ್ ಲುಮಿಯಾ 640 ಎಕ್ಸ್ಎಲ್ (Microsoft Lumia 640 XL). ಇದು ನಮ್ಮ ಈ ವಾರದ ಗ್ಯಾಜೆಟ್.

ಗುಣವೈಶಿಷ್ಟ್ಯಗಳು
1.2 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಪ್ರೊಸೆಸರ್ (Quad-core 1.2 GHz Snapdragon 400), ಗ್ರಾಫಿಕ್ಸ್‌ಗೆ ಪ್ರತ್ಯೇಕ ಪ್ರೊಸೆಸರ್, 1 + 8 ಗಿಗಾಬೈಟ್ ಮೆಮೊರಿ, 128 ಗಿಗಾಬೈಟ್ ತನಕ ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ, ಎರಡು ಮೈಕ್ರೊಸಿಮ್, 5.7 ಇಂಚು ಗಾತ್ರದ 720 x 1280 ಪಿಕ್ಸೆಲ್ ರೆಸೊಲೂಶನ್‌ನ ಐಪಿಎಸ್ ಪರದೆ, ಗೊರಿಲ್ಲ-3 ಗಾಜು, 13 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಮತ್ತು 5 ಮೆಗಾಪಿಕ್ಸೆಲ್‌ನ ಇನ್ನೊಂದು (ಎದುರು ಗಡೆಯ ಸ್ವಂತೀ) ಕ್ಯಾಮೆರಾ, ಹೈಡೆಫಿನಿಶನ್ ವಿಡಿಯೊ ಚಿತ್ರೀಕರಣ, ವೈಫೈ, ಬ್ಲೂಟೂತ್, ಎನ್ಎಫ್‌ಸಿ, ಎಫ್ಎಂ ರೇಡಿಯೊ, 157.9 x 81.5 x 9 ಮಿ.ಮೀ. ಗಾತ್ರ, 171 ಗ್ರಾಂ ತೂಕ, 3000 mAh ಶಕ್ತಿಯ ತೆಗೆಯ ಬಹುದಾದ ಬದಲಿಸ ಬಹುದಾದ ಬ್ಯಾಟರಿ, ನಾಲ್ಕು ಬಣ್ಣಗಳಲ್ಲಿ ಲಭ್ಯ, ಇತ್ಯಾದಿ. ನಿಗದಿತ ಬೆಲೆ ₹15,499.

ಎಲ್ಲ ಲುಮಿಯಾ ಫೋನ್‌ಗಳಂತೆ ಇದರಲ್ಲೂ ರಚನೆ ಮತ್ತು ವಿನ್ಯಾಸ ಚೆನ್ನಾಗಿದೆ.  ಬಲಗಡೆ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಮೇಲ್ಗಡೆ 3.5 ಮಿ.ಮೀ. ಇಯರ್‌ಫೋನ್‌ ಕಿಂಡಿ ಮತ್ತು ಕೆಳಗಡೆ ಮೈಕ್ರೊಯುಎಸ್‌ಬಿ ಕಿಂಡಿಗಳಿವೆ. ಪರದೆಯ ಕೆಳಗಿನ ಭಾಗದಲ್ಲಿ ಮೂರು ಸಾಫ್ಟ್‌ಬಟನ್‌ಗಳು ಅಗತ್ಯವಿದ್ದಾಗ ಮೂಡಿ ಬರುತ್ತವೆ. ಕೆಲವು ಸಂದರ್ಭಗಳಲ್ಲಿ ಬಟನ್ ಮೂಡಿ ಬರದೆ ಸ್ವಲ್ಪ ತಡಕಾಡಬೇಕಾಗುತ್ತದೆ. ಕೆಲವು ಆಟಗಳಲ್ಲಿ ಇದು ಸಾಮಾನ್ಯ. ಕೆಲವು ಫೋನ್‌ಗಳಲ್ಲಿ ಈ ಬಟನ್‌ಗಳು ಪರದೆಯಿಂದ ಕೆಳಗಿನ ಭಾಗದಲ್ಲಿ ಶಾಶ್ವತವಾಗಿ ಇರುವ ಸಾಫ್ಟ್‌ಬಟನ್‌ಗಳಾಗಿರುತ್ತವೆ. ಆ ರೀತಿ ಇದ್ದರೆ ನನಗೆ ಇಷ್ಟ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಹೆಚ್ಚಿನ ಆಂಡ್ರಾಯ್ಡ್‌್ ಫೋನ್‌ಗಳಲ್ಲಿ ಹೀಗೆಯೇ ಇರುವುದು.

ಈ ಫೋನಿನ ಗಾತ್ರ ಸ್ವಲ್ಪ ದೊಡ್ಡದೇ ಎನ್ನಬಹುದು. ಈ ಗಾತ್ರ ಮತ್ತು ಇದಕ್ಕಿಂತ ದೊಡ್ಡದಾದ ಆದರೆ ಟ್ಯಾಬ್ಲೆಟ್‌ಗಳಿಗಿಂತ ಚಿಕ್ಕದಾದ ಫೋನ್‌ಗಳಿಗೆ ಫ್ಯಾಬ್ಲೆಟ್ ಎಂಬ ಹೆಸರೂ ಇದೆ. ಈ ಫೋನ್ ಫ್ಯಾಬ್ಲೆಟ್ ಎನಿಸಿಕೊಳ್ಳಲು ಸರಿಯಾದ ಗಾತ್ರದ್ದಾಗಿದೆ. ಇದನ್ನು ಒಂದೇ ಕೈಯಲ್ಲಿ ಹಿಡಿದು ಕೆಲಸ ಮಾಡಲು, ಅಂದರೆ ಫೋನ್ ಆಗಿ ಬಳಸಲು ಕಷ್ಟ. ಕಷ್ಟವೇನು, ಸಾಧ್ಯವೇ ಇಲ್ಲ ಎನ್ನಬಹುದು. ಕೆಲವು ಲೆನೊವೋ ಫ್ಯಾಬ್ಲೆಟ್‌ಗಳಲ್ಲಿ ಒಂದು ಕೈಯಲ್ಲಿ ಹಿಡಿದು ಬಳಸಲೆಂದೇ ವಿಶೇಷ ಸೌಲಭ್ಯವಿದೆ. ಈ ಫೋನಿನಲ್ಲಿ ಅಂತಹ ಸೌಲಭ್ಯವಿಲ್ಲ.

ಈ ಫೋನ್, ಅಲ್ಲ ಫ್ಯಾಬ್ಲೆಟ್ನ ಕೆಲಸದ ವೇಗ ತೃಪ್ತಿದಾಯಕವಾಗಿದೆ. ಮೂರು ಆಯಾಮಗಳ ಮತ್ತು ಉತ್ತಮ ಗ್ರಾಪಿಕ್ಸ್ ಇರುವ ಆಟಗಳನ್ನು ಆಡುವ ಅನುಭವ ಚೆನ್ನಾಗಿದೆ. ಎಲ್ಲ ಕೆಲಸಗಳನ್ನೂ ಸರಾಗವಾಗಿ ಮಾಡಬಹುದು. ಪ್ರಾಥಮಿಕ ಮೆಮೊರಿ 1 ಗಿಗಾಬೈಟ್ ಮಾತ್ರ ಆದರೂ ಮೈಕ್ರೋಸಾಫ್ಟ್ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯನ್ನು ಬಳಸುವ ಕಾರಣ ಕೆಲಸದ ವೇಗ ಚೆನ್ನಾಗಿಯೇ ಇದೆ. ಈ ಒಂದು ವಿಷಯದಲ್ಲಿ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆ ಆಂಡ್ರಾಯ್ಡ್‌ ಅನ್ನು ಸೋಲಿಸುತ್ತದೆ.

ವಿಡಿಯೊ ವೀಕ್ಷಣೆ ಚೆನ್ನಾಗಿದೆ. ಹೈಡೆಫಿನಿಶನ್ ವಿಡಿಯೊ ವೀಕ್ಷಣೆ ಮಾಡಬಹುದು. ಆದರೆ 4k ವಿಡಿಯೊಗಳನ್ನು ಇದು ಪ್ಲೇ ಮಾಡುವುದಿಲ್ಲ. ಇದರ ಆಡಿಯೊ ಇಂಜಿನ್ ತುಂಬ ಚೆನ್ನಾಗಿದೆ. ಉತ್ತಮ ಸಂಗೀತ ಆಲಿಸಬಹುದು. ಆಟ ಆಡುವಾಗ ಅಥವಾ ಸಿನಿಮಾ ವೀಕ್ಷಣೆ ಮಾಡುವಾಗ ನಿಮ್ಮಲ್ಲಿ ಉತ್ತಮ ಇಯರ್‌ಫೋನ್‌ ಇದ್ದಲ್ಲಿ ಅದನ್ನು ಜೋಡಿಸಿ ಉತ್ತಮ ಸಂಗೀತದ ಅನುಭವ ಪಡೆಯಬಹುದು.

ಲುಮಿಯಾ 640 ಎಕ್ಸ್ಎಲ್‌ನ ಹೆಚ್ಚುಗಾರಿಕೆ ಇರುವುದು ಇದರ ಕ್ಯಾಮೆರಾದಲ್ಲಿ. ಪ್ರಾಥಮಿಕ ಕ್ಯಾಮೆರಾ 13 ಮೆಗಾಪಿಕ್ಸೆಲ್‌ನದ್ದು. ಲುಮಿಯಾ ಕ್ಯಾಮೆರಾಗಳಲ್ಲಿರುವ ವಿಶೇಷ ಸವಲತ್ತುಗಳು ಇದರಲ್ಲೂ ಇವೆ. ಇದರ ಕ್ಯಾಮೆರಾದ ಗುಣಮಟ್ಟ ತುಂಬ ಚೆನ್ನಾಗಿದೆ. ಅತಿ ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೊ ಮೂಡಿಬರುತ್ತದೆ. ಅತಿ ಚಿಕ್ಕ ವಸ್ತುಗಳನ್ನು ಅತಿ ಹತ್ತಿರದಿಂದ ಫೋಟೊ ತೆಗೆಯುವ ಮ್ಯಾಕ್ರೋ ಫೋಟೊಗ್ರಫಿ ಕೂಡ ಇದರಲ್ಲಿ ಚೆನ್ನಾಗಿಯೇ ಕೆಲಸ ಮಾಡುತ್ತದೆ. ಈ ಬೆಲೆಯ ಯಾವ ಫೋನಿನಲ್ಲೂ ನಾನು ಇಷ್ಟು ಉತ್ತಮ ಕ್ಯಾಮೆರಾವನ್ನು ಕಂಡಿಲ್ಲ. ವಿಡಿಯೊ ಚಿತ್ರೀಕರಣವೂ ತೃಪ್ತಿದಾಯಕವಾಗಿದೆ.

ಕೆಲವು ಲುಮಿಯಾ ಫೋನ್‌ಗಳಲ್ಲಿರುವಂತೆ ಇದರಲ್ಲಿ ಕ್ಯಾಮೆರಾಕ್ಕೆ ಪ್ರತ್ಯೇಕ ಬಟನ್ ಮಾತ್ರ ಇಲ್ಲ. ಇದರ ಬ್ಯಾಟರಿ ಚೆನ್ನಾಗಿದೆ. ಒಂದೂವರೆ ದಿನ ಬಾಳಿಕೆ ಬರುತ್ತದೆ. ಮೈಕ್ರೋಸಾಫ್ಟ್‌ನವರು ವಿಂಡೋಸ್‌ನ ಮುಂದಿನ ಆವೃತ್ತಿ 10ನ್ನು ಘೋಷಿಸಿದ್ದಾರೆ. ವಿಂಡೋಸ್ 10 ಎಲ್ಲ ಸಾಧನಗಳಲ್ಲಿ ಒಂದೇ ನಮೂನೆಯ ಬಳಕೆಯ ಅನುಭವ ನೀಡುತ್ತದೆ. ಅಂದರೆ ಫೋನ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್, ಗಣಕ ಎಲ್ಲದರಲ್ಲೂ ಒಂದೇ ಅನುಭವ ಇರುತ್ತದೆ. ಈಗಿರುವ ವಿಂಡೋಸ್ 7 ಮತ್ತು 8 ಆವೃತ್ತಿಗಳಿಗೆ ವಿಂಡೋಸ್ 10ನ್ನು ಉಚಿತವಾಗಿ ನೀಡುವುದಾಗಿಯೂ ಘೋಷಿಸಿದ್ದಾರೆ. ಅಂದರೆ ಈ ಫೋನನ್ನು ವಿಂಡೋಸ್ 10ಕ್ಕೆ, ಅದು ಲಭ್ಯವಾದಾಗ, ನವೀಕರಿಸಿಕೊಳ್ಳಬಹುದು.  

ವಾರದ ಆಪ್
ಆಕಾಶವಾಣಿ

ಆಕಾಶವಾಣಿ ಯಾರಿಗೆ ಗೊತ್ತಿಲ್ಲ? ಸದಭಿರುಚಿಯ ಕಾರ್ಯಕ್ರಮಗಳಿಗೆ ಈಗಲೂ ಆಕಾಶವಾಣಿಯೇ ಬೇಕು. ಕೆಲವು ಫೋನ್‌ಗಳಲ್ಲಿ ಎಫ್ಎಂ ರೇಡಿಯೊ ಇರುವುದಿಲ್ಲ. ಮೀಡಿಯಂ ಮತ್ತು ಶಾರ್ಟ್‌ವೇವ್ ರೇಡಿಯೊಗಳಂತೂ ಫೋನಿನಲ್ಲಿ ಇರುವುದು ತುಂಬ ಕಷ್ಟ ಸಾಧ್ಯ. ನಿಮ್ಮ ಫೋನಿನಲ್ಲಿ ಎಫ್ಎಂ ರೇಡಿಯೊ ಇಲ್ಲವಾದಲ್ಲಿ ಆಕಾಶವಾಣಿಯ ಕಿರುತಂತ್ರಾಂಶ (ಆಪ್) ಹಾಕಿಕೊಳ್ಳಬಹುದು. ಇದಕ್ಕಾಗಿ ನೀವು ಗೂಗಲ್್ ಪ್ಲೇ ಸ್ಟೋರಿನಲ್ಲಿ All India Radio Live ಎಂದು ಹುಡುಕಬೇಕು. ಈ ಕಿರುತಂತ್ರಾಂಶದ ಗುಣಮಟ್ಟ ಚೆನ್ನಾಗಿದೆ. ಧ್ವನಿ ಸ್ಪಷ್ಟವಾಗಿದೆ. ನೀವು ಈಗಾಗಲೇ ಊಹಿಸಿದಂತೆ ಇದು ಅಂತರಜಾಲದ ಮೂಲಕ ಕೆಲಸ ಮಾಡುತ್ತದೆ. ಎಲ್ಲ ಸರಿ. ಆದರೆ ಒಂದು ಬೇಸರದ ಸಂಗತಿಯೆಂದರೆ ಇದರಲ್ಲಿ ಕನ್ನಡದ ಯಾವುದೇ ರೇಡಿಯೊ ಕೇಂದ್ರವಿಲ್ಲ. ಮೈಸೂರಿನಿಂದ ಪ್ರಾರಂಭವಾದ ಆಕಾಶವಾಣಿಗೆ ಕಿರುತಂತ್ರಾಂಶದ ಕಾಲಕ್ಕೆ ಬಂದಾಗ ಕನ್ನಡವೇ ಇಲ್ಲ ಎನ್ನುವಂತಹ ಗತಿ ಬಂದಿದೆ. ದಯವಿಟ್ಟು ಎಲ್ಲರೂ ಗೂಗಲ್‌ ಪ್ಲೇ ಸ್ಟೋರಿನಲ್ಲಿ ಈ ಕಿರುತಂತ್ರಾಂಶದ ಪುಟಕ್ಕೆ ಭೇಟಿ ನೀಡಿ ಕನ್ನಡವನ್ನೂ ನೀಡಿ ಎಂದು ಒತ್ತಾಯಿಸಿ ಅಲ್ಲಿ ಕಮೆಂಟ್ ದಾಖಲಿಸಿ. ಆಗಲಾದರೂ ಪ್ರಸಾರಭಾರತಿಯವರಿಗೆ ಕನ್ನಡ ಎಂಬ ಭಾಷೆಯೂ ಇದೆ, ಅದನ್ನು ಆಲಿಸುವವರೂ ಇದ್ದಾರೆ ಎಂದು ಎಚ್ಚರವಾಗಬಹುದೇನೋ? 

ಗ್ಯಾಜೆಟ್ ಸುದ್ದಿ
ಎಲ್ಲೆಂದರಲ್ಲಿ ಗೀಚಿ

ಗಣಕ ಬಂತು, ಕೀಲಿಮಣೆ ಬಂತು, ಮೌಸ್ ಬಂತು, ಸ್ಮಾರ್ಟ್‌ಫೋನ್‌  ಬಂತು, ಸ್ಪರ್ಶಪರದೆ ಬಂತು - ಈ ಪಟ್ಟಿಗೆ ಈಗ ಇನ್ನೊಂದು ಹೊಸ ಸೇರ್ಪಡೆ ಫ್ರೀ. ಏನು ಈ ಫ್ರೀ ಎಂದರೆ? ಇದನ್ನು ನೀವು ಸ್ಮಾರ್ಟ್‌ಪೆನ್‌ ಎಂದು ಬೇಕಾದರೂ ಕರೆಯಬಹುದು. ಡಿಜಿಟೈಸರ್ ಟ್ಯಾಬ್ಲೆಟ್ ಜೊತೆ ಪೆನ್ ಬರುತ್ತದೆ ತಾನೆ? ಅದನ್ನು ಬಳಸಿ ಡಿಜಿಟೈಸರ್‌ನಲ್ಲಿ ನೀವು ಗೀಚಬಹುದು. ಈ ಫ್ರೀ ಕೂಡ ಅಂತಹ ಒಂದು ಪೆನ್ನಿನ ಮಾದರಿಯಲ್ಲಿ ಕೆಲಸ ಮಾಡುತ್ತದೆ. ವ್ಯತ್ಯಾಸವೇನೆಂದರೆ ಇದಕ್ಕೆ ಡಿಜಿಟೈಸರ್ ಪ್ಯಾಡ್‌ನ ಅಗತ್ಯವಿಲ್ಲ. ಇದನ್ನು ನೀವು ಬಳಸಿ ಎಲ್ಲೆಂದರಲ್ಲಿ ಗೀಚಬಹುದು. ಅದು ನಿಮ್ಮ ಮೇಜು, ಅಡುಗೆ ಮನೆಯಲ್ಲಿರುವ ರೆಫ್ರಿಜರೇಟರ್‌ನ ಮೇಲ್ಮೈ, ಇತ್ಯಾದಿ ಮಾತ್ರವಲ್ಲದೆ ನಿಮ್ಮ ಕಾಲಿನ ಮೇಲೂ ಗೀಚಬಹುದು. ನೀವು ಗೀಚಿದ್ದನ್ನೆಲ್ಲ ಅದು ಅರ್ಥೈಸಿಕೊಂಡು ನಿಮ್ಮ ಸ್ಮಾರ್ಟ್‌ಫೋನಿಗೆ ವರ್ಗಾಯಿಸುತ್ತದೆ. ಇದನ್ನು ನೀವು ಬ್ಲೂಟೂತ್ ಇಯರ್‌ಫೋನ್‌ ಆಗಿಯೂ ಬಳಸಬಹುದು. ಫ್ರೀ ಬೇಕಿದ್ದಲ್ಲಿ ನೀವು 2016ರ ತನಕ ಕಾಯಬೇಕು.

ಗ್ಯಾಜೆಟ್ ಸಲಹೆ
ಯಶವಂತರ ಪ್ರಶ್ನೆ: ಸ್ಕಲ್‌ಕ್ಯಾಂಡಿ S2FRDA-003, ಕ್ರಿಯೇಟಿವ್ EP-630 ಇಯರ್‌ಫೋನ್‌ಗಳಲ್ಲಿ ಯಾವುದು ಉತ್ತಮ?

: ಸ್ಕಲ್‌ಕ್ಯಾಂಡಿ ನಾನು ಬಳಸಿಲ್ಲ. ಅದು ಉತ್ತಮ ಬ್ರ್ಯಾಂಡ್ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಭಾರತದಲ್ಲಿ ದೊರೆಯುತ್ತಿರುವ ಸ್ಕಲ್‌ಕ್ಯಾಂಡಿ ಇಯರ್‌ಫೋನ್‌ಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ನಕಲಿ ಉತ್ಪನ್ನಗಳು ದೊರೆಯುತ್ತಿವೆ ಎಂಬುದಾಗಿ ಓದಿದ್ದೇನೆ. ಕ್ರಿಯೇಟಿವ್ EP-630 ಉತ್ತಮವಾಗಿದೆ. ಹಲವು ವರ್ಷಗಳಿಂದ ನಾವು ಬಳಸುತ್ತಿದ್ದೇವೆ.

ಗ್ಯಾಜೆಟ್ ತರ್ಲೆ
ಇಂಟರ್ನೆಟ್ ಮತ್ತು ಸ್ಮಾರ್ಟ್‌ಫೋನ್‌ಗಳಿಂದಾಚೆಗೂ ಪ್ರಪಂಚ ಇದೆ. ಅದನ್ನೊಮ್ಮೆ ನೋಡು ಎಂದು ಸ್ಮಾರ್ಟ್‌ಫೋನ್‌ ವ್ಯಸನಿಯೊಬ್ಬನಿಗೆ ಹೇಳಿದಾಗ ಆತ ಕೇಳಿದ್ದು -‘ಅಲ್ಲಿಗೆ ಹೇಗೆ ಹೋಗುವುದು? ಅದಕ್ಕೊಂದು ಆಪ್ ಇದೆಯೇ? ಅಥವಾ ಗೂಗಲ್  ಮ್ಯಾಪ್ ಕೊಂಡಿ ಇದ್ದರೆ ಕಳುಹಿಸು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT