ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದ ಮೊದಲ ದಿನ ಯಶಸ್ಸಿನ ಒಂದು ಕಥೆ...

Last Updated 31 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಅಂದು ಸಂಜೆ ನಾಟಕ ಆರಂಭವಾಗಲು ಇನ್ನೂ ಒಂದೂವರೆ ಗಂಟೆ ಸಮಯವಿತ್ತು. ಆದರೂ ರವೀಂದ್ರ ಕಲಾಕ್ಷೇತ್ರ ಕಿಕ್ಕಿರಿದು ತುಂಬಿ ಹೋಗಿತ್ತು. ನಾಟಕ ಆರಂಭವಾಗಲು ಇನ್ನೂ ಒಂದು ಗಂಟೆ ಇರುವಾಗಲೇ ನಾನೂ ಕಲಾಕ್ಷೇತ್ರಕ್ಕೆ ಬಂದೆ. ಮುಖ್ಯ ಬಾಗಿಲಲ್ಲಿ ನಿಂತಿದ್ದ  ಪೊಲೀಸ್‌ ಅಧಿಕಾರಿ ವಿನಯದಿಂದಲೇ ‘ಕೆಳಗೆ ಜಾಗವಿಲ್ಲ, ನೀವು ಬಾಲ್ಕನಿಗೆ ಹೋಗುವುದೇ ಸರಿ’ ಎಂದರು. ಅಷ್ಟರಲ್ಲಿ ಬಾಗಿಲಲ್ಲಿ ನನ್ನನ್ನು ಬಲ್ಲವರು ನಿಂತಿದ್ದರು. ‘ನೀವು ... ಅಲ್ಲವೇ’ ಎಂದರು.

‘ಹೌದು’ ಎಂದೆ. ‘ಬನ್ನಿ’ ‘ಬನ್ನಿ’ ಎಂದು ಒಳಗೆ ಕರೆದು ನನಗಾಗಿ ಮೀಸಲು ಇರಿಸಿದ್ದ ಜಾಗದಲ್ಲಿ ಕೂಡ್ರಿಸಿದರು. ಮುಂದಿನ ಒಂದೆರಡು ಸಾಲು ಬಿಟ್ಟರೆ ಎಲ್ಲಿಯೂ ಕುಳಿತುಕೊಳ್ಳಲು ಜಾಗ ಇರಲಿಲ್ಲ. ನಾಟಕ ಆರಂಭವಾಗುವ ವೇಳೆಗೆ ಅನೇಕರು ಮುಂದೆ ಬಂದು ನೆಲದ ಮೇಲೆ ಕುಳಿತರು. ಎರಡು ಕುರ್ಚಿಗಳ ಸಾಲಿನ ನಡುವಿನ ನಡೆದಾಡುವ ದಾರಿಯಲ್ಲಿಯೂ ಕುರ್ಚಿಗಳು ಬಂದುವು. ಅಕ್ಷರಶಃ ಎಳ್ಳು ಹಾಕಿದರೂ ಕೆಳಗೆ ಬೀಳದಂಥ ಸಂದಣಿ! ಆ ನಾಟಕ ನೋಡಲು ಮುಖ್ಯಮಂತ್ರಿಗಳು ಬರಬೇಕಿತ್ತು.

ಅವರು ಬರುತ್ತಾರೆ ಎಂದು ಭಾರಿ ಸಂಖ್ಯೆಯಲ್ಲಿ ಪೊಲೀಸರು ಕಲಾಕ್ಷೇತ್ರಕ್ಕೆ ಪಹರೆ ಹಾಕಿದ್ದರು. ಮುಖ್ಯಮಂತ್ರಿ ಬರಲಿಲ್ಲ. ಆದರೆ, ಒಳಗೆ ‘ಮುಖ್ಯಮಂತ್ರಿ’ ನಾಟಕದ ಪ್ರದರ್ಶನಕ್ಕೆ ಸಿದ್ಧತೆ ನಡೆದಿತ್ತು. ‘ಮುಖ್ಯಮಂತ್ರಿ’ ಚಂದ್ರು ಸತತವಾಗಿ ಅಭಿನಯಿಸಿದ 601ನೇ ಪ್ರದರ್ಶನ ಅದು (ಡಿ.18).  ನಿನ್ನೆ ಶನಿವಾರ ಇದೇ ನಾಟಕದ 603ನೇ ಪ್ರದರ್ಶನ ರಂಗಶಂಕರದಲ್ಲಿ ಇತ್ತು.

ಕರ್ನಾಟಕದ ಹವ್ಯಾಸಿ ರಂಗಭೂಮಿಯಲ್ಲಿ ಅನೇಕ ನಾಟಕಗಳು ಅನೇಕ ದಾಖಲೆಗಳನ್ನು ನಿರ್ಮಿಸಿವೆ. ಕೆಲವು ನಾಟಕಗಳಿಂದ ನಟರಿಗೆ ಹೆಸರು ಬಂದಿದೆ. ಇನ್ನು ಕೆಲವು ನಾಟಕಗಳಿಂದ ನಾಟಕಕಾರರಿಗೆ ಹೆಸರು ಬಂದಿದೆ. ‘ಮುಖ್ಯಮಂತ್ರಿ’ ನಾಟಕದ ಶ್ರೇಯ ಏನು ಎಂದರೆ ಅದು ನಾಟಕವಾಗಿಯೂ ಪ್ರಸಿದ್ಧವಾಗಿದೆ, ನಟನಾಗಿ ‘ಮುಖ್ಯಮಂತ್ರಿ’ ಚಂದ್ರು ಅವರನ್ನೂ ಪ್ರಸಿದ್ಧಿಗೆ ತಂದಿದೆ.

ಒಂದು ನಾಟಕದ ಹೆಸರು ಒಬ್ಬ ನಟನಿಗೆ ಅಂಟಿಕೊಂಡುದು ‘ಮುಖ್ಯಮಂತ್ರಿ’ ನಾಟಕದ ಇನ್ನೊಂದು ವಿಶಿಷ್ಟ ಶ್ರೇಯ.  ಈ ನಾಟಕದ ಇನ್ನೊಂದು ವೈಶಿಷ್ಟ್ಯ ಎಂದರೆ ಇನ್ನೊಬ್ಬರು ಯಾರೂ ಈ ನಾಟಕವನ್ನು ಇದುವರೆಗೆ ಆಡದೇ  ಇರುವುದು! ಅಷ್ಟರಮಟ್ಟಿಗೆ ಮುಖ್ಯಮಂತ್ರಿ ಪಾತ್ರಕ್ಕೆ ಚಂದ್ರು ಮಾತ್ರ ಸರಿ ಎನ್ನುವ ನಂಬಿಕೆ ಎಲ್ಲರಿಗೂ ಇದ್ದಂತೆ ಇದೆ!

‘ಮುಖ್ಯಮಂತ್ರಿ’ ಮೂಲ ಕನ್ನಡದ ನಾಟಕವೇನೂ ಅಲ್ಲ. ಅದರ ಮೂಲ ಹಿಂದಿ. ರಣಜಿತ್‌ ಕಪೂರ್‌ ಎಂಬುವರು ಬರೆದ ಇದೇ ಹೆಸರಿನ ಕೃತಿಯನ್ನು ಲೋಹಿತಾಶ್ವ ಕನ್ನಡಕ್ಕೆ ತಂದರು. ಅದು 45 ವರ್ಷಗಳ ಹಿಂದಿನ ಮಾತು. ಕಲ್ಕತ್ತೆಯಲ್ಲಿ ಒಬ್ಬ ಜಿಲ್ಲಾಧಿಕಾರಿ ಇದ್ದರು. ಅವರು ಅಲ್ಲಿನ ಆಗಿನ ಮುಖ್ಯಮಂತ್ರಿಯ ಕಿರುಕುಳ ತಾಳದೇ ರಾಜೀನಾಮೆ ಕೊಟ್ಟು ಪತ್ರಿಕೆಯಲ್ಲಿ ಲೇಖನ ಬರೆದರು.

ರಣಜಿತ್‌ ಕಪೂರ್‌ ಅವರ ಮೂಲ ಹಿಂದಿ ನಾಟಕಕ್ಕೆ ಅದು ಪ್ರೇರಣೆಯಾಯಿತು. ಲೋಹಿತಾಶ್ವ ಅದನ್ನು ಕನ್ನಡಕ್ಕೆ ಅನುವಾದಿಸಿ ಅವರೇ ಮುಖ್ಯಮಂತ್ರಿ ಪಾತ್ರವನ್ನೂ ಮಾಡುತ್ತಿದ್ದರು. ಅವರ ಜೊತೆಗೆ ಕಲಾಗಂಗೋತ್ರಿ ತಂಡದ ನಿರ್ದೇಶಕ ಬಿ.ವಿ.ರಾಜಾರಾಂ ಅವರೂ ಅಭಿನಯಿಸುತ್ತಿದ್ದರು. 1980ರ ಡಿಸೆಂಬರ್‌ 4ರ ವರೆಗೆ ‘ಮುಖ್ಯಮಂತ್ರಿ’ ಚಂದ್ರು ಆ ನಾಟಕದಲ್ಲಿ ಅಭಿನಯಿಸಿರಲಿಲ್ಲ.

ಲೋಹಿತಾಶ್ವ ಅವರಿಗೆ ವಿಪರೀತ ಜ್ವರ ಬಂದು  ನಾಟಕದಲ್ಲಿ ಅಭಿನಯಿಸಲು ಆಗದು ಎನ್ನುವಂತೆ  ಆಯಿತು. ಈಗ ಸಂಸ ಬಯಲು ರಂಗ ಮಂದಿರವಾಗಿರುವ ಆಗಿನ ಸೈಕಲ್ ಸ್ಟ್ಯಾಂಡ್‌ ಜಾಗದಲ್ಲಿ ಏಳು ದಿನಗಳ ನಾಟಕೋತ್ಸವವನ್ನು ಕಲಾಗಂಗೋತ್ರಿ ಹಮ್ಮಿಕೊಂಡು ಬಿಟ್ಟಿತ್ತು. ನಾಟಕ ಆಡಲೇ ಬೇಕಿತ್ತು. ಅದುವರೆಗೆ ನಿರ್ದೇಶಕನಾಗಿ ರಾಜಾರಾಂ ಜೊತೆಗೆ ಕೆಲಸ ಮಾಡುತ್ತಿದ್ದ ‘ಮುಖ್ಯಮಂತ್ರಿ’ ಚಂದ್ರು ನಾಟಕದ ಮುಖ್ಯ ಪಾತ್ರಧಾರಿಯಾಗಿ ರಂಗದ ಮೇಲೆ ಬಂದರು.

ಲೋಹಿತಾಶ್ವ ವಿಪರೀತ ಜ್ವರವಿದ್ದರೂ ತಲೆಗೆ ಮಫ್ಲರ್‌ ಸುತ್ತಿಕೊಂಡು ನಾಟಕ ನೋಡಲು ಕುಳಿತುಕೊಂಡಿದ್ದರು. ಎಲ್ಲರಿಗೂ ಅಚ್ಚರಿ ಆಗುವಂತೆ ನಾಟಕ ಭಾರಿ ಚಪ್ಪಾಳೆ ಗಿಟ್ಟಿಸಿತು. ಅದುವರೆಗೆ ಆ ನಾಟಕಕ್ಕೆ ಅಂಥ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಅದಕ್ಕೆ ಚಂದ್ರು ಅವರ ಮಾತಿನ ಚಾತುರ್ಯ ಕಾರಣವಾಯಿತೇ ಅಥವಾ ಅವರು ಮುಖ್ಯಮಂತ್ರಿ ಪಾತ್ರಕ್ಕೆ ಜೀವ ತುಂಬಿದರೇ ಅಥವಾ ಅವರಿಗೆ ಆ ಪಾತ್ರ ಹೇಳಿ ಮಾಡಿಸಿದಂತೆ ಇತ್ತೇ?

ಲೋಹಿತಾಶ್ವ ನೇಪಥ್ಯಕ್ಕೆ ಬಂದು ಚಂದ್ರು ಅವರಿಗೆ ಹೇಳಿದರು. ‘ನನ್ನ ನಾಟಕವನ್ನು ಕೆಡಿಸಿದ್ದೀರಿ, ಆದರೆ, ಜನರಿಗೆ ಹಿಡಿಸಿದ್ದೀರಿ. ಆದರೂ ನನಗೆ ಬೇಜಾರಾಗಿದೆ’ ಎಂದು ಹೇಳಿ ಹೊರಟು ಹೋದರು. ನಾಟಕದ ಅನುವಾದಕರಾಗಿ ಅವರಿಗೆ ಸಹಜವಾಗಿಯೇ ಬೇಸರವಾಗಿತ್ತು. ಎಲ್ಲ ಲೇಖಕರೂ ಹೀಗೆಯೇ. ಮೂಲ ಕೃತಿಯನ್ನು ಕೆಡಿಸದೆ ‘ನಾಟಕ’ವನ್ನು ಸೃಷ್ಟಿ ಮಾಡುವುದು ಕಷ್ಟ! ಅವರ ಬೇಸರಕ್ಕೆ ಇನ್ನೂ ಒಂದು ಕಾರಣ ಇದ್ದಿರಬಹುದು : ಮುಖ್ಯಪಾತ್ರಧಾರಿಯಾಗಿ ಅವರಿಗೆ ಈ ಯಶಸ್ಸು ಸಿಕ್ಕಿರಲಿಲ್ಲ; ಅವರು ಮತ್ತೆ ಎಂದೂ ‘ಮುಖ್ಯಮಂತ್ರಿ’ಯಾಗಿ ಅಭಿನಯಿಸಲಿಲ್ಲ.

ಚಂದ್ರು ಯಾರಿಗೂ ಅವಕಾಶ ಕೊಡಲೇ ಇಲ್ಲ. ನಂತರ ಏನಾಯಿತು ಎಂದರೆ ಚಂದ್ರು ಶಾಸಕರೇ ಆಗಿರಲಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೇ ಆಗಿರಲಿ, ಮಾಡಿದರೆ ಅವರೇ ಮುಖ್ಯಮಂತ್ರಿಯ ಪಾತ್ರ ಮಾಡಬೇಕು. ಇಲ್ಲವಾದರೆ ‘ಆ ನಾಟಕ ಇಲ್ಲ’ ಎನ್ನುವಂತೆ ಆಯಿತು. ರಾಜಕೀಯವೇ ಹಾಗೆ. ಅದು ಬಹಳ ರೋಚಕವಾದುದು. ಅಲ್ಲಿ ಒಬ್ಬರ ಕತ್ತನ್ನು ಮತ್ತೊಬ್ಬರು ಸದಾ ಕುಯ್ಯುತ್ತಲೇ ಇರುತ್ತಾರೆ.

ಸೀಜರ್‌ಗೆ ಚೂರಿ ಹಾಕುವ ಬ್ರೂಟಸ್‌ ಜೊತೆಗೇ ಇರುತ್ತಾನೆ! ‘ಮುಖ್ಯಮಂತ್ರಿ’ ನಾಟಕ ಕೂಡ ಹಾಗೆಯೇ ಇದೆ. ನಮ್ಮ ಸುತ್ತ ನಡೆಯುವ ರಾಜಕೀಯ ವಿದ್ಯಮಾನಗಳೆಲ್ಲ ರಂಗದ ಮೇಲೆ ಅಭಿನಯಗೊಳ್ಳುವುದರಿಂದಲೇ ‘ಮುಖ್ಯಮಂತ್ರಿ’ ನಾಟಕ ನಿಜ ಎನಿಸುತ್ತದೆ ಮತ್ತು ಅದೇ ಕಾರಣಕ್ಕಾಗಿ ಗೆಲ್ಲುತ್ತದೆ; ಪ್ರತಿ ಅಂಕ ಮುಗಿದ ನಂತರ ಚಪ್ಪಾಳೆ, ಶಿಳ್ಳು ಸುಮ್ಮನೆ ಬೀಳುವುದಿಲ್ಲ.

ಈ ನಾಟಕದ ಜೀವಾಳವೇ ಮಾತು. ‘ಮುಖ್ಯಮಂತ್ರಿ’ ಚಂದ್ರು ಮಾತಿನ ಮಲ್ಲ. ಅರಳು ಹುರಿದಂತೆ ಬಡಬಡ ಮಾತನಾಡುತ್ತಾರೆ. ಹಾಗೆ ನೋಡಿದರೆ ನಾಟಕದ ನಾಯಕ ‘ಮುಖ್ಯಮಂತ್ರಿ’ ಅಂಥ ಒಳ್ಳೆಯ ಮನುಷ್ಯನೇನೂ ಅಲ್ಲ. ಬಹುತೇಕ ಮುಖ್ಯಮಂತ್ರಿಗಳ  ಹಾಗೆ ಭ್ರಷ್ಟ, ಕುಟುಂಬ ವತ್ಸಲ; ಕುತಂತ್ರಿ.

‘ಈತ ಇನ್ನಷ್ಟು ದಿನ ಮುಖ್ಯಮಂತ್ರಿಯಾಗಿದ್ದರೆ ನಾಡಿಗೆ ಕೇಡು ಖಾತ್ರಿ’ ಎಂದು ಆತನ ಹೆಂಡತಿಗೇ ಅನಿಸುತ್ತ ಇರುತ್ತದೆ! ಅಧಿಕಾರದಲ್ಲಿ ಪಟ್ಟಭದ್ರನಾಗಿ ಕುಳಿತ ಕಾರಣವೋ ಅಥವಾ ತಾನೂ ಒಂದು ಕೈ ಅಧಿಕಾರ ನೋಡಬೇಕು ಎಂದೋ ಇವನನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಬೇಕು ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸುದರ್ಶನ ದುಬೆ ಅವಿಶ್ವಾಸ ವ್ಯಕ್ತಪಡಿಸುತ್ತಾನೆ.

ಹೈಕಮಾಂಡ್‌ ಆತನ ಮಾತಿಗೆ ಒಪ್ಪುತ್ತದೆ. ಮುಂದಿನ 48 ಗಂಟೆಗಳಲ್ಲಿ ಮುಖ್ಯಮಂತ್ರಿ ಕೃಷ್ಣ ದ್ವೈಪಾಯನ ಕೌಶಲ್‌ (ಕೆ.ಡಿ.ಕೌಶಲ್‌) ತನ್ನ ಬಹುಮತವನ್ನು ಸಾಬೀತು ಮಾಡಬೇಕು ಎಂದು ಸೂಚಿಸುತ್ತದೆ. ಬೆಳಿಗ್ಗೆ 6.30ಕ್ಕೆ ಮುಖ್ಯಮಂತ್ರಿ ಮನೆಗೆ ಪಕ್ಷದ ಅಧ್ಯಕ್ಷ ಬರುವುದರ ಜೊತೆಗೆ ನಾಟಕ ಆರಂಭವಾಗುತ್ತದೆ. ತನಗೆ ಸಿಕ್ಕ 48 ಗಂಟೆಗಳ ಗಡುವು ಮುಗಿಯುವುದಕ್ಕಿಂತ ಮಂಚೆಯೇ ವಿರೋಧಿ ಪಾಳೆಯವನ್ನು ಛಿದ್ರಗೊಳಿಸಿ ಕೆ.ಡಿ.ಕೌಶಲ್‌ ತಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾನೆ.

ಅವನಿಗೆ ಪಕ್ಷದ ಅಧ್ಯಕ್ಷ ದುಬೆಯೇ ಬೆಂಬಲ ನೀಡುತ್ತಾನೆ. ಪುಟ್ಟ ಮತ್ತು ಅಮುಖ್ಯ ಖಾತೆ ಒಪ್ಪಿಕೊಂಡು ಸಂಪುಟ ಸೇರುತ್ತಾನೆ. ಇದರ  ನಡುವೆ ರಾಜಕೀಯದ ಎಲ್ಲ ತಂತ್ರ ಕುತಂತ್ರಗಳನ್ನು ಕೌಶಲ್‌ ಬಳಸಿಕೊಳ್ಳುತ್ತಾನೆ. ತನ್ನ ವಿರುದ್ಧ ಬಂಡೇಳುವ ಒಬ್ಬ ಮಂತ್ರಿಯ ವಿರುದ್ಧ ಇದ್ದ ಕಡತವನ್ನು ತೋರಿಸಿ ಬೆದರಿಸುತ್ತಾನೆ.

ತನಗೆ ನಿಜವಾಗಿಯೂ ಪರ್ಯಾಯವಾಗಬಲ್ಲ ಪ್ರಾಮಾಣಿಕ ಮಂತ್ರಿಯೊಬ್ಬರ ಮಗಳು ತನ್ನ ಸೊಸೆ ಆಗುವ ಸಾಧ್ಯತೆಯನ್ನು ತನ್ನ ಅನುಕೂಲಕ್ಕೆ ತಿರುಗಿಸಿಕೊಳ್ಳುತ್ತಾನೆ.ಎದುರಾಳಿಗಳ ಪ್ರತಿ ಚಲನವಲನದ ರಹಸ್ಯ ಮಾಹಿತಿ ಪಡೆದು ದುಬೆಯ ಯಾವ ತಂತ್ರವೂ ಫಲ ನೀಡದಂತೆ ಎಚ್ಚರ ವಹಿಸುತ್ತಾನೆ.  ಸ್ವಂತ ಜೀವನೋಪಾಯ ಕಂಡುಕೊಳ್ಳುವ ಯೋಗ್ಯತೆ ಇಲ್ಲದ ಮಗನನ್ನು ತನ್ನ ವಿರೋಧಿ ಬಣದವರನ್ನೇ ಬಳಸಿಕೊಂಡು ಮಂತ್ರಿ ಮಾಡುತ್ತಾನೆ!

ಮಾಧ್ಯಮವನ್ನು ತನ್ನ ತಂತ್ರಕ್ಕೆ ತಕ್ಕಂತೆ ಬಳಸಿಕೊಂಡು ಬಿಸಾಕುತ್ತಾನೆ. ಸುದ್ದಿಗೆ ಅಂಗಲಾಚುವ  ಪತ್ರಕರ್ತರಿಗೆ  ತನಗೆ ಏನು ಬೇಕೋ ಅಷ್ಟನ್ನು ಮಾತ್ರ ಹೇಳುತ್ತಾನೆ, ಇನ್ನಷ್ಟು ಮಾಹಿತಿಗಾಗಿ ಅವರು ಬೆನ್ನು ಬಿದ್ದಾಗ ‘ವೇಳೆ ಇಲ್ಲ’ ಎಂದು ನಿವಾರಿಸುತ್ತಾನೆ. ಈತ ಬಹುಮತ ಕಳೆದುಕೊಳ್ಳಬಹುದು ಎಂದು ನಿಷ್ಠೆ ಬದಲಿಸಿದ ಮುಖ್ಯ ಕಾರ್ಯದರ್ಶಿಯನ್ನು ಕ್ಷಣಾರ್ಧದಲ್ಲಿ ಬದಲಿಸುತ್ತಾನೆ... ಅಧಿಕಾರದಲ್ಲಿ ಇರುವ ಅನುಕೂಲ ಎಂದರೆ ಇದೇ ಇರಬಹುದು. ನಾಟಕದ ‘ಸದ್ಯತನ’ ಎಂದರೆ  ಇದು.

ಅಧಿಕಾರದಲ್ಲಿ ಇದ್ದ ಮುಖ್ಯಮಂತ್ರಿಯನ್ನು ಎಲ್ಲ ಕಾಲದಲ್ಲೂ ಬದಲಿಸುವ ಹುನ್ನಾರಗಳು ಅಥವಾ ಯತ್ನಗಳು ನಡೆದಿವೆ. ಕೆಲವರು ಪ್ರತಿ ಹುನ್ನಾರ ಮಾಡಿ, ತಂತ್ರ ಹೂಡಿ ಅಧಿಕಾರದಲ್ಲಿ ಉಳಿದಿದ್ದಾರೆ. ಇನ್ನು ಕೆಲವರು ಅಧಿಕಾರ ಕಳೆದುಕೊಂಡಿದ್ದಾರೆ. ಎಲ್ಲದಕ್ಕೂ ಕರ್ನಾಟಕದ ರಾಜಕೀಯದ ಚರಿತ್ರೆಯ ಪುಟಗಳಲ್ಲಿಯೇ ನಿದರ್ಶನಗಳು ಇವೆ.

ಒಂದು ಹೊತ್ತಿನ ಊಟಕ್ಕೂ ಇಲ್ಲದೆ ಬೆಂಗಳೂರಿಗೆ ಬಂದು, ರೇಸ್‌ಕೋರ್ಸಿನಲ್ಲಿ ದಿನಕ್ಕೆ ಹತ್ತು ರೂಪಾಯಿ ಸಂಬಳಕ್ಕೆ ಟಿಕೆಟ್‌ ಕೊಟ್ಟು, ಎಲ್ಲಿಯೂ ಸೀಟು ಸಿಗಲಿಲ್ಲ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜಿಗೆ ಸೇರಿ ಎಚ್‌.ಕೆ.ರಂಗನಾಥ್‌, ಪ್ರೊ.ಬಿ.ಚಂದ್ರಶೇಖರ್ ಅಂಥವರ ಸಂಪರ್ಕದಿಂದ ರಂಗಭೂಮಿಗೆ ಬಂದು ಅತ್ಯಂತ ಆಕಸ್ಮಿಕವಾಗಿ ‘ಮುಖ್ಯಮಂತ್ರಿ’ ನಾಟಕ ಆಡಿ, ಅದರ ನೂರನೇ ಪ್ರದರ್ಶನಕ್ಕೆ ಬಂದ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಂದಾಗಿ ಗೌರಬಿದನೂರಿನಲ್ಲಿ ವಿಧಾನಸಭೆ ಚುನಾವಣೆಗೆ ನಿಂತು, ಗೆದ್ದು ನಂತರ ಎರಡು ಸಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ, ಎರಡು ಬಾರಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅದರ ನಡುವೆ ಕಳೆದ 36 ವರ್ಷಗಳಲ್ಲಿ ಒಂದು ವರ್ಷವೂ ಬಿಡದೇ ಮುಖ್ಯಮಂತ್ರಿ ನಾಟಕ ಆಡಿ... ಚಂದ್ರು ಹೊರಳಿ ನಿಂತು ನೋಡಿದರೆ ಎಲ್ಲವೂ ಕಥೆಯಂತೆ  ಕಾಣುತ್ತದೆ. ಜೀವನವೇ ಹಾಗೆ. ಅದು ಕಥೆಗಿಂತ ಹೆಚ್ಚು ರೋಚಕವಾಗಿರುತ್ತದೆ. ಹೆಚ್ಚು ಆಕಸ್ಮಿಕ ತಿರುವುಗಳನ್ನು ಹೊಂದಿರುತ್ತದೆ.

ಪ್ರೇಮಾ ಕಾರಂತರು ಹಟ ಹಿಡಿದಿದ್ದರೆ ‘ಮುಖ್ಯಮಂತ್ರಿ’ ನಾಟಕ ಆಡಲು ಸಾಧ್ಯವೇ ಆಗುತ್ತಿರಲಿಲ್ಲ. ಪ್ರೇಮಾ ಕಾರಂತರು ಯಾವಾಗಲೋ ನಾಟಕ ಪ್ರದರ್ಶನದ ಹಕ್ಕು ತೆಗೆದು ಇಟ್ಟುಕೊಂಡಿದ್ದರು. 1980ರ ಡಿಸೆಂಬರ್‌ನಲ್ಲಿ ಈ ನಾಟಕ ಪ್ರದರ್ಶನ ಆಗುವಾಗ ಅವರು ಇವರಿಗೆ ನೋಟಿಸ್‌ ಕಳಿಸಿದರು. ಕಲಾಗಂಗೋತ್ರಿಯ ಎಲ್ಲರೂ ಸೇರಿಕೊಂಡು ಪ್ರೇಮಾ ಅವರನ್ನು ಕಾಣಲು ಹೋದರು. ಬಿ.ವಿ.ಕಾರಂತರೂ ಇದ್ದರು. ವಿಷಯ ತಿಳಿದು ಅವರೇ ರಾಜಿ ಮಾಡಿದರು. ಹೆಂಡತಿಗೆ ಬುದ್ಧಿ ಹೇಳಿದರು.  ಅನುಮತಿ ಕೇಳದೇ ನಾಟಕ ಆಡಿದ್ದಕ್ಕೆ ಕಲಾಗಂಗೋತ್ರಿಯವರಿಗೆ ಬೈದರು. ಅಂದು ನಾಟಕಕ್ಕೆ ಕಾರಂತ ದಂಪತಿ ಬಂದು ಹರಸಿದರು.

ಚೌಡಯ್ಯ ಸ್ಮಾರಕ ಭವನದಲ್ಲಿ ನಡೆದ ಪ್ರದರ್ಶನಕ್ಕೆ ಆಗಿನ ಮುಖ್ಯಮಂತ್ರಿ ಗುಂಡೂರಾವ್‌ ಬಂದಿದ್ದರು. ನಾಟಕ ಮುಗಿದ ನಂತರ ತಂಡದವರನ್ನು ಕರೆಕಳಿಸಿದರು. ತಂಡಕ್ಕೆ ಭಯ: ‘ಏನೋ ಅಪಾಯ ಕಾದಿದೆ’ ಎಂದು. ಎಲ್ಲರೂ ಬಂದು ಮುಂದೆ ನಿಂತರು. ಗುಂಡೂರಾವ್‌ ಎಲ್ಲರ ಪರಿಚಯ ಮಾಡಿಕೊಂಡರು. ‘ನಾಟಕ ಚೆನ್ನಾಗಿ ಆಡಿದಿರಿ’ ಎಂದು ಬಾಯಿತುಂಬ ಪ್ರಶಂಸೆ ಮಾಡಿದರು.

ಎಲ್ಲ 35 ಮಂದಿ ಕಲಾವಿದರಿಗೆ, ಆಗಲೇ ತರಿಸಿ ಇಟ್ಟಿದ್ದ, ಶಾಲು ಹೊದಿಸಿ ಸತ್ಕರಿಸಿದರು. ಚಂದ್ರು ಅವರನ್ನು ಪಕ್ಕಕ್ಕೆ ಕರೆದು, ‘ನೀವು ನಾಟಕ ಆಡುವುದಕ್ಕಿಂತ ಮುಂಚೆ ಬಂದು ನನ್ನನ್ನು ಕಂಡಿದ್ದರೆ ಇನ್ನೂ ಅನೇಕ ಒಳಸುಳಿಗಳನ್ನು, ತಂತ್ರ–ಕುತಂತ್ರಗಳನ್ನು ನಿಮಗೆ ಹೇಳಿಕೊಡುತ್ತಿದ್ದೆ!’ ಎಂದರು. ಅದೇ ಹೇಳಿದೆನಲ್ಲ, ಜೀವನ ಕಥೆಗಿಂತ ಅದ್ಭುತವಾಗಿರುತ್ತದೆ.

ಒಂದು ಸಾರಿ ರಾಜ್‌ಕುಮಾರ್‌ ನಾಟಕ ನೋಡಲು ಹೆಂಡತಿ ಸಮೇತ ಬಂದಿದ್ದರು. ನಾಟಕ ಮುಗಿದ ಮೇಲೆ ಚಂದ್ರು ಅವರನ್ನು ನೇಪಥ್ಯದಲ್ಲಿ ಕಂಡು, ‘ಏನು ಅದ್ಭುತ!’ ಎಂದೆಲ್ಲ ಹೊಗಳಿ ಕಿವಿಯ ಹತ್ತಿರ ಬಂದು ‘ನನಗೆ ನಾಟಕ ಅರ್ಥ ಆಗಲಿಲ್ಲ’ ಎಂದರು. ಅದು ರಾಜ್‌ಕುಮಾರ್‌ಗೆ ಮಾತ್ರ ಸಾಧ್ಯವಾಗುವ ಅಮಾಯಕತೆ. ಚಂದ್ರು ಕೂಡ ತಕ್ಷಣ ಹೇಳಿದರು, ‘ನನಗೂ ಅರ್ಥ ಆಗಿಲ್ಲ ಸರ್‌’ ಎಂದು. 

ಹಾಗೆ ನೋಡಿದರೆ 1985ರಲ್ಲಿ  ಶಾಸಕರಾಗಿ  ಆಯ್ಕೆಯಾದ ಮೇಲೆಯೇ ಅವರಿಗೆ  ನಾಟಕ ಹೆಚ್ಚು ಅರ್ಥವಾಗತೊಡಗಿತು! ಏಕೆಂದರೆ ಆಗಿನ ಮುಖ್ಯಮಂತ್ರಿ ಹೆಗಡೆಯವರನ್ನು ಬದಲಿಸಲು ಸತತವಾಗಿ ಪ್ರಯತ್ನ ನಡೆದಿದ್ದುವು. ರಾಜಕೀಯವಾಗಿ ಅನೇಕ ನಾಯಕರ ಸಕ್ರಿಯ ಒಡನಾಟ ಹೊಂದಿರುವ ಚಂದ್ರು ಕಳೆದ ಸುಮಾರು ಮೂರು ದಶಕಗಳಲ್ಲಿ ಸಾಕಷ್ಟು ರಾಜಕೀಯ ಕಲಿತಿರಬಹುದು!

ನಾಟಕ ಮಾಡುವಾಗ ಚಂದ್ರು, ದೇವರಾಜ ಅರಸು ಅವರನ್ನು ಅನುಕರಿಸುವಂತೆ  ಕಾಣುತ್ತದೆ. ನಡಿಗೆ, ಹಾವಭಾವ, ಗಾಂಭೀರ್ಯ, ವಿರೋಧವನ್ನು ತಾತ್ಸಾರದಿಂದ ನಿಭಾಯಿಸುವ ಬಗೆ ಎಲ್ಲದರಲ್ಲಿ ಅರಸು ಛಾಯೆ ಎದ್ದು ಕಾಣಿಸುತ್ತದೆ. ಅರಸು ಅವರಂಥ ಅತ್ಯಂತ ಬಲಿಷ್ಠ ಮುಖ್ಯಮಂತ್ರಿ ಕೂಡ ಭಿನ್ನಮತವನ್ನು ಎದುರಿಸಿದರು.

ಕೊನೆಗೆ ಸೋತರು! ಆದರೆ, ‘ಮುಖ್ಯಮಂತ್ರಿ’ ಚಂದ್ರು ಪ್ರತಿ ನಾಟಕದಲ್ಲಿ ಗೆಲ್ಲುತ್ತಾರೆ! ಅವರ ಈ ಸತತ ಗೆಲುವು ರಂಗಭೂಮಿಯ ಗೆಲುವು! ಒಬ್ಬ ನಟ, ಒಂದು ನಾಟಕ ಹೀಗೆ ನಿರಂತರವಾಗಿ ‘ಗೆಲ್ಲುವುದು’ ನಮ್ಮ ಹವ್ಯಾಸಿ ರಂಗಭೂಮಿಯ ಇತಿಹಾಸದಲ್ಲಿ ಒಂದು ಅಪೂರ್ವ ಅಧ್ಯಾಯ. ‘ಮುಖ್ಯಮಂತ್ರಿ’ ಚಂದ್ರು, ನಾಟಕದ ನಿರ್ದೇಶಕ ಡಾ.ಬಿ.ವಿ.ರಾಜಾರಾಂ ಮತ್ತು ಅವರ ಜೊತೆಗೆ ಅಭಿನಯಿಸುವ ತಂಡದ ಎಲ್ಲ ಸದಸ್ಯರಿಗೆ ಒಂದು ದೊಡ್ಡ ಚಪ್ಪಾಳೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT