ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಾಳಿ ಅಲ್ಪಸಂಖ್ಯಾತರು ಮತ್ತು ಮೌನಿ ಬಹುಜನರು

Last Updated 16 ಜೂನ್ 2018, 9:24 IST
ಅಕ್ಷರ ಗಾತ್ರ

ರಾಜಕೀಯದ ಸಂದರ್ಭದಲ್ಲಿ ಎರಡು ಪದಗಳು ಮತ್ತೆ ಮತ್ತೆ ಬಳಕೆಯಾಗುತ್ತವೆ. ಒಂದು ‘ಅದೃಶ್ಯ ಮತದಾರರು’ ಮತ್ತೊಂದು ‘ಮೌನಿ ಬಹುಜನರು’. ಇವರೆಡರ ಅರ್ಥವೂ ಹೆಚ್ಚು ಕಡಿಮೆ ಒಂದೇ. ಸಾರ್ವಜನಿಕ ಚರ್ಚೆಯೊಂದರಲ್ಲಿ ಭಾಗವಹಿಸದೆ ಮೌನವಾಗಿ ಉಳಿದು ಗುಪ್ತ ಮತದಾನದ ಸಂದರ್ಭ­ದಲ್ಲಿ ಮಾತ್ರ ತನ್ನ ನಿಲುವನ್ನು ವ್ಯಕ್ತ­ಪಡಿಸುವವರನ್ನು ರಾಜಕಾರಣಿಗಳು ‘ಅದೃಶ್ಯ ಮತ­ದಾರರು’ ಎಂದು ಕರೆಯುತ್ತಾರೆ. ಗಂಟಲು ಹರಿದು­ಕೊಂಡು ಗಲಭೆ ಎಬ್ಬಿಸುವವರ ಮಾತುಗಳಷ್ಟೇ ಸಾರ್ವಜನಿಕ ಅಭಿಪ್ರಾಯವಲ್ಲ. ಅದಕ್ಕಿಂತ ಭಿನ್ನವಾದ ಅಭಿಪ್ರಾಯ ಹೊಂದಿರುವವರು ಹೆಚ್ಚಿದ್ದಾರೆ ಎಂಬು­ದನ್ನು ಸೂಚಿಸುವುದಕ್ಕೆ ‘ಮೌನಿ ಬಹುಜನರು’ ಎಂಬ ಪದ ಬಳಕೆಯಾಗುತ್ತದೆ.

ಸಾರ್ವಜನಿಕ ಚರ್ಚೆಯ ಸಂದರ್ಭದಲ್ಲಿ ಮೌನಿ ಬಹುಜನರನ್ನು ಅರ್ಥ ಮಾಡಿಕೊಳ್ಳಲು ಬಹಳ ಹಿಂದಿನಿಂದಲೂ ಅನೇಕ ಪ್ರಯತ್ನಗಳು ನಡೆದಿವೆ. ಜರ್ಮನಿಯ ರಾಜ್ಯಶಾಸ್ತ್ರಜ್ಞ ನೋಯೆಲ್ ನ್ಯುಮನ್ 1974ರಲ್ಲಿಯೇ ‘ಮೌನದ ಸುಳಿ’ ಅಥವಾ ‘Spiral of silence’ ಎಂಬ ಪರಿಕಲ್ಪನೆಯೊಂದನ್ನು ಮುಂದಿಟ್ಟಿದ್ದ. ವೈಯಕ್ತಿಕ ಅಭಿವ್ಯಕ್ತಿಗೆ ಈಗಿನಷ್ಟು ಮಾಧ್ಯಮಗಳಿಲ್ಲದ ಆ ದಿನಗಳಲ್ಲಿ ಆತ ಕಂಡುಕೊಂಡಂತೆ ಒಂದು ಸಾರ್ವಜನಿಕ ಮಾತುಕತೆಯಲ್ಲಿ ತಮ್ಮ ಅಭಿಪ್ರಾಯವನ್ನು ಒಪ್ಪುವವರು ಹೆಚ್ಚಿಲ್ಲ ಎಂಬ ಭಾವನೆಯಿಂದ ಕೆಲವರು ತಮಗಿ­ರುವ ಭಿನ್ನ ಅಥವಾ ವಿಶಿಷ್ಟವಾದ ಅಭಿಪ್ರಾಯ­ವನ್ನು ವ್ಯಕ್ತಪಡಿಸುವುದೇ ಇಲ್ಲವಂತೆ. ಆದ್ದರಿಂದ ‘ವಾಚಾಳಿ ಅಲ್ಪಸಂಖ್ಯಾತರ’ ಅಭಿಪ್ರಾಯಗಳೇ ಅನೇಕ ಸಂದರ್ಭಗಳಲ್ಲಿ ಸಾರ್ವಜನಿಕ ಅಭಿಪ್ರಾಯ­ವಾಗಿಬಿಡುತ್ತವೆ ಎಂಬುದು ಆತನ ಸಿದ್ಧಾಂತದ ಸಾರ.

ಚುನಾವಣಾ ಪೂರ್ವ ಸಮೀಕ್ಷೆಗಳು ಸುಳ್ಳಾದ­ಗಲೆಲ್ಲಾ ನೋಯೆಲ್ ನ್ಯುಮನ್‌ನನ್ನು ನೆನಪಿಸಿ­ಕೊಳ್ಳ­ಲಾಗುತ್ತದೆ. ಇದನ್ನೇ ಮುಂದಿಟ್ಟು­ಕೊಂಡು ರಾಜಕಾರಣಿ­ಗಳು ಅದೃಶ್ಯ ಮತದಾರನ ಬಗ್ಗೆ ಹೇಳುತ್ತಾರೆ. ಇದು ಇಂಟರ್ನೆಟ್ ಜಗತ್ತಿನಲ್ಲಿಯೂ ನಿಜವೇ ಎಂಬುದನ್ನು ಪರೀಕ್ಷಿಸುವ ಅನೇಕ ಪ್ರಯತ್ನಗಳು ನಡೆದಿವೆ. ಇದರಲ್ಲೊಂದು ಇತ್ತೀಚೆಗೆ ಅಮೆರಿಕ PEW Research ನಡೆಸಿದ ಅಧ್ಯಯನ. ಈ ಅಧ್ಯಯನ­ಕ್ಕೊಂದು ಹಿನ್ನೆಲೆಯಿದೆ. ಇಂಟರ್ನೆಟ್ ಸೃಷ್ಟಿಸಿ­ಕೊಟ್ಟಿರುವ ಅನಾಮಿಕತೆಯ ಸವಲತ್ತು ‘ಮೌನಿ ಬಹುಜನ’ರನ್ನು ಮಾತನಾಡುವಂತೆ ಮಾಡಿರಬಹುದೇ ಎಂಬುದನ್ನು ತಿಳಿದುಕೊಳ್ಳುವ ಅಪೇಕ್ಷೆಯೊಂದಿಗೆ ಈ ಸಮೀಕ್ಷೆಯನ್ನು ನಡೆಸಲಾಯಿತು. ಅದರ ಫಲಿತಾಂಶ­ ತಿಳಿಸುತ್ತಿರುವಂತೆ ಭಾರೀ ವಾಚಾಳಿ­ಗಳೂ ಪ್ರದರ್ಶಕ ಕಾಮಿ­ಗಳೂ ತುಂಬಿಕೊಂಡಿ­ರುವ ಸಾಮಾಜಿಕ ಜಾಲತಾಣಗಳಲ್ಲಿಯೂ ‘ವಾಚಾಳಿ ಅಲ್ಪಸಂಖ್ಯಾತರು’ ಮೇಲುಗೈ ಸಾಧಿಸಿದ್ದಾರೆ.

PEW Research ಸಂಸ್ಥೆ ಸಮೀಕ್ಷೆಗಾಗಿ ಆಯ್ದುಕೊಂಡ ವಿಷಯ ಅಮೆರಿಕದ ನ್ಯಾಷನಲ್ ಸೆಕ್ಯುರಿಟಿ ಏಜನ್ಸಿಯ ಗುತ್ತಿಗೆದಾರ ಎಡ್ವರ್ಡ್ ಸ್ನೋಡೆನ್ ಬಹಿರಂಗ ಪಡಿಸಿದ ವಿಷಯಗಳಿಗೆ ಸಂಬಂಧಿಸಿದ್ದು. ಜನರ ಎಲ್ಲಾ ಎಲೆಕ್ಟ್ರಾನಿಕ್ ಸಂವಹನದ ಮೇಲೆ ಸರ್ಕಾರ ನಿಗಾ ಇಡುವುದು ಸರಿಯೇ ಎಂಬುದಕ್ಕೆ ತಮ್ಮ ನಿಜವಾದ ಅಭಿಪ್ರಾಯವನ್ನು ಹೆಚ್ಚಿನವರು ಆನ್‌ಲೈನ್ ವೇದಿಕೆಗಳಲ್ಲಿ ವ್ಯಕ್ತಪಡಿಸಲಿಲ್ಲವಂತೆ. ಹಾಗೆಯೇ ಹೆಚ್ಚಿನವರು ತಮ್ಮ ಅಭಿಪ್ರಾಯವನ್ನು ಒಪ್ಪದ ವೇದಿಕೆಗಳು ಅದು ಆನ್‌ಲೈನ್ ಆಗಿದ್ದರೂ ನೇರ ಮಾತುಕತೆಗಳೇ ಆಗಿದ್ದರೂ ಅಲ್ಲಿ ವ್ಯಕ್ತಪಡಿಸಲು ಸಿದ್ಧರಿರಲಿಲ್ಲ. ಒಟ್ಟರ್ಥದಲ್ಲಿ 1974ರ ನೋಯೆಲ್ ನ್ಯುಮನ್ ಮಂಡಿಸಿದ ಸಿದ್ಧಾಂತ ಆನ್‌ಲೈನ್ ಮತ್ತು ಆಫ್‌ಲೈನ್ ಚರ್ಚೆಗಳ ಸಂದರ್ಭದಲ್ಲಿ ಈಗಲೂ ನಿಜ ಎಂದು ಈ ಸಂಶೋಧನೆ ಹೇಳುತ್ತದೆ.

ನ್ಯುಮನ್‌ನ ಸಿದ್ಧಾಂತ ನಿಜವೆನಿಸುತ್ತಿರುವುದಕ್ಕೆ ಕಾರಣಗಳೇನಿರಬಹುದು ಎಂಬುದನ್ನು ಶೋಧಿಸುವ ಅಗತ್ಯವಿದೆ ಎನಿಸುತ್ತದೆ. ಸಾಮಾನ್ಯವಾಗಿ ಸಾರ್ವತ್ರಿಕ ಅಭಿಪ್ರಾಯ ಎಂದು ನಾವು ಹೇಳುವ ಅಭಿಪ್ರಾಯ­ವೊಂದು ರೂಪುಗೊಳ್ಳುವ ಕ್ರಿಯೆಯೇ ಬಹಳ ಸಂಕೀರ್ಣವಾದುದು. ಸಾಮಾಜಿಕ ಜಾಲತಾಣಗಳಂಥ ಆನ್‌ಲೈನ್ ವೇದಿಕೆಗಳಲ್ಲಿ ಇದು ರೂಪುಗೊಳ್ಳುವ ಕ್ರಿಯೆ ಇನ್ನೂ ಸಂಕೀರ್ಣ.

ಅನಾಮಿಕತೆಯ ಸಾಧ್ಯತೆ ನಿಜವಾದ ಅಭಿಪ್ರಾಯಗಳನ್ನು ಹೊರಗೆ ತರುವ ಮಾರ್ಗವಾಗಿರು­ವಂತೆಯೇ ಅಭಿಪ್ರಾಯವನ್ನು ನಿರ್ದಿಷ್ಟ ದಿಕ್ಕಿಗೆ ತಿರುಗಿಸುವುದಕ್ಕೂ ಬಳಕೆಯಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಯಾವುದೇ ಅತಿಗಳಲ್ಲಿ ತಮ್ಮ ಅಭಿಪ್ರಾಯ­ವನ್ನು ಮಂಡಿಸಲಾರದವರಿಗೆ ಆನ್‌ಲೈನ್ ವೇದಿಕೆಗಳು ಅಭಿವ್ಯಕ್ತಿಯ ತಾಣಗಳೆನ್ನಿಸುವುದೇ ಇಲ್ಲ. ಒಂದು ವೇಳೆ ಅನ್ನಿಸಿದರೂ ಅವರು ತಮ್ಮ ಪ್ರಬುದ್ಧ ವಿಶ್ಲೇಷಣೆಯನ್ನು ಮಂಡಿಸುವ ಹೊತ್ತಿಗೆ ಆನ್‌ಲೈನ್ ಚರ್ಚೆಯಲ್ಲಿ ಆ ವಿಷಯವೇ ಮಹತ್ವ ಕಳೆದುಕೊಂಡಿರಬಹುದು. ಹಾಗೆಯೇ ನ್ಯುಮನ್ ಹೇಳಿದಂತೆ ಅವರು ಟ್ರಾಲ್‌ಗಳ ದಾಳಿಗೆ ಹೆದರಿ ಸುಮ್ಮನಾಗಿರಲೂಬಹುದು.

ಆನ್‌ಲೈನ್ ಚರ್ಚೆಗಳ ದೊಡ್ಡ ಮಿತಿಯೆಂದರೆ ಎಲ್ಲವನ್ನೂ ಕಪ್ಪು–ಬಿಳುಪು ಮಾದರಿಯಲ್ಲಿಟ್ಟು ಚರ್ಚಿಸುವುದು. ಇತ್ತೀಚೆಗೆ ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದಕ್ಕೆ ಸಂಬಂಧಿಸಿದಂತೆ ಫೇಸ್‌ಬುಕ್‌­ನಲ್ಲಿ ನಡೆದ ಚರ್ಚೆಯನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹುದು. ಈ ವಿಷಯಕ್ಕೆ ಸಂಬಂಧಿಸಿದಂತೆ ಇಸ್ಲಾಮಿ ಮತಪಂಡಿತರ ನಡುವೆಯೇ ಅನೇಕ ಭಿನ್ನಾಭಿಪ್ರಾಯಗಳಿವೆ. ಫೇಸ್‌ಬುಕ್ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಮುಸ್ಲಿಮ್ ಗಂಡಸರ ಅಭಿಪ್ರಾಯ­ಗಳನ್ನು ಮಾತ್ರ ಓದಿದ ಯಾರಾದರೂ ಕರ್ನಾಟಕದಲ್ಲಿ ಬುರ್ಖಾ ಧರಿಸದ ಮುಸ್ಲಿಮ್ ಮಹಿಳೆಯರೇ ಇಲ್ಲ ಎಂಬ ತೀರ್ಮಾನಕ್ಕೆ ಬಂದುಬಿಡುವ ಸಾಧ್ಯತೆ ಇದೆ. ಮೀಸಲಾತಿಗೆ ಸಂಬಂಧಿಸಿದ ಚರ್ಚೆಗಳಲ್ಲಿಯೂ ಇದು ಸಂಭವಿಸುತ್ತದೆ. ಅಭಿಪ್ರಾಯ ಮಂಡಿಸುತ್ತಿರುವವರ ಹೆಸರುಗಳೊಂದಿಗೆ ಸೇರಿಕೊಂಡಿರುವ ಜಾತಿ ಸೂಚಕಗಳನ್ನು ಮಾತ್ರ ಗಮನಿಸುತ್ತಾ ಹೋದರೆ ಕೆಲ ಜಾತಿಗಳಿಗೆ ಸೇರಿದ ಎಲ್ಲರೂ ಮೀಸಲಾತಿಯನ್ನು ಖಡಾಖಂಡಿತವಾಗಿ ವಿರೋಧಿಸುತ್ತಿದ್ದಾರೆ ಎಂಬ ಅಭಿಪ್ರಾಯ ಬಂದುಬಿಡುವ ಸಾಧ್ಯತೆ ಇದೆ. ಇವನ್ನೆಲ್ಲಾ ಕಂಡಾಗ ನಿರ್ದಿಷ್ಟ ಸಮಸ್ಯೆಯೊಂದರ ಎಲ್ಲಾ ಸೂಕ್ಷ್ಮಗಳನ್ನು ಅರಿತು ಮಾತನಾಡುವವರ ಧ್ವನಿಯೇಕೆ ಆನ್‌ಲೈನ್ ವೇದಿಕೆಗಳಲ್ಲಿ ಕ್ಷೀಣವಾಗಿದೆ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.

ಇದಕ್ಕೆ ಬಹುಮುಖ್ಯ ಕಾರಣ ಆನ್‌ಲೈನ್ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವ ಅಭಿಪ್ರಾಯಗಳೆಲ್ಲವೂ ಒಂದು ಬಗೆಯಲ್ಲಿ ಪರಾವರ್ತಿತ ಪ್ರತಿಕ್ರಿಯೆಗಳು. ನಮಗೆ ಅರಿವಿಲ್ಲದೆಯೇ ದೇಹದ ಯಾವುದಾದರೂ ಅಂಗಕ್ಕೆ ಬಿಸಿ ತಗುಲಿದಾಗ ದೇಹ ಪ್ರತಿಕ್ರಿಯಿಸುವಂಥ ಬಗೆಯ ಪ್ರತಿಕ್ರಿಯೆಗಳು. ತಕ್ಷಣಕ್ಕೆ ಬೆಂಕಿಯಿಂದ ದೂರವಾಗುವುದಷ್ಟೇ ಇಂಥ ಪ್ರತಿಕ್ರಿಯೆಯ ಮುಖ್ಯ ಉದ್ದೇಶ. ಸಾರ್ವಜನಿಕ ಚರ್ಚೆಯೊಂದರಲ್ಲಿ ಈ ಬಗೆಯ ಪ್ರತಿಕ್ರಿಯೆಗಳನ್ನು ನೀಡುವವರು ಸಾಮಾನ್ಯ­ವಾಗಿ ನಿರ್ದಿಷ್ಟ ನಿಲುವೊಂದನ್ನು ಗಟ್ಟಿಯಾಗಿ ನಂಬಿರುವ­ವರು ಮಾತ್ರ. ತಮ್ಮ ನಿಲುವನ್ನು ಸಮರ್ಥಿಸುವ ಅಭಿಪ್ರಾಯಗಳಿಗೆ ಬೆಂಬಲಿಸುವುದು ಹಾಗೆಯೇ ವಿರೋಧಿ ನಿಲುವುಗಳನ್ನು ವಿರೋಧಿಸುವುದು ಇವರ ಮಟ್ಟಿಗೆ ಅನಿವಾರ್ಯ ಮತ್ತು ಅದು ಅವರ ವ್ಯಕ್ತಿತ್ವದ ಭಾಗ. ಹಳೆಯ ಮಾಧ್ಯಮಗಳು ಇದಕ್ಕೆ ತಕ್ಷಣವೇ ಅವಕಾಶ ಕಲ್ಪಿಸುತ್ತಿರಲಿಲ್ಲ. ತಕ್ಷಣವೇ ಪ್ರತಿಕ್ರಿಯಿಸಿದರೂ ಅದು ಅಷ್ಟೇ ಬೇಗ ಪ್ರಕಟವಾಗುತ್ತಿರಲಿಲ್ಲ. ಇಷ್ಟರ ಮಧ್ಯೆ ಅದು ಸಂಪಾದಕೀಯ ನಿಯಂತ್ರಣವನ್ನು ದಾಟಿ ಹೋಗಬೇಕಿತ್ತು. ಪರಿಣಾಮವಾಗಿ ಸಾರ್ವಜನಿಕರಿಗೆ ನಿರ್ದಿಷ್ಟ ವಿಷಯವೊಂದರ ಬಹುತೇಕ ಸಮ­ತೋಲಿತವಾದ ಅಭಿಪ್ರಾಯವೊಂದು ದೊರೆಯುತ್ತಿತ್ತು. ಆದರೆ ಸಾಮಾಜಿಕ ಜಾಲತಾಣ­ಗಳಲ್ಲಿ ಹಾಗಲ್ಲ. ಓದಿದ ತಕ್ಷಣ ಪ್ರತಿಕ್ರಿಯಿಸುವುದಕ್ಕೆ ಅವಕಾಶವಿದೆ. ಆ ಕ್ಷಣದಲ್ಲಿಯೇ ಅದು ಪ್ರಕಟವೂ ಆಗಿಬಿಡುತ್ತದೆ. ಇದಕ್ಕೆ ಪ್ರತಿಕ್ರಿಯಿಸಿ ಚರ್ಚೆಯನ್ನು ಮುಂದಕ್ಕೆ ಒಯ್ಯುವವರು ಇದೇ ವ್ಯಕ್ತಿತ್ವದವರೇ ಆಗಿರುತ್ತಾರೆ. ಪರಿಣಾಮವಾಗಿ ಚರ್ಚೆ ಅತಿಗಳಲ್ಲೇ ಮುಂದುವರಿಯುತ್ತದೆ. ಪರಿಣಾಮವಾಗಿ ಸಮಾಧಾನ­ದಿಂದ ಪ್ರತಿಕ್ರಿಯಿಸುವವರು ಇಂಥ ಚರ್ಚೆಗಳನ್ನೇ ಕಡೆಗಣಿಸುವ ಸಾಧ್ಯತೆಯೂ ಇದೆ. ಏಕೆಂದರೆ ಅವರ ವ್ಯಕ್ತಿತ್ವವೇ ಅಂಥದ್ದು. ಅದು ಅತಿಗಳಿಗೆ ಪ್ರತಿಕ್ರಿಯಿಸುವುದಿಲ್ಲ.

ಇದನ್ನು  ಗಾಂಧೀಜಿಯ ಉದಾಹರಣೆಯ ಮೂಲಕ ಹೆಚ್ಚು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು ಎನಿಸುತ್ತದೆ. ಭಾರತದಲ್ಲಿ ಯಾರ ಪ್ರತಿಮೆಗೆ ಅವಮಾನ ಮಾಡಿದರೂ ‘ಉಗ್ರ ವಿರೋಧ’ ಅಥವಾ ‘ಪ್ರತಿಭಟನೆ’ಯನ್ನು ನಿರೀಕ್ಷಿಸಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಇದು ಪ್ರಾಣಗಳನ್ನೇ ಬಲಿತೆಗೆದುಕೊಳ್ಳುವ ಹಿಂಸಾತ್ಮಕ ತಿರುವನ್ನೂ ಪಡೆಯ­ಬಹುದು. ಆದರೆ ಗಾಂಧೀಜಿಯ ಪ್ರತಿಮೆಗೆ ಅವಮಾನವಾದ ಕಾರಣಕ್ಕೆ ಇಂಥದ್ದೊಂದು ಬಿಕ್ಕಟ್ಟು ಯಾವತ್ತೂ ಉದ್ಭವಿಸಿಲ್ಲ. ಹಾಗೆಯೇ ಗಾಂಧೀಜಿಯ ಕುರಿತಂತೆ ಯಾರು ಏನು ಬರೆದರೂ, ಗಾಂಧೀಜಿಯನ್ನು ಹೇಗೆ ಚಿತ್ರಿಸಿದರೂ ಅದೊಂದು ವಿವಾದವಾದದ್ದಿಲ್ಲ. ಬಹುಶಃ ಇದುವೇ ಗಾಂಧೀಜಿಯ ಶಕ್ತಿ. ಹಾಗೆಯೇ ಅದು ಗಾಂಧೀಜಿಯನ್ನು ಮೆಚ್ಚುವವರ ವ್ಯಕ್ತಿತ್ವದ ಶಕ್ತಿಯೂ ಹೌದು. ಆನ್‌ಲೈನ್ ವೇದಿಕೆಗಳಲ್ಲಿ ಅತಿಗಳಲ್ಲಿ ನಡೆಯುವ ಚರ್ಚೆಯನ್ನಷ್ಟೇ ಗಮನ­ದಲ್ಲಿಟ್ಟುಕೊಂಡು ಅದು ನಿರ್ದಿಷ್ಟ ವರ್ಗವೊಂದರ ಪರ ಎನ್ನುವ ಮೊದಲ ಗಾಂಧೀಜಿಯ ಶಕ್ತಿಯನ್ನು ಅರ್ಥ ಮಾಡಿಕೊಂಡರೆ ‘ಮೌನಿ ಬಹುಜನ’ರನ್ನು ಅರ್ಥಮಾಡಿಕೊಳ್ಳಬಹುದು ಎನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT