ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಷಿಂಗ್ ಮೆಶಿನ್ ಖರೀದಿಗೆ ಮೊದಲು...

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಬಟ್ಟೆ ತೊಳೆಯುವ ಯಂತ್ರ ಈಗ ಎಲ್ಲರ ಮನೆಯಲ್ಲೂ ಅಗತ್ಯವಾದ ಸಾಧನ. ಅದರಲ್ಲಿ ಎಷ್ಟು ನಮೂನೆಗಳಿವೆ? ಯಾವುದು ಹೇಗೆ? ವಾಷಿಂಗ್ ಮೆಶಿನ್ ಕೊಳ್ಳುವ ಮುನ್ನ ಏನೆಲ್ಲ ಗಮನಿಸಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ.

ಟಿವಿ, ರೆಫ್ರಿಜರೇಟರ್‌ಗಳಂತೆ ಮನೆಯಲ್ಲಿ ಇರಲೇಬೇಕಾದ ಸಾಧನಗಳಲ್ಲಿ ಬಟ್ಟೆ ತೊಳೆಯುವ ಯಂತ್ರ (ವಾಷಿಂಗ್ ಮೆಶಿನ್) ಕೂಡ ಸೇರಿದೆ. ಈ ವಾಷಿಂಗ್ ಮೆಶಿನ್ ಕೊಳ್ಳಬೇಕಾದರೆ ಏನೇನೆಲ್ಲಾ ಗಮನಿಸಬೇಕು ಎಂಬುದನ್ನು ಈ ಕಿರು ಲೇಖನದಲ್ಲಿ ಪರಿಶೀಲಿಸೋಣ. ಈ ಲೇಖನದಲ್ಲಿ ನಾವು ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಅವರು ಕೊಳ್ಳಬಹುದಾದ ಯಂತ್ರಗಳನ್ನು ಮಾತ್ರ ವಿಶ್ಲೇಷಿಸುತ್ತಿದ್ದೇವೆ. ಹೋಟೆಲ್ ಅಥವಾ ಇತರೆ ಉದ್ಯಮಗಳಲ್ಲಿ ಬಳಸುವ ಅಧಿಕ ಶಕ್ತಿಯ ಯಂತ್ರಗಳನ್ನು ಇಲ್ಲಿ ವಿಶ್ಲೇಷಣೆ ಮಾಡುತ್ತಿಲ್ಲ. 

ಎಷ್ಟು ನಮೂನೆಗಳಿವೆ?: ವಾಷಿಂಗ್ ಮೆಶಿನ್‌ಗಳಲ್ಲಿ ಸಂಪೂರ್ಣ ಸ್ವಯಂಚಾಲಿತ ಮತ್ತು ಅರೆ-ಸ್ವಯಂಚಾಲಿತ ಎಂಬ ಎರಡು ವಿಭಾಗಗಳಿವೆ. ಸಂಪೂರ್ಣ ಸ್ವಯಂಚಾಲಿತ ಯಂತ್ರಗಳಲ್ಲಿ ಮತ್ತೆ ಎರಡು ನಮೂನೆಗಳಿವೆ. ಅವು ಮೇಲಿನಿಂದ ಬಟ್ಟೆ ಹಾಕುವಂಥವು ಮತ್ತು ಎದುರುಗಡೆ ಯಿಂದ ಬಟ್ಟೆ ಹಾಕುವಂಥವು. ಎರಡು ನಮೂನೆಯ ಸ್ವಯಂಚಾಲಿತ ಯಂತ್ರಗಳಲ್ಲೂ ಒಂದೇ ಡ್ರಮ್ ಇರುತ್ತದೆ. 

ಅರೆ-ಸ್ವಯಂಚಾಲಿತ
ಅರೆ-ಸ್ವಯಂಚಾಲಿತ (semi-automatic) ಯಂತ್ರಗಳಲ್ಲಿ ಎರಡು ಡ್ರಮ್‌ಗಳಿವೆ. ಒಂದು ಡ್ರಮ್ ಬಟ್ಟೆ ತೊಳೆಯಲು ಮತ್ತು ಇನ್ನೊಂದು ಬಟ್ಟೆ ಒಣಗಿ ಸಲು. ಡ್ರಮ್‌ಗಳಿಗೆ ಬಟ್ಟೆಯನ್ನು ಮೇಲಿನಿಂದ ಹಾಕಬೇಕು. ಎಷ್ಟು ಸಮಯ ತೊಳೆಯಬೇಕು ಎಂಬುದನ್ನು ನೀವೇ ನಿರ್ಧರಿಸಿ ಹಳೆಯ ತಿರುಗಿಸುವ ಮಾದರಿಯ ಟೈಮರ್‌ ಮೂಲಕ ಆಯ್ಕೆ ಮಾಡಿಕೊಳ್ಳಬೇಕು. ಬಟ್ಟೆ ತೊಳೆದಾದ ನಂತರ ಬಟ್ಟೆಯನ್ನು ಬಟ್ಟೆ ತೊಳೆಯುವ ಡ್ರಮ್‌ನಿಂದ ನೀವೇ ಎತ್ತಿ ಒಣಗಿಸುವ ಡ್ರಮ್ಮಿಗೆ ಹಾಕಬೇಕು. ಅಲ್ಲೂ ಮತ್ತೆ ಟೈಮರ್ ಮೂಲಕ ಎಷ್ಟು ಸಮಯ ತಿರುಗಿಸಿ ಒಣಗಿಸಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳ ಬೇಕು. ಇವು ಬಟ್ಟೆಯನ್ನು ಪೂರ್ತಿ ಒಣಗಿಸುವುದಿಲ್ಲ. ತೂತುಗಳಿರುವ ಡ್ರಮ್ ಅತಿವೇಗವಾಗಿ ತಿರುಗುತ್ತದೆ. ಆಗ ಬಟ್ಟೆಯಿಂದ ನೀರು ಬೇರ್ಪಡುತ್ತದೆ. ಬಟ್ಟೆಯನ್ನು ಮತ್ತೆ ಒಣಗಲು ನೇತು ಹಾಕಬೇಕಾಗುತ್ತದೆ. ಈ ಮಾದರಿಯ ಯಂತ್ರಗಳನ್ನು ನಿಜವಾಗಿ ನೋಡಿದರೆ ಮ್ಯಾನ್ಯುವಲ್ ಎಂದು ಕರೆಯುವುದೇ ಸೂಕ್ತ. 

ಮೇಲಿನಿಂದ ಬಟ್ಟೆ ಹಾಕುವಂಥವು
ಇದು ಸಂಪೂರ್ಣ ಸ್ವಯಂಚಾಲಿತ (fully automatic) ಮಾದರಿಯಲ್ಲಿಯ ಒಂದು ನಮೂನೆ. ಹೆಸರೇ ಸೂಚಿಸುವಂತೆ ಇದರಲ್ಲಿ ಬಟ್ಟೆಯನ್ನು ಮೇಲಿನಿಂದ ಹಾಕಲಾಗುತ್ತದೆ. ಎಷ್ಟು ಸಮಯ ತೊಳೆಯಬೇಕು, ನಂತರ ಎಷ್ಟು ನಿಮಿಷ ತಿರುಗಿಸಿ ಒಣಗಿಸಬೇಕು, ತೊಳೆಯುವ ಮೊದಲು ಬೇಕಿದ್ದರೆ ಎಷ್ಟು ಸಮಯ ಸಾಬೂನು ಪುಡಿ ಜೊತೆ ಮಿಶ್ರ ಮಾಡಿ ಇಡಬೇಕು, ಇತ್ಯಾದಿ ಎಲ್ಲ ಆಯ್ಕೆ ಮಾಡಿಕೊಳ್ಳಬಹುದು. ಒಮ್ಮೆ ಎಲ್ಲ ಆಯ್ಕೆಗಳನ್ನು ಮಾಡಿಕೊಂಡರೆ ಇದು ನೀರು ತೆಗೆದು ಕೊಳ್ಳುವುದು, ಸಾಬೂನು ಮಿಶ್ರ ಮಾಡಿಕೊಳ್ಳುವುದು, ತೊಳೆಯುವುದು, ಒಣಗಿಸುವುದು ಎಲ್ಲ ತಾನೇ ಮಾಡುತ್ತದೆ. ಈ ನಮೂನೆಯ ಯಂತ್ರ (top loading) ಗಳಲ್ಲಿ ಒಮ್ಮೆ ಬಟ್ಟೆ ತೊಳೆಯಲು ಪ್ರಾರಂಭವಾದರೆ ಮಧ್ಯದಲ್ಲಿ ನಿಲ್ಲಿಸಿ ಇನ್ನೊಂದಿಷ್ಟು ಬಟ್ಟೆ ಹಾಕಬಹುದು. ಈ ಸೌಲಭ್ಯ ಹಲವು ಸಂದರ್ಭಗಳಲ್ಲಿ ತುಂಬ ಉಪಯುಕ್ತವಾಗುತ್ತವೆ. ಈ ನಮೂನೆಯ ಕೆಲವು ಮಾದರಿಗ ಳಲ್ಲಿ ಡ್ರಮ್‌ನ ಮಧ್ಯದಲ್ಲಿ ನೆಲಕ್ಕೆ ಲಂಬವಾಗಿ ಪ್ಲಾಸ್ಟಿಕ್ಕಿನಿಂದ ತಯಾರಿಸಿದ ಒಂದು ಕೋಲಿನಾಕಾರದ ಸಾಧನವಿರುತ್ತದೆ. ಡ್ರಮ್ ಪ್ರದಕ್ಷಿಣಾಕಾರ ವಾಗಿ ತಿರುಗುವಾಗ ಇದು ಅಪ್ರದಕ್ಷಿಣ ವಾಗಿ ತಿರುಗುತ್ತದೆ. ಇದು ಬಟ್ಟೆಯನ್ನು ಇನ್ನಷ್ಟು ಶುಭ್ರವಾಗಿಸಲು ನೆರವಾಗುತ್ತದೆ.
  
ಎದುರುಗಡೆಯಿಂದ ಬಟ್ಟೆ ಹಾಕುವಂಥವು
ಇದು ಸಂಪೂರ್ಣ ಸ್ವಯಂಚಾಲಿತ ಮಾದರಿಯಲ್ಲಿಯ ಇನ್ನೊಂದು ನಮೂನೆ (front loading). ಇದರಲ್ಲಿ ಬಟ್ಟೆಯನ್ನು ಎದುರುಗಡೆ ಯಿಂದ ಹಾಕಲಾಗುತ್ತದೆ. ಇದರಲ್ಲಿ ತಿರುಗುವ ಡ್ರಮ್ ಭೂಮಿಗೆ ಸಮಾಂತರವಾಗಿರುತ್ತದೆ. ಸ್ವಯಂಚಾಲಿತ ಯಂತ್ರದಲ್ಲಿರುವ ಎಲ್ಲ ಆಯ್ಕೆಗಳು ಇದರಲ್ಲೂ ಇರುತ್ತವೆ. ಈ ನಮೂನೆಯ ಯಂತ್ರಗಳಲ್ಲಿ ಒಮ್ಮೆ ಬಟ್ಟೆ ತೊಳೆಯಲು ಪ್ರಾರಂಭವಾದರೆ ಮಧ್ಯದಲ್ಲಿ ನಿಲ್ಲಿಸಿ ಇನ್ನೊಂದಿಷ್ಟು ಬಟ್ಟೆ ಹಾಕಲು ಸಾಧ್ಯವಿಲ್ಲ. ಈ ನಮೂನೆಯ ಮಾದರಿಯಲ್ಲಿ ಬಟ್ಟೆ ತುಂಬ ಚೆನ್ನಾಗಿ ಶುಭ್ರವಾಗುತ್ತವೆ.

ಸ್ವಯಂಚಾಲಿತ ಯಂತ್ರಗಳಲ್ಲಿ ಕೆಲವು ಮಾದರಿಗಳಲ್ಲಿ ಬಿಸಿ ಗಾಳಿಯನ್ನು ಬಳಸಿ ಒಣಗಿಸುವ ಸೌಲಭ್ಯವೂ ಇರುತ್ತದೆ. ಇಂತಹ ಮಾದರಿಗಳು ತುಂಬ ದುಬಾರಿ. ಬಟ್ಟೆ ತೊಳೆಯುವ ಯಂತ್ರಗಳು ಹಲವು ಗಾತ್ರ ಮತ್ತು ಶಕ್ತಿಗಳಲ್ಲಿ ದೊರೆಯುತ್ತವೆ. ನಿಮ್ಮ ಮನೆಯಲ್ಲಿ ಎಷ್ಟು ಜನ ಇದ್ದಾರೆ, ಪ್ರತಿ ದಿನ ಎಷ್ಟು ಬಟ್ಟೆ ತೊಳೆಯಬೇಕಾಗುತ್ತದೆ ಎಂಬುದನ್ನು ಅವಲಂಬಿಸಿ ನಿಮಗೆ ಬೇಕಾದ ಗಾತ್ರದ ಯಂತ್ರವನ್ನು ಆರಿಸಿಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ 6 ರಿಂದ 7 ಕಿಲೊ ಶಕ್ತಿ ಯಂತ್ರ ಸಾಕಾಗುತ್ತದೆ.

ಯಂತ್ರದಲ್ಲಿರುವ ಡ್ರಮ್‌ನ ಗುಣಮಟ್ಟದ ಕಡೆ ಸ್ವಲ್ಪ ಗಮನ ಹರಿಸಬೇಕು. ಹೆಚ್ಚಿನ ಯಂತ್ರಗಳಲ್ಲಿ ತುಕ್ಕುರಹಿತ ಉಕ್ಕಿನ ಡ್ರಮ್ ಇರುತ್ತದೆ. ಕೆಲವೇ ಮಾದರಿಗಳಲ್ಲಿ ಪ್ಲಾಸ್ಟಿಕ್ಕಿನದೂ ಇರುತ್ತದೆ. ಬಹುಮಟ್ಟಿಗೆ ಉಕ್ಕಿನ ಡ್ರಮ್ ಉತ್ತಮ. ನೀವು ಬಳಸುವ ನೀರು ಗಡಸು ನೀರಾಗಿದ್ದಲ್ಲಿ ಡ್ರಮ್ಮಿಗೆ ನಿಧಾನವಾಗಿ ಪದರವೊಂದು ಲೇಪವಾಗಿ ಕೊಳ್ಳುತ್ತದೆ. ಇದನ್ನು ತೆಗೆಯಲು ಯಂತ್ರ ಮಾರುವವರು ಒಂದು ರಾಸಾಯನಿಕ ಪುಡಿಯನ್ನು ನೀಡುತ್ತಾರೆ. ಅದನ್ನು ತಿಂಗಳಿಗೊಮ್ಮೆ ಬಳಸಿ ಯಂತ್ರವನ್ನು ಸ್ವಚ್ಛ ಮಾಡುತ್ತಿರಬೇಕು. ಅಲ್ಲವಾದಲ್ಲಿ ಯಂತ್ರ ಬೇಗನೆ ಕೆಟ್ಟು ಹೋಗುತ್ತದೆ.

ಬಟ್ಟೆಯಿಂದ ಚಿಕ್ಕಪುಟ್ಟ ಕಸ ಬೇರ್ಪಟ್ಟು ಯಂತ್ರದಲ್ಲಿನ ನೀರಿನಲ್ಲಿ ತೇಲಾಡಿ ಅಲ್ಲಿ ಇಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆಗಳಿರುತ್ತದೆ. ಬಹುಪಾಲು ಯಂತ್ರಗಳಲ್ಲಿ ಈ ಕಸವನ್ನು ಹಿಡಿದಿಟ್ಟುಕೊಳ್ಳಲು ಒಂದು ಜಾಲರಿ ವ್ಯವಸ್ಥೆ ಇರುತ್ತದೆ. ಇದು ಬಹುಮುಖ್ಯ. ಈ ವ್ಯವಸ್ಥೆ ಇಲ್ಲದ ಯಂತ್ರವನ್ನು ಕೊಳ್ಳಬಾರದು. 

ಬಟ್ಟೆ ತೊಳೆಯುವ ಯಂತ್ರ ಹೇಗೆ ಕೆಲಸ ಮಾಡುತ್ತದೆ? ಬಟ್ಟೆಯನ್ನು ಸಾಬೂನು ಮಿಶ್ರಿತ ನೀರಿನಲ್ಲಿ ಮುಳುಗಿಸಿ ಅತ್ತಿಂದಿತ್ತ ತುಂಬ ಅಲ್ಲಾಡಿಸಿದಾಗ ಬಟ್ಟೆಯಿಂದ ಕಲ್ಮಶ ಬೇರ್ಪಟ್ಟು ನೀರಿಗೆ ವರ್ಗಾವಣೆಯಾಗುತ್ತದೆ. ಈ ಕ್ರಿಯೆಯನ್ನು ಸುಗಮ ಮಾಡಲು ಬೇರೆ ಬೇರೆ ಮಾದರಿಯ ಯಂತ್ರಗಳಲ್ಲಿ ಬೇರೆ ಬೇರೆ ಸವಲತ್ತುಗಳಿರುತ್ತವೆ. ಕೆಲವು ಯಂತ್ರಗಳಲ್ಲಿ ಡ್ರಮ್ಮಿನ ಮಧ್ಯದಲ್ಲಿ ಒಂದು ಕೋಲಿನಾಕಾರದ ಸಾಧನ ಇರುತ್ತದೆ, ಇನ್ನು ಕೆಲವು ಮಾದರಿಗಳಲ್ಲಿ ಡ್ರಮ್ಮಿನ ಕೆಳ ಭಾಗದಲ್ಲಿ ಹೆಚ್ಚಿನ ತೂತುಗಳಿದ್ದು, ಅವುಗಳ ಮೂಲಕ ನೀರನ್ನು ವೇಗವಾಗಿ ಚಿಮ್ಮಿಸಲಾಗುತ್ತದೆ. ಇವೆಲ್ಲ ಮೇಲಿನಿಂದ ಬಟ್ಟೆ ಹಾಕುವ ಮಾದರಿಗಳಲ್ಲಿರುವ ಸವಲತ್ತುಗಳು. ಎದುರುಗಡೆಯಿಂದ ಬಟ್ಟೆ ಹಾಕುವ ಮಾದರಿಗಳಿಗೆ ಇಂತಹ ಯಾವುದೇ ಅಧಿಕ ಸೌಲಭ್ಯಗಳ ಅಗತ್ಯವಿಲ್ಲ.

ವಾರದ ಆಪ್ 
ಐರೆಫ್

ಮೊಬೈಲ್ ಫೋನ್‌ ಸಂಪರ್ಕ ನೀಡುವ ಹಲವು ಕಂಪೆನಿಗಳಿವೆ. ಪ್ರತಿಯೊಂದು ಕಂಪೆನಿಯೂ ಹಲವು ವಿಧದ ಸೇವೆ ನೀಡುತ್ತಿವೆ. ನಿಮ್ಮ ಬಳಕೆಗನುಗುಣವಾಗಿ ಹಲವು ನಮೂನೆಯ ಆಯ್ಕೆಗಳಿರುತ್ತವೆ.

ಜೊತೆಗೆ ಅಂತರಜಾಲ ಸಂಪರ್ಕಕ್ಕೆ ಹಲವು ಆಯ್ಕೆಗಳು, ಎಸ್ಎಂಎಸ್‌ ಕಳುಹಿಸಲು, ಬೇರೆ ರಾಜ್ಯಕ್ಕೆ ಅಥವಾ ವಿದೇಶಕ್ಕೆ ಹೋದಾಗ ಬಳಸಲು, ಇತ್ಯಾದಿ ಹಲವು ಆಯ್ಕೆಗಳು ಪ್ರತಿ ಕಂಪೆನಿಯಲ್ಲೂ ಇರುತ್ತವೆ.

ಅವು ಕಾಲ ಕಾಲಕ್ಕೆ ಬದಲಾಗುತ್ತಲೂ ಇರುತ್ತವೆ. ಹಬ್ಬ ಬಂದಾಗ ಹೊಸ ಹೊಸ ಆಯ್ಕೆಗಳ ಘೋಷಣೆಯಾಗುತ್ತದೆ. ಇವುಗಳನ್ನೆಲ್ಲ ತಿಳಿಯುವುದು ಹೇಗೆ? ನಮಗೆ ಯಾವುದು ಉತ್ತಮ ಎಂದು ತಿಳಿಯುವುದು ಹೇಗೆ? ಈ ಪ್ರಶ್ನೆಗೆ ಉತ್ತರವಾಗಿ ಆಂಡ್ರಾಯಿಡ್ ಫೋನ್ ಬಳಸುವವರಿಗೆ ಐರೆಫ್ (iReff) ಎಂಬ ಕಿರುತಂತ್ರಾಂಶ (ಆಪ್) ಲಭ್ಯವಿದೆ. ಭಾರತದಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ಎಲ್ಲ ಕಂಪೆನಿಗಳ ಎಲ್ಲ ನಮೂನೆಯ ಸೇವೆಗಳ ವಿವರ ಇದರಲ್ಲಿದೆ. ಕಾಲಕಾಲಕ್ಕೆ ಇವು ನವೀಕರಣಗೊಳ್ಳುತ್ತವೆ.

ಗ್ಯಾಜೆಟ್ ಸುದ್ದಿ
ಕೊನೆಗೂ ವಿಂಡೋಸ್‌ ಫೋನ್‌ಗೆ ಕನ್ನಡ ಬಂತು

ವಿಂಡೋಸ್ ಫೋನ್ ಬಳಸುವವರ ಒಂದು ಪ್ರಮುಖ ಕೊರಗೆಂದರೆ ಅದರಲ್ಲಿ ಕನ್ನಡದ ಕೀಲಿಮಣೆ ಇಲ್ಲ‌ಎಂಬುದು. ಪ್ರತ್ಯೇಕ ಕಿರುತಂತ್ರಾಂಶದಲ್ಲಿ ಬೆರಳಚ್ಚು ಮಾಡಿ ಅದನ್ನು ಅಲ್ಲಿಂದ ನಕಲು ಮಾಡಿ ನಮಗೆ ಬೇಕಾದ ಜಾಗದಲ್ಲಿ ಅಂಟಿಸುವ ಸರ್ಕಸ್ ಮಾಡಬೇಕಿತ್ತು. ವಿಂಡೋಸ್ ಫೋನ್ 10ರಲ್ಲಿ ಈ ಸಮಸ್ಯೆಗೆ ಪರಿಹಾರ ರೂಪವಾಗಿ ಕನ್ನಡದ ಕೀಲಿಮಣೆ ನೀಡಲಾಗಿದೆ. ಎಲ್ಲ ಕಿರು ತಂತ್ರಾಂಶಗಳಲ್ಲಿ ಇನ್ನು ಮುಂದೆ ಕನ್ನಡದಲ್ಲಿ ಬೆರಳಚ್ಚು ಮಾಡಬಹುದು. ಇದು ಸದ್ಯ ತಂತ್ರಜ್ಞರಿಗೆ ಮಾತ್ರ ಲಭ್ಯವಿದೆ (developer preview). ಈ ಆವೃತ್ತಿಯಲ್ಲಿ ಸದ್ಯ ಹಲವು ದೋಷಗಳಿವೆ. ಆದ್ದರಿಂದ ಇದನ್ನು ಸದ್ಯ ಜನಸಾಮಾನ್ಯರು ಬಳಸುವಂತಿಲ್ಲ.

ಗ್ಯಾಜೆಟ್ ಸಲಹೆ
ವಿಜಯಕುಮಾರರ ಪ್ರಶ್ನೆ: ನೋಶನ್ ಇಂಕ್ ಟ್ಯಾಬ್‌ನಲ್ಲಿ ವಿಂಡೋಸ್ .exe ಫೈಲ್‌ಗಳು ಕೆಲಸ ಮಾಡುತ್ತವೆಯಾ?

ಉ: ಮಾಡುತ್ತವೆ.

ಗ್ಯಾಜೆಟ್ ತರ್ಲೆ
ಚಿಕ್ಕ ಹುಡುಗರಾಗಿದ್ದ ಕಾಲದಲ್ಲಿ ನಾವು ಅಪ್ಸರ ಮತ್ತು ನಟರಾಜ ಪೆನ್ಸಿಲ್‌ಗಳಲ್ಲಿ ಯಾವುದು ಉತ್ತಮ ಎಂದು ಚರ್ಚೆ ಮಾಡುತ್ತಿದ್ದೆವು. ಈಗಿನ ಮಕ್ಕಳು ಆಂಡ್ರಾಯಿಡ್ ಮತ್ತು ಐಓಎಸ್‌ಗಳಲ್ಲಿ ಯಾವುದು ಹೇಗೆ ಎಂದು ಚರ್ಚೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT