ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈರಿಗಳನ್ನು ಮರೆಯುವ ಬಗೆ

Last Updated 23 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಟ್ಟದ ಬುಡದಲ್ಲಿ ಒಂದು ಪುಟ್ಟ ಹಳ್ಳಿ. ಅಲ್ಲಿ ಇರುವವರೆಲ್ಲ ಬಡ ರೈತರು.  ಬೆಟ್ಟದ ಮೇಲೊಂದು ಗುಹೆ. ಅದರಲ್ಲೊಬ್ಬ ಗುರು. ಒಂದು ದಿನ ಗುರುವಿನೆಡೆಗೆ ಮಹಿಳೆಯೊಬ್ಬಳು ಬಂದು, ‘ಗುರುವೇ, ನಾನು ಗುಡಿಸಲಿನಲ್ಲಿ ನನ್ನ ಗಂಡ ಮತ್ತು ಇಬ್ಬರು ಮಕ್ಕಳೊಡನೆ ಚೆನ್ನಾಗಿದ್ದೆ.  ಈಗ ನಮ್ಮತ್ತೆ ಬಂದು ಸೇರಿಕೊಂಡಿದ್ದಾಳೆ. ಆ ಮುದುಕಿ ಯಾವ ಕೆಲಸವನ್ನೂ ಮಾಡುವುದಿಲ್ಲ. ಅವಳದು ಬರೀ ತಕರಾರು. ಏನು ಮಾಡಲಿ? ನನಗೆ ಆಕೆಯನ್ನು ಕಂಡರೆ ಆಗುವುದಿಲ್ಲ’ ಎಂದಳು.  ಗುರು ಒಂದು ಕ್ಷಣ ಯೋಚಿಸಿ ಕೇಳಿದ, ‘ನಿನ್ನ ಬಳಿ ಆಡು ಕುರಿಗಳಿವೆಯೇ?’.  ‘ಹಾಂ ಎರಡು ಕುರಿ ಒಂದು ಆಡು ಇವೆ’ ಎಂದಳಾಕೆ. ‘ಹಾಗಾದರೆ ನಾಳೆಯಿಂದ ಅವೆಲ್ಲವನ್ನೂ ಗುಡಿಸಲಿನಲ್ಲಿ ಇಟ್ಟುಕೋ. ಒಂದು ವಾರದ ನಂತರ ಬಂದು ನನ್ನನ್ನು ಕಾಣು’ ಎಂದ ಗುರು. ಆಕೆ ಮುಖ ಹುಳ್ಳಗೆ ಮಾಡಿಕೊಂಡು ಹೋದಳು.

ಮರುವಾರ ಬಂದಾಗ ಅವಳ ಮುಖ ಇಳಿದುಹೋಗಿತ್ತು. ‘ಗುರುವೇ ನನಗೆ ಸಾಕಾಗಿ ಹೋಗಿದೆ. ಮೊದಲೇ ಅತ್ತೆ  ಕಾಟ. ಅದರೊಂದಿಗೆ ಈ ಕುರಿ, ಆಡುಗಳ ಅರಚಾಟ, ಹೊಲಸು ವಾಸನೆ. ನಿಜವಾಗಿ ಹೇಳುತ್ತೇನೆ,  ನನಗೆ ಅತ್ತೆಯ ಬಗ್ಗೆ ದ್ವೇಷ ಬರುತ್ತಿದೆ’ ಎಂದಳು ಮಹಿಳೆ. ಮತ್ತೆ ಗುರು ಕ್ಷಣ ಚಿಂತಿಸಿ ಹೇಳಿದ, ‘ನಿಮ್ಮ ಗುಡಿಸಲಿನ ಹೊರಗೆ ಹಸು ಕಟ್ಟಿದ್ದೀಯಾ?’. ‘ಹೌದು ಹಸು, ಕರು ಎರಡೂ ಇವೆ’ ಎಂದಳು ಆ ಮಹಿಳೆ.  ‘ನಾಳೆಯಿಂದ ಗುಡಿಸಲಿನಲ್ಲೇ ಹಸು ಮತ್ತು ಕರುವನ್ನು ಕಟ್ಟು. ಒಂದು ವಾರ ಬಿಟ್ಟು ಬಾ’ ಎಂದ ಗುರು.  ಆಕೆಯ ಮುಖ ಬೆಳ್ಳಗಾಯಿತು.

ಮುಂದಿನ ವಾರ ಆಕೆ ಬಂದಾಗ ಇಳಿದುಹೋಗಿದ್ದಳು. ‘ನೀವು ಅದೇನು ಸಲಹೆ ನೀಡಿದಿರೋ? ನನಗೀಗ ಹುಚ್ಚು ಹಿಡಿಯುವಂತಿದೆ. ಈಗ ಇರುವ ಪುಟ್ಟ ಗುಡಿಸಲಿನಲ್ಲಿ ನನಗೇ ಇರಲು ಸ್ಥಳ ಇಲ್ಲದಂತಾಗಿದೆ.  ಗಂಡ, ಮಕ್ಕಳು, ಕುರಿ, ಆಡು ಮತ್ತು ಅವುಗಳೊಡನೆ ಹಸು ಮತ್ತು ಕರು.  ಈ ವಾಕರಿಕೆ ಬರುವಂಥ ಜಾಗೆಯಲ್ಲಿ ಏನು ಮಾಡಲೂ ತೋಚುತ್ತಿಲ್ಲ.  ನಾನು ಹೋದ ಬಾರಿ ಬಂದಾಗಲೂ ಹೇಳಿದ್ದೆನಲ್ಲವೇ? ನನಗೆ ನನ್ನ ಅತ್ತೆಯನ್ನು ಕಂಡರೆ ಕೆಂಡದಂಥ ಕೋಪ’. ಗುರು ನಸುನಕ್ಕು ಕೇಳಿದ, ‘ನಿನ್ನ ಬಳಿ ಕೋಳಿಗಳಿವೆಯೇ?’. ಈಕೆ ಗಾಬರಿಯಿಂದಲೇ ಹೇಳಿದಳು, ‘ಇವೆ. ಹತ್ತು ಕೋಳಿ ಮತ್ತು ಇಪ್ಪತ್ತು ಮರಿಗಳು’. ಗುರು ಹೇಳಿದ, ‘ಅಷ್ಟೇನಾ ನಿನ್ನ ಬಳಿ ಇರುವುದು?

ನಾಳೆಯಿಂದ ಅವೆಲ್ಲವನ್ನೂ ಗುಡಿಸಲಿನೊಳಗೇ ಬಿಟ್ಟುಕೋ. ನಂತರ ಒಂದು ವಾರದ ಮೇಲೆ ಬಾ’. ಆಕೆ ಸಂಕಟಪಡುತ್ತಲೇ ಹೋದಳು.
ಮತ್ತೊಮ್ಮೆ ಬಂದಾಗ ಮಾತನಾಡಲೂ ಶಕ್ತಿ ಇರಲಿಲ್ಲ, ‘ಗುರುಗಳೇ, ನಾನೀಗ ಬದುಕಿದ್ದೇ ಪವಾಡ. ಎರಡು ಕುರಿ, ಒಂದು ಆಡು, ಒಂದು ಹಸು ಮತ್ತು ಅದರ ಕರು. ಈಗ ಅವುಗಳೊಡನೆ ಹತ್ತು ಕೋಳಿ ಮತ್ತು ಇಪ್ಪತ್ತು ಮರಿಗಳು.  ಅವುಗಳ ಅರಚಾಟ, ಕಿರಿಚಾಟಗಳಲ್ಲಿ ಬದುಕು ದುರ್ಭರವಾಗಿದೆ.  ಈ ಗದ್ದಲದಲ್ಲಿ, ಇಷ್ಟು ಸಣ್ಣ ಗುಡಿಸಲಿನಲ್ಲಿ ನಾವು ಮನುಷ್ಯರು ಹೇಗೆ ಬದುಕಿದ್ದೇವೋ ತಿಳಿಯದಾಗಿದೆ. ಆದರೆ ನೀವು ಮರೆಯಬೇಡಿ, ನನಗೆ ನನ್ನ ಅತ್ತೆಯನ್ನು ಕಂಡರೇ ಆಗುವುದಿಲ್ಲ’. ಮತ್ತೆ ಗುರು ಕೇಳಿದ, ‘ಇನ್ನೂ ಪ್ರಾಣಿಗಳನ್ನು ನೀನು ಸಾಕಿಕೊಂಡಿದ್ದೀಯಾ?’. ಆಕೆ ಹೇಳಿದಳು, ‘ಗುರುಗಳೇ, ಇನ್ನು ನನ್ನದು ಎಂದು ಗುಡಿಸಲಿನ ಹೊರಗಿರುವುದೆಂದರೆ ನಾಲ್ಕು ಹಂದಿಗಳು ಮಾತ್ರ’. ‘ಹಾಗಾದರೆ  ಅವು ಹೊರಗಡೆಗೆ ಯಾಕಿವೆ? ಅವನ್ನೂ  ಗುಡಿಸಲಿನೊಡನೆ ಸೇರಿಸಿಕೋ. ಒಂದು ವಾರಬಿಟ್ಟು ಬಾ’ ಎಂದ ಗುರು.  ‘ಆದರೆ ನನ್ನ ಅತ್ತೆಗೇನು ಮಾಡುತ್ತೀರಿ?’ ಆತಂಕದಿಂದ ಮಹಿಳೆ ಕೇಳಿದಳು. ನೋಡೋಣ ಬಾ ಎಂದು ಕಳುಹಿಸಿದ.

ಹದಿನೈದು ದಿನಗಳ ನಂತರ ಬಂದ ಮಹಿಳೆ ಗುರುತೇ ಸಿಗದಂತಿದ್ದಳು.  ಮಾತನಾಡಲೂ ಶಕ್ತಿ ಇಲ್ಲ. ‘ಇನ್ನೇನು ಮಾಡಲಿ ಗುರುಗಳೇ? ಕುರಿ, ಆಡು, ಹಸು, ಕರು, ಕೋಳಿ, ಮರಿಗಳು ಮತ್ತು ಹಂದಿಗಳು ಸೇರಿ ಗುಡಿಸಲಿನಲ್ಲಿ ಜಾಗವೇ ಇಲ್ಲ.  ನಾನು ಏನು ಮಾಡುತ್ತೇನೆಂಬುದು ನನಗೇ ತಿಳಿದಿಲ್ಲ. ನನ್ನನ್ನು ಪಾರು ಮಾಡಿ’ ಎಂದು ಕೈಮುಗಿದಳು.  ಆಗ ಗುರು ಹೇಳಿದ, ‘ಈಗ ಗುಡಿಸಲಿಗೆ ಹೋಗಿ ಎಲ್ಲ ಪ್ರಾಣಿಗಳನ್ನು ಹೊರಗೆ ಹಾಕು. ಎರಡು ವಾರ ಬಿಟ್ಟು ಬಾ’.  ಎರಡು ವಾರಗಳ ನಂತರ ಬಂದ ಮಹಿಳೆ ತುಂಬ ಗೆಲುವಾಗಿದ್ದಳು. ಬಂದವಳೇ ಹಣ್ಣು ಕಾಯಿಗಳನ್ನು ಕೊಟ್ಟು ನಮಸ್ಕರಿಸಿದಳು. ‘ಹೇಗಿದ್ದೀ?’ ಕೇಳಿದ ಗುರು. ‘ಇಷ್ಟು ಸಂತೋಷವಾಗಿ ನಾನು ಎಂದೂ ಇರಲಿಲ್ಲ ಗುರುಗಳೇ. ಯಾವ ತೊಂದರೆಯೂ ಇಲ್ಲ’ ಎಂದಳು ಆಕೆ. ‘ಮತ್ತೆ ನಿಮ್ಮ ಅತ್ತೆಯದೇನು ಕಥೆ?’ ಕೇಳಿದ ಗುರು. ‘ಪಾಪ! ಆಕೆಯದೇನು ತೊಂದರೆ? ವಯಸ್ಸಾಗಿದೆಯಲ್ಲವೇ? ನಮ್ಮೆಲ್ಲರ ಜೊತೆಗೆ ಹೊಂದಿಕೊಂಡೇ ಬದುಕುತ್ತಾಳೆ’ ಎಂದು ಹೇಳಿ ಕುಣಿಯುತ್ತ ಹೊರಟಳು.

ಆದದ್ದು ಇಷ್ಟೇ. ಮೊದಲು ಸೊಸೆಗೆ ಅತ್ತೆಯ ಮೇಲೆ ಕೋಪವಿತ್ತು. ಹಾಗಾಗಿ ಸದಾ ಕಾಲ ಅವಳೇನು ಮಾಡುತ್ತಾಳೆ, ಏನು ಹೇಳುತ್ತಾಳೆ ಎಂಬುದರ ಬಗ್ಗೆಯೇ ಗಮನವಿರುತ್ತಿತ್ತು.  ಆದರೆ ಗುಡಿಸಲಿನ ತುಂಬ ಪ್ರಾಣಿಗಳು ತುಂಬಿಕೊಂಡಾಗ ಅತ್ತೆಯನ್ನು ನೋಡಲು ಸಮಯವೆಲ್ಲಿತ್ತು? ನಮ್ಮ ವೈರಿಗಳ ಬಗ್ಗೆ ಸದಾ ಚಿಂತಿಸುತ್ತಿದ್ದರೆ ಅವರೇ ನಮ್ಮ ಬದುಕನ್ನು ಆವರಿಸಿಕೊಂಡು ಬಿಡುತ್ತಾರೆ. ನೀವು ಯಾವುದನ್ನೇ ಮರೆಯಬೇಕಾದರೆ ಬೇರೆ ಏನನ್ನೋ ಚಿಂತಿಸುವುದರಲ್ಲಿ ಮಗ್ನರಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT