ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಶಿಷ್ಟ್ಯಗಳ ದುಬಾರಿ ಫೋನ್: ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್-4

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಫೋನ್ ಮತ್ತು ಟ್ಯಾಬ್ಲೆಟ್‌ಗಳ ಮಧ್ಯದ ಗಾತ್ರದ ಫಾಬ್ಲೆಟ್ ಕ್ಷೇತ್ರಕ್ಕೆ ಸ್ಯಾಮ್‌ಸಂಗ್ ಕೂಡ ಲಗ್ಗೆ ಇಟ್ಟಿದೆ. ತನ್ನ ಗ್ಯಾಲಕ್ಸಿ ನೋಟ್ ಶ್ರೇಣಿಯಲ್ಲಿ ದೊಡ್ಡ ಫೋನ್‌ಗಳನ್ನು ತಯಾರಿಸುತ್ತಿದ್ದು, ಈಗ ಅವಕ್ಕಿಂತಲೂ ದೊಡ್ಡದಾದ ಫೋನ್ ಅಥವಾ ಫಾಬ್ಲೆಟ್ ತಯಾರಿಸಿದೆ. ಕೇವಲ ಗಾತ್ರವಲ್ಲ, ಹಲವು ವೈಶಿಷ್ಟ್ಯಗಳಿಂದ ತುಂಬಿ ತುಳುಕುವ ಅತಿ ದುಬಾರಿ ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್-4 (Samsung Galaxy Note 4) ನಮ್ಮ ಈ ವಾರದ ಗ್ಯಾಜೆಟ್.

ಗುಣವೈಶಿಷ್ಟ್ಯಗಳು
2.7 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಪ್ರೊಸೆಸರ್ (Qualcomm Snapdragon 805), ಗ್ರಾಫಿಕ್ಸ್‌ಗಾಗಿ ಅಧಿಕ ಪ್ರೊಸೆಸರ್ (Adreno 420 GPU), 3 + 32 ಗಿಗಾಬೈಟ್ ಮೆಮೊರಿ, 128 ಗಿಗಾಬೈಟ್ ತನಕ ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಸೌಲಭ್ಯ, 5.7 ಇಂಚು ಗಾತ್ರದ 2560 X 1440 ಪಿಕ್ಸೆಲ್ ರೆಸೊಲೂಶನ್ನ ಸೂಪರ್ ಅಮೋಲೆಡ್ ಪರದೆ, ಗೊರಿಲ್ಲ-3 ಗಾಜು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಉಳ್ಳ 16 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಕ್ಯಾಮೆರಾ, ಅದಕ್ಕೆ ಎಲ್ಇಡಿ ಫ್ಲಾಶ್, 3.7 ಮೆಗಾಪಿಕ್ಸೆಲ್‌ನ ಇನ್ನೊಂದು ಎದುರುಗಡೆಯ ಕ್ಯಾಮೆರಾ, ಸ್ಯಾಮ್‌ಸಂಗ್‌ನ ನೋಟ್ ಶ್ರೇಣಿಯ ವೈಶಿಷ್ಟ್ಯವಾದ ಎಸ್-ಪೆನ್, ಮೂರು ಮೈಕ್‌ಗಳು, 2G/3G/4G ಮೈಕ್ರೋಸಿಮ್, ವೈಫೈ, ಎನ್ಎಫ್‌ಸಿ, ಅಕ್ಸೆಲೆರೋಮೀಟರ್, ಅವಕೆಂಪು ಎಲ್ಇಡಿ ಲೇಸರ್ (IR LED), 3220mAh ಬ್ಯಾಟರಿ, 153.5 X 78.6 X 8.5 ಮಿ.ಮೀ. ಗಾತ್ರ, 176 ಗ್ರಾಂ ತೂಕ, ಆಂಡ್ರಾಯಿಡ್ ಕಿಟ್‌ಕ್ಯಾಟ್‌ (4.4) ಇತ್ಯಾದಿ. ನಿಗದಿತ ಬೆಲೆ ₹61,500, ಮಾರುಕಟ್ಟೆ ಬೆಲೆ ₹57,500.

ಮೊದಲಿಗೆ ಇದರ ಬೆಲೆಯ ಕಡೆ ಗಮನ ನೀಡಿ. ಈ ಬೆಲೆಗೆ ನಿಮಗೆ ಒಂದು ಉತ್ತಮ ಲ್ಯಾಪ್‌ಟಾಪ್‌ ಅಥವಾ ಹಳೆಯ ಮಾರುತಿ 800 ಕಾರು ಕೊಳ್ಳಬಹುದು! ಸಾಮಾನ್ಯವಾಗಿ ಯಾವುದೇ ಉತ್ಪನ್ನವನ್ನು ನಾವು ಅದು ಒಳ್ಳೆಯದಿದೆಯೇ ಇಲ್ಲವೇ ಎನ್ನುವುದಕ್ಕಿಂತಲೂ ನಾವು ಎಷ್ಟು ಹಣ ನೀಡುತ್ತೇವೆ, ನಾವು ನೀಡುವ ಹಣಕ್ಕೆ ನಮಗೆ ಎಷ್ಟು ಸೌಲಭ್ಯಗಳು ದೊರೆಯುತ್ತವೆ ಎಂದು ವಿಮರ್ಶಿಸುವುದೇ ಸೂಕ್ತ. ಇದನ್ನೇ ಇಂಗ್ಲಿಷಿನಲ್ಲಿ value for money ಎಂದು ಕರೆಯುತ್ತಾರೆ. ಈಗ ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ವಿಮರ್ಶೆ ಪ್ರಾರಂಭಿಸೋಣ.

ಇದರ ರಚನೆ ಮತ್ತು ವಿನ್ಯಾಸ ಚೆನ್ನಾಗಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಶ್ರೇಣಿಯ ಇತರೆ ಫೋನ್‌ಗಳಂತೆಯೇ ಇದೆ. ಸ್ವಲ್ಪ ಸುಧಾರಣೆ ಆಗಿರುವುದೇನೆಂದರೆ ಇದರ ಬದಿಗಳಲ್ಲಿ ಇರುವ ಫ್ರೇಮ್ ಪ್ಲಾಸ್ಟಿಕ್ ಬದಲಿಗೆ ಲೋಹದ್ದಾಗಿದೆ. ಹಿಂಭಾಗದ ಕವಚ ರಬ್ಬರ್ ಪದರ ಇರುವ ಪ್ಲಾಸ್ಟಿಕ್ಕಿನಂತಿದೆ. ಈ ರಬ್ಬರ್ ಪದರದಿಂದಾಗಿ ಕೈಯಲ್ಲಿ ಹಿಡಿಯುವ ಅನುಭವ ಚೆನ್ನಾಗಿದೆ ಮಾತ್ರವಲ್ಲ ಕೈಯಿಂದ ಜಾರಿ ಬೀಳುವ ಸಂಭವ ಕಡಿಮೆ. ಬಲಭಾಗದಲ್ಲಿ ಆನ್/ಆಫ್ ಸ್ವಿಚ್, ಎಡಭಾಗದಲ್ಲಿ ವಾಲ್ಯೂಮ್ ಬಟನ್‌ಗಳಿವೆ. ಗಾತ್ರ ತುಂಬ ದೊಡ್ಡದಿರುವುದರಿಂದ ಒಂದು ಕೈಯಲ್ಲಿ ಹಿಡಿದು ಬಳಸಲು ಹೆಚ್ಚಿನವರಿಗೆ ಕಷ್ಟವಾಗಬಹುದು.

ಇದು ಬಳಸುವುದು ಸ್ಯಾಮ್‌ಸಂಗ್‌ನವರಿಂದ ಅತ್ಯಧಿಕವಾಗಿ ಬದಲಾವಣೆ ಮಾಡಲಾಗಿರುವ ಕಿಟ್‌ಕ್ಯಾಟ್ ಕಾರ್ಯಾಚರಣ ವ್ಯವಸ್ಥೆ (operating system). ಇದಕ್ಕೆ ಅವರು ಟಚ್‌ವಿಝ್ (Touchwiz Nature UX 3) ಎಂದು ಹೆಸರಿಟ್ಟಿದ್ದಾರೆ. ಈ ಇಂಟರ್‌ಫೇಸ್‌ ಬಹಳ ನಾಜೂಕಾಗಿ ಕೆಲಸ ಮಾಡುತ್ತದೆ. ಬಳಸುವ ಅನುಭವ ಅತ್ಯುತ್ತಮವಾಗಿದೆ. ಐಕಾನ್‌ಗಳನ್ನು ಸರಿಸುವುದು, ಆಟ ಆಡುವುದು, ವಿಡಿಯೊ ವೀಕ್ಷಣೆ, ಆಪ್‌ಗಳನ್ನು ಬಳಸುವುದು, ಹೀಗೆ ಎಲ್ಲ ಅಂಗಗಳಲ್ಲೂ ಬಳಕೆಯ ವೇಗ ಚೆನ್ನಾಗಿದೆ.

ಸ್ಯಾಮ್‌ಸಂಗ್ ನೋಟ್ ಶ್ರೇಣಿಯ ಎಲ್ಲ ಫೋನ್‌ಗಳಂತೆ ಇದರಲ್ಲೂ ಎಸ್-ಪೆನ್ ಇದೆ. ಅದನ್ನು ಬಳಸಿ ಹಲವು ಕೆಲಸಗಳನ್ನು ಮಾಡಬಹುದು. ಇದರಿಂದಾಗಿ ದೊರೆಯುವ ಹಲವು ಸೌಲಭ್ಯಗಳನ್ನು ಕಲಿಯಲು ಸ್ವಲ್ಪ ಸಮಯ ಹಿಡಿಯುತ್ತದೆ. ಒಮ್ಮೆ ಕಲಿತರೆ ಬಳಕೆ ಮಜಾ ನೀಡುತ್ತದೆ.

ಇದರ ಗಾತ್ರ ತುಂಬ ದೊಡ್ಡದಿರುವುದರಿಂದ ಒಂದು ಕೈಯಲ್ಲಿ ಹಿಡಿದು ಬಳಸಲೆಂದೇ ಪ್ರತ್ಯೇಕ ಸೌಲಭ್ಯ ಇದೆ. ಈ ಸೌಲಭ್ಯವನ್ನು ಚಾಲನೆ ಮಾಡಿದರೆ ಒಂದು ಬದಿಯಿಂದ ಕೈಯನ್ನು ಸವರಿದರೆ ಆ ಬದಿಯಲ್ಲಿ ಅತೀ ಅಗತ್ಯವಾದ ಕೆಲವು ಐಕಾನ್‌ಗಳು ಮೂಡಿಬರುತ್ತವೆ. ಆದರೆ ಈ ವಿಧಾನವನ್ನು ಬಳಸಿದರೆ ನೋಟ್-4ರ ವೈಶಿಷ್ಟ್ಯವನ್ನು ಬಳಸಿದಂತಾಗುವುದಿಲ್ಲ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಆಲ್ಫಾದಲ್ಲಿದ್ದಂತೆ ಇದರಲ್ಲೂ ಬೆರಳಚ್ಚನ್ನು ಗುರುತಿಸುವ ಸೌಲಭ್ಯವಿದೆ. ಆಲ್ಫಾಕ್ಕಿಂತ ಇದರಲ್ಲಿರುವ ಈ ಸೌಲಭ್ಯ ಹೆಚ್ಚು ನಿಖರವಾಗಿದೆ. 

ಇದರ ಆಡಿಯೊ ಇಂಜಿನ್ ಚೆನ್ನಾಗಿದೆ. ಜೊತೆಗೆ ನೀಡಿರುವ ಇಯರ್‌ಫೋನ್‌ ಕೂಡ ಒಂದು ಮಟ್ಟಿಗೆ ಚೆನ್ನಾಗಿದೆ. ಆದರೂ ನೀಡುವ ಹಣಕ್ಕೆ ಹೋಲಿಸಿದರೆ ಇಯರ್‌ಫೋನಿನ ಗುಣಮಟ್ಟ ಇನ್ನೂ ಉತ್ತಮವಿರಬೇಕಿತ್ತು ಎಂಬ ಭಾವನೆ ಬರುತ್ತದೆ. ಈ ಫೋನಿನಲ್ಲಿರುವುದು 16 ಮೆಗಾಪಿಕ್ಸೆಲ್‌ನ ಕ್ಯಾಮೆರಾ. ಅದಕ್ಕೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಇದೆ. ಅಂದರೆ ಫೋಟೊ ತೆಗೆಯುವಾಗ ಕೈ ಅಲ್ಪಸ್ವಲ್ಪ ಅಲುಗಾಡಿದರೆ ಫೋಟೊ ಮಸುಕು ಮಸುಕಾಗುವುದಿಲ್ಲ. ಆದರೆ ಇದರ ಕಾರ್ಯಕ್ಷಮತೆ ಇನ್ನೂ ಸ್ವಲ್ಪ ಉತ್ತಮವಾಗಬೇಕಿತ್ತು. ಎಲ್ಇಡಿ ಫ್ಲಾಶ್ ಇದೆ. ಕ್ಯಾಮೆರಾದ ಗುಣಮಟ್ಟ ಒಂದು ಮಟ್ಟಿಗೆ ತೃಪ್ತಿದಾಯಕವಾಗಿಯೇ ಇದೆ. ಉತ್ತಮ ಬೆಳಕಿನಲ್ಲಿ ಉತ್ತಮ ಫೋಟೊ ಮೂಡಿಬರುತ್ತದೆ. ಅತಿ ಕಡಿಮೆ ಬೆಳಕಿನಲ್ಲಿ ಫೋಟೊ ತೆಗೆದರೆ ಫಲಿತಾಂಶ ಅಷ್ಟೇನೂ ತೃಪ್ತಿದಾಯಕವಾಗಿಲ್ಲ. ಇದು ಹೈಡೆಫಿನಿಶನ್ ಮಾತ್ರವಲ್ಲದೆ 2K ಮತ್ತು 4K  ವಿಡಿಯೊ ರೆಕಾರ್ಡಿಂಗ್ ಕೂಡ ಮಾಡಬಲ್ಲದು.

ಈ ಫೋನಿನಲ್ಲಿ ಹೃದಯ ಬಡಿತ ದಾಖಲಿಸುವ ಸವಲತ್ತು ಇದೆ. ಅವಕೆಂಪು ಎಲ್ಇಡಿ ಲೇಸರ್ ಇದೆ. ಇದನ್ನು ಪ್ರೋಗ್ರಾಂ ಮಾಡಿ ನಿಮ್ಮ ಮನೆಯಲ್ಲಿರುವ ಟಿ.ವಿ. ಸ್ಟಿರಿಯೊ, ಡಿ.ಟಿ.ಎಚ್, ಇತ್ಯಾದಿಗಳಿಗೆ ದೂರನಿಯಂತ್ರಕವಾಗಿ ಬಳಸಬಹುದು. ಇದರ ಬ್ಯಾಟರಿ ಶಕ್ತಿಶಾಲಿಯಾಗಿದೆ. ಎರಡು ದಿನ ಬಾಳಿಕೆ ಬರುತ್ತದೆ. ಬ್ಯಾಟರಿ ಅತಿ ವೇಗವಾಗಿ ಚಾರ್ಜ್ ಆಗುತ್ತದೆ. ಕನ್ನಡದ ತೋರುವಿಕೆ ಸರಿಯಾಗಿದೆ. ಎಸ್-ಪೆನ್ನಿನ ಅಂದರೆ ಸ್ಟೈಲಸ್‌ನ ಸಂಪೂರ್ಣ ಬಳಕೆ ಮಾಡುವವರಿಗೆ ಇದು ಸೂಕ್ತ. ಇಲ್ಲವಾದಲ್ಲಿ ತುಂಬ ಹಣ ನೀಡಿ ಪ್ರಯೋಜನವಿಲ್ಲ.

ವಾರದ APP

ಹಿಯರ್ ಮ್ಯಾಪ್
ಗೂಗ್ಲ್ ಮ್ಯಾಪ್ ಎಲ್ಲರಿಗೂ ತಿಳಿದಿರುವಂತಹ ತುಂಬ ಜನಪ್ರಿಯ ಮ್ಯಾಪ್. ಇದನ್ನು ಸಾಮಾನ್ಯವಾಗಿ ಆಂಡ್ರಾಯಿಡ್ ಫೋನ್ ಬಳಸುವ ಎಲ್ಲರೂ ಬಳಸುತ್ತಾರೆ. ಗೂಗ್ಲ್ ಮ್ಯಾಪ್ ಚೆನ್ನಾಗಿಯೇನೋ ಇದೆ. ಆದರೆ ಅದರ ಒಂದು ಪ್ರಮುಖ ತೊಂದರೆ ಎಂದರೆ ಅದು ಅಂತರಜಾಲ ಸಂಪರ್ಕ ಇಲ್ಲದ ಸ್ಥಳಗಳಲ್ಲಿ ಕೆಲಸ ಮಾಡುವುದಿಲ್ಲ. ದೊಡ್ಡ ನಗರಗಳನ್ನು ಬಿಟ್ಟು ಪ್ರವಾಸ ಹೋದಾಗ ಇದರ ಮಿತಿ ತಿಳಿಯುತ್ತದೆ. ಇದನ್ನೇ ನಂಬಿ ಪ್ರವಾಸ ಹೋದಾಗ ಈ ಅನುಭವವಾಗುತ್ತದೆ. ನೋಕಿಯಾದವರ ಹಿಯರ್ ಮ್ಯಾಪ್‌ನಲ್ಲಿ (HERE Maps) ಈ ಮಿತಿ ಇಲ್ಲ. ಗೂಗ್ಲ್ ಮ್ಯಾಪ್ ನಿಮಗೆ ಬೇಕಾದ ಸ್ಥಳದ ಮ್ಯಾಪ್ ಅನ್ನು ಡೌನ್‌ಲೋಡ್‌ ಮಾಡಿಕೊಂಡು ಬಳಸಲು ಅನುವು ಮಾಡಿಕೊಡುತ್ತದೆ. ಆದರೆ ಹಿಯರ್ ಮ್ಯಾಪ್ ಇಡೀ ದೇಶದ ನಕ್ಷೆಯನ್ನೇ ಡೌನ್‌ಲೋಡ್‌ ಮಾಡಿಕೊಂಡು ಅಂತರಜಾಲ ಸಂಪರ್ಕ ಇಲ್ಲದಿದ್ದಾಗಲೂ ಬಳಸಲು ಅನುವು ಮಾಡುತ್ತದೆ. ಇದು ಬೇಕಿದ್ದರೆ ನೀವು here.com ಜಾಲತಾಣಕ್ಕೆ ಭೇಟಿ ನೀಡಿ ಅಲ್ಲಿ ದೊರೆಯುವ .apk ಫೈಲ್ ಅನ್ನು ಡೌನ್‌ಲೋಡ್‌ ಮಾಡಿಕೊಂಡು ಅದನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು. ಇದು ತುಂಬ ಸರಳ ಕೆಲಸ. ಮೊದಲಿಗೆ Settingsನಲ್ಲಿ Security ಎಂಬಲ್ಲಿ Unknown sources ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಇನ್‌ಸ್ಟಾಲ್ ಮಾಡಿಕೊಳ್ಳಬಹುದು.       

ಗ್ಯಾಜೆಟ್ ಸುದ್ದಿ
ಗಂಡಸರಿಗೆ ಹೆರಿಗೆ ನೋವಿನ ಅನುಭವ

ಎಲ್ಲ ಹೆಂಡತಿಯರೂ ಗಂಡಂದಿರಿಗೆ ಆಗಾಗ ದೂರುವುದೇನೆಂದರೆ ‘ನಿಮಗೇನು ಗೊತ್ತು ಹೆರಿಗೆ ನೋವು ಎಂದರೆ. ಒಮ್ಮೆ ಅನುಭವಿಸಿದ್ದರೆ ಹೆಂಗಸರ ಕಷ್ಟ ಗೊತ್ತಾಗುತ್ತಿತ್ತು’ ಎಂದು. ಈಗ ಗಂಡಸರಿಗೆ ಈ ಅನುಭವವನ್ನು ಮಾಡಿಕೊಡುವ ತಂತ್ರಜ್ಞಾನವನ್ನು ಚೀನಾ ದೇಶದಲ್ಲಿ ಸಂಶೋಧಿಸಿದ್ದಾರೆ. ಹೆಂಡತಿ ಗರ್ಭಿಣಿಯಾದಾಗ ಗಂಡಂದಿರಿಗೆ ಅವರ ದೇಹಕ್ಕೆ ಇಲೆಕ್ಟ್ರೋಡ್ ಅಂಟಿಸಿ ಅವರಿಗೆ ಹೆರಿಗೆ ನೋವಿನ ಭಾವನೆ ಮೂಡುವಂತೆ ಮಾಡಲಾಗುತ್ತದೆ. ಇದರಿಂದಾಗಿ ಅವರು ಹೆಂಗಸರ ಬಗ್ಗೆ ಹೆಚ್ಚು ಭಾವನಾತ್ಮಕವಾಗಿ ಅಂಟಿಕೊಳ್ಳಬಹುದು ಎಂಬುದು ವೈದ್ಯರ ಮತ್ತು ಸಂಶೋಧಕರ ಆಶಯ.

ಗ್ಯಾಜೆಟ್ ತರ್ಲೆ
ಪಾಸ್‌ವರ್ಡ್‌ ಮರೆಯುತ್ತೀರಾ?

ನಿಮಗೆ ಪಾಸ್‌ವರ್ಡ್‌ ಮರೆತು ಹೋಗಿ ಹಪಹಪಿಸುವ ಸಮಸ್ಯೆ ಇದೆಯೇ? ಪಾಸ್‌ವರ್ಡ್‌ನನ್ನು ನೆನಪಿಟ್ಟುಕೊಳ್ಳಲು ತೊಂದರೆಯಾಗುತ್ತಿದೆಯೇ? ಹಾಗಿದ್ದರೆ ನಿಮ್ಮ ಪಾಸ್‌ವರ್ಡ್ ಅನ್ನು incorrrect ಎಂದು ಮಾಡಿಟ್ಟುಕೊಳ್ಳಿ. ತಪ್ಪು ಪಾಸ್‌ವರ್ಡ್‌ ನೀಡಿದಾಗೆಲ್ಲಾ ನಿಮಗೆ ‘your password is incorrect’ ಎಂಬ ಸಂದೇಶ ಬರುತ್ತದೆ!

ಗ್ಯಾಜೆಟ್ ಸಲಹೆ
ಚಂದ್ರಶೇಖರ ಪರಸಯ್ಯ ಅವರ ಪ್ರಶ್ನೆ: ಆಸುಸ್ ಝೆನ್‌ಫೋನ್‌ 5 ಬಗ್ಗೆ ತಮ್ಮ ಅಭಿಪ್ರಾಯವೇನು?
ಉ:
ಆಸುಸ್ ಝೆನ್‌ಫೋನ್‌ 5 ಫೋನಿನ ವಿಮರ್ಶೆ ಇದೇ ಅಂಕಣದಲ್ಲಿ ಎರಡೇ ವಾರಗಳ ಹಿಂದೆ ಬಂದಿತ್ತು. ದಯವಿಟ್ಟು ಪ್ರಶ್ನೆ ಕೇಳಲು ಬಯಸುವ ಎಲ್ಲರೂ ಮೊದಲಿಗೆ ಗ್ಯಾಜೆಟ್‌ಲೋಕ ಅಂಕಣದ ಹಿಂದಿನ ಲೇಖನಗಳನ್ನು ಓದಿಕೊಳ್ಳಬೇಕಾಗಿ ವಿನಂತಿ. ಎಲ್ಲ ಹಳೆಯ ಸಂಚಿಕೆಗಳು ಪ್ರಜಾವಾಣಿಯ ಅಂತರಜಾಲ ಆವೃತ್ತಿಯಲ್ಲಿ (prajavani.net)  ಓದಲು ಲಭ್ಯವಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT