ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲ ‘ಭೂಮಿ’ ಜೀರ್ಣೋದ್ಧಾರಕ್ಕೆ ಮುನ್ನ

Last Updated 26 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಡಿಜಿಟಲ್ ತಂತ್ರಜ್ಞಾನಕ್ಕೆ ಇರುವ ಅಸಂಖ್ಯ ಸಾಧ್ಯತೆಗಳು ಅದರ ಸುತ್ತ ಒಂದು ಪ್ರಭಾವಳಿಯೊಂದನ್ನು ಸೃಷ್ಟಿಸಿವೆ. ಈ ಪ್ರಭಾವಳಿಯ ಮೆರುಗು ಸೃಷ್ಟಿಸುವ ಭ್ರಾಮಕ ವಾತಾವರಣದಲ್ಲಿ ಸಣ್ಣ ಯಶಸ್ಸುಗಳು ದೊಡ್ಡ ಸಮಸ್ಯೆಗಳನ್ನು ಮರೆ ಮಾಚಿಬಿಡುತ್ತವೆ. ಇದರ ಇತ್ತೀಚಿನ ಉದಾಹರಣೆ ಭೂದಾಖಲೆಗಳನ್ನು ಕಂಪ್ಯೂಟರೀಕರಿಸಿದ ‘ಭೂಮಿ’ ಯೋಜನೆ.

2001ರಲ್ಲಿ ಕರ್ನಾಟಕದ ಎಲ್ಲಾ ಭೂದಾಖಲೆಗಳನ್ನು ಕಂಪ್ಯೂಟರೀಕರಿಸಿದ ಯಶಸ್ಸಿನ ಗರಿಯನ್ನು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮುಡಿಗೇರಿಸಿಕೊಂಡ ನಂತರ ಈ ಯೋಜನೆಯ ಬಗ್ಗೆ ಗಂಭೀರ ಚರ್ಚೆಗಳು ಆರಂಭವಾದುದು 2014ರಲ್ಲಿ. ಭೂದಾಖಲೆಗಳ ಡಿಜಿಟಲೀಕರಣ ಪೂರ್ವ ಯುಗದಲ್ಲಿ ಕೇಳುತ್ತಿದ್ದ ಅದೇ ಸಮಸ್ಯೆಗಳನ್ನೂ ಈಗಲೂ ಚರ್ಚಿಸಲಾಗುತ್ತಿದೆ. ಪಹಣಿಗಳಲ್ಲಿರುವ ತಪ್ಪುಗಳನ್ನು ತಿದ್ದುವುದಕ್ಕೆ ಈಗ ಮತ್ತೆ ತಹಶೀಲ್ದಾರರಿಗೆ ಅಧಿಕಾರ ಕೊಡಲಾಗುತ್ತಿದೆ. ಪಹಣಿಗಳಲ್ಲಿರುವ ತಪ್ಪುಗಳ ಪ್ರಮಾಣವಾದರೂ ಎಷ್ಟೆಂದು ಯಾರಾದರೂ ಖಚಿತವಾಗಿ ಹೇಳುತ್ತಿದ್ದಾರೆಯೇ? ಇದರ ಅಂದಾಜುಗಳು ಶೇಕಡ 20ರಿಂದ ಆರಂಭಗೊಂಡು ಶೇಕಡ 60ರ ತನಕವೂ ವ್ಯಾಪಿಸಿಕೊಂಡಿವೆ.

ಭೂದಾಖಲೆಗಳ ಕಂಪ್ಯೂಟರೀಕರಣದ ಮೂಲಕ ‘ಭೂಮಿ’ ಸಾಧಿಸಿದ್ದು ಕಡಿಮೆಯದ್ದೇನಲ್ಲ. ಇದೊಂದು ಯಶಸ್ಸು ಎಂಬುದೂ ನಿಜವೇ. ಈ ಯಶಸ್ಸು ಭೂದಾಖಲೆಗಳಿಗೆ ಸಂಬಂಧಿಸಿದ ಸಮಸ್ಯೆಯ ಆಳ ಮತ್ತು ವಿಸ್ತಾರವನ್ನು ತೋರಿಸಿಕೊಟ್ಟಿತ್ತು ಎಂಬ ಅಂಶವನ್ನು ಸರ್ಕಾರ ಹೇಳಲೇ ಇಲ್ಲ. ಆಗೀಗ ಕೆಲವರು ಹೇಳಿದರಾದರೂ ಅದು ಯಾರಿಗೂ ಕೇಳಿಸಲೇ ಇಲ್ಲ. ಈ ಮಧ್ಯೆ ಈ ಯೋಜನೆಗೆ ಒಂದು ಅಂತರರಾಷ್ಟ್ರೀಯ ಪ್ರಶಸ್ತಿಯೂ ಬಂದು ಇಡೀ ಯೋಜನೆ ಕಂಡುಕೊಂಡ ಕಹಿ ಸತ್ಯಗಳನ್ನು ಎಲ್ಲರೂ ಮರೆತರು. ಈ ಅಲ್ಪತೃಪ್ತಿಯ ಪರಿಣಾಮದ ಬಗ್ಗೆ ಹದಿಮೂರು ವರ್ಷಗಳ ನಂತರ ಆಲೋಚಿಸುತ್ತಿದ್ದೇವೆ.

ಸ್ವತಃ ಮುಖ್ಯಮಂತ್ರಿಯೇ ‘ಭೂಮಿ’ಯಲ್ಲಿ ಇರುವುದೆಲ್ಲಾ ಸರಿ ಇಲ್ಲ. ಇದನ್ನು ಸಮರೋಪಾದಿಯಲ್ಲಿ ಸರಿಪಡಿಸುವುದಕ್ಕೆ ತಹಶೀಲ್ದಾರರಿಗೆ ಅಧಿಕಾರ ಕೊಡುತ್ತಿದ್ದೇವೆ ಎಂದು ಘೋಷಿಸಿದ್ದಾರೆ. ಕರ್ನಾಟಕದಲ್ಲಿ ಜಮೀನು ಹೊಂದಿರುವ 67 ಲಕ್ಷ ರೈತರಿಗೆ ಸೇರಿದ ಎರಡು ಕೋಟಿ ಪಹಣಿಗಳು ‘ಭೂಮಿ’ ದತ್ತ ಸಂಚಯದಲ್ಲಿವೆ. ಇವುಗಳಲ್ಲಿರುವ ತಪ್ಪು ಶೇ 20 ಎಂದುಕೊಂಡರೂ ತಿದ್ದ ಬೇಕಾಗಿರುವ ಪಹಣಿಗಳ ಸಂಖ್ಯೆ 40 ಲಕ್ಷ. ಇನ್ನು ಈ ತಪ್ಪುಗಳ ಸ್ವರೂಪ ಯಾವುದು? ಸರ್ಕಾರವೇ ಹೇಳುತ್ತಿರುವಂತೆ ಹೆಸರುಗಳಲ್ಲಿ ತಪ್ಪಾಗಿದೆ.

ಜಮೀನಿನ ವಿಸ್ತೀರ್ಣದಲ್ಲಿ ತಪ್ಪುಗಳಿವೆ. ಮಾಲೀಕತ್ವದ ವಿವರಗಳಲ್ಲಿ ತಪ್ಪುಗಳಾಗಿವೆ. ಈ ಎಲ್ಲಾ ತಪ್ಪುಗಳು ಹೇಗೆ ಸಂಭವಿಸಿದವು ಎಂಬ ಪ್ರಶ್ನೆಯನ್ನು ಈಗ ಕೇಳುವುದರಲ್ಲಿ ಅರ್ಥವಿಲ್ಲ. ಆದರೆ ಇದನ್ನು ಅರಿತು ಸರಿಪಡಿಸುವ ಆಂದೋಲನವೊಂದನ್ನು ಹಮ್ಮಿಕೊಳ್ಳು ವುದಕ್ಕೆ ಹದಿಮೂರು ವರ್ಷಗಳೇಕೆ ಬೇಕಾಯಿತು? ಇನ್ನು ಹತ್ತು ವರ್ಷ ಕಳೆದ ನಂತರ ಇದೇ ಸಮಸ್ಯೆ ಯನ್ನು ಮತ್ತೆ ಮುಂದೊಡ್ಡುವುದಿಲ್ಲ ಎಂಬುದಕ್ಕೆ ಏನು ಖಾತರಿ ಇದೆ ಎಂಬ ಪ್ರಶ್ನೆಗಳಂತೂ ಇವೆ.

‘ಭೂಮಿ’ಯನ್ನು ಕಾರ್ಯರೂಪಕ್ಕೆ ತಂದಾಗ ಸರ್ಕಾರ  ‘ಭೂದಾಖಲೆಗಳು ಇನ್ನು ಮುಂದೆ ಸುರಕ್ಷಿತ. ಪಹಣಿಗಳನ್ನು ತಿದ್ದಿ ಮಾಲೀಕತ್ವದ ಸಮಸ್ಯೆಗಳನ್ನು ಸೃಷ್ಟಿಸುವ ಸಾಧ್ಯತೆಯೇ ಇಲ್ಲವಾಗುತ್ತದೆ. ಭೂಮಿಗೆ ಸಂಬಂಧಿಸಿದ ಪ್ರತಿಯೊಂದು ವ್ಯವಹಾರವೂ ಇದರಲ್ಲಿ ದಾಖಲಾಗುತ್ತಾ ಹೋಗುವುದರಿಂದ ಎಲ್ಲವೂ ಪಾರದರ್ಶಕವಾಗಿರುತ್ತದೆ. ಬಯೋಮೆಟ್ರಿಕ್ಸ್ ತಂತ್ರಜ್ಞಾನ ಬಳಸಿ ಹೊಸ ಮಾಹಿತಿಗಳನ್ನು ಊಡಿಸುವುದರಿಂದ ಯಾವುದೇ ತಪ್ಪುಗಳು ಸಂಭವಿಸಿದರೂ ಉತ್ತರದಾಯಿತ್ವವನ್ನು ನಿಗದಿ ಪಡಿಸುವುದು ಸುಲಭವಾಗುತ್ತದೆ’ ಎಂದು ಹೇಳಿತ್ತು. ಆದರೆ ಕಳೆದ ಹದಿಮೂರು ವರ್ಷಗಳಲ್ಲಿ ನಡೆದ ಸರ್ಕಾರಿ ಭೂಮಿ ಒತ್ತುವರಿ, ಮಾಲೀಕರನ್ನೇ ಬದಲಾಯಿಸಿದ ಪ್ರಕ್ರಿಯೆಗಳು ಭೂದಾಖಲೆಗಳು ಸುರಕ್ಷಿತ ಎಂಬುದನ್ನು ಸುಳ್ಳು ಎಂದು ತಿಳಿಸಿಕೊಟ್ಟವು.

ತಪ್ಪುಗಳಿಗೆ ಉತ್ತರದಾಯಿತ್ವವನ್ನು ನಿಗದಿಪಡಿಸುವ ವಿಷಯದಲ್ಲಿಯೂ ಯಾವ ಯಶಸ್ಸೂ ಸರ್ಕಾರಕ್ಕೆ ದೊರೆಯಲಿಲ್ಲ ಎಂಬುದನ್ನು ವಿ.ಬಾಲಸುಬ್ರಮಣಿಯನ್‌ ಅವರ ನೇತೃತ್ವದ ಕಾರ್ಯಪಡೆಯ ವರದಿಯೇ ಹೇಳುತ್ತಿದೆ. ಹಾಗಿದ್ದರೆ ಭೂಮಿ ಯಶಸ್ವಿಯಾದದ್ದೆಲ್ಲಿ? ಸರ್ಕಾರಿ ರಜೆ ಇಲ್ಲದ ದಿನಗಳಲ್ಲಿ, ವಿದ್ಯುತ್ ಪೂರೈಕೆ ಸರಿಯಾಗಿದ್ದರೆ, ಕಂಪ್ಯೂಟರ್ ಸರಿಯಾಗಿದ್ದರೆ ‘ಭೂಮಿ’ ಕಿಯಾಸ್ಕ್‌ಗೆ ಹೋದ ರೈತನಿಗೆ ತನ್ನ ಪಹಣಿಯ ಪ್ರತಿ ದೊರೆಯುತ್ತದೆ ಎಂಬುದಷ್ಟೇ ‘ಭೂಮಿ’ಯ ಯಶಸ್ಸು.

ಮಾಲೀಕತ್ವದ ಬದಲಾವಣೆಯಂಥ ಸಂದರ್ಭದಲ್ಲಿ ನಡೆಸಬೇಕಾಗುವ ಮ್ಯುಟೇಷನ್ ಪ್ರಕ್ರಿಯೆ ಕಂಪ್ಯೂಟರೀಕರಣಗೊಂಡ ಮೇಲೆ ಹೆಚ್ಚು ಸಂಕೀರ್ಣವಾಗಿದೆ. ರೈತರು ಕೊಡಬೇಕಾದ ಲಂಚದ ಪ್ರಮಾಣವೂ ಹೆಚ್ಚಾಗಿದೆ. ಅಂದರೆ ಅನಂತ ಸಾಧ್ಯತೆಗಳಿದ್ದ ತಂತ್ರಜ್ಞಾನವೊಂದನ್ನು ನಾವು ಹದಿಮೂರು ವರ್ಷಗಳ ಕಾಲ ಬಳಸಿಕೊಂಡದ್ದು ಕೇವಲ ಕಂಪ್ಯೂಟರ್ ಮುದ್ರಿತ ಪಹಣಿ ಪ್ರತಿಗಳನ್ನು ತೆಗೆಯುವುದಕ್ಕಷ್ಟೇ.

ಪಹಣಿಯಲ್ಲಿರುವ ತಪ್ಪುಗಳು ಎಂದರೆ ಕೇವಲ ಅಕ್ಷರ ಮತ್ತು ಅಂಕಿಗಳ ತಪ್ಪುಗಳಷ್ಟೇ ಅಲ್ಲ. ವಾರಸುದಾರಿಕೆಯ ಅನ್ವಯ ಮ್ಯುಟೇಷನ್ ಆಗದ ಪ್ರಕರಣಗಳೂ ಇದರಲ್ಲಿ ಒಳಗೊಳ್ಳುತ್ತವೆ. ಕಂದಾಯ ಇಲಾಖೆಯ ಲೆಕ್ಕಾಚಾರದಂತೆ ಒಟ್ಟು ಪಹಣಿಗಳಲ್ಲಿ ಶೇ 25ರಷ್ಟು ಪೌತಿ ಖಾತೆಗಳಿವೆಯಂತೆ. ಅಂದರೆ ಪಹಣಿಯಲ್ಲಿ ಮಾಲೀಕನೆಂದು ನಮೂದಾಗಿರುವಾತ ಈಗ ಬದುಕಿಯೇ ಇಲ್ಲ. ಮಾಲೀಕನ ಸಾವು ಸಂಭವಿಸಿದಾಗ ಅವನ ಆಸ್ತಿ ವಾರಸುದಾರರ ಹೆಸರಿಗೆ ಬರಬೇಕು.

ಈ ಪ್ರಕ್ರಿಯೆಯನ್ನು ನಡೆಸಲಿಲ್ಲವಾದರೆ ಕಂದಾಯ ಇಲಾಖೆ ಪ್ರತೀ ವರ್ಷ ನಡೆಸುವ ಜಮಾಬಂದಿ ಪ್ರಕ್ರಿಯೆಯೇ ಪೂರ್ಣಗೊಳ್ಳುವುದಿಲ್ಲ. ಹಾಗಿದ್ದರೆ ‘ಭೂಮಿ’ ದತ್ತ ಸಂಚಯ ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಆರಂಭಿಸಿದ ನಂತರದ ಹದಿಮೂರು ವರ್ಷಗಳಲ್ಲಿ ಜಮಾಬಂದಿ ನಡೆಯಲೇ ಇಲ್ಲ ಎಂದುಕೊಳ್ಳಬೇಕಾಗುತ್ತದೆ. ಆದರೆ ಸರ್ಕಾರಿ ದಾಖಲೆಗಳು ಪ್ರತೀ ವರ್ಷ ಎಲ್ಲಾ ತಾಲ್ಲೂಕು ಗಳಲ್ಲಿಯೂ ಜಮಾಬಂದಿ ನಡೆದಿರುವುದಾಗಿ ಹೇಳುತ್ತಿವೆ. ಅಂದರೆ ಈ ತನಕ ಜಮಾಬಂದಿಗಳೆಲ್ಲವೂ ಅಪೂರ್ಣವಲ್ಲವೇ?

ಹದಿಮೂರು ವರ್ಷಗಳ ನಂತರವಾದರೂ ಒಂದು ಸರ್ಕಾರ ಕಂಪ್ಯೂಟರೀಕರಣದ ನಂತರವೂ ಭೂ ದಾಖಲೆಗಳು ಪೂರ್ಣವಾಗಿ ಸರಿಯಾಗಿಲ್ಲ ಎಂಬುದನ್ನು ಹೇಳುವ ಧೈರ್ಯ ಮಾಡಿತು ಎಂಬುದೇ ಸಂತೋಷದ ವಿಚಾರ. ಈ ಕಾರಣಕ್ಕಾಗಿಯಾದರೂ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರನ್ನು ಶ್ಲಾಘಿಸಲೇಬೇಕು. ಆದರೆ ಈಗ ಅವರು ಕೈಗೊಂಡಿರುವ ಪರಿಹಾರ ಕ್ರಮ ಅನೇಕ ಸಮಸ್ಯೆಗಳನ್ನು ಪರಿಹರಿಸುವ ಸಾಧ್ಯತೆಗಳಿರುವಂತೆಯೇ ಹೊಸ ಸಮಸ್ಯೆಗಳನ್ನು ಹುಟ್ಟುಹಾಕುವ ಸಾಧ್ಯತೆಗಳೂ ಇವೆ. ತಪ್ಪು ಮಾಡಿದ ತಹಶೀಲ್ದಾರರಿಗೆ ಜೈಲು ಎಂಬಂಥ ಷರತ್ತುಗಳಿವೆಯಾದರೂ ಈ ತಪ್ಪುಗಳು ಬಯಲಾಗುವುದಕ್ಕೆ ಇನ್ನೂ ಒಂದು ದಶಕವೇ ಬೇಕಾಗಬಹುದೆಂಬ ಧೈರ್ಯವೇ ಅನೇಕರಿಂದ ತಪ್ಪು ಮಾಡಿಸಬಹುದು.

ಕರ್ನಾಟಕ ಭೂ ಕಂದಾಯ ಕಾಯ್ದೆ ಹೇಳುವಂತೆ ತಹಶೀಲ್ದಾರ್ ಮಟ್ಟದಲ್ಲಿ ಅಂತಿಮಗೊಂಡಿರುವ ದಾಖಲೆಯಲ್ಲಿ ತಿದ್ದುಪಡಿ ಮಾಡುವುದಕ್ಕೆ ಅವರಿಗಿಂತ ಮೇಲಿನ ಅಧಿಕಾರಿ ಅರ್ಥಾತ್ ಉಪ ವಿಭಾಗಾಧಿಕಾರಿಯೇ ಬೇಕು. ಅವರು ಪರಿಶೀಲಿಸಿ ತಿದ್ದುಪಡಿ ಬೇಕೇ ಬೇಡವೇ ಎಂದು ನಿರ್ಧರಿಸಿ ಆದೇಶ ನೀಡಬೇಕು. ಇದಕ್ಕೆ ನಿರ್ದಿಷ್ಟ ಪಡಿಸಿದ ವಿಧಾನವೇ ಇದೆ. ಈಗ ತಹಶೀಲ್ದಾರರು ನಡೆಸುವ ‘ಆಂದೋಲನ’ ಮಾದರಿಯ ತಿದ್ದುಪಡಿಗಳು ಇಷ್ಟೇ ಎಚ್ಚರಿಕೆಯಲ್ಲಿ ನಡೆಯುತ್ತವೆ  ಎಂಬುದಕ್ಕೆ ಇರುವ ಏಕೈಕ ಖಾತರಿ ಎಂದರೆ ಸರ್ಕಾರ ಮುಂದಿಡುತ್ತಿರುವ ‘ಜೈಲು ಶಿಕ್ಷೆ’ ಯ ಭಯ ಮಾತ್ರ.

ಈ ಭಯದಿಂದಾಗಿ ಎಲ್ಲವೂ ಸರಿಯಾಗಿಯೇ ನಡೆದರೂ ಭೂದಾಖಲೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಪೂರ್ಣವಾಗಿ ಪರಿಹಾರವಾಗುವುದಿಲ್ಲ. ಈಗಾಗಲೇ ಪ್ರಾಯೋಗಿಕವಾಗಿ ನಡೆಸಿರುವ ಮರು ಮೋಜಣಿಯ ಫಲಿತಾಂಶಗಳು ಹೇಳುತ್ತಿರುವಂತೆ ವಾಸ್ತವದಲ್ಲಿರುವ ಭೂಮಿಯ ಅಳತೆಗೂ ಪಹಣಿಯಲ್ಲಿರುವ ಜಮೀನಿನ ವಿಸ್ತೀರ್ಣಕ್ಕೂ ಅಜಗಜಾಂತರವಿದೆ. ಅಂದರೆ ಮರುಮೋಜಣಿಯ ಜೊತೆಯಲ್ಲಿ ಮತ್ತೊಮ್ಮೆ ಪಹಣಿ ತಿದ್ದುವ ಕ್ರಿಯೆಯೂ ನಡೆಯಬೇಕಾಗಿದೆ.

ಹದಿಮೂರು ವರ್ಷಗಳ ಹಿಂದೆ ದಾಖಲೆಗಳ ಡಿಜಿಟಲೀಕರಣದ ಯಶಸ್ಸಿಗೆ ಸಂಭ್ರಮಿಸಿದಂತೆ ತಪ್ಪುಗಳನ್ನು ತಿದ್ದಿ ಮುಗಿಸಿದ ಮಾತ್ರಕ್ಕೆ ಸಂಭ್ರಮಿಸದೆ ಭೂದಾಖಲೆಗಳ ನಿರ್ವಹಣೆಗೆ ಒಂದು ಸುಸ್ಥಿರ ವ್ಯವಸ್ಥೆಯನ್ನು ರೂಪಿಸುವ ದಿಕ್ಕಿನಲ್ಲಿ ಸರ್ಕಾರ ಯೋಚಿಸಬೇಕು. ಆಗ ಡಿಜಿಟಲ್ ತಂತ್ರಜ್ಞಾನದ ಎಲ್ಲಾ ಸಾಧ್ಯತೆಗಳನ್ನೂ ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ ಇನ್ನೊಂದು ದಶಕ ಕಳೆದ ನಂತರ ಮತ್ತೊಂದು ತಪ್ಪೊಪ್ಪಿಗೆ ಕ್ರಿಯೆಯ ಅಗತ್ಯವೂ ಬರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT