ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಯೋಮಿ ರೆಡ್‌ಮಿ 2 ಎರಡು 4ಜಿ ಸಿಮ್‌ನ ಸಿಂಪಲ್ ಫೋನ್

Last Updated 25 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಶಿಯೋಮಿ ಕಂಪೆನಿ ಇತ್ತೀಚೆಗೆ ತುಂಬ ಸುದ್ದಿ ಮಾಡುತ್ತಿದೆ ಎಂದು ಒಂದು ತಿಂಗಳ ಹಿಂದೆಯಷ್ಟೇ ಇದೇ ಅಂಕಣದಲ್ಲಿ ಬರೆಯಲಾಗಿತ್ತು. ತನ್ನ ಉತ್ಪನ್ನಗಳನ್ನು ನೇರವಾಗಿ ಅಂತರ್ಜಾಲದ ಮೂಲಕ ತನ್ನ ಗ್ರಾಹಕರಿಗೆ ತಲುಪಿಸುವ ಮೂಲಕ ಕಡಿಮೆ ಬೆಲೆಗೆ ಉತ್ತಮ ಉತ್ಪನ್ನಗಳನ್ನು ನೀಡಲು ಶಿಯೋಮಿ ಕಂಪೆನಿಗೆ ಸಾಧ್ಯವಾಗಿದೆ. ಶಿಯೋಮಿ ಕಂಪೆನಿಯ ಅಂತರ್ಜಾಲದ ಮೂಲಕ ಮಾತ್ರ ಮಾರಾಟ ಮಾಡುತ್ತಿರುವ ತುಂಬ ಜನಪ್ರಿಯ ಫೋನ್‌ಗಳಾದ ಎಂಐ3, ರೆಡ್‌ಮಿ ನೋಟ್, ರೆಡ್‌ಮಿ ನೋಟ್ 4ಜಿ ಮತ್ತು ಎಂಐ4 ಫೋನ್‌ಗಳ ವಿಮರ್ಶೆ ಇದೇ ಅಂಕಣದಲ್ಲಿ ಪ್ರಕಟವಾಗಿತ್ತು. ಈ ವಾರ ನಮ್ಮ ವಿಮರ್ಶಾ ನೋಟ ಶಿಯೋಮಿ ರೆಡ್‌ಮಿ 2 (Xiaomi Redmi 2) ಕಡೆಗೆ.

ಗುಣವೈಶಿಷ್ಟ್ಯಗಳು
1.2 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಪ್ರೊಸೆಸರ್ (Qualcomm Snapdragon 410), 64 ಬಿಟ್ ಪ್ರೊಸೆಸರ್, ಗ್ರಾಫಿಕ್ಸ್‌ಗೆಂದೇ ಪ್ರತ್ಯೇಕ ಆಡ್ರೆನೋ 306 ಪ್ರೊಸೆಸರ್, 1 + 8 ಗಿಗಾಬೈಟ್ ಮೆಮೊರಿ, 32 ಗಿಗಾಬೈಟ್ ತನಕ ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ, ಯುಎಸ್‌ಬಿ ಆನ್-ದ-ಗೋ (USB OTG) ಇದೆ, ಎರಡು 4ಜಿ ಮೈಕ್ರೋಸಿಮ್ ಕಾರ್ಡ್, f/2.2 ಲೆನ್ಸ್ ಉಳ್ಳ 8 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಮತ್ತು 2 ಮೆಗಾಪಿಕ್ಸೆಲ್‌ನ ಇನ್ನೊಂದು ಕ್ಯಾಮೆರಾ, ಕ್ಯಾಮೆರಾಕ್ಕೆ ಎಲ್ಇಡಿ ಫ್ಲಾಶ್, ಪೂರ್ತಿ ಹೈಡೆಫಿನಿಶನ್ ವಿಡಿಯೊ ಚಿತ್ರೀಕರಣ,
1280 x 720 ಪಿಕ್ಸೆಲ್ ರೆಸೊಲೂಶನ್‌ನ 4.7 ಇಂಚು ಗಾತ್ರದ ಐಪಿಎಸ್ ಪರದೆ, 134 x 67.2 x 9.4 ಮಿ.ಮೀ. ಗಾತ್ರ, 2200mAh ಶಕ್ತಿಯ ಬ್ಯಾಟರಿ, ವೈಫೈ, ಬ್ಲೂಟೂತ್, ಜಿಪಿಎಸ್, ಆಂಡ್ರಾಯಿಡ್ 4.4.4 + ಶಿಯೋಮಿಯವರದೇ ಆದ ಎಂಐಯುಐ 6 (MIUI 6), ಇತ್ಯಾದಿ. ಬೆಲೆ ₹ 6,999 (flipkart.com).  

ರಚನೆ ಮತ್ತು ವಿನ್ಯಾಸ ಪರವಾಗಿಲ್ಲ. ಹಿಂಭಾಗದ ಕವಚ ತೆಗೆಯಬಹುದು ಮತ್ತು ಬ್ಯಾಟರಿ ಬದಲಿಸ ಬಹುದು. ಹಿಂಭಾಗದ ಕವಚ ತೆಗೆದಾಗ ಸಿಮ್ ಕಾರ್ಡ್ ಮತ್ತು ಮೆಮೊರಿ ಕಾರ್ಡ್ ಹಾಕುವ ಜಾಗಗಳು ಕಂಡುಬರುತ್ತವೆ. ಬ್ಯಾಟರಿ ತೆಗೆಯದೆ ಇವುಗಳನ್ನು ಹಾಕುವಂತಿಲ್ಲ. ಹಿಂಭಾಗದ ಕವಚ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ಕಿನದ್ದಾಗಿದೆ. ಎಂಐ4 ಫೋನಿನಂತೆ ಅತ್ಯುತ್ತಮ ಗುಣಮಟ್ಟದ ಲೋಹದ ದೇಹ (ಫ್ರೇಂ) ಇದಕ್ಕಿಲ್ಲ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಸ್ವಿಚ್‌ಗಳಿವೆ.

ಮೇಲ್ಭಾಗದಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಮತ್ತು ಕೆಳಭಾಗದಲ್ಲಿ ಮೈಕ್ರೊಯುಎಸ್‌ಬಿ ಕಿಂಡಿಗಳಿವೆ. 4.7 ಇಂಚು ಗಾತ್ರದ್ದಾಗಿರುವುದರಿಂದ ಒಂದು ಕೈಯಲ್ಲಿ ಹಿಡಿದು ಬಳಸಬಹುದು. ಆದರೂ ಹಿಂಭಾಗದ ಕವಚ ಮತ್ತು ಇಡಿಯ ದೇಹ ನಯವಾಗಿರುವುದರಿಂದ ಕೈಯಿಂದ ಜಾರಿ ಬೀಳುವ ಭಯವಾಗುತ್ತದೆ.

ಫೋನ್ ಕೆಲಸ ಮಾಡುವ ವೇಗ ತೃಪ್ತಿದಾಯಕ ವಾಗಿದೆ. ನಾಲ್ಕು ಹೃದಯಗಳ ಪ್ರೊಸೆಸರ್ ಮತ್ತು ಜೊತೆಗೆ ಗ್ರಾಫಿಕ್ಸ್‌ಗೆಂದೇ ಪ್ರತ್ಯೇಕ ಪ್ರೊಸೆಸರ್‌ಗಳು ಇರುವುದು ಇದಕ್ಕೆ ಕಾರಣ.

ಹಲವು ಆಟಗಳನ್ನು ಈ ಫೋನಿನಲ್ಲಿ ಯಾವುದೇ ಅಡೆತಡೆಯಿಲ್ಲದೆ ಆಡಬಹುದು. ಆದರೂ ಅತಿ ಶಕ್ತಿ ಯನ್ನು ಬೇಡುವ ಮೇಲ್ದರ್ಜೆಯ ಮೂರು ಆಯಾಮಗಳ ಆಟಗಳನ್ನು ಆಡುವ ಅನುಭವ ಅಷ್ಟೇನೂ ತೃಪ್ತಿದಾಯಕ ವಾಗಬೇಕಾಗಿಲ್ಲ. ಅಸ್‌ಫಾಲ್ಟ್ ಆಟವನ್ನು ಆಡಲು ಹೊರಟಾಗ, ಪ್ರಾರಂಭದಲ್ಲಿ ಸ್ವಲ್ಪ ನಿಧಾನವಾಗಿ ಪ್ರಾರಂಭವಾಯಿತು. ಸುಮಾರು 15-20 ನಿಮಿಷ ಆಡಿದ ನಂತರ ಫೋನ್ ತುಂಬ ಬಿಸಿಯಾಯಿತು. ಪ್ರಾಥಮಿಕ ಮೆಮೊರಿ ಕೇವಲ 1 ಗಿಗಾಬೈಟ್ ಇರುವುದು ಇದಕ್ಕೆ ಕಾರಣ. ಹೈಡೆಫಿನಿಶನ್ ವಿಡಿಯೊ ವೀಕ್ಷಣೆಯ ಅನುಭವ ತೃಪ್ತಿದಾಯಕವಾಗಿದೆ. ಆದರೆ ಅಲ್ಟ್ರಾಹೈಡೆಫಿನಿಶನ್ (4k) ವಿಡಿಯೊ ವೀಕ್ಷಣೆಯ ಅನುಭವ ಮಾತ್ರ ತೃಪ್ತಿದಾಯಕ ವಾಗಿಲ್ಲ. ಸ್ವಲ್ಪ ತಡೆ ತಡೆದು ಪ್ಲೇ ಆಗುತ್ತದೆ (jerky).

ಈ ಫೋನಿನಲ್ಲಿರು ವುದು 8 ಮೆಗಾಪಿಕ್ಸೆಲ್‌ನ ಕ್ಯಾಮೆರಾ. ಜೊತೆಗೆ ಫ್ಲಾಶ್ ಹಾಗೂ f/2.2 ಲೆನ್ಸ್ ಇವೆ. ಇಷ್ಟೆಲ್ಲ ಇದ್ದರೂ ಕ್ಯಾಮೆರಾದ ಗುಣಮಟ್ಟ ಮಾತ್ರ ಅಷ್ಟಕ್ಕಷ್ಟೆ. ಹಾಗೆಂದು ಹೇಳಿ ತುಂಬ ಕಳಪೆಯಾಗೇನೂ ಇಲ್ಲ. ತುಂಬ ಮೆಗಾಪಿಕ್ಸೆಲ್ ಇದ್ದ ಮಾತ್ರಕ್ಕೆ ಕ್ಯಾಮೆರಾ ಉತ್ತಮವಾಗಿರಬೇಕಾಗಿಲ್ಲ ಎಂದು ಇದೇ ಅಂಕಣದಲ್ಲಿ ಹಲವು ಸಲ ಬರೆದಾಗಿದೆ. ಎದುರುಗಡೆಯ ಸ್ವಂತೀ ಕ್ಯಾಮೆರಾ ಮಾತ್ರ ಕೇವಲ ಎರಡು ಮೆಗಾಪಿಕ್ಸೆಲ್‌ನದು. ಉತ್ತಮ ಕ್ಯಾಮೆರಾ ಫೋನ್ ನಿಮಗೆ ಬೇಕಾಗಿರುವುದಾದರೆ ಈ ಫೋನ್ ನಿಮಗಲ್ಲ.

ಈ ಫೋನಿನ ಆಡಿಯೊ ಇಂಜಿನ್ ಚೆನ್ನಾಗಿದೆ. ಬೇರೆ ಬೇರೆಯ ಇಯರ್‌ಫೋನ್ ಜೋಡಿಸಿದರೆ ಅದಕ್ಕೆ ಸರಿಹೊಂದುವ ಬೇರೆ ಬೇರೆ ಆಯ್ಕೆಗಳು ಇದರಲ್ಲಿವೆ. ಶಿಯೋಮಿ ಕಂಪೆನಿಯವರದೇ ಇಯರ್‌ಫೋನ್ ಕೂಡ ಲಭ್ಯವಿವೆ. ಫೋನ್ ಜೊತೆ ಮಾತ್ರ ಯಾವುದೇ ಇಯರ್‌ಫೋನ್ ನೀಡಿಲ್ಲ. ನಿಮ್ಮಲ್ಲಿ ಉತ್ತಮ ಇಯರ್‌ಫೋನ್ ಇದ್ದಲ್ಲಿ ಅದನ್ನು ಜೋಡಿಸಿ ಉತ್ತಮ ಸಂಗೀತ ಆಲಿಸಬಹುದು.

ಕನ್ನಡ ಪಠ್ಯದ ತೋರುವಿಕೆ (ರೆಂಡರಿಂಗ್) ಸರಿಯಾಗಿದೆ. ಯಾವುದಾದರೂ ಕೀಲಿಮಣೆ ಹಾಕಿಕೊಂಡರೆ (ಉದಾ - JustKannada) ಕನ್ನಡವನ್ನು ಎಲ್ಲ ಕಡೆ ಬಳಸಬಹುದು.

ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ಮೋಸವಿಲ್ಲ ಎನ್ನಬಹುದಾದ ಫೋನ್. ಈ ಕಾರಣಗಳಿಗೆ ನೀವು ಇದನ್ನು ಕೊಳ್ಳಬಹುದು - ಎರಡು 4ಜಿ ಸಿಮ್, ಹೆಚ್ಚಿಗೆ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ ಹಾಗೂ ಬ್ಯಾಟರಿ ಬದಲಿಸಬಹುದು. ಪ್ರಾಥಮಿಕ ಮೆಮೊರಿ ಮಾತ್ರ 1 ಗಿಗಾಬೈಟ್. ಇದು ಸ್ವಲ್ಪ ಕಡಿಮೆಯಾಯಿತು. 2 ಗಿಗಾಬೈಟ್ ಇದ್ದರೆ ಚೆನ್ನಾಗಿತ್ತು.

ವಾರದ ಆಪ್

ಸಂಗೀತದಲ್ಲಿ ಆಸಕ್ತಿ ಇರುವವರಿಗೆಲ್ಲ ತಬಲ ಚಿರಪರಿಚಿತ. ನಿಮಗೆ ತಬಲ ಬಾರಿಸಲು ಆಸಕ್ತಿ ಇದೆಯೇ? ಬಾರಿಸಲು ತಿಳಿದಿದೆಯೇ? ಹಾಗಿದ್ದಲ್ಲಿ ನಿಮ್ಮ ಆಂಡ್ರಾಯಿಡ್ ಫೋನಿಗೆ ತಬಲ (Tabla) ಕಿರುತಂತ್ರಾಂಶ (ಆಪ್) ಹಾಕಿಕೊಳ್ಳಬಹುದು. ಎಡ ಮತ್ತು ಬಲ ಕೈ ಬಳಸಿ ತಬಲ ಬಾರಿಸಬಹುದು. ಅಂದರೆ ಇದು ಫೋನಿನಲ್ಲಿರುವ ಬಹುಸ್ಪರ್ಶ (multitouch) ಸೌಲಭ್ಯವನ್ನು ಉಪಯೋಗಿಸಿಕೊಂಡಿದೆ. ನಿಜವಾದ ತಬಲ ಬಾರಿಸಿದ ಮಾದರಿಯಲ್ಲೇ ಎಡ ಮತ್ತು ಬಲ ಕೈ ಬಳಸಿ ಬಾರಿಸಬಹುದು. ಜೊತೆಗೆ ತಂಬೂರಿಯೂ ಇದೆ. ನೀವು ಬಾರಿಸುತ್ತಿರುವುದನ್ನು ರೆಕಾರ್ಡ್ ಮಾಡಿಟ್ಟುಕೊಳ್ಳಬಹುದು. ಇದರಲ್ಲಿರುವ ತಬಲಾದ ಧ್ವನಿ ನಿಜಕ್ಕೂ ಉತ್ತಮವಾಗಿದೆ. ನಿಮ್ಮ ಫೋನಿನ ಆಡಿಯೊ ಎಂಜಿನ್ ಚೆನ್ನಾಗಿದ್ದಲ್ಲಿ ಉತ್ತಮ ಇಯರ್‌ಫೋನ್ ಜೋಡಿಸಿ ಅಥವಾ ಉತ್ತಮ ಆಂಪ್ಲಿಫೈಯರ್‌ಗೆ ಜೋಡಿಸಿ ಆಲಿಸಿದಾಗ ನಿಜವಾದ ತಬಲದ ಧ್ವನಿಯಂತೆಯೇ ಭಾಸವಾಗುತ್ತದೆ.

ಗ್ಯಾಜೆಟ್ ಸುದ್ದಿ
ಹಳೆ ನಮೂನೆಯ ಹೊಸ ಸ್ಮಾರ್ಟ್‌ವಾಚ್

ಸ್ಮಾರ್ಟ್‌ಫೋನ್‌ಗಳಂತೆ ಸ್ಮಾರ್ಟ್‌ವಾಚ್‌ಗಳೂ ಮಾರುಕಟ್ಟೆಯನ್ನು ತುಂಬಿವೆ. ಹಲವಾರು ಕಂಪೆನಿಯ ಹಲವಾರು ಮಾದರಿಗಳು ಈಗ ಲಭ್ಯವಿವೆ. ಸ್ಮಾರ್ಟ್‌ವಾಚ್‌ಗಳು ಬಹುಮಟ್ಟಿಗೆ ಸ್ಮಾರ್ಟ್‌ಫೋನಿನ ತಮ್ಮನಂತೆ ಕೆಲಸ ಮಾಡುತ್ತವೆ. ಬಹುತೇಕ ಸ್ಮಾರ್ಟ್‌ವಾಚ್‌ಗಳು ನೋಡಲು ಮಾಮೂಲಿ ಕೈಗಡಿಯಾರದಂತೆ ಕಾಣಿಸುತ್ತವೆ. ಇಂತಹ ವಿನ್ಯಾಸಗಳನ್ನು ನೋಡಿ ಬೇಸರವಾಗಿದ್ದರೆ ಈಗ ತುಂಬ ಹಳೆಯ ವಿನ್ಯಾಸದ ಆದರೆ ಹೊಚ್ಚ ಹೊಸ ಸ್ಮಾರ್ಟ್‌ವಾಚ್‌ ಬಂದಿದೆ. ಇದಕ್ಕೆ ಬೆಲ್ಟ್ ಅಥವಾ ಚೈನ್ ಇಲ್ಲ. ಇದನ್ನು ಕಿಸೆಯೊಳಗೆ ಇಟ್ಟುಕೊಳ್ಳಬಹುದು. ಇದು ಬಿಲ್ಲೆಯ ರೀತಿಯಲ್ಲಿದೆ. ಇದರ ಒಂದು ಭಾಗದಲ್ಲಿ ಮೈಕ್ರೊಯುಎಸ್‌ಬಿ ಕಿಂಡಿ ಇದೆ. ಸ್ಮಾರ್ಟ್‌ವಾಚಿನ ಎಲ್ಲ ಕೆಲಸಗಳನ್ನು ಇದು ಮಾಡುತ್ತದೆ.

ಗ್ಯಾಜೆಟ್ ಸಲಹೆ
ಪ್ರಶ್ನೆ:
ನುಡಿ ತ೦ತ್ರಾ಼೦ಶದ ಸಹಾಯದಿ೦ದ ಮೈಕ್ರೊಸಾಫ್ಟ್‌ ವರ್ಡ್‌ನಲ್ಲಿ ಟೈಪ್  ಮಾಡಿದ ಅಕ್ಷರಗಳು ಆ೦ಡ್ರಾಯಿಡ್ ಮೊಬೈಲ್‌ನಲ್ಲಿ ಕಾಣಿಸಲು ಏನು ಮಾಡಬೇಕು?

ಉ: ನುಡಿ ಫಾಂಟ್‌ನಲ್ಲಿರುವ ಪಠ್ಯವನ್ನು ಯುನಿಕೋಡ್‌ಗೆ ಬದಲಾಯಿಸಬೇಕು. ಈ ಬಗ್ಗೆ ಗ್ಯಾಜೆಟ್‌ಲೋಕದಲ್ಲಿ ವಿವರಿಸಲಾಗಿತ್ತು. ಆ ಸಂಚಿಕೆಯನ್ನು bitly.com/nudi2uni ಜಾಲತಾಣದಲ್ಲಿ ಓದಬಹುದು.

ಗ್ಯಾಜೆಟ್ ತರ್ಲೆ 
ವಾಟ್ಸ್ಆಪ್‌ನಲ್ಲಿ ನಿಮ್ಮ ಸ್ನೇಹಿತರು ಕೊನೆಯ ಬಾರಿಗೆ ಕಂಡುಬಂದುದು ಯಾವಾಗ ಎಂಬುದನ್ನು Last seen ಎಂದು ತೋರಿಸುತ್ತದೆ. ಇದನ್ನೇ ಕನ್ನಡದಲ್ಲಿ ಯಾವ ರೀತಿ ತೋರಿಸಬಹುದು?‘ಅಂತಿಮ ದರ್ಶನ’ ಎಂದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT