ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರದ್ಧೆ ಇಲ್ಲದೇ ಕೃಪೆ ಇಲ್ಲ

Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಪಾಂಡುರಂಗ ಸದಾಶಿವ ಸಾನೇ (1899-1950) ಅವರನ್ನು ಪ್ರಪಂಚ ಗುರುತಿಸುವುದು ‘ಸಾನೇ ಗುರೂಜಿ’ ಎಂತಲೇ. ಮಹಾರಾಷ್ಟ್ರದಲ್ಲಿ ಜನಿಸಿದ ಅವರು ಕವಿಯಾಗಿ, ಕಥೆಗಾರರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಪ್ರಸಿದ್ಧ ಗಾಂಧಿವಾದಿಗಳಾಗಿ, ವಿನೋಬಾ ಭಾವೆಯವರ ನಿಕಟವರ್ತಿಗಳಾಗಿ ತಮ್ಮ ಸಾತ್ವಿಕ ಬದುಕಿನಿಂದ ಜನರಿಗೆ ಆದರ್ಶ­ವಾಗಿ ಬಾಳಿದವರು. ಅವರು ಮಕ್ಕಳಿ­ಗಾಗಿ ಹೇಳಿದ ಕಥೆಗಳು ತುಂಬ ಜನಪ್ರಿಯವಾದವು. ತುಂಬ ಸರಳವಾದ ಕಥೆಗಳಲ್ಲಿ ಒಂದು ಹೀಗಿದೆ.

ಗೋಪಾಲ ಪುಟ್ಟ ಹುಡುಗ. ಬಾಲ್ಯ­ದಲ್ಲೇ ತಂದೆಯನ್ನು ಕಳೆದುಕೊಂಡ ಬಡಹುಡುಗ. ಶಾಲೆಗೆ ಹೋಗಲು ಅವನಿಗೆ ತುಂಬ ಹೆದರಿಕೆ. ಯಾಕೆಂದರೆ ಮಾರ್ಗದಲ್ಲಿ ಒಂದು ಕಾಡುಪ್ರದೇಶ­ವನ್ನು ದಾಟಿ ಹೋಗಬೇಕು. ದೊಡ್ಡ ಹುಡುಗರು ಓಡಿ ದಾಟುತ್ತಿದ್ದರು. ಗೋಪಾಲ ಹಿಂದೆ ಉಳಿದು ಏಕಾಂಗಿ­ಯಾಗಿ ಬಿಡುತ್ತಿದ್ದ. ತನ್ನ ಭಯವನ್ನು ತಾಯಿಯೊಂದಿಗೆ ಹೇಳಿಕೊಂಡ. ತಾಯಿ ಹೇಳಿದಳು, ‘ಭಯ ಬೇಡ ಮಗೂ. ಅಕಸ್ಮಾತ್ ನೀನು ಒಬ್ಬಂಟಿಯಾದರೆ, ಭಯವಾದರೆ ಕೃಷ್ಣಾ, ಕೃಷ್ಣಾ ಎಂದು ಕೂಗು. ಅವನು ನಿನ್ನ ಜೊತೆಗೇ ನಡೆದು ಬರುತ್ತಾನೆ, ಚಿಂತಿಸಬೇಡ’. ಮಗು ಗೋಪಾಲ ತುಂಬ ಶ್ರದ್ಧೆಯಿಂದ ಈ ಮಾತನ್ನು ನಂಬಿಕೊಂಡ.

ಮರುದಿನ ಶಾಲೆಯಿಂದ ಬರುವಾಗ ಮೋಡ ಕವಿದು ಕತ್ತಲೆಯಾಯಿತು. ಗೋಪಾಲ ಒಬ್ಬನೇ ಆದ. ಗಾಬರಿಯಿಂದ ಕೃಷ್ಣಾ, ಕೃಷ್ಣಾ ಎಂದು ಕರೆದ. ತಕ್ಷಣ ಮರದ ಮರೆಯಿಂದ ಪುಟ್ಟ ಕೃಷ್ಣ ಹೊರಬಂದ. ಏನು ಚೆಂದ ಅವನ ರೂಪ! ತಲೆಯ ಮೇಲಿನ ನವಿಲುಗರಿಯ ಕಣ್ಣಿಗಿಂತ ಅವನ ಕಣ್ಣೇ ಸುಂದರ. ಕೈಯಲ್ಲಿ ಕೊಳಲು, ಕಾಲಲ್ಲಿ ಗೆಜ್ಜೆ. ನಗುನಗುತ್ತ ಬಂದು ಗೋಪಾಲನ ಜೊತೆಗೂಡಿದ. ದಿನಾಲು ಗೋಪಾಲನಿಗೆ ಕೃಷ್ಣನ ಜೊತೆ ದೊರೆಯುತ್ತಿತ್ತು. ಈ ಮಾತನ್ನು ಗುರು­ಗಳಿಗೆ ಹೇಳಿದರೆ ಅವರು ನಕ್ಕುಬಿಟ್ಟರು. ಕೃಷ್ಣ ಹೀಗೆಲ್ಲ ಬರುತ್ತಾನೆಯೇ? ಆದರೆ ಮಗನ ಮಾತನ್ನು ತಾಯಿ ನಂಬಿದಳು, ದೇವರ ಮುಂದೆ ತುಪ್ಪದ ದೀಪ ಹಚ್ಚಿ ವಂದಿಸಿದಳು.

ಒಂದು ದಿನ ಗೋಪಾಲ ತಾಯಿಗೆ ಕೇಳಿದ, ‘ಅಮ್ಮಾ ನಾಳೆ ನಮ್ಮ ಗುರುಗಳ ಮಗನ ಉಪನಯನವಿದೆ. ಎಲ್ಲ ವಿದ್ಯಾರ್ಥಿಗಳೂ ಏನೇನೋ ಕಾಣಿಕೆ­ಗಳನ್ನು ಕೊಡುತ್ತಿದ್ದಾರೆ, ನಾನೇನು ಕೊಡಲಿ?’ ತಾಯಿ ಬಿಸುಸುಯ್ದು ಹೇಳಿದಳು, ‘ನಾನೇನು ಕೊಡಲಿ ಮಗೂ, ನಾವು ಕಡುಬಡವರು. ನಾಳೆ ಶಾಲೆಗೆ ಹೋಗುವಾಗ ಕೃಷ್ಣನನ್ನೇ ಕೇಳು. ಅವನೇ ಏನಾದರೂ ಕೊಟ್ಟರೆ ತೆಗೆದುಕೊಂಡು ಹೋಗು. ಇಲ್ಲದಿದ್ದರೆ ನಮಸ್ಕಾರ ಮಾಡಿ ಬಾ’. ಗೋಪಾಲ ಮರುದಿನ ಕೃಷ್ಣನನ್ನು ಈ ಕುರಿತು ಕೇಳಿದ. ಕೃಷ್ಣ ನಕ್ಕು ಹೇಳಿದ, ‘ನನ್ನ ಕಡೆಗೆ ಏನಿರುತ್ತದಪ್ಪ? ನಾನು ದನ ಕಾಯುವವನು. ಇರು, ನಿನಗೊಂದು ಮಡಿಕೆ ಮೊಸರು ಕೊಡುತ್ತೇನೆ’

ಗೋಪಾಲ ಮೊಸರು ಗಡಿಗೆಯನ್ನೇ ಗುರು­ಗಳಿಗೆ ಕಾಣಿಕೆಯಾಗಿ ನೀಡಿದ. ಗುರುಗಳು ಮಡಕೆಯಲ್ಲಿಯ ಮೊಸ­ರನ್ನು ಬೇರೆ ಪಾತ್ರೆಗೆ ತೆಗೆದರೆ ಮತ್ತೆ ಮಡಕೆ ಭರ್ತಿ! ಎಷ್ಟು ಬಾರಿ ತೆಗೆದರೂ ಅದು ಅಕ್ಷಯಪಾತ್ರೆಯೇ ಆಯಿತು. ಆ ಮೊಸರಿನ ರುಚಿಯಂತೂ ಅತ್ಯದ್ಭುತ­ವಾಗಿತ್ತು. ಇಂಥ ಮೊಸರನ್ನು ತಾವೆಂದೂ ಕಂಡಿರಲಿಲ್ಲವೆಂದು ಜನ ಕೊಂಡಾಡಿದರು. ಈ ಮೊಸರು ಎಲ್ಲಿಂದ ತಂದೆ ಎಂದು ಕೇಳಿದಾಗ ಅದನ್ನು ಕೃಷ್ಣ ಕೊಟ್ಟ ಎಂದು ಗೋಪಾಲ ಹೇಳಿದ. ನನಗೂ ಕೃಷ್ಣನನ್ನು ತೋರಿಸು ಎಂದು ಗುರುಗಳು ದಂಬಾಲು ಬಿದ್ದು ಅವನೊಂದಿಗೇ ಹೊರಟರು. ಕಾಡಿನ ಮಧ್ಯಕ್ಕೆ ಬಂದಾಗ ಗೋಪಾಲ, ‘ಕೃಷ್ಣಾ, ಕೃಷ್ಣಾ’ ಎಂದು ಎಷ್ಟೋ ಬಾರಿ ಕರೆದ. ಆದರೆ ಇಂದು ಕೃಷ್ಣ ಬರಲೇ ಇಲ್ಲ. ಗೋಪಾಲ ಕರೆದು ಕರೆದು ಸೋತು­ಹೋದ. ಇದೆಲ್ಲ ಕಟ್ಟುಕಥೆ ಎಂದು ಗುರುಗಳು ಮನೆಗೆ ಹೊರಡಲು ಸಿದ್ಧರಾದಾಗ ಒಂದು ಆಕಾಶವಾಣಿ ಕೇಳಿಸಿತು. ಅದು ಕೃಷ್ಣನ ಧ್ವನಿ, ‘ಗೋಪಾಲ, ನಾನು ನಿನ್ನ ಗುರುಗಳಿಗೆ ಕಾಣಿಸಿಕೊಳ್ಳಲಾರೆ, ನಾನು ನಿನಗೆ ದಿನವೂ ಸಿಗುತ್ತಿದ್ದದ್ದು ನಿನ್ನಲ್ಲಿಯ ಮುಗ್ಧತೆಗಾಗಿ, ಶ್ರದ್ಧೆಗಾಗಿ ಮತ್ತು ನಿನ್ನ ತಾಯಿಯ ಭಕ್ತಿಗಾಗಿ’. ಈ ಮಾತು ಕೇಳಿ ಗುರುಗಳು ತಲೆ ತಗ್ಗಿಸಿದರು.

‘ಹೌದು, ನನಗೆ ಕೃಷ್ಣ ಹೇಗೆ ದೊರೆತಾನು? ನಾನು ಭಕ್ತಿಯಿಂದ ಬಂದವನಲ್ಲ, ಗೋಪಾಲ­ನನ್ನು ಪರೀಕ್ಷೆ ಮಾಡಲು ಬಂದವನು. ಭಗವಂತ ಪರೀಕ್ಷೆಗೆ ಸಿಗುವವನಲ್ಲ’. ಇದೊಂದು ಸುಂದರವಾದ ಮಕ್ಕಳ ಕಥೆ. ಅದರಲ್ಲೊಂದು ಸುಂದರ ಸಂದೇಶ ದೊಡ್ಡವರಿಗೂ ಇದೆ.

ಭಗವಂತ ಸಾಕ್ಷಾತ್ತಾಗಿ ಬರದಿರಬಹುದು. ಆದರೆ ಅವನ ಕೃಪೆ, ಕರುಣೆ ದೊರಕುವುದು ಶ್ರದ್ಧೆ ಇದ್ದವರಿಗೆ ಮಾತ್ರ. ಅದು ಭಗವಂತನಲ್ಲಿ ಮಾತ್ರ ಶ್ರದ್ಧೆಯಲ್ಲ, ಅದು ನಾವು ಮಾಡುವ ಕೆಲಸದಲ್ಲಿ­ಯೂ ಇರಬಹುದು. ಶ್ರದ್ಧೆ ಇಲ್ಲದ ಕಾರ್ಯ ಯಾವಾಗಲೂ ಅಸಫಲ. ಅದು ಜ್ಞಾನವನ್ನೂ ಕೊಡಲಾರದು. ಅದಕ್ಕೇ ‘ಶ್ರದ್ಧಾವಾನ್ ಲಭತೇ ಜ್ಞಾನಂ’ ಎಂದು ಹೇಳಿದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT