ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರದ್ಧೆ ಸನ್ಯಾಸದ ತಳಹದಿ

Last Updated 21 ನವೆಂಬರ್ 2013, 19:30 IST
ಅಕ್ಷರ ಗಾತ್ರ

ತರುಣನೊಬ್ಬನಿಗೆ ಸನ್ಯಾಸ ತೆಗೆದು­ಕೊಳ್ಳುವ ಮನಸ್ಸಾಯಿತು. ಆತ ಯಾವುಯಾವುದೋ ಆಶ್ರಮಗಳಿಗೆ ಹೋದಾಗ ಅಲ್ಲಿ ಜನ, ದೊಡ್ಡದೊಡ್ಡ ಜನ ಬಂದು ಸನ್ಯಾಸಿಗಳಿಗೆ ನಮಸ್ಕಾರ ಮಾಡುವುದನ್ನು ಕಂಡಿದ್ದ. ಜೀವನದಲ್ಲಿ ಅಷ್ಟು ದೊಡ್ಡ ಸ್ಥಾನದಲ್ಲಿ ಇರುವವರು ಏನೂ ಇಲ್ಲದ ಸನ್ಯಾಸಿಯ ಕಾಲಿಗೆ ಏಕೆ ಬೀಳುತ್ತಾರೆ ಎಂದು ಯೋಚಿಸಿದ.ಆಗ ಅವನಿಗೆ ಅನಿಸಿದ್ದು ಏನೆಂದರೆ, ಈ ಜನರಲ್ಲಿಲ್ಲದ ದೊಡ್ಡ ಶಕ್ತಿಯೊಂದು ಸನ್ಯಾಸಿಗಳ ಕಡೆಗೆ ಇದೆ. ತಾನೂ ಅದನ್ನು ಪಡೆಯಬೇಕು ಎಂದು ನಿರ್ಧಾರ ಮಾಡಿದ.  ಹತ್ತಾರು ಜನ ಸನ್ಯಾಸಿಗಳ ಕಡೆಗೆ ಹೋಗಿ ಅವರ ನಡೆ, ನುಡಿ, ಮಠದ ವ್ಯವಸ್ಥೆಗಳನ್ನೆಲ್ಲ ನೋಡಿದ.

ಅದರಲ್ಲೊಬ್ಬರು ಮಾತ್ರ ಎಲ್ಲರ ಗೌರವಕ್ಕೆ ಪಾತ್ರರಾದವರು. ಅವರನ್ನೇ ಗುರುಗಳನ್ನಾಗಿ ಪಡೆಯಬೇಕೆಂದು ಅವರನ್ನು ಸಾರಿ, ದುಂಬಾಲು ಬಿದ್ದು ಅವರ ಶಿಷ್ಯರಲ್ಲಿ ಒಬ್ಬನಾದ. ಗುರುಗಳು ಹೇಳಿದರು, ‘ನಿನ್ನ ಮನಸ್ಸು ಸನ್ಯಾಸಕ್ಕೆ ಎಂದು ಸಿದ್ಧವಾಗಿದೆಯೆಂದು ನನಗೆ ಅನಿಸುತ್ತದೆಯೋ ಅಂದೇ ನಿನಗೆ ಸನ್ಯಾಸ ನೀಡುತ್ತೇನೆ. ಅದು ಆಗುವವರೆಗೆ ನೀನು ನನ್ನ ಜೊತೆಗೇ ಇರು, ಆದರೆ ಸನ್ಯಾಸ ಕೊಡಿ ಎಂದು ಒತ್ತಾಯ ಮಾಡಬೇಡ’. ಆತ  ಹ್ಞೂಗುಟ್ಟಿದ.

ಈ ಸನ್ಯಾಸಿಗಳ ಸ್ವಭಾವವೇ ವಿಚಿತ್ರ. ಆರಾಮವಾಗಿ ಒಂದೆಡೆಗೆ ಇದ್ದು ಶ್ರೀಮಂತ ಶಿಷ್ಯರು ನೀಡುವ ಸೌಕರ್ಯಗಳನ್ನು ಅನುಭವಿ­ಸುವುದನ್ನು ಬಿಟ್ಟು ಊರೂರು ಅಲೆಯುತ್ತಾರೆ, ಸಿಕ್ಕಸಿಕ್ಕಲ್ಲಿ ಭಿಕ್ಷೆ ಬೇಡುತ್ತಾರೆ, ಶಿಷ್ಯರಿಂದಲೂ ಭಿಕ್ಷೆ ಬೇಡಿಸುತ್ತಾರೆ. ಆದರೆ ಯಾವತ್ತೂ ಗುರುಗಳು ಯಾರಿಗೂ ಕೆಟ್ಟ ಮಾತು ಆಡಿದವರಲ್ಲ, ಮುಖದ ಮೇಲಿನ ಮಂದಹಾಸವನ್ನು ಕರಗಿಸಿಕೊಂಡವರಲ್ಲ. ಸದಾಕಾಲ, ಭಗವಂತಾ, ನಿನ್ನ ಕೃಪೆ ದೊಡ್ಡದು, ನಿನ್ನ ಋಣವನ್ನು ಹೇಗೆ ತೀರಿಸಲಿ? ಎನ್ನುವರು.  ಒಂದು ಬಾರಿ ಗುರುಗಳು ದೇಶದ ಉತ್ತರ ಭಾಗಕ್ಕೆ ಪ್ರವಾಸ ಹೋದರು. ಅಲ್ಲಿ ಆಗ ಭೀಕರ ಬರಗಾಲ.

ಈ ಗುರುಗಳನ್ನು ಗುರುತಿಸುವವರು ಯಾರೂ ಇಲ್ಲ. ಅವರ ಜೊತೆಗೇ ಹೋದ ಶಿಷ್ಯನಿಗೆ ಬಹಳ ಬೇಜಾರಾಯಿತು. ಇಡೀ ದಿನ ನಡೆನಡೆದು ಸುಸ್ತಾದದ್ದೇ ಬಂತು. ಒಂದು ಮನೆಯಲ್ಲೂ ಭಿಕ್ಷೆ ದೊರಕಲಿಲ್ಲ. ಒಂದಲ್ಲ, ಮೂರು ದಿನ ತಿನ್ನಲು ಏನೂ ಸಿಕ್ಕಲಿಲ್ಲ. ಶಿಷ್ಯ ಕಂಗಾಲಾಗಿ ಹೋದ. ಇದಿಷ್ಟೇ ಸಾಲದೆಂದು ಆ ಊರಿನ ಜನ ಇವರನ್ನು ಕಳ್ಳರೆಂದು ಭಾವಿಸಿ ದೂರು ಕೊಟ್ಟಾಗ ಅಲ್ಲಿ ಸಿಪಾಯಿಗಳು ಬಂದು ಇವರನ್ನು ಊರಿನಿಂದ ಹೊರಗೆ ಅಟ್ಟಿದರು.

ಬಿಸಿಲಿನಲ್ಲಿ ಒಣಗಿ, ರಾತ್ರಿ ಚಳಿಯಲ್ಲಿ ಮರಗಟ್ಟಿದ ಶಿಷ್ಯನಿಗೆ ಮರುದಿನ ಬೆಳಗಾಗುವಾಗ ಹುಚ್ಚೇ ಹಿಡಿಯುವಂತೆ ಆಗಿತ್ತು. ಗುರುಗಳನ್ನು ಇಲ್ಲಿಂದ ಕರೆದುಕೊಂಡು ಮರಳಿ ತಮ್ಮ ಊರಿಗೆ ಹೋಗಿಬಿಡಬೇಕೆಂದು ಕೇಳಲು ಬಂದವನಿಗೆ ಗುರುಗಳ ಮುಖದ ಮಂದಹಾಸ ಹಾಗೆಯೇ ಇದ್ದದ್ದು ಕಂಡು ಆಶ್ಚರ್ಯವಾಯಿತು. ಅವರು ಕಣ್ಣು ಮುಚ್ಚಿ ಭಜನೆ ಮಾಡುತ್ತಿದ್ದರು, ‘ಭಗವಂತಾ, ನಿನ್ನ ಕರುಣೆ ದೊಡ್ಡದು, ಕೃಪೆ ದೊಡ್ಡದು. ನಾನು ನಿನ್ನ ಕರುಣೆಯ ಋಣವನ್ನು ಹೇಗೆ ತೀರಿಸಲಿ?’ ತರುಣನಿಗೆ ಸಿಟ್ಟೇ ಬಂತು. ‘ಗುರುಗಳೇ, ಇದುವರೆಗೂ ನೀವು ಮಾಡಿದ ಭಜನೆ ನನಗೆ ಇಷ್ಟವಾಗಲಿಲ್ಲ.

ಆ ಭಗವಂತ ಏನು ಮಾಡಿದ್ದಾನೆಂದು ನೀವು ಕೃತಜ್ಞತೆ ಅರ್ಪಿಸುತ್ತಿದ್ದೀರಿ? ಮೂರು ದಿನಗಳಿಂದ ಊಟವಿಲ್ಲ, ಕುಡಿಯಲು ನೀರಿಲ್ಲ, ಇರಲು ನೆರಳಿಲ್ಲ. ಅದು ಸಾಲದೆಂಬಂತೆ ನಮ್ಮನ್ನು ಕಳ್ಳರಂತೆ ಹೊಡೆದು ಹೊರಗಟ್ಟಿದ್ದಾರೆ. ಇದಾವ ಕರುಣೆ ಭಗವಂತನದು?’. ನಗುತ್ತಲೇ ಸನ್ಯಾಸಿ ಹೇಳಿದರು, ‘ನಿನಗರ್ಥವಾಗುವುದಿಲ್ಲ ಮಗೂ, ನನಗೆ ಮೂರು ದಿನಗಳ ಈ ಅವಸ್ಥೆ ಬೇಕಿತ್ತು. ಅದನ್ನೇ ಭಗವಂತ ನನಗೆ ಕೊಟ್ಟಿದ್ದಾನೆ. ನನಗೆ ಮೂರು ದಿನದ ಉಪವಾಸದ ಅವಶ್ಯಕತೆ ಇತ್ತು ಎಂದೇ ಆತ ನನಗೆ ಹೀಗೆ ಮಾಡಿದ್ದಾನೆ. ಆತ ನಾನು ಕೇಳಿದ್ದನ್ನು ಕೊಡುವುದಿಲ್ಲ.

ಆದರೆ ನನಗೆ ಒಳ್ಳೆಯದಾದದ್ದನ್ನೇ ಮಾಡುತ್ತಾನೆ. ಅದಕ್ಕೇ ನಾನವನಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನಗೇನು ಬೇಕೆಂಬುದು ನನಗೇ ತಿಳಿದಿಲ್ಲ, ನನ್ನ ತಿಳಿವಳಿಕೆಯೂ ಸಾಲದು. ಅವನು ಕೊಟ್ಟಿದ್ದೇ ನನಗೆ ಸರಿಯಾದದ್ದು ಎಂಬ ಖಚಿತವಾದ ನಂಬಿಕೆ ನನ್ನದು. ನೀನೇಕೆ ಮುಖ ಸಪ್ಪೆ ಮಾಡಿಕೊಂಡಿದ್ದೀಯಾ? ಅವನಿಗಿಂತಲೂ ಬುದ್ಧಿವಂತನೇ ನೀನು?’  ಇದು ನಂಬಿಕೆ, ಶ್ರದ್ಧೆ. ಇದು ಸದಾಕಾಲ ನಮ್ಮನ್ನು ದುಃಖಗಳಿಂದ ಕೊರಗದಂತೆ ಮಾಡುವ ದಿವ್ಯೌಷಧಿ. ಇದೇ ನಿಜವಾದ ಸನ್ಯಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT