ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ ಜಾನ್‌ನ ಸಂದೇಶ

Last Updated 5 ಮೇ 2014, 19:30 IST
ಅಕ್ಷರ ಗಾತ್ರ

ಅಂದು ಆ ದೊಡ್ಡ ಕಟ್ಟಡದ ತುಂಬೆಲ್ಲ ಜನ. ಒಳಗೆ ಸ್ಥಳ ಸಾಲದೇ ಜನರು ಹೊರಗೆಲ್ಲ ಇದ್ದರು. ಅವರೆಲ್ಲ ಕತ್ತೆತ್ತಿ ವೇದಿಕೆಯತ್ತ ನೋಡುತ್ತಿದ್ದರು. ಆಗ ತಾನೆ ಒಳಬಂದ ಬಿಳಿಕೂದಲಿನ ವಯಸ್ಸಾದ ಮನುಷ್ಯನ ಒಂದು ನೋಟಕ್ಕೆ ಕಾಯುತ್ತಿದ್ದರು. ಆತನ ಕ್ಷಣಕಾಲದ ದರ್ಶನದಿಂದ ತಮ್ಮ ಬದುಕು ಸಾರ್ಥಕ­ವಾದಂತೆ ಎಂದುಕೊಂಡು ಕಣ್ಣು ಮಿಟುಕಿಸದೆ ನೋಡುತ್ತಿದ್ದರು. ಆತನ ಬಾಯಿ­ಯಿಂದ ಬರುವ ಜ್ಞಾನದ ಮಾತುಗಳನ್ನು ಕೇಳಲು ಮೈಯೆಲ್ಲ ಕಿವಿಯಾಗಿ ನಿಂತಿದ್ದರು.

ಆ ಸ್ಥಳ ಜೆರುಸಲೆಂ. ಆಗ ಏಸುಕ್ರಿಸ್ತ ಶಿಲುಬೆಯನ್ನೇರಿ ಎಪ್ಪತ್ತು ವರ್ಷಗಳಾಗಿ ಹೋಗಿವೆ. ಎಲ್ಲ ಜನರು ಎವೆಯಿಕ್ಕದೆ ನೋಡಬಯಸಿದ ವ್ಯಕ್ತಿ ಸಂತ ಜಾನ್. ಅವನಿಗೆ 90 ವರ್ಷ. ಅವನಿಗೆ ತುಂಬ ವಯಸ್ಸಾದದ್ದು ಕಾಣುತ್ತದೆ. ಅವನ ನಡಿಗೆ ಅಭದ್ರವಾಗಿದೆ, ಕೈಗಳು ನಡುಗುತ್ತಿವೆ, ದೂರದ ವಸ್ತುಗಳನ್ನು ನೋಡುವಾಗ ಕೈ ಹುಬ್ಬುಗಳ ಮೇಲೆ ಬರುತ್ತದೆ. ಮಾತುಗಳೂ ಅಷ್ಟು ಸ್ವಷ್ಟವಾಗಿಲ್ಲ.
ಆತ ವೇದಿಕೆಯನ್ನೇರಿದ ಮೇಲೆ ಕಟ್ಟಡದಲ್ಲಿ ಸಂಪೂರ್ಣ ಶಾಂತತೆ ತುಂಬಿತು. ಸಂತ ಜಾನ್ ಒಂದು ಕುರ್ಚಿಯ ಮೇಲೆ ಕುಳಿತ.

ಮತ್ತೊಬ್ಬ ಸಂತ ಮಾತನಾಡ­ತೊಡಗಿದ. ಆತ ಅಲ್ಲಿ ನೆರೆದಿದ್ದ ಜನರಿಗೆ ಸಂತ ಜಾನ್‌ನ ಪರಿಚಯ ಮಾಡಲು ಪ್ರಯತ್ನಿಸುತ್ತಿದ್ದ. ಅವನ ಒಂದೊಂದು ಮಾತಿಗೂ ಜನ ಬೆರಗಾಗಿ ಬಾಯಿ ತೆರೆದುಕೊಂಡು ಕೇಳುತ್ತಿದ್ದರು. ಜಾನ್ ನೋಡಿದ ಮತ್ತು ಮಾಡಿದ ಪ್ರತಿಯೊಂದು ಕಾರ್ಯವನ್ನು ಕೇಳಿ ರೋಮಾಂಚಿತರಾಗುತ್ತಿದ್ದರು. ಏಸು ಕ್ರಿಸ್ತ ಗೆಲಿಲಿ ಸಮುದ್ರದ ನೀರಿನ ಮೇಲೆ ನಡೆದುಹೋದಾಗ ಜಾನ್ ಅವನ ಬದಿಯಲ್ಲೇ ಇದ್ದ. ಜೈರಸ್‌ನ ಸತ್ತ ಮಗಳನ್ನು ಏಸು ಶವಪೆಟ್ಟಿಗೆಯಿಂದ ಎತ್ತಿ ಜೀವ ತುಂಬಿದಾಗ ಪಕ್ಕದಲ್ಲೇ ನಿಂತು ಚಪ್ಪಾಳೆ ತಟ್ಟಿದವ ಜಾನ್. ಏಸುಕ್ರಿಸ್ತ ಒಮ್ಮೆ ಸಮುದ್ರದಲ್ಲಿ ತೆರೆಗಳು ಉಕ್ಕೇರಿದಾಗ ಗಾಳಿಯೇ ನಿಲ್ಲು, ತೆರೆಗಳೇ ನಿಲ್ಲಿ ಎಂದು ಕೂಗಿದಾಗ ಗಾಳಿ ಮತ್ತು ತೆರೆಗಳು ಥಟ್ಟನೇ ನಿಂತದ್ದನ್ನು ನೋಡಿದವ ಸಂತ ಜಾನ್. ಬೆಟ್ಟದ ಕೆಳಗಿನಿಂದ ಮೇಲಿನವರೆಗೆ ಏಸು ತನ್ನ ಶಿಲುಬೆ ಹೊತ್ತು ನಡೆದಾಗ ಜಾನ್ ಪಕ್ಕದಲ್ಲೇ ಇದ್ದ. ಏಸುವನ್ನು ಶಿಲುಬೆಗೇರಿಸಿದಾಗಲೂ ಬುಡದಲ್ಲೇ ನಿಂತು ದುಃಖಪಟ್ಟವನು ಜಾನ್.

ಹೀಗೆ ಜಾನ್‌ನನ್ನು ಪರಿಚಯಿಸಿದ ಸಂತನ ಪ್ರತಿಯೊಂದು ಮಾತಿಗೂ ಜನ ಚಪ್ಪಾಳೆ  ತಟ್ಟಿ ಸಂಭ್ರಮಿಸಿದರು. ಈ ಪರಿಚಯ ಭಾಷಣ ಮುಗಿದ ನಂತರ ಮಾತನಾಡಲು ಸಂತ ಜಾನ್ ಎದ್ದು ನಿಂತ. ಜನರು ಜೋರಾಗಿ ಚಪ್ಪಾಳೆ ತಟ್ಟಿ ಮತ್ತೆ ಶಾಂತರಾದರು. ಈ ಮಹಾತ್ಮ ಹೇಳುವ ಪ್ರತಿಯೊಂದು ಅಕ್ಷರವನ್ನೂ ಕೇಳಿಸಿಕೊಳ್ಳಲು ಕಾತುರರಾಗಿದ್ದರು. ಜಾನ್ ಜೊತೆಯಲ್ಲಿದ್ದವರ ಕೈ ಹಿಡಿದುಕೊಂಡು ವೇದಿಕೆಯ ತುದಿಗೆ ಬಂದ. ನಂತರ ಧ್ವನಿ ಏರಿಸಿ ಹೇಳಿದ, ‘ನನ್ನ ಪ್ರಿಯ ಮಕ್ಕಳೇ, ದಯವಿಟ್ಟು ಒಬ್ಬರನ್ನೊಬ್ಬರು ಪ್ರೀತಿ ಮಾಡಿ’.

ಅಷ್ಟೇ ಅವನು ಮಾತನಾಡಿದ್ದು. ನಿಧಾನವಾಗಿ ತಿರುಗಿ ನಡೆದು ಕುರ್ಚಿಯ ಮೇಲೆ ಕುಳಿತುಬಿಟ್ಟ. ಚರ್ಚ್‌ ಇತಿಹಾಸ ಹೇಳುವಂತೆ ಇದು ಸಂತ ಜಾನ್‌ನ ಕೊನೆಯ ಭಾಷಣ. ತನ್ನ ಜೀವನಾನುಭವದಿಂದ ಜಾನ್ ಏನೆಲ್ಲ ಹೇಳಬಹುದಿತ್ತಲ್ಲವೇ? ಎಷ್ಟೊಂದು ಹೇಳಬಹುದಿತ್ತು? ಬಹುಶಃ ಅವನಿಗೆ ಇದು ತನ್ನ ಕೊನೆಯ ಭಾಷಣವೆಂದೂ ತಿಳಿದಿರಬಹುದು. ಆದರೂ ಇಷ್ಟನ್ನೇ ಏಕೆ ಹೇಳಿದ. ಮೊದಲನೆ ಶತಮಾನದ ಜೊತೆಗೆ ಈ ಮಾತು ತುಂಬ ಅವಶ್ಯವಾಗಿದ್ದಿರಬೇಕು. ತನ್ನ ಇಡೀ ಜೀವನದ ಸಾರವನ್ನು ಅರಗಿಸಿ ಕುಡಿದು ಜನರಿಗೆ ಹೇಳಬೇಕಾಗಿದ್ದದು ಇದು ಮಾತ್ರ ಎಂದು ತೀರ್ಮಾನಿಸಿರಬೇಕು.

ನಿಜ ಹೇಳಬೇಕೆಂದರೆ ಇಂದಿನ ಇಪ್ಪತ್ತೊಂದನೇ ಶತಮಾನದ ಜನರಿಗೂ ಇದೊಂದೇ ಸಂದೇಶ ಬೇಕು. ನಮ್ಮ ಜಗತ್ತು ಸುಂದರವಾಗಿರಲು ಒಬ್ಬರನನ್ನೊಬ್ಬರು ಪ್ರೀತಿಯಿಂದ ಕಂಡರೆ ಸಾಕು. ಸಂತ ಜಾನ್‌ನ ಅಂದಿನ ಅನುಭವದ ಮಾತು ಎರಡು ಸಾವಿರ ವರ್ಷಗಳ ನಂತರವೂ ನಮ್ಮ ಹೃದಯಗಳನ್ನು ತಟ್ಟದಿದ್ದುದು ಬಹುದೊಡ್ಡ ದುರಂತವಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT