ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದ್ರ ಮಥನದ ಅಮೃತಕ್ಕೆ ಇನ್ನೂ ಕಾಯಬೇಕು...

Last Updated 11 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಅದು ಪ್ರೀತಿಯೇ? ಭಾವುಕತೆಯೇ? ಉನ್ಮಾದವೇ? ಸಮೂಹ ಸನ್ನಿಯೇ? ಅಥವಾ ಬಾಡಿಗೆ ಬಂಟರ ಹುಚ್ಚು ಪ್ರದರ್ಶನವೇ?
ತಮಿಳುನಾಡಿನ ಅಧಿನಾಯಕಿ ಜಯಲಲಿತಾ ಅವರ ಜಾಮೀನು ಅರ್ಜಿ  ವಿಚಾರಣೆ ಆಗುತ್ತಿದ್ದಾಗ, ಅವರಿಗೆ ಜಾಮೀನು ಸಿಕ್ಕಿತು ಎಂದು ವದಂತಿ ಹಬ್ಬಿದಾಗ, ಇಲ್ಲ; ಅದು ತಿರಸ್ಕೃತವಾಯಿತು ಎಂದು ನಿಜ ಸುದ್ದಿ ಬಂದಾಗ ವ್ಯಕ್ತವಾದ ತಮಿಳಿಗರ ಪ್ರತಿಕ್ರಿಯೆಗೆ ಏನು ಹೇಳಬೇಕು?

ಜಯಲಲಿತಾ ಅವರಿಗೆ ಶಿಕ್ಷೆಯಾದ ಮತ್ತು ಅವರು ಪರಪ್ಪನ ಅಗ್ರಹಾರದ ಜೈಲು ಪಾಲಾದ ಸುದ್ದಿ ಕೇಳಿ ಆತ್ಮಹತ್ಯೆ ಮಾಡಿಕೊಂಡವರೇ ಹದಿನಾರು ಮಂದಿ. ಕೆಲವರು ಬೆಂಕಿ ಹಚ್ಚಿಕೊಂಡು ಸತ್ತರು; ಇನ್ನು ಕೆಲವರು ತಮಗೆ ತಿಳಿದ ಹಾಗೆ ಸಾವಿನ ಹಾದಿ ಕಂಡುಕೊಂಡರು. ಮತ್ತೆ ಕೆಲವರು ತಲೆ ಬೋಳಿಸಿಕೊಂಡರು. ಬರೀ ಗಂಡಸರು ಏಕೆ ತಲೆ ಬೋಳಿಸಿಕೊಳ್ಳಬೇಕು ಎಂದು ಹೆಂಗಸರೂ ಅದನ್ನೇ ಮಾಡಿದರು. ಎದೆ ಬಡಿದುಕೊಂಡು, ನೆಲ ಬಡಿದು ಅತ್ತವರ ಲೆಕ್ಕ ಇಟ್ಟವರು ಯಾರು?

ಜಯಲಲಿತಾ ಜೈಲು ಸೇರಿದ್ದು ಏಕೆ? ಅವರಿಗೆ ನೂರು ಕೋಟಿ ರೂಪಾಯಿಗಳ ದಂಡ ಹಾಕಿದ್ದಾದರೂ ಏಕೆ? ಜಯಲಲಿತಾ ಅವರ ಬಳಿ ಒಂದಲ್ಲ ಎರಡಲ್ಲ 16,000 ಸೀರೆಗಳು ಇದ್ದುವು. ದಿನಕ್ಕೆ ಒಂದು ಸೀರೆಯಂತೆ ಉಟ್ಟರೂ 16,000ನೆಯ ಸೀರೆಯ ಸರದಿ ಬರುವುದು ಯಾವಾಗ? ಎಷ್ಟು ವರ್ಷಗಳ ನಂತರ? ಸುಮಾರು 43 ವರ್ಷಗಳ ನಂತರ! ಒಬ್ಬ ಮನುಷ್ಯ ನೆಮ್ಮದಿಯಿಂದ ಬದುಕಲು ಏನು ಬೇಕು? ಎಷ್ಟು ಬೇಕು? ಇದು ಬರೀ ರಾಜಕೀಯ ನಾಯಕ–ನಾಯಕಿಯರ ತೀರದ ದಾಹವೇ? ಅಥವಾ ನಮ್ಮಲ್ಲೂ ಇಂಥದೇ ರಕ್ಕಸ ದಾಹ ಇದೆಯೇ?

ಹಾಗಾದರೆ ಭ್ರಷ್ಟಾಚಾರ ಈಗ ಒಂದು ವಿಷಯವೇ ಅಲ್ಲವೇ? ಅಲ್ಲ ಎಂದು ನಮ್ಮ ದೇವೇಗೌಡರು ಹೇಳಿ ದಶಕಗಳೇ ಕಳೆದಿವೆ. ಅವರಿಗೆ ಇರುವಷ್ಟು ರಾಜಕೀಯ ಅನುಭವ ಯಾರಿಗೆ ಇದೆ? ರಾಜಕಾರಣಿಗಳು ತಮಗೆ  ಬೇಕಾದಷ್ಟು ದುಡ್ಡು ಮಾಡಿಕೊಳ್ಳಲಿ, ಅದರಲ್ಲಿ ಒಂದಿಷ್ಟು ನಮಗೂ ಕೊಡಲಿ ಎಂದು ಜನರು ಬಯಸುತ್ತಿದ್ದಾರೆಯೇ? ರಾಜಕಾರಣದಲ್ಲಿ ನೈತಿಕತೆ ಎಂಬುದೆಲ್ಲ ಮಧ್ಯಮ ವರ್ಗದ ಹುಸಿ ಹಂಬಲವೇ?

ತಮಿಳರೇ ಬೇರೆ. ಅವರಿಗೆ ನಮ್ಮೆಲ್ಲರಿಗಿಂತ ಅಭಿಮಾನ ಜಾಸ್ತಿ. 1969ರಷ್ಟು ಹಿಂದೆ ಅವರು ತಮ್ಮ ರಾಜ್ಯವನ್ನು ‘ತಮಿಳುನಾಡು’ ಎಂದು ಕರೆದುಕೊಂಡರು. ಮೊದಲು ಅದು ಮದ್ರಾಸ್‌ ಆಗಿತ್ತು. ದೇಶದಲ್ಲಿ ಬೇರೆ ಯಾವ ರಾಜ್ಯದ ಹೆಸರೂ ಹೀಗೆ ಭಾಷೆಯ ಜತೆಗೆ ಸೇರಿಕೊಂಡಿಲ್ಲ. ತಮಿಳಿಗರಿಗೆ ಅವರ ಭಾಷೆಯನ್ನು ಎಷ್ಟು ಪುರಾತನ ಕಾಲದವರೆಗೆ ಎಳೆದುಕೊಂಡು ಹೋದರೂ ಸಮಾಧಾನವಿಲ್ಲ. ಒಂಬತ್ತನೇ ಶತಮಾನದ ‘ಶಿಲಪ್ಪದಿಕಾರಂ’ ಕೃತಿಯನ್ನು ಒಂದು ಸಾವಿರ ವರ್ಷಗಳಷ್ಟು ಹಿಂದೆ ತೆಗೆದುಕೊಂಡು ಹೋಗಿ ಇತಿಹಾಸ ನಿರ್ಮಿಸಿದವರು ಅವರು.

ಈಗಲೂ ಅದು ಒಂದನೇ ಶತಮಾನದ ಕೃತಿ ಎಂದೇ ಅವರು ಹೇಳುತ್ತಾರೆ! ಅಂದರೆ ಕನ್ನಡದ ಮೊದಲ ಲಭ್ಯ ಗ್ರಂಥ ‘ಕವಿರಾಜಮಾರ್ಗ’ಕ್ಕಿಂತ ಒಂದು ಸಾವಿರ ವರ್ಷದಷ್ಟು ಹಿಂದಿನ ಸಾಹಿತ್ಯ ತಮ್ಮದು ಎಂಬುದು ತಮಿಳಿಗರ ಹೆಮ್ಮೆ. ಹಾಗೆಲ್ಲ ಹೇಳಿಕೊಂಡೇ ಅವರು ಇಡೀ ದೇಶದಲ್ಲಿ ಎರಡನೆಯವರಾಗಿ ತಮ್ಮ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಪಡೆದುಕೊಂಡು ಬಂದರು. ಅವರ ಇಂಥ ಹುಚ್ಚು ಹೆಮ್ಮೆಗಳನ್ನು ಅಲ್ಲಿಯೇ ಪ್ರಾಧ್ಯಾಪಕರಾಗಿ ಪಾಠ ಮಾಡಿ ಪ್ರಿನ್ಸಿಪಾಲರಾಗಿ ನಿವೃತ್ತರಾದ ಬಿ.ಜಿ.ಎಲ್‌.ಸ್ವಾಮಿ ಅವರಷ್ಟು ಲೇವಡಿ ಮಾಡಿದವರು ಬೇರೆ ಯಾರೂ ಇರಲಾರರು.

ಸ್ವಾಮಿಗಳು ಡಿ.ವಿ.ಗುಂಡಪ್ಪನವರ ಏಕೈಕ ಪುತ್ರ. ತಮಿಳುನಾಡಿನಿಂದ ಕರ್ನಾಟಕಕ್ಕೆ ಬಂದ ಮೇಲೆ ‘ತಮಿಳು ತಲೆಗಳ ನಡುವೆ’ (1979) ಎಂಬ ಪುಸ್ತಕವನ್ನು ಅವರು ಬರೆದರು. ತಮಿಳಿಗರ ಭಾಷೆ, ಇತಿಹಾಸ, ಸಂಸ್ಕೃತಿ ಎಲ್ಲದರ ಹುಚ್ಚು ಮತ್ತು ಆಧಾರ ರಹಿತ ಅಭಿಮಾನವನ್ನು ಅವರು ಆ ಪುಸ್ತಕದಲ್ಲಿ ಆಧಾರ ಸಹಿತ ನುಚ್ಚು ನೂರು ಮಾಡಿದ್ದರು. ಅಭಿಮಾನ ಇರುವಲ್ಲಿ ಎಚ್ಚರ ಎಂಬುದು ಇರುವುದಿಲ್ಲ. ಇಂಥದಕ್ಕೆಲ್ಲ ತಮಿಳಿಗರು ತಲೆ ಕೆಡಿಸಿಕೊಂಡವರೇ ಅಲ್ಲ. ಅನೇಕರಿಗೆ ಗೊತ್ತಿರಲಿಕ್ಕಿಲ್ಲ: ಅತಿ ಹೆಚ್ಚು ಆತ್ಮಹತ್ಯೆಗಳು ಆಗುವುದು ತಮಿಳುನಾಡಿನಲ್ಲಿ.

ಇದು ತೀರಾ ಈಚಿನ ಅಂಕಿ ಅಂಶಗಳಿಂದ ಸಿಗುವ ಮಾಹಿತಿ. ಅವರ ಅಭಿಮಾನವನ್ನು ಬಡಿದು ಎಬ್ಬಿಸುವಂಥ ಅನೇಕ ಜನಪ್ರಿಯ ನಾಯಕರೂ ಆ ನಾಡಿನಲ್ಲಿ ಇದ್ದರು. ರಾಜಾಜಿ, ಕಾಮರಾಜ್‌ ಅವರಂಥ ಸರಳ ಸಜ್ಜನಿಕೆಯ ವಿವೇಕಿಗಳು ಪೆರಿಯಾರ್‌ ಅವರಂಥ ಪ್ರಖರ ವಿಚಾರವಾದಿಗಳು, ಅಣ್ಣಾ ದೊರೈ ಅವರಂಥ ಅಪ್ರತಿಮ ವಾಗ್ಮಿಗಳು, ಎಂ.ಜಿ.ಆರ್‌ ಅವರಂಥ ಜನಾನುರಾಗಿಗಳು, ಕರುಣಾನಿಧಿ ಅವರಂಥ ಚಾಣಾಕ್ಷರು ಅವರನ್ನು ಮೀರಿಸುವ ಜಯಲಲಿತಾ ಅವರಂಥ ನಾಯಕಿಯರು ಆ ನಾಡಿನಲ್ಲಿ ಹುಟ್ಟಿದ್ದಾರೆ.

ಒಂದಲ್ಲ ಒಂದು ಭಾವನಾತ್ಮಕ ವಿಷಯವನ್ನು ತೆಗೆದುಕೊಂಡು ಜನರನ್ನು ಅವರು ಬಡಿದೆಬ್ಬಿಸಿದ್ದಾರೆ. ಪೆರಿಯಾರ್‌ ಅವರು ಉಚ್ಚ ವರ್ಗದ ವಿರೋಧಿ ಚಳವಳಿ ಮಾಡಿದರೆ ಅಣ್ಣಾ ದೊರೈ ಹಿಂದಿ ವಿರೋಧಿ ಚಳವಳಿಯ ಮುಂಚೂಣಿಯಲ್ಲಿ ಇದ್ದರು. ಜತೆಗೆ ಅಣ್ಣಾ ದೊರೈ ಅವರು ಒಂದು ರೂಪಾಯಿಗೆ ಒಂದು ಕೆ.ಜಿಯಂತೆ ಅಕ್ಕಿಯನ್ನು ಕೊಟ್ಟವರು. ಅವರೇ  ‘ಅನ್ಯಭಾಗ್ಯ’ ಯೋಜನೆಯ ಹರಿಕಾರರು. ಎಂ.ಜಿ.ಆರ್‌ ಎಂಥ ಜನಪ್ರಿಯ ನಾಯಕ ಎಂದರೆ ಅವರ ಅಂತ್ಯಸಂಸ್ಕಾರದಲ್ಲಿ ಹತ್ತು ಲಕ್ಷ ಜನ ಭಾಗವಹಿಸಿದ್ದರು. ಚೆನ್ನೈನಲ್ಲಿ ಅಣ್ಣಾ ದೊರೈ ಮತ್ತು ಎಂ.ಜಿ.ಆರ್‌ ಅವರ ದೊಡ್ಡ ದೊಡ್ಡ ಸಮಾಧಿಗಳು ಇವೆ. ಅವರಿಗಿಂತ ಬಹಳ ದೊಡ್ಡ ಮುತ್ಸದ್ದಿಗಳಾಗಿದ್ದ ರಾಜಾಜಿ ಮತ್ತು ಕಾಮರಾಜ್‌ ಅವರಿಗೆ ಆ ಭಾಗ್ಯವಿಲ್ಲ. ನಿಜ ಜೀವನದ ಗಾತ್ರದ ಜೀವಗಳ ಪಾಡೇ ಹೀಗೆ.

ಅಣ್ಣಾದೊರೈ ನಿಧನದ ನಂತರ ಚಲನಚಿತ್ರದ ಜತೆಗೆ ಪ್ರತ್ಯಕ್ಷ ಅಥವಾ ಪರೋಕ್ಷ ನಂಟು ಇರುವವರೇ ತಮಿಳುನಾಡು ರಾಜ್ಯವನ್ನು ಆಳಿದ್ದಾರೆ. ಮುಖ್ಯಮಂತ್ರಿಯಾಗಿದ್ದ ಎಂ.ಜಿ.ಆರ್ ಅಸ್ವಸ್ಥರಾಗಿ ಆಸ್ಪತ್ರೆ ಸೇರಿ ಎಷ್ಟೋ ದಿನಗಳ ಕಾಲ ಅವರಿಗೆ ಉತ್ತರಾಧಿಕಾರಿಯನ್ನೇ ಹುಡುಕಿರಲಿಲ್ಲ. ಹುಡುಕುವ ಸಾಹಸವನ್ನು ಯಾರು ಮಾಡಲು ಸಾಧ್ಯ? ಎಂ.ಜಿ.ಆರ್‌ ಅಂತ್ಯ ಸಂಸ್ಕಾರದ ಸಮಯದಲ್ಲಿಯೇ ಅವರ ಉತ್ತರಾಧಿಕಾರಿ ತಾನು ಎಂಬ ಇಂಗಿತ ನೀಡಿದ ಜಯಲಲಿತಾ ಜೈಲಿನಲ್ಲಿ ಇದ್ದಾರಾದರೂ ಮುಖ್ಯಮಂತ್ರಿ ಕುರ್ಚಿಯ ಮೇಲೆ ಪನ್ನೀರ್ ಸೆಲ್ವನ್‌ ಕುಳಿತಿಲ್ಲ. ಇದು ಬರೀ ಆರಾಧನಾಭಾವವೇ ಅಥವಾ ಭಯವೇ?

ತಮಿಳುನಾಡಿನಲ್ಲಿ ಸಾಮೂಹಿಕ ನಾಯಕತ್ವವೇ ಇದ್ದಂತೆ ಇಲ್ಲ. ಅದು ಯಾವ ಪಕ್ಷವಾದರೂ ಇರಲಿ ಒಬ್ಬನೇ ನಾಯಕ ಅಥವಾ ನಾಯಕಿ ಅವರ ಮುಂದೆ ಇನ್ನು ಯಾರೂ ಉಸಿರು ಎತ್ತುವ ಹಾಗಿಲ್ಲ. ಒಂದು ರೀತಿ ಸರ್ವಾಧಿಕಾರ. ಜಯಲಲಿತಾ ಅವರ ಮುಂದೆ ಯಾವ ಗಂಡಸು ತಾನೇ ನಿಂತುಕೊಳ್ಳಲು ಸಾಧ್ಯ? ಜನರಿಗೆ ತೆರೆಯ ಮೇಲಿನ ನಿಜ ಜೀವನದ ಗಾತ್ರಕ್ಕಿಂತ ಬಹು ದೊಡ್ಡ ಜೀವನಗಳ ಬಗೆಗೆ ಒಳಗೊಳಗೇ ಆಸೆ, ಹುಚ್ಚು. ಎಂ.ಜಿ.ಆರ್‌ ಮತ್ತು ಜಯಲಲಿತಾ ಆ ಹುಚ್ಚಿನ ಮೇಲೆಯೇ ಆಟ ಆಡಿದರು. ಕರುಣಾನಿಧಿ ತೆರೆಯ ಮೇಲೆ ಕಾಣಿಸಿಕೊಂಡವರು ಅಲ್ಲ. ಆದರೆ, ಇಂಥ ನಾಯಕ–ನಾಯಕಿಯರಿಗಾಗಿ ಚಿತ್ರಕಥೆ ಬರೆದವರು ಅವರು. ಅವರಿಗೂ ಜನರ ನಾಡಿ ಮಿಡಿತ ಗೊತ್ತು.

ತಮಿಳುನಾಡಿನ ರಾಜಕಾರಣಿಗಳು ಬರೀ ಸಿನಿಮಾ ನೆಚ್ಚಿಕೊಂಡವರು ಅಲ್ಲ. ಅವರು ಕಾಲಕ್ಕೆ ತಕ್ಕಂತೆ ಬದಲಾದರು. ಸಮೂಹ ಮಾಧ್ಯಮಗಳ ಮಹತ್ವವನ್ನು ಬಹುಬೇಗ ಅರಿತುಕೊಂಡರು. ತಮ್ಮದೇ ವೃತ್ತಪತ್ರಿಕೆಗಳನ್ನು ಸ್ಥಾಪಿಸಿದರು. ಟೀವಿ ಚಾನೆಲ್‌ಗಳನ್ನು ಆರಂಭಿಸಿದರು. ಅದರಲ್ಲಿ ತಮ್ಮ ಮುಖವನ್ನೇ ಮತ್ತೆ ಮತ್ತೆ ತೋರಿಸಿದರು. ಅಣ್ಣಾ ದೊರೈ ಒಂದು ರೂಪಾಯಿಗೆ ಒಂದು ಕೆ.ಜಿ ಅಕ್ಕಿ ಕೊಟ್ಟು ಹಾಕಿದ ಜನಪ್ರಿಯ ಯೋಜನೆಗಳ ಪರಂಪರೆಯನ್ನು ಎಲ್ಲ ನಾಯಕರೂ ಮುಂದುವರಿಸಿದರು.

ಈಗ ಜನರ ಮನೆಯಲ್ಲಿ ಇರುವ ಎಲ್ಲ ವಸ್ತುಗಳೂ ಹೀಗೆಯೇ ಸರ್ಕಾರ ಕೊಟ್ಟವುಗಳೇ. ಬಡವರಿಗೆ ಇನ್ನೇನು ಬೇಕು? ಜಯಲಲಿತಾ ತಮಗೆ ಬದುಕಿನ ಭದ್ರತೆ ಕೊಟ್ಟಳು ಎಂದು ಅವರು ನಿಜವಾಗಿಯೂ ಭಾವಿಸಿದರೆ ಅದನ್ನು ತಪ್ಪು ಎನ್ನಲು ಆದೀತೇ? ನೈತಿಕತೆಯ ದ್ವಂದ್ವ ಇದು. ಹಾಗಾದರೆ ಒಬ್ಬ ಮುಖ್ಯಮಂತ್ರಿ ಜೈಲು ಸೇರುವುದಕ್ಕೂ ಆ ನಾಡಿನ ಪ್ರತಿಷ್ಠೆಗೆ ಕಳಂಕ ಬರುವುದಕ್ಕೂ ಸಂಬಂಧ ಇಲ್ಲ ಎನ್ನಲು ಆದೀತೇ? ತಮಿಳುನಾಡಿನ ವರ್ಚಸ್ಸಿಗೆ, ಅಭಿಮಾನಕ್ಕೆ ಬಹಳ ದೊಡ್ಡ ಪೆಟ್ಟು ಬಿದ್ದಿದೆ.

ಜಯಲಲಿತಾ ಅವರ ಭ್ರಷ್ಟಾಚಾರ ಕುರಿತು ವಿಚಾರಣೆ ಮಾಡಿದ ನ್ಯಾಯಾಧೀಶರು ಐತಿಹಾಸಿಕ ತೀರ್ಪು ನೀಡಿದ್ದಾರೆ. ಎಲ್ಲ ಭ್ರಷ್ಟ ನಾಯಕರ ನಿದ್ದೆಗೆಡಿಸುವಂಥ ತೀರ್ಪು ಅದು. ಬರೀ ನಾಲ್ಕು ವರ್ಷ ಜೈಲುವಾಸ ಮಾತ್ರವಲ್ಲ, ನೂರು ಕೋಟಿ ರೂಪಾಯಿ ದಂಡವನ್ನೂ ಅವರು ವಿಧಿಸಿದ್ದಾರೆ. ಅವರಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌ ನ್ಯಾಯಮೂರ್ತಿಗಳೂ ಅಷ್ಟೇ ಐತಿಹಾಸಿಕವಾದ ಮಾತುಗಳನ್ನು ತಮ್ಮ ತೀರ್ಪಿನಲ್ಲಿ ಆಡಿದ್ದಾರೆ. ‘ಭ್ರಷ್ಟಾಚಾರ ಎಂಬುದು ಮಾನವ ಹಕ್ಕುಗಳ ಉಲ್ಲಂಘನೆ’ ಎಂದು ಅವರು ಸಾರಿದರು. ಆದರೂ ಒಂದು ದಿನ ಜಯಲಲಿತಾ ಜೈಲಿನಿಂದ ಬಿಡುಗಡೆಯಾಗಿ ಬರಬಹುದು; ಆದರೆ, ಅವರು ಮತ್ತೆ ರಾಜಕೀಯಕ್ಕೆ ಬರುವುದು ಸದ್ಯದ ಭವಿಷ್ಯದಲ್ಲಿ ಬಹಳ ಕಷ್ಟ.

ತಮಿಳುನಾಡಿನವರು ಭಾವುಕರು ಇರಬಹುದು. ಆದರೆ, ಅವರು ಆಯ್ಕೆಯನ್ನು ಮುಕ್ತವಾಗಿ ಇಟ್ಟುಕೊಂಡಿದ್ದಾರೆ. ಪ್ರತಿ ಐದು ವರ್ಷಕ್ಕೆ ಒಮ್ಮೆ ಅವರು ಅಧಿಕಾರವನ್ನು ಒಂದು ಪಕ್ಷದಿಂದ ಮತ್ತೊಂದು ಪಕ್ಷದ ಕೈಗೆ ಕೊಟ್ಟಿದ್ದಾರೆ. ಆದರೆ, ಅವರ ಆಯ್ಕೆ ಎರಡು ತಮಿಳು ಪಕ್ಷಗಳ ನಡುವೆಯೇ ಇದೆ. ಜಯಲಲಿತಾ ಅವರು ಈಗ ಜೈಲು ಸೇರಿದ್ದಾರೆ. ಅವರ ಪಕ್ಷದ ಕೈಯಲ್ಲಿ ಇನ್ನೂ ಎರಡು ವರ್ಷ ಅಧಿಕಾರ ಇರುತ್ತದೆ. ಅದು ಹೇಗೆ ಅಧಿಕಾರ ನಡೆಯುತ್ತದೆ ಎಂಬುದು ಬೇರೆ ವಿಚಾರ.

ಅದರಿಂದ ರಾಜ್ಯಕ್ಕೆ ಒಳ್ಳೆಯದಾಗುತ್ತದೆಯೇ ಇಲ್ಲವೇ ಎಂಬುದು ಇನ್ನೂ ಬೇರೆ ವಿಚಾರ. ಹಾಗೆಂದು ತೆರೆಯ ಹಿಂದೆ ಕಾಯುತ್ತ ನಿಂತ ಇನ್ನೊಂದು ತಮಿಳು ಪಕ್ಷದ ನಾಯಕರೂ ಸಾಚಾ ಅಲ್ಲ. ಅವರಲ್ಲಿಯೂ ಜೈಲಿಗೆ ಹೋಗಿ ಬಂದವರು ಇದ್ದಾರೆ. ಮುಂದೆ ಹೋಗುವವರೂ ಇರಬಹುದು. ಕರ್ನಾಟಕದಲ್ಲಿ ಮುಖ್ಯ ಮಂತ್ರಿಯಾಗಿದ್ದವರು ಜೈಲಿಗೆ ಹೋಗಿ ಬಂದರು. ಬಿಹಾರದಲ್ಲಿ ಅದೇ ಹುದ್ದೆಯಲ್ಲಿ ಇದ್ದವರು ಜೈಲಿಗೆ ಹೋಗಿ ಬಂದರು. ಹರಿಯಾಣದಲ್ಲಿ ಅದೇ ಹುದ್ದೆಯಲ್ಲಿ ಇದ್ದವರೇ ಈಗಲೂ ಹೋಗಿ ಬಂದು ಮಾಡುತ್ತಿದ್ದಾರೆ! ಹೀಗೆ ಜೈಲಿಗೆ ಹೋದವರೆಲ್ಲ ಅವರವರ ರಾಜ್ಯಗಳಲ್ಲಿ ಜನಪ್ರಿಯ ನಾಯಕರೇ. ಈಗಲೂ ಅವರು ಸಕ್ರಿಯವಾಗಿ ಇರುವ ನಾಯಕರೇ. ಮತ್ತೆ ಅಧಿಕಾರಕ್ಕೆ ಬರಬೇಕು ಎನ್ನುವವರೇ...

ನ್ಯಾಯಪೀಠ ಮತ್ತು ರಾಜಕಾರಣದ ನಡುವೆ ಬಹುದೊಡ್ಡ ಸಂಘರ್ಷ ನಡೆಯುತ್ತ ಇರುವಂತೆ ಕಾಣುತ್ತಿದೆ. ನ್ಯಾಯಪೀಠ ರಾಜಕಾರಣವನ್ನು ಸ್ವಚ್ಛ ಮಾಡಬೇಕು ಎನ್ನುತ್ತಿದೆ. ಅದು ಒಂದು ವಿಷಯವೇ ಅಲ್ಲ ಎನ್ನುವಂತೆ ರಾಜಕಾರಣ ನಡೆದಿದೆ. ಈಗ ಆಗುತ್ತಿರುವುದೆಲ್ಲ  ಸಮುದ್ರ ಮಥನದ ಆರಂಭದಲ್ಲಿ ಬಂದ ಹಾಲಾಹಲವೇ? ಕೊನೆಯಲ್ಲಿ ಅಮೃತ ಬಂದಿತೇ? ಯಾರಿಗೆ ಗೊತ್ತು? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT