ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ–ಬೆಸ ಸೂತ್ರದ ಅರ್ಧ ಗೆಲುವು

Last Updated 1 ಮೇ 2016, 19:44 IST
ಅಕ್ಷರ ಗಾತ್ರ

ಹಿರಿಯ ಕಾಂಗ್ರೆಸ್‌ ಮುಖಂಡ ಕೆ.ಎಚ್. ಮುನಿಯಪ್ಪ ಗುರುವಾರ ಮಧ್ಯಾಹ್ನ ಕರ್ನಾಟಕದ ಪತ್ರಕರ್ತರನ್ನು ಊಟಕ್ಕೆ ಕರೆದಿದ್ದರು.  ಸಂಸತ್ತಿನ ಅಧಿವೇಶನ ನಡೆಯುವ ಸಮಯದಲ್ಲಿ ಕೆಲವು ಸಂಸದರು ಊಟಕ್ಕೆ ಕರೆಯುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ. ಅವರಲ್ಲಿ ಮುನಿಯಪ್ಪ ಅವರೂ ಒಬ್ಬರು. ರಾಗಿ ಮುದ್ದೆ, ಸೊಪ್ಪಿನ ಸಾರು ಉಂಡು, ಸ್ವಲ್ಪ ಹೊತ್ತು ಹರಟೆ ಹೊಡೆದು ಹೊರಟಾಗ, ‘ಹೇಗೆ ಬಂದಿದ್ದೀರಿ. ವಾಹನಗಳು ಇವೆಯೇ. ಕಾರಿನಲ್ಲಿ ಬಿಡಿಸಬೇಕೇ’ ಎಂದು ಕೇಳಿದರು. ಆಗ ಸಮ–ಬೆಸ ಸಂಖ್ಯೆ ಯೋಜನೆ ಎರಡನೇ ಹಂತದ ಪ್ರಯೋಗ ನಡೆಯುತ್ತಿದ್ದುದ್ದರಿಂದ ಓಡಾಟ ಕಷ್ಟವಾಗಿರಬಹುದೆಂದು ಅವರು ಭಾವಿಸಿದ್ದರು.

ಜನವರಿಯಿಂದ ದೆಹಲಿಯಲ್ಲಿ ಸಮ–ಬೆಸ ಸಂಖ್ಯೆ ಪ್ರಯೋಗ ನಡೆಯುತ್ತಿದೆ. ದೇಶದ ಯಾವ ನಗರದಲ್ಲೂ ಇಂಥ ಪ್ರಯೋಗ ನಡೆದಿಲ್ಲ. ಅಪಾಯದ ಮಟ್ಟ ಮುಟ್ಟಿರುವ ಮಾಲಿನ್ಯದ ಪ್ರಮಾಣ ತಗ್ಗಿಸುವ ಉದ್ದೇಶದಿಂದ ಎಎಪಿ  ಸರ್ಕಾರ ಈ ಯೋಜನೆ ಜಾರಿಗೊಳಿಸಿದೆ. ಜನವರಿಯಲ್ಲಿ ಮೊದಲ ಹಂತದ ಪ್ರಯೋಗ ಆಗಿದೆ. ಮೊನ್ನೆ ಎರಡನೇ ಹಂತದ ಪ್ರಯೋಗವೂ ಮುಗಿದಿದೆ. ಬಹುತೇಕರಿಗೆ ಯೋಜನೆ ಹಿಡಿಸಿದಂತಿದೆ. ಫೇಸ್‌ ಬುಕ್‌, ವಾಟ್ಸ್‌ ಆ್ಯಪ್‌ಗಳಲ್ಲಿ ಮೆಚ್ಚುಗೆ ಬಂದಿವೆ. ಆಕ್ಷೇಪಗಳೂ ಇಲ್ಲವೆಂದಲ್ಲ. ಅವುಗಳ ಸಂಖ್ಯೆ ಕಡಿಮೆ. ಆರಂಭದಲ್ಲಿ ಯೋಜನೆ ಪ್ರಕಟವಾದಾಗ ಎಲ್ಲರೂ ಅಚ್ಚರಿಯಿಂದ ನೋಡಿದ್ದರು. ಇದು ಸಾಧ್ಯವೇ ಎಂದು ರಾಗ ಎಳೆದಿದ್ದರು. ಅನೇಕರು ಅರ್ಥವಿಲ್ಲದ್ದೆಂದು ವ್ಯಂಗ್ಯವಾಡಿದ್ದರು.

ಕಾಮಾಲೆ ಕಣ್ಣಿಗೆ ಎಲ್ಲವೂ ಹಳದಿ... ಎನ್ನುವಂತೆ, ಕಾರು ಬಿಟ್ಟು ಇಳಿಯದವರು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಮೇಲೆ ಮುಗಿಬಿದ್ದಿದ್ದಾರೆ. ಕಾಂಗ್ರೆಸ್‌, ಬಿಜೆಪಿ ಮತ್ತಿತರ ಪಕ್ಷಗಳು ರಾಜಕೀಯ ಕಾರಣಗಳಿಗಾಗಿ ಯೋಜನೆ ವಿರೋಧಿಸುತ್ತಿವೆ. ಕೇಜ್ರಿವಾಲ್‌ ಈ ಯೋಜನೆಯಿಂದ ಜಾಗತಿಕ ಮಟ್ಟದಲ್ಲಿ ಜನಪ್ರಿಯರಾಗಿದ್ದಾರೆ. ಅವರಿಗೆ ಹೆಸರು ಬರುತ್ತಿರುವುದರಿಂದ ಬೇರೆಯವರು ವಿರೋಧ ಮಾಡುತ್ತಿದ್ದಾರೆ. ಕಾರು ಬಳಕೆ ಸ್ವಾತಂತ್ರ್ಯ ಮೊಟಕಾಗುವುದರಿಂದ ಸಂಸದರಿಗೂ ಸಹಿಸಿಕೊಳ್ಳಲಾಗುತ್ತಿಲ್ಲ. ಕಳೆದ ಸೋಮವಾರ ಸಂಸತ್ತಿನೊಳಗೆ ಸಂಸದರು ಎಎಪಿ ವಿರುದ್ಧ ಗುಡುಗಿರುವುದು ಅವರಿಗೆ ಅಸಹನೆ ಎಷ್ಟಿದೆ ಎನ್ನುವುದನ್ನು ತೋರಿಸುತ್ತದೆ. ಹೊಸ ಪ್ರಯೋಗಗಳನ್ನು ಮುಕ್ತವಾಗಿ ಸ್ವಾಗತಿಸುವ ಮನೋಭಾವ ನಮ್ಮ ಸಂಸದರಿಗೆ ಇರಬೇಕು. ಕೆಲ ದಿನ ಕಾದು ನೋಡಿದ ಬಳಿಕ ಯೋಜನೆಯಿಂದ ಪ್ರಯೋಜನವಿಲ್ಲ ಎನಿಸಿದರೆ ಟೀಕೆ ಮಾಡಿದರೆ ಪರವಾಗಿಲ್ಲ. ಅದನ್ನು ಬಿಟ್ಟು ಆರಂಭದಲ್ಲೇ ವಿರೋಧಕ್ಕಾಗಿ ವಿರೋಧ ಮಾಡುವುದು ಸರಿಯಲ್ಲ. ಕೆಲವರು ಯೋಜನೆ ಅಣಕಿಸಲು ಸಂಸತ್ತಿಗೆ ಕುದುರೆ ಮೇಲೆ ಬಂದಿದ್ದಾರೆ. ಸೈಕಲ್ ತುಳಿದಿದ್ದಾರೆ. ನಡೆದುಕೊಂಡು ಬಂದಿದ್ದಾರೆ. ಇದು ಒಳ್ಳೆಯ ನಡವಳಿಕೆಯಲ್ಲ.

ಕೇಜ್ರಿವಾಲ್‌ ಮಾಡಬಾರದ ಕೆಲಸವನ್ನೇನೂ ಮಾಡಿಲ್ಲ. ಸದುದ್ದೇಶದಿಂದ ಯೋಜನೆ ಜಾರಿಗೆ ತಂದಿದ್ದಾರೆ. ಅವರು ಮಾಡಿರುವ ಕೆಲಸವನ್ನು ಬೇರೆಯವರು ಮಾಡಿದ್ದರೆ ನೋಡುವ ವಿಧಾನ ಬದಲಾಗುತ್ತಿತ್ತು. ಅಕಸ್ಮಾತ್, ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆ ಪ್ರಕಟಿಸಿದ್ದರೆ ಅವರ ಬೆಂಬಲಿಗರು ಡಂಗೂರ ಬಾರಿಸಿ ಕುಣಿಯುತ್ತಿದ್ದರು. ಸ್ವಚ್ಛ ಭಾರತ ಅಭಿಯಾನಕ್ಕೆ ಎಂಥಾ ಪ್ರಚಾರ ಸಿಕ್ಕಿತು. ಪೊರಕೆ ಹಿಡಿದು ಗುಡಿಸಿದ ಬಿಜೆಪಿ ನಾಯಕರನ್ನು ಹೇಗೆ ಹಾಡಿ, ಹೊಗಳಲಾಯಿತು. ಮೇಕ್‌ ಇನ್‌ ಇಂಡಿಯಾ, ಸ್ಟಾರ್ಟ್‌ ಅಪ್‌ ಇಂಡಿಯಾ ಯೋಜನೆಗಳಿಗೆ ಅದ್ಯಾವ ಮಟ್ಟದ ಮನ್ನಣೆ ದೊರೆಯಿತು. ಎಎಪಿ ಸರ್ಕಾರದ ಯೋಜನೆಯನ್ನು ಟೀಕೆ ಮಾಡುವವರು, ಒಂದು ವರ್ಷದಲ್ಲಿ ಸ್ವಚ್ಛ ಭಾರತ ಅಭಿಯಾನದ ಫಲಶ್ರುತಿ ಏನಾಗಿದೆ ಎಂದು ವಸ್ತುನಿಷ್ಠವಾಗಿ ವಿಮರ್ಶೆ ಮಾಡುವರೇ? ಖಂಡಿತಾ ಇಲ್ಲ. ಯಾರಾದರೂ ವಾಸ್ತವ ನೆಲೆಯಲ್ಲಿ ಯೋಜನೆಗಳನ್ನು ಅವಲೋಕಿಸಲು ಯತ್ನಿಸಿದರೆ ಅವರನ್ನು ಮೋದಿ ಅವರ ವಿರೋಧಿಗಳೆಂದು ಹಣೆಪಟ್ಟಿ ಹಚ್ಚಲಾಗುತ್ತದೆ.

ನಮ್ಮಲ್ಲಿ ಸಮ–ಬೆಸ ಸಂಖ್ಯೆ ಪ್ರಯೋಗ ನಡೆಯದಿರಬಹುದು. ಹೊರ ದೇಶಗಳಲ್ಲಿ ಹಿಂದೆಯೇ ಆಗಿದೆ. ಚೀನಾದ ರಾಜಧಾನಿ ಬೀಜಿಂಗ್‌, ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌, ಕೊಲಂಬಿಯಾದ ಬೊಗೊಟ ಮತ್ತು ದಕ್ಷಿಣ ಅಮೆರಿಕದ ಮೆಕ್ಸಿಕೊ ನಗರಗಳಲ್ಲಿ ನಡೆದಿವೆ. ನೋಂದಣಿ ಸಂಖ್ಯೆ ಆಧಾರದ ಮೇಲೆ ಕಾರುಗಳ ಓಡಾಟವನ್ನು ನಿರ್ಬಂಧಿಸುವ ಕೆಲಸ ಕಾಲಕಾಲಕ್ಕೆ ನಡೆಯುತ್ತಿದೆ. ನಿಯಮ ಉಲ್ಲಂಘಿಸುವವರಿಂದ ದಂಡ ವಸೂಲಿ ಮಾಡಲಾಗಿದೆ. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ಇಲ್ಲದ್ದನ್ನು ಹೊಸದಾಗಿ ಮಾಡಲು ಹೊರಟಿಲ್ಲ. ಸರಿಯಾದ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಂಡು ಈ ಯೋಜನೆ ಜಾರಿಗೊಳಿಸಿದ್ದರೆ ಇಷ್ಟೊಂದು ವಿರೋಧ ಬರುತ್ತಿರಲಿಲ್ಲ. ರಾಜಕೀಯ ವೈರಿಗಳು ಮೆಚ್ಚಿ ಬೆನ್ನು ತಟ್ಟಬೇಕಾಗುತ್ತಿತ್ತು. ಅವರೂ ಸ್ವಲ್ಪ ಅವಸರ ಮಾಡಿಕೊಂಡಿದ್ದಾರೆ.

ಸಮ– ಬೆಸ ಸಂಖ್ಯೆಯ ಪ್ರಯೋಗ ನೂರಕ್ಕೆ ನೂರರಷ್ಟು ಚೆನ್ನಾಗಿದೆ ಎಂದು ಹೇಳುವಂತಿಲ್ಲ. ಇದರಲ್ಲಿ ಅನೇಕ ಲೋಪಗಳಿವೆ. ಅವುಗಳನ್ನು ಸರಿಪಡಿಸಲು ಸ್ವಲ್ಪ ಸಮಯ ಹಿಡಿಯಬಹುದು. ನೋಂದಣಿ ಸಂಖ್ಯೆಗಳ ಆಧಾರದಲ್ಲಿ ಕಾರುಗಳನ್ನು ನಿರ್ಬಂಧಿಸಿದ ಬಳಿಕ ಹೆಚ್ಚು ನಗರ ಸಾರಿಗೆ ಬಸ್ಸುಗಳನ್ನು ಓಡಿಸಬೇಕಿತ್ತು. ಮೆಟ್ರೊ ಸೇವೆ ಉತ್ತಮಪಡಿಸಬೇಕಿತ್ತು. ಎಎಪಿ ಅಧಿಕಾರಕ್ಕೆ ಬಂದ ಬಳಿಕ ದೆಹಲಿ ಟ್ರಾನ್ಸ್‌ಪೋರ್ಟ್‌ ಕಾರ್ಪೊರೇಷನ್‌ (ಡಿಟಿಸಿ) ಹದಗೆಟ್ಟಿದೆ. ಗಂಟೆಗಟ್ಟಲೆ ಕಾದರೂ ಬಸ್ಸುಗಳು ಬರುವುದೇ ಇಲ್ಲ.  ಬರಲಾರಂಭಿಸಿದರೆ ಒಂದೇ ಮಾರ್ಗ ಸಂಖ್ಯೆಯ ನಾಲ್ಕಾರು ಬಸ್ಸುಗಳು ಒಟ್ಟೊಟ್ಟಿಗೆ ಬರುತ್ತವೆ. ಶೀಲಾ ದೀಕ್ಷಿತ್ ಮುಖ್ಯಮಂತ್ರಿ ಆಗಿದ್ದಾಗ ನಗರ ಸಾರಿಗೆ ಸೇವೆ ಚೆನ್ನಾಗಿತ್ತು. ಮಧ್ಯರಾತ್ರಿವರೆಗೆ ಬಸ್ಸುಗಳು ಓಡಾಡುತ್ತಿದ್ದವು. ಈಗ ರಾತ್ರಿ ಒಂಬತ್ತು ಗಂಟೆ ಮೇಲೆ ಬಸ್ಸುಗಳು ಕಡಿಮೆಯಾಗುತ್ತವೆ. ಬಸ್ಸುಗಳು, ಸಿಬ್ಬಂದಿ ಕೊರತೆಯಿಂದ ಡಿಟಿಸಿ ಸೇವೆ ಕಳಪೆಯಾಗಿದೆ. ಆದರೂ ಬೆಂಗಳೂರಿನ ಬಿಟಿಎಸ್‌ಗೆ ಹೋಲಿಸಿದರೆ ಡಿಟಿಸಿ ಸಾವಿರ ಪಾಲು ಮೇಲು.

ದೆಹಲಿ ಮೆಟ್ರೊ ವಿಸ್ತರಣೆ ಎರಡು ವರ್ಷಗಳಿಂದ ವಿಳಂಬವಾಗಿದೆ. ಎರಡು ಹಂತದ ಯೋಜನೆ ತ್ವರಿತವಾಗಿ ಆಗಿದೆ. ಮೂರನೇ ಹಂತದ ಕೆಲಸ ತೆವಳುತ್ತಿದೆ. ಮೆಟ್ರೊ ಪಿಪಿಪಿ ಯೋಜನೆ. ಇದರಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಬಂಡವಾಳ, ಹೊರಗಿನ ಸಾಲ ಸೇರಿರುತ್ತದೆ. ಮೆಟ್ರೊ ವಿಳಂಬಕ್ಕೆ ಬರೀ ರಾಜ್ಯ ಸರ್ಕಾರವನ್ನು ಹೊಣೆ ಮಾಡುವುದರಲ್ಲಿ ಅರ್ಥವಿಲ್ಲ. ಕೇಂದ್ರದ ಹೊಣೆಯೂ ಅಷ್ಟೇ ಇದೆ. ಮೆಟ್ರೊ, ನಗರ ಸಾರಿಗೆ ಸೇವೆ ಸುಧಾರಿಸದಿದ್ದರೆ ಸಮ– ಬೆಸ ಸಂಖ್ಯೆ ಯೋಜನೆ ಯಶಸ್ವಿಯಾಗಲು ಸಾಧ್ಯವಿಲ್ಲ. ಎರಡನೇ ಹಂತದ ಪ್ರಯೋಗದ ವೇಳೆಯಲ್ಲಿ ಪರ್ಯಾಯ ವ್ಯವಸ್ಥೆಗಳಿಲ್ಲದೆ ಜನ ಪರದಾಡಿದ್ದಾರೆ. ಶಾಲಾ– ಕಾಲೇಜು ಮಕ್ಕಳು, ಕೆಲಸಕ್ಕೆ ಹೋಗುವವರು ಸಮಸ್ಯೆ ಎದುರಿಸಿದ್ದಾರೆ. ಒಂದೇ ಮೆಟ್ರೊದಲ್ಲಿ ಎರಡೆರಡು ಮೆಟ್ರೊಗಳಷ್ಟು ಜನ ತಿರುಗಾಡಿದ್ದಾರೆ. ಸಮಸ್ಯೆ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರ ಗಮನಕ್ಕೂ ಬಂದಿದೆ. ಜುಲೈನಲ್ಲಿ ಮತ್ತೆ ಮೂರನೇ ಹಂತದ ಪ್ರಯೋಗ ನಡೆಯುವ ಹೊತ್ತಿಗೆ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ. ಮೂರನೇ ಹಂತದ ಪ್ರಯೋಗಕ್ಕೆ ಎರಡು ತಿಂಗಳು ಉಳಿದಿದೆ. ಅಷ್ಟರೊಳಗೆ ಏನು ಮಾಡುತ್ತಾರೆಂದು ಕಾದು ನೋಡಬೇಕು.

ಬರೀ ಪೆಟ್ರೋಲ್, ಡೀಸೆಲ್‌ ಕಾರುಗಳನ್ನು ನಿಯಂತ್ರಿಸುವುದರಿಂದ ದೆಹಲಿಯ ಮಾಲಿನ್ಯ ಪ್ರಮಾಣ ನಿಯಂತ್ರಿಸುವುದು ಕಷ್ಟ. ಏಕೆಂದರೆ ಕಾರುಗಳು ಉಂಟುಮಾಡುವ ಮಾಲಿನ್ಯ ಏನೇನೂ ಅಲ್ಲ. ರಾಜ್ಯ ಸರ್ಕಾರದ ಪರವಾಗಿ ಕಾನ್ಪುರ ಐಐಟಿ ನಡೆಸಿರುವ ಸಮೀಕ್ಷೆ ಅನ್ವಯ ರಸ್ತೆ ದೂಳು, ಕಟ್ಟಡ ನಿರ್ಮಾಣ ಚಟುವಟಿಕೆಗಳಿಂದ ಪರಿಸರ ಹೆಚ್ಚು ಮಾಲಿನ್ಯವಾಗುತ್ತಿದೆ. ದೂಳಿನಿಂದ ಶೇ 56, ಕಟ್ಟಡ ನಿರ್ಮಾಣದಿಂದ ಶೇ 14, ಕೈಗಾರಿಕೆಗಳಿಂದ ಶೇ 10 ಹಾಗೂ ವಾಹನಗಳಿಂದ ಶೇ 9ರಷ್ಟು ಮಾಲಿನ್ಯವಾಗುತ್ತಿದೆ. ಈ ಚಟುವಟಿಕೆಗಳ ಮೇಲೂ ಕಟ್ಟುನಿಟ್ಟಿನ ನಿರ್ಬಂಧ ಹೇರದಿದ್ದರೆ ಪ್ರಯೋಜನವಿಲ್ಲ.

ಪೆಟ್ರೋಲ್‌, ಡೀಸೆಲ್‌ ಕಾರುಗಳ ಜತೆ ಟ್ರಕ್ಕುಗಳನ್ನು ನಿಯಂತ್ರಿಸಬೇಕು. ದೆಹಲಿ ಒಳಗಡೆ ಹಗಲು ಸಮಯದಲ್ಲಿ ಟ್ರಕ್‌ ಸಂಚಾರ ನಿಷೇಧಿಸಬೇಕು. ಹೊರ ಊರುಗಳಿಗೆ ಹೋಗುವ ಟ್ರಕ್ಕುಗಳು ಬೈಪಾಸ್‌ ಮೂಲಕ ಹಾದು ಹೋಗುವ ವ್ಯವಸ್ಥೆ ಮಾಡಬೇಕು. ಪರಿಸರ ಮಾಲಿನ್ಯ ಉಂಟು ಮಾಡುತ್ತಿರುವ ಕೈಗಾರಿಕೆಗಳ ಮೇಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಎಎಪಿ ಸರ್ಕಾರ ಉಳಿದ ವಿಷಯಗಳ ಬಗ್ಗೆ ಏನೂ ಮಾತನಾಡುತ್ತಿಲ್ಲ. ಪರಿಸರ ಸಂರಕ್ಷಣೆ ದೆಹಲಿ ಸರ್ಕಾರವೊಂದರಿಂದಲೇ ಆಗುವುದಿಲ್ಲ. ನೆರೆಯ ಉತ್ತರ ಪ್ರದೇಶ, ಹರಿಯಾಣ ಸರ್ಕಾರವೂ ಕೈಜೋಡಿಸಬೇಕು. ರಾಜಧಾನಿಗೆ ನೊಯ್ಡಾ, ಗುಡಗಾಂವ್‌ ಹೊಂದಿಕೊಂಡಿರುವುದರಿಂದ  ಏಕಕಾಲಕ್ಕೆ ಎಲ್ಲ ನಗರಗಳಲ್ಲೂ ಮಾಲಿನ್ಯ ನಿಯಂತ್ರಣ ಚಟುವಟಿಕೆಗಳು ನಡೆಯಬೇಕು. ಈ ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳು ಅಧಿಕಾರದಲ್ಲಿ ಇರುವುದರಿಂದ ಹೊಂದಾಣಿಕೆ ಕಷ್ಟ.

ಇಷ್ಟೊಂದು ಅನನುಕೂಲಗಳ ನಡುವೆಯೂ ದೆಹಲಿ ನಾಗರಿಕರು ಸಮ–ಬೆಸ ಸಂಖ್ಯೆ ಯೋಜನೆಯ ಪರವಾಗಿದ್ದಾರೆ. ಬಹಳ ಮಂದಿ ಯೋಜನೆ ಶಾಶ್ವತವಾಗಿ ಮುಂದುವರಿಯಬೇಕೆಂದು ನಿರೀಕ್ಷಿಸಿದ್ದಾರೆ. ಪಿಎಚ್‌ಡಿ ವಾಣಿಜ್ಯ ಮತ್ತು ಕೈಗಾರಿಕೆ ಒಕ್ಕೂಟ ನಡೆಸಿದ ಸಮೀಕ್ಷೆಯಲ್ಲಿ ಹೆಚ್ಚು ಜನ ಯೋಜನೆ ಪರವಾಗಿ ಮಾತನಾಡಿದ್ದಾರೆ. ಈ ಯೋಜನೆಯಿಂದ ಪ್ರಯಾಣದ ಸಮಯ ಕಡಿಮೆಯಾಗಿದೆ. ಇನ್ನೂ ಕಡಿಮೆ ಆಗಬೇಕಿದೆ ಎಂದು ಅನೇಕರು ತಿಳಿಸಿದ್ದಾರೆ. ಸಾರ್ವಜನಿಕ ಸಾರಿಗೆ ಸುಧಾರಿಸಬೇಕೆಂದು ಹಲವರು ಹೇಳಿದ್ದಾರೆ.

ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯ ನಾರಾಯಣ ಯಾದವ್‌ ದೆಹಲಿಯಲ್ಲಿ ಆಟೊ ಓಡಿಸುತ್ತಾರೆ. ಅವರಿಗೆ ಸಮ–ಬೆಸ ಸಂಖ್ಯೆ ಯೋಜನೆ ಇಷ್ಟವಾಗಿದೆ. ಮಾಲಿನ್ಯದ ಬಗ್ಗೆ ಹೆಚ್ಚಿನ ಅರಿವಿಲ್ಲದಿದ್ದರೂ ರಸ್ತೆಗಳಲ್ಲಿ ಸರಾಗವಾಗಿ ಓಡಾಡಬಹುದಾದ್ದರಿಂದ ಖುಷಿಯಾಗಿದೆ. ಬಹಳಷ್ಟು ಜನ ಈ ನಿಲುವು ಹೊಂದಿದ್ದಾರೆ. ಎಎಪಿ ಯೋಜನೆ ಮಾಲಿನ್ಯ ಪ್ರಮಾಣ ತಗ್ಗಿಸಲು ಸೋತಿದ್ದರೂ, ರಸ್ತೆ ಮೇಲಿನ ಒತ್ತಡವನ್ನು ಸಿಕ್ಕಾಪಟ್ಟೆ ಕಡಿಮೆ ಮಾಡಿದೆ. ಆಂಬುಲೆನ್ಸ್‌ ಚಾಲಕರು, ಟ್ಯಾಕ್ಸಿ ಚಾಲಕರಂತೂ ದೆಹಲಿ ಸರ್ಕಾರದ ಯೋಜನೆ ಹೊಗಳುವುದರಲ್ಲಿ ಒಂದು ಹೆಜ್ಜೆ ಮುಂದೆ. ಈ ಯೋಜನೆ ಜಾರಿಯಲ್ಲಿದ್ದ ಸಮಯದಲ್ಲಿ ರೋಗಿಗಳನ್ನು ಹೊತ್ತ ಆಂಬುಲೆನ್ಸ್‌ಗಳು, ವಾಹನ ಸಂದಣಿಯೊಳಗೆ ಸಿಕ್ಕಿಕೊಂಡು ಪರದಾಡಿದ ಉದಾಹರಣೆಗಳು ಇದ್ದಂತಿಲ್ಲ. ವಿಮಾನ ನಿಲ್ದಾಣಕ್ಕೆ ಸಮಯಕ್ಕೆ ಸರಿಯಾಗಿ ಹೋಗಲಾಗದೆ ಪ್ರಯಾಣಿಕರು ಒದ್ದಾಡಿದ ಪ್ರಸಂಗಗಳೂ ಕಡಿಮೆ. ಆದರೆ, ಬೇರೆ ಸಂದರ್ಭಗಳಲ್ಲಿ ಹೀಗೆ
ಇರುವುದಿಲ್ಲ. 

ಅಷ್ಟೇ ಅಲ್ಲ, ಸಾಮಾನ್ಯ ಸಂದರ್ಭಗಳಲ್ಲಿ ಒಂದು ಗಂಟೆ ಹಿಡಿಯುತ್ತಿದ್ದ ಪ್ರಯಾಣ 45 ನಿಮಿಷಕ್ಕೆ ಮುಗಿದಿದೆ. ಅರ್ಧ ಗಂಟೆಯ ದೂರವನ್ನು 20 ನಿಮಿಷಕ್ಕೆ ತಲುಪಲಾಗಿದೆ. ಆಟೊ ಚಾಲಕರು ಅವಕಾಶ ದುರ್ಬಳಕೆ ಮಾಡಿಕೊಂಡು ಪ್ರಯಾಣಿಕರನ್ನು ಸುಲಿಗೆ ಮಾಡಿದ ಉದಾಹರಣೆಗಳೂ ಕಡಿಮೆ. ಯೋಜನೆ ಟೀಕೆ ಮಾಡುವವರು ಮಾತ್ರ ಆಟೊ, ಟ್ಯಾಕ್ಸಿ ಚಾಲಕರು ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.

ಕೇಜ್ರಿವಾಲ್‌ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಅದನ್ನು ಕೇವಲ ರಾಜಕಾರಣದ ದೃಷ್ಟಿಯಿಂದ ನೋಡದೆ ಎಲ್ಲ ಪಕ್ಷಗಳು ಸಹಕರಿಸಬೇಕು. ಜನರೂ ಬೆಂಬಲವಾಗಿ ನಿಲ್ಲಬೇಕು. ಅದು ಅವರೊಬ್ಬರ ಕೆಲಸ. ನಮಗೂ ಅದಕ್ಕೂ ಸಂಬಂಧವಿಲ್ಲ ಎನ್ನುವಂತೆ ನಡೆದುಕೊಂಡರೆ ಪರಿಸರ ಉಳಿಯುವುದಿಲ್ಲ. ಕೇಜ್ರಿವಾಲ್ ಅವರಿಗೆ ಮಾತ್ರ ದೆಹಲಿ ಸಂಬಂಧಿಸಿಲ್ಲ. ರಾಜ್ಯಕ್ಕಿಂತಲೂ ಹೆಚ್ಚು ಕೇಂದ್ರದ ಹೊಣೆ ಇದೆ ಅನ್ನುವುದನ್ನು ಬಿಜೆಪಿ ನಾಯಕರು ಮರೆಯಬಾರದು. ಕಾಂಗ್ರೆಸ್‌ 15 ವರ್ಷ ರಾಜ್ಯದಲ್ಲಿ ಆಳ್ವಿಕೆ ನಡೆಸಿದೆ. ವಿಧಾನಸಭೆ ಚುನಾವಣೆಯಲ್ಲಿ ಈ ಪಕ್ಷ ಹೇಳಿಕೊಳ್ಳುವುದಕ್ಕೂ ಒಂದು ಸ್ಥಾನ ಪಡೆದಿಲ್ಲ. ಬಿಜೆಪಿಯೂ ಮೂರು ಸ್ಥಾನಗಳನ್ನು ಮಾತ್ರ ಪಡೆದಿದೆ. ಮತದಾರರು ಸಂಪೂರ್ಣವಾಗಿ ಎಎಪಿಗೆ ಬೆಂಬಲ ಕೊಟ್ಟಿದ್ದಾರೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆ ಆಗಿರುವ ಸರ್ಕಾರಕ್ಕೆ ಅನಿಸಿದ್ದನ್ನು ಮಾಡುವ ಅಧಿಕಾರವಿದೆ. ಸಮ–ಬೆಸ ಸಂಖ್ಯೆ ಯೋಜನೆ ಮಾಲಿನ್ಯ ತಗ್ಗಿಸಲು ವಿಫಲವಾಗಿದ್ದರೂ ಸಂಚಾರ ದಟ್ಟಣೆ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ. ಅದೇ ಕಾರಣಕ್ಕೆ ಜನ ಯೋಜನೆ ಮುಂದುವರಿಯಬೇಕೆಂದು ಹೇಳಿರುವುದು. ದೆಹಲಿ ಮಾತ್ರವಲ್ಲ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳವೂ ಯೋಜನೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅಲ್ಲೂ ಈ ಯೋಜನೆ ಜಾರಿಗೆ ಬಂದರೆ ರಸ್ತೆಗಳಲ್ಲಿ ಸಿಕ್ಕಿ ಒದ್ದಾಡುವ ಮುಂಬೈ, ಬೆಂಗಳೂರು, ಚೆನ್ನೈ ಹಾಗೂ ಕೋಲ್ಕತ್ತ ಜನರಿಗೂ ಅದರಿಂದ ಬಿಡುಗಡೆ ಸಿಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT