ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯನವರಿಗೆ ಈಗ ಪರೀಕ್ಷೆಯ ಕಾಲ...

Last Updated 5 ಮಾರ್ಚ್ 2016, 19:39 IST
ಅಕ್ಷರ ಗಾತ್ರ

ಇವು ಮುಖ್ಯಮಂತ್ರಿಗಳಿಗೆ ಕಷ್ಟದ ದಿನಗಳು, ಮುಜುಗರದ ದಿನಗಳು; ವಿವರಣೆ ಕೊಡಬೇಕಾದ ದಿನಗಳು. ಇಂಥ ಸನ್ನಿವೇಶದಲ್ಲಿ ಸಿಲುಕಿದ ಯಾರೇ ಆಗಲಿ ಒತ್ತಡಕ್ಕೆ ಒಳಗಾಗುತ್ತಾರೆ. ಒತ್ತಡಕ್ಕೆ ಒಳಗಾದವರು ಒಂದೋ ರಕ್ಷಣಾತ್ಮಕವಾಗುತ್ತಾರೆ ಇಲ್ಲವೇ ಆಕ್ರಮಣಕಾರಿಯಾಗುತ್ತಾರೆ.

ಮುಖ್ಯಮಂತ್ರಿಗಳು ರಕ್ಷಣಾತ್ಮಕವಾಗಿದ್ದಾರೆ. ರಕ್ಷಣಾತ್ಮಕ ಆಗುವುದು ಎಲ್ಲಿಯೋ ಒಂದಿಷ್ಟು ಅಳುಕು ಇರುವಾಗ. ಆ ಹಾಳು (!) ಹ್ಯುಬ್ಲೊ ವಾಚನ್ನು ಅವರಿಗೆ ಯಾರು ತಂದುಕೊಟ್ಟರೋ, ಎಂದೂ ಅಂಥ ದುಬಾರಿ ವಾಚು ಕಟ್ಟದ ಮುಖ್ಯಮಂತ್ರಿಗಳು ಏಕೆ ಅದಕ್ಕೆ ಆಸೆಪಟ್ಟರೋ ತಿಳಿಯದು! ಈಗ ಅವರು ವಧಾಸ್ಥಾನದಲ್ಲಿ ನಿಂತಂತೆ ಆಗಿದೆ. ಅವರೇನೋ ಅದನ್ನು ಸಂಪುಟ ಸಭಾಂಗಣದಲ್ಲಿ ಇಡಲು ಕೊಟ್ಟು ಕೈ ತೊಳೆದುಕೊಂಡಿರಬಹುದು. ಆದರೆ, ಆ ವಾಚು ಅವರನ್ನು ಇನ್ನೂ ಕೆಲಸಮಯ ಕಾಡಬಹುದು.

ಇಂಥ ವಿಚಾರಗಳ ಬಗೆಗೆಲ್ಲ ಸಾಮಾನ್ಯ ಜನರು ಬಹಳ ಕಾಲ ತಲೆಕೆಡಿಸಿಕೊಳ್ಳುತ್ತಾರೆ ಎಂದು ಅನಿಸುವುದಿಲ್ಲ. ಏಕೆಂದರೆ ಅವರಿಗೆ ನಿತ್ಯ ಹಾಸಿ ಹೊದೆಯುವಷ್ಟು ಕಷ್ಟಗಳು ಬೇಕಾದಷ್ಟು ಇರುತ್ತವೆ. ಆದರೆ, ಅಭಿಪ್ರಾಯ ರೂಪಿಸುವ ವರ್ಗದಲ್ಲಿ ಮುಖ್ಯಮಂತ್ರಿಗಳ ಬಿಂಬಕ್ಕೆ ಏಟು ಬಿದ್ದಿದೆ. ಇನ್ನೂ ಬೀಳುತ್ತ ಹೋಗಬಹುದು.

ಈ ವಾಚು ತಮಗೆ ಹೇಗೆ ಬಂತು ಎಂದು ಮುಖ್ಯಮಂತ್ರಿಗಳು ಕೊಟ್ಟ ವಿವರಣೆ ಸತ್ಯವನ್ನು ತೆರೆದು ಇಡುವುದಕ್ಕಿಂತ ಮುಚ್ಚಲು ಮಾಡಿದ ಪ್ರಯತ್ನದಂತೆಯೇ ಕಾಣುತ್ತಿತ್ತು. ಯಾರಾದರೂ ವಾಚು ಕಳೆದುಕೊಂಡವರು ಪೊಲೀಸ್‌ ಕಮಿಷನರ್‌ ಕಚೇರಿಗೆ ಬಂದು ತಮ್ಮ ಅಂಗಡಿಯಲ್ಲಿ ಕಳವಾದ ವಾಚಿಗೂ ಮುಖ್ಯಮಂತ್ರಿಗಳ ಬಳಿ ಇರುವ ವಾಚಿಗೂ ಸಂಬಂಧ ಇಲ್ಲ ಎಂದು ಹೇಳುತ್ತಾರೆಯೇ? ಅವರು ಹಾಗೆ ಹೇಳಿದರೂ ತನಿಖಾಧಿಕಾರಿ ಬಳಿ ಬಂದು ಹೇಳಬೇಕಿತ್ತು.

ಕಮಿಷನರ್ ಕಚೇರಿಗೆ ಏಕೆ ಹೋಗಬೇಕಿತ್ತು? ಸಣ್ಣ ಪುಟ್ಟ ಆಸೆಗಳು ನಮ್ಮನ್ನು ಹಣ್ಣು ಮಾಡುತ್ತವೆ. ಅಂಥ ಆಸೆಗಳು ತರುವ ಕಳಂಕ ಜೀವನ ಪರ್ಯಂತ ಕಾಡುತ್ತ ಇರುತ್ತದೆ. ಮುಖ್ಯಮಂತ್ರಿಗಳಿಗೆ ಆ ವಾಚನ್ನು ಯಾರಾದರೂ ತಂದು ಕೊಟ್ಟಿರಲಿ, ಅದನ್ನು ತೆಗೆದುಕೊಂಡು ತಾನು ತಪ್ಪು ಮಾಡಿದೆ ಎಂದು ಈಗ ಅವರಿಗೆ ಖಂಡಿತ ಪಶ್ಚಾತ್ತಾಪ ಆಗಿರುತ್ತದೆ. ಆದರೆ, ‘ಸಮಯ’ ಮಿಂಚಿ ಹೋಗಿದೆ! ಈಗ ಅದನ್ನು ಹಿಂದೆ ಸರಿಸಲು ಆಗುವುದಿಲ್ಲ. ‘ಸಮಯ’ ಎನ್ನುವುದು ಬಹಳ ಕ್ರೂರ!

ಸಾರ್ವಜನಿಕ ಜೀವನದಲ್ಲಿ ಮರೆವು ಸಹಜ. ವಾಚಿನ ಹಗರಣವೂ ಇನ್ನಷ್ಟು ದಿನ ಅವರನ್ನು ಕಾಡಿ ಮರೆಯಾಗಿಬಿಡಬಹುದು. ಆದರೆ, ಮುಖ್ಯಮಂತ್ರಿಗಳು ನಿಜಕ್ಕೂ ಆತಂಕಗೊಳ್ಳಬೇಕಿರುವುದು ಚುನಾವಣೆಗಳಲ್ಲಿ ಅವರ ಪಕ್ಷಕ್ಕೆ ಆಗುತ್ತಿರುವ ಹಿನ್ನಡೆ ಕುರಿತು. ವಿಧಾನಸಭೆಯ ಮೂರು ಉಪ ಚುನಾವಣೆಗಳಲ್ಲಿ ಎರಡರಲ್ಲಿ ಅವರ ಪಕ್ಷಕ್ಕೆ ಸೋಲಾಯಿತು.

ಈ ಸೋಲಿಗೂ ಅವರು ಕೊಟ್ಟ ವಿವರಣೆ ಸಮಾಧಾನಕರವಾಗಿರಲಿಲ್ಲ: ‘ಎರಡು ಸೀಟು ಬಿಜೆಪಿಯದೇ ಇತ್ತು, ಆ ಸೀಟುಗಳು (ಬೇರೆ ಬೇರೆ ಕಡೆಯಾದರೂ) ಆ ಪಕ್ಷಕ್ಕೇ ಹೋಗಿವೆ’ ಎಂದು ಮುಖ್ಯಮಂತ್ರಿಗಳು ಕೊಟ್ಟ ವಿವರಣೆ ವಿಚಿತ್ರವಾಗಿತ್ತು. ಆ ಸೀಟುಗಳನ್ನೂ ಗೆಲ್ಲಬೇಕು ಎಂದೇ ಅಲ್ಲವೇ ಕಾಂಗ್ರೆಸ್‌ ಪಕ್ಷ ಕಣಕ್ಕೆ ಇಳಿದುದು? ಅವರ ಸೀಟು ಅವರಿಗೆ, ನಮ್ಮ ಸೀಟು ನಮಗೆ ಎಂದರೆ ಚುನಾವಣೆಯೇ ಬೇಕಿರಲಿಲ್ಲ!

ಮುಂದಿನ ವಿಧಾನಸಭಾ ಚುನಾವಣೆಗೆ ಒಂದು ದಿಕ್ಸೂಚಿ ಎಂದೇ ಪರಿಗಣಿಸಲಾದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ
ಕಾಂಗ್ರೆಸ್‌ ಪಕ್ಷದ ಗೆಲುವು ಸಮಾಧಾನಕರವೇನೂ ಆಗಿರಲಿಲ್ಲ. ಹಾಗೆಂದು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ ಕೂಡ. ಅವರು ಹೇಳುವ ಹಾಗೆಯೇ, ಸಾಮಾಜಿಕ ಭದ್ರತೆಯ ಯೋಜನೆಗಳು ಹಿಂದೆಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಇವರ ಅವಧಿಯಲ್ಲಿ ಜಾರಿಯಾಗಿದ್ದರೆ ಆ ಯೋಜನೆಗಳ ಫಲ ಪಡೆದ ಜನರು ಆಡಳಿತ ಪಕ್ಷಕ್ಕೆ ದೊಡ್ಡ ಪ್ರಮಾಣದಲ್ಲಿ ಬೆಂಬಲಿಸಬೇಕಿತ್ತು.

ನಿಜ, ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಈ ಸರ್ಕಾರದ ಅವಧಿಯಲ್ಲಿ ಪ್ರತಿ ವರ್ಷ ₹16,000 ಕೋಟಿಗಿಂತ ಹೆಚ್ಚು ನೆರವು ಸಿಗುತ್ತಿದೆ. ಆ ಎಲ್ಲ ಹಣ ದಲಿತರ ಕಲ್ಯಾಣಕ್ಕೆ ಹೋಗಿದ್ದರೆ ರಾಜ್ಯದ ಎಲ್ಲ ದಲಿತರ ಬಾಳು ಬಂಗಾರ ಆಗಬೇಕಿತ್ತು. ಈ ಸರ್ಕಾರದ ಅವಧಿ ಮುಗಿಯುವುದಕ್ಕಿಂತ ಮುಂಚೆ ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿನ ದಲಿತ ವಿದ್ಯಾರ್ಥಿಗಳ ಒಂದು ವಿದ್ಯಾರ್ಥಿನಿಲಯವಾದರೂ ಹೊಸರೂಪ ಪಡೆಯಲು ಸಾಧ್ಯವಾದರೆ ಅದು ಕೃತಾರ್ಥವಾದ ಕೆಲಸವಾಗುತ್ತದೆ. ಎಂ.ಜಿ.ರಸ್ತೆಯ ಉದಾಹರಣೆ ಏಕೆ ಕೊಟ್ಟೆ ಎಂದರೆ ವಿಧಾನಸೌಧಕ್ಕೆ ಅತಿ ಹತ್ತಿರ ಇರುವ ವಿದ್ಯಾರ್ಥಿನಿಲಯ ಅದು ಒಂದೇ ಎಂಬ ಕಾರಣಕ್ಕಾಗಿ!

ಯೋಜನೆಗಳಿಗಾಗಿ ಹಣ ನಿಗದಿ ಮಾಡುವುದು ಬೇರೆ, ಮಂಜೂರು ಮಾಡುವುದು ಬೇರೆ; ಅದು ನ್ಯಾಯವಾಗಿ ವೆಚ್ಚವಾಗುವುದು ಬೇರೆ. ಸರ್ಕಾರದ ಹಣವನ್ನು ಹರಿದುಕೊಂಡು ತಿನ್ನುವ ಕೆಲಸ ವಿಧಾನಸೌಧದಿಂದಲೇ ಆರಂಭವಾಗುವುದರಿಂದ ನೆಲ ಮಟ್ಟದ ದಲಿತರಿಗೆ ಅದರ ಪಾಲು ಬಂದು ತಲುಪುವ ವೇಳೆಗೆ ಅಲ್ಲಿ ಏನಾದರೂ ಉಳಿದಿರುತ್ತದೆ ಎಂದು ಅನಿಸುವುದಿಲ್ಲ.

ಮುಖ್ಯಮಂತ್ರಿಗಳು ಹೇಳುತ್ತಿರುವುದು ತಾವು ಬಜೆಟ್ಟಿನಲ್ಲಿ ನಿಗದಿ ಮಾಡಿದ ಭಾರಿ ಮೊತ್ತದ ಬಗೆಗೆ. ಆದರೆ, ಎಷ್ಟರ ಮಟ್ಟಿಗೆ ಅದು ಫಲ ಕೊಟ್ಟಿದೆ ಎಂಬುದರ ಬಗೆಗೆ ಅಲ್ಲ. ಅದನ್ನು ಅಂದಾಜು ಮಾಡುವ ವ್ಯವಸ್ಥೆಯೇ ಇದ್ದಂತೆ ಕಾಣುವುದಿಲ್ಲ. ಕಾಂಗ್ರೆಸ್ಸಿನ ಹಿರಿಯ ಸದಸ್ಯ ರಮೇಶ್ ಕುಮಾರ್‌ ಹೇಳುತ್ತಿರುವುದು ಇದನ್ನೇ. ರಮೇಶ್‌ ಕುಮಾರ್‌ ಮತ್ತು ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರು ಸರ್ಕಾರದ ಆಡಳಿತ ಸರಿಯಾಗಿ ನಡೆದಿಲ್ಲ ಎಂದು ನೂರು ಸಾರಿ ಹೇಳಿದ್ದಾರೆ, ಬಹಿರಂಗವಾಗಿಯೇ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ಅವರ ಪಕ್ಷದ ಮತ್ತು ಇತರ ಪಕ್ಷಗಳ ಅನೇಕ ಹಿರಿಯ ಧುರೀಣರ ಜೊತೆಗೆ ನಾನು ಮಾತನಾಡಿರುವೆ. ಅವರು ಯಾರೂ ಸಿದ್ದರಾಮಯ್ಯನವರ ಬಗೆಗೆ ವೈಯಕ್ತಿಕವಾಗಿ ಆಕ್ಷೇಪದ ಮಾತುಗಳನ್ನು ಆಡುವುದಿಲ್ಲ. ಆದರೆ, ಮುಂದಿನ ಎರಡು ವರ್ಷಗಳಲ್ಲಿ ಸಿದ್ದರಾಮಯ್ಯನವರು ತಮ್ಮ ಆಡಳಿತ ವೈಖರಿಯನ್ನು ಬದಲಿಸಿಕೊಳ್ಳದೇ ಇದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸು ಅಧಿಕಾರಕ್ಕೆ ಬರುವುದು ಕಷ್ಟ ಎಂದು ಅವರು ಒಪ್ಪಿಕೊಳ್ಳುತ್ತಾರೆ.

ರಮೇಶ್‌ ಕುಮಾರ್‌ ಅವರು ಇದನ್ನು ಗುರುವಾರ ವಿಧಾನಸಭೆಯಲ್ಲಿ ಮತ್ತೆ ಹೇಳಿದ್ದಾರೆ. ಕಾಕತಾಳೀಯ ಇರಲಾರದು: ಅದೇ ದಿನ ರೈತರು ಭಾರಿ ದೊಡ್ಡ ಸಂಖ್ಯೆಯಲ್ಲಿ ಬಂದು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ, ಕಳೆದ ಒಂದು ವರ್ಷದಲ್ಲಿ, ಅಧಿಕೃತವಾಗಿಯೇ ಒಂದು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾರಣ ಏನೇ ಇರಲಿ: ಅಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡುದು ನಿಜ ಅಲ್ಲವೇ? ರೈತರಿಗೆ ಈ ಸರ್ಕಾರ ಏನು ಮಾಡಿದೆ ಎಂಬ ಪ್ರಶ್ನೆ ಜನಜನಿತವಾಗಿದೆ. ಅವರ ಟೊಮೆಟೊಗೆ, ಅವರ ಮೆಣಸಿನಕಾಯಿಗೆ, ಅವರ ಆಲೂಗೆಡ್ಡೆಗೆ, ಅವರ ಕಬ್ಬಿಗೆ, ಅವರ ಭತ್ತಕ್ಕೆ ಏಕೆ ನ್ಯಾಯವಾದ ಬೆಲೆ ಸಿಗುವುದಿಲ್ಲ? ಮಹಾರಾಷ್ಟ್ರದಲ್ಲಿ ಮೂರು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಮರ್ಥಿಸಿಕೊಳ್ಳುವುದು ಮಾನವೀಯವಾದ ಉತ್ತರವಲ್ಲ.

ಅದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮನಸ್ಸುಳ್ಳವರು ಕೊಡುವ ಉತ್ತರವೂ ಅಲ್ಲ.
ಮುಖ್ಯಮಂತ್ರಿಗಳು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವರುಣಾ ಜಿಲ್ಲಾ ಪಂಚಾಯ್ತಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಸೋಲಾಗಿದೆ. ಇದು ಸಣ್ಣ ಸಂಗತಿಯಲ್ಲ. ಮುಖ್ಯಮಂತ್ರಿಗಳು ತಮ್ಮ ಕ್ಷೇತ್ರವನ್ನು ಬಹಳ ಸುರಕ್ಷಿತವಾಗಿ ಕಾಪಾಡಿಕೊಳ್ಳಬೇಕು, ಅದನ್ನು ಬಹಳ ಚೆನ್ನಾಗಿ ಪೊರೆಯಬೇಕು. ಅವರ ಸ್ವಂತ ಕ್ಷೇತ್ರದ ಜನರೇ ಸಂತೋಷವಾಗಿ ಇಲ್ಲ ಎಂದರೆ ಇಡೀ ರಾಜ್ಯದ ಜನರು ಸಂತೋಷವಾಗಿ ಇರುತ್ತಾರೆ ಎಂದು ಹೇಗೆ ಭಾವಿಸುವುದು? ವರುಣಾದಲ್ಲಿನ ಸೋಲು ಮುಖ್ಯಮಂತ್ರಿಗಳಿಗೆ ಒಂದು ಪಾಠ ಹೇಳುತ್ತಿರಬಹುದು.

ಅಲ್ಲಿನ ರೈತರು ಅವರ ಪಕ್ಷಕ್ಕೆ ಮತ ಹಾಕಿರದೇ ಇರಬಹುದು. ಏಕೆಂದರೆ ಈ ಸರ್ಕಾರ ಬಂದ ಮೇಲೆ ಕೂಲಿಕಾರರು ಮತ್ತು ರೈತರ ನಡುವೆ ಒಂದು ಬಗೆಯ ಹಿತಾಸಕ್ತಿಯ ಸಂಘರ್ಷ ಶುರುವಾಗಿದೆ. ಇದು ಅತ್ಯಂತ ಮಹತ್ವದ ವಿದ್ಯಮಾನದಂತೆ ಕಂಡು ಬರುತ್ತಿದೆ. ಕೂಲಿಕಾರರಿಗೆ ಸರ್ಕಾರ, ಆಹಾರಭದ್ರತೆ ಯೋಜನೆ ಮೂಲಕ ಒಳ್ಳೆಯದು ಮಾಡಿರಬಹುದು. ಆದರೆ, ರೈತರಿಗೆ? ಅವರ ಕಷ್ಟಗಳು ಪರಿಹಾರವಾಗಿಲ್ಲ. ಆಗುವಂತೆಯೂ ಕಾಣುತ್ತಿಲ್ಲ. ಅಲ್ಲಿಗೆ, ಸರ್ಕಾರ ಮಾಡಬೇಕಾದ ಕೆಲಸ ಇನ್ನೂ ಬಹಳ ಇದೆ ಎಂದೇ ಅರ್ಥ.

‘ಆ ದಾರಿ ಕ್ರಮಿಸಲು ವಿರೋಧಿಗಳು ಬಿಡುತ್ತಿಲ್ಲ. ಅವರಿಗೆ ನಮ್ಮ ಬಗೆಗೆ ಅಸೂಯೆ’ ಎಂದು ಮುಖ್ಯಮಂತ್ರಿಗಳು ದೂರುತ್ತಿದ್ದಾರೆ. ವಿರೋಧ ಪಕ್ಷಗಳು ಇರುವುದೇ ಹಾಗೆ. ಮುಖ್ಯಮಂತ್ರಿಗಳು ಹಾಯಾಗಿ ಅಭಿವೃದ್ಧಿ ಕೆಲಸ ಮಾಡಿಕೊಂಡು ಇರಲಿ ಎಂದು ವಿರೋಧ ಪಕ್ಷಗಳು ಏಕೆ ಬಯಸುತ್ತವೆ? ತಾವು ಅಧಿಕಾರಕ್ಕೆ ಬರಬೇಕು ಎಂದು ವಿರೋಧ ಪಕ್ಷಗಳಿಗೆ ಆಕಾಂಕ್ಷೆ ಇರುವುದೂ ಸಹಜ.

ಅದು ಇರಬೇಕಾದದ್ದೇ. ಹಾಗೆಂದೇ ಅವು ಆಡಳಿತ ಪಕ್ಷದ ಹುಳುಕುಗಳನ್ನು ಹುಡುಕುತ್ತ ಇರುತ್ತವೆ, ಮತ್ತು ಅವುಗಳನ್ನು ಬಯಲಿಗೆ ಎಳೆಯುತ್ತ ಇರುತ್ತವೆ. ಹಾಗೆಂದು ಮುಖ್ಯಮಂತ್ರಿಗಳು, ‘ನಾನು ಹಿಂದುಳಿದ ವರ್ಗದವನು, ಅದೇ ಕಾರಣಕ್ಕಾಗಿ ಅಧಿಕಾರದಲ್ಲಿ ಇರಲು ನನಗೆ ಬಿಡುತ್ತಿಲ್ಲ’ ಎಂದು ದೂರು ಹೇಳಬಾರದು. ಅವರು, ‘ಹಿಂದುಳಿದ ವರ್ಗಕ್ಕೆ ಸೇರಿದ ಬಂಗಾರಪ್ಪ ಮತ್ತು ವೀರಪ್ಪ ಮೊಯಿಲಿ ಅವರು ಕೂಡ ಮುಖ್ಯಮಂತ್ರಿಗಳಾಗಿ ಬಹುಕಾಲ ಇರಲಿಲ್ಲ’ ಎಂದು ಉದಾಹರಿಸುತ್ತಾರೆ. ಆದರೆ, ಬಂಗಾರಪ್ಪ ಅವರ ವಿರುದ್ಧ ಬಂಡೆದ್ದವರು ಸ್ವತಃ ವೀರಪ್ಪ ಮೊಯಿಲಿಯವರು.

ನಾವೆಲ್ಲ ಆ ಇತಿಹಾಸಕ್ಕೆ ಸಾಕ್ಷಿಯಾದವರು. ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪನವರು ಅತ್ತ ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದಂತೆಯೇ ಇತ್ತ ಬಂಡೆದ್ದ ಮೊಯಿಲಿಯವರು, ‘ಸರ್ಕಾರದ ಆಡಳಿತಕ್ಕೆ ಮೇಜರ್‌ ಸರ್ಜರಿ ಆಗಬೇಕಾಗಿದೆ’ ಎಂದು ಕೂಗು ಎಬ್ಬಿಸಿದರು. ಬಂಗಾರಪ್ಪನವರು ಆಗಿನ ಪ್ರಧಾನಿ ನರಸಿಂಹರಾವ್ ಅವರನ್ನೂ ಎದುರು ಹಾಕಿಕೊಂಡಿದ್ದರು. ಅವರು ಅಧಿಕಾರ ಕಳೆದುಕೊಂಡರು.

ಮೊಯಿಲಿಯವರು ಉಳಿದ (ಮೂರನೇ) ಅವಧಿಗೆ ಮುಖ್ಯಮಂತ್ರಿಯಾಗಿದ್ದರು. ಆದರೆ, ಅವರ ಅವಧಿಯಲ್ಲಿಯೇ ಸರ್ಕಾರದ ನೌಕರರ ಸಂಬಳ ಕೊಡಲು ಪೀರ್‌ಲೆಸ್‌ ಸಂಸ್ಥೆಯಿಂದ ₹200 ಕೋಟಿ ಸಾಲ ಪಡೆಯಲಾಯಿತು. ಹಿಂದೆ ಎಂದೂ ಹೀಗೆ ಆಗಿರಲಿಲ್ಲ. ನಂತರವೂ ಹಾಗೆ ಆಗಿಲ್ಲ. ಮೊಯಿಲಿ ಆಡಳಿತದ ನಂತರ ಕಾಂಗ್ರೆಸ್‌ ಪಕ್ಷ ದಯನೀಯವಾಗಿ ಸೋತಿತು. ಅದಕ್ಕೆ ಯಾರು ಹೊಣೆ ಎಂದು ಹೇಳಬೇಕಿಲ್ಲ.


ಹೀಗೆಲ್ಲ ಇರುವಾಗ ಸಿದ್ದರಾಮಯ್ಯನವರು ಯಾರನ್ನು ದೂರುತ್ತಾರೆ? ಸಿದ್ದರಾಮಯ್ಯ ಸರ್ಕಾರದ ಒಂದು ವಿಶೇಷ ಹೆಗ್ಗಳಿಕೆ ಎಂದರೆ ಅವರ ಅವಧಿಯಲ್ಲಿ ಸಣ್ಣ ಭಿನ್ನಮತವೂ ಇಲ್ಲ. ಇದು ಮುಖ್ಯಮಂತ್ರಿಗೆ ಆನೆಬಲ ಕೊಡಬೇಕು. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗಬೇಕು. ಅಂಥ ದೃಢತೆ ಸರ್ಕಾರದ ತೀರ್ಮಾನಗಳಲ್ಲಿಯಾಗಲೀ ಅವುಗಳ ಅನುಷ್ಠಾನದಲ್ಲಿಯಾಗಲೀ ಕಾಣುವುದಿಲ್ಲ. ಆಡಳಿತ ಶಿಥಿಲವಾಗಿರುವುದಕ್ಕೆ ಅಥವಾ ಪರಿಣಾಮಕಾರಿ ಎಂದು ಅನಿಸದೇ ಇರುವುದಕ್ಕೆ ಸರ್ಕಾರದ ವಿವಿಧ ಹಂತಗಳಲ್ಲಿ ಎರಡೂವರೆ ಲಕ್ಷ ಹುದ್ದೆಗಳು ಖಾಲಿ ಇರುವುದೂ ಕಾರಣ ಆಗಿರಬಹುದು.

ಮುಖ್ಯಮಂತ್ರಿಗಳಿಗೆ ಈ ಹುದ್ದೆಗಳನ್ನು ತುಂಬುವ ಅಗತ್ಯದ ಮನವರಿಕೆ ಆಗಿರಬಹುದು. ಆದರೆ, ಅವರೇ ಹೊಂದಿರುವ ಹಣಕಾಸು ಖಾತೆ ಅದಕ್ಕೆ ಅಡ್ಡಗಾಲು ಹಾಕುತ್ತ ಇರಬಹುದು. ಇಡೀ ರಾಜ್ಯದಲ್ಲಿ ಉನ್ನತ ಶಿಕ್ಷಣ ಹಾಳಾಗಿ ಹೋಗುತ್ತಿರುವುದಕ್ಕೂ ಅಲ್ಲಿ ಸಾವಿರಾರು ಶಿಕ್ಷಕ ಹುದ್ದೆಗಳು ಖಾಲಿ ಬಿದ್ದಿರುವುದೇ ಕಾರಣ. ಯುಜಿಸಿ ವೇತನವನ್ನು ದಿಢೀರ್ ಎಂದು ಜಾರಿ ಮಾಡುವುದಕ್ಕಿಂತ ಮುಂಚೆ ಅದು ಭವಿಷ್ಯದಲ್ಲಿ ಸರ್ಕಾರದ ಬೊಕ್ಕಸದ ಮೇಲೆ ಹಾಕಬಹುದಾದ ಹೊರೆ ಎಷ್ಟು ಎಂದು ಆಡಳಿತಗಾರರು ಯೋಚಿಸಬೇಕಿತ್ತು.

ಈಗ ಯಾವುದೇ ಸರ್ಕಾರಿ ಕಾಲೇಜಿನಲ್ಲಿ ಅಥವಾ ವಿಶ್ವವಿದ್ಯಾಲಯಗಳ ವಿವಿಧ ವಿಭಾಗಗಳಲ್ಲಿ ಕಲಿಸಲು ಪೂರ್ಣಾವಧಿ ಶಿಕ್ಷಕರು ಇಲ್ಲ. ಇದು ಪದವಿ ಪಡೆದ ಶಿಕ್ಷಕರ ನಿರುದ್ಯೋಗದ ಸಮಸ್ಯೆಯಲ್ಲ. ಇದು ವಿದ್ಯಾರ್ಥಿಗಳಿಗೆ ಶಿಕ್ಷಕರು ಇಲ್ಲದ ಸಮಸ್ಯೆ. ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ, ಅದು ಅದ್ಭುತ ಮಾನವಸಂಪನ್ಮೂಲ ಎಂಬ ದೃಷ್ಟಿಯಿಂದ ಈ ವಿಚಾರವನ್ನು ನೋಡುತ್ತಿದೆ ಎಂದು ಯಾರಿಗೂ ಅನಿಸುತ್ತಿಲ್ಲ.

ಸಿದ್ದರಾಮಯ್ಯನವರು ಸಾವಿರ ದಿನಗಳನ್ನು ಪೂರೈಸಿದ್ದಾರೆ. ಅವರು ಆರಂಭದಲ್ಲಿ ತೆಗೆದುಕೊಂಡ ಹಾಗೆ ನಂತರದ ದಿನಗಳಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂಬ ಭಾವನೆ ಬಲವಾಗುತ್ತಿದೆ. ಮುಂದಿನ ಮೇ 13ಕ್ಕೆ ಅವರ ಸರ್ಕಾರಕ್ಕೆ ಮೂರು ವರ್ಷಗಳು ತುಂಬುತ್ತವೆ. ಉಳಿದುದು ಎರಡು ವರ್ಷ. ಅದರಲ್ಲಿ ಕೊನೆಯ ವರ್ಷ ಚುನಾವಣೆಯ ಸಿದ್ಧತೆಯಲ್ಲಿಯೇ ಮುಗಿದು ಹೋಗುತ್ತದೆ. ಅಂದರೆ ಖಚಿತವಾಗಿ, ತಮ್ಮ ಸರ್ಕಾರ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದು ತೋರಿಸಲು ಮುಖ್ಯಮಂತ್ರಿಗಳಿಗೆ ಇರುವುದು ಇನ್ನು ಒಂದೇ ವರ್ಷ. ಅದು  ನಿತ್ಯವೂ ಪರೀಕ್ಷೆಯ ಕಾಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT