ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಹಿ ಮತ್ತು ನೋವು ಬೇಡಿದ ಸಂತ

Last Updated 1 ಮೇ 2014, 19:30 IST
ಅಕ್ಷರ ಗಾತ್ರ

ತಾನು ಭಾರತೀಯನೆಂದು ಹೆಮ್ಮೆ­ಯಿಂದ ಹೇಳಿಕೊಂಡ ಮೊದಲ ಸೂಫೀ ಸಂತ, ಕವಿ ಅಮೀರ್ ಖುಸ್ರೊ. ಹಲವು ಅದ್ಭುತ ಸಾಮರ್ಥ್ಯಗಳನ್ನು ಹೊಂದಿ, ಸಮನ್ವಯಗೊಳಿಸಿ ಬದುಕನ್ನು ಶ್ರೀಮಂತ­ಗೊಳಿಸಿದ ಸಂತ ಈತ. ಖುಸ್ರೊ, ಸಂಗೀತಗಾರನಾಗಿ, ಕವಿಯಾಗಿ, ಸಂತ­ನಾಗಿ, ಆದರ್ಶ ಶಿಷ್ಯನಾಗಿ ಮಾಡಿದ ಸಾಧನೆಗಳು ದಂತಕಥೆಗಳಾಗಿವೆ.

ಕ್ರಿ.ಶ. ೧೨೫೩ ರಲ್ಲಿ ಉತ್ತರ ಪ್ರದೇ­ಶದ ಇಟಾ ಗ್ರಾಮದಲ್ಲಿ ಹುಟ್ಟಿದರು ಅಬುಲ್ ಹಸನ್ ಅಮೀರ್ ಖುಸ್ರೊ. ಅವರು ತಮ್ಮ ಹದಿನೆಂಟನೆಯ ವಯಸ್ಸಿಗೇ ಮೊದಲ ಕವನ ಸಂಕಲನ ಹೊರ­ತಂದರು. ಇಪ್ಪತ್ತೈದನೆಯ ವಯಸ್ಸಿಗೆ ವಸ್ತೂಲ್ ಹಯಾತ್ ಎಂಬ ದೀರ್ಘ­ಕಾವ್ಯ­ವನ್ನು ಜಗತ್ತಿಗೆ ನೀಡಿದರು. ರಾಜನ ಆಸ್ಥಾನದಲ್ಲಿ ಕವಿಯಾಗಿದ್ದ ಖುಸ್ರೊ ಒಂದು ಕಾಲದಲ್ಲಿ ಸೈನಿಕನಾಗಿ ಸೈನ್ಯವನ್ನು ಸೇರಿ ಯುದ್ಧ ಮಾಡಿದ್ದೂ ಉಂಟು. ಅವರಿಗೆ ತಮ್ಮ ಗುರುಗಳಾದ ಷೇಖ್ ನಿಜಾಮುದ್ದೀನ್‌ರ ಮೇಲೆ ಅಪಾರ ಗೌರವ. ಅದೇ ಗೌರವ­ದಿಂದ ಒಂದು ಸುಂದರವಾದ ಕಾವ್ಯವನ್ನು ರಚಿಸಿ ಗುರುಗಳಿಗೆ ಅರ್ಪಿಸಿ­ದಾಗ ತುಂಬ ಸಂತೋಷಗೊಂಡ ಗುರು, ‘ನಿನಗೆ ಏನು ಬೇಕೋ ಕೇಳಿಕೋ’ ಎಂದರು. ಆಗ ಅಮೀರ್ ಖುಸ್ರೊ ಕೇಳಿದ್ದು ಆಶ್ಚರ್ಯವೆನ್ನಿಸುತ್ತದೆ.

‘ನನಗೆ ಸಿಹಿ ಮತ್ತು ನೋವು ಇವೆರಡರ ಅನುಭ­ವವೂ ಬೇಕು’ ಎಂದ  ಖುಸ್ರೊ. ಸಾಮಾನ್ಯ­ವಾಗಿ ಏನನ್ನಾದರೂ ಕೇಳಿ­ಕೊಳ್ಳುವ ಅವಕಾಶ ದೊರಕಿದರೆ ನಾವೆಲ್ಲ ನಮಗೆ ಒಳ್ಳೆಯದಾಗುವುದನ್ನೇ, ಲಾಭ­ದಾಯಕವಾಗುವುದನ್ನೇ ಕೇಳಿ­ಕೊಳ್ಳುತ್ತೇವೆ. ಸಿಹಿ ಕೇಳು­ವುದೇನೋ ಸರಿಯೇ. ಆದರೆ ಯಾರು ತಾನೇ ನೋವಿನ ಅನುಭವ ಬೇಡು­ತ್ತಾರೆ? ಗುರುಗಳಿಗೆ ಶಿಷ್ಯನ ಮನಸ್ಸಿನ ಸ್ಥಿತಿ ಚೆನ್ನಾಗಿ ತಿಳಿದಿತ್ತು. ಅವರು ನಕ್ಕು ಹೇಳಿ­ದರು, ‘ಹಾಗೆಯೇ ಆಗಲಿ. ನನ್ನ ಹಾಸಿಗೆಯ ಪಕ್ಕದಲ್ಲಿ ಸಕ್ಕರೆಯ ಪುಡಿಕೆ ಇದೆ. ಅದ­ರಲ್ಲಿ ಒಂದು ಚಿಟಿಕೆಯನ್ನು ತೆಗೆದುಕೊಂಡು ತಿನ್ನು’. ಖುಸ್ರೊ ಹಾಗೆಯೇ ಮಾಡಿದ. ಗುರುಗಳು ಮತ್ತೆ ಹೇಳಿದರು. ‘ನೀನು ಕೇಳಿದಂತೆಯೇ ಆಗುತ್ತದೆ. ನಿನ್ನ ಜೀವನ­ದಲ್ಲಿ ಸಾಕಷ್ಟು ನೋವು ಬರುತ್ತದೆ. ಅದನ್ನು ಬೇಜಾರಿಲ್ಲದೆ ಅನುಭವಿಸು. ಈ ನೋವಿನ ಅನುಭವ ನಿನ್ನ ಕಾವ್ಯಕ್ಕೆ, ಸಂಗೀತಕ್ಕೆ ಒಂದು ವಿಶೇಷ ಆಳವನ್ನು ತರು­ತ್ತದೆ. ಅದನ್ನು ಕೇಳಿದವರಿಗೆ ಸಂತೋಷದ ಸಿಹಿ ದೊರಕುತ್ತದೆ’.

ಖುಸ್ರೊ ತಮ್ಮ ಜೀವನದಲ್ಲಿ ಎಂದಿಗೂ ಯಾರನ್ನೂ ದ್ವೇಷಿಸಲಿಲ್ಲ. ವಿಜಾತಿ ದ್ವೇಷ­ವಾಗಲಿ, ಸ್ವಜಾತಿ ಮೋಹವಾಗಲೀ ಅವರ ಬಳಿ ಸುಳಿಯಲಿಲ್ಲ. ತಾವು ಸದಾ­ಕಾಲ ನೋವುಂಡು ಅದರ ಸವಿಯನ್ನು ಜನಕ್ಕೆ ಬಡಿಸಿದರು. ಅವರು ಬರೆದ ಒಂದು ಪಾರ್ಸೀ ಕವನದ ಕೆಲವು ಸಾಲುಗಳು ಅವರ ಜೀವನದೃಷ್ಟಿಯನ್ನು ಸ್ವಷ್ಟ­ವಾಗಿ ತಿಳಿಸುತ್ತವೆ.

ನಾನು ಪ್ರೇಮದ ಅನೇಕ ದೇವತೆಗಳ ಆರಾಧಕ,
ನನಗೆ ಮುಸ್ಲಿಂ ಸಿದ್ಧಾಂತಗಳು ಬೇಕಿಲ್ಲ,
ನನ್ನ ನರಗಳು ತಂತಿಗಳಂತೆ ಬಲಿಷ್ಠ­ವಾಗಿರುವುದರಿಂದ
ಹಿಂದೂಗಳ ಜನಿವಾರವೂ ಬೇಕಿಲ್ಲ.


ಖುಸ್ರೊ ಅವರ ಗುರುಪ್ರೇಮ ಅನ್ಯಾದೃಶವಾದದ್ದು. ಕ್ರಿ.ಶ ೧೩೨೫ ರಲ್ಲಿ ಅವರ ಗುರು ಹಜ್ರತ್ ನಿಜಾ­ಮುದ್ದೀನರು ದೇಹತ್ಯಾಗ ಮಾಡಿದರು. ದುಃಖದಿಂದ ಕುಸಿದು­ಹೋದ ಖುಸ್ರೊ ಕಪ್ಪು ಬಟ್ಟೆ ಧರಿಸಿ ಗುರುವಿನ ಸಮಾ­ಧಿಯ ಬಳಿಯಲ್ಲೇ ಕುಳಿತರು. ಆರು ತಿಂಗಳಿನ ನಂತರ ಅಲ್ಲಿಯೇ ಪ್ರಾಣ ಬಿಟ್ಟರು. ಅವರ ಸಮಾಧಿ­ಯನ್ನು ಗುರು­ಗಳ ಸಮಾಧಿಯ ಪಕ್ಕದಲ್ಲೇ ಮಾಡಲಾಗಿದೆ. ಎಂಟು ನೂರು ವರ್ಷಗಳ ಹಿಂದೆಯೇ ಕೋಮು ­ಸೌಹಾರ್ದ ಸಾರಿದ ಮತ್ತು ಅದ­ರಂತೆಯೇ ನಡೆದು ತೋರಿದ ಅಮೀರ್ ಖುಸ್ರೊ ಅವರಂಥ ಧಾರ್ಮಿಕ ­ನಾಯಕರು, ಸಂಗೀತಗಾರರು, ಕವಿಗಳು ನಮಗೆ ಈಗ ಜಗತ್ತಿನಾದ್ಯಂತ ಬೇಕಾಗಿದ್ದಾರೆ. ಒಡೆದ ಸಮಾಜವನ್ನೂ, ಒಡೆದ ಮನಗಳನ್ನು ಬೆಸೆಯಲು ಅಂಥ ಮಹಾನುಭಾವರ ಅಗತ್ಯ ಹಿಂದೆಂದಿ­ಗಿಂತಲೂ ಈಗ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT