ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಂಗದ ಕತ್ತಲೆ ಮತ್ತು ನಡುವಣ ಬೆಳಕು...

Last Updated 22 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಇದು ಬಿಡಿ ಘಟನೆ ಇರಲಾರದು. ಎರಡೂ ಬೇರೆ ಬೇರೆ ಅನಿಸಿದರೂ ಉದ್ದೇಶ ಒಂದೇ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಒಬ್ಬರು ಮೊದಲ ದಿನವೇ ಹಳ್ಳಕ್ಕೆ ಬಿದ್ದರೆ  ಇನ್ನೊಬ್ಬರು ಕಾಲಕ್ರಮೇಣ ಬಿದ್ದರು. ಇಬ್ಬರೂ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಆಗಿದ್ದರು. ಅವರು ತಾವು ಮಾತ್ರ ಹಳ್ಳಕ್ಕೆ ಬೀಳಲಿಲ್ಲ ತಮ್ಮ ಜೊತೆಗೆ ತಮ್ಮ ಹಲವರು ಸಹೋದ್ಯೋಗಿಗಳನ್ನೂ ಬೀಳಿಸಿದರು. ಇನ್ನೂ ಕೆಲವರು ಬೀಳುವಂತೆ ಕಾಣುತ್ತದೆ.

ನಾನು ನಮ್ಮ ಮಾಧ್ಯಮ ಸಂಸ್ಥೆಗಳ ಬಗೆಗೇ ಮಾತನಾಡುತ್ತಿದ್ದೇನೆ. ಕೇರಳದ ‘ಮಂಗಳಂ’ ಮಾಧ್ಯಮ ಸಂಸ್ಥೆಗೆ ಅನೇಕ ವರ್ಷಗಳ ಇತಿಹಾಸ ಇದೆ. ಅದು ಆ ರಾಜ್ಯದಲ್ಲಿ ಸಭ್ಯ ಪತ್ರಿಕೋದ್ಯಮವನ್ನೇ ಮಾಡಿಕೊಂಡು ಬಂದಿದೆ. ಆದರೆ, ಕಳೆದ ತಿಂಗಳು ತನ್ನ ಹೊಸ ಟೀವಿ ಚಾನೆಲ್‌ ಅನ್ನು ಆರಂಭ ಮಾಡುವಾಗ ಅದು ದುಸ್ಸಾಹಸಕ್ಕೆ ಕೈ ಹಾಕಿತು. ವಾಹಿನಿಯ ಉದ್ಘಾಟನೆಯ ದಿನವೇ ದೊಡ್ಡ ಸುದ್ದಿ ಮಾಡಲು ಹೋಯಿತು. ಅದರಿಂದ ಒಬ್ಬ ಸಚಿವರ ಬಲಿಯೂ ಆಯಿತು. ಆದರೆ, ದೊಡ್ಡ ಸದ್ದಿನೊಡನೆ ಆರಂಭವಾದ ವಾಹಿನಿಯ ಸಂತೋಷ ಬಹಳ ದಿನ ಉಳಿಯಲಿಲ್ಲ; ಬಹಳ ದಿನಗಳು ಏಕೆ ಹಲವು ಗಂಟೆಗಳ ಕಾಲವೂ ಉಳಿಯಲಿಲ್ಲ. ಆಡಳಿತ ಎಲ್‌ಡಿಎಫ್‌ ಗುಂಪಿನ ಎನ್‌ಸಿಪಿಯ ಸಚಿವ ಎ.ಕೆ.ಶಶೀಂದ್ರನ್‌ ವಿರುದ್ಧ ಮಹಿಳೆಯೊಬ್ಬರ ಜೊತೆಗೆ ಅಶ್ಲೀಲವಾಗಿ ಮಾತನಾಡಿದ ಆರೋಪ ಬರುತ್ತಿದ್ದಂತೆಯೇ ಅವರ ತಲೆದಂಡವಾಯಿತು. ಹಿಂದೆಯೇ ಪೊಲೀಸ್‌ ಮತ್ತು ನ್ಯಾಯಾಂಗ ತನಿಖೆಗೆ ಅಲ್ಲಿನ ಸರ್ಕಾರ ಆದೇಶ ಮಾಡಿತು. ಶಶೀಂದ್ರನ್‌ ಅವರ ಬಲಿ ಹಾಕಲು ವಾಹಿನಿಯವರೇ ತಮ್ಮ ಮಹಿಳಾ ಸಿಬ್ಬಂದಿಯನ್ನು ಬಳಸಿಕೊಂಡು ಮಾರುವೇಷದ ಕಾರ್ಯಾಚರಣೆ ನಡೆಸಿದ್ದು ಪೊಲೀಸ್‌ ತನಿಖೆಯಲ್ಲಿ ಬಹಿರಂಗವಾಗುತ್ತಿದ್ದಂತೆಯೇ ಸಂಸ್ಥೆಯ ಸಿಇಒ ವಾಹಿನಿಯ ತೆರೆಯ ಮೇಲೆ ಬಂದು ಕ್ಷಮೆ ಯಾಚಿಸಿದರು. ಸರ್ಕಾರ ಅಷ್ಟಕ್ಕೇ ಸಮಾಧಾನವಾಗಲಿಲ್ಲ. ಆ ಸಿಇಒ ಮತ್ತು ಅವರ ಜೊತೆಗೆ ಸಂಚು ಮಾಡಿದ ಆರೋಪದ ಮೇಲೆ ಸಿಬ್ಬಂದಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿತು. ಅಲ್ಲಿನ ಸರ್ಕಾರ ಅವರ ಮೇಲೆ ಜಾಮೀನು ಸಿಗದ ಆರೋಪಗಳನ್ನು ಹೊರಿಸಿದೆ. ಕೆಲವು ದಿನಗಳಲ್ಲಿ ಅವರು ಹೊರಗೆ ಬರುತ್ತಾರೆ. ಆದರೆ, ರೋಚಕತೆಯ ಬೆನ್ನು ಹತ್ತಿ ಅವರು ಮಾಡಹೊರಟ ಕೆಲಸ ಮಾಧ್ಯಮದವರು ತಲೆ ತಗ್ಗಿಸುವಂತೆ ಮಾಡಿತು. ನಾವು ಸುದ್ದಿ ಮಾಡಬೇಕೇ ಹೊರತು ನಾವೇ ಸುದ್ದಿ ಆಗಬಾರದು ಎಂದು ಅವರಿಗೆ ಅರ್ಥವಾಗಲಿಲ್ಲವೋ ಅಥವಾ ಅವರು ಹುಂಬ ಅವಿವೇಕಿಗಳಾಗಿದ್ದರೋ ತಿಳಿಯದು.

‘ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ’ ಎಂಬ ಗಾದೆ  ಮಾತು ಇದೆ. ಆ ಸಂಸ್ಥೆ ಅನೇಕ ವರ್ಷಗಳ ಕಾಲ ಕಷ್ಟಪಟ್ಟು ತನ್ನ ಮರ್ಯಾದೆಯನ್ನು ಗಳಿಸಿಕೊಂಡಿತ್ತು. ಒಂದು ಕ್ಷಣದಲ್ಲಿ ಅದು ಮಣ್ಣುಪಾಲಾಯಿತು. ಯಾರೋ ಇದರಿಂದ ಆಗುವ ದೂರಗಾಮಿ ಪರಿಣಾಮವೇನು ಎಂದರೆ ಇನ್ನು ಮುಂದೆ ‘ಮಂಗಳಂ ವಾಹಿನಿ’ ಏನು ಸುದ್ದಿ ಪ್ರಸಾರ ಮಾಡಿದರೂ ಜನರು ಅದನ್ನು ನಂಬುವುದು ಕಷ್ಟ. ಇದು ಒಂದು ರೀತಿ, ‘ತೋಳ ಬಂತೆಲೋ ತೋಳ...’ ಕಥೆ. ಇದು ಬರೀ ‘ಮಂಗಳಂ ವಾಹಿನಿ’ಗೆ ಮಾತ್ರ ಸಂಬಂಧಪಟ್ಟ ಸಂಗತಿಯಲ್ಲ. ಅದರ ಸಿಇಒ ಮತ್ತು ಇತರ ಸಿಬ್ಬಂದಿ ಮಾಡಿಕೊಂಡ  ಯಡವಟ್ಟು ಈಗ ಇಡೀ ರಾಷ್ಟ್ರದಲ್ಲಿ ಸುದ್ದಿ ಮಾಡಿದೆ. ಅದರ ಕೆಟ್ಟ  ಪರಿಣಾಮಗಳು ಇತರ ಮಾಧ್ಯಮಗಳ ಮೇಲೂ ಪರೋಕ್ಷವಾಗಿ ಆಗುತ್ತವೆ.

ಮಾರುವೇಷದ ಕಾರ್ಯಾಚರಣೆ ಮಾಧ್ಯಮದ ಕೈಯಲ್ಲಿ ಇರುವ ಬ್ರಹ್ಮಾಸ್ತ್ರ. ಅದನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು. ಅದನ್ನು ಯಾರು ಬಳಸುತ್ತಾರೋ ಅವರ ಮೇಲೆ ಸಂಸ್ಥೆಯ ಮೇಲಧಿಕಾರಿಗಳು ಯಾವಾಗಲೂ ಒಂದು ಕಣ್ಣು ಇಟ್ಟಿರಬೇಕು. ಕೆಲವು ವರ್ಷಗಳ ಹಿಂದೆ ಕರ್ನಾಟಕದಲ್ಲಿಯೂ ಒಂದು ವಾಹಿನಿ ತನ್ನ ಆರಂಭದ ಕಾಲದಲ್ಲಿ ಇದೇ ರೀತಿ ಮಾರುವೇಷ ಕಾರ್ಯಾಚರಣೆ ಆರಂಭಿಸಿತು. ಆದರೆ, ಅದು ತನ್ನ ಸಿಬ್ಬಂದಿಯ ಕೈಗೆ ಸಿಕ್ಕ ಬ್ಲ್ಯಾಕ್‌ಮೇಲ್‌ ಅಸ್ತ್ರ ಎಂದು ಅದಕ್ಕೆ ಬಹುಬೇಗ ಅರ್ಥವಾಯಿತು. ತಕ್ಷಣ ಅಂಥ ಕಾರ್ಯಾಚರಣೆಯನ್ನು ಅದು ಕೈ ಬಿಟ್ಟಿತು. ಇನ್ನೊಂದು ವಾಹಿನಿ ಸಚಿವರೊಬ್ಬರ ವಿರುದ್ಧ  ಮಾರುವೇಷದ ಕಾರ್ಯಾಚರಣೆ ಮಾಡಲು ಹೋದುದು ತಿರುಗುಬಾಣವಾಗಿ ರಾದ್ಧಾಂತವಾದುದೂ ಈಚಿನ ಇತಿಹಾಸ. ಇದು ಮಾರುವೇಷ ಕಾರ್ಯಾಚರಣೆಯ ಸಾಧ್ಯತೆಗಳ ಹಾಗೆಯೇ ಅದರ ಮಿತಿಗಳ ಕಡೆಗೂ ಬೆರಳು ತೋರಿಸುತ್ತದೆ.

ಮಾರುವೇಷದ ಕಾರ್ಯಾಚರಣೆ ಮಾಡಲು ಹೊರಟವರಿಗೆ ‘ಧೀರೋದಾತ್ತ ಪತ್ರಿಕೋದ್ಯಮ’ ಮಾಡುವ ಅವಕಾಶ ಇರುವ ಹಾಗೆಯೇ ಬ್ಲ್ಯಾಕ್‌ ಮೇಲ್‌ ಮಾಡುವ ‘ದಿವ್ಯ’ ಅವಕಾಶವೂ ಇರುತ್ತದೆ. ಎರಡರ ನಡುವಿನ ಅಂತರ ಕೂದಲೆಳೆಯಷ್ಟು. ಆ ಸುದ್ದಿಯನ್ನು ಪ್ರಕಟ ಮಾಡಿದರೆ ಆತ ‘ಧೀರ ಪತ್ರಕರ್ತ’ ಅನಿಸಬಹುದು. ಮುಚ್ಚಿ ಹಾಕಿದರೆ ಏನೋ ಹೊಂದಾಣಿಕೆ ಆಯಿತು ಎಂದು ಅಂದುಕೊಳ್ಳಬಹುದು.

ಇಂಥ ಹೊಂದಾಣಿಕೆ ಮಾಡಿಕೊಳ್ಳಲು ಹೋಗಿ ಈಗ ಕರ್ನಾಟಕದ ‘ಜನಶ್ರೀ’ ವಾಹಿನಿಯ ಸಿಇಒ ಮತ್ತು ಕೆಲವು ಸಿಬ್ಬಂದಿ ಜೈಲು ಕಂಬಿ ಎಣಿಸುತ್ತಿದ್ದಾರೆ. ಒಬ್ಬ ಸಿಬ್ಬಂದಿ ನಿಗೂಢವಾಗಿ ಸತ್ತು ಹೋಗಿದ್ದಾರೆ. ಮೊನ್ನೆ ನನ್ನ ಮೇಜಿನ ಮೇಲೆ ಅದೇ ವಾಹಿನಿಯ ವಿರುದ್ಧ ಚಿನ್ನದ ವ್ಯಾಪಾರಿಯೊಬ್ಬರು ಕೋರಿರುವ ನಿಷೇಧಾದೇಶ (ಇಂಜಂಕ್ಷನ್‌) ಅರ್ಜಿ ಬಂದು ಕುಳಿತಿದೆ.

ಚಿನ್ನದ ವ್ಯಾಪಾರಿ ತಮ್ಮ ಅರ್ಜಿಯಲ್ಲಿ ವಿವರಿಸಿರುವುದನ್ನು ನೋಡಿದರೆ, ‘ಜನಶ್ರೀ’ ವಾಹಿನಿಯ ವರದಿಗಾರರ ಕಾರ್ಯಾಚರಣೆ ಹುಬ್ಬೇರಿಸುವಂತಿದೆ. ವಾಹಿನಿಯ ವರದಿಗಾರರು ಮೊದಲು ವ್ಯಾಪಾರಿಯನ್ನು ಸಂಪರ್ಕಿಸುತ್ತಾರೆ. ನಿಮ್ಮ ವಿರುದ್ಧ ಮೋಸದ ವ್ಯಾಪಾರದ ಸುದ್ದಿ ಪ್ರಸಾರ ಮಾಡುತ್ತೇವೆ ಎಂದು ಮಾಹಿತಿ ನೀಡುತ್ತಾರೆ. ಸುದ್ದಿ ಪ್ರಸಾರ ಮಾಡಬಾರದು ಎನ್ನುವುದಾದರೆ ನಮ್ಮನ್ನು ಸಂಪರ್ಕಿಸಿ ಎನ್ನುತ್ತಾರೆ. ಸಂಪರ್ಕಿಸುವುದು ತಡವಾದರೆ ಮತ್ತೆ ಇವರೇ ಸಂಪರ್ಕ ಮಾಡುತ್ತಾರೆ. ‘ನೋಡಿ ನಾವು ಮಾತ್ರ ನಿಮ್ಮ ವಿರುದ್ಧ ಸುದ್ದಿ ಪ್ರಸಾರ  ಮಾಡುವುದಿಲ್ಲ, ಇತರರಿಗೂ ಕೊಡುತ್ತೇವೆ’ ಎಂದು ಬೆದರಿಕೆ ಹಾಕುತ್ತಾರೆ. ಆಗಲೂ ಪ್ರತಿಕ್ರಿಯೆ ಬರದೇ ಇದ್ದಾಗ ಸುದ್ದಿ  ಪ್ರಸಾರ ಆಗಿಯೇ ಬಿಡುತ್ತದೆ. ಅವರು ಪ್ರಸಾರ ಮಾಡಿದ ಸುದ್ದಿ ನಿಜವೋ ಸುಳ್ಳೋ ಗೊತ್ತಿಲ್ಲ. ಸುದ್ದಿಯನ್ನು ಪ್ರಸಾರ ಮಾಡುವುದಕ್ಕಿಂತ ಮುಂಚೆ ವ್ಯಾಪಾರಿಯನ್ನು ಸಂಪರ್ಕಿಸಿದ್ದು ತಪ್ಪಲ್ಲ.  ‘ನಿಮ್ಮ ವಿರುದ್ಧ ಇಂಥ ಆರೋಪ ಕೇಳಿ ಬಂದಿದೆ. ನೀವು ಹೇಳುವುದು ಏನಾದರೂ ಇದೆಯೇ’ ಎಂದು ಕೇಳಿದ್ದರೆ ಅದು ಸರಿಯಾದ ಕ್ರಮ ಎನಿಸುತ್ತಿತ್ತು. ಆದರೆ, ವ್ಯವಹಾರ ಕುದುರಿಸಲು ಹೋದುದು ತಪ್ಪು. ‘ವ್ಯವಹಾರ ಮಾಡುವುದು’ ಪತ್ರಕರ್ತನ ಕೆಲಸ ಅಲ್ಲ. ಈಗ ಚಿನ್ನದ ವ್ಯಾಪಾರಿಗೆ ಇರುವ ದಾರಿ ಮಾನಹಾನಿ ಮೊಕದ್ದಮೆ ದಾಖಲು ಮಾಡುವುದು. ಅದು ಅವರಿಗೆ ಬಿಟ್ಟ ಆಯ್ಕೆ.

ಇದೇ ರೀತಿ ನಿಷೇಧಾದೇಷ ಕೋರಿದ ಅರ್ಜಿಗಳು ಪತ್ರಿಕಾ ಕಚೇರಿಗಳಿಗೆ  ನಿತ್ಯವೂ ಬರುತ್ತವೆ. ಆ ಎಲ್ಲ ಅರ್ಜಿಗಳಲ್ಲಿ ಮೊದಲ ಪ್ರತಿವಾದಿ ಒಂದಲ್ಲ ಒಂದು ಟೀವಿ ವಾಹಿನಿಯೇ ಆಗಿರುವುದು ಮತ್ತು ಉಳಿದ ಎಲ್ಲ ವಾಹಿನಿಗಳು ಹಾಗೂ ಮಾಧ್ಯಮಗಳು ಪ್ರತಿವಾದಿ ಆಗಿರುವುದು ಈಗ ಸಾಮಾನ್ಯ ಸಂಗತಿಯಾಗಿದೆ. ಎಲ್ಲ ಅರ್ಜಿದಾರರು ಚಿನ್ನದ ವ್ಯಾಪಾರಿಯ ಹಾಗೆಯೇ ತಮ್ಮ ಗೋಳನ್ನು ಹೇಳಿಕೊಂಡಿರುತ್ತಾರೆ. ಚಿನ್ನದ ವ್ಯಾಪಾರಿ  ಪ್ರಕರಣದಲ್ಲಿ ಸುದ್ದಿ  ಪ್ರಸಾರವಾಗಿ ಬಿಟ್ಟಿದೆ. ಅವರು ತಡವಾಗಿ ನಿಷೇಧಾದೇಶ ಕೇಳಿದ್ದಾರೆ. ಆದರೆ, ಇನ್ನೂ ಅನೇಕ ಅರ್ಜಿಗಳಲ್ಲಿ, ‘ಇಂಥ ವಾಹಿನಿಯಿಂದ ಇಂಥ ಸುದ್ದಿ ಪ್ರಕಟವಾಗುತ್ತದೆ ಎಂಬ ಬೆದರಿಕೆ ಅಥವಾ ಮಾಹಿತಿ ಬಂದಿದೆ. ಅದು ನಿಜವಲ್ಲ, ಅದು ಪ್ರಸಾರವಾದರೆ ನಮ್ಮ ಗೌರವಕ್ಕೆ ಕುಂದು ಬರುತ್ತದೆ. ಅದಕ್ಕಾಗಿ ಆ ವಾಹಿನಿಯ ಮತ್ತು ಇತರರ ವಿರುದ್ಧ ನಿಷೇಧಾದೇಶ ಜಾರಿ ಮಾಡಬೇಕು’ ಎಂದು ಕೋರಿದ ಅರ್ಜಿಗಳೂ ನಿತ್ಯ ನಮ್ಮ ಕಚೇರಿಗೆ ಬರುತ್ತಿವೆ.

‘ಜನಶ್ರೀ’ ವಾಹಿನಿಯ ಪ್ರಕರಣದಲ್ಲಿ ಸಿಇಒ ಅವರೇ ಮುಂದೆ ನಿಂತು ವ್ಯವಹಾರ ಕುದುರಿಸಿದ ಆರೋಪ ಎದುರಿಸುತ್ತಿದ್ದಾರೆ. ಅವರು ಕುದುರಿಸಲು ಹೊರಟ ಮೊತ್ತವೂ ಅಗಾಧವಾಗಿದೆ. ಒಂದು ಸಾರಿ ಸಂಸ್ಥೆಯ ಮುಖ್ಯಸ್ಥರ ಹುದ್ದೆಯಲ್ಲಿ ಇರುವವರೇ ಕೊಳ್ಳೆ ಹೊಡೆಯುವ ನೇತೃತ್ವ ವಹಿಸಿಕೊಂಡರೆ ಉಳಿದ ಸಿಬ್ಬಂದಿಗೂ ಅದೇ ಕೆಲಸ ಮಾಡಲು ಪರವಾನಗಿ ಸಿಕ್ಕಂತಾಗುತ್ತದೆ. ಈಗ ಆ ವಾಹಿನಿಯ ವಿಚಾರದಲ್ಲಿ ಅದೇ ಆಗಿದೆ. ದಿನವೂ ಒಬ್ಬೊಬ್ಬರ ವಿರುದ್ಧ ಪ್ರಕರಣಗಳು ದಾಖಲಾಗುತ್ತ ಇವೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂದು ಹೇಳುವುದು ಕಷ್ಟ. ಮರೆಯಲ್ಲಿ ಇರುವ ಇನ್ನೂ ಕೆಲವರು ಬಯಲಿಗೆ ಬಂದರೂ ಅಚ್ಚರಿಯೇನಿಲ್ಲ.

ಒಂದೇ ಸಾರಿ ನಲವತ್ತು ಐವತ್ತು ಕೋಟಿ ರೂಪಾಯಿ ಬಂಡವಾಳ ಹೂಡಿ ಆರಂಭಿಸುವ ವಾಹಿನಿಗಳು ಬಹುಬೇಗ ಆ ಬಂಡವಾಳವನ್ನು ವಾಪಸು ತೆಗೆದುಕೊಂಡು ಲಾಭ ಮಾಡಬೇಕು ಎಂದು ಹೊರಡುತ್ತವೆ. ಎಲ್ಲರೂ ಹೀಗೆಯೇ ಮಾಡುತ್ತಾರೆ ಎಂದಲ್ಲ. ಹಾಗೆ ಆರಂಭವಾಗುವ ವಾಹಿನಿಗಳ ಮುಂದೆ ಎಲ್ಲಿಯೋ ಒಂದೆರಡು ಯಶಸ್ಸಿನ ಸೂತ್ರಗಳು ಕಾಣುತ್ತವೆ. ರೋಚಕತೆ, ಅಪರಾಧ ಮತ್ತು ಮೂಢನಂಬಿಕೆಗಳ ವೈಭವೀಕರಣ ಹಾಗೂ ಅಶ್ಲೀಲ ದೃಶ್ಯಗಳ ಪ್ರದರ್ಶನ ಮಾಡುವ ಮೂಲಕ ಹಣ ಮಾಡಬಹುದು ಎಂದು ಅವು ಅಂದುಕೊಳ್ಳುತ್ತವೆ. ಶಾಸಕ ಹುಲ್ಲಪ್ಪ ಮೇಟಿ ಅವರು ಇದ್ದರು ಎನ್ನಲಾದ ಅಶ್ಲೀಲ ಸಿ.ಡಿ ಅಥವಾ ಪೆನ್‌ಡ್ರೈವ್‌ನ ದೃಶ್ಯಗಳನ್ನು ಪ್ರಸಾರ ಮಾಡಲು ಎಲ್ಲ ವಾಹಿನಿಗಳು ಪೈಪೋಟಿ ಮಾಡಿದ್ದು ಅಶ್ಲೀಲತೆ ಮಾರುಕಟ್ಟೆ ಆಗುವ ಸರಕು  ಎಂದು ಅವು ನಂಬಿರುವುದಕ್ಕೆ ಪುರಾವೆ ಎನ್ನುವಂತೆ ಇತ್ತು. ಅದು ಒಂದು ಉದಾಹರಣೆ ಮಾತ್ರ.

ನೀವು ಯಾವುದೇ ವಾಹಿನಿಯನ್ನು ಚಾಲೂ ಮಾಡಿ ನೋಡಿ. ಎಲ್ಲ ವಾಹಿನಿಗಳಲ್ಲಿ ಎಲ್ಲ ಸಮಯದಲ್ಲಿ ಅದದೇ ದೃಶ್ಯಗಳು ಪ್ರಸಾರ ಆಗುತ್ತ ಇರುತ್ತವೆ. ರಾತ್ರಿ ಹತ್ತು ಗಂಟೆಗೆ ಕ್ರೈಂ ಧಾರಾವಾಹಿಗಳೇ ವಿಜೃಂಭಿಸುತ್ತ ಇರುತ್ತವೆ. ಈ ಕ್ರೈಂ ಧಾರಾವಾಹಿಗಳಿಗೆ ದೊಡ್ಡ  ಇತಿಹಾಸ ಇದೆ. ರಾತ್ರಿ ಒಂಬತ್ತು ಗಂಟೆಗೆ ಎಲ್ಲ ವಾಹಿನಿಗಳಲ್ಲಿ ಒಂದೇ ರೀತಿ ಸುದ್ದಿ ಓದುವ ಮತ್ತು ವಿಶ್ಲೇಷಿಸುವ ವಿಧಾನ ನಮಗೆ  ಕಾಣುತ್ತದೆ. ಯಾರೋ ಒಬ್ಬರು ಅದರಲ್ಲಿ ಹೊಸತನ ತೋರಿಸಿ
ಕೊಟ್ಟರೆ ಹಾಗೂ ಅದು ಜನಪ್ರಿಯ ಎಂದು ಅನಿಸಿದ ಕೂಡಲೇ ಎಲ್ಲರೂ ಅದನ್ನೇ ನಕಲು  ಮಾಡುತ್ತಾರೆ. ಯಾರೂ ನಕಲು ನೋಡಲು ಹೋಗುವುದಿಲ್ಲ, ಮೂಲವನ್ನೇ ನೋಡುತ್ತಾರೆ, ಅದು ಎಷ್ಟು ಹಿಂಸೆ ಎಂದು ಅನಿಸಿದರೂ!

ರೋಚಕತೆ, ಅಪರಾಧ, ಮೂಢನಂಬಿಕೆ ಹಾಗೂ ಅಶ್ಲೀಲತೆಗಳು ಮುಖ್ಯವಾಹಿನಿಯ ಪತ್ರಿಕೋದ್ಯಮಕ್ಕೆ  ಸರಕು ಎಂದು ಯಾವಾಗಲೂ ಅನಿಸಿಲ್ಲ. ಇದೆಲ್ಲ ಟ್ಯಾಬ್ಲಾಯಿಡ್‌ ಪತ್ರಿಕೋದ್ಯಮದ ಸರಕು. ಹಾಗೆಂದು ಟ್ಯಾಬ್ಲಾಯಿಡ್‌ ಪತ್ರಿಕೋದ್ಯಮ ಕೆಟ್ಟುದು ಎಂದೂ ಅಲ್ಲ. ಎಲ್ಲ ಕಡೆ ಕೆಟ್ಟುದು, ಒಳ್ಳೆಯದು ಇರುವ ಹಾಗೆ ಅಲ್ಲಿಯೂ ಇರಬಹುದು. ಆದರೆ, ಮುಖ್ಯವಾಹಿನಿಯ ಪತ್ರಿಕೋದ್ಯಮ ಟ್ಯಾಬ್ಲಾಯಿಡ್‌ ಪತ್ರಿಕೋದ್ಯಮವನ್ನು ಅನುಸರಿಸುತ್ತಿರುವುದು ಅಥವಾ ಅದನ್ನೇ ಮಾಡುತ್ತಿರುವುದು ಈಗಿನ ಬಿಕ್ಕಟ್ಟಿನ ಸನ್ನಿವೇಶಕ್ಕೆ ಕಾರಣವಾಗಿದೆ. ನಾವು ಮಾಧ್ಯಮದವರು ಸುಲಭವಾಗಿ ಯಶಸ್ಸು ಗಳಿಸುವ ಅಥವಾ ಅಷ್ಟೇ ಸುಲಭವಾಗಿ ಹಣ ಮಾಡುವ ದಾರಿ ಇದು ಎಂದು ಅಂದುಕೊಂಡಿರಬಹುದು.

ಎಲ್ಲರೂ ವ್ಯಾಪಾರ, ವಹಿವಾಟು ಮಾಡುವುದು ಹಣ ಮಾಡುವುದಕ್ಕಾಗಿಯೇ. ಮಾಧ್ಯಮವು ಲಾಭ ಮಾಡುವ ಉದ್ದೇಶದ ಒಂದು ಉದ್ಯಮ ಎಂಬುದೂ ನಿಜ. ಆದರೆ, ಹಣ ಮಾಡಬೇಕಾದರೂ ಅದಕ್ಕೆ ಒಂದು ದಾರಿ ಎಂದು ಇರುತ್ತದೆ. ನಮ್ಮ ಪತ್ರಿಕೆಯಲ್ಲಿ ‘ನಾಳೆ ಇಂಥ ರಾಜಕಾರಣಿಯ ಇಂಥ ಲೀಲೆಗಳನ್ನು ಪ್ರಕಟ ಮಾಡುತ್ತೇವೆ’ ಎಂದು ನಾವು ಇಂದೇ ಪ್ರಕಟ ಮಾಡಿದರೆ ಅದರ ಉದ್ದೇಶ ಏನು ಎಂದು ಎಲ್ಲರಿಗೂ ಅರ್ಥವಾಗುತ್ತದೆ. ಮತ್ತು ಆ ಲೀಲೆ ಎಂದೂ ಪ್ರಕಟವಾಗುವುದಿಲ್ಲ ಎಂದೂ ಗೊತ್ತಾಗುತ್ತದೆ. ಹಿಂದೆ ಅನೇಕ ಟ್ಯಾಬ್ಲಾಯಿಡ್‌ ಪತ್ರಿಕೆಗಳಲ್ಲಿ ಈ ರೀತಿ ಪ್ರಕಟಣೆಗಳು ಬರುತ್ತಿದ್ದುವು. ಈಗ ಅಂಥ ಪ್ರಕಟಣೆಗಳು ವಾಹಿನಿಗಳ ಟೆಲಿಫೋನ್‌ ಕರೆಗಳೋ ಅಥವಾ ‘ಪ್ರೋಮೊ’ಗಳೋ ಆದಂತೆ ಕಾಣುತ್ತದೆ.

ಪತ್ರಿಕೋದ್ಯಮ ವೃತ್ತಿ ಜಗತ್ತಿನಲ್ಲಿ ಎರಡನೇ ಅತಿ ಭ್ರಷ್ಟ ವೃತ್ತಿ ಎಂದು ಈಗ ಕುಖ್ಯಾತವಾಗಲು ನಾವು ದಾರಿ ತಪ್ಪಿರುವುದೇ ಕಾರಣವಾಗಿದೆ. ನಾವು ದಾರಿ ತಪ್ಪಿರುವುದು ಈಗ ರಹಸ್ಯವಾಗಿಯೇನೂ ಉಳಿದಿಲ್ಲ. ಈ ರೀತಿ ನಮ್ಮ ವೃತ್ತಿಗೆ ಸೇರಿದವರು ಸಾಲು ಸಾಲಾಗಿ ಒಂದೇ ಸಾರಿ ಜೈಲಿಗೆ ಹೋಗಿ ಬಿಟ್ಟರೆ ಏನು
ಮರ್ಯಾದೆ ಇರುತ್ತದೆ?

ಪತ್ರಿಕೋದ್ಯಮದಲ್ಲಿ ಇರುವವರು ಜನರಿಗೆ ಏನು ಬೇಕು ಎಂದು ಅರ್ಥ ಮಾಡಿಕೊಳ್ಳಲು ಅನೇಕ ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲಿ ಅವರು ಅಂಥ ಯಶಸ್ಸು ಕಂಡಿದ್ದಾರೆ ಎಂದು ಹೇಳಲಾಗದು. ಆದರೆ, ಅಲ್ಲಲ್ಲಿ ಇರುವ ಒಳ್ಳೆಯ ಮಾದರಿಗಳನ್ನು ಮತ್ತು ತನ್ನದೇ ಕೆಲವು ಪ್ರಯೋಗಗಳನ್ನು ಅಳವಡಿಸಿಕೊಂಡು ಪತ್ರಿಕೆಗಳು ಹೊರಗೆ ಬರುತ್ತಿವೆ. ವೃತ್ತಪತ್ರಿಕೆಗಳಲ್ಲಿಯೂ ರೋಚಕತೆ, ಅಪರಾಧ, ಮೂಢನಂಬಿಕೆ ಮತ್ತು ಅಶ್ಲೀಲ ಅಂಶಗಳು ಇದ್ದರೂ ಅಲ್ಲಿ ರೋಚಕತೆಗೆ ಹೆಚ್ಚು ಜಾಗ ಸಿಕ್ಕಿರುವಂತೆ ಕಾಣುತ್ತದೆ. ವಾಹಿನಿಗಳ ಹಾಗೆ ವೃತ್ತಪತ್ರಿಕೆಗಳು ಇನ್ನೂ ಅಷ್ಟು ‘ಮೈಚಳಿ’ ಬಿಟ್ಟಂತೆಯೂ ಕಾಣುವುದಿಲ್ಲ. ಅಶ್ಲೀಲತೆಯನ್ನು ತೋರಿಸಲು ಅಥವಾ ವೈಭವೀಕರಿಸಲು ದೃಶ್ಯ ಮಾಧ್ಯಮಗಳಿಗೆ ಇರುವ ಅವಕಾಶ ವೃತ್ತಪತ್ರಿಕೆಗಳಿಗೆ ಇಲ್ಲದೇ ಇರುವುದೂ ಒಂದು ಅಡಚಣೆ ಆಗಿರಬಹುದು!

ಆದರೆ, ವೃತ್ತಪತ್ರಿಕೆಗಳು ಹೆಸರು ಮಾಡಲು ಹೆಚ್ಚು ಕಾಳಜಿ ವಹಿಸುತ್ತವೆ. ಹೆಸರು ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಅದು ಒಂದು ನಿರಂತರ ತಪಸ್ಸು ಇದ್ದಂತೆ. ಅದು ಸುದ್ದಿಯ ಖಚಿತತೆ ಇರಬಹುದು, ಭಾಷೆಯ ಶಿಷ್ಟತೆ ಇರಬಹುದು, ಸಿಬ್ಬಂದಿಯ ಪ್ರಾಮಾಣಿಕತೆ ಇರಬಹುದು... ಇದನ್ನೆಲ್ಲ ಸಂಸ್ಥೆ ಎಚ್ಚರದಿಂದ ಕಾಪಾಡಿಕೊಂಡು ಬರಬೇಕಾಗುತ್ತದೆ. ಅಂಥ ನಿರಂತರ ಎಚ್ಚರ ಮಾತ್ರ ಅದಕ್ಕೆ ‘ವಿಶ್ವಾಸಾರ್ಹ’ ಎಂಬ ಹೆಸರು ದೊರಕಿಸುತ್ತದೆ. ‘ಬ್ರ್ಯಾಂಡ್‌’ ಎಂದರೆ ಅದು.

ಮಾಧ್ಯಮ ವೃತ್ತಿಯಲ್ಲಿನ ಈಗಿನ ಅಪಭ್ರಂಶಗಳಿಗೆ ವೃತ್ತಿಪರತೆಯ ಕೊರತೆಯೂ ಕಾರಣವಾಗಿರಬಹುದು. ವೃತ್ತಿಪರತೆಯನ್ನು ಕೂಡ ಸಂಸ್ಥೆಯೇ ಪೋಷಿಸಬೇಕಾಗುತ್ತದೆ. ಸಿಬ್ಬಂದಿಯ ವೃತ್ತಿಪರತೆ ಅಂತಿಮವಾಗಿ ಸಂಸ್ಥೆಯ ಹೆಸರಿನ ಕಿರೀಟದಲ್ಲಿನ ಗರಿಯಾಗುತ್ತದೆ.

ಇದುವರೆಗೆ ನಾನು ಕಿರೀಟದಲ್ಲಿನ ಗರಿಗಳು ಉದುರಿ ಬಿದ್ದ ಕಥೆಯನ್ನೇ ಹೇಳಿದ್ದೇನೆ. ಸುರಂಗದ ಕೊನೆಯಲ್ಲಿ ಬೆಳಕು ಇದ್ದೇ ಇರುತ್ತದೆ. ತೀರಾ ಆಕಸ್ಮಿಕ ಆಗಿರಲಾರದು: ಈಗ ಸುರಂಗದ ನಡುವೆಯೇ ಬೆಳಕು ಕಾಣಿಸಿದೆ.

ಛತ್ತೀಸಗಡದ ‘ಐಬಿಸಿ–24’ ಸುದ್ದಿ ವಾಹಿನಿಯಲ್ಲಿ ವಾರ್ತಾವಾಚಕಿಯಾಗಿರುವ ಸುಪ್ರೀತ್‌ ಕೌರ್‌ ಇನ್ನೂ 28ರ ಹರಯದ ಯುವತಿ. ಮದುವೆಯಾಗಿ ಒಂದೇ ವರ್ಷವಾಗಿತ್ತು. ಆಕೆ ಸುದ್ದಿ ಓದುತ್ತಿದ್ದಾಗ ಆ ವಾಹಿನಿಯ ಒಬ್ಬ ವರದಿಗಾರ ಕರೆ ಮಾಡಿ ಭೀಕರ ಅಪಘಾತದ ಒಂದು ಸುದ್ದಿಯನ್ನು ಕೊಡಲು ಆರಂಭಿಸಿದ. ಅವನ ಕರೆಯನ್ನು ತೆಗೆದುಕೊಂಡ ಕೌರ್‌ ಆತನ ಬಾಯಿಯಿಂದ ಸುದ್ದಿಯನ್ನು ಕೇಳಿಸಿಕೊಳ್ಳುತ್ತಿದ್ದಾಗಲೇ ಅದೇ ಅಪಘಾತದಲ್ಲಿ ತನ್ನ ಗಂಡನೂ ಸತ್ತಿರಬಹುದು ಎಂದು ಶಂಕಿಸಿದರು. ಆದರೆ, ಅವರು ಅರ್ಧದಲ್ಲಿಯೇ ಸುದ್ದಿ ಓದುವುದನ್ನು ನಿಲ್ಲಿಸಲಿಲ್ಲ. ಸುದ್ದಿ ಕೊಟ್ಟ ವರದಿಗಾರನಿಗೆ ‘ಧನ್ಯವಾದ’ ಹೇಳಿ ಬಿಕ್ಕುತ್ತ ಹೊರಗೆ ಹೋದರು.

ಇದಕ್ಕಿಂತ ರೋಚಕವಾದ ಸುದ್ದಿ ಇನ್ನೊಂದು ಇರಲು ಸಾಧ್ಯವಿಲ್ಲ. ಆದರೆ, ಅದಕ್ಕಿಂತ ಹೆಚ್ಚಿನ ವೃತ್ತಿಪರತೆ ಇಲ್ಲಿ ಇದೆ. ಸುಪ್ರೀತ್‌ ಕೌರ್‌ ನಮ್ಮ ಮಾಧ್ಯಮದ ಎಲ್ಲ ಯುವ ಪೀಳಿಗೆಗೆ ಒಂದು ಮಾದರಿ, ಅವನತಿಯ ಹಾದಿಯಲ್ಲಿ ಇದೆ ಎನ್ನಿಸಿರುವ ಮಾಧ್ಯಮಕ್ಕೆ ಒಂದು ಆಶಾಕಿರಣ. ಇಂಥವರ ಸಂಖ್ಯೆ ಹೆಚ್ಚಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT