ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಸೂ ಪುರಾಣ

Last Updated 25 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ನಾವು ಹೈಸ್ಕೂಲಿನಲ್ಲಿ ಓದುವಾಗ ನಮಗೊಬ್ಬ ಗೆಳೆಯನಿದ್ದ. ಅವನ ಹೆಸರು ಮೊಹಮ್ಮದ್. ಈತನ ತಂದೆ ಹೆಲ್ತ್ ಇನ್ಸ್‌ಪೆಕ್ಟರ್ ಅರ್ಥಾತ್ ಆರೋಗ್ಯ ಠಾಣಾಧಿಕಾರಿ ಆಗಿದ್ದರು. ತುಂಬಾ ಸ್ಟ್ರಿಕ್ಟ್ ಮನುಷ್ಯ. ಜೊತೆಗೆ ಅಷ್ಟೇ ಸಿಟ್ಟನ್ನೂ ಸಾಕಿಕೊಂಡಿದ್ದರು. ಅವರದು ಅಫಿಶಿಯಲ್ ಕುಟುಂಬ. ಮಾತಾಡಿದರೆ ಬಾಯಿ ಸವಿಯುತ್ತೆ ಅನ್ನುವಷ್ಟು ಅತಿ ಸೂಕ್ಷ್ಮ ಜನ ಅವರು. ಯಾರನ್ನೂ, ಯಾವುದನ್ನೂ ಹೆಚ್ಚಿಗೆ ಹಚ್ಚಿಕೊಳ್ಳುತ್ತಿರಲಿಲ್ಲ. ತಮ್ಮ ಮನೆ ಬಿಟ್ಟು ಎಲ್ಲೂ ಕದಲುತ್ತಿರಲಿಲ್ಲ. ಕರ್ಫ್ಯೂ ಜಾರಿಯಲ್ಲಿರುವ ಊರಿನ ಜನರಂತೆ ಇರುತ್ತಿದ್ದರು. ವರ್ಗವಾಗಿ ನಮ್ಮೂರಿಗೆ ಬಂದ ಅವರು ನಮ್ಮ ಕೇರಿಗಿಂತ ಕೆಳಗಿದ್ದ ಸಭ್ಯಸ್ಥರ ಬೀದಿಯಲ್ಲಿ ಮನೆ ಮಾಡಿದರು.

ನಮ್ಮ ಬೀದಿ ನೋಡಿದ ತಕ್ಷಣವೇ ಇದು ಸಜ್ಜನರ ಜಾಗ ಎಂದು ಗೊತ್ತಾಗಿಬಿಡುತ್ತಿತ್ತು. ಹೀಗಾಗಿ, ನನ್ನ ಗೆಳೆಯ ಅಪ್ಪಿತಪ್ಪಿಯೂ ನಮ್ಮ ಬೀದಿಗಾಗಲಿ, ಅಲ್ಲಿದ್ದ ನನ್ನ ಮನೆಗಾಗಲಿ ಬರುತ್ತಿರಲಿಲ್ಲ. ‘ಆ ಕೇರಿ ಕಡೆ ಹೋಗ್ಬೇಡ. ಗಲೀಜು ಥರ್ಡ್ ಕ್ಲಾಸ್ ಜನ ಇದ್ದಾರೆ’ ಅಂತ ಅವರಪ್ಪ ಎಚ್ಚರಿಕೆ ಕೊಟ್ಟಿದ್ದರು. ನಮ್ಮ ಮನೆಯಲ್ಲಿ ಒಮ್ಮೆ ಹಬ್ಬವಾದಾಗ ಅವನನ್ನು ಎಷ್ಟು ಕರೆದರೂ ಆತ ಬರಲಿಲ್ಲ. ಕೇಳಿದಾಗ ಚಡಪಡಿಸಿ ಬೇಜಾರಾಗಬೇಡ ಎಂದಷ್ಟೇ ಹೇಳಿದ. 

ನಮ್ಮ ಕೇರಿಯ ಹುಡುಗರಿಗೆ ಈ ಅವಮಾನ ಗಳೆಲ್ಲಾ ಮಾಮೂಲಿ. ಇದನ್ನೆಲ್ಲಾ ನಾವು ಅವ ಮಾನ ಎಂದುಕೊಳ್ಳದೆ ನಮ್ಮ ಬೀದಿಯ ಗತ್ತು, ಗೌರವ ಎಂದುಕೊಂಡೆವು. ‘ನಮ್ಮ ಬೀದಿಯ ಜನಾಂದ್ರೆ ಎಲ್ಲಾ ಹೆಂಗ್ ಹೆದರಿ ಸಾಯ್ತಾರೆ. ಹೆಂಗೈತೆ ನಮ್ ಹವಾ’ ಎಂದು ರೌಡಿಗಳ ಥರ ಸಂಭ್ರಮಿಸುತ್ತಿದ್ದೆವು. ರಜಾ ದಿನಗಳಲ್ಲೂ ನಮ್ಮ ಬೀದಿಗೆ ಆಟಕ್ಕೆ ಕರೆದರೆ ಬಾರದ ಮೊಹಮ್ಮದ್ ಮನೇಲೇ ಕೂತು ಅವರಪ್ಪನ ಜೊತೆ ಚೆಸ್, ಕೇರಂ ಆಡುತ್ತಿದ್ದ. ನಮ್ಮ ಥರಾವರಿ ಆಟಗಳ ಬಗ್ಗೆ ಹೇಳುವಾಗ ದುಃಖದಲ್ಲಿ ಹ್ಞೂಗುಟ್ಟುತ್ತಿದ್ದ. ಅವನಿಗೆ ನಮ್ಮ ಜೊತೆ ಬಂದು ಆಡುವ ಅದಮ್ಯ ಆಸೆಯಿದ್ದರೂ ಅವರಪ್ಪ ಅಮ್ಮನ ಕಣ್ಣು ತಪ್ಪಿಸಿ ಬರುವುದು ಅವನಿಗೆ ಇಷ್ಟವಿರಲಿಲ್ಲ. ಸುಳ್ಳು ಹೇಳುವ, ಕಳ್ಳತನ ಮಾಡುವ, ಯಾಮಾರಿಸುವ, ತರಲೆ ಎಬ್ಬಿಸುವ ತುಡುಗುತನದ ನೂರಾರು ವಿದ್ಯೆಗಳನ್ನು ಫ್ರೀಯಾಗಿ ಕಲಿಸಲು ನಾವು ರೆಡಿಯಿದ್ದರೂ ಅವನು ಹೆದರಿ ಒಲ್ಲೆ ಎನ್ನುತ್ತಿದ್ದ. 

ನಮ್ಮ ಬೀದಿಯ ಬೈಗುಳಕ್ಕೆ ಭೂಗೋಳ ಪ್ರಸಿದ್ಧವಾಗಿತ್ತು. ಜಗಳಕ್ಕೆ ಜಗತ್ಪ್ರಸಿದ್ಧವಾಗಿತ್ತು. ಸಂಜೆಯಾದರೆ ಸಂಸ್ಕೃತ, ಪ್ರಾಕೃತ, ಪಾಳಿ, ಕಾಳಿ, ಬೋಳಿ ಭಾಷೆಗಳ ನುಡಿ ಸಂಭ್ರಮದ ಜಾತ್ರೆಯೇ ಅಲ್ಲಿ ಜರುಗುತ್ತಿತ್ತು. ನಾವೂ ಆ ಪದಗಳನ್ನು ಕಲಿತು ಅಷ್ಟೇ ಸಲೀಸಾಗಿ, ಸುಲಲಿತವಾಗಿ ಬಳಸುತ್ತಿದ್ದೆವು. ಶಾಲೆಯಲ್ಲಂತೂ ಕಡ್ಡಾಯವಾಗಿ ಬಳಸುತ್ತಿದ್ದೆವು. ನಮ್ಮ ಈ ಪದಸಂಪತ್ತಿಗೆ ಎಲ್ಲರೂ ಹೆದರಿ ಹೈರಾಣಾಗುತ್ತಿದ್ದರು. ನಮ್ಮ ಕೇರಿಯ ಜನ ತಮ್ಮ ಜಗಳಗಳನ್ನು ಬೀದಿಯಲ್ಲೇ ಪೂರೈಸುತ್ತಿದ್ದರು. ಗಂಡ ಹೆಂಡಿರ ಜಗಳಗಳು, ಚಿಕ್ಕಪುಟ್ಟ ಹೊಡೆದಾಟಗಳು ಟಿ.ವಿ. ಧಾರಾವಾಹಿಯ ಭಾಗಗಳಂತೆ ಸರಿಯಾದ ಸಮಯಕ್ಕೆ ಶುರುವಾಗುತ್ತಿದ್ದವು. ಭಾಷೆಯನ್ನು ಕಲಾತ್ಮಕವಾಗಿ ಬಳಸುವ ನೈಪುಣ್ಯತೆ ನಮಗೆಲ್ಲಾ ಸಿಕ್ಕಿದ್ದು ನಮ್ಮ ಕೇರಿಯಲ್ಲೇನೆ.

ಗೆಳೆಯ ಮೊಹಮ್ಮದನ ಮನೆಯ ನಡವಳಿಕೆ ಗಳಿಗೂ, ನಮ್ಮ ವರ್ತನೆಗಳಿಗೂ ಭೂಮಿ ಆಕಾಶ ದಷ್ಟು ವ್ಯತ್ಯಾಸಗಳಿದ್ದವು. ಬಟ್ಟೆ ಬರೆಯಲ್ಲಂತೂ ಊಹಿಸಲಾಗದಷ್ಟು ತರತಮವಿತ್ತು. ನಾವೆಲ್ಲ್ಲಾ ಬೀದಿ ಸಂದಿಗೊಂದಿಗಳಲ್ಲಿ ಆಡಿ ಬೆಳೆದವರು. ನೋಡುವುದನ್ನೂ ನೋಡಬಾರದನ್ನೂ ನೋಡಿ ದವರು. ಊರ ಜನರಿಂದ ಉಗಿಸಿಕೊಂಡು, ಹೊಡೆತ ತಿಂದು ಗಟ್ಟಿಗೊಂಡವರು. ಮೊಹ ಮ್ಮದ್‌ಗೆ ಇದ್ಯಾವುದರ ಪರಿಚಯವೂ ಇರಲಿಲ್ಲ. ಅವನನ್ನು ಮನೆಯಲ್ಲಿ ಫಾರಂ ಕೋಳಿಯಂತೆ ಸಾಕಿದ್ದರು. ನಾವೋ ಪಕ್ಕಾ ಜವಾರಿ ಕೋಳಿಗಳು.

ಮೊಹಮ್ಮದ್ ಪಾಲಿಗೆ ಅಪ್ಪ ಅಮ್ಮನ ಮಾತುಗಳು ವೇದವಾಕ್ಯ. ರೋಬಾಟಿನಂತೆ ಅವನು ಅವರ ಆಜ್ಞೆ ಪಾಲಿಸುತ್ತಿದ್ದ.  ಶಾಲೆಯಿಂದ ಮನೆಗೆ ಬರುವ ದಾರಿಯಲ್ಲಿ ಅಕಸ್ಮಾತ್ ಸೂಸು ಬಂದರೆ ಅದನ್ನು ಎಲ್ಲೂ ವಿಸರ್ಜಿಸಬೇಡ. ಮನೆಗೇ ಬಂದು ಮಾಡಬೇಕೆಂದು ಅವರಪ್ಪ ತಾಕೀತು ಮಾಡಿದ್ದರು. ಹೀಗಾಗಿ, ಅವನಿಗೆ ಎಷ್ಟೇ ತ್ರಾಸಾದರೂ  ಅದನ್ನು ಬಿಗಿಯಾಗಿ ಅವಿತಿಟ್ಟು ಕೊಂಡು ಮನೆ ತನಕ ಹೊತ್ತು ತರುತ್ತಿದ್ದ. ಈ ವಿಷಯದಲ್ಲಿ ನಮಗೆ ಯಾವ ಭೇದ ಭಾವವೂ ಇರಲಿಲ್ಲ. ಅನುಕೂಲ ಎನಿಸುವ ಜಾಗಗಳಲ್ಲೇ ಇಟ್ಟು ಬಾರಿಸಿ ಬಿಡುತ್ತಿದ್ದೆವು. ಉಚ್ಚೆ ಹೊಯ್ಯೊಕ್ಕೂ ನೀತಿ ನಿಯಮ ಚಾಲ್ತೀಲಿ ಇದೆ ಅನ್ನೋ ಕಠೋರ ಸತ್ಯ ಗೊತ್ತಾಗಿದ್ದೇ ಇವನಿಂದ.

‘ಥೂ... ಹಾಗೆಲ್ಲಾ ಎಲ್ಲೆಂದರಲ್ಲಿ ಅದನ್ನ ಮಾಡಬಾರದೂಂತ ಅಪ್ಪ ಹೇಳಿದ್ದಾರೆ. ಅದನ್ನೆಲ್ಲಾ  ಟಾಯ್ಲೆಟಲ್ಲೇ ಮಾಡಬೇಕಂತೆ’ ಎಂದು ಅವನು ನಮಗೆ ಹೇಳುತ್ತಿದ್ದ ನೀತಿ ಪಾಠ ವಿಚಿತ್ರ ಎನಿಸುತ್ತಿತ್ತು. ಪ್ರಕೃತಿ ನಡುವೆ ಆಚರಿಸಬೇಕಾದ ಘನಂದಾರಿ ಕಾರ್ಯಗಳನ್ನು ಮನೆಯಲ್ಲೇ ಮಾಡಿಕೊಳ್ತೀವಿ ಅನ್ನೋ ಇವರು ಬಲು ಗಬ್ಬು ಜನ ಕಣೋ ಎಂದು ನಾವೆಲ್ಲಾ ಅವನ ಮನೆಯವರ ಬಗ್ಗೆ ಅಸಹ್ಯಪಟ್ಟುಕೊಳ್ಳು ತ್ತಿದ್ದೆವು. ನಮ್ಮೂರಿನಲ್ಲಿರುವ ಅಷ್ಟು ದೊಡ್ಡಕೆರೆ ಕಟ್ಟಿಸಿರುವುದೇ ಈ ಕಲ್ಯಾಣ ಕೆಲಸಕ್ಕಲ್ಲವೇ? ಕೆರೆ ತನಕ ಬೆಳಿಗ್ಗೆ ಎದ್ದು ಬಂದು ಹೋಗಲಾರದ ಇವರು ರಣಹೇಡಿ ಸೋಂಬೇರಿಗಳೇ ಇರಬೇಕು. ಅಂಥ ಅಸಹ್ಯವನ್ನು ಮನೆಯಲ್ಲೇ ಇಟ್ಟುಕೊಳ್ಳುತ್ತಾರೆಂದರೆ ಇವರು ಮನುಷ್ಯರೇ ಅಲ್ಲ ಕಣೋ ಎಂದು ನಾವೆಲ್ಲಾ ಮೂಗು ಮುರಿಯುತ್ತಿದ್ದೆವು. ಇದನ್ನೆಲ್ಲಾ ಒಂದು ಮಹತ್ವ ಸಂಗತಿ ಎಂದು ವಿವರಿಸಲು ಒದ್ದಾಡುತ್ತಿದ್ದ ಮೊಹಮ್ಮದ್ ನಮ್ಮೆದುರು ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದ. ನೀವೆಲ್ಲಾ ಬದುಕ್ತಾ ಇರೋ ರೀತಿನೇ ಸರಿಯಿಲ್ಲ ಕಣೋ ಎಂದು ವಾದಮಾಡಿ ನಾವೇ ಗೆಲ್ಲುತ್ತಿದ್ದೆವು. ನಮ್ಮೆದುರು ಅವನ ಮಾತಿನ ಪುಂಗಿ ಸದ್ದೇ ಮಾಡುತ್ತಿರಲಿಲ್ಲ.  
   
ಅವರಪ್ಪ ಅವನಿಗೊಂದು ಸೈಕಲ್ ಕೊಡಿಸಿದ್ದರು. ಅವನು ದಿನಾ ಅದರಲ್ಲಿ ಶಾಲೆಗೆ ಬರುತ್ತಿದ್ದ. ನಾವೆಷ್ಟೇ ಕಾಡಿ ಬೇಡಿದರೂ ಒಂದು ದಿನವೂ ಸೈಕಲನ್ನು ಕೊಡುತ್ತಿರಲಿಲ್ಲ, ಮುಟ್ಟಲೂ ಬಿಡುತ್ತಿರಲಿಲ್ಲ. ಎಲ್ಲದಕ್ಕೂ ಅಪ್ಪ ಅಮ್ಮನ ವೇದವಾಕ್ಯಗಳನ್ನು ಅಡ್ಡ ಎಳೆದು ತರುತ್ತಿದ್ದ. ಎರಡು ಮೈಲಿ ದೂರದ ಶಾಲೆಗೆ ಅವನ ಸೈಕಲ್ ಜೊತೆ ನಾವು ಸೈನಿಕರಂತೆ ನಡೆದು  ಹೋಗ ಬೇಕಿತ್ತು. ರಾಜ ಅಂಬಾರಿ ಮೇಲೆ ಕೂರುವ ಸ್ಟೈಲಿನಲ್ಲಿ ಅವನು ಕೂತಿರುತ್ತಿದ್ದ. ಈ ದೃಶ್ಯ ನಮ್ಮೊಳಗೆ ಬೆಂಕಿಯಾಗಿ ಉರಿಯುತ್ತಿತ್ತು. ‘ಕಡೇ ಪಕ್ಷ ನಮ್ಮ ಬ್ಯಾಗ್‌ಗಳನ್ನು ಸೈಕಲ್‌ನ ಹಿಂದಿನ ಕ್ಯಾರಿಯೆರ್‌ನಲ್ಲಿ ಇಡ್ತೀವಿ ಕಣೋ’ ಎಂದರೂ ಆ ಬಡ್ಡಿಹೈದ ಒಪ್ಪುತ್ತಿರಲಿಲ್ಲ. ಅವನ ಅಂಬಾರಿ ಮೆರವಣಿಗೆಗೆ ದೂತರಂತೆ ನಾವು ಹೆಜ್ಜೆ ಹಾಕಬೇಕಿತ್ತು. ದಿನಾ ಅವನ ಸೈಕಲ್ ನೋಡುತ್ತಾ ಅದನ್ನೊಂದು ದಿನ ಹೊಡೆಯಬೇಕೆಂಬ ಆಸೆ ಹುಟ್ಟಿಸಿಕೊಳ್ಳುತ್ತಾ ನಡೆಯುತ್ತಿದ್ದೆವು.  

ಒಂದು ದಿನ ಅವನ ಗ್ರಹಚಾರವೋ, ನಮ್ಮ ಪುಣ್ಯವೋ ಗೊತ್ತಿಲ್ಲ. ಶಾಲೆಯ ಹತ್ತಿರ ಸೈಕಲ್ ನಿಲ್ಲಿಸಿದ ಮೊಹಮ್ಮದ್ ಅದಕ್ಕೆ  ಲಾಕ್ ಹಾಕುವು ದನ್ನು ಮರೆತು ಹೋಗಿಬಿಟ್ಟ. ಇದು ಲೀಝರ್ ಬಿಟ್ಟ ಹೊತ್ತಿನಲ್ಲಿ ನಮ್ಮ ಗಮನಕ್ಕೆ ಬಂತು. ಕೀಲಿ ಕೈ ಅದರಲ್ಲೇ ನೇತಾಡುತ್ತಾ ನಮ್ಮನ್ನು ಬೇಗ ಬನ್ರೋ ಎಂದು ಕರೆಯತೊಡಗಿತು.  ಆಗೊಂದು ಪ್ಲಾನ್ ಹೊಸೆದ ನಾವು ಮಧ್ಯಾಹ್ನ ಶಾಲೆಗೆ ಚಕ್ಕರ್ ಕುಕ್ಕಿದೆವು. ಆ ಸೈಕಲನ್ನು ಎತ್ತಿಕೊಂಡು ಮನಸೋ ಇಚ್ಛೆ ಊರೆಲ್ಲಾ ರೌಂಡು ಹಾಕಿದೆವು. ಡಬ್ಬಲ್ ರೇಡ್, ತ್ರಿಬ್ಬಲ್ ರೇಡನ್ನೂ ಮುಗಿಸಿಬಿಟ್ಟೆವು. ಸೇಡು ತೀರಿಸಿಕೊಳ್ಳುವವರಂತೆ ಯರ್ರಾಬಿರ್ರಿ ಓಡಿಸಿದೆವು. ಕೇಕೆ ಹಾಕಿ ಖುಷಿಪಟ್ಟೆವು. ನಮ್ಮ ಯಮ ಭಾರ ಸಹಿಸಲಾಗದ ಅದು ಕೊನೆಗೆ ಢಮಾರೆಂದು ಸದ್ದು ಮಾಡಿ ನಿಂತೇ ಬಿಟ್ಟಿತು. ನೋಡಿದರೆ ಹಿಂದಿನ ಚಕ್ರದ ಟೈರು ಬರ್ಸ್ಟ್ ಆಗಿತ್ತು. ಟೈರ್ ಒಳಗಿದ್ದ ಟ್ಯೂಬು ಸಹ ಕಿತ್ತುಕೊಂಡು ಬಂದು ಕಳ್ಳುಪಚ್ಚಿಯಂತೆ ಹೊರ ಜಗತ್ತಿಗೆ ಮುಖ ಹಾಕಿತ್ತು. ದಾರಿಯಲ್ಲಿ ಆಕ್ಸಿಡೆಂಟ್ ಆಗಿ ಬೀಳುವ ನಾಯಿಯ ಪಾಪಿದೇಹದಂತೆ ಆ ಟೈರ್, ಟೂಬ್‌ಗಳು ಛಿದ್ರವಾಗಿದ್ದವು.  ಗುಂಡಿ, ಗೊಟರೆ ನೋಡದೆ ಚಚ್ಚಿದ ರಭಸಕ್ಕೆ ಅದರ ರಿಮ್ಮೂ ಬೆಂಡಾಗಿ ಹೋಗಿತ್ತು. ತಳ್ಳಿಕೊಂಡು ಹೋಗಲೂ ಸಾಧ್ಯವಾಗದಂತೆ ಚಕ್ರ ತಿರುಚಿ ಹೋಗಿತ್ತು. ಶತಮಾನಗಳ ಸೇಡು ತೀರಿಸಿಕೊಂಡ ನಮಗೆ ಸಂತೋಷವಾಯಿತೇ ವಿನಃ ಸೈಕಲ್ ಸ್ಥಿತಿ ನೋಡಿ ಕಿಂಚಿತ್ತೂ ದುಃಖವಾಗಲಿಲ್ಲ. 
  
ಏನೂ ಗೊತ್ತಿಲ್ಲದವರಂತೆ ಸೈಕಲನ್ನು ತಂದು ಮೂಲ ಜಾಗದಲ್ಲಿ ನಿಲ್ಲಿಸಿದೆವು. ಸಂಜೆ ಮೊಹಮ್ಮದ್ ಸೈಕಲ್‌ಗಾದ ಸ್ಥಿತಿ ನೋಡಿ ಆಘಾತಕ್ಕೊಳಗಾದ. ಆಕಾಶ ಬಿರಿಯುವಂತೆ ಅಬ್ಬಬ್ಬೋ ಎಂದು ಕೂಗಿ ಅಳತೊಡಗಿದ. ಕಳ್ಳ ಕಣ್ಣೀರು ಸುರಿಸುತ್ತಾ ನಾವೇ ಕೈಲಾದ ಸಮಾಧಾನ ಹೇಳಿದೆವು. ಸೈಕಲ್ ಈ ಅಧೋಗತಿಗೆ ತಂದ ನೀಚರನ್ನು ಬೈಯಲು ಅವನಲ್ಲಿ ಬೈಗುಳಗಳೂ ಇರಲಿಲ್ಲ. ಹೀಗಾಗಿ ನಾವೇ ಆ ನೀಚರ ಕೃತ್ಯವನ್ನು ಖಂಡಿಸಿದೆವು. ತೃಪ್ತಿಯಾಗುವಷ್ಟು ಬೈದೆವು. ‘ಹಂಗೆಲ್ಲಾ ಕೆಟ್ಟ ಮಾತು ಬೈಯಬಾರದು. ದೇವರು ಬೈದವರಿಗೆ ಶಿಕ್ಷೆ ಕೊಡುತ್ತಾನೆ. ಬೇಡ ಬೈಬೇಡಿ’ ಎಂದು ಮೊಹಮ್ಮದ್ ನಮಗೇ ಸಮಾಧಾನ ಹೇಳಿದನು. ‘ನೀನು ಹ್ಞೂ ಅನ್ನು.  ಆ ಬಡ್ಡೀಮಕ್ಕಳನ್ನು ಪತ್ತೆ ಹಚ್ಚಿ ಚಚ್ಚಿ ಹಾಕ್ತೀವಿ’ ಎಂದೂ ಆರ್ಭಟಿಸಿದೆವು. ಅಯ್ಯೋ ಮಾರಾ ಮಾರಿ ಬೇಡ ಬಿಡಿ ಎಂದ. ಅವನೇ ಬೇಡ ಎಂದ ಮೇಲೆ ನಮ್ಮದೇನೆಂದು ನಾವು ಸುಮ್ಮನಾಗಿ ಬಿಟ್ಟೆವು. ಮೊಹಮ್ಮದ್ ಅವತ್ತು ಹ್ಞೂ ಎಂದು ಒಂದು ಸನ್ನೆ ಮಾಡಿದ್ದರೂ ಸಾಕಿತ್ತು. ಆ ಸೈಕಲ್ ಕದ್ದವರಿಗೆ ಚಳಿಜ್ವರ ಬಿಡಿಸುತ್ತಿದ್ದೆವು. 
 
ಮೊಹಮ್ಮದ್ ಸೈಕಲ್ಲನ್ನು ಮತ್ತೆ ರೆಡಿ ಮಾಡಿಸಿಕೊಂಡ. ಮೊಹಮ್ಮದ್ ತಾಯಿ ನಮ್ಮನ್ನು ಕರೆದು ನನ್ನ ಮಗನ ಸೈಕಲ್ ಯಾರೋ ದುಷ್ಟರು ಸೇರಿ ಹಾಳು ಮಾಡಿಬಿಟ್ಟಿದ್ದಾರಂತೆ. ಇನ್ಯಾವತ್ತೂ ಹಾಗಾಗದಂತೆ ನೀವೇ ನೋಡಿಕೊಳ್ಳಬೇಕಪ್ಪ. ನನ್ನ ಮಗ ಮುಗ್ಧ. ಅವನ ಸೈಕಲ್ ಯಾರೂ ಮುಟ್ಟದಂತೆ ನೀವೇ ಕಾವಲು ಕಾಯಬೇಕಪ್ಪ. ಎಂದು ನಮಗೇ ಮನವಿ ಸಲ್ಲಿಸಿದರು. ನಾವು ಸಭ್ಯಸ್ಥರಂತೆ ಆಯ್ತೆಂದು ಒಪ್ಪಿಕೊಂಡೆವು.

ಇಷ್ಟರ ನಡುವೆ ಒಂದು ದಿನ ಸಂಜೆ ಶಾಲೆಯಿಂದ ಮನೆಗೆ ವಾಪಸ್ಸು ಬರುತ್ತಿದ್ದೆವು. ಅರ್ಧ ದಾರಿಯಲ್ಲಿ ಮೊಹಮ್ಮದನಿಗೆ  ಅರ್ಜೆಂಟ್ ರೀಸಸ್ ಬಂದು ಬಿಟ್ಟಿತು. ಹೊರಗೆಲ್ಲೂ ಮಾಡಬಾರದು. ಮನೆಗೆ ಬಂದೇ ಪೂರೈಸಬೇಕು ಎಂಬುದು ಅವರಪ್ಪ ವಿಧಿಸಿದ್ದ ಕಟ್ಟಾಜ್ಞೆಯಾಗಿತ್ತು. ಅಪ್ಪನ ಫರ್ಮಾನೇನೋ ಸರಿ. ಆದ್ರೆ, ಮನೆಗೆ ಹೋಗಿ ಚೆಲ್ಲುವಷ್ಟು ಟೈಮ್ ಬೇಕಲ್ಲ. ಅದೇ ಅವನತ್ರ ಆ ದಿನ ಇರಲಿಲ್ಲ. ಮನೆ ಇನ್ನೂ ಒಂದು ಕಿಲೋ ಮೀಟರ್ ದೂರ ಬಿದ್ದಿತ್ತು. ಉಚ್ಚೆ ಕಟ್ಟಿಕೊಂಡ ಸಂಕಟ ತಡೆಯಲಾರದೆ ಅವನು ಸೈಕಲ್ ಮೇಲೆ ಕೂತು ವಿಚಿತ್ರವಾಗಿ ನುಲಿಯ ತೊಡಗಿದ. ಮುಖ ಕಿವಿಚಿಕೊಂಡು ಸನ್ನಿ ಹಿಡಿದವರಂತೆ ಒದ್ದಾಡತೊಡಗಿದ.  ನಾನು ‘ಏನಾಯಿತೋ’ ಎಂದು ಗಾಬರಿಯಿಂದ ವಿಚಾರಿಸಿದೆ. ಹೇಳಿಕೊಳ್ಳಲು ಅವನಿಗೆ ಸಂಕೋಚ. ರೀಸಸ್ ಇಲ್ಲೇ ಮಾಡಬೇಕೋ, ಮನೆಗೆ ಹೋಗಿ ಮಾಡಬೇಕೋ ಎಂಬ ದ್ವಂದದಲ್ಲಿ ಆತ ಸಿಕ್ಕಿಕೊಂಡಿದ್ದ.
ಒಂದು ಸಣ್ಣ ನಿರ್ಧಾರವನ್ನೂ ತೆಗೆದುಕೊಳ್ಳಲಾಗದೆ ಆತ ಚಡಪಡಿಸತೊಡಗಿದ. ಶೌಚದ ಅಂಗಾಂಗಗಳಿಗೆ ಇನ್ನು ಸ್ವಲ್ಪ ಹೊತ್ತು ಸುಮ್ಮನಿರುವಂತೆ ಕಾಡಿಬೇಡಿ ಕೊಳ್ಳುತ್ತಿದ್ದ. ಅವ್ಯಾವೂ ಇವನ ಮಾತನ್ನು ಕೇಳುವ ಸ್ಥಿತಿಯಲ್ಲೇ ಇರಲಿಲ್ಲ. ಬಂಡಾಯಕ್ಕೆ ಇಳಿದಿದ್ದವು. ಮೊದಲು ಹನಿಹನಿಯಾಗಿ ಸೋರ ತೊಡಗಿದ ರೀಸಸ್ ಕೊನೆಗೆ ವೇಗ ಹೆಚ್ಚಿಸಿಕೊಳ್ಳ ತೊಡಗಿತು. ನೋಡು ನೋಡುತ್ತಿದ್ದಂತೆ ಚಡ್ಡಿಯ ಅರ್ಧ ಭಾಗ ಒದ್ದೆಯಾಗಿ ಹೋಗಿತ್ತು.

ಸೈಕಲ್ ನಿಲ್ಲಿಸಿದವನೇ, ಅವಸರವಾಗಿ ಆತ ಬೇಲಿ ಸಾಲಿನ ಕಡೆ ಓಡತೊಡಗಿದ. ದಾರಿ ಉದ್ದಕ್ಕೂ ಜಲಧಾರೆ ಬೀಳುತ್ತಲೇ ಇತ್ತು. ಅವನು ಹೋಗಿ ಕೂತು ಕಾರ್ಯಕ್ಕೆ ಸಿದ್ಧನಾಗುವವರೆಗೂ ನಿಲ್ಲುವಷ್ಟು ತಾಳ್ಮೆ ಆ ರೀಸಸ್‌ಗೆ ಇದ್ದಂತೆ ಕಾಣಲಿಲ್ಲ. ಯಾರ ಮಾನ ಕಳೆಯುತ್ತಿದ್ದೇನೆ ಎಂಬ ಪ್ರಜ್ಞೆಯೂ ಅದಕ್ಕಿರಲಿಲ್ಲ. ಅವನ ಫಜೀತಿ ಕಂಡು ನಾವೆಲ್ಲಾ ಬಿದ್ದು ಬಿದ್ದು ನಕ್ಕೆವು. ತನ್ನ ಮರ್ಯಾದೆ ಹೋಯಿತೆಂದು ಆತ ಗಡಗಡ ನಡುಗುತ್ತಿದ್ದ. ಇಷ್ಟೊಂದು ಸಲೀಸಾದ ಕೆಲಸಕ್ಕೂ ಇವನು ಈ ಪರಿ ತಿಣುಕಾಡುವುದು ನಮಗೆ ಸೋಜಿಗವಾಗಿ ಕಂಡಿತು. ರೀಸಸ್ಸನ್ನೂ ಮನೆಯಿಂದ ಹೊರಗೆ ಮಾಡುವಷ್ಟು ಸಣ್ಣ ಸ್ವಾತಂತ್ರ್ಯವೂ ಅವನಿಗಿರಲಿಲ್ಲ. ಕೈ ಕಾಲು ಜಜ್ಜಿ ರಕ್ತ ಹೋದರೂ ನಾವು ಹೆದರು ವುದಿಲ್ಲ. ಅಂಥದ್ದರಲ್ಲಿ ಬರಿ ರೀಸಸ್ ಹರಿದು ಹೋಗಿದ್ದಕ್ಕೆ ಇವನು ಅಳುತ್ತಿದ್ದಾನಲ್ಲ! ಎಂದು ಒಳಗೊಳಗೆ ನಗುತ್ತಾ ಸಮಾಧಾನ ಹೇಳಿದೆವು.

ಇಷ್ಟು ಸಣ್ಣ ವಿಷಯಕ್ಕೇ ಆತ ಹೆದರಿ ಹೋಗಿದ್ದ. ‘ಪ್ಲೀಸ್ ಇದನ್ಯಾರಿಗೂ ಶಾಲೆಯಲ್ಲಿ ಹೇಳಬೇಡ್ರಿ ಕಂಡ್ರೋ ನಿಮಗೆ ಕೈ ಮುಗೀತೀನಿ’ ಎಂದು ಕರುಣಾಜನಕವಾಗಿ ಆತ ಬೇಡಿಕೊಂಡ. ‘ನಿನ್ ರೀಸಸ್ ನೀನ್ ಚೆಲ್ಲಿಕೊಂಡೆ ಅಷ್ಟೆ. ಬಟ್ಟೇನೂ ನಿಂದೆ. ರೀಸಸ್ಸೂ ನಿಂದೆ. ಅದರಲ್ಲಿ ಎಲ್ಲರಿಗೂ ಹೇಳೋವಂಥದ್ದು ಏನಿದೆ ಬಿಡಲೇ’ ಎಂದು ಓಂಕಾರಿ ನ್ಯಾಯಾಧೀಶನಂತೆ ಸಮಾಧಾನ ಹೇಳಿದ. ‘ಆದ್ರೂ ಇದು ಫ್ರೆಂಡ್ಸ್  ಮರ್ವಾದಿ ವಿಷಯ. ಯಾರೂ ಯಾರ್‍್ಗೂ ಹೇಳ್ಬೇಡ್ರಿ ಕಂಡ್ರೋ. ಪ್ರಾಮಿಸ್ ಮಾಡಿ’ ಎಂದು ಎಲ್ಲರೂ ಕೈಮೇಲೆ ಕೈಯಿಟ್ಟು ಪ್ರಾಮಿಸ್ ಮಾಡಿ ಕೊಂಡೆವು. ನಮ್ಮ ಕೈಗಳ ನಡುವೆ ತಾನೂ ಭಾಷೆ ಪಡೆಯಲು ಆತ ತನ್ನ ಕೈ ತೂರಿಸಲು ಬಂದ. ಸೂಸುನಲ್ಲಿ ನೆಂದ ಕೈ ಬೇಡ ಬಿಡು ಎಂದು ನಿರಾಕರಿಸಿದೆವು. ಪ್ರಾಮಿಸನ್ನು ಅಪ್ಪಿತ ಪ್ಪಿಯೂ ಪಾಲಿಸುವ ಗೋಜಿಗೆ ಹೋಗಲಿಲ್ಲ. ಮಾರನೆಯ ದಿನ ನಮ್ಮ ಶಕ್ತಿ ಮೀರಿ ಶಾಲೆ ಯಲ್ಲಿದ್ದ ಕಿವಿಗಳಿ ಗೆಲ್ಲಾ ಪಿಸುಪಿಸು ಮಾತಿನಲ್ಲಿ ಮುಟ್ಟಿಸಿದೆವು. ಕೇಳಿದ ಎಲ್ಲರೂ ಬಿದ್ದೂ ಬಿದ್ದೂ ನಕ್ಕರು. ನಾಚಿಕೆಯಿಂದ ಕುಗ್ಗಿ ಹೋದ ಮೊಹಮ್ಮದ್ ಒಂದು ವಾರ ಸ್ಕೂಲಿಗೆ ರಜ ಹಾಕಿ ಬಿಟ್ಟ. 

ವಾರ ಬಿಟ್ಟು ಸಿಕ್ಕಾಗ ಮುನಿಸಿಕೊಂಡಿದ್ದ. ‘ನಿಮ್ಮಂಥ ಬೀದಿ ಹುಡುಗರ ದೋಸ್ತಿ ಮಾಡಿ ಮರ್ಯಾದೆ ಕಳೆದುಕೊಂಡೆ’ ಎಂದು ಗೊಣಗಿದ. ಅವನ ಮಾನವನ್ನು ಶಾಲೆಯಲ್ಲಿ ಹರಾಜು ಹಾಕಿದ ನನಗೂ ನನ್ನ ಗೆಳೆಯರಿಗೂ ಅವರಪ್ಪ ಹಿಡಿದು ತದುಕಲು ಹುಡುಕುತ್ತಿದ್ದಾರೆ ಎಂದೂ ಹೇಳಿದ. ನೀನು ರೀಸಸ್ ತಡೆ ಹಿಡಿಯಲು ನಿಮ್ಮಪ್ಪನ ಮಾತೇ ಕಾರಣ ಅಲ್ಲವೇನೋ? ಬ್ಯಾಡವಾದ ರೂಲ್ಸು ಮಾಡಿಟ್ಟ ನಿಮ್ಮಪ್ಪಂದೇ ಫಾಲ್ಟು ಅಲ್ಲವೇನೋ.  ಅದನ್ನೆಲ್ಲಾ ಬಿಟ್ಟು ನಮಗ್ಯಾಕೆ ಹೊಡೀತಾರಂತೆ. ದಂ ಇದ್ರೆ ಬರಲಿ ನಮ್ ಬೀದಿಗೆ ಎಂದು ಜೋರು ಜಡಿದೆವು. 

ಪುಸ್ತಕ ಬೈಂಡ್ ಮಾಡಿ ಇಟ್ಕೋಬೇಕು. ದಿನವೂ ಸ್ನಾನ ಮಾಡಬೇಕು, ಶುದ್ಧವಾಗಿರಬೇಕು ಅನ್ನೋ ಬಹಳಷ್ಟು ವಿಷಯಗಳನ್ನು ನಮಗೆ ಮೊದಲು ಕಲಿಸಿದವನೇ ಮೊಹಮ್ಮದ್. ಬಟ್ಟೆ ಒಗೆಯೋಕೂ, ತಲೆ ಸ್ನಾನಕ್ಕೂ ಒಂದೇ ಸೋಪು ಬಳಸುತ್ತಿದ್ದ ನಮಗೆ ಅವೆರಡೂ ಬೇರೆ ಬೇರೆ ಎಂದು ತೋರಿಸಿಕೊಟ್ಟವನು ಇವನೇನೆ. ಅಂಥ ಮುಗ್ಧನನ್ನು ಮೊದಮೊದಲು ಗೋಳಾಕಿಕೊಂಡ ನಾವು ಕೊನೆಗೆ ಸಾರಾಸಗಟು ಸಾರಿ ಕೇಳಿ ಅವನ ಸ್ನೇಹವನ್ನು ಮರಳಿ ಗಳಿಸಿಕೊಂಡೆವು. ಕೊನೆ ಕೊನೆಗೆ ನಮ್ಮನ್ನೇ ಆಟವಾಡಿಸುವಷ್ಟು ಚಾಣಾಕ್ಷ್ಯ ಅವನಾಗಿ ಹೋದ. ಅಪರೂಪಕ್ಕೆ ನಾವೆಲ್ಲಾ ಈಗ ಸೇರಿದಾಗ ಈ ಚಿಲ್ಲರೆ ನೆನಪುಗಳೇ ಬಂಗಾರದ ಮೌಲ್ಯ ಪಡೆದು ಕಾಡಿಸುತ್ತವೆ. ಓ.. ಬಾಲ್ಯವೇ ಒಮ್ಮೆ ಸಾಧ್ಯವಾದರೆ ಮರಳಿ ಬರುವೆಯಾ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT