ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಲ್ಫೀ ವ್ಯಸನಿಗಳಿಗಾಗಿ ನೋಕಿಯಾ ಲುಮಿಯಾ 730

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಮೊಬೈಲ್ ಫೋನ್ ಕಾರ್ಯಾಚರಣ ವ್ಯವಸ್ಥೆಗಳಲ್ಲಿ (operating system) ಮೈಕ್ರೋಸಾಫ್ಟ್ ವಿಂಡೋಸ್ ಫೋನ್ ಈಗ ಎರಡನೇ ಸ್ಥಾನಕ್ಕೆ ತಲುಪಿದೆ. ಮೊದಲನೇ ಸ್ಥಾನದಲ್ಲಿ ಆಂಡ್ರಾಯಿಡ್ ಇದೆ. ವಿಂಡೋಸ್ ಫೋನ್ ಮೇಲಕ್ಕೇರಲು ಪ್ರಮುಖ ಕಾರಣ ನೋಕಿಯಾ ಫೋನ್‌ಗಳು ಅದನ್ನು ಬಳಸುತ್ತಿರುವುದು. ಈಗಂತೂ ನೋಕಿಯಾ ಕಂಪೆನಿಯನ್ನೇ ಮೈಕ್ರೊಸಾಫ್ಟ್ ಕೊಂಡುಕೊಂಡಿದೆ. ಮೈಕ್ರೋಸಾಫ್ಟ್‌ನವರು ನೋಕಿಯಾ ಹೆಸರನ್ನು ಕೈಬಿಟ್ಟು ಕೇವಲ ಮೈಕ್ರೋಸಾಫ್ಟ್ ಲುಮಿಯಾ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಫೋನ್ ಈಗಷ್ಟೆ ಬಂದಿದೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಮಾತ್ರ ನೋಕಿಯಾ ಲುಮಿಯಾ 730 (Nokia Lumia 730).

ಗುಣವೈಶಿಷ್ಟ್ಯಗಳು
1.2 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಪ್ರೊಸೆಸರ್ (Quad core Snapdragon 400), ಆಡ್ರಿನೊ ಗ್ರಾಫಿಕ್ಸ್ ಪ್ರೊಸೆಸರ್,
1 + 8 ಗಿಗಾಬೈಟ್ ಮೆಮೊರಿ, 128 ಗಿಗಾಬೈಟ್ ತನಕ ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಸೌಲಭ್ಯ, 1280 x 720 ಪಿಕ್ಸೆಲ್ ರೆಸೊಲೂಶನ್ನಿನ 4.7 ಇಂಚು ಗಾತ್ರದ OLED ಪರದೆ, ಗೊರಿಲ್ಲ ಗಾಜು, 6.7 ಮೆಗಾಪಿಕ್ಸೆಲ್ ರೆಸೊಲೂಶನ್ನಿನ ಪ್ರಾಥಮಿಕ ಮತ್ತು 5 ಮೆಗಾಪಿಕ್ಸೆಲ್‌ನ ಇನ್ನೊಂದು ಎದರುಗಡೆಯ ಕ್ಯಾಮೆರಾ, ಎಲ್ಇಡಿ ಫ್ಲಾಶ್, ಎರಡು ಮೈಕ್ರೋಸಿಮ್, 2ಜಿ ಮತ್ತು 3ಜಿ, ಎಫ್ಎಂ ರೇಡಿಯೊ, ವೈಫೈ, ಬ್ಲೂಟೂತ್, ಜಿಪಿಎಸ್, ಎಕ್ಸೆಲರೋಮೀಟರ್, 134.7 x 68.5 x 8.7 ಮಿ.ಮೀ. ಗಾತ್ರ, 130 ಗ್ರಾಂ ತೂಕ, 2200 mAh ಶಕ್ತಿಯ ಬ್ಯಾಟರಿ, ಇತ್ಯಾದಿ. ಮಾರುಕಟ್ಟೆ ಬೆಲೆ ₹15,000.

ಎಲ್ಲ ಲುಮಿಯಾ ಫೋನ್‌ಗಳಂತೆ ಇದರ ದೇಹರಚನೆ ಮತ್ತು ವಿನ್ಯಾಸ ತುಂಬಾ ಚೆನ್ನಾಗಿದೆ. ಕೈಯಲ್ಲಿ ಹಿಡಿಯುವ ಮತ್ತು ಬಳಸುವ ಅನುಭವವೂ ಚೆನ್ನಾಗಿಯೇ ಇದೆ. ಇತರೆ ಲುಮಿಯಾ ಫೋನ್‌ಗಳಿಗೆ ಹೋಲಿಸಿದರೆ ಇದು ತೆಳ್ಳಗಾಗಿದೆ. ಅತ್ತ ಚಿಕ್ಕದೂ ಅಲ್ಲದ, ಇತ್ತ ಅತಿ ದೊಡ್ಡದೂ ಅಲ್ಲದ ಮಧ್ಯಮ ಗಾತ್ರದ್ದು. ಒಂದು ಕೈಯಲ್ಲಿ ಹಿಡಿದು ಬಳಸಬಹುದು. ಬಲದ ಬದಿಯಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಕೆಳಭಾಗದಲ್ಲಿ ಎಲ್ಲ ವಿಂಡೋಸ್ ಫೋನ್‌ಗಳಲ್ಲಿರುವಂತೆ ಮೂರು ಸಾಫ್ಟ್‌ಬಟನ್‌ಗಳಿವೆ. ಫೋನಿನ ಹಿಂಭಾಗದ ಕವಚ ತೆಗೆಯಬಹುದು. ತೆಗೆದು ಬೇರೆ ಬಣ್ಣದ ಕವಚ ಹಾಕಿಕೊಳ್ಳಬಹುದು. ಹಿಂದಿನ ಕವಚ ತೆಗೆದಾಗ ಸಿಮ್‌ ಕಾರ್ಡ್‌ ಹಾಕುವ ಜಾಗ, ಮೆಮೊರಿ ಕಾರ್ಡ್‌ ಹಾಕುವ ಜಾಗ, ಬ್ಯಾಟರಿ ಎಲ್ಲ ಕಾಣಿಸುತ್ತವೆ. ಬ್ಯಾಟರಿ ತೆಗೆಯಬಹುದು ಮತ್ತು ಬದಲಾಯಿಸಬಹುದು. ಒಟ್ಟಿನಲ್ಲಿ ರಚನೆ ಮತ್ತು ವಿನ್ಯಾಸಕ್ಕೆ ಪೂರ್ತಿ ಮಾರ್ಕು ನೀಡಬಹುದು. 

ಇದು ಬಳಸುವ ಪ್ರೊಸೆಸರ್ ಮತ್ತು ಇದರಲ್ಲಿ ಇರುವ ಮೆಮೊರಿ ಹೇಳಿಕೊಳ್ಳುವಂತೇನೂ ಇಲ್ಲ. ಆದರೆ ವಿಂಡೋಸ್ ಫೋನಿನ ವೈಶಿಷ್ಟ್ಯ ಇರುವುದೇ ಇಲ್ಲಿ. ಕಡಿಮೆ ಮೆಮೊರಿ ಅಥವಾ ಕಡಿಮೆ ಶಕ್ತಿಯ ಪ್ರೊಸೆಸರ್ ಆದರೂ ಅದು ಕುಂಠಿತವಾಗದೆ ಕೆಲಸ ಮಾಡುತ್ತದೆ. ಅಂತೆಯೇ ಈ ಫೋನ್ ಕೂಡ ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ಕೆಲಸ ಮಾಡುತ್ತದೆ. ವಿಡಿಯೊ ವೀಕ್ಷಣೆ ಚೆನ್ನಾಗಿದೆ. ಅರ್ಧ ಹೈಡೆಫಿನಿಶನ್ ಪರದೆ ಆಗಿದ್ದರೂ ಪೂರ್ತಿ ಹೈಡೆಫಿನಿಶನ್ ವಿಡಿಯೊ ವೀಕ್ಷಣೆ ಮಾಡಬಹುದು. ತುಂಬ ದೊಡ್ಡದಲ್ಲದ ಪರದೆ ಆದ ಕಾರಣ ರೆಸೊಲೂಶನ್ ಸ್ವಲ್ಪ ಕಡಿಮೆಯಾಯಿತು ಎಂದೇನೂ ಅನ್ನಿಸುವುದಿಲ್ಲ. 4k ರೆಸೊಲೂಶನ್‌ನ (ಅಲ್ಟ್ರಾ ಹೈಡೆಫಿನಿಶನ್) ವಿಡಿಯೊ ವೀಕ್ಷಣೆ ಮಾತ್ರ ಸರಿಯಾಗಿ ಆಗುವುದಿಲ್ಲ. ಈ ಫೋನಿನ ಆಡಿಯೊ ಇಂಜಿನ್ ಪರವಾಗಿಲ್ಲ. ಅತ್ಯಂತ ಮೇಲ್ಮಟ್ಟದ್ದಲ್ಲದಿದ್ದರೂ ಕಳಪೆಯಾಗೇನೂ ಇಲ್ಲ. ಜೊತೆಯಲ್ಲಿ ನೀಡಿರುವ ಇಯರ್‌ಫೋನ್ ಮಾತ್ರ ಚೆನ್ನಾಗಿಲ್ಲ. ಉತ್ತಮ ಇಯರ್‌ ಫೋನ್‌ ಜೋಡಿಸಿದರೆ ಸಂಗೀತ ಆಲಿಸುವ ಅನುಭವ ಚೆನ್ನಾಗಿದೆ.

ಈಗ ಈ ಫೋನಿನ ಪ್ರಮುಖ ಆಕರ್ಷಣೆ ಬಗ್ಗೆ ಮಾತನಾಡೋಣ. ಅದುವೇ ಇದರ ಕ್ಯಾಮೆರಾ. ಮುಂದುಗಡೆಯ ಕ್ಯಾಮೆರಾ 6.7 ಮೆಗಾಪಿಕ್ಸೆಲ್ ಆದರೂ ಫಲಿತಾಂಶ ಚೆನ್ನಾಗಿಯೇ ಇದೆ. ಎಲ್ಇಡಿ ಫ್ಲಾಶ್ ಇದೆ. ಹೈಡೆಫಿನಿಶನ್‌ ವಿಡಿಯೊ ಚಿತ್ರೀಕರಣ ಮಾಡಬಹುದು. ಅತಿ ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೊ ಮೂಡಿಬರುತ್ತದೆ. ಇದಕ್ಕೆಲ್ಲ ಕಾರಣ ಇದು ಬಳಸುವ f/2.4 ಕಾರ್ಲ್ ಝೀಸ್ ಲೆನ್ಸ್. ಇವಕ್ಕಿಂತಲೂ ಇದರ ಪ್ರಮುಖ ಹೆಚ್ಚುಗಾರಿಕೆ ಇರುವುದು ಇದರ 5 ಮೆಗಾಪಿಕ್ಸೆಲ್‌ನ ಎದುರುಗಡೆಯ ಕ್ಯಾಮೆರಾದಲ್ಲಿ. ಸಾಮಾನ್ಯವಾಗಿ ಎಲ್ಲ ಫೋನ್‌ಗಳಲ್ಲಿ ಈ ಕ್ಯಾಮೆರಾ ಇಷ್ಟು ಹೆಚ್ಚು ಮೆಗಾಪಿಕ್ಸೆಲ್ ಇರುವುದಿಲ್ಲ ಮತ್ತು ಇದ್ದರೂ ಈ ಗುಣಮಟ್ಟದ ಕ್ಯಾಮೆರಾ ಇರುವ ಫೋನ್ ಕೆಲವೇ ಕೆಲವು ಇರಬಹುದಷ್ಟೆ. ಆದುದರಿಂದಲೇ ಈ ಫೋನನ್ನು ನೋಕಿಯಾ (ಈಗ ಮೈಕ್ರೋಸಾಫ್ಟ್) ಸೆಲ್ಫೀ ಫೋನ್ ಎಂದೇ ಪ್ರಚಲಿತಗೊಳಿಸಿದ್ದಾರೆ. ಈ ಕ್ಯಾಮೆರಾದಲ್ಲೂ ಹೈಡೆಫಿನಿಶನ್ ವಿಡಿಯೊ ಚಿತ್ರೀಕರಣ ಮಾಡಬಹುದು. ನಿಮ್ಮದೇ ಉತ್ತಮ ಫೋಟೊ ಅಥವಾ ವಿಡಿಯೊ ಮಾಡಬೇಕಾಗಿದ್ದರೆ ಈ ಫೋನ್ ನಿಮಗಾಗಿ. ಇತರೆ ಪ್ರಮುಖ ಲುಮಿಯಾ ಫೋನ್‌ಗಳಂತೆ ಇದರಲ್ಲಿ ಪ್ರತ್ಯೇಕ ಕ್ಯಾಮೆರಾ ಬಟನ್ ಇಲ್ಲ. ಇದೊಂದು ಪ್ರಮುಖ ಕೊರತೆಯೇ.

ಈ ಫೋನಿನ ಬ್ಯಾಟರಿ ಬಳಕೆ ತುಂಬ ಚೆನ್ನಾಗಿದೆ. ಒಂದೂವರೆ ಅಥವಾ ಎರಡು ದಿನ ಪೂರ್ತಿ ಬಾಳಿಕೆ ಬರುತ್ತದೆ. ಇದಕ್ಕೆ ಕಾರಣ ಇದರ ಓಎಲ್ಇಡಿ ಪರದೆ. ಇದು ಅತಿ ಕಡಿಮೆ ವಿದ್ಯುತ್ ಬಳಸುತ್ತದೆ. ಈ ಪರದೆಯ ಇನ್ನೂ ಒಂದು ಹೆಚ್ಚುಗಾರಿಕೆ ಇದೆ. ಬಿಸಿಲಿನಲ್ಲೂ ಪರದೆ ಚೆನ್ನಾಗಿ ಕಾಣಿಸುತ್ತದೆ.

ಈ ಫೋನ್ ಬಳಸುವುದು ವಿಂಡೋಸ್ ಫೋನ್ 8.1. ಆದುದರಿಂದ ಇದರಲ್ಲಿ ಕನ್ನಡ ಪಠ್ಯದ ತೋರುವಿಕೆ (ರೆಂಡರಿಂಗ್) ಇದೆ. ಆದರೆ ಕನ್ನಡದ ಪಠ್ಯವನ್ನು ಊಡಿಸಲು (ಇನ್‌ಪುಟ್) ಯಾವುದೇ ಕೀಲಿಮಣೆ (ಕೀಬೋರ್ಡ್) ತಂತ್ರಾಂಶ ಇಲ್ಲ. ಮೈಕ್ರೋಸಾಫ್ಟ್‌ನವರು ಈ ವಿಷಯದಲ್ಲಿ ಯಾಕೆ ಕನ್ನಡದ ಬಗ್ಗೆ ತಾತ್ಸಾರ ತೋರಿಸುತ್ತಿದ್ದಾರೆಯೋ ಗೊತ್ತಾಗುತ್ತಿಲ್ಲ. ಪ್ರತಿ ಸಲ ಕೇಳಿದಾಗಲೂ ಸದ್ಯದಲ್ಲೇ ಬರಲಿದೆ ಎಂಬ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. TypeKannada ಎಂಬ ಆಪ್ ಹಾಕಿಕೊಂಡು ಅದರಲ್ಲಿ ಕನ್ನಡ ಟೈಪ್ ಮಾಡಿ ಅದನ್ನು ನಕಲು ಮಾಡಿ ನಿಮಗೆ ಬೇಕಾದ ಕಡೆ (ಉದಾ: ಫೇಸ್‌ಬುಕ್) ಅಂಟಿಸಬೇಕು (copy and paste). ಇದು ಸದ್ಯಕ್ಕೆ ಎಲ್ಲ ವಿಂಡೋಸ್ ಫೋನ್‌ಗಳ ಹಣೆಬರಹ. ಕನ್ನಡ ನಮಗೆ ಬೇಕೇ ಬೇಕು ಎಂದು ಒತ್ತಾಯಪೂರ್ವಕ ಕೇಳದ ನಿರಭಿಮಾನಿ ಕನ್ನಡಿಗರೇ ಈ ದುರವಸ್ತೆಗೆ ಕಾರಣ.

8 ಮತ್ತು 8.1 ಆವೃತ್ತಿಯ ಎಲ್ಲ ವಿಂಡೋಸ್‌ ಫೋನ್‌ಗಳಿಗೆ ವಿಂಡೋಸ್ ಫೋನ್ 10ಕ್ಕೆ ನವೀಕರಣವನ್ನು ನೀಡುತ್ತೇವೆ ಎಂದು ಮೈಕ್ರೋಸಾಫ್ಟ್‌ ಹೇಳಿಕೆ ನೀಡಿದೆ. ಅದರಲ್ಲಿ ಕನ್ನಡದ ಕೀಲಿಮಣೆ ಇರುವ ಸಾಧ್ಯತೆಗಳಿವೆ. ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ. 

ವಾರದ ಆಪ್ (app)
ಫೋಟೊಮ್ಯಾತ್  

ಇದು  (PhotoMath) ವಿಂಡೋಸ್ ಫೋನ್‌ನಲ್ಲಿ ಕೆಲಸ ಮಾಡುವ ಕಿರುತಂತ್ರಾಂಶ. ಗಣಿತದ ಸಮಸ್ಯೆಗಳನ್ನು ಫೋನಿನ ಕ್ಯಾಮೆರಾದ ಮುಂದೆ ಹಿಡಿದರೆ ಈ ಆಪ್ ಅದನ್ನು ಬಿಡಿಸಿ ಉತ್ತರ ನೀಡುತ್ತದೆ! ಹಾಗೆಂದು ಅತಿ ಕ್ಲಿಷ್ಟವಾದ ಸಮಸ್ಯೆಗಳನ್ನು ಇದು ಪರಿಹರಿಸುವುದಿಲ್ಲ. ಸರಳವಾದ ಬೀಜಗಣಿತದ ಸಮಸ್ಯೆಗಳನ್ನು ಪರಿಹರಿಸುತ್ತದೆ. ಮುದ್ರಿಸಿದ ಪಠ್ಯವನ್ನು ಮಾತ್ರ ಇದು ಅರ್ಥ ಮಾಡಿಕೊಳ್ಳುತ್ತದೆ. ನಿಮ್ಮ ಮಕ್ಕಳಿಗೆ ಶಾಲೆಯ ಪಠ್ಯಪುಸ್ತಕದಲ್ಲಿ ನೀಡಿದ ಸಮಸ್ಯೆ ಅಥವಾ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿದ್ದ ಪ್ರಶ್ನೆಯನ್ನು ಇದಕ್ಕೆ ಊಡಿಸಿ ಉತ್ತರ ಕಂಡುಕೊಂಡು ನಿಮ್ಮ ಮಕ್ಕಳು ನೀಡಿದ ಉತ್ತರದೊಡನೆ ತಾಳೆ ಮಾಡಿ ನೋಡಬಹುದು.

ಗ್ಯಾಜೆಟ್ ಸುದ್ದಿ
ನೋಕಿಯಾಗೆ ಶ್ರದ್ಧಾಂಜಲಿ

ಒಂದು ಕಾಲ ಇತ್ತು. ಫೋನ್ ಎಂದರೆ ನೋಕಿಯಾ ಆಗಿತ್ತು. ಸ್ಮಾರ್ಟ್‌ಫೋನ್‌ ಯುಗದಲ್ಲಿ ನೋಕಿಯಾಗೆ ಮಾರುಕಟ್ಟೆಯ ಪೈಪೋಟಿಯಲ್ಲಿ ಗೆಲ್ಲಲಾಗಲಿಲ್ಲ. ಕೊನೆಗೊಮ್ಮೆ ನೋಕಿಯಾ ಕಂಪೆನಿಯ ಮೊಬೈಲ್ ಫೋನ್ ವಿಭಾಗವನ್ನು ಮೈಕ್ರೋಸಾಫ್ಟ್‌ಗೆ ಮಾರಬೇಕಾಗಿ ಬಂತು. ಈಗ ಮೈಕ್ರೋಸಾಫ್ಟ್ ಕಂಪೆನಿ ನೋಕಿಯಾ ಹೆಸರನ್ನು ಕೈಬಿಟ್ಟು ಮೈಕ್ರೋಸಾಫ್ಟ್‌ ಲುಮಿಯಾ ಹೆಸರಿನಲ್ಲಿ ಸ್ಮಾರ್ಟ್‌ಫೋನ್‌ ತಯಾರಿಸಲು ಪ್ರಾರಂಭಿಸಿದೆ. ನೋಕಿಯಾ ಕಂಪೆನಿಯು ಇನ್ನು ಮುಂದೆ ಸ್ಮಾರ್ಟ್‌ ಫೋನ್‌ ಅಲ್ಲದ ಸಾಧಾರಣ ಫೋನ್ ತಯಾರಿಸುವುದಿಲ್ಲ ಎಂದು ಘೋಷಿಸಿದೆ. ಅಲ್ಲಿಗೆ ಒಂದು ಕಾಲದಲ್ಲಿ ಫೋನ್ ಎಂದರೆ ನೋಕಿಯಾ ಎಂಬ ಮಾತಿಗೆ ಕೊನೆ ಆದಂತೆ. ಅದಕ್ಕಾಗಿ ಒಂದು ತೊಟ್ಟು ಕಣ್ಣೀರು ಸುರಿಸಿ ನೋಕಿಯಾ ಮೊಬೈಲ್ ಫೋನಿಗೆ ಶ್ರದ್ಧಾಂಜಲಿ ಅರ್ಪಿಸಿ.

ಗ್ಯಾಜೆಟ್ ತರ್ಲೆ
ಗೂಗಲ್ ಅನುವಾದದ ಅವಾಂತರಗಳ ಪಟ್ಟಿ ಬೆಳೆಯುತ್ತಲೇ ಇದೆ. ಇತ್ತೀಚೆಗೆ ಬೆಂಗಳೂರು ಮಹಾನಗರ ಪಾಲಿಕೆಯವರು ಒಂದು ಫಲಕ ಹಾಕಿದ್ದರು. ಅದರಲ್ಲಿ ಹೀಗೆಂದು ಬರೆದಿತ್ತು –‘ಇಲ್ಲಿ ಮೂತ್ರ ತೇರ್ಗಡೆ ಹೊಂದಿಲ್ಲ’. ಇದು ಏನೆಂದು ಹಲವರು ತಲೆ ಕೆಡಿಸಿಕೊಂಡರು. ಕೆಲವು ಬುದ್ಧಿವಂತರು ಇದು ಗೂಗಲ್ ಅನುವಾದದ ಕಿತಾಪತಿ ಎಂದು ಪತ್ತೆ ಹಚ್ಚಿದರು. ‘do not pass urine here’ ಎಂಬುದನ್ನು ಗೂಗಲ್ ಈ ರೀತಿ ಅನುವಾದಿಸುತ್ತದೆ.

ಗ್ಯಾಜೆಟ್ ಸಲಹೆ
ಎರಡು ವಾರಗಳ ಹಿಂದೆ ವಿಮರ್ಶೆ ಮಾಡಿ ಇದು ನಿಜಕ್ಕೂ ಉತ್ತಮ ಉತ್ಪನ್ನ ಎಂದು ನೋಶನ್ ಇಂಕ್ 2-ಇನ್-1 ಬಗ್ಗೆ ಬರೆಯಲಾಗಿತ್ತು. ಅದರ ಬಗ್ಗೆ ಪ್ರಶ್ನೆಗಳು ಬರುತ್ತಲೇ ಇವೆ.
ಕೆಲವನ್ನು ಇಲ್ಲಿ ಉತ್ತರಿಸಲಾಗುತ್ತಿದೆ.
1. ಅದನ್ನು ವಿಂಡೋಸ್ 10 ಬಂದಾಗ ಅದಕ್ಕೆ ನವೀಕರಿಸಿಕೊಳ್ಳಬಹುದೇ?
ಹೌದು. ಅದನ್ನು ಈಗಾಗಲೇ ಕಂಪೆನಿಯಲ್ಲಿ ಪರೀಕ್ಷಿಸಲಾಗಿದೆ.

2. ಸಾಮಾನ್ಯವಾಗಿ ಲ್ಯಾಪ್‌ಟಾಪ್‌ಗಳ ಜೊತೆ ರಿಕವರಿ ಸಿ.ಡಿ. ನೀಡಲಾಗುತ್ತದೆ. ಲ್ಯಾಪ್‌ಟಾಪ್ ಸಂಪೂರ್ಣ ತಟಸ್ಥವಾದಾಗ ಅದನ್ನು ಬಳಸಿ ವಿಂಡೋಸ್ ಅನ್ನು ಪುನಃ ಇನ್‌ಸ್ಟಾಲ್ ಮಾಡಬಹುದು. ಇದರಲ್ಲಿ ಸಿ.ಡಿ. ಡ್ರೈವ್ ಇಲ್ಲ. ಹಾಗಿರುವಾಗ ರಿಕವರಿಗೆ ಏನು ಮಾಡುವುದು?
ಉ:
ಅದು ರಿಕವರಿ ಪಾರ್ಟಿಶನ್ ಜೊತೆಗೇ ಬರುತ್ತದೆ. ಅಗತ್ಯವಿದ್ದಾಗ ಅದನ್ನು ಬಳಸಬಹುದು. ಬಯಾಸ್ ಮೂಲಕವೂ ಸರಿಮಾಡಿಕೊಳ್ಳಬಹುದು. ಯುಎಸ್‌ಬಿ ರಿಕವರಿ ಡ್ರೈವ್ ಕೂಡ ಮಾಡಿ ಇಟ್ಟುಕೊಳ್ಳಬಹುದು.

3. ನನಗೆ ವಿಂಡೋಸ್ 8.1 ಇಷ್ಟವಿಲ್ಲ. ವಿಂಡೋಸ್ 7 ಇಷ್ಟ. ಇದರಲ್ಲಿ ಅದನ್ನು ಹಾಕಿಕೊಳ್ಳಬಹುದೇ?
ಉ:
ನೋಶನ್ ಇಂಕ್ 2-ಇನ್-1 ವಿಂಡೋಸ್ 8.1ಕ್ಕೆ ತಕ್ಕಂತೆ ವಿನ್ಯಾಸ ಮಾಡಲಾಗಿದೆ. ಆದುದರಿಂದ ಅದನ್ನೇ ಬಳಸಿದರೆ ಉತ್ತಮ ವೇಗದ ಕೆಲಸವನ್ನು ನಿರೀಕ್ಷೆ ಮಾಡಬಹುದು. ವಿಂಡೋಸ್ 7 ಬೇಕಿದ್ದರೆ ಅದನ್ನೂ ಹಾಕಿಕೊಳ್ಳಬಹುದು. ಆದರೆ ನೀವು ಅದನ್ನು ಪ್ರತ್ಯೇಕ ಹಣ ನೀಡಿ ಕೊಂಡುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT