ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿನಿಂದ ಕಲಿಯದ ಪಾಠ

Last Updated 27 ಜುಲೈ 2014, 19:30 IST
ಅಕ್ಷರ ಗಾತ್ರ

ಲೋಕಸಭೆ ಚುನಾವಣೆ ಸೋಲಿ­ನಿಂದಾದರೂ ಕಾಂಗ್ರೆಸ್‌ ಪಾಠ ಕಲಿಯಬೇಕಿತ್ತು. ಕಳೆದ ಎರಡು ತಿಂಗಳಲ್ಲಿ ಅದು ತುಳಿ­ಯುತ್ತಿರುವ ಹಾದಿ ಗಮನಿಸಿದರೆ ಇನ್ನೂ ಬುದ್ಧಿ  ಬಂದಂತೆ ಕಾಣುವುದಿಲ್ಲ. 130 ವರ್ಷ­ಗಳ ಸುದೀರ್ಘ ಇತಿಹಾಸ ಹೊಂದಿರುವ ಪ್ರಮುಖ ರಾಜಕೀಯ ಪಕ್ಷ ಹೀನಾಯ ಸ್ಥಿತಿಗೆ ಬಂದು ನಿಂತಿದೆ. ಸೋತು– ಸೊರಗಿರುವ ಕಾರ್ಯ­ಕರ್ತರಿಗೆ ನೈತಿಕ ಶಕ್ತಿ ತುಂಬಬೇಕಾದ ಹೈಕಮಾಂಡ್‌ ಅದಕ್ಷತೆ, ಅಸಹಾಯಕತೆ, ರಾಜ­ಕೀಯ ಗೊಂದಲಗಳಿಗೆ ಸಿಕ್ಕಿ ಒದ್ದಾಡುತ್ತಿದೆ. ಹಳೇ ಅನುಭವಗಳನ್ನು ಕಣ್ಣ ಮುಂದಿಟ್ಟುಕೊಂಡು ಮುನ್ನಡೆಯಬೇಕಾದ ಪಕ್ಷ ಮತ್ತೆ ಮತ್ತೆ ಮುಗ್ಗರಿಸುತ್ತಿದೆ.

ಫಲಿತಾಂಶ ಹೊರಬಂದು ಎರಡು ತಿಂಗಳು ಕಳೆ­ದರೂ ಸೋಲಿನ ಹೊಣೆಯನ್ನು ಯಾರೂ ಹೊರಲು ತಯಾರಿಲ್ಲ. ಈ ಹೊಣೆ ಹೊರ­ಬೇಕಾ­ಗಿದ್ದು ಯಾರು? ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅಥವಾ ‘ನಂಬರ್‌ ಟು’ ಸ್ಥಾನದಲ್ಲಿರುವ ಉಪಾಧ್ಯಕ್ಷ ರಾಹುಲ್‌ ಗಾಂಧಿ. ಪ್ರಚಾರದ ನೇತೃತ್ವ ವಹಿಸಿದ್ದ ‘ಯುವರಾಜ’ನೇ ಜವಾಬ್ದಾರಿ ಹೊರ­ಬೇಕಾಗಿದ್ದು ಧರ್ಮ. ತೋರಿಕೆಗೆ ಮಾಧ್ಯ­ಮ­ಗಳ ಮುಂದೆ ನೈತಿಕ ಹೊಣೆ ಹೊರುವುದಾಗಿ ಹೇಳಿ ತಾಯಿ– ಮಗ ಕೈತೊಳೆದುಕೊಂಡಿದ್ದಾರೆ. ಸೋಲಿಗೆ ಕಾರಣ ಹುಡುಕಲು ‘ಆಂಟನಿ ಸಮಿತಿ’ ರಚಿಸಿದ್ದಾರೆ. ಈ ಸಮಿತಿ­ಯಿಂದ ಎಂಥಾ ವರದಿ ನಿರೀಕ್ಷಿಸಲು ಸಾಧ್ಯ?

ಜನರ ಕಣ್ಣೊರೆಸಲು ಕಾಂಗ್ರೆಸ್‌ ಕಾರ್ಯಕಾ­ರಿಣಿ, ಚುನಾವಣೆ ಸೋಲಿನ ವಿಶ್ಲೇಷಣೆ ಮಾಡಿದೆ. ಅಲ್ಲೂ ಒಂದು ನಾಟಕ ನಡೆದಿದೆ. ಸೋನಿಯಾ ಮತ್ತು ರಾಹುಲ್‌ ತಮ್ಮ ಸ್ಥಾನ­ಗ­ಳನ್ನು ತ್ಯಜಿಸುವ ಮಾತುಗಳನ್ನು ಆಡಿದ್ದಾರೆ. ಅವರ ರಾಜೀನಾಮೆ ಒಪ್ಪಿಕೊಳ್ಳುವ ಎದೆಗಾರಿಕೆ­ಯಾ­ದರೂ ಯಾರಿಗಿದೆ? ಅಷ್ಟಕ್ಕೂ ಮೀರಿ ಗಾಂಧಿ ಕುಟುಂಬದ ಸದಸ್ಯರು ರಾಜೀನಾಮೆ ಕೊಟ್ಟರೆ ಕಾಂಗ್ರೆಸ್‌ ಏನಾಗಬಹುದು? ಸೋನಿಯಾ ಮತ್ತು ರಾಹುಲ್‌ ನಾಯಕತ್ವ­ದಲ್ಲೇ ಪಕ್ಷ ಹೀನಾಯ ಸ್ಥಿತಿ ತಲುಪಿದೆ. ಇನ್ನು ಅವರಿಲ್ಲದ ಕಾಂಗ್ರೆಸ್‌ ಉಳಿಯುವುದೇ? ಈ ಸತ್ಯ ಅರಿ­ತಿರುವ ಪಕ್ಷದ ನಾಯಕರು ಅವರ ಆಶ್ರಯದಲ್ಲೇ ಪಕ್ಷ ಮುನ್ನಡೆಯಬೇಕೆಂದು ಬಯಸುತ್ತಿದ್ದಾರೆ.
ಅನಾರೋಗ್ಯದಿಂದ ನರಳುತ್ತಿರುವ ಕಾಂಗ್ರೆಸ್‌ ಅಧ್ಯಕ್ಷರು ಮಗನಿಗೆ ಜವಾಬ್ದಾರಿ ವಹಿಸಲು ಕಾದಿ­ದ್ದಾರೆ.

ಅವಕಾಶ ಸಿಕ್ಕಾಗಲೆಲ್ಲ ರಾಹುಲ್‌ ಅವ­ರನ್ನು ಮುಂದೆ ಬಿಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅವರಿನ್ನೂ ತಯಾರಾದಂತಿಲ್ಲ. ಸೋಲನ್ನು ಸವಾಲಾಗಿ ಸ್ವೀಕರಿಸಿ, ಪಕ್ಷ ಕಟ್ಟಬೇ­ಕಾದ ಕಾಂಗ್ರೆಸ್‌ ಉಪಾಧ್ಯಕ್ಷ  ಹಿಂದೆ ಹಿಂದೆ ಸರಿ­ಯುತ್ತಿದ್ದಾರೆ. ಸೋಲಿನಿಂದ ಕಂಗಾಲಾಗಿರುವ ನಾಯ­ಕರು ಮತ್ತು ಕಾರ್ಯಕರ್ತರ ಭಾವನೆ­ಗಳು ಅವರಿಗೆ ಅರ್ಥವಾದಂತಿಲ್ಲ. ಅರ್ಥವಾ­ಗಿದ್ದರೆ ಅವರು ಬದಲಾಗುತ್ತಿದ್ದರು.
ಚುನಾವಣೆ ಬಳಿಕವೂ ರಾಹುಲ್‌ ಬದಲಾ­ಗಿಲ್ಲ. ರಾಜಕಾರಣವನ್ನು ಅವರಿನ್ನೂ  ಗಂಭೀರ­ವಾಗಿ ಪರಿಗಣಿಸಿಲ್ಲ. ರಾಜಕೀಯಕ್ಕಿಂತಲೂ ಅವರಿಗೆ ‘ಮಹತ್ವದ ಕೆಲಸ’ ಬೇರೆ ಇದ್ದಿರ­ಬ­ಹುದು.

ಲೋಕಸಭೆಯಲ್ಲಿ ರಾಹುಲ್‌ ಅವರೇ ಪಕ್ಷದ ನಾಯಕತ್ವ ವಹಿಸಿಕೊಳ್ಳಬೇಕೆಂಬ ಒತ್ತಡ ಇನ್ನೂ ಇದೆ. ಅನೇಕ ಮಂದಿ  ಬಹಿರಂಗವಾಗಿ ಈ ಅಭಿ­ಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ಉಪಾ­ಧ್ಯಕ್ಷರಿಗೆ ಹೊಣೆಗಾರಿಕೆ ಇಲ್ಲದ ಅಧಿಕಾರ ಬೇಕು. ಹೀಗಾಗಿ ಕೆಳಮನೆ ನಾಯಕತ್ವದ ಜವಾ­ಬ್ದಾರಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಗಲಿಗೆ ಬಿದ್ದಿದೆ. ಪಕ್ಷ ನಿಷ್ಠೆ, ಹಿರಿತನ ಮತ್ತು ಅನುಭವ ಎಲ್ಲ ದೃಷ್ಟಿಯಿಂದಲೂ ಖರ್ಗೆ ನಾಯಕತ್ವಕ್ಕೆ ಸಮರ್ಥರು. ಲೋಕಸಭೆಯ ಅಧಿವೇಶನದ ಆರಂಭದಲ್ಲೇ ಅವರು ಇದನ್ನು ನಿರೂಪಿಸಿದ್ದಾರೆ. ಆಡಳಿತ ಪಕ್ಷದ ಸದಸ್ಯರು ಮೆಚ್ಚುವಂತೆ ಮಾತನಾಡಿದ್ದಾರೆ.

ಈಗ ಪ್ರಶ್ನೆ ಇರುವುದು ಖರ್ಗೆ ಅವರ ನಾಯಕತ್ವ ಕುರಿತಲ್ಲ. ರಾಹುಲ್‌ ಸಾಮರ್ಥ್ಯದ ಬಗೆಗೆ. ಪಕ್ಷ ಮುನ್ನಡೆಸುವ ತಾಕತ್ತು ತಮಗಿದೆ ಎಂದು ಕಳೆದ ಹತ್ತು ವರ್ಷಗಳಲ್ಲಿ ಎಂದೂ ಅವರು ತೋರಿಸಿಲ್ಲ. ರಾಹುಲ್‌ ಸಕ್ರಿಯ ರಾಜ­ಕಾರಣಕ್ಕೆ ಬಂದು 10 ವರ್ಷಗಳು ಕಳೆದಿವೆ. ಅವರು ಮುಂದೆ ನಿಂತು ಹೋರಾಡಿದ ಚುನಾ­ವಣೆಯಲ್ಲಿ ಸೋಲಾಗಿದೆ. ಇನ್ನು ಮೂರು ತಿಂಗಳಲ್ಲಿ ಮತ್ತೊಂದು ಚುನಾವಣೆ ಬರುತ್ತಿದೆ. ಮಹಾರಾಷ್ಟ್ರ, ಹರಿಯಾಣ, ಜಮ್ಮು– ಕಾಶ್ಮೀರ, ಜಾರ್ಖಂಡ್‌ ವಿಧಾನಸಭೆಗಳಿಗೆ ಅಕ್ಟೋಬರ್‌ ಆಸು­ಪಾಸು ಚುನಾವಣೆ ನಡೆಯಲಿದೆ. ಮುಂದಿನ ವರ್ಷ ಮತ್ತೂ ಹಲವು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ರಾಹುಲ್‌ ಈ ಚುನಾವಣೆಗಳನ್ನು ಹೇಗೆ ನಿಭಾ­ಯಿ­ಸುತ್ತಾರೆ ಎನ್ನುವ ಆತಂಕ ಕಾಂಗ್ರೆಸ್‌ ನಾಯಕರಿಗಿದೆ.

ಚುನಾವಣೆಗೆ ಮೊದಲೇ ಈ ರಾಜ್ಯಗಳಲ್ಲಿ ಕಾಂಗ್ರೆಸ್‌ ಬಂಡಾಯ ಎದುರಿಸುತ್ತಿದೆ. ಮಹಾ­ರಾಷ್ಟ್ರ, ಹರಿಯಾಣ, ಅಸ್ಸಾಂ ಮುಖ್ಯಮಂತ್ರಿಗಳ ಮೇಲೆ ಕೆಲವು ನಾಯಕರು ಮುಗಿಬಿದ್ದಿದ್ದಾರೆ. ಮಹಾರಾಷ್ಟ್ರದಲ್ಲಿ ಪೃಥ್ವಿರಾಜ್‌ ಚವಾಣ್‌ ವಿರುದ್ಧ ನಾರಾಯಣ ರಾಣೆ ಕತ್ತಿ ಮಸೆ­ಯುತ್ತಿ­ದ್ದಾರೆ. ಹರಿಯಾಣ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ ಅವರ ಕಾಲನ್ನು ಚೌಧರಿ ಬೀರೇಂದ್ರ ಸಿಂಗ್‌ ಎಳೆಯುತ್ತಿದ್ದಾರೆ. ಹೀಮಂತ ಬಿಶ್ವಾಸ್‌ ಶರ್ಮ, ಅಸ್ಸಾಂ ಮುಖ್ಯಮಂತ್ರಿ ಗೊಗೊಯ್‌ ವಿರುದ್ಧ ಬಂಡಾಯವೆದ್ದಿದ್ದಾರೆ.  ಈ ಮೂವರು ಮುಖ್ಯಮಂತ್ರಿಗಳನ್ನು ಬದಲಾ­ವಣೆ ಮಾಡುವಂತೆ ಹೈಕಮಾಂಡ್‌ ಮೇಲೆ ಒತ್ತಡ ಹೇರಲಾಗುತ್ತಿದೆ. ಈ ವಿಷಯದಲ್ಲಿ ಸೋನಿಯಾ, ರಾಹುಲ್‌ ನಡುವೆ ಹೊಂದಾಣಿಕೆ ಇದ್ದಂತಿಲ್ಲ. ಗೊಗೊಯ್‌ ಮತ್ತು ಚವಾಣ್ ಅವರ ಬದಲಾವಣೆಗೆ ಕಾಂಗ್ರೆಸ್‌ ಉಪಾಧ್ಯಕ್ಷರು ಸುತರಾಂ ಒಪ್ಪುತ್ತಿಲ್ಲ.

ಮಹಾರಾಷ್ಟ್ರ, ಹರಿಯಾಣ ಹಾಗೂ ಅಸ್ಸಾಂ ಚುನಾವಣೆ ಸೋಲನ್ನು ಮೂವರು ಮುಖ್ಯ­ಮಂತ್ರಿಗಳ ತಲೆಗೆ ಕಟ್ಟಲು ಅವರ ರಾಜಕೀಯ ವಿರೋಧಿಗಳು ಹೊರಟಿದ್ದಾರೆ. ಇವರ ನಾಯ­ಕತ್ವ­ದಲ್ಲೇ ವಿಧಾನಸಭೆ ಚುನಾವಣೆ ಎದುರಿಸಿ­ದರೆ ಕಾಂಗ್ರೆಸ್‌ ಮತ್ತೊಂದು ಹೀನಾಯ ಸೋಲು ನೋಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ­ದ್ದಾರೆ. ಈ ರಾಜ್ಯಗಳ ರಾಜಕೀಯ ಬಿಕ್ಕಟ್ಟನ್ನು ಪರಿ­ಹಾರ ಮಾಡಲು ಹೈಕಮಾಂಡ್‌ ವಿಫಲ­ವಾಗಿದೆ. ಮುಖ್ಯಮಂತ್ರಿಗಳನ್ನು ಬದಲಾಯಿಸಲಿ ಅಥವಾ ಬಿಡಲಿ, ಏನಾದರೂ ಖಚಿತ ತೀರ್ಮಾನ ಮಾಡಲಿ. ಚುನಾವಣೆ ಸಮೀಪಿಸುತ್ತಿದ್ದರೂ ಬಿಕ್ಕಟ್ಟು ಬಗೆಹರಿಸದಿದ್ದರೆ ಹೇಗೆ? ಎನ್ನುವುದು ಕಾಂಗ್ರೆಸ್‌ ನಾಯಕರ ಆತಂಕ.

ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಎದುರಿಸುವುದು ಸುಲಭದ ಮಾತಲ್ಲ. ನರೇಂದ್ರ ಮೋದಿ ನಾಯಕತ್ವದಲ್ಲಿ ಬಿಜೆಪಿ ದೊಡ್ಡ ಶಕ್ತಿ­ಯಾಗಿ ಬೆಳೆದಿದೆ. ಲೋಕಸಭೆ ಚುನಾವಣೆ ಗೆದ್ದಿ­ರುವುದರಿಂದ ಸಹಜವಾಗಿ ಅವರ ಉತ್ಸಾಹ– ಹುಮ್ಮಸ್ಸು ಇಮ್ಮಡಿಗೊಂಡಿದೆ. ನೈತಿಕ­ವಾ­ಗಿಯೂ ಉತ್ತಮ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ತಕ್ಷಣ ಸಮಸ್ಯೆ ಪರಿಹರಿಸಿ, ಚುನಾವಣೆಗೆ ಸಜ್ಜಾಗಬೇಕಿದೆ. ಮಿತ್ರ ಪಕ್ಷಗಳ ಜತೆಗೂ ಕಾಂಗ್ರೆಸ್‌ ಸಂಬಂಧ ಹದಗೆಟ್ಟಿದೆ. ಜಮ್ಮು– ಕಾಶ್ಮೀರದಲ್ಲಿ ನ್ಯಾಷನಲ್‌ ಕಾನ್‌ಫರೆನ್ಸ್‌ ಜತೆ ಸಂಬಂಧ ಕಿತ್ತುಹೋಗಿದೆ. ಮಹಾರಾಷ್ಟ್ರದಲ್ಲಿ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಜತೆ ಶೀತಲ ಸಮರ ನಡೆಯುತ್ತಿದೆ. ವಿಧಾನಸಭೆ ಚುನಾವಣೆವರೆಗೂ ಕಾಂಗ್ರೆಸ್‌– ಎನ್‌ಸಿಪಿ ಮೈತ್ರಿ ಮುಂದುವರಿಯುವ ಕುರಿತು ಅನುಮಾನವಿದೆ.

ಬಿಹಾರದಲ್ಲಿ ನಿತೀಶ್‌ಕುಮಾರ್‌ ಮತ್ತು ಲಾಲುಪ್ರಸಾದ್‌ ರಾಜಕೀಯವಾಗಿ ಹತ್ತಿರವಾ­ಗಿ­ದ್ದಾರೆ. ಮುಂದಿನ ವರ್ಷ ಬಿಹಾರ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಕೈ ಪಾಳೆಯ ಯಾರ ಜತೆ ಹೊಂದಾಣಿಕೆ ಮಾಡಿ­ಕೊಳ್ಳಲಿದೆ ಎನ್ನುವುದು ಉತ್ತರ ಕಾಣದ ಪ್ರಶ್ನೆ. ಕಾಂಗ್ರೆಸ್‌ ಹಿಂದೆಯೂ ಸೋತಿದೆ. ಇಂದಿರಾ ಗಾಂಧಿ ಕಾಲದಲ್ಲೂ ಹಿನ್ನಡೆ ಅನುಭವಿಸಿತ್ತು. ರಾಜ­ಕೀಯ ವಿರೋಧಿಗಳಿಂದ ಪುನಃ ಅಧಿಕಾರ ಕಸಿ­ದುಕೊಳ್ಳಲು ಅವರು ಯಶಸ್ವಿಯಾಗಿದ್ದರು. ರಾಜೀವ್‌ ಗಾಂಧಿ ಸಮಯದಲ್ಲೂ ಪಕ್ಷ ಸೋತಿತ್ತು. ರಾಹುಲ್‌ ಈಗಿನ  ಸೋಲನ್ನು ಸವಾಲಾಗಿ ಸ್ವೀಕರಿಸಿ ಮುನ್ನುಗ್ಗಿದರೆ ಕಾಂಗ್ರೆಸ್‌ ಪಕ್ಷಕ್ಕೆ ಮತ್ತೆ ಶಕ್ತಿ ತುಂಬುವುದು ಕಷ್ಟದ ಕೆಲಸವೇನಲ್ಲ. ಅದಕ್ಕೆ ಬದ್ಧತೆ ಬೇಕು.

ಕಾಂಗ್ರೆಸ್‌ ಪಕ್ಷದ ಬಹುಪಾಲು ಹಿರಿಯ ನಾಯ­ಕರನ್ನು ಕಂಡರೆ ರಾಹುಲ್‌ಗೆ ಆಗು­ವು­ದಿಲ್ಲ. ಪ್ರತಿ­ಯೊಂದಕ್ಕೂ ಮಧುಸೂದನ ಮಿಸ್ತ್ರಿ, ಜೈರಾಂ ರಮೇಶ್‌ ಅವರಂಥ ನಾಯಕರನ್ನೇ ನೆಚ್ಚಿದ್ದಾರೆ. ಅವರು ಹೇಳಿದ್ದೇ ವೇದವಾಕ್ಯ. ಯುವ ನಾಯ­ಕನ ಸಲಹೆಗಾರರಿಗೆ ಸಮಕಾಲೀನ ರಾಜಕಾರ­ಣದ ನಾಡಿಮಿಡಿತ ಗೊತ್ತಿಲ್ಲ. ಕಾರ್ಯ-­ಕರ್ತರ ಸಂಪರ್ಕವಿಲ್ಲ. ಅವರು ಹೇಗೆ ಆಲೋಚಿ­ಸುತ್ತಾರೆ. ಅವರ ನಿರೀಕ್ಷೆಗಳೇನು ಎನ್ನುವುದರ ಅರಿವಿಲ್ಲ. ಈ ನಾಯಕರು ರಾಹುಲ್‌ ಅವರಿಗೆ ಏನು ಸಲಹೆ ಕೊಡಬಲ್ಲರು. ಅವರ ಸಲಹೆ ಕೇಳಿದರೆ ಏನಾಗ­ಬಹುದು ಎನ್ನುವುದಕ್ಕೆ ಲೋಕಸಭೆ ಚುನಾವಣೆ ಸಾಕ್ಷಿ. ಇದೇ ಮಾತನ್ನು ದಕ್ಷಿಣ ಮುಂಬೈ ಕ್ಷೇತ್ರ­ದಲ್ಲಿ ಸೋತ ಮಾಜಿ ಸಚಿವ ಮಿಲಿಂದ್‌ ದೇವ್ರಾ ಹೇಳಿದ್ದಾರೆ.

ರಾಹುಲ್‌ ಅವರಿಗಿರುವ ಅವಕಾಶಗಳು ಬೇರೆ ಯಾರಿಗಾದರೂ ಇದ್ದಿದ್ದರೆ ದೇಶದ ದೊಡ್ಡ ನಾಯಕರಾಗಿ ರೂಪುಗೊಳ್ಳುತ್ತಿದ್ದರು. ಕಾಂಗ್ರೆಸ್‌ ಪಕ್ಷದೊಳಗೆ ಮತ್ತು ಹೊರಗೆ ಅವರ ಸಮಕಾ­ಲೀನ ಅನೇಕ ನಾಯಕರು ಭರವಸೆ ಮೂಡಿಸಿ­ದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್‌ ಮುಖ್ಯ ಸಚೇತಕರಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ ಅತ್ಯು­ತ್ತಮ ನಾಯಕರಾಗುವ ಸುಳಿವು ನೀಡಿ­ದ್ದಾರೆ. ಸದನದಲ್ಲಿ ಅದ್ಭುತವಾಗಿ ಮಾತನಾಡು­ತ್ತಾರೆ. ಕಲಾಪಗಳಲ್ಲಿ ಗಂಭೀರವಾಗಿ ಭಾಗವಹಿ­ಸುತ್ತಾರೆ. ಅವರನ್ನು ನೋಡಿಯಾ­ದರೂ ರಾಹುಲ್‌ ಕಲಿಯಬಹುದಿತ್ತು. ಮತ್ತೊಬ್ಬರನ್ನು ನೋಡಿ ಕಲಿಯುವುದು ಅವಮಾನವಲ್ಲ.

ಕಾಂಗ್ರೆಸ್‌ ಉಪಾಧ್ಯಕ್ಷ ಈಗಲೂ ಸದನಕ್ಕೆ ಬರು­ವುದು ಅಪರೂಪ. ಬಂದರೂ ಮಾತನಾ­ಡು­ವುದಿಲ್ಲ. ಕಳೆದ ವಾರ ಲೋಕಸಭೆಗೆ ಬಂದು ನಿದ್ದೆ ಮಾಡಿದರು. ಮಹತ್ವದ ಸಂದರ್ಭಗಳಲ್ಲಿ ಅವರು ಸದನದಲ್ಲಿ ಇರುವುದಿಲ್ಲ. ಮೊನ್ನೆ ಮಲ್ಲಿಕಾರ್ಜುನ ಖರ್ಗೆ, ‘ಪ್ರಧಾನಿ ನರೇಂದ್ರ ಮೋದಿ  ವಾರಕ್ಕೊಮ್ಮೆಯಾದರೂ ಸದನಕ್ಕೆ ಬರಲಿ’ ಎಂದು ಸಲಹೆ ಮಾಡಿದರು. ಆಡಳಿತ ಪಕ್ಷದ ಸದಸ್ಯರು ರಾಹುಲ್‌ ಅವರ ಬಗ್ಗೆ ಅದೇ ಮಾತು ಹೇಳಿದರೆ? ಹದಿನೈದನೇ ಲೋಕಸಭೆ ಕಲಾ­ಪ­ದಲ್ಲೂ ರಾಹುಲ್‌ ಹೆಚ್ಚು ಭಾಗವಹಿ­ಸಿಲ್ಲ. ಒಮ್ಮೆ ಲೋಕಪಾಲ ಮಸೂದೆ ಕುರಿತು ಮಾತ­­ನಾಡಿದ್ದು ಬಿಟ್ಟರೆ ಮತ್ಯಾವ ಚರ್ಚೆ­ಯಲ್ಲೂ ಭಾಗವಹಿಸಿಲ್ಲ. ಪ್ರಶ್ನೆಗಳನ್ನು ಕೇಳಿದ್ದು ಇಲ್ಲವೇ ಇಲ್ಲ.

ಕಾಂಗ್ರೆಸ್‌ ಪಕ್ಷವೇ ಒಂದು ದೊಡ್ಡ ಸಂತೆ. ಯಾರು ಏನು ಮಾಡುತ್ತಾರೆ, ಏನು ಮಾತ­ನಾ­ಡು­ತ್ತಾರೆ ಎನ್ನುವುದೇ ಗೊತ್ತಾಗುವುದಿಲ್ಲ. ಮಾಧ್ಯ­ಮಗಳ ಪ್ರತಿನಿಧಿಗಳು ಈ ಪಕ್ಷದ ನಾಯಕರ ಮುಂದೆ ಮೈಕ್‌ ಹಿಡಿದರೆ ಸಾಕು. ಮಾತು­ಗಳು ಧಾರಾಳವಾಗಿ ಬರುತ್ತವೆ. ಮಾತಿನ ಸಾಧಕಬಾಧಕ ಕುರಿತು ತಲೆ­ಕೆಡಿಸಿಕೊಳ್ಳುವುದಿಲ್ಲ. ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳು ಕಳೆದಿವೆ. ಎರಡು ತಿಂಗಳಲ್ಲಿ ಸರ್ಕಾರ­ದೊಳಗೆ ಏನು ನಡೆಯುತ್ತಿದೆ ಎಂದು ಯಾರಿಗೂ ಗೊತ್ತಾಗುತ್ತಿಲ್ಲ. ಸಚಿವರು ಬಾಯಿ ಬಂದ್‌ ಮಾಡಿಕೊಂಡಿದ್ದಾರೆ. ಪಕ್ಷದ ಮುಖಂಡರು, ವಕ್ತಾರರು ತುಟಿ ಬಿಚ್ಚುವುದಿಲ್ಲ.

ಪೂರ್ವಾನು­ಮತಿ ಇಲ್ಲದೆ ಸಚಿವರು, ಅಧಿಕಾರಿಗಳನ್ನು ಪತ್ರಕರ್ತರು ಭೇಟಿ ಮಾಡುವಂತಿಲ್ಲ. ಬಿಜೆಪಿ ವಿದ್ಯಮಾನಗಳನ್ನು ವರದಿ ಮಾಡುವ ಪತ್ರಕರ್ತ­ರಿಗೂ ಬಿಜೆಪಿ ಕಚೇರಿ ಪ್ರವೇಶ ಬಂದ್‌ ಮಾಡ­ಲಾಗಿದೆ. ಮೋದಿ ಅವರ ನಿಷ್ಠಾವಂತ ಬಂಟ ಅಮಿತ್‌ ಷಾ ಅಧ್ಯಕ್ಷರಾಗಿ ಅಧಿಕಾರ ವಹಿಸಿ­ಕೊಂಡ ಬಳಿಕ ಪತ್ರಕರ್ತರನ್ನು ಬಿಜೆಪಿ ಕಚೇರಿ­ಯಿಂದ ದೂರ ಇಡಲಾಗಿದೆ. ಆದರೆ, ಕಾಂಗ್ರೆಸ್‌ ಪಕ್ಷ  ಇದಕ್ಕೆ ತದ್ವಿರುದ್ಧ.
ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಅಧಿ­ಕಾರ­ದಲ್ಲಿದ್ದಾಗ ಸಚಿವರು ಮುಕ್ತವಾಗಿ ಮಾತಾ­ಡುತ್ತಿದ್ದರು. ಹದ್ದು ಮೀರಿದ್ದೂ ಉಂಟು. ಪಕ್ಷದ ನಾಯಕರ ಹೇಳಿಕೆಗಳಂತೂ ಅನೇಕ ಸಲ ವಿವಾ­ದಕ್ಕೆ ಕಾರಣವಾಗುತ್ತಿದ್ದವು.

ಸೋನಿಯಾ ಮತ್ತು ರಾಹುಲ್‌ ಅವರಿಗೆ ಪಕ್ಷದ ನಾಯಕರ ಮೇಲೆ ಹಿಡಿತವಿರಲಿಲ್ಲ. ಆಗಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಗೆ ಸಚಿವರು, ಅಧಿಕಾರಿಗಳ ಮೇಲೆ ಹತೋಟಿ ಇರಲಿಲ್ಲ. ಕಾಂಗ್ರೆಸ್‌ ನಾಯಕರ ಹಿಡಿತ­ವಿಲ್ಲದ ಮಾತು ಈಗಲೂ ಮುಂದುವರಿದಿದೆ. ಅಷ್ಟೇ ಅಲ್ಲ, ಯಾವ ವಿಷಯದ ಬಗ್ಗೆ ಯಾವ ನಿಲುವು ತಳೆಯಬೇಕು ಎನ್ನುವ ಗೊಂದಲಕ್ಕೆ ಕಾಂಗ್ರೆಸ್‌ ಆಗಾಗ್ಗೆ ಸಿಕ್ಕಿಕೊಳ್ಳುತ್ತಿದೆ. ಕಾಂಗ್ರೆಸ್‌ ನಿಜಕ್ಕೂ ಸಂಕಷ್ಟದಲ್ಲಿದೆ. ನಾಯ­ಕತ್ವದ ಬಿಕ್ಕಟ್ಟು ಪಕ್ಷವನ್ನು ಕಾಡುತ್ತಿದೆ. ಈ ಬಿಕ್ಕ­ಟ್ಟನ್ನು ಸೋನಿಯಾ ಹಾಗೂ ರಾಹುಲ್‌ ಹೇಗೆ ನಿಭಾಯಿಸುತ್ತಾರೆ? ಸೋತು ಸೊರಗಿರುವ ಪಕ್ಷಕ್ಕೆ ಹೇಗೆ ಜೀವ ತುಂಬುತ್ತಾರೆ ಎನ್ನುವುದು ಮಿಲಿ­ಯನ್‌ ಡಾಲರ್‌ ಪ್ರಶ್ನೆ. ರಾಹುಲ್‌ ತಮ್ಮ ಕಾರ್ಯಶೈಲಿ ಬದಲಿಸಿಕೊಂಡು ಮುಂಚೂಣಿಗೆ ಬರದಿದ್ದರೆ ಪುನಃ ಕಾಂಗ್ರೆಸ್‌ ಮುಗ್ಗರಿಸುವ ಸಾಧ್ಯತೆಯಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT