ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟ್ರಿಕ್ಟ್ ಹೆಡ್‌ ಮೇಷ್ಟ್ರು ಸಿ.ಎಸ್.ರಾಮಸ್ವಾಮಿ

Last Updated 10 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಕರಿ ಕೋಟು, ನೀಟಾದ ಟೈ, ಹೊಳೆಯುವ ಕಪ್ಪು ಶೂಗಳು. ಕೈಯಲ್ಲೊಂದು ವಿ.ಐ.ಪಿ.ಯ ತೆಳು ಸೂಟ್‌ಕೇಸ್. ಭದ್ರಾವತಿಯಿಂದ ತರೀಕೆರೆಗೆ ಬರುವ ಬೆಳಗಿನ ರೈಲಿಳಿದು ಮಿಲಿಟರಿ ಅಧಿಕಾರಿಯಂತೆ ಅವರು ನಡೆದು ಬರೋರು. ನೀಟಾಗಿ ಬಾಚಿದ ತಲೆ. ಕೆಳಗೆ ಹಣೆಯಲ್ಲಿ ಸಣ್ಣನೆಯ ಚುಕ್ಕಿ ಬಿಡಿಸಿದಂತೆ ಕುಂಕುಮ. ನಗು ತುಂಬಿದ ಸೂಕ್ಷ್ಮ ಕಣ್ಣುಗಳು. ಅವರು ನಡೆದು ಬರುವ ಸ್ಟೈಲೇ ಅಪರೂಪದ್ದು. ಸಂಸತ್ತಿನಲ್ಲಿ ಬಜೆಟ್ ಮಂಡಿಸುವ ಹಣಕಾಸು ಸಚಿವರಂತೆ ಅವರು ನಡೆದು ಬರುತ್ತಿದ್ದರು. ಅವರೇ ನಮ್ಮ ಸ್ಟ್ರಿಕ್ಟ್ ಹೆಡ್‌ಮೇಷ್ಟ್ರು ಸಿ.ಎಸ್.ರಾಮಸ್ವಾಮಿ.

ಚಕ್ಕರ್ ಹೊಡೆಯುವ ಮಕ್ಕಳ ಪಾಲಿಗೆ ಅವರು ಸಾಕ್ಷಾತ್ ಯಮಧರ್ಮನೇ ಆಗಿದ್ದರು. ನಮ್ಮ ತಪ್ಪುಗಳನ್ನು ಅವರೆಂದೂ ಅಷ್ಟು ಸುಲಭವಾಗಿ ಕ್ಷಮಿಸುತ್ತಲೇ ಇರಲಿಲ್ಲ. ಅವರು ವಿಚಾರಣೆ ನಡೆಸುವ ಸ್ಟೈಲೇ ಒಂದು ರೀತಿಯ ಹೆದರಿಕೆ ಹುಟ್ಟಿಸುತ್ತಿತ್ತು. ಅವರ ಸಿಟ್ಟೋ ಅಬ್ಬಬ್ಬ ಬಲು ಭಯಂಕರ. ಕೆನ್ನೆಯ ಮೇಲೆ ರಪ್ಪೆಂದು ಬಾರಿಸಿದರೆ ಇಡೀ ಮೈ ಜುಂ ಎನ್ನುತ್ತಿತ್ತು. ಆ ಹೊಡೆತ, ಹೆದರಿಕೆಗಳ ಏಟಿಗೆ ನಮ್ಮ ಚಡ್ಡಿಗಳೂ ಲೆಕ್ಕವಿಲ್ಲದಷ್ಟು ಸಲ ಒದ್ದೆಯಾಗಿವೆ. ವಿಚಾರಣೆ ವೇಳೆ ಕೈಯನ್ನು ಹಿಂದಕ್ಕೆ ಕಟ್ಟಿ ನಿಂತುಕೊಂಡ್ರು  ಎಂದರೆ ಬಿದ್ದವು ಹೊಡೆತ ಅಂತಾನೆ ಲೆಕ್ಕ. ನಮ್ಮ ಹಾಗೇ ಮೇಷ್ಟ್ರುಗಳೂ ಅವರನ್ನು ಕಂಡರೆ ಥರಥರ ನಡುಗುತ್ತಿದ್ದರು. ಶಾಲೆಗೆ ಬರುವಾಗ ಒಂದು ನಿಮಿಷ ತಡವಾದರೂ  ಎದ್ದೆವೋ, ಬಿದ್ದೆವೋ, ಉಸಿರಿಡಿದು ಓಡೋಡಿ ಬರುತ್ತಿದ್ದರು.

ನಾವು ಪ್ರಾರ್ಥನೆಗೆ ನಿಂತಾಗ ನಮ್ಮ ಸಾಲುಗಳು ಕೊಂಚವೂ ಸೊಟ್ಟಪಟ್ಟ ಆಗುವಂತಿರಲಿಲ್ಲ. ಮೂಲೆಮಟ್ಟ ಅಳತೆ ಮಾಡುವ ಗಾರೆ ಮೇಸ್ತ್ರಿಯಂತೆ ಸಾಲುಗಳು ನೆಟ್ಟಗಿದ್ದಾವೆಯೋ ಇಲ್ಲವೋ ಅಂತ ಸ್ವತಃ ಕಣ್ಣು ಹಾಯಿಸಿ ಪರೀಕ್ಷಿಸುತ್ತಿದ್ದರು. ಪ್ರಾರ್ಥನೆ ಹಾಡದೆ ಸುಮ್ಮನೆ ನಿಂತ ಸೋಂಬೇರಿಗಳನ್ನು ಛಕ್ಕಂತ ಕಂಡು ಹಿಡಿಯುತ್ತಿದ್ದರು.  ಅಂಥವರನ್ನ ಸೆರೆಹಿಡಿಸಿ ತರಿಸಿ ಬಾರಿಸುತ್ತಿದ್ದರು. ಒಂದು ದಿನ ನಾವೆಲ್ಲಾ ರಾಷ್ಟ್ರಗೀತೆಯ ‘ತವ ಶುಭ ನಾಮೇ ಜಾಗೇ, ತವ ಶುಭ ಆಶಿಷ ಮಾಗೇ’ ಎಂಬ ಚರಣವನ್ನು ತಪ್ಪಾಗಿ ಹಾಡಿದ್ದಕ್ಕೆ ಒಂದು ಗಂಟೆ ಬಿಸಿಲಿನಲ್ಲಿ ನಿಲ್ಲಿಸಿದ್ದರು. ರಾಷ್ಟ್ರಗೀತೆಯನ್ನು ಸ್ಪಷ್ಟವಾಗಿ ಕಲಿಸಿ, ಹಾಡಿಸಿದ ನಂತರವೇ ನಮ್ಮನ್ನು ಕ್ಲಾಸಿಗೆ ಗದುಮಿದ್ದರು. 

ಒಮ್ಮೆ ಊರಿನ ಜನ ಯಾವುದೋ ವಿಷಯಕ್ಕೆ ಸ್ಟ್ರೈಕ್ ಹಮ್ಮಿಕೊಂಡಿದ್ದರು. ಸಾಧಾರಣವಾಗಿ ಈ ಸ್ಟ್ರೈಕ್ ಮಾಡುವವರು ಮೊದಲು ಬರುವುದೇ ಶಾಲಾ ಕಾಲೇಜುಗಳ ಹತ್ತಿರ. ಅವರ ಸ್ಟ್ರೈಕ್‌ಗಳಿಗೆ ಶಕ್ತಿಕಳೆ ಕಟ್ಟುವವರು ಯಾವಾಗಲೂ ವಿದ್ಯಾರ್ಥಿಗಳೇ. ಹೀಗೆ ಶಾಲೆ ಬಂದ್ ಮಾಡಿಸುವವರು ಬಂದಾಗ ನಮಗೆಲ್ಲಾ ಸಖತ್ ಖುಷಿಯಾಯಿತು. ಶಾಲೆಗೆ ರಜೆ ಸಿಗುತ್ತೆ ಅನ್ನೋ ಸಂಭ್ರಮದಿಂದ ಸ್ಟ್ರೈಕ್‌ನವರನ್ನು ನೋಡಿ ಹೋ.. ಎಂದು ಕೇಕೆ ಹಾಕಿ ಅಬ್ಬರಿಸಿದೆವು. ಅಚಾನಕ್ ಬಂದ್ ನಡೆದರೆ ನಮ್ಮಷ್ಟೇ ಸಂತೋಷ ನಮ್ಮ ಮೇಷ್ಟ್ರುಗಳಿಗೂ ಆಗುತ್ತಿತ್ತು. ಆದರೆ, ಅದನ್ನವರು ಬಹಿರಂಗವಾಗಿ ತೋರಿಸಿಕೊಳ್ಳುತ್ತಿರಲಿಲ್ಲ. ಇದೆಲ್ಲಾ ಇಷ್ಟವಿಲ್ಲ ಎನ್ನುವಂತೆ ನಾಟಕ ಮಾಡುತ್ತಿದ್ದರು.

ಅದೇನೋ ಗೊತ್ತಿಲ್ಲ ಅವತ್ತು ಊರಿನ ಸಾಕಷ್ಟು ಜನ ಶಾಲೆ ಎದುರು ಜಮಾಯಿಸಿದ್ದರು. ಮುಷ್ಕರ ಮಾಡುವ ಮುಖಂಡರು ಧಿಕ್ಕಾರ ಕೂಗುತ್ತಿದ್ದರು. ಪುಕ್ಸಟ್ಟೆ ರಜೆ ಸಿಕ್ಕೇ ಸಿಗುತ್ತೇ ಅನ್ನೋ ಖುಷಿಯಲ್ಲಿ ನಾವೂ ಬ್ಯಾಗು ಹೆಗಲೇರಿಸಿಕೊಂಡು ರೆಡಿಯಾಗಿಬಿಟ್ಟೆವು. ಊರಿನ ಇಷ್ಟೊಂದು ಜನರ ಮುಂದೆ ಸ್ಟ್ರಿಕ್ಟ್ ರಾಮಸ್ವಾಮಿಯವರ ಆಟ ಏನೂ ನಡೆಯುವುದಿಲ್ಲ ಎಂದೇ ನಾವೆಲ್ಲಾ ಭಾವಿಸಿದ್ದೆವು. ಆದರೆ ಅವತ್ತು ಹಾಗಾಗಲಿಲ್ಲ.

ಒಂದು ಕಡೆ ಶಾಲೆಯೊಳಗೆ ಬಂದ್ ಜನ ನುಗ್ಗುತ್ತಿದ್ದರು. ಶಾಲೆಯಿಂದ ಒಳಗಿಂದ ಕಣ್ಣಿ ಕಿತ್ತ ಕರುಗಳಂತೆ ನಾವೂ ಓಡೋಡಿ ಬರುತ್ತಿದ್ದೆವು. ನಮ್ಮಿಬ್ಬರ ನಡುವೆ ಮಿಂಚಿನಂತೆ ಅಡ್ಡ ಓಡೋಡಿ ಬಂದ ರಾಮಸ್ವಾಮಿಗಳು ಕೈ ಅಡ್ಡ ಮಾಡಿಕೊಂಡು ಗೋಡೆಯಂತೆ ನಿಂತು ಬಿಟ್ಟರು. ಅಡ್ಡ ಬಂದ ರಾಮಸ್ವಾಮಿಯವರನ್ನು ನೋಡಿದ ನಾವೂ ಬ್ರೇಕ್ ಹಾಕಿ ನಿಂತಲ್ಲೇ ನಿಂತುಬಿಟ್ಟೆವು. ಶಾಲೆ ಬಿಡಿಸಲು ಬಲು ಜೋರಾಗಿ ಬಂದ ಚಳವಳಿಗಾರರು ಹೆಡ್‌ಮೇಷ್ಟ್ರು ಅಡ್ಡ ಬಂದಿದ್ದರಿಂದ ಕೆರಳಿ ನಿಂತೇಬಿಟ್ಟರು. ಮಾತಿಗೆ ಮಾತು ಶುರುವಾಯಿತು.

ತಮ್ಮ ಮುಂದೆ ನೂರಾರು ಜನ ಉದ್ರಿಕ್ತರನ್ನು ಕಂಡು ಒಂದಿಷ್ಟೂ ವಿಚಲಿತರಾಗದ ಸ್ಟ್ರಿಕ್ಟ್ ಹೆಡ್‌ಮೇಷ್ಟ್ರು ರಾಮಸ್ವಾಮಿ ನಿರ್ಧಾರದ ಧ್ವನಿಯಲ್ಲಿ ನಿಂತು ಹೇಳಿದರು. ‘ನೋಡಿ ಇಲ್ಲಿರೋರೆಲ್ಲಾ ನಿಮ್ಮ ಮಕ್ಕಳು. ಅವರು ಓದಿನಲ್ಲಿ ಹಿಂದಿದ್ದಾರೆ. ಅವರಿಗೆ ಚೆನ್ನಾಗಿ ಕಲಿಸಬೇಕೂಂತ ನಾವು ಪಣ ತೊಟ್ಟಿದ್ದೇವೆ. ನೀವು ಮುಷ್ಕರ ಮಾಡುತ್ತಿರುವುದು ಸರಿ ಇರಬಹುದು. ಆದರೆ ಅದಕ್ಕೆಲ್ಲಾ ಈ ಮಕ್ಕಳನ್ನು ಬಳಸಿಕೊಳ್ಳಬೇಡಿ. ಆ ಮಕ್ಕಳಿಗೆ ಏನೂ ತಿಳಿಯುವುದಿಲ್ಲ. ಗುಂಪಿನಲ್ಲಿ ಕೆರಳಿ ಅವು ಏನು ಬೇಕಾದರೂ ಮಾಡಬಲ್ಲವು. ಓದುವ ಆ ಮಕ್ಕಳಿಗೆ ಉದ್ರಿಕ್ತರಾಗುವ ಪ್ರವೃತ್ತಿಯನ್ನ ದಯಮಾಡಿ ಕಲಿಸಬೇಡಿ. ಒಂದು ಶಿಸ್ತಿನಲ್ಲಿ ಅವರನ್ನು ಬೆಳೆಸುತ್ತಿದ್ದೇನೆ. ಹೀಗೆಲ್ಲಾ ನೀವು ಮಾಡಿದರೆ ಆ ಶಿಸ್ತು ಹಾಳಾಗುತ್ತದೆ. ಮಕ್ಕಳ ಪರೀಕ್ಷೆಗಳು ಹತ್ತಿರ ಇದ್ದಾವೆ. ನಿಮ್ಮ ಕೈ ಮುಗೀತೀನಿ ಈ ಮಕ್ಕಳನ್ನು ಬಿಟ್ಟು ಬಿಡಿ’ ಎಂದು ಕೋರಿಕೊಂಡರು.

ಕೆಲ ಹಿರಿಯ ತಲೆಗಳಿಗೆ ರಾಮಸ್ವಾಮಿಯವರು ಹೇಳೋ ಮಾತಲ್ಲಿ ಅರ್ಥವಿದೆ ಎನ್ನಿಸತೊಡಗಿತು. ಆದರೆ, ಸ್ಟ್ರೈಕಿನಲ್ಲಿದ್ದ ಪಡ್ಡೆಗಳಿಗೆ ಈ ಉಪದೇಶ ಯಾಕೋ ಸರಿಯೆನಿಸಲಿಲ್ಲ. ಅವರೆಲ್ಲಾ ‘ಏ ಆ ನನ್ಮಗನ ಪುಂಗಿ ಪುರಾಣ ಅದೇನು ಕೇಳ್ತಿರಿ ಅವನ್ನ ಎಳೆದು ಹಾಕಿ ನುಗ್ರೋ’ ಎಂದು ಅಬ್ಬರಿಸಿಕೊಂಡು ನುಗ್ಗಿದರು. ಅವರನ್ನೆಲ್ಲಾ ಹಿಂದೆ ತಳ್ಳಿದ ಹೆಡ್‌ಮೇಷ್ಟ್ರು ಶಾಲೆಯ ರೋಲಿಂಗ್ ಗೇಟನ್ನು ತಾವೇ ಎಳೆದು ಬೀಗ ಜಡಿದು ತಾಂಡವ ಶಿವನಂತೆ ನಿಂತುಬಿಟ್ಟರು.  ಸ್ಟ್ರೈಕಿನ ಕಾರ್ಯಕರ್ತರಿಗೂ ರಾಮ ಸ್ವಾಮಿಗಳಿಗೂ ಜಟಾಪಟಿಯೇ ನಡೆಯಿತು. ಊರ ಜನ ತಲೆಗೊಂದರಂತೆ ಮಾತಾಡಿದರು. ಕೆಲವರು ಎಗರಾಡಿ, ಧಮಕಿ ಎಸೆದರು. ಆದರೂ ರಾಮಸ್ವಾಮಿಗಳು ಕದಲಲಿಲ್ಲ. ಹಟ ಭಂಗಿ ಹಿಡಿದು ನಿಂತು ಬಿಟ್ಟರು. ಅವರ ಸಿಟ್ಟು, ಕಠಿಣ ನಿಲುವು ನೋಡಿ ಸ್ಟ್ರೈಕಿನವರೂ ಸುಸ್ತೆದ್ದು ಹೋದರು. ಆಸೆಯಿಂದ ಕಾಯುತ್ತಿದ್ದ ನಮ್ಮನ್ನೆಲ್ಲಾ ಅನಾಥರಂತೆ ಬಿಟ್ಟು ಹಾಗೇ ಸುಮ್ಮನೆ ಹೊರಟು ಹೋದರು.

ಇಂಥ ಖಡಕ್ ಹೆಡ್‌ಮೇಷ್ಟ್ರು ನಮ್ಮ ಶಾಲೆಗೆ ಬಂದಾಗ ನಾವೆಲ್ಲಾ ಒಂಬತ್ತನೇ ಕ್ಲಾಸನ್ನು ಆಶ್ಚರ್ಯ ರೀತಿಯಲ್ಲಿ ಪಾಸು ಮಾಡಿಕೊಂಡು ಎಸ್ಸೆಸೆಲ್ಸಿಗೆ ನೆಗೆದಿದ್ದೆವು. ಕಾರಣವಿಲ್ಲದೆ ಚಕ್ಕರ್ ಸುತ್ತುತ್ತಿದ್ದ ನಮ್ಮಂಥ ಪ್ರತಿಭಾಶಾಲಿಗಳನ್ನು ಪತ್ತೆ ಹಚ್ಚಿದ ಸ್ಟ್ರಿಕ್ಟ್‌ ಹೆಡ್‌ಮೇಷ್ಟ್ರು ಕರೆದು ಮೊದಲಿಗೆ ಖಡಕ್ ವಾರ್ನಿಂಗ್ ಕೊಟ್ಟರು. ನಾವು ಅದಕ್ಕೆಲ್ಲಾ ಸೊಪ್ಪೇ ಹಾಕಲಿಲ್ಲ. ಮುಂದಿನ ಹಂತಗಳಲ್ಲಿ ಛೇಂಬರಿಗೆ ಕರೆಸಿ ರೋಲ್ ದೊಣ್ಣೆ ರುಚಿ ತೋರಿಸಿದರು. ನಾವು ಅದಕ್ಕೂ ಜಪ್ಪಯ್ಯ ಎನ್ನಲಿಲ್ಲ. ಅಪ್ಪ ಅಮ್ಮನನ್ನು ಕರೆದುಕೊಂಡು ಬನ್ನಿ ಎಂದು ಸುಗ್ರೀವಾಜ್ಞೆ ಹೊರಡಿಸಿದರು. ಈ ಆಜ್ಞೆ ನಮ್ಮ ಮನೆ ಬಾಗಿಲು ಮುಟ್ಟದಂತೆ ನೋಡಿಕೊಂಡೆವು. ವಾರ್ನಿಂಗ್, ದೊಣ್ಣೆಯ ರುಚಿ, ಸುಗ್ರೀವಾಜ್ಞೆಗಳಂತಹ ಆತಿಥ್ಯಗಳಿಗೆ ಬೆಲೆಕೊಡದೆ ಹೋದಾಗ ಶಾಲೆಯಿಂದ ಉಗಿದು ಹೊರಗಟ್ಟಿಬಿಟ್ಟರು. ಶಾಲೆಯ ಸಮಸ್ತ ಹುಡುಗರ ಮುಂದೆ ಗ್ರೇಟ್ ಅವಮಾನದ ಘಟನೆ ನಮ್ಮ ಚಕ್ಕರ್ ಗ್ಯಾಂಗಿನ ಕಣ್ಣು ಕೆಂಪಾಗಿಸಿತು. ಹೆಡ್‌ಮೇಷ್ಟ್ರು ಮಾಡಿದ್ದನ್ನು ಗ್ಯಾಂಗ್ ಬಲು ಗಂಭೀರವಾಗಿ ಪರಿಗಣಿಸಿತು.

ನಮ್ಮ ಗ್ಯಾಂಗಿನ ಇನ್ನೊಬ್ಬ ಮುಖಂಡ ಓಂಕಾರಿ ಗ್ಯಾಂಗಿನ ತುರ್ತು ಸಭೆಯನ್ನು ಆ ದಿನವೇ ಕರೆದನು. ತಂಡದ ಸದಸ್ಯರೆಲ್ಲಾ ರೈಲ್ವೆ ಸ್ಟೇಷನ್ನಿನ ಮಾವಿನ ಮರದ ಮೇಲೆ ಸಭೆ ಸೇರಿದೆವು. ಹೆಡ್‌ಮೇಷ್ಟ್ರು ರಾಮಸ್ವಾಮಿ ನಮ್ಮ ಮರ್ಯಾದೆ ತೆಗೆದಿದ್ದಾರೆ. ಹೀಗಾಗಿ ಅವರ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದು ಓಂಕಾರಿ ತನ್ನ ಕರಾಟೆ ಸ್ಟೈಲಿನಲ್ಲಿ ಕಡ್ಡಿಯೊಂದನ್ನು ಲಟಾರೆಂದು ಮುರಿದು ಕ್ರಾಂತಿಯ ಉದ್ಘಾಟನೆ ಮಾಡಿದನು. ಓಂಕಾರಿ ಆಡಿದ ಆವೇಶದ ಮಾತಿಗೆ ಸದಸ್ಯರೆಲ್ಲಾ ತಮ್ಮ ಅಚಲ ಒಪ್ಪಿಗೆ ಸೂಚಿಸಿಯೇ ಬಿಟ್ಟರು. ಆದರೆ, ಸೇಡನ್ನು ಯಾವ ರೀತಿ ತೀರಿಸಿಕೊಳ್ಳಬೇಕು, ಹೇಗೆ ತೀರಿಸಿಕೊಳ್ಳಬೇಕು ಎಂಬುದು ಮಾತ್ರ ಯಾರಿಗೂ ಫಕ್ಕನೆ ಹೊಳೆಯಲಿಲ್ಲ.  
ರಾಮಸ್ವಾಮಿಯವರ ಮುಖ ಕಂಡರೆ ಸಾಕು ಒಂದರ ಜೊತೆಗೆ ಮತ್ತೊಂದೂ ಆಗುವಂತಿದ್ದ ನಾವು ಅವರ ಮೇಲೆ ಮುಗಿಬಿದ್ದು ದಾಳಿ ಮಾಡುವುದು ಸಾಧ್ಯವೇ? ಅವರು ನಡೆದು ಹೋಗುವಾಗ ಹಿಂದಿನಿಂದ ಕಲ್ಲಿನಲ್ಲಿ ಹೊಡೆಯಬಹುದು ಎನ್ನುವುದರಿಂದ ಹಿಡಿದು, ಅವರನ್ನು ಶಾಲೆಯಲ್ಲೇ ಕೂಡಿ ಬೀಗ ಜಡಿಯಬೇಕು. ಅವರ ಸೂಟ್ ಕೇಸ್ ಕದಿಯಬೇಕು ಅನ್ನೋ ತನಕದ ಹಲವಾರು ಕುತಂತ್ರಗಳನ್ನು ಯೋಚಿಸಿದೆವು. ಆದರೆ, ಧೈರ್ಯ ಮಾತ್ರ ಯಾವ ಮಗನಿಗೂ ಇರಲೇ ಇಲ್ಲ..

ಹೆಂಗೂ ಸಂಜೆಯಾಗ್ತಿದೆ. ಶಾಲೆಯ ಹತ್ರ ಹೋಗಾನ. ಹೆಡ್‌ಮೇಷ್ಟ್ರು ಒಬ್ಬರೇ ಇರ್ತಾರೆ. ಇವತ್ತೇ ಕೆಲಸ ಆಗ್ಬೇಕು. ಯಾರೂ ಹೆದರಿ ಓಡೋಗೊ ಹಂಗಿಲ್ಲ. ಎಲ್ಲಾ ಒಗ್ಗಟ್ಟಾಗಿ ಇರ್‌ಬೇಕು ಎಂದು ಓಂಕಾರಿಯೇ ಎಲ್ಲರಿಗೂ ಹುಮ್ಮಸ್ಸು ತುಂಬಿದ. ಬಸವನ ಹಿಂದಿನ ಬಾಲಗಳಂತೆ ನಾವು ಅವನನ್ನೇ ಅನುಸರಿಸಿದೆವು. ನೇರ ಅವನು ನಮ್ಮನ್ನು ಶಾಲೆಯ ಹತ್ತಿರ ಕರೆದುಕೊಂಡು ಹೊರಟ. ದಾರಿಯಲ್ಲಿ ಇಬ್ಬರು ಸನ್ಮಾನ್ಯ ಗೆಳೆಯರು ರೀಸೆಸ್‌ಗೆ ಅಂತ ಹೇಳಿ ಕಿರುಬೆರಳು ಎತ್ತಿ ಮೆಳೆ ಹಿಂದೆ ಮರೆಯಾದವರು ಮತ್ತೆ ಯಾಕೋ ತಿರುಗಿ ಬರಲೇ ಇಲ್ಲ. ನೋಡಿದರೆ ತಮ್ಮ ತಮ್ಮ ಮನೆ ದಿಕ್ಕಿನ ಕಡೆಗೆ ಬೇಧಿ ಹತ್ತಿದವರಂತೆ ಓಡುತ್ತಿದ್ದರು. ಹಿಂಗಾಗಿ; ಕೊನೆಗೆ ಉಳಿದವರು ಓಂಕಾರಿ ಮತ್ತು ನಾನು ಇಬ್ಬರೇನೆ.

ಶಾಲೆಗೆ ಹೋದಾಗ ಬೀಗ ಜಡಿದಿದ್ದರು. ಯಾವ ನರಪಿಳ್ಳೆಯೂ ಅಲ್ಲಿರಲಿಲ್ಲ. ಲಟಾರಿ ಗೇಟು ಮುರಿದು ಶಾಲೆಯೊಳಗೆ ಹೋದೆವು. ರಾಮಸ್ವಾಮಿಗಳು ಶಾಲೆ ಅಂದವಾಗಿ ಕಾಣಲೆಂದು ಇಪ್ಪತ್ತು ಗುಲಾಬಿ ಹೂವಿನ ಕುಂಡಗಳನ್ನು ತರಿಸಿ ಜೋಡಿಸಿಟ್ಟಿದ್ದರು. ಮೊದಲು ಅವನ್ನೆಲ್ಲಾ ಎತ್ತಿ ನೆಲಕ್ಕೆ ಕುಕ್ಕಿದೆವು. ಒಂದಿಷ್ಟು ಸಮಾಧಾನವಾಯಿತು. ಕಿಟಕಿಗಳ ಗ್ಲಾಸನ್ನು ಟಳ್‌ಟಳಾರ್ ಎನಿಸಿದೆವು. ಶಾಲೆಯ ದಿಕ್ಕುದಿಕ್ಕುಗೂ ವಾಸ್ತು ಪ್ರಕಾರ ಕಲ್ಲು ಬೀರಿದೆವು. ನಮ್ಮ ದ್ವೇಷ ಪೂರ್ತಿ ತೀರಿಸಿಕೊಳ್ಳಲು ಅಲ್ಲಿ ಲಾಯಕ್ಕಾದ ಯಾವೊಂದು ವಸ್ತುಗಳೂ ಲಭ್ಯವಿಲ್ಲದಿರುವುದು ಸಾಕಷ್ಟು ಬೇಸರ ಮೂಡಿಸಿತು. ಕೊನೆಗೆ ಹೆಡ್‌ಮೇಷ್ಟ್ರು ಕಚೇರಿ ಬಾಗಿಲಿಗೆ ಹಾರಿ ಹಾರಿ ಬಂದು ಓಂಕಾರಿ ನಾಲ್ಕು ಸಲ ಕಾಲಲ್ಲಿ ಗುದ್ದಿದ. ಅದು ಇವನ ಜುಜುಬಿ ಏಟುಗಳಿಗೆ ಜಪ್ಪಯ್ಯ ಎನ್ನಲಿಲ್ಲ.

ಇಷ್ಟೆಲ್ಲಾ ಸಾಹಸಗಳನ್ನು ನಾನು ಮತ್ತು ಓಂಕಾರಿಯೇ ಮಾಡಿದ್ದೆಂದು ರಾಮಸ್ವಾಮಿಯವರ ಎದುರು ನೀಟಾಗಿ ನಮ್ಮ ಪರಾರಿ ಮಿತ್ರರು ಮಾರನೆಯ ದಿನ ವರದಿ ಒಪ್ಪಿಸಿದ್ದರು. ಸನ್ಮಾನ ಮಾಡಲು ಹೆಡ್‌ಮೇಷ್ಟ್ರು ನಮಗಾಗಿ ಹುಡುಕಿಸಿದರು. ಹೆದರಿ ವಾರದ ಮಟ್ಟಿಗೆ ಊರನ್ನೇ ಖಾಲಿ ಮಾಡಿದ್ದ ನಾವು ಅವರ ಕೈಗೆ ಸಿಗಲೇ ಇಲ್ಲ.

ವಿಷಯ ತಿಳಿದ ನಮ್ಮಪ್ಪ ನನ್ನ ಸೆರೆ ಹಿಡಿದು ತಂದು ರಾಮಸ್ವಾಮಿಯವರ ಮುಂದೆ ನಿಲ್ಲಿಸಿದರು. ಸ್ಟ್ರಿಕ್ಟ್ ಹೆಡ್‌ಮೇಷ್ಟ್ರು ಕರಗಲಿ ಎಂದು ಅವರ ಎದುರೇ ನೆಲಹಿಡಿಯುವಂತೆ ಹೊಡೆದರು. ಒಂದಿಂಚೂ ಕರಗದ  ಹೆಡ್‌ಮೇಷ್ಟ್ರು ಹಟಕ್ಕೆ ಬಿದ್ದರು. ನನ್ನನ್ನು ಕ್ಷಮಿಸಲು ಅವರು ಸುತಾರಾಂ ಸಿದ್ಧರಿರಲಿಲ್ಲ. ನಮ್ಮಪ್ಪ ತಮಗೆ ತಿಳಿದ ಎಲ್ಲಾ ಸಮಜಾಯಿಷಿ ಹೇಳಿ ಕೊನೆಗೆ ದೈನ್ಯತೆಯಿಂದ ಕೈ ಮುಗಿದು ಅವರೆದುರು ನಿಂತು ಬಿಟ್ಟರು. ನನಗಾಗಿ ನನ್ನಪ್ಪ ಅಂಗಲಾಚುತ್ತಿದ್ದ ರೀತಿ ನನ್ನ ಮನಸ್ಸನ್ನೇ ಕಲಕಿಬಿಟ್ಟಿತು. ಅಲ್ಲೀ ತನಕ ನಾನು ಮಾಡಿದ್ದೇ ಸರಿ ಎನ್ನು ವಂತಿದ್ದ ನನ್ನ ಕಣ್ಣಲ್ಲೂ ನೀರು ಜಿನುಗತೊಡಗಿತು. .  ‘ಮಕ್ಕಳು ಮಾಡೋ ತಪ್ಪಿಗೆ ನೀವು ಕೈ ಮುಗೀಬ್ಯಾಡ್ರಿ ಸಾಹೇಬ್ರೆ. ಅವನು ಶಾಲೆಯ ಮೇಲೆ ಮಾಡಿದ ದಾಂಧಲೆ ಬಗ್ಗೆ ನನಗೆ ಸಿಟ್ಟಿಲ್ಲ. ಅದನ್ನ ಕ್ಷಮಿಸೋಣ ಬಿಡಿ. ಆದ್ರೆ ವಿಷಯ ಇರೋದು ಅದಲ್ಲ. ಈಗ ನೋಡಿ ಶಾಲೆಗೆ ಸರಿಯಾಗಿ ಬಂದು ಓದೋ ಹುಡುಗರೇ ಎಸ್ಸೆಸೆಲ್ಸಿ ಎಕ್ಸಾಮಲ್ಲಿ ಎಗರೆಗರಿ ಹೋಗ್ತಿದ್ದಾರೆ. ಅಷ್ಟು ಕಷ್ಟದ ಪರೀಕ್ಷೆ ಇದು. ಅಂಥದ್ರಲ್ಲಿ ಶಾಲೆ ಕಡೆ ಮುಖಾನೆ ಹಾಕದ ಇವನು ಅದ್ಹೆಂಗೆ ಪಾಸಾಗ್ತಾನೆ ಸಾಹೇಬ್ರೆ. ಏನೇನೋ ಬರೆದು ಫೇಲಾಗೋಕ್ಕಿಂತ ಚೆನ್ನಾಗಿ ಓದಿ ಮುಂದಿನ ಸಲ ಪಾಸಾಗ್ಲಿ ಬಿಡಿ.

ನನ್ನ ಮಾತು ಕೇಳಿ. ಇವನ ಒಳ್ಳೇದಕ್ಕೇ ಹೇಳ್ತಿದ್ದೀನಿ. ಮೊದಲು ಇವನ ಕರ್ಕೊಂಡು ಹೋಗಿ ಜೀವನದ ಕಷ್ಟ ಸುಖ ತಿಳಿಯೋ ಥರದ ಗಟ್ಟಿ ಕೆಲಸ ಕೊಡಿ. ನೀವು ಕುಲುಮೆ ಕೆಲ್ಸ ಮಾಡ್ತೀರಲ್ಲ. ಅಲ್ಲಿ ಇವನು ಕಬ್ಣ ಚಚ್ಚಲಿ. ಆಗ ಬುದ್ಧಿ, ತಿಳವಳಿಕೆ ಎಲ್ಲಾ ಬರುತ್ತೆ. ಮುಂದಿನ ವರ್ಷದ ಹೊತ್ತಿಗೆ ಇವನು ಒಳ್ಳೆ ಹುಡುಗ ಆಗಿರ್ತಾನೆ ಆಗ ಕರ್ಕೊಂಡು ಬನ್ನಿ’ ಎಂದು ನಿರ್ಧಾರದ ಧ್ವನಿಯಲ್ಲಿ ಹೇಳಿದರು. ಅಪ್ಪ ಮನಸ್ಸು ತೃಪ್ತಿಯಾಗುವಷ್ಟು ಮತ್ತೆ ಅಲ್ಲೇ ಬಿಗಿದು ಮನೆಗೆ ಎಳತಂದರು. ರಾಮಸ್ವಾಮಿಯವರು ನನ್ನ ವಿಷಯದಲ್ಲಿ ಮಾಡಿದ್ದ ನಿರ್ಣಯ ಸರಿಯಾಗೇ ಇತ್ತು. ಆಗ ಅವರೇನು ಯೋಚಿಸಿದ್ದರು ಅನ್ನೋದು ನನಗೀಗ ಅರ್ಥವಾಗ್ತಿದೆ. ಜೀವನದ ವಿಚಿತ್ರ ನೋಡಿ.

ಅದೇ ರಾಮಸ್ವಾಮಿಯವರ ಮಗಳು ಪ್ರೀತಿ ನನ್ನ ವಿದ್ಯಾರ್ಥಿನಿಯಾಗಿ ಕಾಲೇಜಿಗೆ ಸೇರಿದಳು. ‘ನನ್ನ ಮಗಳಿಗೆ ಕನ್ನಡ ಸರಿಯಾಗಿ ಬರಿಯೋಕೆ ಬರಲ್ಲ ಕಣಯ್ಯ. ನೀನೆ ಹೇಳಿಕೊಡಬೇಕು. ಕನ್ನಡದಲ್ಲಿ ದಡ್ಡಿ ಇದ್ದಾಳೆ. ನಿನ್ನ ಥರ ದುಂಡಗೆ ಬರಿಯೋದನ್ನ ಕಲಿಸು’ ಎಂದು ಅವರು ಕೇಳಿದಾಗ ನನಗಾದ ಸಂತಸ ಅಷ್ಟಿಷ್ಟಲ್ಲ. ಅವರ ಹಿರಿ ಮಗಳು ಶ್ರುತಿ ಜೀವಶಾಸ್ತ್ರದ ಉಪ ನ್ಯಾಸಕಿಯಾಗಿ ನನ್ನ ಪಕ್ಕದ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾರೆ. ನೋಟದಲ್ಲಿ, ಮಾತಿನಲ್ಲಿ, ನಗುವಿನಲ್ಲಿ, ಒಳ್ಳೆಯ ಮನಸ್ಸಿನಲ್ಲಿ ಅಪ್ಪನ ಪ್ರತಿರೂಪವಾದ ಶ್ರುತಿಯವರಲ್ಲಿ  ಕಣ್ಮರೆಯಾದ ನನ್ನ ಸ್ಟ್ರಿಕ್ಟ್ ಹೆಡ್‌ಮೇಷ್ಟ್ರು ಸದಾ ಕಾಣಸಿಗುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT