ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀಮತವನುತ್ತರಿಸಲಾಗದೆ ಧರ್ಮಶಾಸ್ತ್ರದೊಳ್

Last Updated 23 ಮಾರ್ಚ್ 2016, 8:38 IST
ಅಕ್ಷರ ಗಾತ್ರ

Our bodies form
a freedom fleet
our dolphin grace
is power

We learn and teach
and as we go
wach woman sings
each woman's hands
are water wings.

Some us have become
mermaids or Amazon whales
and are swimming for our lives.
Some of us do not know how to swim.
we walk on water.

– Alla Bozarth-campbell

ದ್ರೌಪದಿ ಮತ್ತು ಸೀತೆಯರ ಬಗ್ಗೆ ಭಾರತೀಯ ಗಂಡು ಹೆಣ್ಣುಗಳಿಬ್ಬರೂ ಮಾತನಾಡಿದಷ್ಟು ಜಗತ್ತಿನಲ್ಲಿ ಇನ್ನಾವ ಸಮುದಾಯವೂ ತಮ್ಮ ಪ್ರಮುಖ ಪಾತ್ರಗಳ ಬಗ್ಗೆ ಮಾತನಾಡಿಲ್ಲವೇನೋ. ಅಷ್ಟೇಕೆ, ಪಂಡಿತ-ಪಾಮರರು, ಆಧುನಿಕರು-ಸಾಂಪ್ರದಾಯಿಕರು ಹೀಗೆ ಎಲ್ಲ ಬಗೆಯ ವೈರುಧ್ಯಗಳ ವರ್ಗದವರೂ ತಮ್ಮ ತಮ್ಮ ವಿಚಾರಗಳನ್ನು, ಆಶಯಗಳನ್ನು ಪ್ರತಿಪಾದಿಸಲೂ ವಿರೋಧಿಸಲೂ ಇವರನ್ನು ಆಕರಗಳಾಗಿ ಪರಿಕರಗಳಾಗಿ ಬಳಸುತ್ತಲೇ ಬಂದಿದ್ದಾರೆ. ಸ್ವಾರಸ್ಯವೆಂದರೆ, ಪರಸ್ಪರ ವಿರುದ್ಧವೆನಿಸುವ ವಿಚಾರಗಳಿಗೂ ಇವರಿಬ್ಬರೂ ಒದಗಿ ಬರುತ್ತಾರೆ ಎನ್ನುವುದು. ಎಲ್ಲಕ್ಕಿಂತ ಮುಖ್ಯವಾದ ಸಂಗತಿಯೆಂದರೆ, ಇವರಿಬ್ಬರೂ ಹೆಣ್ಣಿನ ಎರಡು ಮಾದರಿಗಳನ್ನು ಪ್ರತಿನಿಧಿಸುತ್ತಿದ್ದಾರೆ ಎನ್ನುವುದು.

ಮೌನ ಮತ್ತು ವಾಚಾಳಿತನ ಹೆಣ್ಣಿನ ಎರಡು ಅತಿಮುಖ್ಯ ಆದರೆ ವಿರುದ್ಧ ಧ್ರುವಗಳ ಅಭಿವ್ಯಕ್ತಿ ಮಾದರಿಗಳೆಂದು, ಅವುಗಳ ಆತ್ಯಂತಿಕ ಸಾಧ್ಯತೆಯಲ್ಲಿ ಹೆಣ್ಣು ಬಳಸುತ್ತಾಳೆ ಎಂದು ಹೇಳಲಾಗುತ್ತದೆಯಷ್ಟೆ. ಒಂದೋ ಅವಳು ಮೌನಗೌರಿ ಇಲ್ಲವೇ ಯಾವುದನ್ನೂ ಹೊಟ್ಟೆಯೊಳಗಿಟ್ಟುಕೊಳ್ಳಲಾಗದ ವಾಚಾಳಿ. ಇದನ್ನು ಚೂರು ಸರಳವಾಗಿ ವಿಸ್ತರಿಸಿಕೊಂಡರೆ, ಒಂದು ಸತ್ಯ ನಮ್ಮ ಕಣ್ಣೆದುರಿಗೆ ಬರುತ್ತದೆ. ಮೌನಗೌರಿಯಾಗಿ, ಅವಳು ತನಗೆ ಗೊತ್ತಿರುವ, ಅಥವಾ ತಾನು ಸತ್ಯವೆಂದು ಭಾವಿಸಿರುವುದನ್ನು ಹೇಳಬಾರದು. ಅವಳ ವಾಚಾಳಿತನದ ಕಾರಣಕ್ಕಾಗಿ, ಸತ್ಯವೆಂಬ ಅಥವಾ ಮುಖ್ಯವೆಂದು ಭಾವಿಸಿದ ಯಾವ ಸಂಗತಿಗಳನ್ನೂ ಅವಳಿಗೆ ಹೇಳಬಾರದು! ಒಟ್ಟಿನಲ್ಲಿ, ಅವಳು ಮಾತನಾಡಬಾರದು ಮತ್ತು ಮಾತನಾಡಬೇಕಾದ ವಿಚಾರಗಳು ಅವಳಿಗೆ ತಿಳಿಯಬಾರದು, ಇನ್ನೂ ಮೀರಿ ಮಾತನಾಡಿದರೆ, ಅವಳನ್ನು, ಆ ವಾಚಾಳಿಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ ಎನ್ನುವ ‘ವಿಪ್’ ಸದಾ ಜಾರಿಯಲ್ಲಿರುತ್ತದೆ. ಸೀತೆ ಮೌನದ ಹಾಗೂ ದ್ರೌಪದಿ ವಾಚಾಳಿತನದ ಶಕ್ತ ಮಾದರಿಗಳೆಂದು ಉದ್ದಕ್ಕೂ ಒಪ್ಪಲಾಗಿದೆ. ಈ ಮಾದರಿಗಳ ಬಗ್ಗೆ ಪಿತೃ ಸಂಸ್ಕೃತಿಗೆ ಸಮಸ್ಯೆಗಳಿಲ್ಲ, ಯಾಕೆಂದರೆ ಇಬ್ಬರೂ ಮಹಾನ್ ಅನುಸರಣಾವಾದಿಗಳೂ, ಅನುಕೂಲಸತಿಯರೂ ಆಗಿರುವುದರಿಂದ. ಕಾಡಿನಲ್ಲೂ ನಾಡಿನಲ್ಲೂ ಪತಿಮಹಾಶಯರನ್ನು ಹಿಂಬಾಲಿಸುತ್ತಾರೆ. ಹಗಲು ರಾತ್ರಿಯೆನ್ನದೆ ಗೃಹಸ್ಥ ಧರ್ಮದ ಗಂಧ ತೇಯುತ್ತಾರೆ. ಮತ್ತದೇ ಪಾಠ... ಹೆಣ್ಣು ಸೋತು ಗೆಲ್ಲಬೇಕು... ದ್ರೌಪದಿಯ ಹಾಗೆ, ಸೀತೆಯ ಹಾಗೆ.

ಯಾರು ಹಿತವರು ಈ ಇಬ್ಬರೊಳಗೆ?
ಮತ್ತೆ ಮತ್ತೆ ದ್ರೌಪದಿಯನ್ನು ಶಕ್ತಿಯ ರೂಪವೆಂದು, ಅವಳ ವ್ಯಕ್ತಿತ್ವದ ಗಟ್ಟಿತನ, ಧೈರ್ಯ, ವಿಚಾರಗಳ ಸ್ಪಷ್ಟತೆಗಾಗಿ ಗುರುತಿಸಲಾಗುತ್ತದೆ. ಈ ಎಲ್ಲವೂ ಅವಳಲ್ಲಿ ಅಸಾಧಾರಣ ಪ್ರಮಾಣದಲ್ಲಿ ಇದ್ದವು ನಿಜ. ಆದರೆ ನಿಜದಲ್ಲಿ ಈ ಎಲ್ಲವುಗಳಿಂದ ಅವಳಿಗೆ ಪಿತೃ ಸಂಸ್ಕೃತಿಯ ವಿರುದ್ಧವಾಗಲಿ, ತನ್ನ ಬದುಕು ಮತ್ತು ವ್ಯಕ್ತಿತ್ವಗಳ ಮೇಲೆ ನಿರಂತರವಾಗಿ ನಡೆದ ಆಕ್ರಮಣಗಳನ್ನು ಎದುರಿಸುವುದಕ್ಕಾಗಲಿ ಸಾಧ್ಯವಾಯಿತೆ?

ಇದನ್ನು ಕುರಿತಂತೆ ಅನೇಕ ಚರ್ಚೆಗಳು ನಮ್ಮಲ್ಲಿ ನಡೆದಿವೆ. ಅವುಗಳಲ್ಲಿ ತನ್ನ ಒಳನೋಟಗಳ ಕಾರಣಕ್ಕಾಗಿ ಮುಖ್ಯವಾಗುವುದು, ಲೋಹಿಯಾ ಮತ್ತು ಇರಾವತಿ ಕರ್ವೆ ಅವರ ಚರ್ಚೆಗಳು. ದ್ರೌಪದಿಯ ವ್ಯಕ್ತಿತ್ವವನ್ನು ಅದರ ರಾಜಕೀಯ ಚಹರೆಗಳಿಂದ ಗುರುತಿಸುವ ಲೋಹಿಯಾ ಅವರ ಲೇಖನ, ಅವಳ ವ್ಯಕ್ತಿತ್ವದ ಹಲವು ಸಾಧ್ಯತೆಗಳನ್ನು ತೆರೆಯುವ ಪ್ರಯತ್ನ ಮಾಡುತ್ತದೆ. ಅವಳಲ್ಲಿದ್ದ ಅಪ್ಪಟ ರಾಜಕಾರಣಿಯ ಗುಣಗಳಿಂದ ಅವಳು ಬೇರೆಯೇ ಆಗಿ ಕಾಣಿಸುತ್ತಾಳೆ ಎನ್ನುವುದನ್ನು ಲೋಹಿಯಾ ಚಿತ್ರಿಸುತ್ತಾರೆ. ತನ್ನ ಅಗತ್ಯಗಳನ್ನೆಲ್ಲ ಅವಳು ತನಗೆ ದಕ್ಕಿಸಿಕೊಡಬಹುದಾದ ಪುರುಷೋತ್ತಮರ ಸಹಾಯದಿಂದ ಪಡೆಯುವ ಬಗೆಯೇ ಅವಳ ಹುಟ್ಟುರಾಜಕಾರಣಿಯ ವ್ಯಕ್ತಿತ್ವವನ್ನು ಧ್ವನಿಸುತ್ತದೆ ಎನ್ನುವ ತೀರ್ಮಾನಕ್ಕೆ ಅವರು ಬರುತ್ತಾರೆ.

ಹೀಗಿದ್ದೂ ದ್ರೌಪದಿಯ ವ್ಯಕ್ತಿತ್ವದಲ್ಲಿ ‘ಸ್ವಾಯತ್ತ’ ಎನ್ನುವ ನೆಲೆಯೊಂದನ್ನು ಗುರುತಿಸುವುದು ಸಾಧ್ಯವಿದೆಯೆ? ಕುಮಾರವ್ಯಾಸ ಭಾರತದಲ್ಲಿ ವಸ್ತ್ರಾಪಹರಣದ ಸಂದರ್ಭದಲ್ಲಿ ಅವಳು, ‘ಸ್ತ್ರೀಮತವನುತ್ತರಿಸಲಾಗದೆ ಧರ್ಮಶಾಸ್ತ್ರದೊಳ್’ ಎನ್ನುವ  ಪ್ರಶ್ನೆಯನ್ನು ಕೇಳುತ್ತಾಳೆ. ಇದು ಧರ್ಮದ ಪ್ರಶ್ನೆಯೂ ಹೌದು, ನ್ಯಾಯಶಾಸ್ತ್ರದ, ಕಾನೂನಿನ ಸವಾಲೂ ಹೌದು, ಲಿಂಗರಾಜಕಾರಣದ ಪ್ರಶ್ನೆಯೂ ಹೌದು. ಧರ್ಮರಾಯ ಮೊದಲು ತನ್ನನು ತಾನು ಪಣಕ್ಕಿಟ್ಟುಕೊಂಡು ಸೋತವನು, ಆಮೇಲೆ ಹೇಗೆ ಹೆಂಡತಿಯನ್ನು ಪಣಕ್ಕಿಡಲು ಸಾಧ್ಯ ಎನ್ನುವ ಅವಳ


ಸ್ಪಷ್ಟ ಬೌದ್ಧಿಕ ಮತ್ತು ಕಾನೂನಿನ ಪ್ರಶ್ನೆಗೆ, ಸಿಗುವುದು ಹೆಣ್ಣನ್ನು ಮಾತನಾಡಿಸಲು, ಈ ಲೋಕ ಕಟ್ಟಿಕೊಂಡಿರುವ ಮೂಲಭೂತ ಭಾಷೆಯಾದ ಲೈಂಗಿಕ ಭಾಷೆಯಲ್ಲಿ–
ತೊತ್ತಿರ ಸವತಿ ಬೇಟದ ಸವಿಯ ಸುರಿಯಲಿ ಭಂಡಮಿಂಡರಿಗೆ
ಆ ಸರೋಜಾನನೆಯ ನಮ್ಮ ವಿಳಾಸಿನೀ ವೀಧಿಯಲಿ ಕೂಡುವುದು
ಪುಷ್ಪವತಿಯಾಗಲ್ಲಿ ಫಲವತಿಯಾಗು ನಡೆಯೆಂದ
ಎಂದರೆ , ಕುಮಾರವ್ಯಾಸನಂತಹ ಮಹಾಕವಿಯಲ್ಲೂ ಕೊನೆಗೂ ದ್ರೌಪದಿ– ‘ಇನ್ನು ನಾರಿಯರು ಹುಟ್ಟದೆ ಇರಲಿ ಎನ್ನವೊಲು ಭಂಗಿತರು ಭುವನದೊಳಗೆ...’ ಎಂದು ವಿಷಾದದಲ್ಲಿ ಅಸಹಾಯಕತೆಯಲ್ಲಿ ಉದ್ಗರಿಸುವುದು ಅನಿವಾರ್ಯವಾಗುತ್ತದೆ.

ಇದಕ್ಕೆ ವಿರುದ್ಧ ಎಂಬಂತೆ ಡಾ. ಗಾಯತ್ರಿ ನಾವಡ ಅವರ ‘ಮಹಿಳಾ ಸಂಕಥನ’ದಲ್ಲಿ ‘ದ್ರೌಪದಿ ಪಗ್ಡೆ ಆಟ ಆಡಿದ್ದ್’ ಎನ್ನುವ ಜನಪದ ಕವಿತೆಯನ್ನು ಸಂಗ್ರಹಿಸಿದ್ದಾರೆ. ಇದೊಂದು ಕುತೂಹಲಕರವಾದ ಕವಿತೆ. ಶಿಷ್ಟ ಕಾವ್ಯಗಳಲ್ಲಿ ತನ್ನ ಬೌದ್ಧಿಕ ಪ್ರಖರತೆಯ ಪ್ರಶ್ನೆಗಳನ್ನೆತ್ತಿ ಅದಕ್ಕೆ ಉತ್ತರ ಪಡೆಯುವಲ್ಲಿ ವಿಫಲಳಾಗುವ ದ್ರೌಪದಿ ಇಲ್ಲಿ, ಲೋಕ ಯಾವಾಗಲೂ ಹೆಣ್ಣಿನ ಭಾಷೆಯೆಂದು, ಮಾಧ್ಯಮವೆಂದು ಒಪ್ಪಿರುವ ಲೈಂಗಿಕತೆಯನ್ನು ಬಳಸಿ ಗೆಲ್ಲುವ ಮಾದರಿಯೊಂದನ್ನು ಈ ಕವಿತೆ ಮಂಡಿಸುತ್ತದೆ.

ಧರ್ಮರಾಯ ಜೂಜಿನಲ್ಲಿ ಸ್ವತಃ ತನ್ನನ್ನೂ ಹೆಂಡತಿ ತಮ್ಮಂದಿರನ್ನೂ ಪಣಕ್ಕಿಟ್ಟು ಸೋತಿದ್ದಾನೆ ಎನ್ನುವುದು ಗೊತ್ತಾದ ಮೇಲೆ ಈ ಕವಿತೆಯ ದ್ರೌಪದಿ, ಈ ಬಿಕ್ಕಟ್ಟಿನಿಂದ ತನ್ನನ್ನೂ ತನ್ನ ಸಂಸಾರವನ್ನೂ ಪಾರು ಮಾಡಲು ಉಪಾಯವೊಂದನ್ನು ಹೂಡುತ್ತಾಳೆ. ದ್ರೌಪದಿಯ ಸೌಂದರ್ಯಕ್ಕೆ ಸದಾ ಮಾರುಹೋಗಿದ್ದ ದುರ್ಯೋಧನನಿಗೆ ದ್ರೌಪದಿಯಿಂದ ಸಂದೇಶವೊಂದು ಹೋಗುತ್ತದೆ.

ನಿನ್ನ ಹೊನ್ನು ಮಂಚಾಕೆ ಹಾಸುಗೆ ಹಾಸುಕಾರೆ
ಕಪೂರಾದ ವೀಳವ ಮಡ್ಚು ಕೊಡುಕಾರೆ
ನನ್ನ ಮುದ್ದಾದ ತೋಳಲಿ ನಿನ್ನ ತಬ್ಬುಕಾರೆ
ಭಾವಯ್ಯ ನನ್ನಾಸೆನೊಂದು ನಡ್ಸಿ ಕೊಡುಬೇಕೆ
ಎಂದು ದುರ್ಯೋಧನನನ್ನು ಪಗಡೆಯಾಟಕ್ಕೆ ಆಹ್ವಾನಿಸುತ್ತಾಳೆ. ಆ ಆಟದ ಕರಾರೆಂದರೆ, ಯಾರು ಸೋಲುವರೋ ಅವರು ಗೆದ್ದವರ ಮನೆಯ ಆಳಾಗಬೇಕು ಎನ್ನುವುದು. ದ್ರೌಪದಿಯೋ ಆಟದಲ್ಲಿನ ತನ್ನ ಗೆಲುವನ್ನು ನಿರ್ಧರಿಸಿಯೇ ಆಟಕ್ಕೆ ಅನುವಾಗುತ್ತಾಳೆ. ಆಟ ಮತ್ತದರ ಫಲಿತಾಂಶವನ್ನು ಈ ಕವಿತೆ ಕೆಲವೇ ಸಾಲುಗಳಲ್ಲಿ ವರ್ಣಿಸುತ್ತದೆ:
ಹದಿನಾರು ಮೊಳದ ಬಾರ್ಕೂರ ಸೀರೆಯ
ಬೋರೆಂಬ ಗಾಳಿಬೀಸಿ ಸ್ಯಾಲಿ ಮಗುಚಾಡೆ
ಸೆಳೆದಾವು ಕೌರವನ ಸತಿತೊಡೆ
ಮತ್ತೇರಿ ಸಪುನಾದ ತೆರನಾಗಿ
ಪಗುಡೀಯ ಆಟವಾಡುತ ಸೋತನೆ
ಸತಿ ದ್ರೌಪದಿಗೆ ಗೆಲುವಾಗೆ
ಹೀಗೆ ದುರ್ಯೋಧನನನ್ನು ತನ್ನ ದೇಹ ಭಾಷೆಯ, ದೇಹವೆಂಬ ಆಯುಧದ, ದೇಹವೆಂಬ ತಂತ್ರದ ಮೂಲಕ ಸೋಲಿಸುವ ದ್ರೌಪದಿ ಸಂಸಾರವನ್ನು ಮಾತ್ರವಲ್ಲ ತನ್ನ ದೇಹ ಮತ್ತು ವ್ಯಕ್ತಿತ್ವದ ಮೇಲಿನ ಅತಿಕ್ರಮಣವನ್ನು ನಿವಾರಿಸಿಕೊಂಡ ಸಮಾಧಾನ ಮತ್ತು ಸಂತೋಷದಲ್ಲಿ ದುರ್ಯೋಧನನಿಗೆ ಅಪ್ಪಣೆ ಕೊಡಿಸುತ್ತಾಳೆ– ‘ನನ್ನ ಅರಮನೆಯ ಗೌಡಿ ಚಾಕುರಿಗೆ ಅನುವಾಗೆ’ ಎಂದು.

ಮಹಾಭಾರತದ ಯಾವ ಶಿಷ್ಟ ಕಾವ್ಯಕ್ಕೂ ಸಾಧ್ಯವಾಗದ ಅಪೂರ್ವ ತಿರುವೊಂದನ್ನು ಈ ಜನಪದ ಕಾವ್ಯ ಅದೆಷ್ಟು ಪರಿಣಾಮಕಾರಿಯಾಗಿ  ಕೊಡುತ್ತದೆ ನೋಡಿ. ಈ ತಿರುವಿನೊಂದಿಗೇ ಹಲವು ಪ್ರಶ್ನೆಗಳು ನಮಗೆ ಎದುರಾಗುತ್ತವೆ.
ಕೊನೆಗೂ ಪಿತೃಸಂಸ್ಕೃತಿಗೆ ತನ್ನ ಪ್ರತಿರೋಧದ ನ್ಯಾಯಬದ್ಧತೆಯನ್ನು ಮನದಟ್ಟು ಮಾಡಿಸುವಲ್ಲಿ ಸೋತ ದ್ರೌಪದಿಯ ವ್ಯಕ್ತಿತ್ವವನ್ನು ಮಹಾಭಾರತದ ಅತ್ಯಂತ ಗಟ್ಟಿ ಪಾತ್ರವೆಂದು, ಹೆಣ್ಣಿನ ಹೋರಾಟದ ಒಂದು ಮಾದರಿಯೆಂದು ಒಪ್ಪುವುದು ಹೇಗೆ? ಮೇಲೆ ಗುರುತಿಸಿದ ಜನಪದ ಕಾವ್ಯದಲ್ಲೇ ಆಗಲಿ ಕುಮಾರವ್ಯಾಸನೂ ಸೇರಿದಂತೆ ಮತ್ಯಾವುದೇ ಶಿಷ್ಟ ಕವಿಯಲ್ಲಾಗಲೀ, ದ್ರೌಪದಿ ತನಗೆ ಎದುರಾದ ಸವಾಲುಗಳನ್ನು ಪುರುಷ ಕಾರುಣ್ಯದ ಅಥವಾ ದೈವಕಾರುಣ್ಯದ ನೆರವಿನಿಂದ ಮಾತ್ರ ಗೆಲ್ಲಲು ಸಾಧ್ಯವಾಗುವುದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು? ವಾಚಾಳಿತನದ, ಅಭಿವ್ಯಕ್ತಿಯ  ಅವಕಾಶವನ್ನು ಕೊಟ್ಟ ಗಳಿಗೆಯಲ್ಲೇ ಧಿಕ್ಕರಿಸುತ್ತಾ, ಆ ಅಭಿವ್ಯಕ್ತಿಯ ಸ್ವರೂಪವನ್ನು ಬೌದ್ಧಿಕತೆಯಿಂದ ಲೈಂಗಿಕತೆಗೆ ತಿರುಗಿಸುವ ಮೂಲಕ ತನ್ನ ಅಧಿಕಾರ ಕೇಂದ್ರವನ್ನು ಮತ್ತಿಷ್ಟು ಬಲಪಡಿಸಿಕೊಳ್ಳಲು ನಡೆಸುವ ಪ್ರಯತ್ನವೇ ಆಗಿ ಬಿಡುವ ವಿಪರ್ಯಾಸವನ್ನು ಎದುರಿಸುವ ಬಗೆ ಹೇಗೆ?

‘ದ್ರೌಪದಿ ಪಗ್ಡೆ ಆಟ ಆಡಿದ್’ ಕವಿತೆ ಮುಖ್ಯವಾಗುವುದು ಈ ಕಾರಣಕ್ಕೆ. ಅದು ಪಿತೃಸಂಸ್ಕೃತಿಯ ಕಾರ್ಯಮಾದರಿಯನ್ನೇ ಅದರ ವಿರುದ್ಧವೇ ಆಯುಧವಾಗಿ ಬಳಸುವ ಒಳದಾರಿಯೊಂದನ್ನು ಹುಡುಕಿ, ಪ್ರಯೋಗಿಸಿ ಗೆಲ್ಲುವುದರಲ್ಲಿ ಯಶಸ್ಸು ಪಡೆಯುತ್ತದೆ. ಹೆಣ್ಣಿನ ಆತ್ಮಗೌರವವನ್ನು ಕುರಿತ, ತನ್ನ ದೇಹ ಮತ್ತು ವ್ಯಕ್ತಿತ್ವದ ಮೇಲಿನ ತನ್ನ ಹಕ್ಕನ್ನು ಸಂಪಾದಿಸುವುದನ್ನು ಹೆಣ್ಣಿನ ಹೋರಾಟದ ಮೂಲ ಆಶಯವಾಗಿ ಒಪ್ಪುವಾಗ ಮತ್ತು ಪ್ರತಿಪಾದಿಸುವಾಗ ಈ ಕವಿತೆಯ ಹೋರಾಟದ ದಾರಿಯನ್ನು ಅನುಮೋದಿಸಲಾಗುವುದಿಲ್ಲ ಎನ್ನುವುದು ನಿಜ. ಇದೊಂದು ವಿಪರ್ಯಾಸದ ಸನ್ನಿವೇಶವೇ ಹೌದು. ಆದರೆ, ಆ ಗಳಿಗೆಯ ಸವಾಲನ್ನು ಎದುರಿಸುವಲ್ಲಿ ನೇರವಾದ, ಬೌದ್ಧಿಕವಾದ ದಾರಿ ವಿಫಲವಾದಾಗ ದ್ರೌಪದಿಯ ಎದುರಿಗೆ ಇನ್ನಾವ ಆಯ್ಕೆಯಿತ್ತು? ಈ ಹೋರಾಟವನ್ನೂ ಆತ್ಮಗೌರವವನ್ನು ಪಡೆಯುವ ಇನ್ನೊಂದೇ ದಾರಿಯಾಗಿ ನೋಡುವುದು ಸಾಧ್ಯವಿದೆಯೆ? ನನಗಂತೂ ಹೋರಾಟದ ಮೊದಲ ಹೆಜ್ಜೆಯಾಗಿ ಈ ಪ್ರಯತ್ನಗಳನ್ನು ನೋಡುವುದರಲ್ಲಿ ಅಪಾರ ಆಸಕ್ತಿಯಿದೆ.

ಇಂಥ ಪ್ರಶ್ನೆಗಳನ್ನು ಎದುರಾಗುವ ಸನ್ನಿವೇಶ ಹೀಗಿದೆ. ದ್ರೌಪದಿಯ ವ್ಯಕ್ತಿತ್ವವನ್ನು ಕುರಿತಂತೆ ಅನೇಕ ವ್ಯಾಖ್ಯಾನಗಳು ನಮ್ಮೆದುರಿಗಿವೆ. ಅದರಲ್ಲಿ ಅವಳ ಬೌದ್ಧಿಕತೆಯ ಜೊತೆಗೆ ಮುಖ್ಯವಾದ ಇನ್ನೊಂದು ಆಯಾಮವೆಂದರೆ, ಲೈಂಗಿಕತೆಯನ್ನು ಕುರಿತದ್ದು. ತನ್ನ ‘ಪತಿಗಳು ಮನೋಜ ಕೇಳಿಯಲಿ ದಿಟ್ಟರಲ್ಲ’ ಎನ್ನುವ ಮಾತೂ ಸೇರಿದಂತೆ ‘ಚಿತ್ತೋಪಚಾರಕೆ ಮೀರಿ ಬಯಸುವೆನಾರನೆಯವನ’ ಎನ್ನುವ ಮಾತನ್ನೂ ಅವಳು ಆಡುತ್ತಾಳೆ. ನಂಜುಂಡನ ‘ರಾಮನಾಥ ಚರಿತೆ’ಯಲ್ಲಿ ‘ತನ್ನೆದೆ ರವಿನಂದನನಿಗೆ ಮಾರಿಹೋಗಿದೆ’ ಎನ್ನುತ್ತಾಳೆ. ಆದರೆ ಲೈಂಗಿಕವಾಗಿ ಇಂಥ ಯಾವ ಸಾಹಸಗಳನ್ನಾದರೂ ಮಾಡುವ ಅವಕಾಶ ದ್ರೌಪದಿಗೆ ಇತ್ತೆನ್ನುವುದಕ್ಕೆ ಯಾವ ಕಾವ್ಯಗಳಲ್ಲಿಯೂ ಪುರಾವೆಗಳಿಲ್ಲ. ಅವಳ ಬಗ್ಗೆ ಅವಳಿಂದಲೇ ಇಂಥ ಮಾತುಗಳನ್ನು ಹೊರಡಿಸುವುದನ್ನೂ ಕಾವ್ಯ ತಂತ್ರದಲ್ಲಿರುವ ಪುರುಷ ರಾಜಕಾರಣವೆಂದೇ ನೋಡಬೇಕು. ಇಂಥ ಎಲ್ಲ ಉದ್ಗಾರಗಳನ್ನೂ ದ್ರೌಪದಿಯ ಬದುಕನ್ನೂ ಒಟ್ಟಿಗೆ ಇಟ್ಟು ನೋಡಿದರೆ ನಾವು ರಚಿಸಬಹುದಾದ ಅವಳ ಚಹರೆಗಳು ಹೇಗಿರಬಹುದು? ತನ್ನ ಆಯ್ಕೆಯ ಬದುಕನ್ನು ಕಟ್ಟಿಕೊಳ್ಳಲು ಬಯಸಿ ಸೋತ ಹೆಣ್ಣಿನದೆ? ಕೇವಲ ಬಯಸುವ ಆದರೆ ಕೊನೆಗೂ ಆ ನಿಟ್ಟಿನಲ್ಲಿ ಏನನ್ನೂ ಮಾಡಲಾಗದೆ ಹಳಹಳಿಕೆಯಲ್ಲೇ ಬದುಕು ಕಳೆಯುವ ಹೆಣ್ಣಿನದೆ? ಬದುಕಿನ ಸವಾಲುಗಳನ್ನು ಎದುರಿಸಲು ತನಗೆ ನೆರವಾಗಬಲ್ಲ ಪುರುಷರನ್ನು ಹುಡುಕುವುದರಲ್ಲಿ ರಾಜಕಾರಣಿಯ ಚಾಣಾಕ್ಷತೆಯನ್ನು ಹೊಂದಿರುವ ಹೆಣ್ಣಿನದೆ? ಹಲವು ಭಂಗಗಳನ್ನು ಎದುರಿಸಿ ಸೋತು, ಇನ್ನು ‘ನಾರಿಯರು ಹುಟ್ಟದೆ ಇರಲಿ ಎನ್ನವೊಲು’ ಎಂದು ವಿಷಾದಿಸುವ ಹೆಣ್ಣಿನದೆ? ಈ ಪ್ರಶ್ನೆಗಳನ್ನು ಹಾಕಿಕೊಳ್ಳದೆ ನಾವು ಮುಂದುವರಿಯಲಾಗುವುದಿಲ್ಲ. ಸಂದರ್ಭಾನುಸಾರ ಇಲ್ಲ ಅರ್ಜುನನೋ ಇಲ್ಲ ಭೀಮನೋ ಕೊನೆಗೆ ವಸ್ತ್ರಾಪಹರಣದ ಸಂದರ್ಭದಲ್ಲಿ ದೇವನೋ ದೇವಮಾನವನೋ ಆದ ಕೃಷ್ಣನ ಸಹಾಯವನ್ನು ಪಡೆಯದೇ ಅವಳಿಗೆ ತನ್ನಷ್ಟಕ್ಕೆ ಯಾವುದನ್ನೂ ನಿಭಾಯಿಸಲಾಗುವುದಿಲ್ಲ. ಸಹಾಯ ಪಡೆಯುವುದು ಅಪರಾಧವೆಂದಲ್ಲ. ಆದರೆ ಆ ಸಹಾಯಗಳಿಲ್ಲದೆ ಹೋದರೆ ಅವಳ ಬದುಕು ಮೂರಾಬಟ್ಟೆಯಾಗಿಬಿಡುವ ಮಟ್ಟಕ್ಕೆ ತರುವ ಸನ್ನಿವೇಶಗಳನ್ನು ಸೃಷ್ಟಿಸುವ ಪಿತೃಸಂಸ್ಕೃತಿಯ ಛದ್ಮವೇಷವನ್ನು ಅನಾವರಣ ಮಾಡಿಕೊಳ್ಳುವುದೂ ಅಷ್ಟೇ ಅನಿವಾರ್ಯ. ದ್ರೌಪದಿಗೆ ಸಿಕ್ಕಿದೆ ಎಂದೋ, ಕೊಡಮಾಡಲಾಗಿದೆ ಎಂದೋ, ಸ್ವತಃ ದ್ರೌಪದಿಯೇ ಸೃಷ್ಟಿಸಿಕೊಂಡದ್ದೆಂದೋ ನಾವು ಪರಿಭಾವಿಸುವ ಆವರಣವೇ ನಿಜದಲ್ಲಿ ಮಿಥ್ಯೆ ಅಲ್ಲವೇ ಎನ್ನುವ ಮೂಲಭೂತ ಪ್ರಶ್ನೆ ನಮ್ಮನ್ನು ಕಾಡಲು ಆರಂಭವಾಗುತ್ತದೆ. ಆರಂಭದಿಂದ ಕೊನೆಯವರೆಗೆ ದ್ರೌಪದಿ ಆಡುವ ಮಾತುಗಳು ಅವೆಷ್ಟೇ ದಿಟ್ಟವಾಗಿದ್ದರೂ ಅವುಗಳಿಗೆ ಅಧಿಕೃತತೆಯಾಗಲಿ, ಮಾರ್ನುಡಿಯ ಸ್ಪಂದನವಾಗಲಿ ಸಿಗದೇ ಹೋಗುವ ಸನ್ನಿವೇಶದ ಎದುರಿಗೆ ಜನಪದ ಕಾವ್ಯದ ದ್ರೌಪದಿ ಪಡೆಯುವ ಯಶಸ್ಸು ಏನನ್ನು ಧ್ವನಿಸುತ್ತದೆ?

ಈ ನಮ್ಮ ಕಾಲಘಟ್ಟವನ್ನು ಸ್ತ್ರೀವಾದಿ ನೆಲೆಯಲ್ಲಿ ಪುನರ್ ಇತಿಹಾಸದ ಘಟ್ಟವೆಂದು ಗುರುತಿಸುತ್ತಿದ್ದೇವೆ. ಖಾಲಿ ಇರುವ ಜಾಗಗಳಲ್ಲಿ ಹೆಣ್ಣಿನ ವಿಷಯಗಳನ್ನು ತುಂಬುವುದು ಇದರ ಉದ್ದೇಶವಲ್ಲ. ಇಡೀ ಇತಿಹಾಸವನ್ನೇ ಹೆಣ್ಣಿನ ದೃಷ್ಟಿಯಿಂದ ಮರುನಿರೂಪಣೆ ಮಾಡುವ ಮಹತ್ವಾಕಾಂಕ್ಷೆಯದು ಇದು. ಚದುರಿ ಹೋಗಿರುವ, ನೇಪಥ್ಯದಲ್ಲಿರುವ, ಮರೆಮಾಚಲಾಗಿರುವ, ಹುಗಿಯಲಾಗಿರುವ ಸಂಗತಿಗಳನ್ನೆಲ್ಲ ಹೆಣೆದು ಹೊಸ ನಕಾಶೆಯೊಂದನ್ನು ರಚಿಸುವ ಪ್ರಯತ್ನ ಇದು. ಇಂಥ ಪ್ರಯತ್ನದಲ್ಲಿ ಜನಪದ ಕಾವ್ಯದ ಈ ದ್ರೌಪದಿಗೆ ಮಹತ್ವದ ಸ್ಥಾನ ಸಕಾರಣವಾಗಿ ದೊರೆಯಬೇಕು, ದೊರೆಯುತ್ತದೆ.

Questions have to be asked before they can be even wrongly answered. Answered have to be ventured even before we are sure that they are adressed to the right questions. Errors have to be made before they can be corrected and contrary answers provoked. All of which leads to controversy, to be sure, but controversy is one of the ways we have of arriving at what we assigned the dignity of truth.
–C. Vann Woodword

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT