ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಮ್‌ಸಂಗ್ ಮತ್ತು ನೋಕಿಯಾ: ಮೋನೊ ಹೆಡ್‌ಸೆಟ್‌ ಹಾದಿಯಲ್ಲಿ

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಮೊಬೈಲ್ ಫೋನ್‌ಗೆ ಹೆಡ್‌ಸೆಟ್‌ಗಳು ನಿಸ್ತಂತು (ವಯರ್‌ಲೆಸ್) ವಿಧಾನದಲ್ಲಿ ಜೋಡಣೆಯಾಗುವ ಒಂದು ವಿಶಿಷ್ಟತೆ ಬ್ಲೂಟೂತ್. ಬ್ಲೂಟೂತ್ ಹೆಡ್‌ಸೆಟ್‌ಗಳಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ತುಂಬ ಸರಳವಾದವು ಮೋನೊ ಹೆಡ್‌ಸೆಟ್‌ಗಳು. ಹೆಸರೇ ತಿಳಿಸುವಂತೆ ಈ ಹೆಡ್‌ಸೆಟ್‌ಗಳು ಮೋನೊ ವಿಧಾನದಲ್ಲಿ ಕೆಲಸ ಮಾಡುತ್ತವಾದ್ದರಿಂದ ಅವುಗಳನ್ನು ಮಾತನಾಡಲು ಮಾತ್ರ ಬಳಸಬಹುದು. ಸಂಗೀತ ಆಲಿಸಲು ಅವು ಸೂಕ್ತವಲ್ಲ್ಲ. ಇಂತಹವುಗಳಲ್ಲಿ ಹೆಚ್ಚಿನವು ಸಾಮಾನ್ಯವಾಗಿ ಕಿವಿಯ ಕಾಲುವೆಯೊಳಗೆ ಕುಳಿತುಕೊಳ್ಳುವಂತಹ ವಿನ್ಯಾಸದವಾಗಿದ್ದು, ಕೆಲವಕ್ಕೆ ಕಿವಿಯ ಮೇಲ್ಭಾಗಕ್ಕೆ ಸಿಗಿಸಿಕೊಳ್ಳಲು ಕ್ಲಿಪ್‌ಗಳೂ ಇರುತ್ತವೆ. ಇಂತಹ ಎರಡು ಮೋಮೊ ಬ್ಲೂಟೂತ್ ಹೆಡ್‌ಸೆಟ್‌ಗಳು ನಮ್ಮ ಈ ವಾರದ ಗ್ಯಾಜೆಟ್‌ಗಳು. ಅವುಗಳೆಂದರೆ ಸ್ಯಾಮ್‌ಸಂಗ್ ಎಚ್‌ಎಂ1100 (Samsung HM1100 Mono Bluetooth Headset) ಮತ್ತು ನೋಕಿಯಾ ಬಿಎಚ್112 (Nokia BH112 Mono Bluetooth Headset).     
 
ಎರಡೂ ಹೆಡ್‌ಸೆಟ್‌ಗಳು ಬಹುತೇಕ ಒಂದೇ ರೀತಿಯ ವಿನ್ಯಾಸದ್ದಾಗಿವೆ. ಅಂದರೆ, ಎರಡೂ ಕಿವಿಕಾಲುವೆಯೊಳಗೆ ಹೋಗುವಂತಹ ವಿನ್ಯಾಸವನ್ನು ಒಳಗೊಂಡಿವೆ. ಎರಡಕ್ಕೂ ಕಿವಿಯ ಮೇಲ್ಭಾಗಕ್ಕೆ ಸಿಕ್ಕಿಸಿಕೊಳ್ಳಲು ಕ್ಲಿಪ್‌ಗಳಿವೆ. ಒಂದು ಕ್ಲಿಪ್ ತುಂಡಾದರೆ ಇನ್ನೊಂದು ಅಧಿಕ ಕ್ಲಿಪ್ ನೀಡಿದ್ದಾರೆ. ಕ್ಲಿಪ್‌ಗಳನ್ನು ಎರಡು ರೀತಿಯಲ್ಲಿ ಜೋಡಿಸಬಹುದು. ಅಂದರೆ ಎಡ ಕಿವಿ ಅಥವಾ ಬಲ ಕಿವಿಗೆ ಜೋಡಿಸುವಂತೆ ಕ್ಲಿಪ್‌ ಅನ್ನು ಹೆಡ್‌ಸೆಟ್‌ಗೆ ಜೋಡಿಸಬಹುದು. ಎರಡರ ಕ್ಲಿಪ್‌ಗಳೂ ಅಂತಹ ಉತ್ತಮ ಗುಣಮಟ್ಟದ್ದಾಗಿಲ್ಲ. ನೋಕಿಯಾದ ಎರಡೂ ಕ್ಲಿಪ್‌ಗಳು ತುಂಡಾಗಿವೆ. ನೋಕಿಯಾದವರ ಹೆಡ್‌ಸೆಟ್‌ ವಿನ್ಯಾಸ ಸ್ವಲ್ಪ ಬೇರೆ ನಮೂನೆಯದ್ದು. ಅದರ ಜೊತೆ ನೀಡಿರುವ ಕುಶನ್‌ಗಳು ಕಿವಿಕಾಲುವೆಯೊಳಗೆ ಹೋಗಿ ಕುಳಿತುಕೊಳ್ಳುತ್ತವೆ. ಕ್ಲಿಪ್ ಕಿವಿಯ ಮೇಲ್ಭಾಗದಿಂದ ಹಿಡಿದಿಟ್ಟುಕೊಳ್ಳುತ್ತದೆ. ಕುಶನ್‌ನ ವಿನ್ಯಾಸ ಯಾವ ರೀತಿ ಇದೆ ಎಂದರೆ ಕ್ಲಿಪ್ ತುಂಡಾದರೂ ಕೇವಲ ಕುಶನ್‌ ಮೂಲಕವೇ ಕಿವಿಯಲ್ಲಿ ಕೂರಿಸಬಹುದು. ಹಾಗೆ ಇಟ್ಟುಕೊಂಡರೆ ಅದು ಬೀಳುವುದಿಲ್ಲ. ಚೆನ್ನಾಗಿ ಬಳಸಲೂ ಬಹುದು.

ಸ್ಯಾಮ್‌ಸಂಗ್‌ನ ಹೆಡ್‌ಸೆಟ್‌ನ ವಿನ್ಯಾಸ ಆ ಮಾದರಿಯದಲ್ಲ. ಕಿವಿಯೊಳಗೆ ಹೋಗಿ ಕುಳಿತುಕೊಳ್ಳುವ ಭಾಗಕ್ಕೆ ಚಿಕ್ಕ ಕುಶನ್ ಮಾದರಿಯ ರಿಂಗ್ ನೀಡಿದ್ದಾರೆ. ಅದರ ಮುಖ್ಯ ಉದ್ದೇಶ ಈ ಕಿವಿಯೊಳಗೆ ಹೋಗುವ ಭಾಗ ಕಿವಿಯ ಒಳಭಾಗಕ್ಕೆ ನೋವು ಮಾಡಬಾರದು ಎಂದು. ಅಂದರೆ ಬೇರೆ ಬೇರೆ ಗಾತ್ರದ ಕಿವಿಕಾಲುವೆಯವರಿಗೆ ಬೇರೆ ಬೇರೆ ಗಾತ್ರದ ಕುಶನ್‌ಗಳಿಲ್ಲ. ನನ್ನ ಕಿವಿಯ ಕಾಲುವೆ ಚಿಕ್ಕ ಗಾತ್ರದ್ದು. ಆದುದರಿಂದ ಸ್ಯಾಮ್‌ಸಂಗ್‌ನ ಹೆಡ್‌ಸೆಟ್ ಅನ್ನು ತುಂಬ ಹೊತ್ತು ಬಳಸಿದರೆ ಕಿವಿ ನೋವಾಗುತ್ತದೆ. ಕ್ಲಿಪ್ ಇಲ್ಲದೆ ಇದನ್ನು ಬಳಸಲು ಕಷ್ಟ. ಸ್ಯಾಮ್‌ಸಂಗ್‌ನ ಹೆಡ್‌ಸೆಟ್ ಹಿಂದೊಮ್ಮೆ ನನ್ನಲ್ಲಿ ಇತ್ತು. ಅದರ ಎರಡೂ ಕ್ಲಿಪ್‌ಗಳು ತುಂಡಾದ ನಂತರ ಅದನ್ನು ಬಳಸುವುದನ್ನು ನಿಲ್ಲಿಸಬೇಕಾಯಿತು. ಈಗ ಇನ್ನೊಂದು ಹೆಡ್‌ಸೆಟ್‌ ಉಡುಗೊರೆಯಾಗಿ ದೊರೆತಿದೆ. ಸದ್ಯಕ್ಕೆ ಅದರ ಎರಡೂ ಕ್ಲಿಪ್‌ಗಳು ಸರಿಯಾಗಿರುವುದರಿಂದ ಅದನ್ನು ಬಳಸುತ್ತಿದ್ದೇನೆ.

ನೋಕಿಯಾದವರ ಹೆಡ್‌ಸೆಟ್‌ನಲ್ಲಿ ವಾಲ್ಯೂಮ್ ಹೆಚ್ಚು ಕಡಿಮೆ ಮಾಡಲು ಬಟನ್ ಇಲ್ಲ. ಫೋನಿನಲ್ಲೇ ವಾಲ್ಯೂಮ್ ಹೆಚ್ಚು ಕಡಿಮೆ ಮಾಡಬೇಕು. ಸ್ಯಾಮ್‌ಸಂಗ್‌ನವರ ಹೆಡ್‌ಸೆಟ್‌ನಲ್ಲಿ ವಾಲ್ಯೂಮ್ ಬಟನ್ ಇದೆ. ಸ್ಯಾಮ್‌ಸಂಗ್‌ನವರ ಹೆಡ್‌ಸೆಟ್‌ ಅನ್ನು ಸ್ಯಾಮ್‌ಸಂಗ್ ಫೋನ್ ಜೊತೆ ಬಳಸಿದಾಗ ಒಂದು ಸೌಲಭ್ಯ ಇದೆ. ಯಾವುದಾದರೊಂದು ಸಂಖ್ಯೆಗೆ ಫೋನ್ ಮಾಡಿದ್ದೀರೆಂದಿಟ್ಟುಕೊಳ್ಳಿ. ಅದೇ ಸಂಖ್ಯೆಗೆ ಕೂಡಲೇ ಮತ್ತೊಮ್ಮೆ ಫೋನ್ ಕರೆ ಮಾಡಬೇಕಿದ್ದರೆ ಕರೆ ಸ್ವೀಕರಿಸುವ ಮತ್ತು ನಿಲ್ಲಿಸುವ ಬಟನ್ ಅನ್ನು ಇನ್ನೊಮ್ಮೆ ಒತ್ತಿದರೆ ಸಾಕು. ಈಗಷ್ಟೆ ಕರೆ ಮಾಡಿದ ಸಂಖ್ಯೆಗೆ ಇನ್ನೊಮ್ಮೆ ಅದು ಕರೆ ಮಾಡುತ್ತದೆ. ನನಗೆ ಈ ಸವಲತ್ತು ತುಂಬ ಇಷ್ಟವಾಯಿತು. ಎಲ್ಲಿ ಬೇಕೆಂದಲ್ಲಿ ಉತ್ತಮ ಸಂಪರ್ಕ ಸೌಲಭ್ಯ ದೊರೆಯುವುದು ಈಗೀಗ ತುಂಬ ಕಷ್ಟವಾಗುತ್ತಿದೆ. ಮಾತನಾಡುತ್ತಿದ್ದಂತೆ ಸಂಪರ್ಕ ಕಡಿದುಹೋಗುವುದು ಅತಿ ಸಾಮಾನ್ಯವಾಗುತ್ತಿದೆ. ಅಂತಹ ಸಂದರ್ಭದಲ್ಲಿ ಅದೇ ಸಂಖ್ಯೆಗೆ ಮತ್ತೊಮ್ಮೆ ಕರೆ ಮಾಡಬೇಕಾಗುತ್ತದೆ. ಇಂತಹ ಸಂದರ್ಭಗಳಿಗೆ ಸ್ಯಾಮ್‌ಸಂಗ್ ಹೆಡ್‌ಸೆಟ್‌ನ ಈ ಸೌಲಭ್ಯ ತುಂಬ ಉಪಯುಕ್ತ.

ನೋಕಿಯಾದವರು ಹೆಡ್‌ಸೆಟ್ ಜೊತೆ ಚಾರ್ಜರ್ ನೀಡಿದ್ದಾರೆ. ಅವರು ನೀಡಿದ ಚಾರ್ಜರ್ ಬಳಸಿ ಮಾತ್ರವೇ ಚಾರ್ಜ್ ಮಾಡಬಹುದು. ಪ್ರಯಾಣ ಮಾಡುವಾಗ ಚಾರ್ಜರ್ ಕೂಡ ಜೊತೆ ಕೊಂಡೊಯ್ಯಬೇಕಾಗುತ್ತದೆ. ಸ್ಯಾಮ್‌ಸಂಗ್‌ನವರ ಹೆಡ್‌ಸೆಟ್ ಅನ್ನು ಯಾವುದೇ ಯುಎಸ್‌ಬಿ ಚಾರ್ಜರ್ ಅಥವಾ ಲ್ಯಾಪ್‌ಟಾಪ್ ಮೂಲಕ ಚಾರ್ಜ್ ಮಾಡಬಹುದು. ಅವರು ಯಾವುದೇ ಚಾರ್ಜರ್ ನೀಡಿಲ್ಲ.  
ಒಟ್ಟಿನಲ್ಲಿ ಹೇಳುವುದಾದರೆ ನಿಮಗೆ ಕಿವಿಕಾಲುವೆಯೊಳಗೆ ಒತ್ತಿ ಕುಳಿತುಕೊಳ್ಳುವ ಹೆಡ್‌ಸೆಟ್‌ ಕಿವಿಗೆ ನೋವು ಮಾಡುತ್ತದೆಯಾದರೆ ನೋಕಿಯಾದವರ ಹೆಡ್‌ಸೆಟ್‌ ಕೊಳ್ಳಬಹುದು. ಹೆಡ್‌ಸೆಟ್‌ನಲ್ಲೇ ವಾಲ್ಯೂಮ್ ಬಟನ್ ಬೇಕಿದ್ದರೆ ಸ್ಯಾಮ್‌ಸಂಗ್‌ನವರ ಹೆಡ್‌ಸೆಟ್‌ ಕೊಳ್ಳಬಹುದು.  

ವಾರದ ಆಪ್: ಗಾರ್ಡಿಯನ್ಸ್ ಆಫ್ ದಿ ಸ್ಕೈ

ಭಾರತೀಯ ವಾಯುಸೇನೆಗೆ ಸೇರಿ ಪೈಲಟ್ ಆಗಿ ದೇಶಕ್ಕಾಗಿ ಹೋರಾಡಲು ಇಷ್ಟವಿದೆಯೇ? ಪೈಲಟ್ ಕೆಲಸ ಹೇಗಿರುತ್ತದೆ? ವಿಮಾನ ಹಾರಿಸುವುದು ಹೇಗೆ? ವಿಮಾನಯುದ್ಧ ನಡೆಸುವುದು ಹೇಗೆ? ಇವೆಲ್ಲವನ್ನು ಪ್ರತ್ಯನುಕರಣೆ (simulation) ವಿಧಾನದ ಆಟದ ಮೂಲಕ ಆಡಬಹುದು. ಭಾರತೀಯ ವಾಯುಪಡೆಯ ಅಧಿಕೃತ ಆಟ ಇದು. ಇದನ್ನು ನೀವು ಆಂಡ್ರಾಯಿಡ್ ಫೋನಿನಲ್ಲಿ ಆಡಬಹುದು. ಈ ಆಟ ಬೇಕಿದ್ದರೆ ನೀವು ಗೂಗ್ಲ್ ಪ್ಲೇ ಸ್ಟೋರಿನಲ್ಲಿ GUARDIANS OF THE SKIES ಎಂದು ಹುಡುಕಬೇಕು. ಈ ಆಟದ ತಯಾರಿಯ ಹಿಂದೆ ಭಾರತೀಯ ವಾಯುಪಡೆಯಲ್ಲಿ ಪೈಲಟ್ ಆಗಿ ದುಡಿದವರ ಕೈ ಇದೆ. ಈ ಆಟ ತುಂಬ ನೈಜವಾಗಿದೆ. ಹಲವು ಯುದ್ಧ ವಿಮಾನಗಳು, ಮೊದಲು ತರಬೇತಿ, ನಂತರ ಯುದ್ಧ –ಹೀಗೆ ಹಲವು ಹಂತಗಳಿವೆ. ಮುಂದಕ್ಕೆ ಇನ್ನೂ ಹಲವು ಯುದ್ಧ ವಿಮಾನಗಳನ್ನು ಸೇರಿಸುವುದಾಗಿ ಆಟದ ತಯಾರಕರು ಹೇಳಿದ್ದಾರೆ. ನಿಜಕ್ಕೂ ಒಂದು ಉತ್ತಮ ಆಟ. ಕಡಿಮೆ ಮತ್ತು ಮಧ್ಯಮ ಶಕ್ತಿಯ ಸ್ಮಾರ್ಟ್‌ಫೋನ್‌ಗಳಲ್ಲೂ ಈ ಆಟವನ್ನು ಆಡಬಹುದು.

ಗ್ಯಾಜೆಟ್ ಸುದ್ದಿ
ಮಾತನಾಡಿ ನಿಮ್ಮ ಫೋನನ್ನು ಚಾರ್ಜ್ ಮಾಡಿ 

ಲಂಡನ್‌ನ ಕ್ವೀನ್ ಮೇರಿ ವಿಶ್ವವಿದ್ಯಾಲಯ ಮತ್ತು ನೋಕಿಯಾದ ವಿಜ್ಞಾನಿಗಳು ಜೊತೆ ಸೇರಿ ಶಬ್ದದಿಂದ ವಿದ್ಯುತ್ ಉತ್ಪಾದಿಸಬಹುದೆಂದು ತೋರಿಸಿಕೊಟ್ಟಿದ್ದಾರೆ. ನ್ಯಾನೋ ತಂತ್ರಜ್ಞಾನದಿಂದ ಝಿಂಕ್ ಆಕ್ಸೈಡ್‌ನ ಅತಿಸೂಕ್ಷ್ಮ ಕಡ್ಡಿಗಳನ್ನು ತಯಾರಿಸಿ ಅದನ್ನು ಪ್ಲಾಸ್ಟಿಕ್ ಮೇಲೆ ಪದರದಂತೆ ಲೇಪ ಮಾಡಿದರು.ಈ ಕಡ್ಡಿಗಳು ಕಂಪನಕ್ಕೆ ಸ್ಪಂದಿಸಿ ವಿದ್ಯುತ್ ಉತ್ಪಾದಿಸುತ್ತವೆ. ಅಂದರೆ ಮಾತನಾಡುವುದು, ಗಲಭೆ, ಗದ್ದಲಗಳಿರುವಲ್ಲಿ ಅದನ್ನು ಇಟ್ಟರೆ ಅದು ವಿದ್ಯುತ್ ಉತ್ಪಾದಿಸುತ್ತದೆ. ಹೆಚ್ಚು ಮಾತನಾಡಿದರೆ ಹೆಚ್ಚು ವಿದ್ಯುತ್ ತಯಾರಿ. ಗಟ್ಟಿಯಾಗಿ ಮಾತನಾಡಿದರೆ, ಕಿರುಚಿದರೆ ಮತ್ತಷ್ಟು ವಿದ್ಯುತ್ ತಯಾರಿ. ಚೆನ್ನಾಗಿದೆಯಲ್ಲವೇ?

ಗ್ಯಾಜೆಟ್ ತರ್ಲೆ
ನಮ್ಮಲ್ಲಿ ಕೆಲವರಿಗೆ ಫೋನಿನಲ್ಲಿ ಮಾತನಾಡುವಾಗ ಮತ್ತೆಮತ್ತೆ ‘ಮತ್ತೇನು ವಿಶೇಷ’ ಎಂದು ಕೇಳುವ ಪರಿಪಾಠವಿದೆ. ಮಾತನಾಡಲು ಏನೂ ವಿಷಯವಿಲ್ಲ, ಆದರೆ ಫೋನ್ ಕರೆಯನ್ನು ನಿಲ್ಲಿಸಲು ಮನಸ್ಸಿಲ್ಲದಿದ್ದಾಗ ಈ ರೀತಿ ಕೇಳುತ್ತಿರುತ್ತಾರೆ. ಇತ್ತೀಚೆಗೆ ಬಂದ (ಸುಳ್ಳು) ಸುದ್ದಿಯೊಂದರ ಪ್ರಕಾರ ಸ್ಮಾರ್ಟ್‌ಫೋನ್ ತಯಾರಿಸುವ ಭಾರತೀಯ ಕಂಪೆನಿಯೊಂದು ತನ್ನ ಫೋನಿನಲ್ಲಿ ಹೊಸ ಸೌಲಭ್ಯವೊಂದನ್ನು ಅಳವಡಿಸಿದೆ. ಕರೆ ಮಾಡಿದ ಅಥವಾ ಕರೆ ಸ್ವೀಕರಿಸಿದ, ಮಾತನಾಡುವ ವ್ಯಕ್ತಿ, ಯಾರಾದರೂ ಸರಿಯೇ ‘ಮತ್ತೇನು ವಿಶೇಷ’ ಅಥವಾ ‘ಮತ್ತೇನು ಸಮಾಚಾರ’ ಎಂದು ಮೂರು ಸಲ ಹೇಳಿದರೆ ಕರೆ ತಾನಾಗಿಯೇ ಸಂಪರ್ಕ ಕಡಿಯುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಫೋನ್ ಸಪ್ಟೆಂಬರ್ 31ರಂದು ಮಾರುಕಟ್ಟೆಗೆ ಬರಲಿದೆ.

ಗ್ಯಾಜೆಟ್ ಸಲಹೆ
ಸಂತೋಷ್ ಅವರ ಪ್ರಶ್ನೆ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದವರ ಆಪ್ ಇದೆಯೇ?
ಉ:  ಇದೆ. ಆಪ್ ಸ್ಟೋರ್‌ನಲ್ಲಿ State Bank Anywhere ಎಂದು ಹುಡುಕಿದರೆ ಸಿಗುತ್ತದೆ. ಅಥವಾ www.onlinesbi.com ಜಾಲತಾಣದಲ್ಲಿ ಇರುವ ಕೊಂಡಿ ಮೂಲಕವೂ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT